ಮರೆಯಲಾಗದ ಮಾಧುರ್ಯ

ಅದು ಸಂಗೀತ ಪ್ರಧಾನ ಬಸಂತ್‌ ಬಹಾರ್‌ ಚಿತ್ರದ ‘ಕೇತಕೀ ಗುಲಾಬ್‌ ಜೂಹಿ ಚಂಪಕ ಬನ….’ ಹಾಡಿನ ರೆಕಾರ್ಡಿಂಗ್‌ ಸಂದರ್ಭ. ಭೀಮಸೇನ ಜೋಶಿ ಜೊತೆ ಮನ್ನಾ ಡೇ ಹಾಡಬೇಕಾಗಿದ್ದ ಗೀತೆ. ಹಾಡಿನ ಸನ್ನಿವೇಶವನ್ನು ವಿವರಿಸುವಂತೆ ಸಂಗೀತ ಸಂಯೋಜಕ ಶಂಕರ್‌ ಜೈಕಿಶನ್‌ ಅವರನ್ನು ಮನ್ನಾ ಡೇ ಕೋರಿದರು. ಆಗ ಪ್ರವರ್ಧಮಾನಕ್ಕೆ ಬರುತ್ತಿದ್ದ ಹಿಂದೂಸ್ತಾನಿ ಗಾಯಕ ಜೋಶಿ ಎದುರು ತನ್ನ ಸಂಗೀತ ಪ್ರಾವೀಣ್ಯತೆ ಸಾಟಿಯಾಗಬಹುದೇ ಎಂಬ ಅಳುಕು ಮನ್ನಾ ಡೇ ಅವರಿಗಿತ್ತು. ಇದನ್ನರಿತ ಶಂಕರ್‌, ಹಾಡಿನ ಸಂದರ್ಭ ವಿವರಿಸಿದರು. ರೆಕಾರ್ಡಿಂಗ್‌ ಮುಗಿದ ಮೇಲೆ ಜೋಶಿ, ಮನ್ನಾ ಡೇ ಅವರನ್ನು ಮನಸಾರೆ ಅಭಿನಂದಿಸಿದರು.ಹಿಂದಿ, ಬಂಗಾಳಿ ಹಿನ್ನೆಲೆ ಗಾಯಕರ ಇತಿಹಾಸದಲ್ಲಿ ಮನ್ನಾ ಡೇ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಬಾಲ್ಯದಿಂದಲೇ ಮನ್ನಾ ಡೇ ಅವರಿಗೆ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ. ವಿದ್ವಾಂಸರಾಗಿದ್ದ ಚಿಕ್ಕಪ್ಪ ಕೆ.ಸಿ. ಡೇ ಅವರಿಂದ ಸಂಗೀತ ಶಿಕ್ಷಣ ದೊರೆಯಿತು. ಮನ್ನಾ ಡೇ ಪ್ರಕಾರ ಸಂಗೀತ ದೈವಿಕ. ಸರಸ್ವತಿಯ ವರಪ್ರಸಾದ. ಸಂಯೋಜಕರೂ ಆಗಿದ್ದ ಮನ್ನಾ ಡೇ ತಾವು ಹಾಡಿದ ಪ್ರತೀ ಹಾಡಿನ ಹಿಂದೆ ಶ್ರಮ ಹಾಕುತ್ತಿದ್ದರು. ಹಂತ ಹಂತವಾಗಿ ಕಲಿತುಕೊಂಡ ಅವರು, ವೈವಿಧ್ಯಮಯ ರೀತಿಯ ಹಾಡುಗಳನ್ನು ಬತ್ತಳಿಕೆಯಲ್ಲಿ ಸೇರಿಸಿಕೊಂಡರು. ಹಿಂದಿ ಚಿತ್ರರಂಗದ ವಿಷಯಕ್ಕೆ ಬಂದರೆ ಮಹಮದ್‌ ರಫಿ ಅವರನ್ನು ಹೊರತುಪಡಿಸಿದರೆ, ಅವರ ಪ್ರತಿಭೆಯನ್ನು ಸರಿಗಟ್ಟುವ ಗಾಯಕರಿರಲಿಲ್ಲಬಂಗಾಳಿ ಗೀತೆಗಳ ಸುವರ್ಣಯುಗದಲ್ಲಿ ಕೇಳಿಬರುವ ದೊಡ್ಡ ಹೆಸರುಗಳಲ್ಲಿ ಮನ್ನಾ ಡೇ, ಸತಿನಾಥ ಮುಖರ್ಜಿ, ಶ್ಯಾಮಲ್‌ ಮಿತ್ರಾ, ಹೇಮಂತ ಮುಖರ್ಜಿ ಪ್ರಮುಖವಾದವು. ಎಲ್ಲರೂ ಪ್ರತಿಭಾವಂತ ಸಂಗೀತ ಸಂಯೋಜಕರು ಮತ್ತು ಗಾಯಕರಾಗಿದ್ದರು. ತಮ್ಮದೇ ವಿಶಿಷ್ಟ ಶೈಲಿ ಹೊಂದಿದ್ದರು. ಪದ ಪ್ರಯೋಗ, ರಾಗ ಪ್ರಸ್ತುತಿ, ಸಂಕೀರ್ಣ ಹಾಡುಗಳನ್ನು ಸರಳವಾಗಿ ಹಾಡುತ್ತಿದ್ದ ರೀತಿ ಇವೆಲ್ಲವೂ ಅವರ ಸ್ವತ್ತು.‘ತೀನ್‌ ಭುವನೇರ್‌ ಪಾರೆ’ ಚಿತ್ರದ ಗೀತೆಯೊಂದಕ್ಕೆ ಸುದಿನ್‌ ದಾಸ್‌ ಗುಪ್ತಾ ರೆಕಾರ್ಡಿಂಗ್‌ ಮಾಡುತ್ತಿದ್ದಾಗ, ಮನ್ನಾ ಡೇ ಅವರಿಗೆ ಆ ಹಾಡನ್ನು ಮೈಕುಣಿಸುವ ಪಾಶ್ಚಾತ್ಯ ಶೈಲಿಯಲ್ಲಿ ಹಾಡುವಂತೆ ಕೇಳಿದರು. ಎಂಟು ವರ್ಷಗಳ ಹಿಂದೆಯೇ ಮನ್ನಾ ಡೇ, ರಾಹುಲ್‌ ದೇವ್‌ ಬರ್ಮನ್‌ ಅವರಿಗೆ ಈ ಶೈಲಿಯ ‘ಆವೊ ಟ್ವಿಸ್ಟ್‌ ಕರೇ…’ (ಚಿತ್ರ: ಭೂತ್‌ ಬಂಗ್ಲಾ) ಹಾಡನ್ನು ನಿರರ್ಗಳವಾಗಿ ಹಾಡಿದ್ದರು. ಬಂಗಾಳಿ ಚಿತ್ರಗಳಲ್ಲಿ ಅವರು ರೊಮ್ಯಾಂಟಿಕ್‌ ಹಾಡುಗಳನ್ನೂ ಹಾಡಿದ್ದರು.ಮನ್ನಾ ಡೇ ಹಮ್ಮುಬಿಮ್ಮು ಇಲ್ಲದೇ ಸುಲಭವಾಗಿ ಸಿಗುತ್ತಿದ್ದ ವ್ಯಕ್ತಿಯಾಗಿದ್ದರು. ತಮಗೆ ಬರುತ್ತಿದ್ದ ಫೋನ್‌ ಕರೆಗಳನ್ನು ಸ್ವತಃ ಸ್ವೀಕರಿಸಿ ಮಾತನಾಡುತ್ತಿದ್ದರು. ರೆಕಾರ್ಡಿಂಗ್‌ ಸ್ಟುಡಿಯೊಗಳಿಗೆ ಹೇಳಿದ ಸಮಯಕ್ಕೇ ಹಾಜರಿರುತ್ತಿದ್ದರು. ಸಹ ಕಲಾವಿದರಿಗೆ ಗೆಳೆಯರಂತಿದ್ದರು. ಕಿರಿಯರಿಗೆ ಪೋಷಕರ ರೀತಿಯಲ್ಲಿದ್ದರು. ಎಸ್‌.ಡಿ. ಬರ್ಮನ್‌ ಮತ್ತು ಶಂಕರ್‌ ಜೈಕಿಶನ್‌ ಇಬ್ಬರೂ ತಮ್ಮ ಕ್ಲಿಷ್ಟ ಸಂಯೋಜನೆಗಳಿಗೆ ಧ್ವನಿರೂಪ ನೀಡಲು ಮನ್ನಾ ಡೇ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಸಲೀಲ್‌ ಚೌಧರಿ ಮತ್ತು ನಚಿಕೇತ ಘೋಷ್‌ ಅವರೂ ಅಷ್ಟೇಮನ್ನಾ ಡೇ ಅವರು ಸ್ವಪ್ರತಿಷ್ಠೆ ಹೊಂದಿದ್ದರು. ಇತರರಿಗೆ ಹೆಚ್ಚು ಬೆಲೆ ಕೊಡುತ್ತಿರಲಿಲ್ಲ ಎಂಬ ಭಾವನೆಯೂ ಇತ್ತು. ಆದರೆ ಇದಕ್ಕೆ ತದ್ವಿರುದ್ಧ ಎಂಬಂತಿದ್ದರು ಮನ್ನಾ ಡೇ. ಮಹಮದ್‌ ರಫಿ ಅವರನ್ನು ಭಾರತದ ಶ್ರೇಷ್ಠ ಹಿನ್ನೆಲೆ ಗಾಯಕ ಎಂದು ಪರಿಗಣಿಸಿದ್ದರು. ಮನ್ನಾ ಡೇ ಪ್ರಕಾರ, ಹೇಮಂತ ಮುಖರ್ಜಿ, ಬಂಗಾಳದ ಪ್ರಗತಿಶೀಲ ಸಂಸ್ಕೃತಿಯ ಪ್ರತೀಕ. ಲತಾ ಮಂಗೇಷ್ಕರ್‌ ಮತ್ತು ಆಶಾ ಭೋಂಸ್ಲೆ ಮಾಧುರ್ಯದ ಮಹಾರಾಣಿಯರಾಗಿದ್ದರೆ, ಗೀತಾ ದತ್‌ ರೊಮ್ಯಾಂಟಿಕ್‌ ಗಾಯಕಿಯಾಗಿದ್ದರು. ಪ್ರತಿಮಾ ಬಂದೋಪಾಧ್ಯಾಯ ಅವರು ವಿಶಿಷ್ಟ ಗಾಯಕಿಯಾಗಿದ್ದರೆ, ಸುಮನ್‌ ಕಲ್ಯಾಣಪುರ್‌ ಅವರದ್ದು ಮುಗ್ಧ ಮಾಧುರ್ಯ ಎಂಬುದು ಮನ್ನಾ ಅವರ ಅಭಿಪ್ರಾಯವಾಗಿತ್ತು.ಕಿಶೋರ್ ಕುಮಾರ್‌ ಜೊತೆ ಮನ್ನಾ ಡೇ ಸೋದರನ ರೀತಿಯ ನಂಟು ಹೊಂದಿದ್ದರು. ತಮ್ಮ ಪುತ್ರ ಅಮಿತ್‌ ಕುಮಾರ್‌ ಒಮ್ಮೆ ಮನ್ನಾ ಡೇ ಮತ್ತು ಹೇಮಂತ್‌ ಮುಖರ್ಜಿ ಅವರ ಹಾಡುಗಳನ್ನು ಅನುಕರಿಸಲು ಯತ್ನಿಸಿದ್ದಕ್ಕೆ ಗದರಿಸಿದ್ದರು. ಹಾಡುಗಳಿಗೆ ಈ ಇಬ್ಬರು ದಿಗ್ಗಜರಂತೆ ಇಂಪನ್ನು ಒದಗಿಸಲು ತಮಗೆ ಅಸಾಧ್ಯ ಎಂದು ಕಿಶೋರ್‌ ಒಪ್ಪಿಕೊಂಡಿದ್ದರು. ‘ಪಡೋಸನ್‌’ ಚಿತ್ರದ ‘ಏಕ್‌ ಚತುರ ನಾರ್‌ ಕರ್‌ ಕೇ ಶೃಂಗಾರ್‌…’ ಹಿಟ್‌ ಹಾಡಿನಲ್ಲಿ ಮನ್ನಾ ಡೇ– ಕಿಶೋರ್‌ ಪ್ರತಿಭೆ ಕಾಣಬಹುದು. ಇಲ್ಲಿ ಒಬ್ಬರನ್ನೊಬ್ಬರು ಮೀರಿಸಲು ಯತ್ನಿಸಲಿಲ್ಲ. ಎಸ್‌.ಡಿ.ಬರ್ಮನ್‌ ಅವರು ಮೃತರಾದ ನಂತರ ಉಂಟಾದ ನಿರ್ವಾತವನ್ನು ಆರ್‌.ಡಿ.ಬರ್ಮನ್‌, ಸಲೀಲ್‌ ಚೌಧರಿ ಮತ್ತು ಶಂಕರ್‌ ಜೈಕಿಶನ್‌ ಬಹುಮಟ್ಟಿಗೆ ತುಂಬಿದ್ದರು ಎಂಬುದು ಅವರ ಅನಿಸಿಕೆಯಾಗಿತ್ತು.ಮನ್ನಾ ಡೇ ಅವರಿಗೆ ಹಾಡಿನಷ್ಟೇ ಅದರೊಳಗಿದ್ದ ಸಾಹಿತ್ಯವೂ ಮಹತ್ವದ್ದಾಗಿತ್ತು. ಗೀತೆಯಲ್ಲಿರುವ ಪದಗಳ ಬಗ್ಗೆ ಅವರು ಗಮನಹರಿಸುತ್ತಿದ್ದರು. ಅಶ್ಲೀಲ ಪದಗಳೆಂದೂ ಅವರ ಗೀತೆಯಲ್ಲಿ ಸುಳಿಯಲಿಲ್ಲ. ಪುಲಕ್‌ ಬಂದೋಪಾಧ್ಯಾಯ, ಗೌರಿಪ್ರಸನ್ನ ಮಜುಂದಾರ್‌ ಮತ್ತು ಸುದಿನ್‌ ದಾಸ್‌ ಗುಪ್ತಾ ಅವರ ಗೀತೆಗಳು ಮನ್ನಾ ಅವರಿಗೆ ಖುಷಿಕೊಡುತ್ತಿದ್ದವು. ಹಿಂದಿಯಲ್ಲಿ ಶೈಲೇಂದ್ರ, ಹಸ್ರತ್‌ ಜೈಪುರಿ, ಮಜ್ರೂ ಸುಲ್ತಾನ್‌ಪುರಿ ಮತ್ತು ಸಾಹಿರ್‌ ಲೂಧಿಯಾನ್ವಿ ಅವರ ಗೀತಸಾಹಿತ್ಯದ ಬಗ್ಗೆ ಒಲವು ಹೊಂದಿದ್ದರು. ಅವರಿಗೆ ಆನಂದ ಬಕ್ಷಿ, ಹೊಸತನದ ಸಾಹಿತಿ ಎನಿಸಿದ್ದರು. ಕೈಫಿ ಆಜ್ಮಿ ಬರೆದ ‘ಹೋಕೆ ಮಜಬೂರ್‌ ಮುಝೇ…’ ಗೀತೆಯನ್ನು ಹಾಡುವಾಗ ಅವರ ಕಣ್ಣಂಚು ತೇವಗೊಂಡಿತ್ತು ಎಂಬುದು ಕೆಲವರಿಗಷ್ಟೇ ಗೊತ್ತು. ಇದನ್ನು ಗಮನಿಸಿದ ಇತರ ಗಾಯಕರಾದ ಮಹಮದ್‌ ರಫಿ, ತಲತ್‌ ಮೆಹಮೂದ್‌, ಭೂಪೇಂದ್ರ ಅವರು ಮನ್ನಾ ಡೇ ಅವರನ್ನು ಕೊಂಡಾಡಿದ್ದರು. ಮದನ್‌ ಮೋಹನ್‌ ಸಂಗೀತ ಸಂಯೋಜನೆಯ ‘ಹಕೀಕತ್‌’ ಚಿತ್ರದ ಈ ಹಾಡು, ‘ಲಾಗಾ ಚುನರೀ ಮೇ ದಾಗ್‌’ (ದಿಲ್‌ ಹೀ ತೊ ಹೈ, 1963) ಹಾಡಿನಷ್ಟೇ ಸವಾಲಿನದ್ದು ಎಂದು ಮನ್ನಾ ಡೇ ಪರಿಗಣಿಸಿದ್ದರು.ಬಂಗಾಳಿ ನಟರಾದ ಉತ್ತಮ್‌ ಕುಮಾರ್‌ ಮತ್ತು ಸೌಮಿತ್ರ ಚಟರ್ಜಿ ಅವರಿಗೆ ಹಿನ್ನೆಲೆಯಾಗಿ ಹಾಡಿದ ಎಲ್ಲ ಹಾಡುಗಳಿಗೂ ಮನ್ನಾ ಡೇ ಸಂಪೂರ್ಣ ನ್ಯಾಯ ಒದಗಿಸಿದ್ದರು. ಹಿಂದಿಯ ರಾಜ್‌ ಕಪೂರ್‌ ಅವರಿಗೆ ಮುಖೇಶ್‌ ಹೊರತುಪಡಿಸಿದರೆ ಮನ್ನಾ ಡೇ ಅವರೇ ನೈಜ ಪರ್ಯಾಯ. ಬಲರಾಜ್ ಸಾಹ್ನಿ, ಪ್ರಾಣ್‌, ಶಮ್ಮಿ ಕಪೂರ್‌, ರಾಜೇಶ್‌ ಖನ್ನಾ ಅವರಿಗೂ ಹಿನ್ನೆಲೆಯಾಗಿ ಅವಿಸ್ಮರಣೀಯ ಗೀತೆಗಳನ್ನು ಹಾಡಿದರು. ‘ಯೇ ಮೇರೇ ಜೊಹ್ರಜಬಿ, ತುಝೆ ಮಾಲೂಮ್‌ ನಹಿ…’ (ವಕ್ತ್‌, 1965) ಗೀತೆಯನ್ನು ಅವರು ಧೋಲಕ್‌ ಬೀಟ್ಸ್‌ಗೆ ತಕ್ಕಂತೆ ಲಯಬದ್ಧವಾಗಿ ಹಾಡಿದ್ದರು. ನೌಷಾದ್‌ ಮತ್ತು ಓ.ಪಿ.ನಯ್ಯರ್‌ ಅವರು ಮನ್ನಾ ಡೇ ಅವರಿಗೆ ಎಂದೂ ಅವಕಾಶ ನೀಡದಿದ್ದುದು ದುರಂತವೆನ್ನಬೇಕು.ದಾದಾಸಾಹೇಬ ಫಾಲ್ಕೆ ಪುಶಸ್ತಿ ಪುರಸ್ಕೃತರಾದ ಈ ಗಾಯಕ ತಮ್ಮ ನೋವನ್ನೆಂದೂ ಬಹಿರಂಗವಾಗಿ ತೋರಿಸಿಕೊಳ್ಳಲಿಲ್ಲ. ಅವರ ಜೀವನದ ಕೊನೆಯ ದಿನಗಳು ಸುಖಕರವಾಗೇನೂ ಇರಲಿಲ್ಲ. ಆದರೆ ಮುಖದ ಮೇಲಿನ ತಿಳಿನಗು ಎಂದೂ ಮಾಸಲಿಲ್ಲ. ಅವರ ಜನ್ಮಶತಮಾನೋತ್ಸವದ (ಜನನ: 1.5.1919) ಸಂದರ್ಭದಲ್ಲಿ ಅವರ ಬದುಕನ್ನು ಅವರೇ ಹಾಡಿದ ‘ಯೇ ಭಾಯ್‌, ಝರ ದೇಖ್‌ ಕೇ ಚಲೋ…’ (ಚಿತ್ರ: ಮೇರಾ ನಾಮ್‌ ಜೋಕರ್‌) ಮೂಲಕ ಅರ್ಥೈಸಿಕೊಳ್ಳಬಹುದು.(ಕನ್ನಡಕ್ಕೆ: ನಾಗೇಶ್ ಶೆಣೈ”

courtsey:prajavani.net

Leave a Reply