ಬೆಳಕಿಂಡಿಯಾಗದ ವ್ಯವಸ್ಥೆ- ವ್ಯಾಖ್ಯೆ ಮೀರಿದ ಪ್ರೀತಿ

ತಾಂತ್ರಿಕವಾಗಿ ಹೇಳುವುದಾದರೆ, ಇಲ್ಲಿ ಹೇಳಲು ಹೊರಟಿರುವ ಎರಡು ಪುಸ್ತಕಗಳ ವಸ್ತು ವಿಷಯಗಳು ಈಗಿನ ದಿನಮಾನಕ್ಕೆ ಅಪ್ರಸ್ತುತ ಎನಿಸುತ್ತವೆ. ತ್ರಿವಳಿ ತಲಾಖ್‌ ಮತ್ತು ಗಂಡು– ಹೆಣ್ಣಿನ ನಡುವಿನ ಸಂಬಂಧದ ಹೂರಣ ಕ್ರಮವಾಗಿ ಈ ಪುಸ್ತಕಗಳ ಕಥಾವಸ್ತು. ಆದರೆ, ತ್ರಿವಳಿ ತಲಾಖ್‌ ದೇಶದಲ್ಲಿ ನಿಷೇಧವಾಗಿದೆ; ವ್ಯಭಿಚಾರ ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೇ ಷರಾ ಬರೆದಿದೆ– ಹೀಗೆಂದು ಹೇಳಿ ಒಂದೇ ವಾಕ್ಯದಲ್ಲಿ ತಳ್ಳಿಹಾಕಿ ಬಿಡಬಹುದಾದ ಸಂಗತಿಗಳಂತೂ ಇವಲ್ಲ. ಸಾಮಾಜಿಕವಾಗಿ, ನೈತಿಕವಾಗಿ ಈ ಸಂಗತಿಗಳಿಗೆ ಸಾವಿಲ್ಲ ಎಂಬುದು ಸೂರ್ಯಸ್ಪಷ್ಟ.<ಸಂಪ್ರದಾಯವಾದಿ ಮತ್ತು ಉದಾರವಾದಿ ನಿಲುವುಗಳ ನಡುವಿನ ತಾಕಲಾಟ ಲಾಗಾಯ್ತಿನಿಂದಲೂ ಇದ್ದದ್ದೇ. ಅದರಲ್ಲೂ ಮೂಲಭೂತವಾದ ಕೊಂಚ ಹೆಚ್ಚೇ ವಿಜೃಂಭಿಸುವ ಮುಸ್ಲಿಂ ಸಮುದಾಯದಲ್ಲಿ ಕಾಲನ ಮುಳ್ಳು ಆಧುನಿಕ ಗಡಿಯಾರದಲ್ಲೂ ಸ್ತಬ್ಧವಾಗಿಬಿಟ್ಟಿದೆಯೇನೋ ಎಂಬಂತೆ ಭಾಸವಾಗುತ್ತದೆ. ಅಷ್ಟಾದರೂ, ಆ ಮುಳ್ಳಿಗೆ ಚಲನಶೀಲತೆ ತಂದುಕೊಡುವ ಪ್ರಯತ್ನ ತನ್ನೆಲ್ಲ ಇತಿಮಿತಿಗಳ ನಡುವೆಯೂ ಅವಿರತವಾಗಿ ನಡೆಯುತ್ತಲೇ ಬಂದಿರುವುದನ್ನು ನೂರ್‌ ಜಹೀರ್‌ ಅವರ ‘ನನ್ನ ದೇವರು ಹೆಣ್ಣು’ ಪುಸ್ತಕ ಮತ್ತೊಮ್ಮೆ ಸಾಬೀತುಪಡಿಸಿದೆ. ಅವಿಭಜಿತ ಭಾರತದಲ್ಲಿ ಪ್ರತಿಷ್ಠಿತ ಮುಸ್ಲಿಂ ಕುಟುಂಬವೊಂದರಲ್ಲಿನ ಸಂಪತ್ತಿನ ಮೇಲಾಟದೊಂದಿಗೆ ಆರಂಭವಾಗುವ ಈ ಕಥನ, ದೇಶದೊಟ್ಟಿಗೇ ಇಬ್ಭಾಗವಾಗುವ ಮನಸ್ಸುಗಳ ತಾಕಲಾಟ, ಉದಾರವಾದಿ ಚಿಂತಕರನ್ನು ಹೊಸಕಿಹಾಕುವ ರಾಜಕೀಯ ವ್ಯವಸ್ಥೆಯನ್ನು ಸಮರ್ಥವಾಗಿ ಚಿತ್ರಿಸುತ್ತದೆ. ತಾವು ಈ ಪುಸ್ತಕ ಬರೆಯುವಾಗ ಭೀತಿಗೆ ಒಳಗಾಗಿದ್ದುದಾಗಿ ಮುನ್ನುಡಿಯಲ್ಲಿ ನೂರ್‌ ಬರೆದುಕೊಂಡಿದ್ದಾರೆ. ಆದರೆ ಆ ಭೀತಿಯನ್ನು ಮೆಟ್ಟಿ, ತಮ್ಮ ಸಮುದಾಯದ ಹೆಣ್ಣುಮಕ್ಕಳ ‘ಧರ್ಮ’ಸಂಕಟಗಳಿಗೆ ಅವರು ಧ್ವನಿಯಾಗಿರುವುದು, ವೈರುಧ್ಯಗಳಿಂದ ಕೂಡಿರುವ ಶರಿಯತ್‌ ಕಾನೂನಿಗೆ ಅವಶ್ಯವಾಗಿ ಆಗಬೇಕಾಗಿರುವ ಪರಿಷ್ಕರಣೆಯನ್ನು ಬಲವಾಗಿ ಪ್ರತಿಪಾದಿಸಿರುವುದು ಈ ಪುಸ್ತಕದ ವೈಶಿಷ್ಟ್ಯ.ಇನ್ನು ‘ಮರೀಚಿಕೆ’ ಹೆಸರಿನ ‘ಆರಿಫ್‌ ಲವ್ಸ್‌ ಸುಮಿತ್ರಾ’ ಎಂಬ ಟ್ಯಾಗ್‌ಲೈನ್ ಹೊತ್ತ ಅಬ್ದುಲ್ಲಾಹ್‌ ಖಾನ್‌ ಅವರ ಪುಸ್ತಕವು ಹೆಸರಿನಲ್ಲೇ ಕಥೆಯ ಸಾರಾಂಶ ಹೇಳುತ್ತದಾದರೂ, ಓದುತ್ತಾ ಹೋದಂತೆ ಹಿಂದೂ– ಮುಸ್ಲಿಮರ ನಡುವಿನ ಸಂಬಂಧ ಬಂದು ನಿಂತಿರುವ ಇಂದಿನ ಅನಪೇಕ್ಷಣೀಯ ಸಂದರ್ಭಕ್ಕೂ ಪ್ರಸ್ತುತವಾಗುತ್ತಾ ಹೋಗುತ್ತದೆ. ದೇಶದ ಮುಸಲ್ಮಾನರಲ್ಲಿ ನೆಲೆಗಟ್ಟಿರುವ ಅಭದ್ರತಾ ಭಾವನೆಯನ್ನು ಯುವಕ ಆರಿಫ್‌ನ ಮೂಲಕ ಸ್ಪಷ್ಟವಾಗಿ ದಾಖಲಿಸುತ್ತದೆ. ಆದರೂ, ಹಿಂದೂ ಮಹಿಳೆಯ ಪ್ರೇಮಪಾಶಕ್ಕೆ ಸಿಲುಕುವ ಆರಿಫ್‌ನ ಮಾನಸಿಕ ತೊಳಲಾಟವೇ ಎಲ್ಲಕ್ಕಿಂತ ಹೆಚ್ಚಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ. ‘ಪ್ರೀತಿಯ ಯಾತನೆಯ ಹೊರತಾಗಿಯೂ ಹಲವು ದುಃಖಗಳಿವೆ ಈ ಜಗತ್ತಿನಲ್ಲಿ…’ ಎಂಬ ಉಕ್ತಿಯನ್ನು ಆರಂಭದಲ್ಲೇ ಉಲ್ಲೇಖಿಸುವ ಮೂಲಕ ಲೇಖಕರು, ಪೂರ್ವಗ್ರಹಗಳನ್ನು ಇಟ್ಟುಕೊಂಡೇ ಕಾದಂಬರಿಯನ್ನು ಬರೆಯಲಾರಂಭಿಸಿರುವುದು ಸ್ಪಷ್ಟವಾಗುತ್ತದೆ. ಈ ಕಾರಣಕ್ಕೇ, ‘ಸುಂದರ’ ಸಂಸಾರದ ಚೌಕಟ್ಟಿನೊಳಗಿದ್ದೂ ಆರಿಫ್‌ನ ಪ್ರೀತಿಗಾಗಿ ಹಂಬಲಿಸುವ ಸುಮಿತ್ರಾಳ ಮನದಿಂಗಿತ ಇಲ್ಲಿ ಮುಕ್ತವಾಗಿ ತೆರೆದುಕೊಳ್ಳುವುದೇ ಇಲ್ಲ. ಆದರೂ ಯಶಸ್ವಿ ದಾಂಪತ್ಯಕ್ಕೆ ಅತ್ಯವಶ್ಯವಾದ ಸಾಂಗತ್ಯ, ಆಪ್ತವಾದ ಅನುಭೂತಿಯ ಪಸೆ ಇಲ್ಲದಿದ್ದರೆ ಉಳಿದೆಲ್ಲ ಲೌಕಿಕ ಭೋಗಗಳೂ ನಿರರ್ಥಕ ಎಂಬುದನ್ನು ಸುಮಿತ್ರಾಳ ಪಾತ್ರ ಪರೋಕ್ಷವಾಗಿ ಬಿಂಬಿಸುತ್ತದೆ. ಎಲ್ಲ ಎಲ್ಲೆಗಳನ್ನೂ ಮೀರಿದ ನಿರ್ಮಲವಾದ ಪ್ರೀತಿಯ ಪ್ರತಿನಿಧಿಗಳಂತೆ ಆರಿಫ್‌ ಮತ್ತು ಸುಮಿತ್ರಾ ಭಾಸವಾಗುತ್ತಾರೆ ಈ ಪುಸ್ತಕಗಳು ಓದುಗರಿಗೆ ಆಪ್ತವಾಗುವುದರ ಹಿಂದೆ, ಇವುಗಳನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿರುವ ಪ್ರೊ. ಎಂ.ಅಬ್ದುಲ್‌ ರೆಹಮಾನ್‌ ಪಾಷ ಅವರ ಕೊಡುಗೆಯೂ ಇದೆ.
author- ನೀಳಾ ಎಂ.ಎಚ್
courtsey:prajavani.net

lhttps://www.prajavani.net/artculture/book-review/review-on-kannada-book-688416.html.

Leave a Reply