ಕುರುಬನ ಜಾಣ್ಮೆ

ಕುರುಬನ ಜಾಣ್ಮೆ

**ಕೇಳಿರಿ ಮಿಂಬರಹದ ಧ್ವನಿ ಮುದ್ರಿತ ಭಾಗ**

ಚಂದ್ರನಗರದ ಅರಸ ಚಂದ್ರಸೇನನ ಒಬ್ಬಳೇ ಮಗಳು ಚಂದ್ರಮತಿ. ಆಕೆಗೆ ತನ್ನ ರೂಪ ಹಾಗೂ ಬುದ್ಧಿವಂತಿಕೆ ಬಗ್ಗೆ ಬಹಳ ಹೆಮ್ಮೆಯಿತ್ತು. ರಾಜಕುಮಾರಿಗೆ ಆಕೆಯ ಮದುವೆ ಮಾಡಲು ಚಂದ್ರಸೇನ ನಿರ್ಧರಿಸಿದ. ತನಗಿಂತ ಬುದ್ಧಿವಂತ ಯುವಕನ ಜೊತೆ ಮದುವೆಯಾಗುವೆ ಎಂದಳು.
ಆದರೆ ಅಂತಹ ಯುವಕನನ್ನು ಹುಡುಕುವುದು ಹೇಗೆ ಚಿಂತೆಯಾಗಿತ್ತು. ಅದನ್ನು ನನಗೆ ಬಿಡಿ ಎಂದು ಚಂದ್ರಮತಿ ಹೇಳಿದಳು. ಆಕೆ ಸೇವಕರ ಸಹಾಯದಿಂದ ಅರಮನೆಯ ನಂದನವನದ ಮರಕ್ಕೆ ತೂಗುವ ಮಂಚ ಕಟ್ಟಿಸಿದಳು.
ಮಗಳ ಸೂಚನೆಯಂತೆ, ಅರಸ ಡಂಗುರ ಸಾರಿಸಿದ, “ಮರಕ್ಕೆ ಕಟ್ಟಿದ ತೂಗುವ ಮಂಚದಿಂದ ರಾಜಕುಮಾರಿ ಚಂದ್ರಮತಿಯನ್ನು ಮುಟ್ಟದೆ ಯಾರು ಕೆಳಗೆ ಇಳಿಸುವರೋ, ಅವರಿಗೆ ಆಕೆಯನ್ನು ಕೊಟ್ಟು ಮದುವೆ ಮಾಡಲಾಗುವುದು”.
ಡಂಗುರ ಕೇಳಿ ಅನೇಕ ರಾಜಕುಮಾರರು ಬಂದರು. ಕೈಯಿಂದ ಮುಟ್ಟದೆ ರಾಜಕುವರಿಯನ್ನು ಜೋಕಾಲಿಯಿಂದ ಕೆಳಗಿಳಿಸಲು ಯತ್ನಿಸಿದರು. ಆದರೆ, ಸಾಧ್ಯವಾಗದೇ ಸೋತು ಹೋದರು.
ಮರುದಿನ ಸಂಜೆ ಕುರಿ ಕಾಯುವವನೊಬ್ಬ ಚಂದ್ರನಗರಕ್ಕೆ ಬಂದನು. ಅವನ ಜೊತೆ ಒಂದು ಕುರಿ ಹಾಗೂ ಒಂದು ನಾಯಿಯು ಇದ್ದವು. ಅವುಗಳನ್ನು ರಾಜಕುಮಾರಿ ಕುಳಿತ ಮರದ ಬಳಿಯೇ ಇದ್ದ ಬೇರೆ ಬೇರೆ ಮರಗಳಿಗೆ ಕಟ್ಟಿದನು. ತನ್ನ ಜೋಳಿಗೆಯಲ್ಲಿ ಇದ್ದ ಮಾಂಸವನ್ನು ತೆಗೆದು ಕುರಿಯ ಮುಂದೆಯೂ ಹುಲ್ಲನ್ನು ನಾಯಿ ಮುಂದೆಯೂ ಹಾಕಿದನು. ರಾಜಕುಮಾರಿ ಅವನ ಮೂರ್ಖತನವನ್ನು ಕಂಡು ನಕ್ಕಳು. “ಎಲವೋ ಮೂರ್ಖ, ಕುರಿ ಮಾಂಸವನ್ನು ನಾಯಿ ಹುಲ್ಲನ್ನು ತಿನ್ನತ್ತದೆಯೇ” ಎಂದು ರಾಜಕುಮಾರಿ ಕೇಳಿದಳು.
ಆದರೆ ಕುರಿ ಕಾಯುವವನು ಅವಳು ಹೇಳಿದ್ದನ್ನು ಕೇಳಿಸದಂತೆ ನಿಂತಿದ್ದ. ರಾಜಕುಮಾರಿಗೆ ತುಂಬ ಕೋಪ ಬಂತು. ಅವಳು ತೂಗು ಮಂಚದಿಂದ ಇಳಿದು ಬಂದು, “ನಾನು ಕೂಗಿದ್ದು ಕೇಳಿಸಲಿಲ್ಲವೇ” ಎಂದು ಕೇಳಿದಳು.
ಅವನು ಮುಗುಳು ನಗುತ್ತ “ಕೇಳಿಸುತ್ತಿದೆ, ರಾಜಕುಮಾರಿ” ಎಂದನು. ಆಗ ತಟ್ಟನೆ ರಾಜಕುಮಾರಿಗೆ ತನ್ನ ತಪ್ಪಿನ ಅರಿವಾಯಿತು.
ರಾಜಕುಮಾರಿಯನ್ನು ಮುಟ್ಟದೆ ಕುರಿ ಕಾಯುವವನು ತೂಗುಮಂಚದಿಂದ ಕೆಳಗಿಳಿಸಿದನು. ತನ್ನ ಷರತ್ತಿನಂತೆ ರಾಜಕುಮಾರಿ ಕುರುಬನನ್ನು ಮದುವೆಯಾದಳು.

Leave a Reply