ಕ್ಯಾನ್ಸರ್ ನೋವು ಮರೆಸಿದ ಕವಿತೆ

ಕ್ಯಾನ್ಸರ್ ನೋವು ಮರೆಸಿದ ಕವಿತೆ

– ಪ್ರಜಾವಾಣಿ ವಾರ್ತೆ

ಅವ್ವನಿಗೆ ನಿಧಾನಕ್ಕೆ ತನ್ನ ಕಾಯಿಲೆ ಅರ್ಥವಾಯಿತು. ಆಗಾಗ ಆಸ್ಪತ್ರೆಯ ಕೌಂಟರ್‌ನಲ್ಲಿ ನಾನು ಪಾವತಿಸುವ ದುಡ್ಡಿನ ಕಟ್ಟುನೋಡಿ ಅವ್ವ ‘ನನಗ ಆರಾಮಕ್ಕಿದ್ರಷ್ಟ ದುಡ್ಡು ಖರ್ಚ ಮಾಡು, ಇಲ್ದಿದ್ರ ಯಾಕ ಸುಮ್ನ ಅಷ್ಟೊಂದು ರೊಕ್ಕ ಹಾಳ ಮಾಡ್ತಿ’ ಎಂದು ಪ್ರಶ್ನೆ ಮಾಡಿದಾಗ ಉತ್ತರಿಸಲಾಗದೆ ಮೌನಕ್ಕೆ ಶರಣಾದೆ.

ಬಾದಾಮಿಯ ಒಂದು ಆಸ್ಪತ್ರೆಯಲ್ಲಿ ಅವ್ವನಿಗೆ ರಕ್ತ, ಮೂತ್ರ ಪರೀಕ್ಷೆ ಹಾಗೂ ಸಿ.ಟಿ. ಸ್ಕ್ಯಾನಿಂಗ್ ಮಾಡಿದಮೇಲೆ ವೈದ್ಯರು ನನಗೆ, ‘ಆ ಎಲ್ಲ ರಿಪೋರ್ಟ್‌ ಪಡೆದುಕೊಂಡು ಭೇಟಿಯಾಗಿ’ ಎಂದರು. ಅರ್ಧ ಗಂಟೆಯಲ್ಲಿ ಎಲ್ಲ ರಿಪೋರ್ಟ್‌ಗಳನ್ನು ಕಲೆಹಾಕಿ ವೈದ್ಯರನ್ನು ಕಂಡೆ. ವರದಿಗಳನ್ನು ಪರಿಶೀಲಿಸಿ ‘ನಿಮ್ಮ ತಾಯಿಗೆ ಕ್ಯಾನ್ಸರ್ ಆಗಿದೆ, ಅದು ಮೂರನೆಯ ಹಂತದಲ್ಲಿದೆ’ ಎಂದು ವೈದ್ಯರು ಹೇಳಿದಾಗ ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು.

‘ಧೈರ್ಯವಾಗಿರಿ. ಈ ಕಾಯಿಲೆಗೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲ. ಆದರೆ, ಬಾಗಲಕೋಟೆ ಅಥವಾ ಹುಬ್ಬಳ್ಳಿಯಲ್ಲಿ ರೇಡಿಯೋ ಥೆರೆಪಿ ಹಾಗೂ ಕೀಮೋ ಥೆರೆಪಿ ಚಿಕಿತ್ಸೆ ಕೊಡ್ಸಿ’ ಎಂದು ವೈದ್ಯರು ಒಂದು ಪತ್ರ ಬರೆದು ಆ ರಿಪೋರ್ಟ್‌ಗಳ ಜೊತೆ ಲಗತ್ತಿಸಿ ಕೊಟ್ಟರು.

ಒತ್ತರಿಸಿ ಬಂದ ದುಃಖ ಅದುಮಿ ಹಿಡಿದುಕೊಂಡು ಅವ್ವನೆದಿರು ವಾಸ್ತವವನ್ನು ತೆರೆದಿಡದೆ ‘ಅವ್ವ, ನಾಳೆ ಬಾಗಲಕೋಟೆಗೆ ಹೋಗಿ ಅಲ್ಲಿ ನನ್ನ ಗೆಳೆಯರಿಗೆ ಪರಿಚಯವಿರುವ ಡಾಕ್ಟರ್ ಕಂಡು ಬರೋಣ’ ಎಂದು ಸಮಾಧಾನಪಡಿಸಿ ಮನೆಗೆ ಕರೆದುಕೊಂಡು ಹೋದೆ. ಮನೆಯಲ್ಲಿ ಸ್ವಲ್ಪ ಹೊತ್ತು ಕಳೆದಮೇಲೆ, ‘ಅಲ್ಲಾ ಇಲ್ಲಿಯ ಡಾಕ್ಟರ್ಗೆ ನನ್ನ ಜಡ್ಡು ಗೊತ್ತಾಗ್ಲಿಲ್ಲಾ ಅಂದ್ರ ಅದೆಂತಹ ಜಡ್ಡು ನಂದು?’ ಎಂದು ಅವ್ವ ಸಹಜವಾಗಿ ಪ್ರಶ್ನೆ ಮಾಡಿದರು. ಏನು ಹೇಳಬೇಕೆಂಬುದು ತೋಚದೆ, ‘ನಾಳೆ ಗೊತ್ತಾಗತ್ತ ನೀ ಹೆಚ್ಚು ತಲಿಕೆಡಿಸ್ಕೊಬ್ಯಾಡ, ಸಮಾಧಾನದಿಂದ ಇರು’ ಎಂದೆ.

ಗೆಳೆಯ ಮಾಗುಂಡಪ್ಪ ಮತ್ತು ಖಾದರನ ಬಳಿ ಎಲ್ಲವನ್ನೂ ಹೇಳಿಕೊಂಡು ಅತ್ತುಬಿಟ್ಟೆ. ಅವರ ಅಂತಃಕರಣದ ಮಾತುಗಳು ನನ್ನೊಳಗೊಂದಿಷ್ಟು ಆತ್ಮವಿಶ್ವಾಸ ಹೆಚ್ಚಿಸಿದವು. ಮರುದಿನ ಬಾಗಲಕೋಟೆ ಆಸ್ಪತ್ರೆಗೆ ಹೋಗಿ ಅಲ್ಲಿಯ ವೈದ್ಯರ ಜೊತೆ ಚರ್ಚಿಸಿ ರೇಡಿಯೊ ಥೆರಪಿ ಹಾಗೂ ಕಿಮೋ ಥೆರಪಿ ಕೊಡಿಸಲು ಒಪ್ಪಿಕೊಂಡೆ.

ಅವ್ವನಿಗೆ ನಿಧಾನಕ್ಕೆ ತನ್ನ ಕಾಯಿಲೆ ಅರ್ಥವಾಯಿತು. ಆಗಾಗ ಆಸ್ಪತ್ರೆಯ ಕೌಂಟರ್‌ನಲ್ಲಿ ನಾನು ಪಾವತಿಸುವ ದುಡ್ಡಿನ ಕಟ್ಟುನೋಡಿ ಅವ್ವ ‘ನನಗ ಆರಾಮಕ್ಕಿದ್ರಷ್ಟ ದುಡ್ಡು ಖರ್ಚ ಮಾಡು, ಇಲ್ದಿದ್ರ ಯಾಕ ಸುಮ್ನ ಅಷ್ಟೊಂದು ರೊಕ್ಕ ಹಾಳ ಮಾಡ್ತಿ’ ಎಂದು ಪ್ರಶ್ನೆ ಮಾಡಿದಾಗ ಉತ್ತರಿಸಲಾಗದೆ ಮೌನಕ್ಕೆ ಶರಣಾದೆ.

ಆಗ ಲಂಕೇಶರು ಬರೆದ ‘ನನ್ನವ್ವ ಫಲವತ್ತಾದ ಕಪ್ಪುನೆಲ’ ಕವಿತೆಯ ಸಾಲು ನೆನಪಾಯಿತು.

ಆಮೇಲೆ ಮೊಬೈಲ್ಗೆ ಯಾವ್ದೊ ವಾಟ್ಸ್‌ ಆ್ಯಪ್ ಸಂದೇಶ ಬಂದ ಶಬ್ದ. ತೆರೆದು ನೋಡಿದಾಗ ಗೆಳೆಯ ಗಿರೀಶ ಜಕಾಪುರೆಯ ಕವಿತೆ ‘ಮಣ್ಣೆಂದರೇನು..?’

‘ಬಿರುಗಾಳಿಯೊಡನೆ ಹುಡಿಯಾಗಿ ಮೇಲೆದ್ದು, ಸುತ್ತಿ ಸುಳಿದು ಕಣ್ಣಿಗೆ ಸೇರಿದ ಕಣವೆ..? ಮಳೆಗಾಲದ ಒಂದು ಮಧ್ಯಾಹ್ನ ನೆನೆದು ಎರಚಿಕೊಂಡು ಖುಷಿಪಟ್ಟ ರಾಡಿಯೆ..? ಮಣ್ಣೆತ್ತಿನ ಅಮವಾಸ್ಸೆಯೆಂದು ಅಪ್ಪ ಮಾಡಿಕೊಟ್ಟ ಎತ್ತು ಎಂಬ ಘನವೆ..? ಜೀವದ ಗೆಳೆಯ ಸತ್ತಾಗ ದುಃಖ ಅದುಮಿಕೊಂಡು ಹೂತುಬಂದ ಭೂಗರ್ಭವೆ..? ಗೊತ್ತಿಲ್ಲ ..! ಮಣ್ಣೇಂದರೇನು? ತಾನು ಬೆಂದು ನನ್ನ ಹೊಟ್ಟೆಗೆ ರೊಟ್ಟಿ ಸುಟ್ಟುಕೊಡುವ ಕರಕಲಾಗಿ ಕಪ್ಪಿಟ್ಟ ಒಲೆಯೆ..? ’ ಎಂದು ಸಾಗಿತ್ತು ಆ ಕವಿತೆ.

ಬಿರು ಬೇಸಿಗೆಯಲ್ಲಿ ಸುಡುವ ಸೂರ್ಯನ ಕಿರಣಗಳ ಹೊಡೆತಕ್ಕೆ ಚಡಪಡಿಸುವ ನಾನು, ಆಸ್ಪತ್ರೆಯ ಒಳಗಡೆ ಅವ್ವನಿಗೆ ಮತ್ತೆ ಆ ಯಂತ್ರದ ಮೂಲಕ ರೇಡಿಯೊ ಥೆರಪಿ ಅನ್ನುವ ಚಿಕಿತ್ಸೆ. ಒಳಗೆ ಮತ್ತು ಹೊರಗೆ ಸುಟ್ಟುಕೊಳ್ಳುವ ಈ ಒದ್ದಾಟದಲ್ಲಿ ಗೆಳೆಯ ಕಳುಹಿಸಿದ ‘ಮಣ್ಣೆಂದರೇನು..?’ ಕವಿತೆಗೆ ನನ್ನವ್ವ ಅರ್ಥಪೂರ್ಣ ಉತ್ತರವಾಗಿದ್ದಾಳೆ.

ಚಿಕಿತ್ಸೆಯ ಫಲವೊ..? ನನ್ನ ಸುದೈವವೊ..? ಗೊತ್ತಿಲ್ಲ ಸದ್ಯಕ್ಕಂತೂ ಗುಣಮುಖಳಾಗಿದ್ದಾಳೆ. ಗೆಳೆಯನ ಕವಿತೆ ಒಂದಿಷ್ಟು ನನ್ನೊಳಗೂ ನೋವ ಮರೆಸಿ, ಮಣ್ಣಿನ ಋಣ ತೀರಿಸುವ ಕಣ್ಣು ತೆರೆಸಿದೆ.

–ಕೆ.ಬಿ. ವೀರಲಿಂಗನಗೌಡ್ರ, ಸಿದ್ದಾಪುರ

Courtesy : Prajavani.net

http://www.prajavani.net/news/article/2017/09/10/518813.html

Leave a Reply