“ಟಾರ್ಚ್ ಲೈಟ್”

ತಿಂಗಳ ಬೆಳಕಿಗೆ ಪಶ್ಚಿಮ ಘಟ್ಟಗಳ ಅಂಚು ಅದೆಷ್ಟು ಚೆಂದವಾಗಿ ಕಾಣುತ್ತಿತ್ತೆಂದರೆ ಬೆಟ್ಟದಲ್ಲೆಲ್ಲಾ ಹಾಲೋ, ಕೆನೆ ಮೊಸರೋ, ಹಗುರನೇ ಸುರಿಯುತ್ತಿದ್ದಂತೆಯೋ, ಕನಸಲ್ಲಿ ಕಂಡ ಯಾವುದೋ ಲೋಕವೊಂದು ಕಣ್ಣೆದುರೇ ಜೀವತಳೆಯುತ್ತಿದ್ದಂತೆಯೋ ಕಾಣಿಸುತ್ತಿತ್ತು. ದೂರದ ಕಾಡೇ ಅಷ್ಟು ಚೆಂದ ಕಾಣುತ್ತಿರಬೇಕಾದರೆ ಇನ್ನು ಇಲ್ಲೇ ಇರುವ ಐತಿಹಾಸಿಕ ಚತುರ್ಮುಖ ಬಸದಿಯೂ ಚಂದ ಕಾಣದೇ ಇರುತ್ತದೆಯೇ? ಚಂದ್ರನ ಬೆಳಕೆಲ್ಲಾ ಭೈರರಸರು ಕಟ್ಟಿಸಿದ್ದ ಕಲ್ಲುಗಂಬ, ಬಸದಿಯ ನಾಲ್ಕು ಸುತ್ತಿನ ದ್ವಾರಗಳ ಮೇಲೆ ಬಿದ್ದು, ಹೊಸ ರಾಜನ್ನೊಬ್ಬ ಈ ಬಸದಿ ಆಳಲು ಬರುತ್ತಿದ್ದಾನೇನೋ ಅನ್ನಿಸುವಂತೆ ಹೊಳೆಯುತ್ತಿತ್ತು. ಬಸದಿಯ ಮೆಟ್ಟಿಲುಗಳ ಮೇಲೆ ಮೂಡುತ್ತಿದ್ದ ಬೆಳದಿಂಗಳು, ಕಲ್ಲು ಚಪ್ಪಡಿಯ ಮರೆಯಲ್ಲಿ ಕೂತು ಕೂಗುತ್ತಿದ್ದ ಕಾಡು ಪಾರಿವಾಳದ ಸದ್ದು, ಎತ್ತರಕ್ಕೆ ಹಾರಿಹೋಗಿ, ಒಮ್ಮೆ ತನ್ನ ಕಣ್ಣು ಹೊಳೆಯಿಸಿ, ಜಿಗ್ ಅಂತ ಭಯ ಹುಟ್ಟಿಸಿಬಿಡುವ ಗೂಬೆ, ಬಾಹುಬಲಿ ಬೆಟ್ಟದಲ್ಲಿ ಜಿನರಾಜ.. ಜಿನರಾಜ..ನಮ್ಮಯ ಊರಿನ ರವಿತೇಜ.. ಅಂತ ಸಣ್ಣಗೆ ಜಿನ ಸೇವಕಿಯರು ಹಾಡುತ್ತಿದ್ದ ಹಾಡು, ಇವೆಲ್ಲ ಮಧುರ ಕ್ಷಣಗಳನ್ನು ಅನುಭವಿಸುತ್ತಲೇ, ಪ್ರತೀ ದಿನದಂತೆ ಇವತ್ತೂ ಒಮ್ಮೆ ಬೆಳದಿಂಗಳಲ್ಲಿ ಕಾಡುತ್ತಿದ್ದ ಕಾಡುಗಳನ್ನು, ಮತ್ತೊಮ್ಮೆ ಆಕಾಶವನ್ನೂ ನೋಡುತ್ತ ಧ್ಯಾನಸ್ಥ ಸ್ಥಿತಿಯಲ್ಲಿ ಕಳೆದೇಹೋಗಿದ್ದ ಶಿಶಿರ. ಅಷ್ಟೊತ್ತಿಗೆ ದೂರದಲ್ಲಿ ಟಾರ್ಚು ಬೆಳಕು ಮೂಡಿದ್ದು ಕಂಡು ಎಂದಿನಂತೆಯೇ ಶಿಶಿರನ ಕಣ್ಣಲ್ಲಿ ಜೀವ ಸಂಚಾರವಾಯ್ತು.ಬಸದಿಯ ಆವರಣದಲ್ಲಿ, ಹೆಬ್ಬಲಸಿನ ಮರದ ಬುಡದಲ್ಲಿ ಟಾರ್ಚು ಬೆಳಕು ಹಾಯಿಸುತ್ತಲೇ ಆಕೃತಿಯೊಂದು ಬರುತ್ತಿತ್ತು. ಬೆಳದಿಂಗಳನ್ನೇ ನಾಚಿಸುವಂತಿದ್ದ ಆ ಟಾರ್ಚಿನ ಬೆಳಕು, ಚಂದ್ರನ ಬೆಳಕಿನಲ್ಲಿ ಮಿಶ್ರವಾಗಿ ಬಸದಿಯ ಆವರಣ ಲಕ ಲಕ ಮಿಂಚುತ್ತಿತ್ತು. ಇವತ್ತಂತ ಅಲ್ಲ, ಪ್ರತೀ ದಿನವೂ ಆ ಟಾರ್ಚು ಬೆಳಕು, ಜಿಗ್ ಅಂತ ಒಮ್ಮೆ ಕತ್ತಲಲ್ಲಿ ಉದಯಿಸಿದರೆ ಸಾಕು, ಶಿಶಿರನೊಳಗೆ ಕೌತುಕದ ಬೆಳಕೊಂದು ದಿಢೀರನೇ ಮೂಡುತ್ತಿತ್ತು. ಮೊದ ಮೊದಲು ಹೀಗೆ ಬಸದಿಗೆ ಬಂದು, ಗೂಬೆಗಳ ಜೀವನಶೈಲಿಯನ್ನೋ, ಕಾಡು ಪಾರಿವಾಳಗಳ ಬದುಕನ್ನೋ ಗಮನಿಸುತ್ತ ಜೀವ ಲೋಕದ ಕುರಿತು ಅಗಾಧ ಕಳಕಳಿ ತಾಳಿದ್ದ ಶಿಶಿರನಿಗೆ, ಈಗ ಆ ಮೂಕ ಜೀವಲೋಕಕ್ಕಿಂತಲೂ ಆ ಟಾರ್ಚು ಬೆಳಕು ಹಾಯಿಸುತ್ತಿದ್ದ ಮನುಷ್ಯ ಜೀವವೇ ಕುತೂಹಲ ಅನ್ನಿಸಿ, ಪ್ರತೀದಿನವೂ ಆತ ಬಸದಿಗೆ ತಪ್ಪದೇ ಹಾಜರಾಗುತ್ತಿದ್ದ. ಮೊದಲ ದಿನ ಆಕೃತಿಯೊಂದು ದೂರದಲ್ಲಿ ಟಾರ್ಚು ಹಾಯಿಸಿ ಏನೇನೋ ಹುಡುಕಾಡುವಂತೆ ಆಚೀಚೆ ಹೋಗುತ್ತಿದ್ದುದು, ಅವನಿಗೆ ತೀರಾ ಸಹಜವಾಗಿ ಕಂಡಿತ್ತು. ‘ಪಾಪ ಏನೋ ಹಣವೋ, ಮೊಬೈಲೋ, ಬೀಗದ ಕೈಯೋ ಬಿದ್ದು ಹೋಗಿರಬೇಕು, ಅದನ್ನು ಹುಡುಕುತ್ತಿದ್ದಾನೆ’ ಅಂತನ್ನಿಸಿ ಆ ಟಾರ್ಚ್ ಬೆಳಕನ್ನೂ, ಟಾರ್ಚ್ ಹಿಡಿದಿದ್ದ ಕಪ್ಪಾದ ಆಕೃತಿಯನ್ನೂ ಅವನು ಗಂಭೀರವಾಗಿ ತೆಗೆದುಕೊಳ್ಳುವ ಆಸ್ಥೆಗೆ ಇಳಿಯದೇ, ಆ ಹುಡುಕಾಟ ಮಾನವನ ದೈನಿಕದ ತೀರಾ ಸಹಜವಾದ ಪ್ರಕ್ರಿಯೆ ಅಂತ ಅದರತ್ತ ಅಷ್ಟೇನೂ ಆಸಕ್ತಿಯೇ ತಾಳದೇ ಬಸದಿಯ ಗೂಬೆಗಳ ಪಿಳಿಪಿಳಿ ಕಣ್ಣುಗಳನ್ನೂ ನೋಡುವುದರಲ್ಲಿ ಮಗ್ನನಾಗಿಬಿಟ್ಟಿದ್ದ. ಆದರೆ, ಯಾವಾಗ ಆ ಬೆಳಕು ಮತ್ತು ಆಕೃತಿ ತಾನು ಕೂರುತ್ತಿದ್ದ ಬಸದಿಯ ರಾತ್ರಿಗಳಲ್ಲಿ ಮತ್ತೆ ಮತ್ತೆ ಹೊಳೆಯಲು ಶುರುವಾಯ್ತೋ, ಅಂದಿನಿಂದ ಶಿಶಿರ ಕಾಣದ ಕೌತುಕದ ಮಾಯೆಯೊಳಗೆ ಬಿದ್ದುಬಿಟ್ಟ. ‘ಯಾರಿವನು ಪುಣ್ಯಾತ್ಮ? ಎಂತ ಹುಡುಕ್ತಾನೆ ಯಾವಾಗ್ಲೂ?’ ಅಂತ ಅವನು ಯೋಚನೆಗೀಡಾಗಿಬಿಟ್ಟ.ಅವನ ಬದುಕು, ಅವನ ಹುಡುಕಾಟ, ನನಗೆಂತಕ್ಕೆ ಯಾರ‍್ಯಾರ ಬದುಕನ್ನು ಜಾಲಾಡುವ ಪಂಚಾತಿಕೆ?’ ಅಂತವನು ಸುಮ್ಮನಾಗಿದ್ದ. ಆದರೂ, ಪ್ರತೀ ರಾತ್ರಿಯಲ್ಲಿಯೂ ತನ್ನ ಬದುಕಿನ ಗಹನವಾದದ್ದೇನೋ ಕಳೆದುಹೋಗಿದೆ ಅಂತನ್ನುವ ಹಾಗೆ ಟಾರ್ಚು ಬೆಳಕಾಯಿಸುವ ಆ ವ್ಯಕ್ತಿಯೂ, ಅವನ ಕಪ್ಪಾದ ಆಕೃತಿಯೂ, ‘ಕಳೆದುಹೋದ ಇವನ ವಸ್ತು ಯಾವುದಪ್ಪಾ?’ ಅಂತ ತನ್ನನ್ನೇ ಸಾವಿರ ಬಾರಿ ಪ್ರಶ್ನೆ ಕೇಳಿಕೊಂಡ. ಅವನಿಗೆ ದಾರಿತೋರಿಸೋ ಆ ಟಾರ್ಚ್ ಬೆಳಕು, ಇವನ್ನೆಲ್ಲಾ ನೋಡಿ ಶಿಶಿರನ ಸೂಕ್ಷ್ಮಮತಿಗೆ ಸುಮ್ಮನಿರುವ ಬುದ್ಧಿಯಾದರೂ ಹೇಗೆ ಹೊಳೆಯಬೇಕು? ಇವತ್ತಲ್ಲ ನಾಳೆ ಆ ಟಾರ್ಚ್ ಬೆಳಕಿನ ಹಿಂದಿನ ಕತೆಯನ್ನು ಹುಡುಕಾಡಲೇಬೇಕು, ಸಾಧ್ಯವಾದರೆ ಅವನ ಹುಡುಕಾಟಕ್ಕೆ ತಾನೂ ಒಂದಷ್ಟು ಸಹಾಯ ಮಾಡಿದರೆ ಆತ ಬೇಡ ಅನ್ನಲಿಕ್ಕಿಲ್ಲ, ಅಂತೆಲ್ಲಾ ಶಿಶಿರ ಯೋಚಿಸಹತ್ತಿದ. ಅವನು ಇವತ್ತೂ ರಾತ್ರಿ ಈ ಬಸದಿಗೆ ಬಂದದ್ದೂ ಅದೇ ಕಾರಣಕ್ಕೆ. ಆದರೆ, ತುಂಬಾ ಹೊತ್ತಾದರೂ ಆ ಟಾರ್ಚು ಬೆಳಕಾಯಿಸುವ ವ್ಯಕ್ತಿ ಬರದೇ ಇದ್ದಾಗ ಶಿಶಿರ ಅಲ್ಲೇ ಕೂತು ಆಕಾಶವನ್ನು, ಬೆಳದಿಂಗಳನ್ನೂ ಧೇನಿಸುತ್ತಿದ್ದ. ಹಾಗೇ ಆತ ಧೇನಿಸುತ್ತಿದ್ದಾಗಲೇ, ಟಾರ್ಚ್ ಬೆಳಕು ಜಿಗ್ ಅಂತ ಮೂಡಿದ್ದು. ಬಸದಿಯಿಂದ ಸ್ವಲ್ಪ ದೂರವಿದ್ದ ಅರಳಿಮರದ ಕೆಳಗೆ ಆ ನಿಗೂಢ ಮನುಷ್ಯ ಬರುತ್ತಿದ್ದ. ಬೆಳದಿಂಗಳಿಗೆ ಇವತ್ತು ಅವನ ಅಸ್ಪಷ್ಟ ಆಕೃತಿ ಒಂಚೂರಷ್ಟೇ ಸ್ಟಷ್ವವಾಗಿ, ಅವನು ಉಟ್ಟುಕೊಂಡಿದ್ದ ಲುಂಗಿ, ಅವನ ಗಿಡ್ಡಗಿನ ಶರೀರ, ಮಾಯಾದಂಡವೊಂದನ್ನು ಹಿಡಿದುಕೊಂಡಂತೆ ಟಾರ್ಚ್ ಹಿಡಿದ ಕೈ, ಬಗಲಲ್ಲಿ ಗೋಣಿಯೋ, ಚೀಲವೋ? ಇವೆಲ್ಲಾ ಶಿಶಿರನಿಗೆ ಕಂಡು ಅವನು ಮತ್ತಷ್ಟು ಉಲ್ಲಸಿತನಾದ. ಅಲ್ಲಿಂದೆದ್ದು ಬಸದಿಯ ಮೆಟ್ಟಲಿಳಿದು ಕೆಳಗೆ ಬರತೊಡಗಿದ. ಅವನು ಇಳಿದು ಬರುತ್ತಿರುವಾಗ ಆ ಆಕೃತಿ ಒಮ್ಮೆ ಕತ್ತಲಲ್ಲಿ, ಮತ್ತೊಮ್ಮೆ ನಸು ಬೆಳದಿಂಗಳಲ್ಲಿ, ಟಾರ್ಚು ಬೆಳಕು ಹಾಯಿಸುತ್ತಾ ದಾರಿಯಲ್ಲಿ ಒಮ್ಮೊಮ್ಮೆ ನಿಂತು ಹುಡುಕಾಡಿ, ರಸ್ತೆಯಲ್ಲಿ ಕಾರು, ಬೈಕು ಬಂದರೂ ವಿಚಲಿತವಾಗದೇ, ತನ್ನ ಹುಡುಕಾಟದಲ್ಲೇ ಕಳೆದುಹೋಗಿಬಿಟ್ಟಿತು. ಶಿಶಿರನೇನೋ ಮೆಟ್ಟಿಲಿಳಿದು, ಆ ವ್ಯಕ್ತಿ ತನ್ನ ಹತ್ತಿರ ಬರುವ ತನಕ ಕಾಯೋಣ, ಆಮೇಲೆ ಮಾತಾಡಿಸೋಣ ಅಂದುಕೊಂಡು ಅಲ್ಲೇ ನಿಂತರೂ, ಆ ಟಾರ್ಚು ಹಿಡಿದ ಜೀವ ಹತ್ತಿರಾಗುತ್ತಿದ್ದಂತೆಯೇ ಅವನಿಗೆ ಆ ನಿರ್ಜನ ಪ್ರದೇಶದ ಅರ್ಧ ಬೆಳಕು ಚೆಲ್ಲಿದ ಕತ್ತಲಲ್ಲಿ, ಚೂರು ಚೂರೇ ಭಯವಾಗತೊಡಗಿತು. ತನಗಿಷ್ಟು ದಿನ ಕಾಡಿದ ಆ ಟಾರ್ಚು ಬೆಳಕು, ಅದರ ಕುರಿತು ತನ್ನೊಳಗೆ ತಾನೇ ಫೋಷಿಸಿದ್ದ ನಿಗೂಢತೆ, ಕೌತುಕತೆ ಎಲ್ಲವೂ ಈಗ ತನ್ನ ಬಳಿಯೇ ಎದ್ದು ಬರುತ್ತಿದೆ ಎನ್ನುವಾಗ, ಅವನೊಳಗೆ ಯಾವುದೋ ಒಂದು ಭಾವ ಕಂಪನಗೊಂಡಿತು.ತಾನು ಯಾವತ್ತೋ ಕಂಡ ಕನಸೊಂದರಲ್ಲಿ ಹೀಗೇ ಯಾವುದೋ ವ್ಯಕ್ತಿಗಾಗಿ ಕಾದು, ಕೊನೆಗೆ ಆ ವ್ಯಕ್ತಿ ಬಂದಾಗ ಚೀರಿದ್ದು, ಆ ವ್ಯಕ್ತಿ ಭಯಂಕರವಾಗಿ ನಕ್ಕಿದ್ದು, ನಿಂಗೆಂತಕ್ಕೆ ನನ್ನ ಕತೆ, ನಿನ್ನ ಕತೆ ಮುಗಿಸ್ತೇನೆ ಮೊದಲು” ಅಂತ ಉಗ್ರವಾಗಿ ಬೊಬ್ಬಿಟ್ಟದ್ದು, ಇವೆಲ್ಲವೂ ಈಗ ಶಿಶಿರನಿಗೆ ನೆನಪಾಗಿ ಒಳಗೊಳಗೆ ಪುಕು ಪುಕು ಆಯ್ತು. ತಾನು ಕಂಡ ಕನಸೂ ಈಗ ನಿಜವಾದರೆ, ನಿದ್ದೆಯಲ್ಲಿ ಬಂದ ಕನಸು ಕೆಲವೊಮ್ಮೆ ನಿಜದಲ್ಲೂ ಬರುತ್ತಂತೆ, ಇದೂ ಹಾಗಾದರೆ, ಅಂತ ಯೋಚಿಸಿದ. ಕನಸು ನಿಜವಾಗೋದೇ ಒಂದು ಸೊಗಸು, ಅದೊಂದು ಥ್ರಿಲ್‌, ಒಂಥರಾ ಮಜಾ ಇರುತ್ತೆ ಅಂತಲೂ ಅವನು ಉತ್ತೇಜಿತನಾದ. ಆ ನಿಗೂಢ ಮನುಷ್ಯ ಈಗ ಹತ್ತಿರಾದ. ಬೆಳದಿಂಗಳಲ್ಲಿ ಅವನ ಮುಖ ಸ್ಟಷ್ಟವಾಗಿ ಕಂಡಿತು. ಕೆದರಿದ ಬಿಳಿ ಗಡ್ಡ, ಬೋಳು ತಲೆ, ಹಣೆಯಲ್ಲಿ ಉದ್ದಗಿನ ಕುಂಕುಮ, ಗೀಟು ಗೀಟಿನ ಲುಂಗಿ, ಚಪ್ಪಲಿಯೇ ಹಾಕಿರದ ಕಾಲು, ಬರೀ ನೆಲವನ್ನಷ್ಟೇ ನಿರುಕಿಸುತ್ತಿದ್ದ ಕಣ್ಣುಗಳು, ಟಾರ್ಚನ್ನು ಅತ್ತಿಂದಿತ್ತ ಹಾಯಿಸುತ್ತ ಗಾಢವಾದ ಮುಖಭಾವದಲ್ಲಿ ಏನನ್ನೋ ಅರಸುತ್ತಿದ್ದ ನಿರೀಕ್ಷೆಯ ಮನಸ್ಸು, ಅವನನ್ನು ನೋಡಿ ಭಯಗೊಳ್ಳುವ ಹಾಗಿರಲಿಲ್ಲವಾದರೂ ಆ ಕತ್ತಲಲ್ಲಿ ಶಿಶಿರ ಕೊಂಚ ಬೆದರಿದ. ಆದರೂ ವಯಸ್ಸಿನಲ್ಲಿ ಹಿರಿಯನಾಗಿದ್ದ ಆ ವ್ಯಕ್ತಿಯನ್ನು ಮತ್ತೊಮ್ಮೆ ಗಮನಿಸಿ, ‘ಎಂತ ಹುಡುಕ್ತಿದ್ದೀರಿ ಸರ್? ಏನಾದ್ರೂ ಕಳೆದು ಹೋಗಿದ್ಯಾ?’ ಎಂದು ತಣ್ಣಗೇ ಕೇಳಿದ. ಆ ವ್ಯಕ್ತಿ ಇವನನ್ನು ಗಮನಿಸಿದರೂ, ಗಮನಿಸದವನ ಹಾಗೆ ಮತ್ತೆ ನೆಲದಲ್ಲೇ ಹುಡುಕಾಟ ಶುರು ಮಾಡಿದ.ಶಿಶಿರ, ಮತ್ತೆ “ಹೇಳಿ, ನನ್ನಿಂದೇನಾದ್ರೂ ಸಹಾಯ ಬೇಕಾ” ಎಂದ. ಆ ಮನುಷ್ಯ, ಯಾವ ರೀತಿಯಲ್ಲೂ ಪ್ರತಿಕ್ರಿಯಿಸದೇ, ತನಗೆ ಹುಡುಕಾಟವೊಂದನ್ನು ಬಿಟ್ಟು ಸುತ್ತಲಿನ ಯಾವ ವಿಷಯವೂ ತನಗೆ ಸೋಕುವುದಿಲ್ಲ ಎನ್ನುವ ಹಾಗೆ ಮತ್ತೆ ಕತ್ತಲಲ್ಲಿ ಕರಗಿ ಹೋದ. ಸುತ್ತಲೂ ಆವರಿಸಿದ್ದ ವಿಚಿತ್ರ ಮೌನದಲ್ಲಿ, “ತಾನು ಆ ಮನುಷ್ಯನನ್ನು ಕಂಡು ಪ್ರಶ್ನಿಸಿದ್ದು ತನಗೆ ತಾನೇ ಪ್ರಶ್ನಿಸುವಂತಿತ್ತು ವಿನಃ ಆ ವ್ಯಕ್ತಿಗೆ ತನ್ನ ಪ್ರಶ್ನೆ ಸೋಕಲಿಲ್ಲ ಅಲ್ವಾ” ಎಂದು ಶಿಶಿರನಿಗೆ ಒಂಥರಾ ಅನ್ನಿಸಿತು. ಆ ಮಹಾ ಮೌನದಲ್ಲಿ ತಾನು ಮಾತಾಡಿದ ಸದ್ದೇ ಮತ್ತೆ ತನ್ನ ಕಿವಿಯಲ್ಲಿ ಅನುರಣಿಸಿ ನಾಚಿಕೆಯಾಯ್ತು. ಆದರೂ ನಮಗೆ ಸಂಬಂಧಪಡದ ವಿಷಯವೇ ಕೆಲವೊಮ್ಮೆ ಸುಖ ಕೊಡುತ್ತದೆ ಎಂದು, ಗಾಢವಾಗಿ ನಂಬಿದ್ದ ಶಿಶಿರನಿಗೆ ಈ ವಿಚಿತ್ರ ವ್ಯಕ್ತಿಯ ಗುಂಗನ್ನು ಬಿಟ್ಟು ಬಿಡಲು ಸಾಧ್ಯವೇ ಆಗಲಿಲ್ಲ. ಅವನನ್ನು ಗೊತ್ತಾಗದ ಹಾಗೆ ಹಿಂಬಾಲಿಸಿದ. ಆ ವ್ಯಕ್ತಿ ಹಾಗೇ ಟಾರ್ಚು ಹಾಯಿಸುತ್ತ, ಹಾಯಿಸುತ್ತ ಕೊನೆಗೆ ಬಸದಿಯಿಂದ ತುಸು ದೂರವಿದ್ದ ಪುಟ್ಟದ್ದೊಂದು ಮನೆಯ ಕಡೆ ಸಾಗಿದನು. ಮನೆಯ ಅಂಗಳದ ನೆಲದಲ್ಲೇ ಬಿದ್ದುಕೊಂಡು ‘ನೀರ್ ತಗೊಂಡು ಬಾ’ ಅಂತ, ಗೊಗ್ಗರು ಸ್ವರದಲ್ಲಿ ಆಜ್ಞೆ ಮಾಡಿದನು. ಅವನನ್ನೇ ಹಿಂಬಾಲಿಸಿಕೊಂಡು ಬಂದಿದ್ದ ಶಿಶಿರ, ಅಲ್ಲೇ ಒಂದು ಮಾವಿನ ಮರದ ಕೆಳಗೆ ನಿಂತು, ಅವನ ಮನೆಯನ್ನೂ, ಮೊದಲ ಬಾರೀ ಯಾವುದೋ ಒಂದು ದಿವ್ಯ ಅಶರೀರ ವಾಣಿಯಂತೆ ಕೇಳಿದ ಅವನ ಸ್ವರವನ್ನೂ ಕೇಳುತ್ತ ಅಲ್ಲಿನ ಸದ್ದುಗಳಿಗೆ, ಸೂಕ್ಷ್ಮಗಳಿಗೆ ಮತ್ತಷ್ಟು ಕಿವಿಕೊಟ್ಟನು. ಜಗಲಿಯ ಪುಟ್ಟ ಬಲ್ಬಿನಲ್ಲಿ ಜಿಗ್ ಅಂತ ಬಂದು ಅವನಿಗೆ ನೀರು ಕೊಟ್ಟ ಆ ಹುಡುಗಿಯನ್ನು ನೋಡಿದ್ದೇ ಶಿಶಿರ ದಿಙ್ಮೂಢನಾಗಿ ಹೋದ. ತಾನು ಪಿ.ಜಿ ಮಾಡುತ್ತಿದ್ದಾಗ ಪ್ರೀತಿಸಿದ್ದ, ಕೊನೆಗೆ ಯಾರಿಗೂ ಹೇಳದೇ ಊರು ಬಿಟ್ಟು ಹೋಗಿದ್ದ, ಕೊನೆಗೆ ತಾನೇ ಮರೆತುಬಿಟ್ಟಿದ್ದ ವಸುಮತಿ, ಅಲ್ಲಿ ನೀರಿನ ತಂಬಿಗೆ ಹಿಡಿದುಕೊಂಡು ಬರುತ್ತಿದ್ದಳು. ಅರ್ಧ ಬೆಳದಿಂಗಳಲ್ಲಿ, ಇನ್ನರ್ಧ ಬಲ್ಬಿನ ಮಬ್ಬು ಬೆಳಕಿನಲ್ಲಿ ಅವಳು ಹಿಂದೆ ಕಂಡಂತೆಯೇ ಕಂಡಳು ಶಿಶಿರನಿಗೆ. ಆತ ಒಮ್ಮೆಲೇ ಮೌನವಾಗಿ ಯೋಚಿಸುತ್ತಲೇ ಇದ್ದ ‘ಅಮ್ಮ ಮೂರು ವರ್ಷದ್ ಹಿಂದೆಯೇ ಆಕ್ಸಿಡೆಂಟ್‌ನಲ್ಲಿ ಹೋಗಿಬಿಟ್ಟಳು. ಆವತ್ತಿಂದ ಅಪ್ಪ ಕಂಗಾಲಾಗಿದ್ದಾರೆ. ರಾತ್ರಿ ಎಲ್ಲೆಲ್ಲೋ ಸುತ್ತಿ, ದಾರಿಯಲ್ಲಿ ಸಿಕ್ಕಿದ ಯಾವುದೋ ಚಪ್ಪಲಿಯನ್ನು, ಎಲ್ಲೋ ಬಿದ್ದ ಬಳೆಗಳನ್ನು, ಮನೆಗೆ ತಂದು, ಇದು ನಿಮ್ಮ ಅಮ್ಮಂದು, ಎಷ್ಟು ಚಂದಿದೆ, ನೋಡು ಅಮ್ಮ ಸತ್ತಿಲ್ಲ, ಬದುಕಿದ್ದಾರೆ ಅಂತೆಲ್ಲಾ ಕನವರಿಸ್ತಾ ಇರ್ತಾರೆ. ಅಲ್ಲಿಲ್ಲಿ ಸುತ್ತುತ್ತ ಅಮ್ಮಂಗೆ ಸಂಬಂಧಪಟ್ಟಿದ್ದೇನಾದ್ರೂ ಸಿಗ್ತದ ಅಂತ ಹುಡುಕೋದೇ ಅವರಿಗೊಂದು ಚಾಳಿ ಆಗಿಬಿಟ್ಟಿದೆ’ ಯಾವತ್ತೋ ಒಂದು ದಿನ ವಸುಮತಿ ಹೇಳಿದ್ದು ಥಟ್ ಅಂತ ನೆನಪಾಗಿಬಿಟ್ಟಿತು ಶಿಶಿರನಿಗೆ.ತಾನು ಬಸದಿಗೆ ಬಂದಿದ್ದು, ಈ ಟಾರ್ಚು ಹಾಯಿಸೋ ಮನುಷ್ಯ ತನಗೆ ಕಾಡಿದ್ದು, ಅವನ ಬೆಳಕಿನಿಂದ, ಯಾವತ್ತೋ ತಾನು ಪ್ರೀತಿಸಿದ್ದ ಈ ವಸುಮತಿ ಸಿಕ್ಕಿದ್ದು ಎಲ್ಲವೂ ಒಂದಕ್ಕೊಂದು ಹೆಣೆದುಕೊಂಡ ಸೋಜಿಗದ ಮಾಲೆಯಂತೆ ಕಂಡು ಅಚ್ಚರಿಯಾಯ್ತು ಅವನಿಗೆ. ಹುಡುಕಾಟ ಅನ್ನೋದು ಸುಮ್ಮನಲ್ಲ, ಏನನ್ನೋ ಹುಡುಕಾಡುತ್ತಿದ್ದ ಒಬ್ಬ ವ್ಯಕ್ತಿಯ, ನಿಗೂಢತೆಯನ್ನೇ ಹುಡುಕಾಡಲು ಬಂದ ನನಗೆ, ನಾನು ಯಾವತ್ತೋ ಪ್ರೀತಿಸಿದ ವಸುಮತಿ ಸಿಗುವುದೆಂದರೆ, ಅಬ್ಬಾ ಹುಡುಕಾಟವೇ ಚಂದ’ ಎಂದು ಶಿಶಿರ, ತನ್ನ ಹುಡುಕಾಟದ ಹುಚ್ಚಿಗೆ ತಾನೇ ಸಂಭ್ರಮಗೊಂಡ. ಕಾಲೇಜು ದಿನಗಳಲ್ಲಿ ಅಸ್ಪಷ್ಟವಾಗಿ ಯಾವ ಉತ್ತರವನ್ನೂ ಕಂಡುಕೊಳ್ಳದ ತನ್ನ ಪ್ರೀತಿ ಈಗ ಮತ್ತೆ ಮರುಹುಟ್ಟು ಪಡೆದುಕೊಂಡಂತನ್ನಿಸಿತು. ಈಗ ಹ್ಯಾಗೋ ವಸುಮತಿಯನ್ನು ಗಮನಿಸಿ, ಆಕೆಗಿನ್ನೂ ಮದುವೆಯಾಗಿಲ್ಲ ಅನ್ನೋದನ್ನು ಹ್ಯಾಗೋ ಕಂಡುಕೊಂಡ. ಕತ್ತಲನ್ನೇ ನಿಂತುಕೊಂಡು ಅವಳನ್ನೇ ನೋಡುತ್ತಿದ್ದ ಅವನಿಗೆ ಅವಳ ಮೇಲೆ ಎರಡನೆ ಸಲ ಪ್ರೀತಿಯಾಯ್ತು. ಅವನ ಕಣ್ಣ ನೋಟ ಅವಳನ್ನು ಸಂಧಿಸಿತೋ? ಅಥವಾ ಸಹಜವಾಗಿ ದೂರದಲ್ಲಿ ಯಾರೋ ನಿಂತಿದ್ದಾರೆ ಅಂತ ಅವಳಿಗನ್ನಿಸಿತೋ ಗೊತ್ತಿಲ್ಲ, ಅಪ್ಪನಿಂದ ಟಾರ್ಚು ಕಿತ್ತುಕೊಂಡು, ಸೀದಾ ಮಾವಿನ ಮರದ ಬಳಿ ಟಾರ್ಚು ಹಾಯಿಸಿದಳು. ತೀಕ್ಷ್ಣವಾಗಿದ್ದ ಅವಳ ಟಾರ್ಚಿನ ಬೆಳಕು ಶಿಶಿರನ ಮೇಲೆಯೇ ಬಿದ್ದಿತು. ಬೆಳದಿಂಗಳೂ ಟಾರ್ಚು ಬೆಳಕಿಗೆ ಸಹಾಯ ಮಾಡುವಂತೆ ಅವನನ್ನು ಇಡೀ ಬೆಳಗಿಸಿತು. ‘ಇವಳದ್ದೂ ಒಂದು ಹುಡುಕಾಟ’ ಎಂದು ಹಗುರನೇ ನಕ್ಕು, ಶಿಶಿರ ಅವಳ ಮನೆಯತ್ತಲೇ ನಡೆದ. ಎಂದೋ ಹುಟ್ಟಿಕೊಂಡ ಪ್ರೀತಿಯ ಬೆಳಕು ಅವನಲ್ಲೀಗ ಮತ್ತೂ ಗಾಢವಾಯಿತು.

“author”: “ಪ್ರಸಾದ್ ಶೆಣೈ ಆರ್.ಕೆ”,

courtsey:prajavani.net

https://www.prajavani.net/artculture/short-story/torch-light-640698.html

Leave a Reply