ಅವ್ಯಕ್ತ

ಈಗ ಬಂದ್ಯಾ? ಸ್ವಲ್ಪ ಹೊತ್ತಿನ ಮುಂಚೆ ಎಲ್ಲ ಮುಗಿಸಿದ್ವಿ. ಬೆಳಗಿನಿಂದ ನಿನ್ನ ದಾರಿ ನೋಡಿದೆ… ನಿನ್ನೆ ಇಷ್ಟೊತ್ತಿಗೆ ಅಪ್ಪನ ಉಸಿರು ನಿಂತದ್ದು. ಇಪ್ಪತ್ನಾಲ್ಕು ಗಂಟೆ ಮೇಲೆ ಆಯ್ತಲ್ಲ… ದೇಹ ಊದಿಕೊಳ್ಳೊಕೆ ಶುರುವಾಗಿತ್ತು. ನಿನ್ನ ಬಿಟ್ಟರೆ ಬರೋರು ಬೇರೆ ಯಾರೂ ಇರಲಿಲ್ಲ. ನಿನ್ನೆ ಮಧ್ಯಾಹ್ನದಿಂದ ನಿಂಗೆ ಫೋನ್‌ ಮಾಡ್ತಾನೆ ಇದೀನಿ. ಒಂದ್‌ ನೂರ್‌ಸಲ ಮೊಬೈಲ್‌ಗೆ ಟ್ರೈ ಮಾಡಿರಬಹುದು. ಏನಾಗಿತ್ತು ನಿನ್ನ ಫೋನಿಗೆ? ನಿಂಗೆ ವಿಷಯ ತಿಳಿಸಕ್ಕೆ ಆಗುತ್ತೊ ಇಲ್ಲವೊ ಅನ್ನಿಸಿತ್ತು. ಮಕ್ಕಳು ಅನ್ನ ನೀರು ಇಲ್ಲದೆ ಹಸಕೊಂಡು ಕೂತಿದ್ವು…. ಈಗ ಮುಗಿಸಿ ಬಂದೆ. ಚಿತೆ ಇನ್ನೂ ಉರೀತಿದೆ, ಇಲ್ಲೇ ನಮ್ಮ ತೋಟದ ಕೆಳಗಿನ ಹಳ್ಳದಲ್ಲಿ. ಹೋಗಿ ನೋಡಿ ಬಾ ಎನ್ನುತ್ತ ಅಣ್ಣ ಬಚ್ಚಲಮನೆ ಕಡೆಗೆ ನಡೆದ. ಅಂಗಳದ ಮೂಲೆಯ ತೊಟ್ಟಿ ನೀರಲ್ಲಿ ಕೈ ಕಾಲು ತೊಳೆದು, ತಲೆ ಮೇಲೆ ನಾಲ್ಕು ಹನಿ ಚಿಮುಕಿಸಿಕೊಂಡು ಹಜಾರದ ಮೂಲೆಯಲ್ಲಿ ಉರಿಯುತ್ತಿದ್ದ ದೀಪ ನೋಡಿ ಕೈ ಮುಗಿದು ಹೋಗುತ್ತಿರುವವರೆಲ್ಲ ನೆಂಟರೊ, ಊರವರೊ ಇರಬಹುದು. ಯಾರೂ ಜಗನ್ನಾಥನನ್ನು ಗುರುತಿಸಲಿಲ್ಲ. ಕತ್ತಲು ಇಂಚಿಂಚೆ ದಟ್ಟವಾಗುತ್ತ ಕೊನೆಗೆ ಬೆಳಕನ್ನೆಲ್ಲ ನುಂಗಿಹಾಕಿತು. ಹಜಾರದ ಕಂಬಕ್ಕೆ ಒರಗಿ ಕೂತ. ಮನೆಯೊಳಕ್ಕೆ ಹೋಗಲು ಮನಸ್ಸಾಗಲಿಲ್ಲ. ಅಪ್ಪ ಯಾವಾಗಲೂ ಕೂತಿರುತ್ತಿದ್ದ ಕುರ್ಚಿ ಈಗ ಖಾಲಿ. ಪಕ್ಕದಲ್ಲೇ ಇದ್ದ ಮಂಚವೂ ಖಾಲಿ. ಹೊರಗೆ ಜೋರು ಗಾಳಿ. ತೆಂಗಿನಮರಗಳು ತಲೆ ಮುರಿದುಕೊಂಡು ಬೀಳುತ್ತವೇನೋ ಎನ್ನುವಷ್ಟು. ಮಳೆ ಬರುವ ಮುಂಚಿನ ಕ್ಷಣಗಳಂತೆ. ಬೇಸಿಗೆಯಲ್ಲಿ ಎಂಥ ಮಳೆ? ಹಜಾರ,ಅಂಗಳದತ್ತ ಕಣ್ಣಾಡಿಸಿದ. ಆರು ತಿಂಗಳ ಹಿಂದೆ ಬಂದಾಗ ಅಪ್ಪ ಚೆನ್ನಾಗೇ ಇದ್ದರಲ್ಲ. ಹೈದರಾಬಾದ್‌ಗೆ ಬನ್ನಿ. ನನ್ನ ಮನೇಲಿ ಸ್ವಲ್ಪ ದಿನ ಇದ್ದು ಬರುವಿರಂತೆ. ಅಲ್ಲೇ ಯಾವುದಾದರೂ ಆಸ್ಪತ್ರೆಯಲ್ಲಿ ಒಂದ್‌ ಸಲ ನಿಮ್ಮ ಹೆಲ್ತ್ ಚೆಕಪ್ ಮಾಡಿಸೋಣ ಎಂದು ಅಪ್ಪನ ಎದುರು ಕೂತು ಹೇಳಿದ್ದ. ‘ ಇಲ್ಲ ನಾನು ಎಲ್ಲಿಗೂ ಬರಲ್ಲ… ನನಗೇನೂ ಆಗಿಲ್ಲ. ಇನ್ನೂ ಹತ್ತು ವರ್ಷ ಬದುಕಿರತೀನಿ… ಊರು ಬಿಟ್ಟು ಎಲ್ಲಿಗೂ ಬರಲ್ಲ ‌‌‌‌‌‌‌’ ಎಂದಿದ್ದರು. ಈ ಮನೆ ಹಳೆಯದಾಗಿದೆ, ಅಜ್ಜನ ಕಾಲದ್ದು. ಅದನ್ನಾದರೂ ರಿಪೇರಿ ಮಾಡಿಸಬಹುದಲ್ಲ ಅಂದದ್ದಕ್ಕೆ ಈ ಮನೆಗೆ ರಿಪೇರಿಯೊಂದು ಕೇಡು. ಯಾಕೆ ದುಡ್ಡು ಹೆಚ್ಚಾಗಿದೆಯಾ? ಮನೆ ನೋಡೋಕೆ ಯಾರು ಬರ್ತಾರೆ ಹೇಳು? ಕಟ್ಟಡ ಗಟ್ಟಿಮುಟ್ಟಾಗಿದೆ. ಇನ್ನೂ ಐವತ್ತು ವರ್ಷ ಇಲ್ಲಿ ಜೀವನ ಮಾಡಬಹುದು. ಸುಣ್ಣ ಬಳಿಸಿದರೆ ಸಾಕು ಎಂದಷ್ಟೇ ಹೇಳಿ… ಇನ್ನು ಮಾತು ಬೇಡ ಎಂಬಂತೆ ಮೌನಕ್ಕೆ ಜಾರಿದ್ದರು. ಅಪ್ಪ ಯಾಕೆ ಹೀಗಾದರು? ಆದರೆ ಅವರು ಊರು ಕುರಿತು ಮಾತಾಡಲು ಹಿಂಜರಿಯಲಿಲ್ಲ. ಊರು ಈಗ ಬದಲಾಗಿದೆ. ಜನರೂ ಮೊದಲಿನಂತಿಲ್ಲ… ಎಲ್ಲರೂ ದುಡ್ಡಿನ ಬೆನ್ನು ಹತ್ತಿದ್ದಾರೆ. ಹಿರಿಯರು ಬಾಳಿದ ಮನೆ, ಹೊಲಗಳ ಬಗ್ಗೆ ಅಸಡ್ಡೆ…. ಊರಲ್ಲಿ ಕಾಲೇಜು ಶುರುವಾಗಿದೆ ಅಂತ ಸಂತೋಷಪಟ್ಟಿದ್ದೆ. ಈಗ ಬಾರು ಶುರು ಆಗಿದೆಯಂತೆ. ನಾನು ಊರೊಳಕ್ಕೆ ಹೋಗಿ ವರ್ಷಗಳೇ ಆದ್ವು. ಪಟೇಲರು ಸತ್ತಾಗ ಹೋಗಿದ್ದೆ. ಕೆರೆ ಒಣಗಿ ಹತ್ತತ್ರ ಇಪ್ಪತ್ತು ವರ್ಷಗಳಾದ್ವು. ಗದ್ದೆ ಬಯಲಲ್ಲಿ, ಕೆರೆ ಅಂಗಳದಲ್ಲಿ ಜಾಲಿ ಬೆಳೆದು ಕಾಡಿನಂತಾಗಿದೆ. ಊರಲ್ಲೀಗ ಮೊದಲಿನಷ್ಟು ಜನರೂ ಇಲ್ಲವಂತೆ! ನಿನ್ನ ವಯಸ್ಸಿನವರೆಲ್ಲ ಕೆಲಸ ಹುಡುಕಿಕೊಂಡು ಊರು ಬಿಟ್ಟು ಹೋಗಿದ್ದಾರೆ. ನನ್ನಂಥ ಮುದುಕರು, ರೋಗಿಷ್ಟರು, ಮೈಗಳ್ಳರು ಊರಲ್ಲಿ ಉಳಕಂಡಿದಾರೆ. ಜನಕ್ಕೆ ಊರಿನ ಅಭಿಮಾನವೇ ಇಲ್ಲ ಅಂತ ವಿಷಾದದ ಧ್ವನಿಯಲ್ಲಿ ಹೇಳಿ ಸುಮ್ಮನಾಗಿದ್ದರು. ಅಪ್ಪ ಯಾಕಿಷ್ಟು ನಿರಾಶರಾಗಿದ್ದರು. ಊರು ಹಾಳಾಯಿತೆಂದೇ? ಬದಲಾವಣೆ ಪ್ರಕೃತಿ ನಿಯಮ ಅಲ್ಲವೇ? ಅಣ್ಣ ಮತ್ತೆ ಹಜಾರಕ್ಕೆ ಬಂದ. ‘ ಹೋಗು, ಹಂಡೇಲಿ ಬಿಸಿ ನೀರಿದೆ. ಸ್ನಾನ ಮಾಡಿ ಬಂದು ದೀಪ ನೋಡಿ ನಮಸ್ಕಾರ ಹಾಕು. ಇವತ್ತು ಮನೆಯಲ್ಲಿ ಅಡುಗೆ ಮಾಡಲ್ಲ. ಅಕ್ಕನ ಮನೆಯಿಂದ ಊಟ ಬರುತ್ತೆ ’ ಎನ್ನತ್ತ ಗಡಿಬಿಡಿ ಮಾಡಿದ. ಸ್ನಾನ ಮಾಡುವ ಮನಸ್ಸಿಲ್ಲ ಜಗನ್ನಾಥನಿಗೆ. ಅಪ್ಪ ಏನನ್ನೂ ಹೇಳದೆ, ನನ್ನನ್ನು ನೋಡದೆ ಹಾಗೇ ಹೋಗಿಬಿಟ್ಟರೇಕೆ? ಅಮ್ಮ ಸತ್ತು ಹತ್ತು ವರ್ಷಗಳಾಗಿವೆ. ಇನ್ನಷ್ಟು ವರ್ಷ ಬದುಕಬೇಕು ಅನ್ನೋ ಆಸೆ ಇತ್ತು ಅಮ್ಮನಿಗೆ. ಆದರೆ ಆರೋಗ್ಯ ಇರಲಿಲ್ಲ. ದೊಡ್ಡ ಮನೆಯಲ್ಲಿ ಒಬ್ಬರೇ ದುಡಿದು ಮನೆ ಜನಕ್ಕೆ, ಕೆಲಸದವರಿಗೆ, ಬಂದು ಹೋಗುವವರಿಗೆಲ್ಲ ಬೇಯಿಸಿ ಬಡಿಸಿ, ಮನೇನೆಲ್ಲ ಗುಡಿಸಿ ಸಾರಿಸಿ ತೊಳೆದು ಹಾಗೇ ಸವೆದು ಹೋಗಿಬಿಟ್ಟರು. ಅಮ್ಮ ಸತ್ತ ಮೇಲೆ ಅಪ್ಪ ಒಬ್ಬರೇ ಆಗಿಬಿಟ್ಟರು….ಅಮ್ಮನ ನೆನಪಾಗಿ ಅವನ ಕಣ್ಣುಗಳು ಮಂಜಾದವು. ಅಪ್ಪ ಊರು ಬಿಟ್ಟು ಏಲ್ಲಾದರೂ ಹೋಗಿದ್ದರೆ ಅವರು ಬದಲಾಗುತ್ತಿದ್ದರೇನೊ. ಮಾತಾಡಲು ಸಮವಯಸ್ಸಿನ ಜನರಿಲ್ಲದೆ, ಒಬ್ಬರೇ ಈ ತೋಟದ ಮನೆಯಲ್ಲಿ ಕೂತು ಅದೂ, ಇದೂ ಯೋಚಿಸುತ್ತ ಅಂತರ್ಮುಖಿಯಾಗಿ ಹೀಗೆಲ್ಲ ಮಾತಾಡಿದ್ದರೇ.ಮಳೆ ಅಪರೂಪವಾಗಿರುವ ಈ ಊರಲ್ಲಿ ಏನಿದೆ? ಹೊಟ್ಟೆ, ಬಟ್ಟೆಗೆ ಇಲ್ಲದವರು ಅನ್ನದ ದಾರಿ ಹುಡುಕಿಕೊಂಡು ಹೋಗದೆ ಇಲ್ಲಿದ್ದು ಏನು ಮಾಡ್ತಾರೆ? ಅಪ್ಪ ಉಸಿರು ನಿಲ್ಲಿಸುವ ಮೊದಲು ನನ್ನನ್ನು ಕೇಳಲಿಲ್ಲವೇ? ಮಾತೇ ಆಡಲು ಆಗದಷ್ಟು ಸೋತು, ಧ್ಯಾಸ ತಪ್ಪಿದ್ದರೇ ಅಥವಾ ನನ್ನ ದಾರಿ ನೋಡುತ್ತಲೇ ಉಸಿರು ನಿಲ್ಲಿಸಿದರೇ? ಅಪ್ಪನ ಸಾವು ಹೇಗಾಯಿತು. ಅಣ್ಣನನ್ನು ಕೇಳಬೇಕು. ಕೊನೆಯ ಕ್ಷಣದಲ್ಲಿ ಅವರು ಯಾರನ್ನು ನೆನಪು ಮಾಡಿಕೊಂಡಿರಬಹುದು. ಅಮ್ಮನನ್ನೇ, ಫೋಟೊಗಳಲ್ಲಿರೋ ಅಜ್ಜ, ಅಜ್ಜಿಯರನ್ನೇ. ಯಾರನ್ನೆಲ್ಲ ಅವರು ನೆನಪು ಮಾಡಿಕೊಂಡಿರಬಹುದು? ಅವರು ಕುಳಿತಿರುತ್ತಿದ್ದ ಕುರ್ಚಿಯನ್ನು ಮತ್ತೊಮ್ಮೆ ನೋಡಿದ. ಅವರಿನ್ನೂ ಅಲ್ಲೇ ಕೂತಿರುವ ಹಾಗೆ. ಅವರ ಎದುರು ನೆಲದಲ್ಲಿ ಕೂತು ಮಾತಾಡುತ್ತಿರುವಂತೆ ಕಲ್ಪಿಸಿಕೊಂಡ. ಕಣ್ಣುಗಳಲ್ಲಿ ನೀರು ತುಂಬಿ ಹಜಾರವೆಲ್ಲ ಕಲಸಿಕೊಂಡಂತೆ ಕಾಣತೊಡಗಿತು. ಅಣ್ಣ ಹಜಾರಕ್ಕೆ ಬಂದ. ‘ನಾಳೆ ಬೆಳಿಗ್ಗೆ ಬೇಗ ಬಾ. ಬರುವಾಗ ಪುರೋಹಿತರನ್ನೂ ಕರಕೊಂಡೇ ಬಾ. ಸಂಜೆ ಅವರಿಗೆ ಫೋನ್‌ ಮಾಡಿದ್ದೆ. ದುರ್ಗಕ್ಕೆ ಹೋಗಿದಾರಂತೆ. ಮೊಬೈಲ್‌ ಮನೇಲಿ ಬಿಟ್ಟು ಹೋಗಿದಾರೆ. ಕೊನೆ ಬಸ್ಸಿಗೆ ಬರ್ತಾರೆ ಅಂದ್ರು… ಬೆಳಿಗ್ಗೆ ಅಸ್ಥಿ ಸಂಚಯ ಮಾಡಬೇಕು. ಆ ಮೇಲೆ ಉಳಿದ ಶಾಸ್ತ್ರಗಳು. ನಾಳೆನೂ ನಮ್‌ ಮನೇಲಿ ಒಲೆ ಹಚ್ಚಲ್ಲ. ನೀನು ಬರುವಾಗ ಏನಾದರೂ ತಿಂದುಕೊಂಡು ಬಾ…. ’ ಯಾರಿಗೋ ಹೇಳುತ್ತಿದ್ದ….’ಏಳು, ಹೋಗಿ ಸ್ನಾನ ಮಾಡಿ ಬಾ. ಎಷ್ಟತ್ತೂಂತ ಹೀಗೆ ಕೂತಿರ್‌ತೀಯ? ಹೋದೋರು ಹೋದರು. ನಮ್ಮ ಜೀವನ ನಡೆಯಬೇಕಲ್ಲ’ ಅಣ್ಣನ ಧ್ವನಿಯಷ್ಟೇ ಕೇಳಿಸುತ್ತಿದೆ. ಕಣ್ಣಲ್ಲಿ ನೀರು ತುಂಬಿದ್ದರಿಂದ ಅವನ ಅಸ್ಪಷ್ಟ ಆಕೃತಿಯಷ್ಟೇ ಕಾಣಿಸುತ್ತಿತ್ತು. ಹನ್ನೊಂದರ ಹೊತ್ತಿಗೆ ಮನೆ ಸ್ತಬ್ಧವಾಯಿತು. ಹೊರಗೆ ಗಾಳಿಯ ಸುಳಿವಿಲ್ಲ. ದೊಡ್ಡ ಹಜಾರದ ಒಂದು ಮಗ್ಗುಲಲ್ಲಿ ಅಣ್ಣನೇ ಹಾಸಿಗೆ ಹಾಸಿಕೊಟ್ಟ. ಎರಡು ಮಾರು ದೂರದಲ್ಲಿ ಅವನು ಒಂದು ಚಾಪೆ ಹರಡಿಕೊಂಡು ಅಡ್ಡಾದ. ಅತ್ತಿಗೆ ಬಂದು ಮಾತಾಡಿಸಿದರು. ಮಕ್ಕಳು ದಿನವಿಡೀ ಅತ್ತು ಅತ್ತು ಸಾಕಾಗಿದ್ದವು, ಮಲಗಿವೆ ಅಂದರು.‘ಮೂರು ದಿನಗಳಿಂದ ನಿದ್ದೆ ಇಲ್ಲ… ಅಪ್ಪ ಒಂದು ವಾರದಿಂದ ನಿದ್ದೆ ಮಾಡಿರಲಿಲ್ಲ. ಆಗಾಗ ಧ್ಯಾಸ ತಪ್ಪಿ ಏನೇನೋ ಮಾತಾಡ್ತಿದ್ದರು. ಅವರನ್ನು ಸಂಭಾಳಿಸೋದರಲ್ಲೇ ಹೈರಾಣಾಗಿ ಬಿಟ್ಟೆ ’ ….ನಿಮ್ಮಜ್ಜ ಬಂದಿದ್ದಾರೆ… ಬಾಗಿಲಲ್ಲೇ ನಿಂತಿರೋದು ಕಾಣಲ್ವೇನು…. ಅವರ ಕಾಲಿಗೆ ನೀರು ಕೊಟ್ಟು…. ಒಳಕ್ಕೆ ಕರಕೊಂಡು ಬಂದು ಮಂಚದ ಮೇಲೆ ಕೂರಿಸು… ನಾನು ಸ್ನಾನ ಮಾಡಿ ಬರ್ತೀನಿ ಅಂತ ಹೇಳೋರು… ಸ್ವಲ್ಪ ಹೊತ್ತು ಬಿಟ್ಟು ಇವತ್ತು ಪಟೇಲರ ಮಗಳ ಮದುವೆ. ನಾನು ಹೋಗಬೇಕು ಅನ್ನೋರು… ನಾಡಿದ್ದು ನಿಮ್ಮಮ್ಮನ ತಿಥಿ. ಯಾರನ್ನೂ ಮರೀಬೇಡ,ಎಲ್ಲರಿಗೂ ಹೇಳಿ ಕಳಿಸು…. ಹೀಗೇ ಏನೇನೋ ಅಸಂಬದ್ಧ ಮಾತುಗಳು. ಮೊನ್ನೆ ಇಡೀ ರಾತ್ರಿ ಇದೇ ಥರ ಏನೇನೊ ಮಾತಾಡ್ತಲೇ ಇದ್ದರು. ಮಾತು ಬಿಟ್ಟರೆ ಉಳಿದಂತೆ ಚೆನ್ನಾಗೇ ಇದ್ರು. ಆದರೆ ಇದ್ದಕ್ಕಿದ್ದಂಗೆ ಮಾತು ಸ್ಥಿಮಿತ ತಪ್ಪಿ ಹೋಗ್ತಾ ಇತ್ತು. ಹೋದ ವಾರ ನಿನ್ನ ನೋಡಬೇಕು ಕರೆಸು ಅಂದರು. ಹಿಂದೆ ಅನೇಕ ಸಲ ಹೀಗೆ ಹೇಳಿದ್ದರು. ಸ್ವಲ್ಪ ಹೊತ್ತು ಬಿಟ್ಟು ಅವನು ಈಗ ಬರೋದು ಬೇಡ…. ರಜೆಗಳು ಇದಾವೋ ಇಲ್ಲವೋ… ಹೆಂಗೂ ಹಬ್ಬಕ್ಕೆ ಬರ್ತಾನಲ್ಲ ಅಂದರು. ಅವರು ಬದುಕಿದ್ದಾಗಲೇ ನೀನು ಬರಬೇಕಿತ್ತು. ನಿಂಗೆ ಏನು ಹೇಳಬೇಕು ಅಂತಿದ್ದರೋ… ಈ ಮನೆ, ಹೊಲ,ಗದ್ದೆನ ಏನಾದರೂ ಮಾಡಿ ಉಳಿಸಿಕೊಳ್ಳಿ, ನಿಮ್ಮ ಮಕ್ಕಳಿಗೆ ಬೇಕಾಗುತ್ತೆ ಅಂತ ಹೇಳ್ತಲೇ ಕಣ್ಣು ಮುಚ್ಚಿದರು. ಜಮೀನು ಸಾಗು ಮಾಡಿ ಹತ್ತನ್ನೆರಡು ವರ್ಷಗಳೇ ಆದ್ವು. ಈಗೀಗ ಕೆರೆಗೆ ನೀರು ಬರುವಷ್ಟು ಮಳೆಯೇ ಆಗಲ್ಲ. ಗದ್ದೆ ಬಯಲು, ಕೆರೆ ಅಂಗಳದಲ್ಲಿ ಜಾಲಿ ಬೆಳೆದಿದೆ. ಹೋದ್‌ ವರ್ಷ ಯಾರೋ ನಮ್ಮ ಗದ್ದೆಗೆ ಹೋಗೊ ರಸ್ತೆ ಪಕ್ಕದಲ್ಲಿ ಒಂದು ಹೆಣವನ್ನು ಎಲ್ಲಿಂದಲೋ ತಂದು ಹಾಕಿದ್ದರು. ಈಗ ಯಾರೂ ಹಗಲೊತ್ತಲ್ಲೂ ಆ ರಸ್ತೆಯಲ್ಲಿ ಓಡಾಡೋಕೆ ಹೆದರ್ತಾರೆ. ಕೆರೆ ಬಯಲಿನ ಜಮೀನೆಲ್ಲ ಯಾವುದೋ ಕಂಪನಿಯವರು ಖರೀದಿ ಮಾಡ್ತಿದಾರೆ.. ಹೀಗೆ ಅಣ್ಣ ಹೇಳುತ್ತಲೇ ಇದ್ದ…. ನಡು ನಡುವೆ ಮಾತು ನಿಲ್ಲಿಸುತ್ತಿದ್ದ. ಅವನಿಗೆ ನಿದ್ದೆ. ‘ಬೆಳಿಗ್ಗೆ ಮಾತಾಡಣ ಈಗ ಮಲಗು ಅಂದಿದ್ದಕ್ಕೆ ಇಲ್ಲ, ನಿನ್ನ ಹತ್ರ ಹೇಳಿಕೊಂಡ್ರೆ ಮನಸ್ಸು ಹಗುರಾಗುತ್ತೆ ಅಂತ ಹೇಳಿ ಮಾತಾಡುತ್ತ ಹೋಗಿ… ಮರು ಕ್ಷಣವೇ ಮಾತು ನಿಲ್ಲಿಸಿ ಗೊರಕೆ ಹೊಡೆಯ ತೊಡಗಿದ. ಜಗನ್ನಾಥನಿಗೆ ನಿದ್ದೆ ಸುಳಿಯಲಿಲ್ಲ. ಈ ಊರು, ಮನೆ, ಹೊಲ ಗದ್ದೆ ಇಷ್ಟೇ ಬದುಕೇ? ಅಪ್ಪನ ಸಾವು ಜಟಿಲವಾಗುತ್ತಿದೆ ಅನ್ನಿಸಲು ಶುರುವಾಯಿತು. ಇನ್ನೂ ಹತ್ತು ವರ್ಷ ಬದುಕಿರತೀನಿ ಅಂತ ಅವರೇ ಹೇಳಿದ್ದರಲ್ಲ… ಅವರಿಗೆ ಏನಾಗಿರಬಹುದು? ಯೋಚಿಸಿ ತಲೆ ಸಿಡಿಯತೊಡಗಿತು. ಎರಡು ಗಂಟೆ ಏರ್‌ಪೋರ್ಟಲ್ಲಿ, ಒಂದು ಗಂಟೆ ಪ್ಲೇನ್‌ನಲ್ಲಿ, ಆರು ಗಂಟೆ ಟ್ಯಾಕ್ಸಿಯಲ್ಲಿ ಕೂತು ಬರುವಾಗ ಅಪ್ಪನ ಬಗ್ಗೆಯೇ ಯೋಚಿಸಿ ದಣಿದಿದ್ದ. ಸ್ವಲ್ಪ ಹೊತ್ತು ನಿದ್ದೆ ಮಾಡಿದರೆ ಸರಿ ಹೋಗಬಹುದು. ಆದರೆ ನಿದ್ದೆ ಬರುತ್ತಿಲ್ಲ…ಮಗ್ಗುಲು ಬದಲಿಸುತ್ತಲೇ ಹೋದ. ಬೆಳಗಿನ ಜಾವದಲ್ಲಿ ಮಂಪರು ಹತ್ತಿತು. ಆ ಮಂಪರಿನಲ್ಲೂ ಅಪ್ಪ ಕಾಣಿಸಿದರು. ದಿನವಿಡೀ ಅವರ ಬಗ್ಗೆ ಯೋಚಿಸಿದ್ದರಿಂದ ಹಾಗಾಗಿರಬಹುದು. ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ ಅಪ್ಪ ಅಲ್ಲೂ ಸಿಟ್ಟಿನಲ್ಲಿ ಇರುವಂತೆ ಕಂಡರು. ಸಿಟ್ಟು ಯಾರ ಮೇಲೆ? ಎಚ್ಚರವಾದಾಗ ಎಂಟಾಗಿತ್ತು. ಹಜಾರದ ನಡುವೆ ಒಬ್ಬನೇ ಮಲಗಿದ್ದೇನೆ ಅನ್ನಿಸಿ ಗಡಿಬಿಡಿಯಿಂದ ಎದ್ದು, ಹಾಸಿಗೆ ಸುತ್ತಿಟ್ಟು, ಬಚ್ಚಲಮನೆ ಕಡೆ ನಡೆದ.. ಮನೆಯಲ್ಲಿ ಅಪರಿಚಿತರೇ ಹೆಚ್ಚಾಗಿದ್ದಾರೆ. ದೊಡ್ಡಕ್ಕ, ಬಾವ, ಅವಳ ಮೂವರು ಮಕ್ಕಳು ಬಂದು ಮಾತಾಡಿಸಿದರು. ಅವರ ಜತೆ ಹೆಚ್ಚು ಮಾತಾಡಲು ಆಗಲಿಲ್ಲ. ಅಂತ್ಯಕ್ರಿಯೆಗೆ ಬಂದ ಸಂಬಂಧಿಗಳು ಅವನತ್ತ ನೋಡಿದರು. ‘ರಾತ್ರಿ ನಿನ್ನ ಜತೆ ಮಾತಾಡಲು ಆಗಲಿಲ್ಲ ಅಂತ ಕೆಲವರು ಹೇಳಿದರೆ, ಇನ್ನು ಕೆಲವರು ನಿನ್ನ ದಾರಿ ನೋಡಿ ನೋಡಿ ಸಾಕಾಯಿತು ಅಂದರು. ಹಜಾರದಲ್ಲಿ ಕೂತವರೆಲ್ಲ ಊರವರು. ಸಂತಾಪ ಹೇಳಲು ಬಂದವರು. ಏನ್‌ ಜಗಣ್ಣ, ಯಾವಾಗ ಬಂದೆ? ನೀನು ಬರುವಷ್ಟರಲ್ಲಿ ಎಲ್ಲ ಮುಗಿದಿತ್ತಂತೆ. ಯಾಕೆ ನಿಂಗೆ ನಿಮ್ಮಪ್ಪಯ್ಯನ ಸಾವಿನ ಸಮಾಚಾರ ಸಕಾಲದಲ್ಲಿ ಗೊತ್ತಾಗಲಿಲ್ಲವಾ? ಒಬ್ಬನೇ ಬಂದೆಯಾ? ಹೆಂಡತಿ ಮಕ್ಕಳನ್ನು ಕರಕೊಂಡು ಬರಲಿಲ್ಲವಾ. ನಿಂಗೆ ಊರು, ಊರವರು, ನೆಂಟರಿಷ್ಟರು ಯಾರೂ ಬೇಡ. ಸಿಟಿಯಲ್ಲಿರುವ ಜನಕ್ಕೆ ಸಂಬಂಧ, ಕಳ್ಳುಬಳ್ಳಿಯ ನಂಟು ಯಾವುದೂ ಬೇಕಿಲ್ಲ ಎಂದು ಆಕ್ಷೇಪದ ಧ್ವನಿಯಲ್ಲಿ ಹೇಳಿದರು. ಒಬ್ಬೊಬ್ಬರದೂ ಒಂದೊಂದು ಪ್ರಶ್ನೆ. ಆಪ್ತ ಧ್ವನಿಯಲ್ಲಿಯೇ ತಣ್ಣಗೆ ಇರಿಯುತ್ತಾರೆ. ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಿದ. ಮರುಕ್ಷಣವೇ ಉಪ ಪ್ರಶ್ನೆಗಳು. ಉತ್ತರಿಸುತ್ತಾ ಹೋದರೆ ಮನಸ್ಸಿಗೆ ಕಹಿ ಆಗಬಹುದು ಅನ್ನಿಸಿ ಸುಮ್ಮನಾದ. ಅಂಗಳಕ್ಕೆ ಬಂದ. ಹತ್ತು ಗಂಟೆಗೇ ಬಿರು ಬಿಸಿಲು. ಮನೆಯ ಸುತ್ತಲಿನ ತೆಂಗಿನ ಮರಗಳನ್ನು ಬಿಟ್ಟರೆ ಹಸಿರೇ ಇಲ್ಲ. ಬೇಸಿಗೆಯಲ್ಲಿ ಹೀಗೆ ತಾನೆ ಅಂದುಕೊಂಡು ಅಂಗಳದ ಮೂಲೆಯತ್ತ ನೋಡಿದ… ಅಲ್ಲಿ ಕೂತವನೊಬ್ಬ ಇವನ ಕಡೆ ನೋಡುತ್ತ, ಮುಖದ ಮೇಲೆ ನಗು ಎಳೆದುಕೊಂಡಂತೆ ಕಾಣಿಸಿತು. ಪರಿಚಿತ ಮುಖ. ಆದರೆ ಅವನ ಹೆಸರು ನೆನಪಾಗುತ್ತಿಲ್ಲ. ಅವನೇ ಎದ್ದು ಬಂದ…. ಜಗಣ್ಣ, ನಾನು ಪುಟ್ಟಸ್ವಾಮಿ… ನಿನ್ನ ಜತೆಗೆ ಓದುತ್ತಿದ್ದೆ… ನನ್ನ ಮರೆತೆಯಾ? ನೀನು ನನ್ನ ಭೂತ ಅಂತಲೇ ಕರೀತಿದ್ದೆ ಎಂದು ನೆನಪುಗಳನ್ನು ಕೆದಕಿದ. ಥಟ್ಟನೆ ಜಗನ್ನಾಥನಿಗೆ ಅವನ ನೆನಪಾಯಿತು. ಯಾಕೋ ಹಿಂಗಾಗಿದೀಯ… ಹುಷಾರಿಲ್ಲವಾ ಎನ್ನುತ್ತ ಅವನ ಮುಖ ನೋಡಿದ. ಏನು ಮಾಡಿಕೊಂಡಿದೀಯಾ ಎಂಬ ಪ್ರಶ್ನೆಗೆ ಅವನಿಂದ ಉತ್ತರವಿಲ್ಲ. ಈ ಪುಟ್ಟಸ್ವಾಮಿ ಕೇರಿಯ ಹುಡುಗ. ಒಂಬತ್ತನೇ ತರಗತಿವರೆಗೆ ಜಗನ್ನಾಥನ ಜತೆ ಓದಿದವನು. ಆ ಮೇಲೆ ಸ್ಕೂಲು ಬಿಟ್ಟ. ಮತ್ತೆ ಅವನನ್ನು ನೋಡುತ್ತಿರುವುದು ಈಗಲೇ. ಒಂದು ಸಲ ಸ್ಕೂಲು ಫಂಕ್ಷನ್ನಿನಲ್ಲಿ ಭೂತದ ವೇಷ ಹಾಕಿ ಕುಣಿದಿದ್ದ. ಜತೆಯ ಹುಡುಗರೆಲ್ಲ ಅವನನ್ನು ಭೂತ ಎಂದೇ ಕರೆತೊಡಗಿದ್ದರು. ಎಷ್ಟೋ ವರ್ಷಗಳಾದ ಮೇಲೆ ಈಗ ಮತ್ತೆ ಎದುರು ನಿಂತಿದ್ದಾನೆ! ‘ನನ್ನ ಜತೆ ಬಾ. ಅಪ್ಪನ್ನ ಸುಟ್ಟು ಹಾಕಿದ ಜಾಗ ನೋಡಿ ಬರೋಣ’ ಎನ್ನುತ್ತ ಜಗನ್ನಾಥ ಮುಂದೆ ನಡೆದ. ಅವನು ಹಿಂಜರಿದಂತೆ ಕಾಣಿಸಿತು. ಮನೆ ಮುಂದೆ ಚಪ್ಪರ ಹಾಕಬೇಕು ಅಂತ ನಿಮ್ಮಣ್ಣಯ್ಯ ಹೇಳಿ ಕಳಿಸಿದ್ದ. ಅದಕ್ಕೇ ಬಂದೆ. ಈಗ ಚಪ್ಪರ ಬೇಡ ಶಾಮಿಯಾನ ಹಾಕಲು ಹೇಳಿದ್ದೀನಿ ಅಂದರು’ ಏಕವಚನ ಬಹುವಚನ ಎರಡನ್ನೂ ಬಳಸಿ ಮತಾಡಿದ್ದ. ಮನೆಗೆ ಹೋಗೋಣ ಅಂತಿರುವಾಗ ನೀನು ಕಾಣಿಸಿದೆ ಅನ್ನುತ್ತ ತಲೆ ಕೆರೆಯುತ್ತ ನಿಂತ. ಇಲ್ಲೇ ಹಳ್ಳದ ದಂಡೆಗೆ ಹೋಗಿ ಬರೋಣ ಬಾ ಅಂದ ಮೇಲೆ ಒಪ್ಪಿದ. ದಾರಿಯುದ್ದಕ್ಕೂ ಜಗನ್ನಾಥ ಅದೂ, ಇದೂ ಅಂತ ಕೇಳುತ್ತಲೇ ಹೋದ. ಪುಟ್ಟಸ್ವಾಮಿ ಎಲ್ಲಕ್ಕೂ ಚುಟುಕಾಗಿ ಉತ್ತರ ಹೇಳುತ್ತ ಹೋದ. ಕೆಲ ವಿಷಯಗಳನ್ನು ಹೆಚ್ಚು ಆಸಕ್ತಿಯಿಂದ ಹೇಳುತ್ತಿದ್ದಾನೆ ಅಂತ ಅನ್ನಿಸಿತು…. ‘ಅಪ್ಪಯ್ಯನಿಗೆ ಏನಾಗಿತ್ತೋ… ಇದ್ದಕ್ಕಿದ್ದಂಗೆ ಹೋದರಲ್ಲ? ಎಂಬ ಪ್ರಶ್ನೆ ಪುಟ್ಟಸ್ವಾಮಿ ತಕ್ಷಣ ಉತ್ತರಿಸದೆ ನಂಗೆ ಗೊತ್ತಿಲ್ಲಪ್ಪ ಅಂದ. ಅವನು ಹಿಂಜರಿಯುತ್ತಿದ್ದಾನೆ ಅನ್ನಿಸಿತು ಜಗನ್ನಾಥನಿಗೆ. ಮತ್ತೆ ಮತ್ತೆ ಕೇಳಿದ. ಹತ್ತಿರ ಕರೆದು ಹೆಗಲ ಮೇಲೆ ಕೈಹಾಕಿ ವಿಶ್ವಾಸ ತೋರಿಸಿದ… ನಿಂಗೆ ಗೊತ್ತಿಲ್ಲವಾ, ನಮ್ಮೂರ ಗದ್ದೆ ಬಯಲಿನ ಜಮೀನೆಲ್ಲ ಯಾವುದೋ ಕಂಪ್ನಿಯವರು ಗುತ್ತಿಗೆ ಬರೆಸಿಕೊಂಡಿದ್ದಾರಂತೆ. ಬಿಸಿಲಿಂದ ಕರೆಂಟು ಮಾಡೋ ಕಂಪ್ನಿಯಂತೆ. ಸಾಬರ ಭಾಷೆ ಮಾತಾಡ್ತಾರೆ. ಜೆಸಿಬಿಗಳನ್ನು ತಂದು ಗದ್ದೆ ಬಯಲನ್ನೆಲ್ಲ ಸಪಾಟು ಮಾಡಿದ್ದಾರೆ. ಇನ್ನು ಮುಂದೆ ಕೆರೆಗೆ ನೀರೇ ಬರದಂತೆ ಮಾಡ್ತಾರಂತೆ. ನಿಮ್ಮಪ್ಪಯ್ಯ ಜಮೀನು ಕೊಡಲ್ಲ ಅಂದ್ರು… ನಿಮ್ಮ ದೊಡ್ಡಪ್ಪನ ಮಗ ಮಂಜಣ್ಣ ನಿಮ್ಮ ಜಮೀನನ್ನೂ ನಂದು ಅಂತ ಹೇಳಿ ಮೂವತ್ತು ವರ್ಷ ಗುತ್ತಿಗೆ ಬರಕೊಟ್ಟು ದುಡ್ಡು ತಗಂಡಿದಾನಂತೆ… ಅದನ್ನು ಕೇಳಿದ ಮೇಲೆ ನಿಮ್ಮಪ್ಪನಿಗೆ ಹುಚ್ಚು ಹಿಡೀತು ಅಂತ ಊರ ಜನ ಮಾತಾಡ್ತಾರಪ್ಪ… ನಂಗೇನೂ ಗೊತ್ತಿಲ್ಲ ಎಂದು ಹೇಳಿ ಸುಮ್ಮನಾದ. ಜಗನ್ನಾಥನಿಗೆ ಅಪ್ಪನ ಸಾವಿನ ಕಾರಣ ಊಹಿಸಿದ. ಕಣ್ಣಲ್ಲಿ ನೀರು ತುಂಬಿಕೊಂಡಿತು. ಕೊನೆಯ ಸಲ ಅಪ್ಪನ ಮುಖ ನೋಡಬೇಕಿತ್ತು ಅನ್ನಿಸಲು ಶುರುವಾಯಿತು. ಈಗ ಅವರ ಅಸ್ಥಿಯನ್ನಾದರೂ ಮುಟ್ಟಬೇಕು ಅನ್ನಿಸಿ ದೂರದಲ್ಲಿ ಇನ್ನೂ ಸಣ್ಣಗೆ ಹೊಗೆಯಾಡುತ್ತಿರುವ ಚಿತೆಯತ್ತ ಹೆಜ್ಜೆ ಹಾಕತೊಡಗಿದ.

author-ಪ್ರೇಮಕುಮಾರ್‌ ಹರಿಯಬ್ಬೆ

courtsey:prajavani.net

https://www.prajavani.net/artculture/short-story/avyaktha-668128.html

Leave a Reply