ಬಾಳಿನ ಗಿಡ ಪುಸ್ತಕ ವಿಮರ್ಶೆ: ಸ್ವಾತಂತ್ರ್ಯಪೂರ್ವ ಬದುಕಿನ ರಮ್ಯಕಥನ

ಬಾಳಿನ ಗಿಡ ಲೇ: ಎಂ.ಹರಿದಾಸರಾವ್ ಪ್ರ:ಸಾಹಿತ್ಯ ಭಂಡಾರ, ಬೆಂಗಳೂರು ಮೊ: 94816 04435 ದೇಶ ಸ್ವಾತಂತ್ರ್ಯ ಪಡೆದ ಹೊಸದರಲ್ಲಿ (1949) ಬರೆದ ಸಾಮಾಜಿಕ ಕಾದಂಬರಿಯಿದು. ಮೇಷ್ಟ್ರ ವೃತ್ತಿಯಿಂದ ನಿವೃತ್ತರಾದ ಗೋವಿಂದರಾಯ ಕಥಾನಾಯಕ. ಉಡುಪಿ ಪಕ್ಕದ ಬೈಲೂರಿನಲ್ಲಿ ವಾಸವಿದ್ದ ಗೋವಿಂದರಾಯ, ತನ್ನ ದೊಡ್ಡಮಗ ರಾಜ ಕಾಡಂಚಿನ ಜಮೀನು ಖರೀದಿಸಿದ ಬೆಳ್ತಂಗಡಿಯ ಬಳಿಯ ಬಂಗಾಡಿಗೆ ವಲಸೆ ಹೋಗಿ ಅಲ್ಲಿ ಉತ್ತು, ಬಿತ್ತು, ಬೆಳೆದು ಹೊಸ ಬದುಕು ಕಟ್ಟಿಕೊಳ್ಳುವುದು ಕಥೆಯ ಹಂದರ. ಗೋವಿಂದರಾಯ ಜೊತೆಗೆ ಪತ್ನಿ ಸೀತಮ್ಮ ಕಥೆಯ ಜೀವಾಳ. ಅದು ಬಿಟ್ಟರೆ ಇಲ್ಲಿ ಬರುವ ಮಕ್ಕಳು ಮತ್ತು ಆಳುಮಕ್ಕಳೆಲ್ಲ ಪೋಷಕ ಪಾತ್ರಗಳು. ರಾಷ್ಟ್ರಕವಿ ಎಂ.ಗೋವಿಂದ ಪೈಯವರು ಮುನ್ನುಡಿಯಲ್ಲಿ ಬರೆದಂತೆ, ‘ಈ ಕಥೆಯಲ್ಲಿ ಕಥೆ ಎಂಬಷ್ಟರ ಮಟ್ಟಿಗೆ ಕಥೆ ಇಲ್ಲ. ಅಥವಾ ಕಥೆಯೇ ಇಲ್ಲವೆಂದರೂ ನಡೆದೀತು.’ ಆದರೆ ಗೋವಿಂದರಾಯನ ಏರಿಳಿತವಿಲ್ಲದ ಜೀವನಕಥನವನ್ನು ಸರಳ ಕನ್ನಡದಲ್ಲಿ ಚೇತೋಹಾರಿಯಾಗಿ ನಿರೂಪಿಸಿದ ಕ್ರಮ ಇವತ್ತಿಗೂ ಹೊಚ್ಚಹೊಸತು ಎನ್ನಿಸುವುದು ವಿಶೇಷ. ದುಡಿದ ಊರಲ್ಲಿ ಸ್ವಂತ ನೆಲವಿಲ್ಲದೆ, 58ರ ಇಳಿವಯಸ್ಸಿನಲ್ಲಿ ಬಂಗಾಡಿಗೆ ವಲಸೆ ಹೋದ ಗೋವಿಂದರಾಯನ ಕಥೆ ಮುಗಿಯುವುದು 1947ರ ಆಗಸ್ಟ್‌ನಲ್ಲಿ. ಅಂದರೆ ಇದು ಸ್ವಾತಂತ್ರ್ಯಪೂರ್ವದ ಕಥೆ. ಆ ಕಾಲದ ಭಾಷೆ, ಜೀವನಮೌಲ್ಯಗಳು, ಪರಿಸರದ ಜೊತೆಗಿನ ತಾದಾತ್ಮ್ಯ ಬದುಕು, ಬಡತನ, ವಿದ್ಯಾಭ್ಯಾಸ, ಅಪ್ಪ–ಅಮ್ಮ– ಮಕ್ಕಳ ಸಂಬಂಧ.. ಹೀಗೆ ಎಲ್ಲವನ್ನೂ ಈ ಕಾಲದಲ್ಲಿ ಕುಳಿತು ಓದುತ್ತಾ ಹೋದಂತೆ ರಮ್ಯಲೋಕವೊಂದನ್ನು ಕಟ್ಟಿಕೊಡುತ್ತದೆ. ಇದು ಈ ಕಾಲದ ಥ್ರೀ–ಡಿ ಲೋಕವಲ್ಲ; ಎಲ್ಲವೂ ನಿಸರ್ಗಸಹಜ ಎನ್ನುವಂತೆ ಹೊಚ್ಚಹೊಸದಾದ ಹಳೇಕಥೆ. ವಾಸ್ತವವಾದಿ ನಿರೂಪಣೆಯ ಕ್ರಮದಿಂದಾಗಿ ಗೋವಿಂದರಾಯ ಎನ್ನುವ ಮೇಷ್ಟ್ರು ನಿಜವಾಗಿ ಬದುಕಿದ್ದರೇನೋ ಅನ್ನಿಸುತ್ತದೆ. ಉಡುಪಿಯ ಬೈಲೂರಿನಿಂದ, ಬೆಳ್ತಂಗಡಿಯ ಬಂಗಾಡಿವರೆಗೆ ಮನೆಯ ಗಂಟುಮೂಟೆ ಕಟ್ಟಿಕೊಂಡು ಎತ್ತಿನ ಗಾಡಿಯಲ್ಲಿ ಹೊರಟ ನಾಲ್ಕು ರಾತ್ರಿ, ನಾಲ್ಕು ಹಗಲುಗಳ ಪ್ರಯಾಣ; ಊರು ತುಂಬ ಪ್ರೀತಿ ಹಂಚಿಕೊಂಡಿದ್ದ ಮೇಷ್ಟ್ರು ಹೊರಡುವಾಗ ಊರಿನ ಜನರ ಪ್ರತಿಕ್ರಿಯೆ, ಆ ಕಾಲದ ಹಳ್ಳಿಯ ಪಾರದರ್ಶಕ ಬದುಕನ್ನು ಕಣ್ಣಮುಂದೆ ತರುತ್ತದೆ. ಇವತ್ತು ಯಾವುದೇ ಊರಲ್ಲಿ ವಲಸೆ ಎನ್ನುವುದು ಪಕ್ಕದ ಮನೆಯವರಿಗೂ ಗೊತ್ತಾಗುವುದಿಲ್ಲ. ಆದರೆ ಅವತ್ತು ಕುಟುಂಬವೊಂದು ಊರು ಬಿಡುವಾಗ ಪರಿಸರದಲ್ಲಿ ಆಗುವ ತಲ್ಲಣವನ್ನು ಲೇಖಕರು ಮನ ಕಲಕುವಂತೆ ಕಟ್ಟಿಕೊಟ್ಟಿದ್ದಾರೆ. ಈ ಮಧ್ಯೆ ಬೆಳೆದುನಿಂತ ಸಣ್ಣಮಗ ಕೆಲಸ ಹುಡುಕಿಕೊಂಡು ಊರುಬಿಟ್ಟು ಹೋಗುವುದು ಅಪ್ಪನ ಮನಸ್ಸು ಕದಡುವ ಚಿತ್ರಣ ಇನ್ನೊಂದೆಡೆ. ಎರಡು ಮಹಾಯುದ್ಧಗಳ ಮಧ್ಯೆಯೇ ಕಥೆ ನಡೆಯುವ ಹಿನ್ನೆಲೆಯಲ್ಲಿ ಯುದ್ಧ ಜನರ ಬದುಕಿನಲ್ಲಿ ಉಂಟುಮಾಡುವ ತಲ್ಲಣಗಳೂ ಇಲ್ಲಿ ಮರುಧ್ವನಿಸುತ್ತವೆ. ಮಂಜೇಶ್ವರ ಗೋವಿಂದ ಪೈಯವರ ಮುನ್ನುಡಿಯ ಕನ್ನಡವನ್ನು ಓದುವುದೂ ಒಂದು ಹಿತವಾದ ಅನುಭವ. ‘ಇಂತಹ ಕಾದಂಬರಿಗಳು ಇಂಗ್ಲಿಷಲ್ಲಿ ಹಲವು ಇವೆ. ಪ್ರಥಮತಃ ಅತ್ಯಲ್ಪ ಜನಸಂಖ್ಯೆಯುಳ್ಳ ಕೆಂಪು ಕಪ್ಪು ಜನರ ಪ್ರದೇಶಗಳಲ್ಲಿ, ಆವರೆಗೆ ಇನ್ನೂ ನೇಗಿಲ ಗುಳ ಸೀಳಿಲ್ಲದ ಕನ್ನೆಭೂಮಿಯನ್ನು ಯುರೋಪ್‌ ಖಂಡದಿಂದ ಅಲ್ಲಿಗಯ್ದಿದ ಬಿಳೇ ಮಂದಿ ಉತ್ತು ಹವಣಿಸಿ ಹುಲುಸಾದ ವಿವಿಧ ಜಾತಿಯ ಪೈರುಗಳನ್ನು ಅಲ್ಲಿಂದ ಎತ್ತಿದ ಉದ್ದುದ್ದ ಕಥೆಗಳು ಹಲವಿವೆ’ ಎನ್ನುತ್ತಾರೆ ಗೋವಿಂದ ಪೈ. ‘ನಾಮ–ನೆಪ್ಪು’, ‘ಏವಂಚ ಈ ಕಥೆ ತುಳುನಾಡಿನ ಅಚ್ಚಕೂಸು’, ‘ಇತೋಪ್ಯತಿಶಯವಾದ’ ಮುಂತಾಗಿ ಅವರು ಬಳಸಿದ ಶಬ್ದಗಳು ಆ ಕಾಲದ ಕನ್ನಡಕ್ಕೆ ಕೈಗನ್ನಡಿ. ಕಾದಂಬರಿಯ ಲೇಖಕ ಹರಿದಾಸರಾಯ, ದಕ್ಷಿಣ ಕನ್ನಡದ ಮಾರ್ಪಳ್ಳಿಯಲ್ಲಿ ಹುಟ್ಟಿ ಹುಬ್ಬಳ್ಳಿಯಲ್ಲಿ ಕೊನೆಗಾಲದ ಬದುಕು ಕಟ್ಟಿಕೊಂಡವರು. ಮೆಟ್ರಿಕ್‌ ಓದಿನ ಬಳಿಕ ಬಡತನದಿಂದಾಗಿ ಮುಂದೆ ಓದಲಾಗದೆ ಹಳ್ಳಿಶಾಲೆಯ ಉಪಾಧ್ಯಾಯರಾದರು. ಆ ವೃತ್ತಿ ಬಿಟ್ಟು ಮಂಗಳೂರು ಸೇರಿ ಪತ್ರಕರ್ತರಾದರು. ಕೆಲಸ ಬಿಟ್ಟು ಸ್ವಾತಂತ್ರ್ಯಹೋರಾಟಕ್ಕೆ ಧುಮುಕಿ ಒಂದು ವರ್ಷ ಜೈಲುವಾಸ ಅನುಭವಿಸಿದರು. ಬಳಿಕ ಹುಬ್ಬಳ್ಳಿಯಲ್ಲಿ ನೆಲೆನಿಂತು ‘ಸಂಯುಕ್ತ ಕರ್ನಾಟಕ’ದಲ್ಲಿ ಪತ್ರಕರ್ತರಾದರು. ಕಥೆ, ಕಾದಂಬರಿ, ಪ್ರಬಂಧ, ಅನುವಾದ, ಜೀವನಚರಿತ್ರೆಯ ಜೊತೆಗೇ ಸಾಹಿತ್ಯ ಪರಿಚಾರಕರೂ ಆದರು. 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಇದು ಅವರ ನಾಲ್ಕನೇ ಕಾದಂಬರಿ. 37ರ ಹರೆಯದಲ್ಲೇ ರಸ್ತೆ ಅಪಘಾತದಲ್ಲಿ ಅವರು ಮೃತರಾದದ್ದು ದುರ್ದೈವ. 1949ರಲ್ಲಿ ಪ್ರಕಟವಾದ ಈ ಕಾದಂಬರಿ 54ರಲ್ಲಿ ಎರಡನೇ ಮುದ್ರಣ ಕಂಡಿದೆ. ಲೇಖಕರು ತೀರಿಕೊಂಡ ಬಳಿಕ 1955ರಿಂದ 1969ರವರೆಗೆ ಒಟ್ಟು ಏಳು ಮುದ್ರಣಗಳನ್ನು ಕಂಡಿದೆ. ಅದಾಗಿ ಈಗ 50 ವರ್ಷಗಳ ಬಳಿಕ 2019ರಲ್ಲಿ ಎಂಟನೆಯ ಮುದ್ರಣ ಕಂಡಿರುವುದು ಕನ್ನಡ ಸಾಹಿತ್ಯದ ಮಟ್ಟಿಗೆ ಅಚ್ಚರಿಯ ಸಂಗತಿಯೇ. 1974ರಲ್ಲಿ ಈ ಕೃತಿಯನ್ನು ಓದಿ ಮರುಳಾದ ಬೈಲಕೆರೆ ಗೋವಿಂದರಾವ್‌ ಎನ್ನುವ ನಿವೃತ್ತ ಬ್ಯಾಂಕ್‌ ನೌಕರರೊಬ್ಬರು, ಹೊರರಾಜ್ಯದಲ್ಲಿ ಚದುರಿಹೋಗಿದ್ದ ಲೇಖಕ ಹರಿದಾಸರಾವ್‌ ಅವರ ಮಕ್ಕಳನ್ನು ಹುಡುಕಿಕೊಂಡು ಹೋಗಿ ಪ್ರಕಾಶಕರ ಮನವೊಲಿಸಿ ಈ ಕಾದಂಬರಿ ಮತ್ತೆ ಮುದ್ರಣಗೊಳ್ಳಲು ಕಾರಣರಾಗಿರುವುದು ವಿಶೇಷ. ಕಾದಂಬರಿಯೊಂದು ಹೇಗೆ ಕಾಲದೇಶಗಳನ್ನು ಮೀರಿ ಓದುಗರನ್ನು ಹುಡುಕಿಕೊಳ್ಳುವುದು ನಿಜಕ್ಕೂ ಕುತೂಹಲಕರ ಸಂಗತಿ. ಕಾದಂಬರಿಯ ಓದು ಮುಗಿಸಿ ಪುಸ್ತಕ ಮೂಲೆಗಿಟ್ಟ ಬಳಿಕವೂ ‘ಕೆಸುವಿನ ಗಿಡಕ್ಕೆ ದನಕಟ್ಟಿ ಬಂದಹಾಗೆ’ ಓದಿನ ನೆನಪು ಬೆನ್ನುಹತ್ತುವುದು ಸುಳ್ಳಲ್ಲ.

author – ಬಿ.ಎಂ. ಹನೀಫ್‌

courtsey:prajavani.net

https://www.prajavani.net/artculture/book-review/balina-gida-book-review-712280.html

Leave a Reply