ಬಾವಿಕಟ್ಟೆ ಮತ್ತು ಮಣ್ಣಿನ ಬಿಂದಿಗೆ…!

ಬಾವಿಕಟ್ಟೆ ಮತ್ತು ಮಣ್ಣಿನ ಬಿಂದಿಗೆ…!

ಆತನಲ್ಲಿ ಆಸೆ ಏನೋ ದಂಡಿಯಾಗೇ ಇತ್ತು. ಅದು ತಾನು ಏನೇನೋ ಆಗಬೇಕೆಂಬ ಬಯಕೆ. ಆದರೆ ಕೂತು ಎರಡಕ್ಷರ ಕಲಿಯಲಾರದ ಸೋಮಾರಿ. ಅವನಿಗೋ ಓದು ಹತ್ತದು, ಬಯಕೆ ಬತ್ತದು. ಹೀಗಾಗಿ ‘ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂಬಂತಾಯಿತು ಆತನ ಸ್ಥಿತಿ. ಗುರುಗಳು ಹೇಳುವಷ್ಟು ಹೇಳಿದರು, ತಿದ್ದುವಷ್ಟು ತಿದ್ದಿದರು. ಆದರೂ ವಿದ್ಯೆ ಮಾತ್ರ ತಲೆಗೆ ಹತ್ತಲೊಲ್ಲದು. ನನ್ನಿಂದ ಇನ್ನು ಸಾಧ್ಯವಿಲ್ಲವೆಂದು ಗುರುಗಳು ಕೈ ಚೆಲ್ಲಿ ಕುಳಿತರೆ, ಸಹಪಾಠಿಗಳೋ ಹೀಯಾಳಿಸುತ್ತಲೇ ನಡೆದರು.
ಹೀಗೆ ದಿನಗಳು ಹೊರಳಿದಂತೆ ಹುಡುಗನಿಗೆ ಓದು ಹತ್ತುತ್ತಿಲ್ಲವಲ್ಲ ಅನ್ನುವ ಕೊರಗು ಹೆಚ್ಚಾಗತೊಡಗಿತು. ಸುತ್ತಲಿನವರ ಮೂದಲಿಕೆ ಆತನಲ್ಲಿ ಛಲ ಹುಟ್ಟಿಸುವುದಕ್ಕಿಂತಲೂ ಹೆಚ್ಚಾಗಿ ಆತನಲ್ಲಿ ಹಿಂಜರಿಕೆಯನ್ನೇ ಸ್ಥಾಯಿಯಾಗಿಸಿತು. ತನಗೆ ಓದಬೇಕಂತ ಅನ್ನಿಸುವುದೇನೋ ಹೌದು..! ಆದರೆ ಓದಲು ಏಕೋ ಮನಸ್ಸಾಗದು. ಏನು ಓದಿದರೂ ಅರ್ಥವೇ ಆಗುವುದಿಲ್ಲವಲ್ಲ, ತಾನು ಎಲ್ಲರ ಅಪಹಾಸ್ಯಕ್ಕೆ ಗುರಿಯಾಗಬೇಕಾಯಿತಲ್ಲ ಅಂತ ಮಮ್ಮಲ ಮರುಗಿದ. ವ್ಯಕ್ತಿತ್ವ ಕುಬ್ಜವಾದಂತೆನಿಸಿತು. ಒಂದು ಕಹಿ ಘಳಿಗೆಯಲ್ಲಿ ತಾನು ಇನ್ನು ಬದುಕಿ ಪ್ರಯೋಜನವೇನು…? ಸಾವೇ ತನ್ನ ಮುಂದಿನ ದಾರಿ ಅಂತ ತೀರ್ಮಾನಿಸಿಯೂ ಬಿಟ್ಟ. ಸಾವಿನ ಯೋಚನೆ ಮನದಲ್ಲಿ ಗಟ್ಟಿಯಾಗತೊಡಗಿದಂತೆ ಕಾಲುಗಳು ಊರ ಹೊರಗಿನ ಬಾವಿಯತ್ತ ಹೆಜ್ಜೆ ಮೂಡಿಸತೊಡಗಿದವು.
ಸೂರ್ಯ ಆಗಷ್ಟೇ ಪಡುವಣದತ್ತ ವಾಲಿದ್ದ. ಹಕ್ಕಿಗಳು ಗೂಡಿನತ್ತ ಮುಖಮಾಡಲು ತವಕಿಸುತ್ತಿದ್ದ ಹೊತ್ತು. ಮಧ್ಯ ವಯಸ್ಕ ಹೆಂಗಸೊಬ್ಬಳು ನೀರು ತರಲೆಂದು ಮಡಕೆ ಹೊತ್ತು ಅವಸರವಸರದಲ್ಲಿ ಊರ ಹೊರಗಿನ ಆ ಬಾವಿಯ ಬಳಿಗೆ ಧಾವಿಸಿಬಂದಳು. ಹಾಗೆ ಬಂದವಳ, ಕಣ್ಣಿಗೆ ಅಲ್ಲಿ ಕಾಣಿಸಿದ್ದಾದರೂ ಏನು..? ಹುಡುಗನೋರ್ವ ಪೆಚ್ಚುಮುಖ ಹಾಕಿಕೊಂಡು ಬಾವಿಯ ಕಟ್ಟೆಯ ಮೇಲೆ ಕುಳಿತಿದ್ದ ದೃಶ್ಯ ಕಣ್ಣಿಗೆ ಬಿತ್ತು. ಆ ತಾಯಿಯ ಮುಖದಲ್ಲಿ ಗಾಬರಿ, ಆಶ್ಚರ್ಯಗಳು ಒಟ್ಟಿಗೇ ಕಾಣಿಸಿಕೊಂಡವು. ಯಾಕೆ ಹೀಗೆ ಇಲ್ಲಿ ಕುಂತಿ..? ಯಾಕೆ ಅಳುತ್ತಿ ಮಗೂ.., ಅಂತ ಕರುಣಾಪೂರಿತ ಧ್ವನಿಯಲ್ಲಿ ಮೆತ್ತಗೆ ಆತನ ತಲೆ ಸವರುತ್ತಾ ವಿಚಾರಿಸಿದಳು.
ಸ್ಪರ್ಶ ಹಿತವೆನ್ನಿಸಿತೋ ಏನೋ, ಮಾತು ಆಪ್ತವೆನ್ನಿಸಿತೋ ಏನೋ. ಅನ್ಯ ಮನಸ್ಕನಾಗಿ ತಲೆ ತಗ್ಗಿಸಿ ಕುಳಿತಿದ್ದ ಹುಡುಗ ಥಟ್ಟನೆ ತಲೆ ಎತ್ತಿ ನೋಡಿದ; ಕಣ್ತುಂಬಾ ನೀರು. ಉಮ್ಮಳಿಸಿ ಬರುವ ದುಃಖವನ್ನು ನುಂಗಲು ಪ್ರಯತ್ನಿಸುತ್ತಾ, ದಯಾರ್ದ್ರನಾಗಿ ಆ ತಾಯಿಯನ್ನೇ ನಿಟ್ಟಿಸಿದ. ಅಷ್ಟೇ ಪ್ರಯಾಸದಿಂದ ಓದು ತನ್ನ ತಲೆಗೆ ಹತ್ತುತ್ತಿಲ್ಲ, ತನ್ನನ್ನು ಎಲ್ಲರೂ ಪೆದ್ದನೆಂದು ಅವಮಾನಿಸುತ್ತಾರೆ ಅಂತ ದೀನನಾಗಿ ಆ ತಾಯಿಗೆ ವರದಿ ಒಪ್ಪಿಸಿದ, ಮುಂದುವರಿದು ಬದುಕು ದುರ್ಭರ ಅನ್ನಿಸಿ ಸಾಯೋಣವೆಂದು ಇತ್ತ ಬಂದೆ ಎಂದ.
ಹುಡುಗನ ಮಾತಿನಿಂದ ಆ ತಾಯಿಯ ಹೃದಯವೂ ಹನಿಯಾಯಿತು. ತಕ್ಷಣಕ್ಕೆ ಹೇಗೆ ಸ್ಪಂದಿಸಬೇಕೋ ತಿಳಿಯದಾಯಿತು. ತನ್ನನ್ನು ತಾನು ಸುಧಾರಿಸಿಕೊಂಡ ಆಕೆ ಮಗೂ.., ನೀನು ತಪ್ಪಾಗಿ ಯೋಚಿಸುತ್ತಿರುವೆ. ಯಾರ ಬದುಕೂ ಬದುಕಲಾರದಷ್ಟು ಕೆಟ್ಟದ್ದಲ್ಲ ಕಂದಾ. ನೀನು ಕುಳಿತಿರುವ ಈ ಬಾವಿಯ ಕಲ್ಲಿನ ಕಟ್ಟೆಯನ್ನೇ ನೋಡು. ಯಾರು ಕೊರೆಯದೇ ಇಲ್ಲಿ ಹಳ್ಳ ಬಿದ್ದುದಾದರೂ ಹೇಗೆ ಗಮನಿಸಿದೆಯಾ..? ಬಾವಿ ಕಟ್ಟೆಯ ಕಲ್ಲಿನ ಮೇಲೆ ದಿನವೂ ನೀರು ತುಂಬಿದ ಮಡಕೆಗಳನ್ನ ಇರಿಸಿದ್ದರಿಂದ ಸವೆದು, ಸವೆದು ಸಣ್ಣ ತಗ್ಗುಗಳಾಗಿವೆ.
ಕೊಂಚ ಹುಷಾರು ತಪ್ಪಿದರೂ ಈ ಮಣ್ಣಿನ ಮಡಕೆಗಳು ಹಾಸು ಕಲ್ಲಿಗೆ ತಗಲಿ ಚೂರು ಚೂರಾಗುತ್ತವೆ. ಆದರೆ ಇಲ್ಲಿ ಆದದ್ದೇನು..? ನೀರು ತುಂಬಿದ ಮಡಕೆಯು ಅನುದಿನದ ನವಿರು ಸ್ಪರ್ಶಕ್ಕೆ ಸಿಕ್ಕು ಹಾಸು ಬಂಡೆಕಲ್ಲೂ ಕೂಡಾ ಹೇಗೆ ಸವೆದು ಹೋಗಿದೆ. ಈ ಪ್ರಕ್ರಿಯೆಯಿಂದ ಕಲ್ಲೂ ಸವೆಯಿತು ಅಂತಾದರೆ, ನೀನು ನಿತ್ಯವೂ ಎಡೆಬಿಡದೇ ಓದಿದರೆ ವಿದ್ಯಾವಂತನಾಗಲಾರೆಯಾ…? ಒಂದೇ ಮನಸ್ಸಿನಿಂದ, ಒಂದು ವಿಷಯವನ್ನೇ ಹಲವೆಂಟು ಬಾರಿ ಓದು. ವಿದ್ಯೆ ನಿನ್ನ ಕೈವಶವಾಗುವುದು ಎಂದು ತಿಳಿಸಿದಳು.
ಆ ತಾಯಿಯ ಮಾತು ಹುಡುಗನ ಮನದಲ್ಲಿ ಹೊಸ ಆಸೆಯ ಬೆಳಕೊಂದನ್ನು ಮೂಡಿಸಿತು. ‘ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ಹೊರತು ಬರಿಯ ಬಯಕೆಗಳಿಂದಲ್ಲ’ ಎಂಬುದು ವೇದ್ಯವಾಯಿತು. ಉತ್ಕಟ ಏಕಾಗ್ರತೆಯಿಂದ, ಕಠಿಣ ಪರಿಶ್ರಮದಿಂದ ಓದಿದ ಆತ ಮುಂದೆ ವಿದ್ಯಾವಂತನೂ ಆದ ಅಂತ ಮತ್ತೆ ಹೇಳಬೇಕಿಲ್ಲ ತಾನೆ..?
ಹೊಸ್ಮನೆ ಮುತ್ತು

Leave a Reply