ವೃದ್ಧರಲ್ಲಿ ಬೀಳುವ ಭಯವೇಕೆ?

ಆಯತಪ್ಪಿ ಬೀಳುವುದು ವೃದ್ಧರನ್ನು ಕಾಡುವ ಅತ್ಯಂತ ಕಳವಳಕಾರಿ ವಿಷಯ. ದೇಹದ ಮೇಲಿನ ನಿಯಂತ್ರಣ ತಪ್ಪಿ ಬಿದ್ದರೆ ಶಾಶ್ವತವಾಗಿ ನಿಷ್ಕ್ರಿಯರಾಗಿ ಉಳಿಯಬಹುದು ಎಂಬ ಭಯ ಅವರನ್ನು ಕಾಡುತ್ತದೆ. ಹೀಗಾಗಿ ಎಷ್ಟೋ ಮಂದಿ ವಯಸ್ಸಾದವರು ಕೆಲವು ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಅಥವಾ ನಡೆದಾಡಲು ಶಕ್ತರಾದರೂ ಸಹ ಯಾವುದೇ ಚಟುವಟಿಕೆಗಳನ್ನು ಮಾಡದೆ ಸುಮ್ಮನೆ ಕೂರುವುದು ಇದೇ ಕಾರಣಕ್ಕೆ. ಇದರಿಂದ ಅವರಲ್ಲಿ ಮತ್ತಷ್ಟು ಸಮಸ್ಯೆಗಳು ಉದ್ಭವಿಸುವುದಲ್ಲದೇ, ಕೈಕಾಲುಗಳು ಜಡವಾಗಿ ಓಡಾಡಲೇ ಅಶಕ್ಯರಾಗಬಹುದು. ಈ ನಿಯಂತ್ರಣ ತಪ್ಪಿ ಬೀಳುವ ತೊಂದರೆ ವೃದ್ಧರಲ್ಲಿ ಗಂಭೀರ ಸಮಸ್ಯೆ ಎಂದೇ ಪರಿಗಣಿಸಲಾಗಿದೆ. ಅಷ್ಟೇ ಅಲ್ಲ, ಬೀಳುವುದರಿಂದ ಸಂಭವಿಸುವ ಸಾವು, ಗಾಯಗೊಂಡು ಸಾವಿಗೀಡಾಗುವ ಪ್ರಕರಣಗಳಲ್ಲಿಯೇ ಅತ್ಯಧಿಕ. ಎಎಂಡಿ ಎಂದರೇನು? ಎಎಂಡಿ ಎನ್ನುವುದು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆ (ಏಜ್ ರಿಲೇಟೆಡ್ ಮ್ಯಾಕ್ಯುಲರ್ ಡೀಜನರೇಷನ್). 60 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಯಸ್ಸಿನವರಲ್ಲಿ ಅಂಧತ್ವಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು. ಇದು ಕಣ್ಣಿನ ರೆಟಿನಾದಲ್ಲಿರುವ ಮ್ಯಾಕುಲ ಅಂದರೆ ಅಕ್ಷಿಪಟಲದಲ್ಲಿರುವ ಅತ್ಯಂತ ತೀಕ್ಷ್ಣ ದೃಷ್ಟಿಯುಳ್ಳ ಪ್ರದೇಶವನ್ನು ಘಾಸಿಗೊಳಿಸಿ ದೃಷ್ಟಿಗೆ ಅಗತ್ಯವಿರುವ ಪ್ರಮುಖ ನರತಂತುಗಳನ್ನೇ ನಿಷ್ಕ್ರಿಯಗೊಳಿಸುತ್ತ ಹೋಗುತ್ತದೆ. ನಮ್ಮ ಎದುರು ಇರುವ ವಸ್ತುಗಳನ್ನು ನೋಡಲು ತೀಕ್ಷ್ಣವಾದ ಕಣ್ಣಿನ ಮಧ್ಯೆ ಇರುವ ದೃಷ್ಟಿಯ ಅವಶ್ಯಕತೆ ಇರುತ್ತದೆ. ಆದರೆ ಈ ಸಮಸ್ಯೆ ಈ ಮಧ್ಯದ ಭಾಗಕ್ಕೇ ಧಕ್ಕೆ ಉಂಟು ಮಾಡುತ್ತದೆ. ವ್ಯಕ್ತಿಗೆ ವಯಸ್ಸಾಗುತ್ತ ಹೋದಂತೆ ಈ ಮ್ಯಾಕುಲ ನಾಶವಾಗುತ್ತ ಹೋಗುತ್ತದೆ. ಇದರಿಂದ ಸರಿಯಾಗಿ ಕಾಣಿಸದೇ ವ್ಯಕ್ತಿ ಬೀಳಬಹುದು. ವೃದ್ಧಾಪ್ಯವೂ ಸೇರಿ ಇದು ಗಂಭೀರವಾದ ಗಾಯಗಳಿಗೆ ಎಡೆ ಮಾಡಬಹುದು. ಶೇ 74ರಷ್ಟು ವೃದ್ಧರು ಬಿದ್ದೋ ಬೀಳದೆಯೋ ಗಾಯಗೊಳ್ಳುತ್ತಾರೆ. ಅಂದರೆ ಎಎಂಡಿ ಪ್ರಕರಣಗಳಲ್ಲಿ ದೃಷ್ಟಿ ಮಂದವಾಗುವುದರಿಂದ ಬೀಳುವವರ ಸಂಖ್ಯೆಯೂ ಹೆಚ್ಚು ಅಥವಾ ಬೇರೆ ಕಾರಣಕ್ಕಾಗಿ ಗಾಯಗೊಳ್ಳುವವರ ಸಂಖ್ಯೆ ಕೂಡ ಹೆಚ್ಚು. ದೃಷ್ಟಿ ದೋಷದಿಂದ ದೇಹದ ಸಮತೋಲನ ಕಾಪಾಡಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ದೈನಂದಿನ ಚಟುವಟಿಕೆಗಳನ್ನು ನಡೆಸಲು ಕಷ್ಟವಾಗುವುದು ಮತ್ತು ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗದೇ ಇರುವುದಕ್ಕೂ ಎಎಂಡಿ ಕಾರಣ. ಲಕ್ಷಣಗಳು ದೃಷ್ಟಿ ವಕ್ರವಾಗುವುದು. ಉದಾಹರಣೆಗೆ ನೇರ ಗೆರೆಗಳು ಬಾಗಿದಂತೆ ಕಾಣುವವು. ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಮಂದವಾಗುವ ಮಧ್ಯ ಭಾಗದ ದೃಷ್ಟಿ ಓದಲು ಅಥವಾ ಇತರ ಕಣ್ಣಿಗೆ ಸಮೀಪವಾದ ಕೆಲಸಗಳನ್ನು ಮಾಡಲು ಹೆಚ್ಚು ಪ್ರಕಾಶಮಾನವಾದ ಬೆಳಕಿನ ಅವಶ್ಯಕತೆ ಕಡಿಮೆ ಬೆಳಕಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಬಣ್ಣಗಳು ಗಾಢವಾಗಿ ಕಾಣಿಸುವುದಿಲ್ಲ. ವ್ಯಕ್ತಿಗಳ ಮುಖ ಗುರುತಿಸಲು ಕಷ್ಟವಾಗುತ್ತದೆ. ದೃಷ್ಟಿಯ ಮಧ್ಯೆ ಕಪ್ಪು ಚುಕ್ಕೆ ಗೋಚರಿಸಬಹುದು. ಕ್ರಮೇಣ ದೃಷ್ಟಿ ಸಂಪೂರ್ಣ ಮಂದವಾಗಿ, ಕೊನೆಗೆ ಅಂಧತ್ವ ಬರಬಹುದು. ಸಮಸ್ಯೆ ನಿವಾರಣೆ ಹೇಗೆ? ಕುಟುಂಬದ ಸದಸ್ಯರು ಎಎಂಡಿ ಸಮಸ್ಯೆ ಇರುವವರಿಗೆ ಯಾವುದೇ ಅವಲಂಬನೆಯಿಲ್ಲದೇ ಕೆಲಸ ಮಾಡಿಕೊಳ್ಳಲು ನೆರವಾಗಬೇಕು. ಮನೆಯಲ್ಲಿ ಸುರಕ್ಷಿತ ವಾತಾವರಣ ಸೃಷ್ಟಿಸಬೇಕು. ಈ ಸಮಸ್ಯೆ ಇರುವವರ ದೇಹಬಲ ಮತ್ತು ಸಮತೋಲನ ಸಾಮರ್ಥ್ಯವನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು. ಮನೆಯೊಳಗೆ ಬೆಳಕಿನ ಪ್ರಮಾಣವನ್ನು ಹೆಚ್ಚಿಸಬೇಕು. ಮನೆಯಲ್ಲಿರುವ ಅಡೆತಡೆಗಳನ್ನು ನಿವಾರಿಸಬೇಕು. ಸುರಕ್ಷಿತವಲ್ಲದ ಪಾದರಕ್ಷೆಗಳನ್ನು ಬಳಸಲು ಬಿಡಬಾರದು.ಎಎಂಡಿಯಂಥ ರೆಟಿನಾ ಸಮಸ್ಯೆ ಜೀವನಪರ್ಯಂತ ಇರುತ್ತದೆ. ಆದರೂ ಅದನ್ನು ಸೂಕ್ತವಾಗಿ ನಿರ್ವಹಿಸಬಹುದು. ಆದರೆ ಇದನ್ನು ಸಕಾಲಿಕವಾಗಿ ಗುರುತಿಸುವುದು ಅಗತ್ಯ. ಬೇಗನೇ ಸಮಸ್ಯೆ ಗುರುತಿಸಿ ಚಿಕಿತ್ಸೆ ಪಡೆದರೆ ಬದುಕಿನ ಗುಣಮಟ್ಟ ಸುಧಾರಿಸಬಹುದು. ಆದರೆ ರೆಟಿನಾ ಸಮಸ್ಯೆಯ ಗುಣಲಕ್ಷಣಗಳೊಂದಿಗೆ ಆಸ್ಪತ್ರೆಗೆ ಬರುವವರಲ್ಲಿ ಶೇ 50ರಿಂದ 60 ಮಂದಿ ಕಾಯಿಲೆ ಜಾಸ್ತಿಯಾಗಿರುವ ಹಂತದಲ್ಲಿರುತ್ತಾರೆ. ಜನರಲ್ಲಿ ಈ ಕಾಯಿಲೆ ಬಗ್ಗೆ ಅರಿವು ಇಲ್ಲದಿರುವುದು ಅಥವಾ ಕಾಯಿಲೆಯ ಗುಣಲಕ್ಷಣಗಳನ್ನು ನಿರ್ಲಕ್ಷಿಸುವುದು ಇದಕ್ಕೆ ಕಾರಣ. ಸಕಾಲಿಕವಾಗಿ ಇದನ್ನು ಗುರುತಿಸಿದರೆ ರೋಗಿ ಮಾನಸಿಕವಾಗಿ ಕುಗ್ಗುವುದನ್ನು ತಪ್ಪಿಸಬಹುದು ಅಥವಾ ಬೀಳುವ ಭಯದಿಂದ ಅವರನ್ನು ಮುಕ್ತರಾಗಿಸಬಹುದು. ಅದೃಷ್ಟವಶಾತ್ ಎಎಂಡಿ ಸಮಸ್ಯೆ ಎದುರಿಸುವವರಿಗೆ ಈಗ ಆಶಾದಾಯಕ ಪರಿಹಾರವೊಂದಿದೆ. ನಿರ್ದಿಷ್ಟ ಪ್ರಕರಣಗಳಲ್ಲಿ ಇದನ್ನು ನಿವಾರಿಸುವ ಮತ್ತು ರೋಗ ಉಲ್ಬಣಗೊಳ್ಳುವುದನ್ನು ತಡೆಯಲು ಚಿಕಿತ್ಸೆ ಲಭ್ಯವಿದೆ. ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿದರೆ ಈ ಚಿಕಿತ್ಸೆಗಳು ಹೆಚ್ಚು ಪರಿಣಾಮಕಾರಿ. ಲೇಸರ್ ಫೋಟೊಕೊಗ್ಯುಲೇಷನ್, ಆ್ಯಂಟಿ ವಿಇಜಿಎಫ್ (ವ್ಯಾಸ್ಕುಲರ್ಎಂ ಡೊಥಿಲಿಯಲ್ ಗ್ರೋಥ್ ಫ್ಯಾಕ್ಟರ್) ಚುಚ್ಚುಮದ್ದುಗಳು ಮತ್ತು ಇವರೆಡರ ಸಂಯುಕ್ತ ಚಿಕಿತ್ಸೆಯನ್ನು ಎಎಂಡಿ ರೋಗಿಗಳು ಪಡೆಯಬಹುದು. (ಲೇಖಕರು ನೇತ್ರ ಕಣ್ಣಿನ ಆಸ್ಪತ್ರೆಯ ನಿರ್ದೇಶಕ ಮತ್ತು ವಿಟ್ರಿಯೋ ರೆಟಿನಲ್ ಕನ್ಸಲ್ಟೆಂಟ್)

courtsey:prajavani.net

https://www.prajavani.net/artculture/article-features/fear-of-falling-in-aged-group-688076.html

Leave a Reply