ಗಂಧ ಬಾಬಾ

ಗಂಧ ಬಾಬಾ

ಓಡೋಡಿ ಬಂದು ಹೊರಡುತ್ತಿರುವ ರೈಲು ಹತ್ತಿದೆ. ಸುತ್ತ ನೋಡಿದೆ. ಎಲ್ಲ ಸೀಟುಗಳು ಭರ್ತಿ. ಕೆಲವರು ಬಾಗಿಲ ಬಳಿ ನಿಂತು ತಂಬಾಕು ಚಟ ತೀರಿಸಿಕೊಳ್ಳುತ್ತಿದ್ದರೆ ಅಲ್ಲಿ ನಿಂತು ಏನು ಮಾಡುವುದು ಎಂದೆನಿಸಿ ಮುಂದೆ ನಡೆದೆ. ಅಲ್ಲಿ ಒಂದು ಬಾಕಿನ ಮೇಲೆ ನಾಲ್ಕು ಜನ ಕೂಡ್ರುವಲ್ಲಿ ಐದು ಜನ ಕುಳಿತಿದ್ದರು. ಅವರೆಲ್ಲ ಸಣಕಲಾದ್ದರಿಂದ ಅಲ್ಲಿ ಇನ್ನೂ ಸ್ಥಳ ಉಳಿದಿದೆ ಎಂದೆನಿಸಿ ಸ್ವಲ್ಪ ಸರೀರಿ ಎಂದೆ. ಹಳ್ಳಿಯವನೊಬ್ಬ “ಬರ್ರಿ ಬರ್ರಿ ಅದರಾಗ ಕುಂಡ್ರುಣು, ಮುಂದಿನ ಟೆಶನ್ ದಾಗ ಇಳಿತೀನಿ” ಎಂದು ತುಸುವೇ ಸರಿದ. ಅವನ ಪಕ್ಕ ಇದ್ದ ಒಬ್ಬ ಸಾಧುವಿನ ಕಡೆ ನಾನು ನೋಡಿದೆ. ಅದನ್ನು ಅರ್ಥೈಸಿದವನಂತೆ ಅವನೂ ಸರಿದ. ಸ್ವಲ್ಪ ಸ್ಥಳದಲ್ಲೆ ಕುಳಿತುಕೊಂಡೆ. ಮಧ್ಯಾನ್ಹದ ಬಿಸಿಲು ಇಳಿಮುಖವಾಗಿತ್ತು. ಸಾಧುವಿನೆಡೆಗೆ ನೋಡಿದೆ. ಅವನೂ ನನ್ನನ್ನು ನೋಡಿದ. ಮುಖದ ತುಂಬಾ ಗಡ್ಡ ಮೀಸಿ ಗಾಳಿಗೆ ಹಾರುತ್ತಿದ್ದ ಕೂದಲು ಅದರ ನಡುವೆಯೇ ಹೊಳೆವ ತೀಕ್ಷ್ಣ ಕಣ್ಣು. ಉತ್ತರ ಭಾರತೀಯನಂತೆ ಉಟ್ಟ ಕಾವಿ ಬಟ್ಟೆ ಕುತ್ತಿಗೆಯ ಸುತ್ತುವರೆದು ಎದೆಯ ಮುಂಭಾಗದಿಂದ ಮೊಳಕಾಲವರೆಗೆ ಇಳಿ ಬಿದ್ದಂತೆ ತೋರುತ್ತಿತ್ತು. ಕಾಲಲ್ಲಿ ಕಟ್ಟಿಗೆಯ ಆವಿಗೆ. ಕೊರಳಲ್ಲಿ ರುದ್ರಾಕ್ಷಿ ಮಾಲೆ. ಬಾಯಲ್ಲಿ ಗುನು ಗುನು ಮಂತ್ರ. ಜನರೆಡೆ ಕೃಪಾದೃಷ್ಟಿ. ಓಡುವ ರೈಲಿನ ಹೊರ ನೋಡಿದೆ. ಜಿಂಕಿ ಹಿಂಡು ನಿಂತು ರೈಲನ್ನೆ ಆಶ್ಚರ್ಯದಿಂದ ನೋಡುತ್ತಿದ್ದವು. ಒಂದರ ಹಿಂದೊಂದು ರೈಲಿನ ಬೋಗಿಗಳು ಸಾಲಾಗಿ ಓಡುತ್ತಿದ್ದರೆ ಜಿಂಕೆಗಳು ತಾವೂ ಕ್ಷಣ ಅನುಕರಿಸಿದಂತೆ ಓಡಿ ಮಾಯವಾದವು. ಮುಂದೆ ಕೆಲವೇ ನಿಮಿಷಗಳಲ್ಲಿ ಊರು ಬಂತು. ಸ್ವಲ್ಪ ಜನ ಇಳಿದರು. ಬೋಗಿಯಲ್ಲಿ ಈಗ ನಿರಾಳವಾಗಿ ಉಸಿರಾಡಬಹುದಾದ ವಾತಾವರಣ. ನಾನು ಮತ್ತೊಮ್ಮೆ ಸಾಧುವಿನ ಕಡೆ ನೋಡಿದೆ. ರೈಲು ದೂರದ ಊರಿಂದ ಬಂದಿರಬೇಕು, ಬೋಗಿ ಗಲೀಜಾಗಿತ್ತು. ಬೋಗಿಯಲ್ಲಿ ಕೆಟ್ಟ ವಾಸನೆ ಹರಡಿತ್ತು ಈ ಸಾಧು ಬೇರೆ ಕೊಳಕಾದ ಬಟ್ಟೆ ಹಾಕಿದ್ದಾನೆ. ನಾನು ಮೂಗು ಮುಚ್ಚಿಕೊಂಡು ಇನ್ನೂ ಸ್ವಲ್ಪ ಸಾಧುವಿನ ಕಡೆಗೆ ಸರಿದು ಕುಳಿತೆ. ನಾನು ಸರಿದಿದ್ದಕ್ಕೆ ತುಸು ಅಸಮಾಧಾನದಿಂದ ನೋಡಿದ. ನಾನು ಮೂಗು ಮುಚ್ಚಿಕೊಂಡು ಕುಳಿತಿದ್ದು ಅವನಿಗೆ ಅಚ್ಚರಿ ಅನಿಸಿರಬೇಕು. ತನ್ನ ಮುಂಗೈಯನ್ನು ಸ್ವಲ್ಪವೇ ತಿಕ್ಕಿಕೊಂಡು ಚಿವುಟಿಕೊಂಡು ಗಾಳಿಯಲ್ಲಿ ಧ್ವಜ ಹಾರಿಸುವಂತೆ ಕೈಯಲ್ಲಾ ಅಲ್ಲಾಡಿಸಿದ. ಬೋಗಿ ತುಂಬಾ ಗಂಧದ ಪರಿಮಳ ಹರಡಿತು. ಸಾಧು ನನ್ನಡೆ ನೋಡಿ ಮುಗುಳ ನಕ್ಕ. ನನಗೂ ಇದು ಅಚ್ಚರಿ ಎನಿಸಿದರೂ ತೋರಗೊಡಲಿಲ್ಲ. ಕುಶಲೋಪರಿ ಇರಲಿ ಎಂದು ‘ಎಲ್ಲಿಗೆ?’ ಎಂದೆ. ಮೇಲೆ ಕೈಮಾಡಿ ‘ದೈವಿಚ್ಛೆ’ ಎಂದ. ಅವನಿಗೆ ಕನ್ನಡ ತಿಳಿಯುತ್ತದೆ ಎಂದು ಗೊತ್ತಾಗುತ್ತಿದ್ದಂತೆ ಎಲ್ಲಿಂದ? ಎಂದೆ. ಅವನು ‘ವೈಷ್ಣೋದೇವಿಗೆ ಹೋಗಿದ್ದೆ , ಅಲ್ಲಿಗೆ ಎಲ್ಲಿಂದ ಹೋದಿರಿ ಎಂದು ಕೇಳಬೇಡ. ನಮಗೆ ಇಂಥಾದ್ದೇ ಅಂತ ಊರು ಇರುವುದಿಲ್ಲ. ಎಲ್ಲ ಊರುಗಳು ನಮ್ಮವೇ. ಎಲ್ಲರೂ ನಮ್ಮವರೇ. ವೈಷ್ಣೋದೇವಿ ಮಾ “ಎಲ್ಲಾ ಶಕ್ತಿ ಪೀಠಗಳನ್ನು ದರ್ಶನ ಮಾಡಿ ಬಾ” ಎಂದು ಆದೇಶವಿತ್ತಳು. ಅದಕ್ಕಾಗಿ ಹೊರಟಿದ್ದೇನೆ. ಆ ಮಹಾಮಾಯಿ ಅನುಗ್ರಹಿಸಬೇಕಷ್ಟೆ’ ಎಂದು ಕೈ ಮೇಲೆತ್ತಿ ಮುಗಿದ. ತಡೆ ತಡೆದು ಅಲ್ಲಲ್ಲಿ ಸಂಸ್ಕøತ ಹಿಂದಿ ಶಬ್ದ ಬಳಸಿ ಹೇಳಿದ. ನಿಮಗೆ ಕನ್ನಡ ಹೇಗೆ ಬರುತ್ತೆ ಎಲ್ಲಿ ಕಲಿತಿರಿ? ಎಂದೆ. ನನಗೆ ಕನ್ನಡ ಬರುವುದಿಲ್ಲ. ಈಗ ನಿಮ್ಮಿಂದ ಕಲಿತೆ. ನಾನು ಯಾವುದೇ ಭಾಷೆಯಲ್ಲಿ ಸಂಭಾಷಿಸಬಲ್ಲೆ. ನಿಮ್ಮ ಅಂತರಂಗ ತಿಳಿದರೆ ನಿಮ್ಮ ನಾಲಿಗೆ ಭಾಷೆ ತಿಳಿಯುತ್ತದೆ ಎಂದುತ್ತರಿಸಿದ. ನನಗೆ ಈ ಸಾಧು ಬಹಳ ಆಸಕ್ತಿಕರ ಮನುಷ್ಯನಂತೆ ಕಂಡ. ಇಲ್ಲಿ ಹತ್ತಿರದಲ್ಲಿ ಬನಶಂಕರಿ ಕಾಳಿಕಾದೇವಿ ಎಂಬ ಶಕ್ತಿ ಪೀಠಗಳು ಇವೆ. ಅವನ್ನು ನೋಡುವಿರೇನು? ಎಂದೆ. ಹೌದಾ? ಅವನ್ನು ನಾನು ನೋಡಬೇಕು. ನೀನು ಸ್ವಲ್ಪ ವಿವರಿಸಿ ಹೇಳು. ಹೇಗೆ ಹೋಗಬೇಕು? ಎಂದು ಉತ್ಸುಕನಾಗಿ ಕೇಳಿದ. ನಾನು ಸಹಾಯ ಮಾಡುವುದಾಗಿ ಹೇಳುತ್ತಾ ನಮ್ಮ ಊರ ದ್ಯಾಮವ್ವನೂ ಒಂದು ಶಕ್ತಿ ಸ್ಥಳವಿದ್ದಂತೆ. ಇವತ್ತು ರಾತ್ರಿ ನಮ್ಮ ಊರಿಗೆ ಹೋಗೋಣ. ನಾಳೆ ಬೆಳಿಗ್ಗೆ ನಿಮ್ಮನ್ನು ಬಾದಾಮಿಗೆ ಕಳಿಸುತ್ತೇನೆ. ಅಲ್ಲಿಂದ ನೀವು ಬನಶಂಕರಿಗೆ ಮುಂದೆ ಶಿರಸಂಗಿಗೆ ಹೋಗಿ ಕಾಳಿಕಾದೇವಿ ದರ್ಶನ ಮಾಡಬಹುದು ಎಂದೆ. ಅದಕ್ಕೆ ಸಾಧು ಒಪ್ಪಿದ. ಅವನು ಇಷ್ಟು ಬೇಗ ಒಪ್ಪುತ್ತಾನೆ ಎಂದು ಅನಿಸಿರಲಿಲ್ಲ. ಒಪ್ಪಿದ್ದು ಸಂತೋಷವೇ ಆಯಿತು. ಮಧುರೈ ಮೀನಾಕ್ಷಿ ಕಂಚಿ ಕಾಮಾಕ್ಷಿ ನೋಡಿ ಮುಂದೆ ಕನ್ಯಾಕುಮಾರಿಗೆ ಹೋಗುವ ವಿಚಾರವಿದೆಯಂತಲೂ, ಈ ನಡುವೆ ಚಾಮುಂಡೇಶ್ವರಿ ದರ್ಶನವನ್ನು ಮಾಡುವ ಕುರಿತು ವಿಚಾರವನ್ನು ಹಂಚಿಕೊಂಡ. ಸೂರ್ಯ ಮುಳುಗುವ ಸನ್ನಾಹದಲ್ಲಿದ್ದ. ಊರು ಹತ್ತಿರ ಬರುತ್ತಲಿತ್ತು. ‘ಊರು ಬಂತು ಇಳಿಯೋಣವೇ’ ಎಂದೆ.
ತನ್ನ ಒಂದು ಚಿಕ್ಕ ಜೋಳಿಗೆ ಹೆಗಲಿಗೆ ಹಾಕಿಕೊಂಡು ‘ಸರಿ, ನಡಿ’ ಎಂದ. ರೈಲಿಂದ ಇಳಿದು ಎರಡು ಕಿಲೋಮೀಟರ ನಡೆದರೆ ನಮ್ಮೂರು ಎಂದೆ. ‘ಆಗಲಿ ನಡಿ’ ಎಂದ. ಇಬ್ಬರೂ ಹೊರಟೆವು ಹಾದಿಯಲ್ಲಿ ಅಡ್ಡ ಬಂದ ಹಳ್ಳದಲ್ಲಿಳಿದವನೇ ಸ್ನಾನ ಮಾಡಿದ. ಬಟ್ಟೆ ಒಗೆದುಕೊಂಡು ಮೈಮೇಲೆ ಹಾಕಿಕೊಂಡು ಕೆಲ ಮಂತ್ರಗಳ ಹೇಳುತ್ತಾ ಪಶ್ಚಿಮ ದಿಕ್ಕಿಗೆ ಕೈ ಮುಗಿದು ಮಂತ್ರ ಹೇಳುತ್ತಾ ಮತ್ತೆ ಹೊರಟ. ಮನೆಗೆ ಬಂದೆವು. ಹೆಂಡತಿಯ ಕರೆದು ‘ಸಾಧು ಮಹಾರಾಜ ಬಂದಿದ್ದಾರೆ. ಕಾಲಿಗೆ ನೀರು ತಾ’ ಎಂದು ಕೂಗಿದೆ. ಅವಳು ತಂದ ನೀರನ್ನು ನಾನೇ ಕಾಲಿಗೆ ಹಾಕಿ ವಸ್ತ್ರದಿಂದ ಒರೆಸಿದೆ. ಸಾಧು ‘ಸಾಕು, ಸಾಕಿನ್ನು ನಡಿ ಒಳಗೆ’ ಎನ್ನುತ್ತಲೇ ಮನೆ ಒಳಗೆ ಬಂದರು. ಒಂದು ಕಂಬಳಿ ಹಾಸಿ ಕೂಡ್ರಿಸಿದೆ. ತಮ್ಮ ಜೋಳಿಗೆ ಕೆಳಗಿರಿಸಿ ಮನೆಯನ್ನೆಲ್ಲಾ ಒಂದು ಸುತ್ತ ನೋಡಿ ಹರಿ ಓಂ ಎಂದರು. ನಾನು ‘ಇದೇ ನಮ್ಮ ಮನೆ ಹಿಂಗದ ನೋಡ್ರಿ’ ‘ಇಲ್ಲಿಂದ ಎರಡು ಓಣಿ ದಾಟಿ ಸ್ವಲ್ಪ ಮುಂದೆ ಹೋದರ ದ್ಯಾಮವ್ವನ ಗುಡಿ. ನೀವು ವಿಶ್ರಾಂತಿ ತಗೋರಿ, ನಾನು ನಾಳಿನ ತಯಾರಿ ಮಾಡುತ್ತೇನೆ’ ಎಂದು ಅಡುಗೆ ಮನೆ ಕಡೆ ಹೋದೆ. ಹೆಂಡತಿಯೊಡನೆ ಸಾಧು ಭೇಟಿಯಾದ ಪ್ರಸಂಗ ವಿವರಿಸಿದೆ. ರಾತ್ರಿ ಏನು ಊಟ ಮಾಡುತ್ತಾರೆ ಕೇಳಿ ಅಡುಗೆ ಮಾಡು ನಾನು ನಾಳೆ ದ್ಯಾಮವ್ವನ ಪೂಜೆಗೆ ಬೇಕಾಗುವ ಹೂ ಪತ್ರಿ ಕಾಯಿ ಕರ್ಪೂರ ತರುತ್ತೇನೆ ಎಂದಿದ್ದಕ್ಕೆ ಅವಳು ಅವರ ಊಟಕ್ಕ ಏನು ಬೇಕು ನೀವ ಕೇಳ್ರಿ ಭಾಷಾ ತಿಳಿತದೋ ಇಲ್ಲೊ ಎಂದಳು. ನಾನು ಸರಿ ಏನ್ನುತ್ತಾ, ‘ಮಹಾರಾಜ್, ರಾತ್ರಿ ಊಟಕ್ಕೆ ಏನು ಮಾಡಬೇಕು’? ಎಂದು ಕೇಳಿದೆ. ಸ್ವಲ್ಪ ಹಾಲು ಒಂದು ಮುಷ್ಠಿ ಅವಲಕ್ಕಿ ಅಷ್ಟೆ ಎಂದು ಜಪ ಮಾಡಹತ್ತಿದರು. ನಾನು ಹೆಂಡತಿಗೆ ವಿಷಯ ತಿಳಿಸಿ ಹೊರ ನಡೆದೆ. ಹೂ ಎಲ್ಲಿಂದ ತರೋದು? ಎಂದು ಚಿಂತಿಸಿದೆ. ನಮ್ಮೂರಿಗೆ ನನ್ನ ಹಿತ್ತಲಿನ ಕೆಂಪು ಕಣಗಲ ಹೂವೇ ಎಲ್ಲ ಪೂಜೆಗೆ ನಡೀತಿತ್ತು. ಊರ ಮುಂದಿನ ಬಸವಣ್ಣನ ಗುಡಿ ಹತ್ತಿರ ಇರುವ ಪತ್ರಿ ಗಿಡದ ಪತ್ರಿ ಗರಿಕೆ ಬಿಟ್ಟರೆ ಬೇರೆ ಏನೂ ದೇವರಿಗೆ ಇಷ್ಟವಾಗಿರಲಿಕ್ಕಿಲ್ಲ. ಆ ಕಾರಣದಿಂದಲೇ ನಮ್ಮೂರಲ್ಲಿ ಬೇರೇನೂ ಬೆಳೆಯುತ್ತಿದ್ದಿಲ್ಲ. ಫಕೀರಜ್ಜನ ಅಂಗಡಿಗೆ ಹೋಗಿ ಕಾಯಿ ಕರ್ಪೂರ ಕಲ್ಲು ಸಕ್ಕರೆ ಬಾಳೆಹಣ್ಣು ಕೊಂಡುಕೊಂಡೆ. ಹಾಗೇ ಬಡಿಗೇರ ವಿರೇಶನ ಮನೆಗೆ ಹೋಗಿ ನಮ್ಮ ಮನೆಗೆ ಉತ್ತರ ಕಡೆಯಿಂದ ಒಬ್ಬ ಸಾಧು ಬಂದಿದ್ದಾರೆ. ಅವರು ದ್ಯಾಮವ್ವನ ದರ್ಶನ ಮಾಡಿಕೊಂಡು ಮುಂದೆ ಶಿರಸಂಗಿ ಕಾಳಮ್ಮನ ದರ್ಶನಕ್ಕೆ ಹೋಗುವವರಿದ್ದಾರೆ. ನೀನು ಸ್ವಲ್ಪ ಲಗೂ ಬಂದು ಗುಡಿ ಬಾಗ್ಲಾ ತಗದು ಪೂಜಿ ಮಾಡಿಕೊಡು ಎಂದೆ. ಅವನೂ ಒಪ್ಪಿದ. ಮುಂದೆ ಬಸವಣ್ಣನ ಗುಡಿಗೆ ಹೋಗಿ ಕೈ ಮುಗಿದು ಪತ್ರಿ ಕರಕಿ ತೆಗೆದುಕೊಂಡು ಬಂದೆ. ಪಡಸಾಲೆಯಲ್ಲಿ ಆಗಲೇ ಸಾಧು ನಿದ್ದೆ ಹೋಗಿಬಿಟ್ಟಿದ್ದ. ಹೆಂಡತಿ ಕೇಳಿದೆ. ನೀವು ಹೋದ ಕೂಡ್ಲೆ ಚಡಪಡಿಸಿದವರ ಹಂಗ ಮಾಡಿದರು. ಹಾಲು ಕೊಟ್ಟು ಬಿಡು ಕುಡುದು ಮಲಗತಿನಿ ಎಂದರು ಕೊಟ್ಟೆ. ಪಾಪ ದಣಿದಿರಬೇಕು ಎಷ್ಟ ಛಲೋ ನಿದ್ದಿ ಹತ್ತೆದೆ ನೋಡ್ರಿ ಎಂದಳು. ನಾನು ನಮ್ಮೂರ ದ್ಯಾಮವ್ವನ ಪ್ರಸಿಧ್ಧಿಯ ಕಥನವನ್ನು ಅವರಿಗೆ ಹೇಳುವ ತವಕದಲ್ಲಿದ್ದೆ. ನಿರಾಶೆಯಾಯಿತು. ಬಟ್ಟೆ ಬದಲಿಸಿ ಊಟ ಮಾಡಿದೆ. ಬೆಳಿಗ್ಗೆ ನಾಲ್ಕು ಗಂಟೆಗೆಲ್ಲಾ ಎದ್ದು ನೀರು ಕಾಯಿಸಬೇಕು, ಹೂ ಪತ್ರಿ ಎಲ್ಲ ಹೊಂದಿಸಿಕೊಂಡು ಗಂಡ ಹೆಂಡತಿ ಕೂಡಿಯೇ ಸಾಧುಗಳ ಪೂಜಾ ಕಾರ್ಯ ನೋಡಬೇಕು ಎಂದು ಕೊಳ್ಳುತ್ತಾ ಮಲಗಿದೆವು. ಬೆಳಗಿನ ನಾಲ್ಕರ ಜಾವ. ಎಚ್ಚರವಾಯಿತು. ಎದ್ದವನೇ ಒಲೆ ಉರಿ ಹಾಕಿ ಬಂದು ನೋಡುತ್ತೇನೆ. ಸಾಧು ಮಲಗಿದ್ದ ಜಾಗ ಖಾಲಿ. ಕಂಬಳಿ ಮಡಿಸಿ ಒಂದಡೆ ಇಡಲಾಗಿತ್ತು. ಬಹುಶಃ ಬೆಳಗಿನ ಕ್ರಿಯಾಕರ್ಮ ಮುಗಿಸಲು ಹೋಗಿರಬೇಕು ಎಂದು ಭಾವಿಸಿ ನನ್ನ ಕೆಲಸಗಳನ್ನು ಬೇಗ ಬೇಗ ಮುಗಿಸತೊಡಗಿದೆ. ನೀರು ಕಾದರೂ ಬರಲಿಲ್ಲ. ನಾನು ಸ್ನಾನ ಮಾಡಿ ದೇವರ ಪೂಜೆ ಮುಗಿಸಿದೆ. ನನ್ನ ಹೆಂಡತಿಯೂ ಸ್ನಾನ ಪೂಜೆ ಮುಗಿಸಿದಳು. ಈಗಲೂ ಸಾಧು ಬರದಿದ್ದುದು ನನಗೆ ಚಿಂತೆಯಾಯಿತು. ದ್ಯಾಮವ್ವನ ಗುಡಿಯನ್ನಂತೂ ಆ ಸಾಧು ನೋಡಿಲ್ಲ. ಊರಿಗೆ ಹೊಸಬ. ಎಲ್ಲಿ ಹಾದಿ ತಪ್ಪಿಸಿಕೊಂಡನೋ ಎಂದು ಹಳಹಳಿಸಿದೆ. ನಾವು ಗುಡಿಗೆ ಹೋಗೂಣು ನಡಿ ಮುಂದೆನಾಗುತ್ತದೋ ದ್ಯಾಮವ್ವ ನೋಡಕೊತಾಳ ಎಂದು ಗುಡಿಗೆ ಹೊರಟೆವು. ಗುಡಿ ಇನ್ನೂ ಸ್ವಲ್ಪ ದೂರವಿದೆ ಎನ್ನುವಾಗಲೇ ದೇವಿಸ್ತುತಿ ಕೇಳಿಸುತ್ತಿತ್ತು. ನಾನು ರಭಸದಿಂದ ಹೋಗಿ ನೋಡಿದರೆ ಸಾಧು ಮಹಾರಾಜ ಶಾಂತವಾಗಿ ದೇವಿ ಪೂಜೆ ಮಾಡುತ್ತಿದ್ದಾನೆ. ಗುಡಿ ಬಾಗಿಲು ಇನ್ನೂ ತೆರೆದಿರಲಿಲ್ಲ. ಪೌಳಿಯಲ್ಲಿಯೇ ತನ್ನ ಜೋಳಿಗೆಯಲ್ಲಿದ್ದ ದೇವಿ ವಿಗ್ರಹವೊಂದನ್ನು ಹೊರ ತಂದು ಮಂತ್ರ ಪಠಣ ನಡೆಸಿದ್ದಾನೆ. ನಾನು ತಪ್ಪಾಯಿತು ಎನ್ನುವಂತೆ ನೋಡಿ ನಮಸ್ಕರಿಸಿ ಎಲ್ಲ ಸಾಮಾನುಗಳನ್ನು ಹೊಂದಿಸಿ ಇಟ್ಟೆ. ಅವುಗಳನ್ನು ಒಂದೊಂದೇ ದೇವಿಗೆ ಅರ್ಪಿಸಹತ್ತಿದ. ಕೊನೆಯಲ್ಲಿ ಕರ್ಪೂರ ಆರತಿಯನ್ನು ಮಾಡಿದ. ಆಗ ವಿರೇಶ ಗಡಬಡಿಸಿ ಬಂದು ಗರ್ಭಗುಡಿ ಬಾಗಿಲ ಕೀಲಿ ತೆಗೆದು ದೇವಿಯನ್ನು ನೋಡುತ್ತಾನೆ. ದೇವಿ ಇದೀಗ ಅಲಂಕಾರಗೊಂಡಂತೆ ಕಾಣುತ್ತಿದ್ದಾಳೆ. ತಾನು ನಿತ್ಯ ಹೇಗೆ ಪೂಜೆ ಮಾಡಿ ಅಲಂಕಾರಮಾಡುತ್ತಿದ್ದೆನೋ ಅದೇ ರೀತಿ ಇದೆ. ಅವನಿಗೆ ಆಶ್ಚರ್ಯವಾಗಿ ನಮ್ಮ ಕಡೆ ನೋಡಿದ. ನಾನು ಸಾಧು ಕಡೆ ನೋಡಿದೆ. ಇದನ್ನು ಅರ್ಥೈಸಿದವನಂತೆ ಪೂಜೆ ಆಗಿದೆ, ನೀವು ಪ್ರದಕ್ಷಿಣ ನಮಸ್ಕಾರ ಹಾಕಿ ಬಂದು ಪ್ರಸಾದ ತೆಗೆದುಕೊಳ್ಳಿ ಎಂದ. ಸರಿ ನಾವು ಕಣ್ಣು ಮುಚ್ಚಿ ಪ್ರದಕ್ಷಿಣೆ ಹಾಕ ಹತ್ತಿದೆವು. ಮೂರು ಪ್ರದಕ್ಷಿಣೆ ಆಗುತ್ತಿದ್ದಂತೆ ನಮಗೆಲ್ಲ ಸುಗಂಧದ ಪರಿಮಳ ಹರಡಿದಂತೆ ಅನಿಸಿತು. ಈ ಪರಿಮಳ ಹೇಗೆ ಬಂತು ಎಂದು ಆಶ್ಚರ್ಯವೆನಿಸಿತಾದರೂ ಐದು ಪ್ರದಕ್ಷಿಣೆ ಮುಗಿದ ಮೇಲೆ ಬಂದು ನೋಡುತ್ತೇವೆ. ಸಾಧು ಪುನಃ ಮಾಯ. ಪೂಜೆ ಮಾಡಿದ ಸ್ಥಳದಲ್ಲಿ ಕಣಗಲ ಹೂ ಬದಲಿಗೆ ಸಂಪಿಗೆ ಮಲ್ಲಿಗೆ ಗುಲಾಬಿ ಹೂಗಳು ಪ್ರಸಾದ ರೂಪದಲ್ಲಿ ಕಲ್ಲು ಸಕ್ಕರೆ ಬದಲಿಗೆ ಅನೇಕ ತರದ ಹಣ್ಣುಗಳು ಪೆಢೆ ಬರ್ಪಿಗಳು ಇದ್ದವು. ನಾನು ಗುಡಿ ಹೊರಗೆ ಓಡಿ ಬಂದು ನೋಡುತ್ತೇನೆ. ಅದೇ ಆಗ ಸೂರ್ಯ ಬಾನಿಂದ ಮೊದಲ ಕಿರಣಗಳನ್ನು ಹೊರ ಬಿಡುತ್ತಿದ್ದ. ಎಲ್ಲ ಕಡೆ ನೋಡಿದೆ. ಸಾಧು ಎಲ್ಲೂ ಕಾಣಲಿಲ್ಲ. ಪುನಃ ಒಳಬಂದು ಕೈ ಮುಗಿದು ಪ್ರಸಾದ ಸ್ವೀಕರಿಸಿದೆ. ಸಾಧು ರೈಲ್ವೆ ಕಡೆ ಹೋಗಿರಬಹುದೆಂದು ಒಂದು ವಾಹನ ತೆಗೆದುಕೊಂಡು ಸ್ಟೇಶನ್ ಕಡೆ ಹೋದೆ. ಅಲ್ಲಿ ಯಾರೂ ಇರಲಿಲ್ಲ. ಸ್ಟೇಶನ್ದಲ್ಲಿ ವಿಚಾರಿಸಿದರೆ ಗಾಡಿ ಇನ್ನೂ ಬಂದಿಲ್ಲ. ಅರ್ಧ ತಾಸು ತಡ ಇದೆ. ಸಾಧುಗಳ ತರಹದವರೂ ಯಾರೂ ಈ ಕಡೆ ಬಂದಿಲ್ಲ ಎಂದು ಹೇಳಿದರು. ಈಗ ಸೂರ್ಯ ಮಹಾರಾಜ ನಿಚ್ಚಳವಾಗಿ ಹೊರಬಂದಿದ್ದ.

ಶ್ರೀನಿವಾಸ.ಹುದ್ದಾರ

Leave a Reply