ಕಥಾಸ್ಪರ್ಧೆ

‘ಥ ತ್, ಈ ಹಾಳು ಕಥೆಯನ್ನು ಹೇಗೆ ಪ್ರಾರಂಭಿಸುವುದು’ ಬಸ್ಸಿನ ಕಿಟಕಿ ಬದಿಯ ಸೀಟಿನಲ್ಲಿ ಕುಳಿತು ಅವನೊಬ್ಬನೇ ಗೊಣಗುತ್ತಿದ್ದ. ಹಾಳುಮೂಳು ರಸ್ತೆಯ ಮೇಲೆ ಬಸ್ಸು ಧಡ್ಡೆಂದು ಆಗಾಗ ಹಾರಿ ಏಳುತ್ತಾ ಬೀಳುತ್ತಾ ಸುನಾಮಿಗೆ ಸಿಕ್ಕ ಹಡಗಿನಂತೆ ಓಲಾಡುತ್ತಾ ಚಲಿಸುತ್ತಿತ್ತು. ಸಾಲದ್ದಕ್ಕೆ ಬಸ್ಸು ತುಂಬಾ ಪ್ರಯಾಣಿಕರು ತುಂಬಿ ‘ಪೀಪಲ್ ಪಿಕಲ್ಸ್’ ಎಂದು ಕರೆಯುವಷ್ಟು ಒತ್ತು ಒತ್ತಾಗಿದ್ದ ಜನಜಂಗುಳಿ. ಎದುರಿನ ಬಾಗಿಲಲ್ಲಿ ನಿಂತಿದ್ದವರನ್ನು ‘ಸ್ವಲ್ಪ ಹಿಂದೆ ಹೋಗಿ ಮಾರ‍್ರೆ’, ಹಿಂದಿದ್ದವರನ್ನು ‘ಎಂಥ ಮೆಟ್ಲಲ್ಲಿ ನೇತಾಡಿ ಸಾಯ್ತೀರಾ, ಮುಂದೆ ಹೋಗಿ ಮಾರ‍್ರೆ’ ಎಂದು ಆಗಾಗ್ಗೆ ಅಚ್ಚ ಮಂಗಳೂರ ಭಾಷೆಯಲ್ಲಿ ನಿರ್ವಾಹಕ ಒರಟಾಗಿ ಬೈಯ್ಯುತ್ತಿದ್ದ. ರಿಹಾನ್, ಒಬ್ಬ ಹವ್ಯಾಸಿ ಬರಹಗಾರ. ಪದವಿ ಮುಗಿದ ಬಳಿಕ ಅಲ್ಪಸ್ವಲ್ಪ ಪುಸ್ತಕಗಳ ಬೆನ್ನು ಹತ್ತಿದ್ದರಿಂದ ಬದುಕೇ ಬದಲಾಗಿ ಬಿಟ್ಟಿತ್ತು. ಪುಸ್ತಕವಿಲ್ಲದೆ ದಿನವೇ ಓಡದೆಂಬಷ್ಟು ಬದಲಾಗಿ ಹೋಗಿದ್ದ. ಆಫೀಸಿನ ರಜಾ ದಿನಗಳಲ್ಲಿ ಮೌನಿಯಂತೆ ತನ್ನ ಕೊಠಡಿಯಲ್ಲಿ ಪುಸ್ತಕ ಓದಲು ಕುಳಿತವನಿಗೆ ಹೊರಗಿನ ಪ್ರಪಂಚದ ವಿಷಯ ಏನೇನೂ ತಿಳಿಯದು. ಇತ್ತೀಚೆಗಷ್ಟೇ ಆಫೀಸಿನಲ್ಲೇನೋ ಕೆಲಸದ ವಿಚಾರದಲ್ಲಿ ಮನಸ್ತಾಪವುಂಟಾಗಿ ಬಾಸಿನ ಜೊತೆ ಜಗಳವಾಗಿ ಕೆಲಸವನ್ನೂ ಬಿಟ್ಟಿದ್ದ. ‘ಮುಂದಿನ ಕೆಲಸವಾಗುವಷ್ಟು ದಿನವಾದರೂ ಓದ್ಕೊಂಡು ಬರಕೊಂಡು ಹಾಯಾಗಿರಬೇಕು’ ಎಂಬುವುದಷ್ಟೇ ಆತನ ಖುಷಿ. ಆಗೊಮ್ಮೆ ಈಗೊಮ್ಮೆ ಮಂಗಳೂರಿನ ಲೈಬ್ರರಿಗೆ ಬರುತ್ತಿದ್ದ. ಇಲ್ಲವಾದರೆ ಅಬ್ಬೇ‌ಪಾರಿಯಂತೆ ಯಾವುದಾದರೂ ಬಸ್ಸಿಗೆ ಹತ್ತಿ ‘ಕೊನೆಯ ಸ್ಟಾಪ್’ ಎಂದು ಟಿಕೆಟ್ ಕೊಳ್ಳುತ್ತಾ ವಿಂಡೋ ಸೀಟು ಪಡೆದುಕೊಳ್ಳುತ್ತಾನೆ. ದಾರಿಮಧ್ಯೆ ಏನಾದರೂ ಹೊಳೆದರೆ ಪ್ರಯಾಣ ಅಲ್ಲಿಗೆ ಮೊಟಕುಗೊಳಿಸಿ ಅಲ್ಲೇ ಇಳಿದು ಬಿಡುತ್ತಿದ್ದ. ಇದೇ ವಿಚಿತ್ರ ನಡವಳಿಕೆ ಕಂಡು ಬೇಸತ್ತು ನಿರ್ವಾಹಕನೊಬ್ಬ, ‘ಸರ್ ನೀವು ಎಲ್ಲಿ ಇಳಿತೀರೋ ಅಲ್ಲಿಗೇ ಟಿಕೆಟ್ ಕೊಟ್ಟು ಬಿಡಿ’ ಅಂದು ಪುಗಸಟ್ಟೆ ಸಲಹೆ ಕೊಟ್ಟಿದ್ದ. ಯಾಕೋ ಆ ಫಿಲಾಸಫಿ ಇಷ್ಟವಾಗಿ ರಿಹಾನ್ ಅದೇ ಬಸ್ಸಿನಲ್ಲಿ ಪ್ರಯಾಣಿಸುವುದು ರೂಢಿ ಮಾಡಿಕೊಂಡ. ರಸ್ತೆಯಲ್ಲಿ ಕುಳಿಗಳು ಬಿದ್ದು, ಆದಾಗಲೇ ಅಳಿಲು ತಿಂದ ಮಾವಿನ ಉಚ್ಚಿಷ್ಟದಂತಾಗಿತ್ತು. ‘ಈ ಓಟು ಹಾಕಿದವರೆಲ್ಲಾ ಎಲ್ಲಿ ಸಾಯ್ತಾರೆ ಮಾರ‍್ರೆ, ಭಾಷೆ ಇದ್ರೆ ಇಂಥವರಿಗೆ ಯಾರಾದ್ರೂ ಓಟು ಹಾಕ್ತಾರ?!’ ಅಂತ ಹತ್ತಿರದಲ್ಲಿ ಕುಳಿತಿದ್ದ ಮಧ್ಯ ವಯಸ್ಕನೊಬ್ಬ ಬಾಯಿ ತೆಗೆದಾಗ ರಿಹಾನ್‌ನ ಹತ್ತಿರ ಕುಳಿತಿದ್ದವನಿಗೂ ಇದೇ ಸಾಂಕ್ರಾಮಿಕ ರೋಗ ಹರಡಿತು. ಇಡೀ ಬಸ್ಸಿನವರಿಗೆ ಕೇಳಿಸಿಕೊಳ್ಳುವಷ್ಟು ಜೋರಾಗಿ ಇವರ ರಾಜಕೀಯ ಭಾಷಣ ಕೇಳಿಸತೊಡಗಿತು. ಇವರ ಒಣಚರ್ಚೆ ರಾಜಕೀಯದಿಂದ, ಧರ್ಮದೆಡೆಗೆ ತಿರುಗಿತು. ‘ಇನ್ನು ಬಸ್ಸಿನಲ್ಲಿ ಕುಳಿತರಾಗದು’ ಅನಿಸುವಷ್ಟರಲ್ಲಿ ಕಂಡಕ್ಟರ್ ಜೋರಾಗಿ ‘ಲೇಡಿ ಹಿಲ್, ಲೇಡಿಹಿಲ್’ ಎಂದು ಕೂಗತೊಡಗಿದ್ದ. ಅಲ್ಲಿಗೆ ಟಿಕೇಟು ಪಡೆದು ರಿಹಾನ್ ಇಳಿದುಕೊಂಡ. ‘ಆಹಾ ನಾನೆಷ್ಟು ಚಂದದ ಸ್ವತಂತ್ರ ಹಕ್ಕಿ, ಯಾವ ಬಾಸಿನ ಆಜ್ಞೆಯೂ ಪಾಲಿಸಬೇಕಿಲ್ಲವಲ್ಲ’ ಬಸ್ಸಿಳಿದವನಿಗೆ ಹಾಗನಿಸಿತು. ಮುಂದೆ ನಡೆಯತೊಡಗಿದ. ಅಷ್ಟರಲ್ಲೇ ಬಸ್ಸಿನಲ್ಲಿ ‘ಪಾಪ ಎಂಥ ಹುಡುಗ, ಇಷ್ಟು ಸಣ್ಣ ವಯಸ್ಸಿಗೆ ಹುಚ್ಚು ಹಿಡಿಯಬಾರದಿತ್ತು’ ಎಂದು ನಿರ್ವಾಹಕ ಪರಿಚಯದ ಪ್ರಯಾಣಿಕನಲ್ಲಿ ಹೇಳಿಕೊಂಡ. ಅದು ಕ್ಷೀಣವಾಗಿ ರಿಹಾನ್ ಕಿವಿಗೆ ಬಿದ್ದರೂ ಆತ ಗಣನೆಗೆ ತೆಗೆದುಕೊಳ್ಳಲಿಲ್ಲ. ‘ಲೋಕದ ಉಸಾಬರಿ ನಿನಗೆ ಯಾಕೆ ಬೇಕು, ಅದು ಇದ್ದಂತೆಯೇ ಇರಲಿ ಬಿಡು’ ಯಾರೋ ಅಂದಂತನಿಸಿತು. ಇನ್ನೊಂದೇ ನಿಮಿಷಕ್ಕೆ ‘ರೈಯ್ಯಾ’ ಎಂಬ ಸದ್ದಿನ ಜೊತೆಗೆ ವಿಸಿಲ್ ದನಿಯೂ ತಾರಕೆಕ್ಕೇರಿತು. ಬಸ್ಸು ಭರ‍್ರನೆ ಧೂಳೆಬ್ಬಿಸುತ್ತಾ ಹೊರಟು ಹೋಯಿತು. ತಥಾಕಥಿತ ಪ್ರಯಾಣಿಕ ತನ್ನ ಕಡೆ ನೋಡುತ್ತಾ ಕನಿಕರಿಸುತ್ತಿರುವುದು ರಿಹಾನ್ ಕಡೆಗಣ್ಣಿನಿಂದ ನೋಡುವುದನ್ನು ಅವನು ಮರೆಯಲಿಲ್ಲ. ಬಸ್ಸಿನಿಂದ ಹೇಗೂ ಇಳಿದಾಗಿದೆ, ಎಲ್ಲಿಗೆ ಹೊರಡುವುದು ಏನೇನೂ ಹೊಳೆಯದೆ ರಿಹಾನ್ ಪಕ್ಕದಲ್ಲೇ ಇದ್ದ ಟೀ ಅಂಗಡಿ ಬಳಿಗೆ ಬಂದ. ‘ಒಂದು ಟೀ ಕೊಡಿ’ ಎಂದ. ಹಬೆಯಾಡುತ್ತಿದ್ದ ಫಿಲ್ಟರಿನಿಂದ ಸೊರ‍್ರನೆ ಗಾಜಿನ ಗ್ಲಾಸಿಗೆ ಸುರಿಯುವ ಸದ್ದು ತೇಲಿ ಬಂತು. ಒಂದು ಲೋಟ ಚಹಾ‌ ದೇಹಕ್ಕೇರಿದಾಗ ಸುಪ್ತವಾಗಿದ್ದ ಕಥಾಪ್ರಜ್ಞೆ ಮತ್ತೆ ಜೀವಂತವಾಯಿತು. ರಿಹಾನ್ ಚಹಾ ಅಂಗಡಿಯವನನ್ನೊಮ್ಮೆ ಆಪಾದಮಸ್ತಕ ನೋಡಿದ. ಇಳಿವಯಸ್ಸು, ಬದುಕಿನ ಜಂಜಡಗಳು ಅವನನ್ನು ಹಿಂಡಿ‌ ಹಿಪ್ಪೆ ಮಾಡಿರುವುದು>ಆತನ ನೆರಿಗಟ್ಟಿದ್ದ ನೆತ್ತಿಯ ಚರ್ಮದಲ್ಲಿ ವೇದ್ಯವಾಗುತ್ತಿತ್ತು. ‘ಕಥೆ ಇವನಿಂದಲೇ ಪ್ರಾರಂಭಿಸೋಣವೇ, ಅಥವಾ ನಿರ್ವಾಹಕನಿಂದ, ಇಲ್ಲ ಕನಿಕರಿಸಿದ ಪ್ರಯಾಣಿಕನಿಂದ’ ಮತ್ತೆ ಚಿಂತೆ ನೂರಾಯಿತು. ಇತ್ತೀಚೆಗೆ ಸ್ಥಳೀಯ ಪತ್ರಿಕೆಯೊಂದು ರಾಜ್ಯಮಟ್ಟದ ಕಥಾಸ್ಪರ್ಧೆಗೆ ಆಹ್ವಾನ ಮಾಡಿತ್ತು. ಸ್ಪರ್ಧೆ ಎಂದ ಕೂಡಲೇ ನಾನೂ ಒಂದು ಕಥೆ ಬರೆಯಬೇಕೆಂದೆನಿಸಿದ ಬಳಿಕ ಅವನ ಸುತ್ತಮುತ್ತಲೆಲ್ಲಾ ಕಥೆ ಹುಟ್ಟಿಕೊಳ್ಳತೊಡಗಿದ್ದವು. ನಿದ್ರೆಯಲ್ಲೂ ಕಥೆಯದ್ದೇ ಧ್ಯಾನ. ‘ಸರ್ ಹತ್ತು ರೂಪಾಯಿ’ ಟೀ ಅಂಗಡಿಯವನು ಕೇಳಿದಾಗಲೇ ರಿಹಾನ್ ತಟ್ಟಿ ಎಬ್ಬಿಸಿದವನಂತೆ ಕಿಸೆಯಲ್ಲಿದ್ದ ಇಪ್ಪತ್ತರ ನೋಟೊಂದು ಅವನೆಡೆಗೆ ಚಾಚಿದ. ‘ಚಿಲ್ಲರೆ ನೀವೇ ಇಟ್ಟುಕೊಳ್ಳಿ’ ಎಂದು ಖಾಲಿ ಗ್ಲಾಸನ್ನು ಟೇಬಲ್ ಮೇಲಿರಿಸಿ ಏನೋ ಕಂಡವನಂತೆ ಮುಂದೆ ಹೊರಟು ಬಂದ. ಎಡಗಡೆಗೆ ಕ್ರಿಶ್ಚಿಯನ್ ಶಾಲೆ, ಅನತಿ‌‌‌ ದೂರದಲ್ಲಿ ಪ್ರಶಾಂತ ಶಿಲುಬೆಯೊಂದು ಕಂಡಿತು. ಹತ್ತಿರದಲ್ಲೇ ಕ್ರಿಸ್ತನ ವಿಗ್ರಹವೂ ಧ್ಯಾನದಲ್ಲಿತ್ತು. ಸರಸರನೆ ಅತ್ತ ನಡೆದ. ಅದೊಂದು ಕ್ರೈಸ್ತರ ಸೆಮಿಟರಿ. ಅಲ್ಲಲ್ಲಿ ಶಿಲುಬೆ ನಾಟಿದ ಗೋರಿಗಳು‌. ಶ್ರೀಮಂತರದ್ದು ಸಿಮೆಂಟಿನದ್ದು, ಇಲ್ಲದವರದ್ದು ಮರಗಳ ಶಿಲುಬೆ. ಸತ್ತ ಮೇಲೂ ಅಸಮಾನತೆ‌. ಗೇಟು ತೆರೆದೇ ಇತ್ತು. ಕಾವಲುಗಾರರೆಂದು ಯಾರೂ ಅಲ್ಲಿ ಕಾಣಲಿಲ್ಲ. ರಿಹಾನ್ ಸೆಮಿಟರಿಯ ಒಂದು ಮೂಲೆಗೆ ಹೋಗಿ ಕುಳಿತುಕೊಂಡ‌.ಪ್ರಶಾಂತ ಮೌನ, ಅಲ್ಲಲ್ಲಿ ಬೆಳೆದು‌ ನಿಂತ ಮರಗಳು. ಬಹುಶಃ ಈ ಪಟ್ಟಣದ ಮಧ್ಯೆ ಪ್ರೇತಗಳ ಹೆದರಿಕೆಯಲ್ಲದಿದ್ದರೆ ಈ ಮರಗಳು ಯಾವ ಮನೆಯ ಬಾಗಿಲಾಗಿರುತ್ತಿದ್ದವೋ. ಸುಯ್ಯನೆ ಗಾಳಿ ಬೀಸಿ ಬರುತ್ತಿತ್ತು. ನಿನ್ನೆಯಷ್ಟೇ ನೆಟ್ಟಿದ್ದ ಶಿಲುಬೆಯೊಂದರ ಬಳಿ ಇರಿಸಿದ್ದ ಗುಲಾಬಿಯ ಗಮ ಗಾಳಿಯಲ್ಲಿ ತೇಲಿ ಬಂತು. ಅಲ್ಲಲ್ಲಿ ತೂಗು ಹಾಕಿದ್ದ ಬೈಬಲ್ಲಿನ ಪ್ರಕಾಶಮಾನ ವಾಕ್ಯಗಳು. ಕಳೆದ ಮಳೆಗಾಲಕ್ಕೆ ಬಂದ ಭಾರಿ ಮಳೆಯಿಂದ ಹಳೆಯ ಗೋರಿಯೊಂದರ ಶಿಲುಬೆಯೊಂದು ಮುರಿದು ತಲೆ ಕೆಳಗಾಗಿತ್ತು. ಬದಿಯಲ್ಲೇ ಸಣ್ಣದೊಂದು ಕಿಂಡಿ. ಅದರ ಬಲಭಾಗಕ್ಕೆ ಸ್ವಲ್ಪ ದೂರದಲ್ಲಿ ನಿರ್ಗಮನ ಬಾಗಿಲು. ಆಗಾಗ್ಗೆ ತಣ್ಣನೆ ಬೀಸುವ ಗಾಳಿಗೆ ತಲೆದೂಗುವ ಎಲೆಗಳ ಸದ್ದು. ಹಾವುರಾಣಿಯೋ, ಓತಿಕ್ಯಾತವೋ ಓಡಾಡುವ ತುರಾತುರಿಗೆ ತರೆಗೆಲೆಗಳ ಅಲುಗಾಟ. ಎಲ್ಲ ಹೊರತುಪಡಿಸಿದರೆ ನಿರ್ಜನ ಜಗತ್ತು. ಒಂದಷ್ಟು ಶವಗಳೊಂದಿಗೊಬ್ಬ ಅಜಗರನಾದ ಮನುಷ್ಯ. ರಿಹಾನ್ ಆ ಮೌನ ವಾತಾವರಣದಲ್ಲಿ ಹೊಸಜಗತ್ತಿಗೆ ತೆರೆದುಕೊಳ್ಳತೊಡಗಿದ. ಕಥಾ ಪಾತ್ರಗಳು ಜೀವ ತಳೆಯಲಾರಂಭಿಸಿದವು. ರಿಹಾನ್ ಡೈರಿ ತೆಗೆದು ಬರೆಯಲು ಕುಳಿತ. ಸುಮಾರು ಹೊತ್ತು ಹಾಗೆಯೇ ಕಳೆಯಿತು. ಒಂದು ಅರ್ಧ ಗಂಟೆಯ ತರುವಾಯ, ತುಕ್ಕು ಹಿಡಿದಿದ್ದ ಸೆಮಿಟರಿ ಮೈದಾನದ ಬಾಗಿಲು ಕಿರ‍್ರೆಂದು ಕೀರಲುಗುಟ್ಟಿತು. ಬರೆಯುತ್ತಿದ್ದ ರಿಹಾನ್ ಆ ಕ್ಷಣ ಬೆಚ್ಚಿಬಿದ್ದ. ಅರೆಕ್ಷಣ ಯಾರೊಬ್ಬರೂ ಕಾಣಿಸಿಕೊಳ್ಳಲಿಲ್ಲ. ‘ಅರೇ! ಇದೇನು’ ಕುಳಿತಲ್ಲಿಂದಲೇ ಬಾಗಿಲಿನೆಡೆಗೆ ಇಣುಕಿದ. ಯಾರೊಬ್ಬರೂ ಇರಲಿಲ್ಲ. ಭಯಪಡಲು ಕಾರಣ ಬೇಕಿರಲಿಲ್ಲ.ಮಧ್ಯರಾತ್ರಿಯಂತೂ ಅಲ್ಲ. ಭೂತಪ್ರೇತದ‌ ಮೇಲೆ ಮೊದಲೇ ನಂಬಿಕೆಯಿಲ್ಲ‌. ಎವೆಯಿಕ್ಕದೆ ಬಾಗಿಲನ್ನೇ ನೋಡುತ್ತಾ ನಿಂತ‌. ಖಾಲಿ ಬಾಗಿಲಲ್ಲಿ ನೆರಳೊಂದು ಅಡ್ಡಲಾಯಿತು. ಕತ್ತಲು ಸೀಳಿ ಬರುವ ಚಂದ್ರನಂತೆ ಮನುಷ್ಯಾಕೃತಿಯೊಂದು ಪ್ರತ್ಯಕ್ಷಗೊಂಡಿತು. ಬಿಳಿಯ ಸೀರೆ ಉಟ್ಟ ಹೆಣ್ಣಿನಾಕೃತಿ. ಅಸ್ಪಷ್ಟ ಮುಖ, ಸಾಲದ್ದಕ್ಕೆ ತಲೆಯ ಮೇಲೆ ಸೆರಗೆಳೆದುಕೊಂಡು ಕೈಯಲ್ಲೊಂದಿಷ್ಟು ಹೂಗುಚ್ಛ. ರಿಹಾನ್ ಅವಕ್ಕಾಗಿ ನೋಡುತ್ತಾ ನಿಂತ. ಆ ಹೆಣ್ಣಿನಾಕೃತಿ ನಡೆಯುತ್ತಾ ಮೂಲೆಗೆ ಸರಿಯಿತು. ಇತ್ತೀಚೆಗಷ್ಟೇ ನಿರ್ಮಿಸಿದ ಗೋರಿಯೊಂದರ ಬಳಿ ಹೋಯಿತು. ಮಂಡಿಯೂರಿ ನಮಸ್ಕರಿಸಿತು. ರಿಹಾನ್ ಇಂಗ್ಲಿಷ್ ಸಿನಿಮಾಗಳಲ್ಲಿ ನೋಡುತ್ತಿದ್ದ ಪ್ರೇತದಂತೆಯೇ ಕಾಣತೊಡಗಿತು. ಹೊಟ್ಟೆಯೊಳಗೆ ಇಲಿಗಳು ಓಡಾಡಿದಂತಹ ಅನುಭವ, ಜೀವ ಬಾಯಿಗೆ ಬಂತು. ಆ ಅಪರಿಚಿತ ಬಿಳಿ ವಸ್ತ್ರದಾರಿ ತನ್ನನ್ನು ನೋಡಿಲ್ಲವೆಂಬ ಖಾತ್ರಿ ಇದ್ದದ್ದರಿಂದ ರಿಹಾನ್ ಇನ್ನಷ್ಟು ಮರೆಯಾಗಿ ಮುಂದಿನ ಆಗುಹೋಗುಗಳನ್ನು ಭಯದಿಂದಲೇ ವೀಕ್ಷಿಸತೊಡಗಿದ. ಆ ಶ್ವೇತ ಸೀರೆ ಮಂಡಿಯೂರಿ ಪ್ರಾರ್ಥಿಸುತ್ತಲೇ ಇತ್ತು. ಅಷ್ಟರಲ್ಲಿ ರಿಹಾನ್‌ನ ಬಳಿ ಅದೇನೋ ಸರಿದಂತಾಯಿತು. ನೋಡಿದರೆ ರಿಹಾನ್ ಕುಳಿತಿದ್ದ ಸಿಮೆಂಟು ಕಟ್ಟೆಯ ಕೊನೆಗೆ ನಾಗರ ಹಾವೊಂದು ಹೆಡೆಯೆತ್ತಿ ನಿಂತಿದೆ! ರಿಹಾನ್‌ಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಧ್ವನಿಯೊಂದು ಗಂಟಲವರೆಗೆ ಬಂತಾದರೂ ಅಲ್ಲೇ ನುಂಗಿಕೊಳ್ಳಬೇಕಾದ ಉಭಯ ಸಂಕಟ. ಹಾಗೆಯೇ ಹಾವನ್ನು ನೋಡುತ್ತಾ ಸದ್ದಾಗದಂತೆ ಕುಳಿತ. ಹಾವು ಹೆಡೆಯೆತ್ತಿ ಗಾಳಿಯಲ್ಲಿ ಗೋಣು ಆಡಿಸಿತು. ಸುಮಾರು ಹೊತ್ತು ಹಾವನ್ನೇ ನೋಡುತ್ತಾ ಸಮಯ ಕಳೆದದ್ದೇ ತಿಳಿಯಲಿಲ್ಲ. ಮರುಕ್ಷಣ ರಿಹಾನ್‌ಗೆಪ್ರೇತದ ನೆನಪಾಯಿತು. ತಿರುಗಿ ನೋಡಿದವನಿಗೆ ಕಂಡಿದ್ದು ಖಾಲಿ ಶಿಲುಬೆ ಮತ್ತು ಹೂವಿನಗುಚ್ಛ ಮಾತ್ರ! ತಿರುಗಿ ಹಾವಿನ ಕಡೆ ನೋಡಬೇಕಾದರೆ ಹಾವು ಹೊರಟು ಹೋಗಿ ತರಗೆಲೆಯ ಮಧ್ಯೆ ಬಾಲ ಮರೆಯಾಗುವುದು ಮಾತ್ರ ಕಂಡಿತು. ರಿಹಾನ್ ಅರೆಕ್ಷಣ ಬೆಚ್ಚಿಬಿದ್ದ. ತಾನು ನೋಡುತ್ತಿರುವುದೆಲ್ಲಾ ನಿಜವೇ, ಸಮಜಾಯಿಷಿ ನಡೆಸುತ್ತಿರಬೇಕಾದರೆ ನೆತ್ತಿಯಿಂದ ಹರಿದ ಬೆವರ ಹನಿಗಳು ಕನ್ನಡಕಕ್ಕೆ ಹರಿದು ದೃಷ್ಟಿಯ ಮಬ್ಬಾಯಿತು‌. ಇನ್ನು ಇಲ್ಲಿದ್ದರೆ ಕ್ಷೇಮವಲ್ಲವೆಂದೆನಿಸಿ ಈ‌ ದಿನಕ್ಕೆ ಇಷ್ಟೇ ಸಾಕೆಂದು ಬೇಗಬೇಗನೆ ಹೊರಟು ಬಂದ. ಬಸ್ಸೇರಿದವನೇ, ಸೀದಾ ರೂಂಗೆ ಹೋಗಿ ಬಾಗಿಲು ಹಾಕಿಕೊಂಡ. ಜೋರಾಗಿ ಫ್ಯಾನ್ ಹಾಕಿ ಒಂದು ಬಾರಿ ತನ್ನ ಕಣ್ಣ ಮುಂದೆ ಬಂದ ಪ್ರೇತ, ಹಾವಿನ ಆಗಮನ ನಿರ್ಗಮನವನ್ನು ಅವಲೋಕಿಸಿದ. ಅವೆರಡೂ ಒಂದೇ ಆಗಿದ್ದವೋ, ಅಥವಾ ಕಾಕತಾಳೀಯವಾಗಿತ್ತೋ ಯಾವ ಪ್ರಶ್ನೆಗೂ ಆತನ ಬಳಿ ಉತ್ತರವಿರಲಿಲ್ಲ. ಸುಮಾರು ಹೊತ್ತು ಬೆವರುತ್ತಿದ್ದವನಿಗೆ ನಿದ್ರೆಯ ಜೊಂಪು ಆವರಿಸಿತು. ಗಾಢ ‌ನಿದ್ದೆ. ಎಚ್ಚರವಾಗುವ ಹೊತ್ತಿಗೆ ಸೂರ್ಯ ಮೈದಾ ಮೆತ್ತಿದ ಬೋಂಡಾದಂತೆ ಇನ್ನೇನು ಸಾಗರ ಬಾಣಲೆಯ ಎಣ್ಣೆಗಿಳಿಯಲು ತಯ್ಯಾರಾಗಿದ್ದ‌‌. ರಿಹಾನ್‌ಗೆ ಅದೊಂದು ಭೀತಿಯ ಜೊತೆಗೆ ಕುತೂಹಲವೂ ಅತಿಯಾಯ್ತು. ಆದರೆ ಆ ರಾತ್ರಿ ಪೂರ್ತಿ ಜ್ವರವೇರಿತ್ತು. ಮೂರು ದಿನಗಳ ತರುವಾಯ ಸುಧಾರಿಸಿಕೊಂಡು ಕಥೆ ಮುಗಿಸುವ ಛಲದಿಂದಲೋ, ಪ್ರೇತದ ಕುತೂಹಲದಿಂದಲೋ ರಿಹಾನ್ ಮತ್ತೆ ಲೇಡಿಹಿಲ್‌ಗೆ ಬಂದ. ಅದೇ ಶಾಂತ ಸೆಮಿಟರಿ. ತನ್ನ ಕೊಂದವರಿಗಾಗಿ ಪ್ರಾರ್ಥಿಸುವ ಕ್ರಿಸ್ತನ ವಿಗ್ರಹ ಮತ್ತು ಶಿಲುಬೆ. ಕೆಳಗೆ ರಾತ್ರಿ ಹೊತ್ತಿಸಿಟ್ಟು ಕರ‍್ರಗಾದ ಹಣತೆ ಆಗೊಮ್ಮೆ ಈಗೊಮ್ಮೆ ಗಾಳಿಯ ಜೊತೆ ಸಾವು ಬದುಕಿನ ಹೋರಾಟ ನಡೆಸುತ್ತಿತ್ತು. ರಿಹಾನ್ ಬಾಗಿಲು ತೆರೆದು ಸ್ಮಶಾನದೊಳಗೆ ಬಂದ‌. ಮತ್ತದೇ ಗಾಢ ಮೌನ. ಆನಾಥ ಬಿದ್ದಿರುವ ಆ ಗೋರಿಯ ಮೇಲಿನ ಹೂಗುಚ್ಫ. ಕುತೂಹಲ ತಡೆಯಲಾಗದೆ ಮೆಲ್ಲಗೆ ಆ ಗೋರಿಯೆಡೆಗೆ ನಡೆದ. ಅದರ ಬಳಿಗೆ ನಡೆಯುತ್ತಿದ್ದಂತೆ ಮತ್ತೆ ಯಾರೋ ಹಿಂಬಾಲಿಸಿದಂತಾಯಿತು. ತಿರುಗಿ ನೋಡಿದರೆ ಯಾರೂ ಇರಲಿಲ್ಲ. ಹಾಲಿವುಡ್ ಸಿನಿಮಾದಂತೆ ಭರ‍್ರನೆ ಗಾಳಿಯೊಂದು ಬೀಸಿ ಬಂತು. ಗೋರಿಯ ಮೇಲಿಟ್ಟ ಹೂಗುಚ್ಫ ಜಾರಿ ಕೆಳಗೆ ಬಿತ್ತು, ತರಗೆಲೆಗಳೆಲ್ಲಾ ಭೋರೆಂದು ಗಾಳಿಗೆ ಹಾರಿದವು. ನಡುಗುವ ಕಾಲಿನೊಂದಿಗೆ ರಿಹಾನ್ ತಥಾಕಥಿತ ಗೋರಿಯ ಸಮೀಪಿಸಿದ. ‘ಡೇವಿಡ್’ ಎಂಬ ಹೆಸರು ಕೆಳಗೆ 1994–2019 ಕಾಲಾವಧಿ ಬರೆಯಲಾಗಿತ್ತು. ‘ಅಯ್ಯೋ, ಸಣ್ಣ ಪ್ರಾಯದ ಹುಡುಗ’ ಹೃದಯವೊಮ್ಮೆ ಚೀರಿತು. ಅಲ್ಲಿಂದ ಮತ್ತೆ ತಿರುಗಿ ಬಂದು ಸಿಮೆಂಟು ಕಟ್ಟೆಯಲ್ಲಿ ಕುಳಿತು ಕಥೆ ಬರೆಯಲು ಕುಳಿತ. ನಿನ್ನೆಯ ಅನುಭವವೇ ರೋಚಕ ಕಥೆಯಾಗಲು ಸಾಕೆನಿಸಿದಂತಿತ್ತು. ಅಲ್ಲಿ ಅವನ ಸುತ್ತ ಆಗೊಮ್ಮೆ ಈಗೊಮ್ಮೆ ಗಲಾಟೆ ಮಾಡುತ್ತಿದ್ದ ಪಿಕಳಾರ, ಗುಬ್ಬಚ್ಚಿಗಳ ಗುಂಪು ಬಿಟ್ಟರೆ ಮತ್ತೇನು ಇರಲಿಲ್ಲ. ರಿಹಾನ್ ಕಥೆ ಮುಂದುವರಿಸಿದ. ಹೊತ್ತು ಮೀರಿತು‌. ಮೊನ್ನೆಯ ಅದೇ ಸಮಯಕ್ಕೆ ಸರಿಯಾಗಿ ಕಬ್ಬಿಣದ ಗೇಟೆಳೆದ ಸದ್ದು ಕೇಳಿತು. ರಿಹಾನ್ ಮತ್ತೆ ಬೆಚ್ಚಿದ. ಬಾಗಿಲ ಬಳಿಗೆ ನೋಡುತ್ತಿದ್ದ. ಮೊನ್ನೆ ಕಂಡ ಅದೇ ಹೆಣ್ಣಿನಾಕೃತಿ. ಆ ವ್ಯಕ್ತಿಯ ಒಂದೊಂದು ಹೆಜ್ಜೆಯೂ ಭೀತಿ ಹುಟ್ಟಿಸಿತು. ನೇರವಾಗಿ ನಡೆದು ಬಂದ ಆ ವ್ಯಕ್ತಿ ಅದೇ ಗೋರಿಯ ಬಳಿ ಬಂತು. ಸ್ವಲ್ಪ ಹೊತ್ತಿನಲ್ಲಿ ಬಿಕ್ಕಿ ಬಿಕ್ಕಿ ಅಳುವ ಧ್ವನಿ. ರಿಹಾನ್ ಕಣ್ಣುಗಳು ಅತ್ತ ಕಡೆಗೆ ಹೊರಳಿತು. ನೀಳ ಕೂದಲು ಕೆಂಪು ಬ್ಯಾಗೊಂದು ಹಿಂಬದಿ ತೂಗುತ್ತಿತ್ತು. ರಿಹಾನ್ ಆ ಹೆಣ್ಣಿನಾಕೃತಿಗೆ ಕಾಣದಂತೆ ಮರದ ಅಡ್ಡಲಾಗಿ ಕುಳಿತ. ಸ್ವಲ್ಪ ಹೊತ್ತು ಅಳುತ್ತಾ, ಗೋರಿಯ ಮೇಲೆ ಹೂವಿರಿಸಿ ಅದು ತಿರುಗಿ ಹೊರಟಿತು. ರಿಹಾನ್ ಅಪ್ರತಿಭನಾಗಿ ದೂರದಿಂದಲೇ ನೋಡುತ್ತಾ ನಿಂತಿದ್ದ, ಅಷ್ಟರಲ್ಲೇ ಅವನ ಕಥೆಗೇನೋ ತಿರುವು ಸಿಕ್ಕಂತಾಯಿತು. ಅವನ ಖುಷಿಗೆ ಪಾರವಿರಲಿಲ್ಲ. ಅವನ ಉದ್ವೇಗ ಎಷ್ಟಿತ್ತೆಂದರೆ ಅವನ ಬಾಯಿಯಿಂದ ‘ವಾವ್’ ಎಂಬ ಸದ್ದು ಅವನಿಗರಿವಿಲ್ಲದೆ ಹೊರಟಿತು. ಆ ಸದ್ದು ಬಂದ ಮರುಕ್ಷಣವೇ ಹೆಣ್ಣಿನಾಕೃತಿ ಬೆಚ್ಚಿ ಹಿಂದಿರುಗಿತು, ಆ ಹಾವ ಭಾವ ಬಹಳ ಹೆದರಿದಂತಿತ್ತು. ಅಳು ನಿಲ್ಲಿಸಿ ಕಣ್ಣೊರೆಸುತ್ತಾ ಮತ್ತೆ ಬಂದ ದಾರಿಯಲ್ಲೇ ಬೇಗಬೇಗನೆ ನಿರ್ಗಮಿಸಿತು. ರಿಹಾನ್ ಆ ಹೆಣ್ಣಾಕೃತಿ ಮರೆಯಾಗುವುದು ನೋಡುತ್ತಾ ಕುಳಿತ. ಅವನ ಕಥೆ ಅದಾಗಲೇ ಅದ್ಭುತವಾಗಿ ತಿರುವು ಪಡೆದುಕೊಂಡು ಬಿಟ್ಟಿತ್ತು. ತುಂಬಿದ ಸಭಾಂಗಣ. ರಾಜ್ಯ ಮಟ್ಟದ ಕಥಾಸ್ಪರ್ಧೆಯ ಫಲಿತಾಂಶ ಇನ್ನೇನು ಹೊರಬರುವುದರಲ್ಲಿತ್ತು. ಪ್ರಕಟಣೆಗೆ ನಿಮಿಷಗಳಷ್ಟೇ ಬಾಕಿ. ಆಯೋಜಕರೊಬ್ಬರು ವೇದಿಕೆಯ ಮೇಲೆ ಭಾಷಣ ಪೀಠಕ್ಕೆ ಬಂದು ನಿಂತರು. ‘ನಾವು ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನೇರ್ಪಡಿಸಿದ್ದೆವು. ಇದೀಗ ವಿಜಯಿಗಳ ಹೆಸರನ್ನು ಪ್ರಕಟಿಸಲಿದ್ದೇವೆ’ ಮೊದಲನೆಯದಾಗಿ ಸಮಾಧಾನಕರ ಬಹುಮಾನ ಪಡೆದ ಇಪ್ಪತ್ತೆರಡು ಕಥೆ ಮತ್ತು ಹೆಸರುಗಳನ್ನು ಓದಿದರು. ರಿಹಾನ್ ಉತ್ಸುಕನಾಗಿಯೇ ಕೇಳಿಸಿಕೊಳ್ಳುತ್ತಿದ್ದ‌, ತನ್ನ ಹೆಸರು ಅದರಲ್ಲಿ ಬರಬಹುದೆಂಬುವಷ್ಟು ಅವನ ಕಥೆಯ ಮೇಲೆ ಅವನಿಗೆ ಧೈರ್ಯವಿತ್ತು. ಅದರಲ್ಲಿ ಆತನ ಹೆಸರು ಬಾರದಾದಾಗ ಸ್ವಲ್ಪ ಹಿಂಜರಿಕೆಯಾಯಿತು. ತೃತೀಯ ಬಹುಮಾನವೂ ಆಯಿತು, ದ್ವಿತೀಯ ಸ್ಥಾನಿಯ ಹೆಸರೂ ಹೇಳಿದರು. ಇನ್ನು ನನಗೇನು ಲಭಿಸೀತೆಂದು ರಿಹಾನ್‌ಗೆ ದೊಡ್ಡ ನಿರಾಶೆ. ಅಷ್ಟರಲ್ಲೇ ಆಯೋಜಕರು ‘ಈ ಕಥಾ ಸ್ಪರ್ಧೆಯಲ್ಲಿ ಇಬ್ಬರು ಪ್ರಥಮ ಸ್ಥಾನ ಗಳಿಸಿದ್ದಾರೆ.‌ ಕಾಕತಾಳೀಯವೆಂದರೆ ಇಬ್ಬರ ಕಥೆಯೂ ಒಂದೇ ತೆರನಾದದ್ದು, ಅಷ್ಟೇ ರೋಚಕವಾದದ್ದು. ಒಂದೇ ಕಾಲ, ಒಂದೇ ಸಮಯದಲ್ಲಿ ನಡೆದದ್ದು ಅನ್ನುವುದೇ ವಿಶೇಷ. ಕಥಾ ಸ್ಪರ್ಧೆಯ ಪ್ರಥಮ ಸ್ಥಾನ ರಿಹಾನ್ ಅವರ ‘ಶಿಲುಬೆ’ ಹಾಗೂ ಮಾರ್ತಾ ಡೇವಿಡ್ ಅವರ ‘ಸ್ಮಶಾನ’ಕ್ಕೆ ದಕ್ಕಿದೆ’ ಎಂದು‌ ಘೋಷಿಯೇ ಬಿಟ್ಟರು. ರಿಹಾನ್ ವೇದಿಕೆಗೆ ಹೊರಡಲು ಎದ್ದು ನಿಂತ. ಮತ್ತೂ ಆತನಿಗೆ ಕುತೂಹಲ. ಅಲ್ಲ ಈ ‘ಮಾರ್ತಾ ಡೇವಿಡ್’ ಯಾರಿರಬಹುದು. ಸಭಿಕರ ಮಧ್ಯೆ ಆ ಬಿಳಿ ಸೀರೆಯ ಹೆಣ್ಣಾಕೃತಿ ಎದ್ದು ನಿಂತಿತು. ಹೌದು ಅದೇ ಬಿಳಿ ಸೀರೆ‌, ಬೆನ್ನಿಗೆ ಹಾಕಿದ್ದ ಅದೇ ಕೆಂಪು ಬ್ಯಾಗ್‌, ಅದೇ ನೀಳ ಕೂದಲು. ರಿಹಾನ್ ದಿಗ್ಭ್ರಮೆಯಿಂದ ವೇದಿಕೆಗೆ ಹೆಜ್ಜೆ ಹಾಕಿದ. ತುಂಬಿದ ವೇದಿಕೆಯ ಕರತಾಡನ ಕಿವಿಗಡಚಿಕ್ಕುತ್ತಿತ್ತು. ತಕ್ಷಣ ಅವಳೂ ಹಿಂತಿರುಗಿ ನೋಡಿದಳು. ಇಬ್ಬರೂ ಒಂದು ಕ್ಷಣಕ್ಕೆ ಕಲ್ಲಾದರು. ತಮ್ಮ ಕಥೆಗಳಲ್ಲಿ ಸತ್ತು ಹೋಗಿದ್ದ ನಾಯಕರನ್ನು ಅವರಿಬ್ಬರೂ ಜೀವಂತವಾಗಿ ನೋಡುತ್ತಿದ್ದರು

author- ಮುನವ್ವರ್ ಜೋಗಿಬೆಟ್ಟು

courtsey:prajavani.net

https://www.prajavani.net/artculture/short-story/kathaspardhe-678673.html

Leave a Reply