ನಿರೂಪ

ನಿರೂಪ
ಮೂಲ :  ಆರುಂಧತಿ ರಾಯ್ (ದಿ ಬ್ರೀಫಿಂಗ್)
ಕನ್ನಡಕ್ಕೆ :   ರವೀಂದ್ರ ಆರ್. ಕೊಪ್ಪರ್, ಗದಗ್

ನನ್ನ ಶುಭಾಶಯಗಳು. ಇಂದು ನಾನು ನಿನ್ಮೊಡನೆ ಇಲ್ಲಿಲ್ಲ ಎಂಬುದು ಖೇದಕರವಾದರೂ, ಇಲ್ಲದಿರುವುದೂ ಸರಿಯಾದುದೇನೋ. ಇಂತಹ ಸನ್ನಿವೇಶದಲ್ಲಿ ನಮ್ಮ ಅಂತರಂಗವನ್ನೆಲ್ಲ ಬಯಲು ಮಾಡದಿರುವುದೇ ಕ್ಷೇಮಕರ, ಪರಸ್ಪರರಲ್ಲೂ ಅದು ಸಲ್ಲದು.

ನೀವು ನಿಮ್ಮೆದುರಿನ ರೇಖೆಯನ್ನು ದಾಟಿ ವರ್ತುಲದಲ್ಲಿ ಅಡಿಯಿರಿಸಿದರೆ ನನ್ನ ಮಾತನ್ನು ಇನ್ನಿಷ್ಟೂ ಸ್ಪಷ್ಟವಾಗಿ ಆಲಿಸಬಲ್ಲಿರಿ. ನಿಮ್ಮ ಬೂಟುಗಳಿಗೆ ಖಡುವು ತಗಲದಂತೆ ನೋಡಿಕೊಳ್ಳಿ.

ಇದೊಂದು ಚಿಕ್ಕ ರೂಪಕ ಕಥೆ. ಪರಿಸರವಾದಿ ಮತ್ತು ಬ್ರೂಕರ್ ಪ್ರಶಸ್ತಿ ವಿಜೇತೆ ಆರುಂಧತಿ ರಾಯ್ ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಕೃತಿ ರಚನೆಯ ಹನ್ನೊಂದು ವರ್ಷಗಳ ನಂತರದಲ್ಲಿ ಬರೆದಿರುವ ‘ದಿ ಬ್ರೀಫಿಂಗ್’ ಮನೋಜ್ಞ ಕಿರುಬರಹ. ಕಳೆದುಹೋದ ಚಿನ್ನ ಹಾಗೂ ಆಲ್ಪ್ಸ್ ಹಿಮಪರ್ವತ ಪ್ರದೇಶದಲ್ಲಿ ಹಿಮಸಂಬಂಧಿ ಸ್ಪರ್ಧೆ ಮೊದಲಾದ ಸಂಗತಿಗಳನ್ನಾಧರಿಸಿದಂತೆ ಹವಾಮಾನ ಬದಲಾವಣೆ, ಭಯಗ್ರಸ್ತ ಸಂಘರ್ಷ, ಸಾಂಸ್ಥಿಕ ಪ್ರಭುತ್ವ ಕುರಿತ ಮಾರ್ಮಿಕ ನೀತಿ ಕಥೆಯಿದಾಗಿದೆ. ಎಂದೂ ದಾಳಿಗೆ ತುತ್ತಾಗದಿರುವ ಕೋಟೆ ಬಂಡವಾಳಶಾಹಿತ್ವದ ಪ್ರತಿಮೆಯಾಗಿದೆ. ವಾಸಸ್ಥಾನ, ಲಿಂಗದ ಸ್ಪಷ್ಟತೆಯಿಲ್ಲದ ಓರ್ವ ಯುದ್ಧಪ್ರಿಯ ಭ್ರಾಂತ ಸೇನಾಧಿಪತಿ ತನ್ನ(ಆತನ/ಆಕೆಯ) ಸಂಗಾತಿಗಳನ್ನು ನಿಗೂಢ ಉದ್ದಿಷ್ಟ ಕಾರ್ಯಕ್ಕೆ ಅಣಿಗೊಳಿಸಲು ನೀಡುವ ನಿರೂಪವಿದಾಗಿದೆ.

ನಿಮ್ಮಲ್ಲಿ ಅನೇಕರು ದೂರದ ಪ್ರದೇಶಗಳಿಂದ ಇಲ್ಲಿಗೆ ಬಂದಿರುವಿರಿ ಎಂಬುದ ನಾ ಬಲ್ಲೆ. ಇಲ್ಲಿ ನೋಡಬೇಕಾದುದನ್ನೆಲ್ಲ ನೀವು ನೋಡಿದಿರಾ ? ನೆಲದಡಿ ಕಟ್ಟಿದ ಬತೇರಿಯೊಳಗಿನ ತುಪಾಕಿಗಳನ್ನು, ನೆಲದ ಕುಳಿಗಳಲ್ಲಿಯ ಮದ್ದುಗುಂಡುಗಳ ಉಗ್ರಾಣಗಳನ್ನು ? ಕೆಲಸಗಾರರ ಶವಗಳನ್ನು ಹೂಳುವ ಸಾಮೂಹಿಕ ಗುಂಡಿಯನ್ನು ನೋಡಿದಿರಾ ? ಸಮಸ್ತ ಯೋಜನೆಗಳನ್ನು ಚೆನ್ನಾಗಿ ಪರಿಶೀಲಿಸಿದ್ದೀರಾ ? ಈ ಕೋಟೆ ಸುಂದರವಾಗಿದೆ ಎಂದು ನೀವು ಹೇಳಬಹುದಾ ? ಬೆಟ್ಟಗಳ ಅಂಚಿನಲ್ಲಿ ಪ್ರತಿಭಟನಾತ್ಮಕ ಸಿಂಹದಂತೆ ಈ ಕೋಟೆ ಪವಡಿಸಿದೆ ಎಂದು ಅವರು ಹೇಳುತ್ತಾರೆ. ನಾನಂತೂ ಅದನ್ನು ನೋಡಿಲ್ಲ. ಸೌಂದರ್ಯೋಸ್ಕರ ಇದನ್ನು ಕಟ್ಟಲಾಗಿಲ್ಲ ಎಂದು ಮಾರ್ಗದರ್ಶಿ ಪುಸ್ತಕ ನಿರೂಪಿಸಿದೆ. ಆದರೆ ಸೌಂದರ್ಯವು ಕರೆಯದೆ ಬರುವಂತಹದು, ಅಲ್ಲವೇ? ಸೂರ್ಯಪ್ರಕಾಶವು ಪರದೆಗಳ ಸಂದುಗಳಲ್ಲಿ ಇಣುಕಿ ಬರುವಂತೆ ಸೌಂದರ್ಯ ಕೂಡ ವಸ್ತುಗಳ ಮೇಲೆ ತಾನಾಗಿಯೆ ಎರಗುತ್ತದೆ. ಅಂದಹಾಗೆ ಈ ಕೋಟೆಯ ಪರದೆಗಳಲ್ಲಿ ಯಾವುದೇ ರಂಧ್ರ, ಬಿರುಕುಗಳಿಲ್ಲ. ಇದು ಎಂದೂ ಯಾವ ದಾಳಿಗೂ ಒಳಗಾಗದೆ ಇರುವ ಕೋಟೆ. ಇದರ ನಿಷೇಧಕ ಗೋಡೆಗಳು ಸೌಂದರ್ಯಕ್ಕೂ ಅಡ್ಡಿಯನ್ನುಂಟುಮಾಡಿ ಹೊರಹಾಕಿರಬಹುದೇ ?
ಸೌಂದರ್ಯ – ಇದು ಕುರಿತು ನಾವು ಹಗಲುರಾತ್ರಿ, ದಿನವಿಡಿ ಮಾತಾಡಬಹುದು. ಸೌಂದರ್ಯ ಎಂದರೆ ಏನೀದು, ಏನೀದಲ್ಲ ? ತೀರ್ಮಾನಿಸುವ ಹಕ್ಕು ಯಾರಿಗುಂಟು ? ಜಗತ್ತಿನ ನಿಜವಾದ ಪಾರುಪತ್ಯಗಾರರಾರು ? ಅಥವಾ ನಿಜವಾದ ಜಗತ್ತಿನ ಪಾರುಪತ್ಯಗಾರರು ಯಾರು ಎಂದು ಅನ್ನೋಣವೇ ? ನಾವು ಕಲ್ಪಿಸಲಾಗದ, ಮಾಪನಮಾಡಲಾಗದ, ವಿಶ್ಲೇಷಿಸಲಿಕ್ಕಾಗದ ವಸ್ತುಗಳು ವಾಸ್ತವವನ್ನು ಪ್ರತಿನಿಧಿಸುವವೇ ಮತ್ತು ಪುನರಸೃಷ್ಟಿ ಮಾಡುವವೇ ? ವಾಸ್ತವಿಕ ಸಂಗತಿಗಳು ಆಸ್ತಿತ್ವದಲ್ಲಿರುವವೇ ? ಅಥವಾ ಎಂದೂ ದಾಳಿಗೀಡಾಗದ ಕೋಟೆಯೊಳಗಿನಂತೆ ನಮ್ಮ ಮನಸ್ಸಿನ ಒಳಭಿತ್ತಿಗಳಲ್ಲಿರುತ್ತವೆಯೇ ? ನಮ್ಮ ಕಲ್ಪನೆಗಳು ಸುಳ್ಳಾದಾಗ ಈ ಜಗತ್ತು ಸುಳ್ಳಾಗಬಹುದೇ? ಅದು ನಮಗೆ ತಿಳಿಯುವುದಾದರೂ ಹೇಗೆ ?
ಸುಂದರವಾಗಿರಬಹುದಾದ ಇಲ್ಲವೆ ಸುಂದರವಾಗಿಲ್ಲದಿರಬಹುದಾದ ಈ ಕೋಟೆ ಎಷ್ಟ್ಟು ದೊಡ್ಡದಿದೆ ? ಎತ್ತರ ಪರ್ವತದಡಿ ಕಟ್ಟಲಾದ ಕೋಟೆಗಳಲ್ಲಿ ಇದು ಅತ್ಯಂತ ದೊಡ್ಡದು ಎಂದು ಹೇಳಲಾಗಿದೆ. ದೈತ್ಯಕಾರದ್ದು ಎಂದು ನೀವು ಅನ್ನುವಿರಾ ? ಹಾಗೆಂದು ಹೇಳುವುದು ನಮಗೆ ಕಷ್ಟವಾಗುತ್ತದೆ. ಇದರ ಅಭೇಧ್ಯ ಸಾಮಥ್ರ್ಯಗಳನ್ನು ಗುರುತಿಸುವ ಕಾರ್ಯದಿಂದ ಆರಂಭಿಸೋಣವೇ ? ಇದು ಎಂದೂ ದಾಳಿಗೀಡಾಗದಿದ್ದರೂ (ಅಥವಾ ಅವರು ಹಾಗೆ ಹೇಳುತ್ತಾರೆಯಾದರೂ) ಇದರ ನಿರ್ಮಾತೃಗಳು ಹೇಗೆ ಜೀವಿಸಿದ್ದಿರಬಹುದು ಹಾಗೂ ದಾಳಿಗೀಡಾಗಬಹುದಾದದ್ದನ್ನು ಹೇಗೆ ಕಲ್ಪಿಸಿಕೊಂಡಿರಬೇಕು ? ದಾಳಿಯಾಗಬಹುದೆಂದು ಆವರು ನಿರೀಕ್ಷಿಸಿರಲೇಬೇಕು. ದಾಳಿಗೀಡಾದಂತೆ ಕನಸು ಕಂಡಿರಲೇಬೇಕು. ತಾವು ಯಾರನ್ನು ಕಂಡು ಅಷ್ಟೊಂದು ಭೀತಿಪಟ್ಟುಕೊಂಡಿದ್ದರು ಎಂಬುದನ್ನು ಪ್ರತ್ಯೇಕವಾಗಿ ಹೇಳುವವರೆಗೂ, ಭೀತಿ ಮತ್ತು ಬಯಕೆ ನಡುವಿನ ವ್ಯತ್ಯಾಸ ತಿಳಿಯದಷ್ಟು ಸಮಯವೂ ಆವರು ತಮ್ಮ ಶತೃಗಳ ಮನಸ್ಸು ಮತ್ತು ಹೃದಯಗಳಲ್ಲಿ ತಮ್ಮನ್ನು ತೂರಿಸಿಕೊಂಡಿರಲೇಬೇಕು. ತಮ್ಮ ಅಂತರಾಳದ ತೀಕ್ಷ್ಣ ಪೀಡೆಯನ್ನು ಅರಿತ ಮೇಲೆಯೆ ಅವರು ಎಲ್ಲ್ಲ ಸಂಭಾವ್ಯ ನಿಟ್ಟುಗಳಿಂದ ಹರಿದುಬರಬಹುದಾದ ದಾಳಿಗಳನ್ನು ಕಲ್ಪಿಸಿಕೊಂಡಿರಬೇಕು. ಭದ್ರಕೋಟೆಯ ನಿರ್ಮಾಣದಲ್ಲಿ ಅವರು ಅನುಸರಿಸಿದ ಕರಾರುವಕ್ಕಾದ ತಂತ್ರ, ಕೌಶಲಗಳನ್ನು ಗಮನಿಸಿದರೆ ತಾವು ಕಲ್ಪಿಸಿಕೊಂಡ ದಾಳಿಗಳೆಲ್ಲವೂ ನಿಜವಾದವುಗಳೇ ಎಂಬಂತೆ ಅವರು ಭದ್ರತೆಯ ಎಲ್ಲ ಮುನ್ನೆಚ್ಚರಿಕೆಗಳನ್ನು ಕೋಟೆ ನಿರ್ಮಾಣದಲ್ಲಿ ನಿರ್ವಹಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲವಾದಲ್ಲಿ ಇಂತಹ ಯೋಜಿತ ರಕ್ಷಣಾಕೋಟೆಯನ್ನು ಅವರು ನಿರ್ಮಿಸಲು ಸಾಧ್ಯವಿತ್ತೇ ? ಭೀತಿಯೇ ಅದನ್ನು ರೂಪಿಸಿರಲು ಸಾಕು. ಭಯಗ್ರಸ್ತತೆ ಅವರ ಕಣಕಣಗಳಲ್ಲಿ ಹುದುಗಿಕೊಂಡಿರಲೇಬೇಕು. ವಾಸ್ತವದಲ್ಲಿ ಇಂತಹ ಭಾವಸಮಷ್ಟಿಯಲ್ಲೇ ನಿರ್ಮಾಣಗೊಂಡದ್ದಲ್ಲವೆ ಈ ಕೋಟೆ ? ಗಾಬರಿ, ಕಳವಳ, ಭಯಗ್ರಸ್ತತೆ, ಮುತ್ತಿಗೆಗೀಡಾಗಿದೆ ಎಂಬ ಕಲ್ಪನೆಗೆ ದುರ್ಬಲ ಕುರುಹು ಇದುವೇ ? ರಕ್ಷಿಸಬೇಕಾದುದೆಲ್ಲವನ್ನು ಸಂಗ್ರಹಿಸಲೆಂದೇ ಇದನ್ನು ಕಟ್ಟಲಾಯಿತು ಎಂದು ದಾಖಲೆಯಲ್ಲಿ ಹೇಳಲಾಗಿದೆ. ಅದು ಬೇರೆ ಏನನ್ನೊ ಹೇಳಿರುವಂತಹದು. ಇಲ್ಲಿ ಅವರು ಸೈನಿಕರನ್ನು ಜಮಾಯಿಸುತ್ತಿದ್ದರೇ? ಅವರು ರಕ್ಷಿಸಬಯಸಿದ್ದೇನು? ಮಾರ್ಗದರ್ಶಿ ಪುಸ್ತಕ ಹೇಳುವಂತೆ ಶಸ್ತ್ರಾಸ್ತ್ರ, ಚಿನ್ನ, ನಾಗರಿಕತೆ ಮೊದಲಾದವುಗಳನ್ನೇ ?

ಈ ಕೋಟೆ ಎಂದೂ ದಾಳಿಗೀಡಾಗದೆ ಉಳಿದಿದ್ದರೂ ‘ಇದು ದಾಳಿಗೀಡಾಗಬಹುದು’ ಎಂದು ಯೋಚಿಸುತ್ತಲೇ, ದಾಳಿಯ ನಿರೀಕ್ಷೆಯಲ್ಲೇ ಇದನ್ನು ನಿರ್ಮಿಸಿದವರು ಬದುಕಿದ್ದನ್ನು ಕಲ್ಪಿಸಿಕೊಳ್ಳಿ. ಕೋಟೆ ಎಂದರೆ ಇಂತಹ ಭಾವವೇ ಎಂಬರ್ಥವೇ ………………… ಗಾಬರಿ, ಕಳವಳದ ದ್ಯೋತಕವೇ ?

ಯುರೋಪಿನ ಈಗಿನ ಶಾಂತಿ-ಸಮೃದ್ಧಿ ಕಾಲದಲಿ ಈ ಕೋಟೆಯನ್ನು ಉದಾತ್ತ ಉದ್ದೇಶರಾಹಿತ್ಯದ ಅಥವಾ ಆದಿಭಾತಿಕ ಧ್ಯೇಯಾದರ್ಶದ ಸಂಕೇತವೆಂಬಂತೆ ಪ್ರದರ್ಶನ ವಸ್ತುವಾಗಿ ಬಳಸಲಾಗುತ್ತಿದೆ. ನಾಗರಿಕತೆಯ ಪರಮೋಚ್ಚ ಅಪೇಕ್ಷೆಯೇ ಕಲೆ. ಕಲೆಯೇ ಚಿನ್ನ ಎಂದು ಹೇಳಲಾಗುತ್ತಿದೆ.
ನೀವು ಕ್ಯಾಟಲಾಗ್ ನ್ನು  (ವಿಷಯಪಟ್ಟಿ) ಕೊಂಡಿರಬಹುದೆಂದು ಭಾವಿಸುತ್ತೇನೆ. ಅದನ್ನು ನೀವು ಕೊಳ್ಳಲೇಬೇಕು, ತೋರಿಕೆಗಾದರೂ ಸೈ.
ಈ ಕೋಟೆಯಲ್ಲಿ ಚಿನ್ನ ಸಂಗ್ರಹಿಸಿಟ್ಟಿರುವ ಸಾಧ್ಯತೆಗಳಿವೆ. ಅಡಗಿಸಿಟ್ಟ ಚಿನ್ನ. ಅದರಲ್ಲಿ ಬಹುಪಾಲನ್ನು ಈಗಾಗಲೇ ಹೊರತೆಗೆಯಲಾಗಿದೆ. ಕೆಲಭಾಗ ಕಳುವಾಗಿ ಹೋಗಿದೆ. ಆದರೆ ಇನ್ನೂ ಬಹಳಷ್ಟು ಪ್ರಮಾಣದಲ್ಲಿ ಚಿನ್ನ ಇಲ್ಲಿದೆ ಎಂದು ಹೇಳಲಾಗುತ್ತಿದೆ. ಎಲ್ಲರೂ ಅದರ ಶೋಧನೆಯಲ್ಲಿ ತೊಡಗಿದ್ದಾರೆ. ಗೋಡೆಗಳನ್ನು ಕೆದರಿ, ಗೋರಿಗಳನ್ನು ಬಗೆದು ನೋಡುವ ಯತ್ನಗಳೂ ನಡೆದಿವೆ. ಇಂತಹ ಜನರ ತರಾತುರಿ ನಿಮ್ಮ ಗಮನಕ್ಕೆ ಬಂದಿರಲು ಸಾಕು.
ಈ ಕೋಟೆಯಲ್ಲಿ ಚಿನ್ನವಿದೆ ಎಂಬುದು ಅವರಿಗೆ ತಿಳಿದಿದೆ. ಹಿಮಪರ್ವತಗಳ ಮೇಲೆ ಹಿಮವೇ ಇಲ್ಲ ಎಂಬುದನ್ನೂ ಅವರು ಬಲ್ಲರು. ಹಿಮವನ್ನು ಖರೀದಿಸಲು ಅವರಿಗೆ ಚಿನ್ನ ಬೇಕಿದೆ.
ಈ ಪ್ರದೇಶದವರಾದ ನಿಮ್ಮಲ್ಲಿ ಕೆಲವರು ಹಿಮಯುದ್ಧಗಳ ಬಗೆಗೆ ತಿಳಿದುಕೊಳ್ಳಲೇಬೇಕು. ಈ ಪ್ರದೇಶಕ್ಕೆ ಸಂಬಂಧಿಸಿರದವರು ಗಮನವಿಟ್ಟು ಆಲಿಸಿರಿ. ನಿಮ್ಮ ಉದ್ದಿಷ್ಟ ಕಾರ್ಯಕ್ಕೆ ನೀವು ಆಯ್ದುಕೊಂಡಿರುವ ಸ್ಥಾನದ ಸ್ವರೂಪಲಕ್ಷಣಗಳನ್ನು ಅರಿತುಕೊಳ್ಳುವುದು ಅತಿ ಅವಶ್ಯವಾಗಿದೆ.
ಇಲ್ಲಿ ಚಳಿಗಾಲಗಳಲ್ಲಿಯೂ ಉಷ್ಣಾಂಶವು ಅಧಿಕವಾಗುತ್ತಿರುವುದರಿಂದ ಹಿಮಪಾತದ ದಿನಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಹಿಮದಲ್ಲಿ ಜಾರು ಆಟದ ಏರುಇಳಿವುಗಳಲ್ಲಿ ಸಾಕಷ್ಟು ಹಿಮವಿಲ್ಲವಾಗುತ್ತಿರುವುದರಿಂದ ಕೃತಕ ಹಿಮ ತಯಾರಿಸಿ ಹರಡಲಾಗುತ್ತಿದೆ. ವಿವಿಧ ಖಾಸಗಿ ಸಂಸ್ಥೆಗಳು ಇಂತಹ ಸೌಲಭ್ಯ ಒದಗಣೆಯಲ್ಲಿ ಭಾರಿ ಪೈಪೋಟಿ ಮಾಡುತ್ತಿವೆ. ಇತ್ತೀಚೆಗೆ ಹಿಮ ಜಾರಾಟ ಬೋಧಕರ ಸಂಘದ ಅಧ್ಯಕ್ಷ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ವರದಿಯನ್ನು ನೀವು ವೃತ್ತಪತ್ರಿಕೆಗಳಲ್ಲಿ ಓದಿರಬಹುದು : “ಭವಿಷ್ಯ ಕಪ್ಪಾಗಿದೆ, ಸಂಪೂರ್ಣವಾಗಿ ಕಪ್ಪಾಗಿದೆ” (ಗೋಷ್ಠಿಯಲ್ಲಿ ಹಿಂದೆ ಕುಳಿತವರು ಜಯಘೋಷ ಮಾಡಿದರು – ವಾಹವಾ ಭೇಷ ! ಹೌದು-ಹೌದು !) “ಇಲ್ಲ ಸಂಗಾತಿಗಳೆ, ನೀವು ತಪ್ಪು ಭಾವಿಸಿದ್ದೀರಿ” ಆತ ಕಪ್ಪು ರಾಷ್ಟ್ರದ ಉದಯ ಕುರಿತು ಹೇಳುತ��ತಿದ್ದಿಲ್ಲ. ಭವಿಷ್ಯ ಕಪ್ಪಾಗಿದೆ ಎಂದರೆ ಕೇಡುಕಾರಕ, ವಿಪತ್ತಿನ, ವಿನಾಶಕಾರಕ, ಹತಾಶ, ಉತ್ಸಾಹಶೂನ್ಯ, ಅನಾಹುತ ಎಂಬರ್ಥದಲ್ಲಿ ಆತ ಹೇಳಿದ್ದ.
ಚಳಿಗಾಲದಲ್ಲಿಯ ಉಷ್ಣಾಂಶದಲ್ಲಿ ಕಡಿಮೆಯಾಗುತ್ತಿರುವ ಸೆಲ್ಸಿಯಸ್ದ ಒಂದೊಂದು ಅಂಶವೂ ಸುಮಾರು ನೂರರಷ್ಟು ಹಿಮಜಾರಾಟ ವಿಹಾರಧಾಮಗಳಿಗೆ ಮಾರಕಪ್ರಾಯವಾಗಿದೆ ಎಂದಾತ ಹೇಳಿದ್ದ. ಇದು ಲಾಭಗಳಿಕೆಗೆ ಹಾಗೂ ಹಲವಾರು ಜನರ ಉದ್ಯೋಗಾವಕಾಶಗಳಿಗೆ ಹೇಗೆ ಮಾರಕವಾಗಿದೆ ಎಂಬುದನ್ನು ನೀವು ಊಹಿಸಬಹುದಾಗಿದೆ.
ಆದರೆ ಈ ಅಧ್ಯಕ್ಷನ ಹಾಗೆ ಎಲ್ಲರೂ ನಿರಾಶಾವಾದಿಗಳಾಗಿಲ್ಲ. ಬಿಸಿಹಿಮ(ಸಹಜಮಟ್ಟದ ಉಷ್ಣಾಂಶಕ್ಕಿಂತ ಎರಡು ಅಥವಾ ಮೂರು ಅಂಶ ಹೆಚ್ಚಿನ ಸೆಲ್ಸಿಯಸ್ ದಲ್ಲಿ  ಇದನ್ನು ಉತ್ಪಾದಿಸಬಹುದಾಗಿದೆ) ಎಂದೇ ಜನಪ್ರಿಯವಾಗಿರುವ ‘ಮೌಂಟೆನ್ ವ್ಹೈಟ್’ ಎಂಬ ಹೆಸರಿನ ಹಿಮ ಉತ್ಪಾದನಾ ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿ ಹೇಳಿದ್ದನ್ನು ಗಮನಿಸಬಹುದು “ಜಾಗತಿಕ ತಾಪದ ಆಧಿಕ್ಯದಿಂದ ಬದಲಾಗುತ್ತಿರುವ ಹವಾಮಾನವು ಆಲ್ಪ್ಸ್ ಪ್ರದೇಶಕ್ಕೆ ಒಂದು ದೊಡ್ಡ ಸದವಕಾಶ. ಅತಿ ಹೆಚ್ಚಿನ ಶಾಖಮಟ್ಟಗಳು ಹಾಗು ಹೆಚ್ಚುತ್ತಿರುವ ಸಾಗರಮಟ್ಟಗಳು ಸಾಗರತೀರದ ಪ್ರವಾಸೋದ್ಯಮಕ್ಕೆ ಮಾರಕವಾಗಿವೆ. ಹತ್ತು ವರ್ಷಗಳ ಹಿಂದಷ್ಟೇ ಹಿಮಜಾರಾಟಕ್ಕೆ ಸಾಮಾನ್ಯವಾಗಿ ಭೂಮಧ್ಯಪ್ರದೇಶಕ್ಕೆ ಆಗಮಿಸುತ್ತಿದ್ದ ಜನರು ಇಂದು ಅದಕ್ಕಿಂತ ತಂಪಾದ ಆಲ್ಪ್ಸ್ ಪ್ರದೇಶಕ್ಕೆ ಆಗಮಿಸುತ್ತಿದ್ದಾರೆ. ಇಂತಹ ಪ್ರವಾಸಿಗಳಿಗೋಸ್ಕರ ಗರಿಷ್ಠ ಮಟ್ಟದ ಹಿಮದ ಒದಗಣೆ ಮಾಡುವುದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಕೂಡ. ‘ಮೌಂಟೆನ್ ವ್ಹೈಟ್’ ಹಿಮವು ಗಾಢವಾಗಿ ಸಮರೂಪವಾಗಿ ಹರಡಿಕೊಳ್ಳುವ ವಿಶ್ವಸನೀಯತೆಯನ್ನು ನೀಡುತ್ತದೆ. ಹಿಮಜಾರಾಟ ಕ್ರೀಡಾಸಕ್ತರಿಗೆ ನೈಸರ್ಗಿಕ ಹಿಮಕ್ಕಿಂತ ಈ ಕೃತಕ ಹಿಮವು ಪ್ರಶಸ್ತವೆನಿಸುತ್ತದೆ”.
ಸಂಗಾತಿಗಳೆ, ಇತರ ಕೃತಕ ಹಿಮಗಳಂತೆ ‘ಮೌಂಟೆನ್ ವ್ಹೈಟ್’ ಹಿಮವನ್ನು ಸುಡೊಮೊನಾಸ ಸಿರಿಂಜೈ ಎಂಬ ಏಕಕೋಶಜೀವಿಯ ಒಳಪೊರೆಯಲ್ಲಿರುವ ಸಸಾರಜನಕದಿಂದ ತಯಾರಿಸಲಾಗುತ್ತದೆ. ಆದರೆ ಇದು ಇತರ ಉತ್ಪಾದನೆಗಳಿಗಿಂತ ಭಿನ್ನವಾಗಿದೆ. ಇದು ಉತ್ತಮ ಗುಣಮಟ್ಟದ ಕುಡಿಯುವ ನೀರಿನಿಂದ ತಯಾರಿಸಲ್ಪಟ್ಟಿದ್ದು, ರೋಗೋತ್ಪತ್ತಿ ಸಂಬಂಧವಾದ ಕೆಡಕುಗಳಿಂದ ರಕ್ಷಣೆ ನೀಡುವ ಅಭಯ ನೀಡುತ್ತದೆ. “ಜಾರಾಟದ ತೆವಲುಗಳಲ್ಲಿ ನೀವು ನೀರನ್ನು ಬಾಟಲಿಯಲ್ಲಿ ತುಂಬಿಕೊಂಡು ಕುಡಿಯಬಹುದು!” ಎಂದೊಮ್ಮೆ ಮುಖ್ಯ ನಿರ್ವಹಣಾಧಿಕಾರಿ ಬಡಾಯಿ ಕೊಚ್ಚಿಕೊಂಡಿದ್ದನಂತೆ. (ಸಿಟ್ಟಿನ ಪಿಸುಮಾತಿನ ಗುಸುಗುಸು ಕೇಳಿಬರುತ್ತದೆ) ನಾನು ಬಲ್ಲೆ ನಿಮ್ಮ ಭಾವವನ್ನು. ಸ್ವಲ್ಪ ಶಾಂತರಾಗಿ. ಇಂತಹ ಆಕ್ರೋಶ ನಿಮ್ಮ ದೃಷ್ಟಿಯನ್ನು ಕಲುಕುತ್ತದೆ ಮತ್ತು ಉದ್ದೇಶವನ್ನು ವಿಫಲಗೊಳಿಸುತ್ತದೆ.
ಕೃತಕ ಹಿಮವನ್ನು ತಯಾರಿಸಲು ನೀರನ್ನು ಗರಿಷ್ಠ ಒತ್ತಡ ಶಕ್ತಿ ಸಾಂದ್ರದ ಹಿಮಸ್ತಂಭಗಳ ಮೂಲಕ ಅಧಿಕ ವೇಗದಲ್ಲಿ ಹೊರಗೆ ಎಸೆಯಲಾಗುತ್ತದೆ. ಸಿದ್ಧವಾದ ಹಿಮವನ್ನು ದೊಡ್ಡ ಗುಡ್ಡೆಗಳನ್ನಾಗಿ ಕಲೆಹಾಕಲಾಗುತ್ತದೆ. ಇಳಿಜಾರುಗಳನ್ನು ಕೆರೆದು ಸ್ವಚ್ಛಪಡಿಸಿ ಭೂಮಿಯನ್ನು ತಂಪಾಗಿರಿಸಲು ಹಾಗೂ ಕೃತಕ ಹಿಮದ ಉಷ್ಣಾಂಶದಿಂದ ರಕ್ಷಿಸಲು, ಮೇಲುಗಡೆ ದಪ್ಪ ಪದಿರಾಗಿ ಗೊಬ್ಬರವನ್ನು ಹಾಕಲಾಗುತ್ತದೆ. ಅನಂತರದಲ್ಲಿ ಗುಡ್ಡೆಗಳಲ್ಲಿಯ ಹಿಮವನ್ನು ಬಾಚಿ, ಹರಗಿ, ನಯಮಾಡಿ ಇಳಿಜಾರುಗಳಲ್ಲಿ ಸಮನಾಗಿ ಹರಡಲಾಗುತ್ತದೆ. ಈಗ ಬಹುತೇಕವಾಗಿ ಹಿಮಜಾರಾಟದ ಕೇಂದ್ರಗಳು ಕೃತಕ ಹಿಮವನ್ನು ಬಳಸುತ್ತವೆ. ಪ್ರತಿಯೊಂದು ವಿಹಾರಧಾಮದಲ್ಲಿ ಒಂದು ಹಿಮ ಸ್ತಂಭವಿದೆ, ಅದಕ್ಕೊಂದು ಹೆಸರಿದೆ. ಪ್ರತಿಯೊಂದು ಧಾಮವೂ ಪ್ರತಿಸ್ಪರ್ಧಿಗಳೊಡನೆ ಪೈಪೋಟಿಯಲ್ಲಿ ತೊಡಗಿದೆ. ಸ್ಪರ್ಧೆಯ ಪ್ರತಿ ಹಂತವೂ ಒಂದು ಅವಕಾಶವಾಗಿದೆ.
ನೀವು ನೈಜ ಹಿಮದಲ್ಲಿ ಜಾರಾಟ ಮಾಡಬೇಕೆಂದಿದ್ದರೆ ಅಥವಾ ನೋಡಬೇಕೆಂದಿದ್ದರೆ ಇನ್ನಷ್ಟು ಮೇಲಕ್ಕೆ ನಿರ್ಗಲ್ಲ ರಾಶಿಯತ್ತ ಸಾಗಬೇಕು. ಬೇಸಗೆ ಉಷ್ಣತೆಯಿಂದ ರಕ್ಷಿಸಲು ಹಾಗು ಕುಗ್ಗುವಿಕೆಯನ್ನು ತಡೆಗಟ್ಟಲು ಈ ನಿರ್ಗಲ್ಲು ರಾಶಿಗೆ ಪ್ಲಾಸ್ಟಿಕ ಹೊದಿಕೆಯನ್ನು ಹಾಕಲಾಗುತ್ತದೆ. ರಕ್ಷಾಕವಚದಿಂದ ಸುತ್ತಲ್ಪಟ್ಟ ನೀರ್ಗಲ್ಲು ಅದೆಷ್ಟು ನೈಜ ಎಂಬುದನ್ನು ನಾ ಕಾಣೆ. ಹಳತಾದ ಸ್ಯಾಂಡವಿಚ್ ಮೇಲೆ ಜಾರಾಟ ಮಾಡಿದಂತೆ ಎಂದು ನಿಮಗೆ ಅನಿಸಬಹುದು. ಆದಾಗ್ಯೂ ಪ್ರಯೋಗ ಮಾಡಲು ಅದು ಯೋಗ್ಯವೆಂದು ನಾನು ಭಾವಿಸುತ್ತೇನೆ. ನನಗದು ತಿಳಿಯದು. ಏಕೆಂದರೆ ಜಾರಾಟ ನನಗೆ ತಿಳಿಯದ್ದು.
ನೀರ್ಗಲ್ಲುಗಳಿಗೆ ರಕ್ಷಾಕವಚ ಹಾಕುವ ಸ್ಪರ್ಧೆ-ಕಸರತ್ತುಗಳು ಎತ್ತರ ಪ್ರದೇಶದಲ್ಲಿಯ ಕಾಳಗಗಳಂತೆ. ನಿಮ್ಮಲ್ಲಿ ಕೆಲವರಿಗೆ ನೀಡುವ ತರಬೇತಿ ಥರ ಅಲ್ಲ (ತನ್ನಷ್ಟಕ್ಕೇ ನಗುವುದು). ಅವು ಪ್ರತ್ಯೇಕವಾದವುಗಳೇ ಆದರೂ ಸಂಪೂರ್ಣವಾಗಿ ಹಿಮಯುದ್ಧಗಳಿಗೆ ಸಂಬಂಧಿಸಿರದವುಗಳಲ್ಲ.
ಹಿಮಯುದ್ಧಗಳಲ್ಲಿ ‘ಮೌಂಟೆನ್ ವ್ಹೈಟ್’ ಛಾಪದ ಕೃತಕ ಹಿಮಕ್ಕೆ ಗಂಭೀರ ಪ್ರತಿಸ್ಪರ್ಧಿ ಎಂದರೆ ‘ಸೇಂಟ್ ಎನ್ ಸ್ಪಾರ್ಕಲ್’ ಎಂಬ ಹೊಸ ಸರಕು. ಖಾಸಾ ಸೊದರರೀರ್ವರ ಈ ಕಂಪನಿಗಳು ತೀವ್ರ ಪ್ರತಿಸ್ಪರ್ಧಿಗಳು. ಅವರ ಪತ್ನಿಯರು ಅಕ್ಕತಂಗಿಯರೇ (ಗೊಣಗಾಟದ ಮೆಲುನುಡಿ). ಏನದು? ಹೌದು, ಖಾಸಾ ಸೋದರರೀರ್ವರು ವಿವಾಹವಾದದ್ದು ಈರ್ವರು ಖಾಸಾ ಸೋದರಿಯರನ್ನೇ. ಆ ಎರಡು ಕುಟುಂಬಗಳು ಸಾಲ್ಝಬರ್ಗ ಎಂಬ ಊರಿನವೆ.
‘ಮೌಂಟೆನ್ ವ್ಹೈಟ್’ ದ ಎಲ್ಲ ಪ್ರಯೋಜನಗಳೊಂದಿಗೆ ‘ಸೇಂಟ್ ಎನ್ ಸ್ಪಾರ್ಕಲ್’ ಬಿಳಿಯ, ಹೊಳಪಿನ ಸುವಾಸಿಕ ಹಿಮವನ್ನು ಪೂರೈಸುವ ಆಶ್ವಾಸನೆ ನೀಡುತ್ತಿದೆ. ಅದು ಮೂರು ಥರದ ಸುವಾಸನೆಗಳನ್ನೊಳಗೊಂಡಿದೆ – ವೆನಿಲ್ಲಾ, ಪೈನ್ ಮತ್ತು ಎವರ್ ಗ್ರೀನ್ . ರಜೆ ದಿನಗಳನ್ನು ಕಳೆಯುವ ಪ್ರವಾಸಿಗರ ಸಾಂಪ್ರದಾಯಿಕ ಮನೋಭಾವಕ್ಕೆ ತಕ್ಕಂತೆ ತೃಪ್ತಿ ನೀಡುವ ಭರವಸೆ ಕೊಡುತ್ತದೆ. ‘ಸೇಂಟ್ ಎನ್ ಸ್ಪಾರ್ಕಲ್’ ದ ಸೊಗಸು ಶೈಲಿಯ ಈ ಸರಕು ಬೃಹತ್ ಮಾರುಕಟ್ಟೆಯಲ್ಲಿ ಭಾರಿ ಸುದ್ದಿ ಮಾಡಲು ಸಿದ್ಧವಾಗಿದೆ ಅಥವಾ ತಜ್ಞರು ಹಾಗೆ ಹೇಳುತ್ತಾರೆ. ಏಕೆಂದರೆ ಭವಿತವ್ಯದ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡ ದೂರದೃಷ್ಟಿಯಿಂದ ಉತ್ಪಾದಿಸಿದ ಸರಕಿದು ಎಂಬುದು ಅವರ ವಿವರಣೆ. ಸುವಾಸಿಕ ಹಿಮದ ಉತ್ಪಾದನೆಯು ಗಿಡಮರಗಳ ಹಾಗೂ ಅರಣ್ಯಗಳ ಜಾಗತಿಕ ವಲಸೆ ಹಾಗೂ ಅವುಗಳಿಂದ ಪ್ರವಾಸೋದ್ಯಮದ ಮೇಲಾಗುವ ಪರಿಣಾಮಗಳನ್ನು ನಿರೀಕ್ಷಿಸುತ್ತದೆ. (ಗುಸುಗುಸು ಮಾತು) ಹೌದು, ನಾನು ಮರದ ವಲಸೆ ಕುರಿತೇ ಹೇಳಿದ್ದೇನೆ.
ನೀವು ಶಾಲೆಯಲ್ಲಿ ‘ಮ್ಯಾಕಬೆತ್’ ನಾಟಕವನ್ನು ಓದಿದ್ದಿರಾ ? ಬಂಜರು ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಮಾಟಗಾರ್ತಿಯರು ಆತನಿಗೆ ಹೇಳಿದ್ದು ನೆನಪಾಗುತ್ತದೆಯೇ ? “ಬೃಹತ್ ಬರ್ನಾಮ ಕಾಡು ಎತ್ತರದ ಡನ್ಸಿನೇನ್ ಬೆಟ್ಟದತ್ತ ಆತನ ವಿರುದ್ಧ ಬರುವವರೆಗೆ ಮ್ಯಾಕಬೆತ್ನನ್ನು ಯಾರೂ ಜಯಿಸಲಾರರು”.
ಆತ ಮಾಟಗಾರ್ತಿಯರಿಗೆ ಹೇಳಿದ್ದು ನೆನಪಾಗುತ್ತದೆಯೇ ? (ಕೇಳುಗರಲ್ಲಿ ಹಿಂದೆ ಕುಳಿತವರಿಂದ ಧ್ವನಿ ಕೇಳಿಬರುತ್ತದೆ : “ಅದು ಸಾಧ್ಯವೇ ಇಲ್ಲ ಬಿಡಿ. ಅಡವಿಗೆ ಯಾರು ಹೇಳಿಯಾರು ? ನೆಲದಾಳದಲ್ಲಿಯ ಬೇರುಗಳನ್ನು ಸಡಲಿಸಿ ಚಲಿಸಲು ಮರಕ್ಕೆ ಯಾರು ಹೇಳಿಯಾರು ?”)
ಹಾ! ಅದ್ಭುತ. ಆದರೆ ಮ್ಯಾಕಬೆತ್ ತಪ್ಪಾಗಿ ಸತ್ತ. ಮರಗಳಿಂದು ನೆಲದಾಳದಲ್ಲಿಯ ತಮ್ಮ ಬೇರುಗಳನ್ನು ಸಡಲಿಸಿ ಚಲಿಸತೊಡಗಿವೆ. ತಮ್ಮ ಪಾಳುಗೆಟ್ಟ ನೆಲೆಗಳಿಂದ ಉತ್ತಮ ಬದುಕಿನ ಆಶೆಯಿಂದ ವಲಸೆ ಹೋಗತೊಡಗಿವೆ. ಜನರ ಥರವೇ ಉಷ್ಣವಲಯದ ತಾಳೆಮರಗಳು ಆಲ್ಪ್ಸ್ ಕೆಳಪ್ರದೇಶದತ್ತ ಸಂಚರಿಸುತ್ತಿವೆ. ನಿತ್ಯ ಹಸುರಿನ ಗಿಡ-ಪೊದೆಗಳು ತಂಪು ವಾತಾವರಣದ ಶೋಧನೆಯಲ್ಲಿ ಬೆಟ್ಟಗಳ ಎತ್ತರದ ಸ್ಥಳಗಳಿಗೆ ಏರುತ್ತಲಿವೆ.
ಮ್ಯಾಕಬೆತ್ ನೆನಪಾಗುತ್ತಾನೆಯೇ ? “ಸಂಚರಿಸು ಎಂದು ಅರಣ್ಯಕ್ಕೆ ಯಾರು ಹೇಳಿಯಾರು ? ನೆಲದಾಳದಲ್ಲಿಯ ಬೇರುಗಳನ್ನು ಸಡಲಿಸಿ ಹೊರಡಲು ಮರಕ್ಕೆ ಯಾರು ಹೇಳಲು ಸಾಧ್ಯ ?” ಆತ ಕೇಳಿದ್ದ. ಆದರೆ ಆತ ತಪ್ಪಾಗಿ ಸತ್ತ. ಮರಗಳು ತಮ್ಮ ಬೇರುಗಳನ್ನು ಸಡಲಿಸಿ ವಲಸೆ ಹೊರಟಿವೆ.

ಹಿಮಜಾರಾಟದ ಇಳಿಜಾರುಗಳಲ್ಲಿ ಬಿಸಿಹಿಮದ ತಂಪು ಹಾಸುಗೆಗಳಲ್ಲಿ ಬೆಚ್ಚಗಿನ ಗೊಬ್ಬರದಿಂದ ಕೂಡಿದ ನೆಲದಲ್ಲಿ ಕೃತಕ ಶಾಖದ ಮನೆಯಲ್ಲಿ ಆವಿತುಕೊಂಡಿದ್ದ ಸಸ್ಯದ ಬೀಜಗಳು ಮೊಳೆತು ಹುಟ್ಟುತ್ತಲಿವೆ. ಪ್ರಾಯಶಃ ಅನತಿ ಸಮಯದಲ್ಲಿ ಎತ್ತರದ ಪರ್ವತಗಳಲ್ಲಿ ಹಣ್ಣಿನ ಮರಗಳು, ದ್ರಾಕ್ಷಿ ತೋಟಗಳು ಮತ್ತು ಆಲಿವ್ ಮರಗಳ ತೋಪುಗಳು ಕಾಣಿಸಿಕೊಳ್ಳುತ್ತವೆ.

ಗಿಡಮರಗಳು ವಲಸೆ ಹೋಗುವಾಗ ಅವುಗಳೊಂದಿಗೆ ಪಕ್ಷಿಗಳು, ಕೀಟಗಳು, ಹುಪ್ಪಟೆ – ಪತಂಗಗಳು, ಜೇನ್ನೋಣಗಳು, ಬಾವಲಿಗಳು ಮತ್ತು ಪರಾಗಾಧಾನ ಮಾಡುವ ಇತರೆಲ್ಲ ಜೀವಿಗಳೂ ಚಲಿಸುತ್ತವೆ. ಅವುಗಳು ತಮ್ಮ ಹೊಸ ಪರಿಸರಕ್ಕೆ ಹೊಂದಿಕೊಳ್ಳಬಲ್ಲವೇ ? ರಾಬಿನ್ ಪಕ್ಷಿಗಳು ಅಲಾಸ್ಕಾಕ್ಕೆ ಬಂದಿವೆ. ಅಲಾಸ್ಕಾದಲ್ಲಿಯ ಹಿಮಗರಡಿಗಳು ಸೊಳ್ಳೆಗಳ ಕಾಟ ತಾಳದಾರದೆ ಸಾಕಷ್ಟು ಆಹಾರ ಲಭಿಸದಿರುವ ಎತ್ತರದ ಪ್ರದೇಶದತ್ತ ಸಾಗುತ್ತಿವೆ. ಮಲೇರಿಯ ರೋಗವನ್ನು ಹರಡುವ ಸೊಳ್ಳೆಗಳು ಆಲ್ಪ್ಸ್ದ ಕೆಳ ಪ್ರದೇಶದಲ್ಲಿ ಹರಡಿಕೊಂಡಿವೆ.
ಶಕ್ತಿಯುತ ಮದ್ದುಗುಂಡುಗಳ ದಾಳಿಯನ್ನು ತಾಳಿಕೊಳ್ಳುವಂತೆ ಕಟ್ಟಲಾಗಿರುವ ಈ ಕೋಟೆ ಸೊಳ್ಳೆಗಳ ಸೈನ್ಯದ ವಿರುದ್ಧ ಹೇಗೆ ರಕ��ಷಣೆ ಮಾಡಿಕೊಳ್ಳುತ್ತದೆ ಎಂಬುದೇ ಅಚ್ಚರಿಯ ಸಂಗತಿ.
ಹಿಮಯುದ್ಧಗಳು ಈಗ ಬಯಲು ಪ್ರದೇಶಗಳಿಗೂ ವಿಸ್ತರಿಸುತ್ತಿವೆ. ‘ಮೌಂಟೆನ್ ವ್ಹೈಟ್’ ಇದೀಗ ದುಬಾಯಿ ಮತ್ತು ಸೌದಿ ಅರೇಬಿಯದ ಬರ್ಫದ ಮಾರುಕಟ್ಟೆಗಳಲ್ಲಿ ರಾಜಾಜಿಸುತ್ತಿದೆ. ಸರ್ವಕಾಲಿಕ ಹಿಮ ಜಾರಾಟದ ವಿಹಾರಧಾಮಗಳಿಗೆಂದೇ ಪ್ರಧಾನವಾಗಿ ಕೈಕೊಳ್ಳಲಾಗುತ್ತಿರುವ ಆಣೆಕಟ್ಟು ನಿರ್ಮಾಣ ಯೋಜನೆಗಳಿಗೆ ಪೂರೈಸಲಾಗುತ್ತಿರುವ ‘ಮೌಂಟೆನ್ ವ್ಹೈಟ್’ ಭಾರತ – ಚೀನಾಗಳಲ್ಲಿ ಕೂಡಾ ಯಶಸ್ಸನ್ನು ಸಾಧಿಸುತ್ತಿದೆ.
ಸಾಗರದ ಅಡ್ಡಗಟ್ಟುಗಳನ್ನು ಬಲಪಡಿಸಲು (ರಕ್ಷಾವರಣ) ಹಾಗೂ ತೇಲುವ ಚೌಕಟ್ಟಿನ (ತೆಪ್ಪ) ಅಸ್ತಿಭಾರದ ಮೇಲೆ ಕಟ್ಟಲಾಗುವ ಸಾಗರಮನೆಗಳಿಗೆ ಬಳಸಲು ಅದು ಡಚ್ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಜಾಗತಿಕ ತಾಪದ ಹೆಚ್ಚಳದಿಂದ ಸಾಗರಮಟ್ಟವು ಹೆಚ್ಚಾದರೆ ಹಾಲೆಂಡಿನಲ್ಲಿರುವ ಕಡಲ ಅಡ್ಡಗಟ್ಟೆಗಳು ಬಿರಿದು ಹಾಲೆಂಡ್ ಸಾಗರದಲ್ಲಿ ಮುಳುಗಿ ಹೋಗುವ ಸಾಧ್ಯತೆಗಳಿರುವುದರಿಂದ, ಅಂತಹ ಸಂಭಾವ್ಯ ವಿಪತ್ತನ್ನು ತಡೆಯಲು ‘ಮೌಂಟೆನ್ ವ್ಹೈಟ್’ ಸಾಗರದ ಏರುಬ್ಬರದಿಂದ ಆ ದೇಶಕ್ಕೆ ರಕ್ಷಣೆ ಒದಗಿಸಿ, ಏರುಅಲೆಗಳನ್ನೇ ಚಿನ್ನವನ್ನಾಗಿಸುತ್ತದೆ. (ಭಯವೆಂದಿಗೂ ಬೇಡ, ಮೌಂಟೆನ್ ವ್ಹೈಟ್ ಇದೆಯಲ್ಲ ! ಸಮತಟ್ಟಾದ ಪ್ರದೇಶದಲ್ಲೂ ಪ್ರಯೋಜನಕಾರಿ).
‘ಸೇಂಟ್ ಎನ್ ಸ್ಪಾರ್ಕಲ್’ ಕೂಡ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಅದು ದೂರದರ್ಶನದ ಜನಪ್ರಿಯ ಚಾನೆಲ್ಲೊಂದರ ಒಡೆತನವನ್ನು ಹೊಂದಿದ್ದು, ಭೂಗಣಿಗಳ ಸಿಡಿಮದ್ದುಗಳನ್ನು ನಿಯಂತ್ರಿಸುವ ಸಾಧನಗಳ ಕಂಪನಿಯ ಷೇರುಗಳ ಮೇಲೆ ನಿಯಂತ್ರಣವನ್ನಿರಿಸಿಕೊಂಡಿದೆ. ಪ್ರಾಯಶಃ ಅವರ ಹೊಸ ಉತ್ಪಾದನೆಗಳು ಪ್ರಾಣಿಪಕ್ಷಿ ಮತ್ತು ಮಕ್ಕಳನ್ನು ಆಕರ್ಷಿಸಲು ಸ್ಟ್ರಾಬೆರಿ, ಕ್ರ್ಯಾನಬೆರಿ, ಜೋಜೋಬಾ ಮೊದಲಾದ ಸುವಾಸಿಕ ರೂಪಗಳನ್ನು ತಳೆಯಬಹುದು. ಹಿಮ ಮತ್ತು ಭೂಗಣಿಗಳಲ್ಲದೆ ಸೇಂಟ್ ಎನ್ ಸ್ಪಾರ್ಕಲ್ ಕಿರುಕುಳ ಮಾರಾಟದಲ್ಲಿಯೂ ತೊಡಗಿದ್ದು, ಮಧ್ಯ ಏಷ್ಯಾ ಮತ್ತು ಆಫ್ರಿಕಾಗಳಿಗೆ ಬ್ಯಾಟರಿಯಿಂದ ಕಾರ್ಯಾಚರಣೆ ಮಾಡುವ ಪ್ರಮಾಣೀಕೃತ ಗಾತ್ರಗಳ ಅವಯವಗಳನ್ನು ಪೂರೈಸುತ್ತಿದೆ. ಸಾಂಸ್ಥಿಕ ಸ್ವರೂಪದ ಸಾಮಾಜಿಕ ಹೊಣೆಗಾರಿಕೆಯ ಆಂದೋಲನದಲ್ಲಿ ಅದು ಮುಂಚೂಣಿಯಲ್ಲಿದ್ದು, ಅಫಘಾನಿಸ್ತಾನದಲ್ಲಿ ಅನಾಥಾಶ್ರಯಗಳಿಗೆ ಮತ್ತು ಸರಕಾರೇತರ ಸಂಸ್ಥೆಗಳಿಗೆ ಹಣಕಾಸಿನ ನೆರವನ್ನು ನೀಡುತ್ತಿದೆ. ಗೊಬ್ಬರ ಮತ್ತು ಹಿಮ ಕರಗುವಿಕೆಯ ಶೇಷಾಂಶಗಳಿಂದ ವಿಷಮಯವಾಗಿರುವ ಆಸ್ಟ್ರಿಯ ಮತ್ತು ಇಟಲಿಗಳಲ್ಲಿಯ ನದಿ-ಸರೋವರಗಳ ಹೂಳೆತ್ತುವ ಹಾಗು ಶುದ್ಧೀಕರಿಸುವ ಯೋಜನೆಗಳಿಗೆ ಅದು ಟೆಂಡರ್ ಸಲ್ಲಿಸಿದೆ.
ಜಗತ್ತಿನ ಮೇಲುಸ್ತರವಾಗಿರುವ ಇಲ್ಲಿ ಕೂಡ ವಿಷಪೂರಿತ ಶೇಷಾಂಶಗಳು ಇಲ್ಲವೆಂದಿಲ್ಲ. ಇದು ಭವಿತವ್ಯದ ಸಮಸ್ಯೆಯಾಗಿದೆ. ಇತರರ ದುರಾಶೆಯ ಪಳೆಯುಳಿಕೆಗಳಲ್ಲಿ ಇಲಿಹೆಗ್ಗಣಗಳಾಗಿ ನಾವು ಬದುಕಬೇಕಾಗಿದೆ ಎಂಬುದು ನಮ್ಮಲ್ಲಿ ಕೆಲವರಿಗಾದರೂ ಅರಿವಾಗಿದೆ. ಶೂನ್ಯದಿಂದಲೇ ಅಸ್ತ್ರಗಳನ್ನು, ಸಾಧನಗಳನ್ನು ರೂಪಿಸುವುದನ್ನು ನಾವು ತಿಳಿದಿದ್ದೇವೆ. ಅವುಗಳನ್ನು ಹೇಗೆ ಬಳಸಬೇಕೆಂಬುದನ್ನು ತಿಳಿದಿದ್ದೇವೆ. ಇವುಗಳೇ ನಮ್ಮ ಹೋರಾಟದ ಕೌಶಲಗಳು.
ಸಂಗಾತಿಗಳೆ, ಪರ್ವತಗಳಲ್ಲಿರುವ ಶಿಲಾ ಸಿಂಹವು ದುರ್ಬಲವಾಗತೊಡಗಿದೆ. ಎಂದೂ ಮುತ್ತಿಗೆಗೆ ಈಡಾಗದ ಕೋಟೆಯು ತನಗೆ ತಾನೇ ಲಗ್ಗೆ ಇಟ್ಟಿದೆ. ನಾವು ಮುಂದಕ್ಕೆ ಸಾಗುವ ಸಮಯವಿದು. ಹಂತಕನ ಗುರಿತಪ್ಪದ ಸದ್ದಿಲ್ಲದ ಶೀತಲ ಗುಂಡಿನ ದಾಳಿಗೆ ಸರಿಹೋಗುವಂತೆ ಸಧ್ಯ ನಮ್ಮ ಬಳಿಯಿರುವ ಸದ್ದು ಮಾಡುವ ಮಷಿನ್ಗನ್ಗಳನ್ನು, ಅನಿರ್ದೇಶಿತ ಗುಂಡುಗಳೆಸೆತದ ಅಸ್ತ್ರಗಳನ್ನು ಬದಲಿಸಬೇಕಿದೆ. ನಿಮ್ಮ ಗುರಿಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಿರಿ.

ಶಿಲಾ ಸಿಂಹದ ಶಿಲಾ ಎಲುವುಗಳು ಘಾಸಿಗೊಂಡು, ನಮ್ಮ ಭೂಮಿ ಗಾಯಗೊಂಡು ವಿಷಮಯವಾದಾಗ, ಎಂದೂ ಮುತ್ತಿಗೆಗೀಡಾಗದ ಕೋಟೆಯು ಪುಡಿಪುಡಿಯಾಗಿ ನೆಲಕಚ್ಚಿದಾಗ ಅದರಿಂದೇಳುವ ಧೂಳು ನೆಲಸೇರಿ ವಾತಾವರಣ ತಿಳಿಯಾದಾಗ ಬಹುಶಃ ಮತ್ತೇ ಹಿಮಪಾತವಾಗಬಹುದು.
ಇದಿಷ್ಟೇ ನಾನು ಹೇಳಬೇಕೆಂದಿದ್ದುದು. ಈಗ ನೀವು ಹೊರಡಬಹುದು. ನಿಮ್ಮ ಸೂಚನೆ-ನಿರ್ದೇಶನಗಳನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಚೆನ್ನಾಗಿ ಸಾಗಿರಿ, ಸಂಗಾತಿಗಳೇ, ನಿಮ್ಮ ಹೆಜ್ಜೆ ಗುರುತುಗಳನ್ನು ಬಿಡಬೇಡಿ. ಮತ್ತೆ ನಾವು ಭೇಟಿಯಾಗುವವರೆಗೆ ದೇವರು ರಕ್ಷಿಸಲಿ. ಶುಭಮಸ್ತು, ನಿಮ್ಮ ಮದ್ದನ್ನು ಒಣದಾಗಿರಿಸಿಕೊಳ್ಳಿ.
(ಸಂಗಾತಿಗಳು ಹೊರಹೋಗುವ ಹೆಜ್ಜೆ ಸದ್ದು ಕ್ರಮವಾಗಿ ಕ್ಷೀಣಿಸುತ್ತದೆ).

Leave a Reply