ಈ-ಹೊತ್ತಿಗೆ – “ಸಂಹಿತಾ – ಕಥಾ ಸಂಕಲನ”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ

ಈ ಹೊತ್ತಿಗೆ ತಂಡದ ಸೆಪ್ಟೆಂಬರ್ ತಿಂಗಳ ಚರ್ಚೆ
೧೮ ಸೆಪ್ಟಂಬರ್ ೨೦೧೬
ಪುಸ್ತಕ: “ಸಂಹಿತಾ – ಕಥಾ ಸಂಕಲನ”
ಬರೆದವರು: ತೇಜಸ್ವಿನಿ ಹೆಗಡೆ

ಈ ಹೊತ್ತಿಗೆ ಯಲ್ಲಿ ನಡೆದ “ಸಂಹಿತಾ” ಕಥಾಸಂಕಲನದ ಮೇಲಿನ ಚರ್ಚೆ, ಸಂವಾದದಲ್ಲಿ ಭಾಗವಹಿಸಿದವರು –
ಹಿರಿಯ ಬರಹಗಾರ್ತಿ ಉಷಾ ರೈ, ಸವಿತಾ ಗುರುಪ್ರಸಾದ್, ತೇಜಸ್ವಿನಿ ಹೆಗಡೆ ಮತ್ತು ಜಯಲಕ್ಷ್ಮೀ ಪಾಟೀಲ್.

ತೇಜಸ್ವಿನಿಯವರ ಎಲ್ಲಾ ಕತೆಗಳು ಸ್ತ್ರೀ ಲೋಕದವು. ಇಲ್ಲೇನಿದ್ದರೂ ಪುರುಷ ಪಾತ್ರಗಳು ಸಪೋರ್ಟಿಂಗ್ ಕ್ಯಾರಕ್ಟರ್ಸ್! ಇಲ್ಲಿನ ಬಹುತೇಕ ಕಥೆಗಳಲ್ಲಿ ನನಗೆ ಕಂಡು ಬಂದ ನಾಲ್ಕು ಸಮಾನ ಅಂಶಗಳೆಂದರೆ, ಲಾಲಿತ್ಯಮಯ ವಾಕ್ಯ ರಚನೆ, ಹವ್ಯಕ ಭಾಷೆಯ ಸೊಗಡು, ಸಂಭಾಷಣೆಗಳಿಗೆ ಪ್ರಾಧಾನ್ಯತೆ ಮತ್ತು ಶುರುವಿನಲ್ಲಿ ಓದುಗರಲ್ಲಿ ಅಪಾರವಾದ ನಿರೀಕ್ಷೆಯನ್ನು ಹುಟ್ಟಿಸಿ ಕತೆಗಳನ್ನು ಅವಸರಲ್ಲಿ ಮುಗಿಸಿ ನಿರಾಸೆಗೊಳಿಸುವುದು.

ಕತೆಯಲ್ಲಿ ಯಾವ ಪಾತ್ರಗಳ ವೈಭವೀಕರಣವಿಲ್ಲದೆ , ಪಾತ್ರಕ್ಕೆ ಹಾಗೂ ಕಥೆಗೆ ಪೂರಕವಾದ ಸನ್ನಿವೇಶಗಳನ್ನು ಅದರ ವಿವರಣೆಗಳನ್ನು ಬಹಳ ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ . ಸುತ್ತಮುತ್ತಲಿನ ಪರಿಸರ,ಹಳ್ಳಿಯ ಸೊಗಡನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ಕಾಡುವಂತಹ ಕಥೆಗಳು ಅನಿಸದಿದ್ದರೂ ಓದುವಷ್ಟು ಹೊತ್ತು ನಮಗೆ ಖುಷಿ ಕೊಡುತ್ತವೆ. ಬಹುಶಃ ಕಥೆಗಳ ಸಂಖ್ಯೆ ಜಾಸ್ತಿಯಾಗಿರುವುದು ಕೂಡ ಇದಕ್ಕೆ ಕಾರಣವಾಗಿರಬಹುದು .

ಮೊದಲ ಸಂಕಲನದಲ್ಲಿ ಕೆಲವೊಂದು ಒಳ್ಳೆಯ ಕಥೆಗಳನ್ನು ಕೊಟ್ಟ ಲೇಖಕಿ ಮುಂದೆ ಇನ್ನೂ ಒಳ್ಳೆಯ ಕಥೆಗಳನ್ನು ಕೊಡುವರೆನ್ನುವ ನಿರೀಕ್ಷೆ ಇದೆ. ಕೆಲವೊಮ್ಮೆ ಅವರು ಬೇರೆಯವರ ಕವನದ ಸಾಲುಗಳನ್ನು ಅಲ್ಲಲ್ಲಿ ಉಪಯೋಗಿಸಿರುವುದು ಹೆಚ್ಚಾಯಿತೇನೋ ಎಂದು ಅನಿಸುವುದಲ್ಲದೆ ಅವರ ಒರಿಜಿನಾಲಿಟಿಗೆ ಸ್ವಲ್ಪ ತಡೆಯಾಗಿದೆ ಎಂದನಿಸುತ್ತದೆ. ಇದರಿಂದ ಅವರು ಹೊರಬರುವುದು ಒಳ್ಳೆಯದು.

ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ

Leave a Reply