ಬದಲಾವಣೆಗೆ ಭಯವೇಕೆ? ಬರೆಯಿರಿ ಹೊಸ ಮುನ್ನುಡಿ

ವಸಂತ ಬರೆಯಲು ಸಿದ್ಧನಾಗಿದ್ದಾನೆ ಒಲವಿನ ಓಲೆ, ಪ್ರಕೃತಿ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮವಲ್ಲವೆ?

ಆದರೆ ಈ ಬದಲಾವಣೆಗೆ ಪ್ರಕೃತಿ ಪ್ರೀತಿಯಿಂದ ತಯಾರಾಗುತ್ತದೆ, ಪ್ರತಿ ಋತುವಿನ ಆರಂಭದಲ್ಲೂ ಆನಂದ ನೀಡುತ್ತದೆ. ಇದೀಗ…ಬರಲಿರುವ ವಸಂತ ಋತುವಿನೊಂದಿಗೆ ನವ ಸಂವತ್ಸರಕ್ಕೆ ಮುನ್ನುಡಿ ಬರೆಯುತ್ತಿದೆ. ಕಳೆಗಟ್ಟುತ್ತಿದೆ ಪರಿಸರ. ಹಳೆಯ ಮರಗಳಲ್ಲೂ ಹೊಸ ಚಿಗುರಿನ ಹಸಿರು. ಹಕ್ಕಿಗಳ ಇಂಚರ ಸುಂದರ ಪರಿಸರಕ್ಕೆ ಹಿನ್ನೆಲೆ ಗಾನ. ಜಗವೆಲ್ಲ ಸುಂದರ ಚಿತ್ರ. ಬದಲಾವಣೆ…ಅದು ಸುಂದರವೂ ಹೌದು. ಯುಗಾದಿಯ ಪಾಠ ಇದುವೇ ಹೌದು. ಸುಖ ಬಂದರೆ ಹಿಗ್ಗದೆ, ನೋವಿನಲಿ ಕುಗ್ಗದೆ ಬಾಳುವ ಸಂದೇಶ. ಅಂತೆಯೇ ಬದಲಾವಣೆಗೆ ಅಳುಕದೆ ನಮ್ಮನ್ನು ಸಿದ್ಧಗೊಳಿಸಿಕೊಳ್ಳಬೇಕು ಎಂಬ ಅದ್ಭುತ ಮಾನಸಿಕ ಸ್ಥೈರ್ಯವೂ ಅಗತ್ಯವೆಂದೇ ಸಾರುತಿದೆ ಯುಗಾದಿ…ನೂತನ ವರ್ಷದ ಆದಿ.

ನಾವು ಹಿಂದೆ ನಡೆದು ಹೋದುದರ ಬಗ್ಗೆಯೇ ಚಿಂತಿಸುತ್ತಿರುತ್ತೇವೆ. ಭವಿಷ್ಯದಲ್ಲಿ ಜತೆ ಬರಲಾಗದ, ವರ್ತಮಾನದಲ್ಲೂ ಜತೆಯಾಗಿ ನಡೆದುಬಾರದ..ಕೈ ಬಿಟ್ಟು ಹೋದ ಕ್ಷಣಗಳಿಗಾಗಿ ಪರಿತಪಿಸುತ್ತಿರುತ್ತೇವೆ. ಬಹುಶಃ ಇದೇ ಕಾರಣಕ್ಕೋ ಏನೋ ಹೊಸ ಸ್ನೇಹ, ಬಂಧಗಳೂ ಹೆಚ್ಚು ಕಾಲ ನಮ್ಮ ಬಳಿ ಇರಲಾರವು ಎಂಬ ಅಳುಕು ಹಿಂಜರಿಕೆ ಹುಟ್ಟಿಸುತ್ತದೆ. ಪ್ರವಾಸ ಹೋದಾಗ ಹೊಸ ಊರನ್ನು ಇಷ್ಟಪಡುವವರೂ ಕೊನೆಗೆ ಅದೇ ಮನೆಯ ಹಳೆಯ ದಿವಾನಕ್ಕೆ ಒರಗಿ ಯಾವಾಗ ಕುಳಿತೇವೊ ಎಂದು ಚಡಪಡಿಸುತ್ತೇವೆ. ಪಿಜ್ಜಾ, ಪಾಸ್ತಾಗಳೂ ನಮಗಿಷ್ಟವೇ. ಆದರ ರೊಟ್ಟಿ ಪಲ್ಯಕ್ಕೂ ಇನ್ನಿಲ್ಲದಂತೆ ಕಾಯುತ್ತದೆ ಮನ. ಹಳೆಯದರ ಮೋಹ ಕಳಚುವುದು ಅಷ್ಟು ಸುಲಭವಲ್ಲ. ಹೊಸದೆಲ್ಲವೂ ಹಳತರಂತೆ ಆಗದಲ್ಲ?!ವಾಸ್ತವವೇ ಆದರೂ ಹೊಸದನ್ನು ಒಪ್ಪಿಕೊಳ್ಳಲು ಒಲವು ತೋರದೇ ಒಲ್ಲೆ ಎನ್ನುತ್ತದೆ ಮನ. ಶಾಲೆಯ ಆ ಪರಿಚಿತ ವಾತಾವರಣದಿಂದ ಕಾಲೇಜಿಗೆ ಸೇರುವಾಗ ಕಾಲೆಜಿನ ಬಗ್ಗೆ ಕೇಳಿದ, ಸಿನಿಮಾಗಳಲ್ಲಿ ಕಂಡ ಕಾಲೇಜಿನ ಚಿತ್ರಣ ಹೊಸ ಕುತೂಹಲ ಹುಟ್ಟಿಸಿದರೂ ಈಗ ನಾವು ಇನ್ನು ಶಾಲಾ ಮಕ್ಕಳಲ್ಲ, ಕಾಲೇಜಿಗೆ ಹೋಗುವವರು ಎಂಬ ಗತ್ತಿನ ವಿಷಯವೇ ಒಂಥರ ಎಕ್ಸೈಟ್‌ಮೆಂಟ್‌ ಉಂಟುಮಾಡಿದ್ದರೂ ಹತ್ತಾರು ವರ್ಷ ಜತೆಗೇ ಇದ್ದ ಆತ್ಮೀಯ ಸ್ನೇಹಿತರನ್ನು ಬಿಟ್ಟು ಹೋಗಲಾಗದೆ ಅಳುಕಿದ್ದೇವೆ. ಸ್ನೇಹಿತರ ಜತೆ ಬಿಡಲಾಗದೆ ಇಷ್ಟವಾಗದ ವಿಷಯವನ್ನೊ, ಓದಲು ಕಷ್ಟವಾಗುವ ವಿಷಯವನ್ನೊ ಆಯ್ದುಕೊಂಡವರು ನಮ್ಮಲ್ಲಿ ಕೆಲವರು! ಹೀಗೆ ಹಳೆಯದಕ್ಕೆ ಅಂಟಿಕೊಂಡು ಬಿಡಲಾಗದೆ ಏಳಲಾಗದೆ ಜೇನಿನಲ್ಲಿ ಬಿದ್ದ ನೊಣಗಳಂತೆ ಗುಂಯ್‌ಗುಡುತ್ತ ಇರುವ ಸ್ವಭಾವ ನಮ್ಮನ್ನು ಅದೆಷ್ಟೋ ಉತ್ತಮ ಅವಕಾಶಗಳಿಂದ ವಂಚಿತರನ್ನಾಗಿ ಮಾಡಿಬಿಡುತ್ತದೆ. ಬೇರೆ ಕಡೆ ಹೋದರೆ ಕೆಲಸದ ವಾತಾವರಣ ಹೇಗಿರುತ್ತದೊ ಎಂಬ ಭಯವೇ ಎಷ್ಟೇ ಕಡಿಮೆ ಸಂಬಳವಿದ್ದರೂ,ಕಚೇರಿಯ ಒಳರಾಜಕೀಯದ ದಾಳವಾದರೂ, ಬೆಂಕಿಯಿಂದ ಬಾಣಲೆಗೆ ಬಿದ್ದರೇನು ಗತಿ ಎಂಬ ಯೋಚನೆಯಲ್ಲೆ ಹಿಂಜರಿಕೆಯಿಂದ ಇರುವಂತೆ ಮಾಡುತ್ತದೆ. ಇನ್ನೂ ಉತ್ತಮ ಗುಣಮಟ್ಟದ, ಹೆಚ್ಚಿನ ಜವಾಬ್ದಾರಿಯ ಎಷ್ಟೋ ಪಟ್ಟು ಹೆಚ್ಚಿನ ಸಂಬಳ ತರುವ ಕೆಲಸಕ್ಕೆ ಸೇರುವ ಯೋಗ್ಯತೆ ಬೆಳೆದು ಅದೆಷ್ಟೋ ವರ್ಷಗಳಾದರೂ ಅದೇ ಹಳೆಯ ಕೆಲಸಕ್ಕೆ ಅಂಟಿಕೊಂಡು ಇದ್ದುಬಿಡುವಂತೆ ಮಾಡುತ್ತದೆ. ಅಪ್ಪನಿಗೆ ಟ್ರಾನ್ಸಫರ್‌ ಆಯಿತಲ್ಲಾ ಹೊಸ ಊರು, ಹೊಸ ಶಾಲೆ…ಇನ್ನು ನನ್ನ ಶೈಕ್ಷಣಿಕ ಹಾದಿ ಅಷ್ಟಕ್ಕಷ್ಟೇ ಎಂದು ಭಾವಿಸುವ ಪುಟ್ಟ ಹುಡುಗನಂತೆ ಇದು. ಆದರೆ ವಾಸ್ತವ ಎದುರಿಸಿ ನೋಡಿದರೆ? ಹೊಸದೂ ಹೊಸ ಕಲಿಕೆಗೆ ನೂರು ಅವಕಾಶ ಕಲ್ಪಿಸಿಕೊಡಬಹುದು. ಹೊಸ ಊರು ಹೆಚ್ಚಿನ ಅಧ್ಯಯನಕ್ಕೆ ಅನುಕೂಲಕರವಾಗಿರಬಹುದು. ಹೆಚ್ಚಿನ ಜ್ಞಾನ, ಮತ್ತಷ್ಟು ಗಾಢ ಸ್ನೇಹಗಳು, ಉತ್ತಮ ನೆರೆಹೊರೆ ಎಲ್ಲವೂ ಸಿಗಬಹುದಲ್ಲವೆ? ಮನೆ ಬದಲಾಯಿಸುವಾಗಲೂ ಇಂಥದೇ ಚಡಪಡಿಕೆಯಿಂದ, ಯೋಚನೆಗಳಿಂದ ತತ್ತರಿಸುತ್ತದೆ ಮನ. ಒಗ್ಗಿಕೊಂಡ ಜೀವನಶೈಲಿ ಬದಲಾದರೆ ಹೇಗೊ ಏನೋ ಎಂಬ ಆತಂಕ ಕಾಡುತ್ತದೆ. ಆತ್ಮೀಯ ಹಳೆಯ ಮನೆಯ ಅನುಕೂಲಕರ ವಾತಾವರಣ ಬದಲಾದರೆ ಹೇಗೋ ಏನೋ ಎಂದು ಮನೆ ಬದಲಾಯಿಸಲು ಹಿಂದೇಟು ಹಾಕಿದರೆ ಕಂಪೌಂಡಿನಲ್ಲಿ ಕಸ ಹಾಕುವ ಅದೇ ಕೆಟ್ಟ ನೆರೆಮನೆಯವರನ್ನೂ, ರಾತ್ರಿಯೆಲ್ಲ ಪಾರ್ಟಿ ಮಾಡಿ ನಿದ್ದೆ ಹಾಳು ಮಾಡುವ ಅವರ ಬ್ಯಾಚಲರ್‌ ಬಾಡಿಗೆದಾರರ ಕಿರುಕುಳವನ್ನೂ ಒಲ್ಲದ ಮನದಿಂದ ಸಹಿಸಿಕೊಂಡಿರಬೇಕಾಗುತ್ತದೆ. ದುಡ್ಡೇ ದೊಡ್ಡ ಅನುಬಂಧವೆಂದು ತಿಳಿದ ಈಗಿನ ಮನೆ ಮಾಲಕರಿಗಿಂತ ಉತ್ತಮ ಸೌಜನ್ಯಯುತ ವರ್ತನೆಯ ಮಿತಭಾಷಿ ಸಜ್ಜನರು ಹೊಸ ಮನೆಯ ಮಾಲಕರಾಗಿ ಸಿಗಲೂಬಹುದಲ್ಲವೆ? ಮನೆ ಹುಡುಕುವ ಪ್ರಯತ್ನವನ್ನೇ ಮಾಡದಿದ್ದರೆ?! ಅಪರಿಚಿತ ಸ್ವರ್ಗಕ್ಕಿಂತ ಪರಿಚಿತ ನರಕವೇ ಪರವಾಗಿಲ್ಲ ಎಂದುಕೊಂಡಂತೆ.

ಹಳೆಯ ಕೆಲವು ವರ್ತನೆಗಳನ್ನು ಬಿಟ್ಟು ನೋಡಿ. ಎಂತಹ ಸ್ವಾತಂತ್ರ್ಯದ ಅನುಭವ ನಿಮಗಾಗುತ್ತದೆ! ಮನೆಯಿರಲಿ, ಕಾಲೇಜಿರಲಿ, ಕಚೇರಿಯಿರಲಿ, ಹಗುರವಾದ ಭಾವ ನಿಮ್ಮನ್ನಾವರಿಸುತ್ತದೆ. ಏನು ಬೇಕಾದರೂ ಸಾಧಿಸಬಲ್ಲೆ ಎಂಬ ನಂಬಿಕೆ ಹುಟ್ಟುತ್ತದೆ. ಇದ್ದಕ್ಕಿದ್ದಂತೆ ಎಲ್ಲವೂ ಸಾಧ್ಯ ಎನಿಸತೊಡಗುತ್ತದೆ..ಏಕೆಂದರೆ ನಾವು ಹಾಗೆಯೇ ನಂಬತೊಡಗಿರುತ್ತೇವೆ. ಹೊಸ ಸ್ನೇಹಗಳು ಹಳೆಯ ಬಂಧಗಳಂತೆ ಅನುಕೂಲಕರ ಎನಿಸದಿರಬಹುದು. ಆದರೆ ಅಲ್ಲಿ ಸ್ವಲ್ಪ ಮಟ್ಟಿನ ಎಕ್ಸೈಟ್‌ಮೆಂಟ್‌ ಇರುತ್ತದೆ. ಅದೇ ಹಳೆಯ ಯೋಚನಾಲಹರಿಗೆ ಅಂಟಿಕೊಳ್ಳದೇ ಚಿಂತನೆ ನಡೆಸಿ. ಜೀವನದ ಬಗೆಗೆ, ಸುತ್ತಲ ಜನರ ಕುರಿತು, ನಮ್ಮ ಕುರಿತೇ ಹೊಸ ಹೊಳಹುಗಳು ಗೋಚರಿಸುವ ಸಾಧ್ಯತೆ ಇರುತ್ತದೆ. ಹೊಸ ಕೆಲಸವೊಂದು ನಮ್ಮ ವೃತ್ತಿಜೀವನದ ರೂಪವನ್ನೇ ಬದಲಿಸಬಹುದು. ಹೊಸ ಮನೆಯೊಂದು ಹೆಚ್ಚು ಸಕಾರಾತ್ಮಕ ತರಂಗಗಳನ್ನು ಪಸರಿಸುತ್ತ ನಮ್ಮ ಕುರಿತು ನಮ್ಮಲ್ಲಿ ಉತ್ತಮ ಭಾವ ಸ್ಫುರಿಸಬಹುದು. ಹಾಗಾಗೇ ಜಗವೇ ಹೊಸದೆಂಬ ಭಾವ ಮೂಡಲೂಬಹುದು. ನಾವೊಬ್ಬ ವಿಭಿನ್ನ ವ್ಯಕ್ತಿಯಾಗಲು ಇದು ಪ್ರೇರಣೆ ನೀಡಲೂಬಹುದು. ನವ ಸಂವತ್ಸರದ ಆದಿ ಯುಗಾದಿ ಹೊಸ ಆರಂಭಗಳಿಗೆ ನಾಂದಿಯಾಗಲು ಶುಭದಿನವೆಂದು ಪ್ರತೀತಿ. ಹೊಸ ಬದಲಾವಣೆಗಳಿಗೆ ಮುಕ್ತ ಮನದ ಸ್ವಾಗತ ಕೋರಿ. ಅಷ್ಟಕ್ಕೂ ಬದಲಾವಣೆ ಅನಿವಾರ್ಯವಾದರೆ ಅದನ್ನೇಕೆ ಸಂತಸದಿಂದ ಬರಮಾಡಿಕೊಳ್ಳಬಾರದು? ಅಜ್ಞಾತದ ಭಯಕ್ಕಿಂತ ನೂತನ ಆದಿಗಳನ್ನೇಕೆ ಅಪ್ಪಿಕೊಳ್ಳಬಾರದು? ಯಾರಿಗೆ ಗೊತ್ತು ಮುಂಬರುವ ದಿನಗಳೇ ಹಿಂದೆಂದಿಗಿಂತಲೂ ಅತ್ಯುತ್ತಮ ಎನಿಸತೊಡಗಬಹುದು! ಆಗ ಕಳೆದ ದಿನಗಳಲೇನೂ ಇಲ್ಲ..ನೆನಪುಗಳಲಿ ಏನೇನಿಲ್ಲ ಎಂಬ ಹಾಡಿನ ಸಾಲುಗಳಿಗೆ ಮತ್ತಷ್ಟು ಹತ್ತಿರವಾಗಲೂಬಹುದು..ಅಥವಾ ನೆನಪುಗಳಲ್ಲೆ ಎಲ್ಲವೂ ಇದೆ ಎನ್ನಿಸಿದರೂ ಅಚ್ಚರಿಯಿಲ್ಲ.

-ಚಿತ್ರ: ಪ್ರಮೋದ್

1 Comment

  1. ತುಂಬ ಚೆನ್ನಾಗಿದೆ

Leave a Reply