ವಿದ್ಯಾ ಕಾಶಿಗೆ ಇನ್ನೊಂದು ಮುಕುಟ ಸಾಂಸ್ಕೃತಿಕ ಪರಂಪರೆಯ ವಸ್ತು ಸಂಗ್ರಹಾಲಯ

ವಿದ್ಯಾ ಕಾಶಿಗೆ ಇನ್ನೊಂದು ಮುಕುಟ ಸಾಂಸ್ಕೃತಿಕ ಪರಂಪರೆಯ ವಸ್ತು ಸಂಗ್ರಹಾಲಯ

ಸಾದಾ ಕಂಪ್ಯೂಟರ್, ಇಂಟರನೆಟ್, ವಿಡಿಯೋ ಗೇಮ್ಸ ಮೊಬೈಲ್, ಟಿ.ವಿ ಇದೇ ನಮ್ಮ ಜಗತ್ತು ಎಂದು ತಿಳಿದುಕೊಂಡಿರುವ ವಿದ್ಯಾರ್ಥಿಗಳು ಒಮ್ಮೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಇನ್‍ಟ್ಯಾಕ್ ಸಂಸ್ಥೆ ಧಾರವಾಡ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಧಾರವಾಡದ ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಕಲಾಭವನದ ಹತ್ತಿರ ಸಾಂಸ್ಕೃತಿಕ ಪರಂಪರೆಯ ವಸ್ತು ಸಂಗ್ರಹಾಲಯ ಇದ್ದು ಇಲ್ಲಿಗೆ ಭೇಟಿ ಕೊಡಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಇದು ಜ್ಞಾನದ ಆಗರವಾಗಿದೆ ಎಂದು ಹೇಳಬಹುದು.

ಈ ವಸ್ತು ಸಂಗ್ರಹಾಲಯದಲ್ಲಿ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯಪೂರ್ವದ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಶಾಲೆ, ಕಾಲೇಜುಗಳು , ಗ್ರಂಥಾಲಯ ಜಿಲ್ಲಾಧಿಕಾರಿಗಳ ನಿವಾಸ, ಐತಿಹಾಸಿಕ ಕೋಟೆ ಬಾಗಿಲು, ಇತಿಹಾಸ ಪ್ರಸಿದ್ದ ದೇವಾಲಯಗಳು, ವಿಶ್ವವಿದ್ಯಾಲಯಗಳು, ಡಾ|| ದ.ರಾ ಬೇಂದ್ರೆಯವರ ಮನೆ, ಜಿಮಖಾನಾ ಕ್ಲಬ್, ಸಿವಿಲ್ ಆಸ್ಪತ್ರೆ, ಟೆನ್ನಿಸ್ ಕೊರ್ಟ , ವಿದ್ಯಾವರ್ಧಕ ಸಂಘದ ಕಟ್ಟಡ , ನವಾಬರ ಕಟ್ಟಡ , ಥ್ಯಾಕರೆ ಸಮಾಧಿ ಹಾಗೂ ಸ್ಮಾರಕ , ಕೆರೆಗಳು , ಭಾವಿಗಳು , ಶಾಲ್ಮಲಾ ನದಿಯ ಉಗಮ ಸ್ಥಾನ ಹಾಗೂ ಸೋಮೇಶ್ವರ ದೇವಾಲಯ , ಬ್ರಿಟಿಷ್ ಕಾಲದ ಚರ್ಚುಗಳು , ಹಳೆಯದಾದ ಅಶ್ವತ್ಥ ಮರ , ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ಮಲ್ಲಿಕ್ ಸಾಬ್ ಹಾಗೂ ಅಬ್ದುಲ್ ಗಫಾರ್ ಸಾಬ್ ಅವರ ಸ್ಮಾರಕ ಹಾಗೂ ಗೋರಿಗಳು , ಧಾರವಾಡ ಎಂಬ ಶಬ್ದವು ಮೊಟ್ಟಮೊದಲು ಕಾಣಿಸಿರುವ ಶಿಲಾ ಶಾಸನ ಇನ್ನೂ ಮುಂತಾದ ಅಪರೂಪದ ಛಾಯಾಚಿತ್ರಗಳನ್ನು ವೀಕ್ಷಿಸಬಹುದು . ಇವು ನೋಡುಗರ ಕಣ್ಮನ ಸೆಳೆಯುತ್ತಿವೆ

ಜೊತೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕದ ಕವಿಗಳು ಹಾಗೂ ಸಾಹಿತಿಗಳ ಸಂಪೂರ್ಣ ವಿವರ ಅವರು ರಚಿಸಿದ ಕಾದಂಬರಿ, ಕಥೆಗಳು, ಕವನ ಸಂಕಲನಗಳು , ಅನುವಾದ ಗ್ರಂಥಗಳು ಅವರಿಗೆ ಸಂದ ಬೇರೆ ಬೇರೆ ಪ್ರಶಸ್ತಿಗಳು ಪುರಸ್ಕಾರಗಳು, ಅವರ ಜನ್ಮ ದಿನಾಂಕ ಹುಟ್ಟಿದ ಊರು, ಜಿಲ್ಲೆ ಅವರ ಭಾವ ಚಿತ್ರ ಹೀಗೆ ಎಲ್ಲ ವಿವರಗಳನ್ನೂ ಇಲ್ಲಿ ದಾಖಲಿಸಲಾಗಿದೆ ಇದರ ಜೊತೆಗೆ ಇನ್ನೂ ಹಲವಾರು ಕವಿಗಳ , ಸಾಹಿತಿಗಳ , ಪ್ರಸಿದ್ದ ಸಂಗೀತ ಕಲಾವಿದರ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿದೆ. ಡಾ|| ವಿ ಕೃ ಗೋಕಾಕರ ಮೂರ್ತಿ ಇದ್ದು ಅವರು ಇದ್ದಾಗ ಉಪಯೋಗಿಸುತ್ತಿದ್ದ ಕನ್ನಡಕ ಜೊತೆಗೆ ಗೋಕಾಕರು ಇದ್ದಾಗ ಮುರಾರ್ಜಿ ದೇಸಾಯಿ , ಡಾ|| ಬಾಬು ರಾಜೇಂದ್ರ ಪ್ರಸಾದ , ಜವಾಹರಲಾಲ ನೆಹರು , ಕುವೆಂಪು , ಕವಿ ಚನ್ನವೀರ ಕಣವಿ, ಡಾ|| ದ.ರಾ ಬೇಂದ್ರೆ ಇನ್ನೂ ಮುಂತಾದ ಪ್ರಸಿದ್ದ ಮಹನೀಯರ ಜೊತೆ ತೆಗೆಸಿಕೊಂಡ ಅಪರೂಪದ ಭಾವ ಚಿತ್ರಗಳನ್ನು ನೋಡಬಹುದು

ಡಾ|| ಗಿರೀಶ್ ಕಾರ್ನಡರಿಗೆ ಸಂದ ಹಲವಾರು ಪ್ರಶಸ್ತಿ, ಪದಕಗಳು, ಸರ್ಟಿಫಿಕೇಟುಗಳು ನೋಡುಗರಿಗೆ ಇಲ್ಲಿ ಲಭ್ಯ. ಕಾರ್ನಾಡರು ತಮ್ಮ ಕೈಯಿಂದಲೇ ಬರೆದ ಯಯಾತಿ ನಾಟಕ ಹಾಗೂ ತುಘಲಕ್ ನಾಟಕದ ಹಸ್ತ ಪ್ರತಿಗಳಿವೆ ಹಾಗೂ ನಾರಾಯಣ ಹುಯಿಲಗೋಳ ಅವರ ಹಸ್ತಪ್ರತಿಗಳಿವೆ ಖ್ಯಾತ ಇತಿಹಾಸ ಸಂಶೋಧಕರಾಗಿದ್ದ ಪಾಂಡುರಂಗ ದೇಸಾಯಿ ಅವರ ಜೀವನ ಚರಿತ್ರೆ ಹಾಗೂ ಅವರ ದಿನಚರಿಗಳ ಪುಸ್ತಕ ಇದೆ ಖ್ಯಾತ ಕಾದಂಬರಿಕಾರ ಡಾ|| ಎಸ್.ಎಲ್ ಭೈರಪ್ಪ ಅವರಿಗೆ ಸಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಹಾಗೂ ಇವರ ನೆಲೆ ಕಾದಂಬರಿಯ ಮೊದಲ ಹಸ್ತಪ್ರತಿ ಇದೆ ಖ್ಯಾತ ಮಹಿಳಾ ಸಾಹಿತಿ ವೈದೇಹಿ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ .
ಇನ್ನು ಚಿತ್ರ ಕಲಾ ಗ್ಯಾಲರಿಯಲ್ಲಿ ರಾಜಾ ರವಿವರ್ಮ ಅವರು ರಚಿಸಿದ ಚಿತ್ರಕಲಾ ಕೃತಿಗಳು ನೋಡುಗರ ಮನಸೂರೆಗೊಳ್ಳುತ್ತವೆ ಕಲಾಕೃತಿಗಳು ಅಷ್ಟು ಸುಂದರವಾಗಿ ಮೂಡಿಬಂದಿವೆ ಅಲ್ಲದೇ ಕೆ.ಕೆ ಹೆಬ್ಬಾರ್ , ಅಮೃತ ಸೇರಗಿಲ್ ಅವರು ರಚಿಸಿರುವ ಅದ್ಬುತ ಚಿತ್ರ ಕಲಾಕೃತಿಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು ರಾಜ್ಯದ ಬೇರೆ ಬೇರೆ ಜಿಲ್ಲೆಯ ಸಾರ್ವಜನಿಕರು ಹಾಗೂ ಧಾರವಾಡ ಜಿಲ್ಲೆಯ ಸಮಗ್ರ ಗ್ರಾಮೀಣ ಹಾಗೂ ಶಹರಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳು ಇಲ್ಲಿಗೆ ಒಮ್ಮೆ ಭೇಟಿ ಕೊಡಲೇಬೇಕಾದ ಅಪರೂಪದ ವಸ್ತು ಸಂಗ್ರಹಾಲಯ ಇದಾಗಿದ್ದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲಿ. ಧಾರವಾಡ ಜಿಲ್ಲೆಯ ಶಿಕ್ಷಣಾಧಿಕಾರಿಗಳು ಪ್ರತಿದಿನ ಒಂದು ಶಾಲೆ ಇಲ್ಲವೇ ಕಾಲೇಜು ವಿದ್ಯಾರ್ಥಿಗಳಿಗೆ ಇಲ್ಲಿ ಭೇಟಿ ನೀಡಲು ಅನುಮತಿ ನೀಡಬೇಕು. ಶಾಲಾ ಕಾಲೇಜು ಪ್ರಾಂಶುಪಾಲರೂ ಕೂಡಾ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳಿಗೆ ಈ ಸಂಗ್ರಹಾಲಯದ ವೀಕ್ಷಣೆಗೆ ಅವಕಾಶ ಮಾಡಿಕೊಡಲಿ ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಜ್ಞಾನಕ್ಕೆ ಅನೂಕೂಲವಾಗುತ್ತದೆ.

ಇನ್‍ಟ್ಯಾಕ್ ಸಂಸ್ಥೆಯ ಸಂಚಾಲಕರಾದ ಶ್ರೀ .ಎನ್.ಪಿ. ಭಟ್ ಹಾಗೂ ಅವರ ಶ್ರೀಮತಿ ಯಶೋದಾ ಭಟ್ ಅವರ ಕನಸಿನ ಕೂಸಾದ ಈ ವಸ್ತು ಸಂಗ್ರಹಾಲಯ ಆಕರ್ಷಕವಾಗಿದೆ ಈ ಸಂಗ್ರಹಾಲಯದ ಶ್ರೇಯೋಭಿವೃದ್ದಿಗಾಗಿ ಭಟ್ ಅವರು ವಹಿಸಿರುವ ಕಾಳಜಿ ಹಾಗೂ ಪರಿಶ್ರಮ ಮತ್ತು ಶ್ರದ್ದೆ ಎದ್ದು ಕಾಣುತ್ತದೆ.

ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವದೆಂದರೆ ಸಾಮಾನ್ಯ ವಿಷಯವಲ್ಲ ಎನ್.ಪಿ. ಭಟ್ ಅವರಿಗೆ ವಯಸ್ಸಾಗಿದ್ದರೂ ಕೂಡಾ ಯುವಕರನ್ನು ನಾಚಿಸುವಂತೆ ಸದಾ ಲವಲವಿಕೆಯಿಂದ ಕೆಲಸಮಾಡುವ ಅವರ ನಿಸ್ವಾರ್ಥ ಸೇವೆ ಶ್ಲಾಘನೀಯ ಈ ವಸ್ತು ಸಂಗ್ರಹಾಲಯಕ್ಕಾಗಿ ಹಗಲಿರುಳು ಶ್ರಮಿಸಿದ ಅವರ ಶ್ರಮ ಇಲ್ಲಿ ಸಾರ್ಥಕತೆ ಪಡೆದಿದೆ ಇದರ ರೂವಾರಿಯಾದ ಅವರಿಗೆ ಧನ್ಯವಾದಗಳು ಇವರ ಸಹಾಯಕರಾಗಿ ಕೆಲಸಮಾಡುತ್ತಿರುವ ಕಾಟೇನಹಳ್ಳಿಯವರು ಉತ್ತಮ ಛಾಯಾ ಗ್ರಾಹಕರಾಗಿದ್ದು ಇವರಿಗೆ ಆರ್ .ಕೆ ಛಾಯಾ ಪೌಂಡೇಶನ್ ಸಂಸ್ಥೆ 2014 ರಲ್ಲಿ “ಛಾಯಾಚಿತ್ರಪ್ರೇಮಿ” ಪ್ರಶಸ್ತಿ ನೀಡಿ ಗೌರವಿಸಿದೆ

ಈ ಸಂಗ್ರಹಾಲಯದಲ್ಲಿರುವ ಛಾಯಾಚಿತ್ರಗಳನ್ನು ಹಾಗೂ ಭಾವ ಚಿತ್ರಗಳನ್ನು ತಮ್ಮ ಕೈಚಳಕದಿಂದ ಅದ್ಬುತವಾಗಿ ರೂಪಿಸಿದ್ದಾರೆ ಅಲ್ಲದೇ ರಾಜ್ಯದ , ಜಿಲ್ಲೆಯ ಸಾರ್ವಜನಿಕರು ತಮ್ಮ ಬಳಿ ಇರುವ ಅಪರೂಪದ ಹಳೆಯ ಛಾಯಾಚಿತ್ರಗಳು , ಚಿತ್ರಕಲಾ ಕೃತಿಗಳು , ಶಿಲಾಶಾಸನಗಳು ಇನ್ನೂ ಮುಂತಾದ ಐತಿಹಾಸಿಕ ವಸ್ತುಗಳು ತಮ್ಮ ಬಳಿ ಇದ್ದರೆ ಅವುಗಳನ್ನು ಈ ಸಂಸ್ಥಗೆ ಒಪ್ಪಿಸಬಹುದು ಅವುಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗುವುದು ಒಟ್ಟಿನಲ್ಲಿ ಅಪರೂಪದ ಈ ವಸ್ತು ಸಂಗ್ರಹಾಲಯವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

    –  ರಾಜಶೇಖರ ಕುರಿಯವರ

2 Comments

  1. ನಮ್ಮ ಧಾರವಾಡಕ್ಕೆ ಮತ್ತೊಂದು ಹೆಮ್ಮೆಯ ಗರಿ. ಶ್ರೀ.ಎನ್.ಪಿ. ಭಟ್ಟ್ರು ಅಭಿನಂದನೀಯ ಕೆಲಸಾ ಮಾಡ್ಯಾರ.

  2. ನೋಡಬೇಕಾತು ಈ ಸಲ ಬಂದಾಗ

Leave a Reply