ಪಂಪನ ಕಾವ್ಯದಲ್ಲಿ ಭಗವದ್ಗೀತೆ  ಭಾಗ-೪

ಪಂಪನ ಕಾವ್ಯದಲ್ಲಿ ಭಗವದ್ಗೀತೆ  ಭಾಗ-೪

ಪಂಪನ ಈ ಒಂದು ವೃತ್ತದಲ್ಲಿ ಉಳಿದ ಮಾತು ಇಷ್ಟು : ‘[ಎಂದು] ಸಯ್ತಜಿತನ್ ಆದಿಯ ವೇದ ರಹಸ್ಯದೊಳ್ ನಿರಂತದ (ಪರಿಚರ್ಯೆಯಿಂ) ನೆಱೆಯೆ ಯೋಜಿಸಿದಂ ಕದನ ತ್ರಿಣೇತ್ರನಂ.’ ಹೀಗೆ ನೇರವಾಗಿ ಅಜಿತನು (ಕೃಷ್ಣನು) ಆದಿಯ ವೇದ ರಹಸ್ಯದಲ್ಲಿ ನಿರಂತರವಾದ ಅನುನಯದ ಮಾತುಗಳಿಂದ ಕದನ ತ್ರಿನೇತ್ರನಾದ ಅರ್ಜುನನನ್ನು ಸಂಪೂರ್ಣವಾಗಿ [ಯುದ್ಧೋದ್ಯಮಕ್ಕೆ] ನಿಯೋಜಿಸಿದನು. ಇಲ್ಲಿ ‘ಆದಿಯ ವೇದರಹಸ್ಯದೊಳ್’ -ಎಂಬ ಮಾತು ಸ್ವಾರಸ್ಯವಾಗಿದೆ. ‘ಆದಿಯ ವೇದರಹಸ್ಯದೊಳ್’ ಎಂದರೆ ಬಹುಶಃ ಉಪನಿಷತ್ ಪ್ರಣೀತವಾದ ಈ ತತ್ವದಲ್ಲಿ ಎಂದು ಅರ್ಥವಿರಬಹುದು ಕವಿಯ ಅಭಿಪ್ರಾಯದಲ್ಲಿ. ಏಕೆಂದರೆ ಭಗವದ್ಗೀತೆಯಲ್ಲಿ ಸರ್ವೋಪನಿಷತ್ತುಗಳ ಸಾರವೇ ಸಂಕ್ಷಿಪ್ತವಾಗಿ, ಎಲ್ಲರಿಗೂ ತಿಳಿಯುವಂಥ ರೂಪದಲ್ಲಿ ಬಂದಿದೆ ಎನ್ನುವ ಪ್ರಶಸ್ತಿ ಭಗವದ್ಗೀತೆಗೆ ಸಂದಿದೆ.
ಭಗವದ್ಗೀತೆಯ ತಿರುಳನ್ನು ಇದಕ್ಕಿಂತ ಸೊಗಸಾಗಿ ಪ್ರಾಮಾಣಿಕವಾಗಿ, ಅತ್ಯಂತ ಸಂಕ್ಷಿಪ್ತವಾಗಿ ಸಂಗ್ರಹರೂಪದಲ್ಲಿ ಒಂದೇ ವೃತ್ತದಲ್ಲಿ ಮೂರೇ ಮಾತಿನಲ್ಲಿ ಹಿಡಿದಿರಿಸಬಲ್ಲ ಈ ತ್ರಿವಿಕ್ರಮ ಪ್ರತಿಭೆ ಪಂಪನಿಗಲ್ಲದೆ ಇನ್ನಾರಿಗೆ ಸಾಧ್ಯ? ಭಗವದ್ಗೀತೆಯಲ್ಲಿ ವೇದಾಂತದ ದೃಷ್ಟಿಯಿಂದ ಇನ್ನೂ ಎಷ್ಟೋ ವಿಷಯಗಳು ಇವೆ. ಅವೂ ಅಮೂಲ್ಯವಾಗಿಯೇ ಇವೆ. ಆದರೆ ಕವಿ ಪಂಪ ಮಹಾಭಾರತವನ್ನು ಬರೆಯುವಲ್ಲಿ, ‘ವಿಕ್ರಮಾರ್ಜುನನ ಮನದೊಳಾದ ವ್ಯಾಮೋಹಮಂ ಕಳೆಯಲೆಂದು’- ಇಡೀ ಗೀತೆಯ ಉದ್ದೇಶವೇ ಅದು; ಅರ್ಜುನನ ಮನಸ್ಸಿನ ವ್ಯಾಮೋಹವನ್ನು ಕಳೆದು ಸ್ವಧರ್ಮಕ್ಕೆ ತಂದು ಕರ್ತವ್ಯದಲ್ಲಿ ನಿಯೋಜಿಸುವುದು -ಹೇಳಬೇಕಾದ ಗೀತಾತತ್ವವನ್ನು ಅತ್ಯಂತ ಎಚ್ಚರಿಕೆಯಿಂದ ಕಡೆದಿರಿಸಿದ್ದಾನೆ. ಇಷ್ಟನ್ನು ನೋಡಿದ ಮೇಲೆ ಭಗವದ್ಗೀತೆಗೆ ಊನವಾಗಿದೆಯೆಂದಾಗಲಿ, ಗೀತೆ ಇಷ್ಟರಲ್ಲೇ ತೇಲಿಹೋಗಿದೆ ಎಂದಾಗಲೀ ನಮಗೆ ಅನ್ನಿಸುವುದಿಲ್ಲ. ಜೊತೆಗೆ ಕೃಷ್ಣನ ಪಾತ್ರದ ಹಿರಿಮೆಗೆ ಯಾವ ಕೊರತೆಯೂ ಉಂಟಾದಂತೆ ತೋರುವುದಿಲ್ಲ. ಅದರ ಬದಲು ಅರ್ಜುನನ ಪಾತ್ರದ ಘನತೆಯನ್ನು ತಗ್ಗಿಸದೆ ಕೃಷ್ಣನ ಪಾತ್ರದ ದಿವ್ಯತ್ವವನ್ನೇ ಪಂಪ ಎತ್ತಿಹಿಡಿದಿರುವುದು ಸ್ವಾರಸ್ಯದ ಸಂಗತಿಯಾಗಿದೆ.
ಭಗವದ್ಗೀತೆಯ ಪ್ರಸಂಗವನ್ನು ಸಂಗ್ರಹನಿಪುಣನಾದ ಪಂಪ ಅತ್ಯಂತ ಸಂಕ್ಷೇಪವಾಗಿ ನಿರೂಪಿಸಿದ್ದಾನೆಯೇ ಹೊರತು, ಅವನಿಗೆ ಗೀತೆಯ ವಿಚಾರಕ್ಕಾಗಲೀ ಗೀತಾಚಾರ್ಯನಾದ ಶ್ರೀಕೃಷ್ಣನ ವಿಚಾರದಲ್ಲಾಗಲಿ ಯಾವ ಸಂಕೋಚ ಭಾವನೆಯೂ ಇರುವಂತೆ ತೋರುವುದಿಲ್ಲ. ಹಾಗೆ ನೋಡಿದರೆ ಮೂಲ ಭಗವದ್ಗೀತೆಯಲ್ಲಿ ಕೃಷ್ಣನಿಗೆ ಯಾವ ಮಹತ್ವವಿದೆಯೋ ಅದೇ ಮಹತ್ತನ್ನು ಪಂಪ ಇಲ್ಲಿಯೂ ಎತ್ತಿಹಿಡಿದಿದ್ದಾನೆ. ಕೃಷ್ಣನ ದಿವ್ಯಾವತಾರ, ದಿವ್ಯಲೀಲೆ, ದಿವ್ಯೋಪದೇಶಗಳನ್ನು ಕವಿ ಗೌರವಿಸಿದ್ದಾನೆ. ಪಂಪನು ಚಿತ್ರಿಸಿರುವ ಈ ಭಾಗದಲ್ಲಿ ‘ಮುಕುಂದಂ ದಿವ್ಯಸ್ವರೂಪಮಂ ತೋಱಿ’ದ್ದು, ಅರ್ಜುನನನ್ನು ಕುರಿತು ‘ನೀನುಂ ಎನ್ನ ಕಜ್ಜದೊಳೆಸಗು’ ಎಂದು ಬೆಸಸಿದ್ದು, ‘ಅಜಿತ’ ಎನ್ನುವ ವಿಶೇಷಣವನ್ನು ಕೃಷ್ಣನ ವಿಚಾರದಲ್ಲಿ ಉಪಯೋಗಿಸಿ ತೀರ್ಥಂಕರನಿಗೆ ಸಮಾನವಾದ ಗೌರವವನ್ನು ತೋರಿದ್ದು, ಕಡೆಯಲ್ಲಿ ಕೃಷ್ಣನಿಂದ ಯುದ್ಧೋದ್ಯಮಕ್ಕೆ ನಿಯೋಜಿತನಾದ ‘ಪರಸೈನ್ಯ ಭೈರವಂ ಪುರಾಣಪುರುಷನಪ್ಪ ಪುರುಷೋತ್ತಮಂಗೆಱಗಿ ಪೊಡಮಟ್ಟು’ ರಥವನ್ನೇರಿದನೆಂದು ವರ್ಣಿಸಿದ್ದು, ಉದ್ದಕ್ಕೂ ಕೃಷ್ಣನ ಮಹಿಮೆಯನ್ನು ಇದೇ ಮಟ್ಟದಲ್ಲಿ ಚಿತ್ರಿಸಿಕೊಂಡು ಬಾರದಿರುವ ದೃಷ್ಟಿಯಿಂದ ವಿಸ್ಮಯಕರವಾಗಿ ತೋರಿದರೂ, ಇಲ್ಲಿ ಶ್ರೀಕೃಷ್ಣ ದಿವ್ಯರೂಪವನ್ನು ತೋರುವ ಮುಕುಂದನಾಗಿ, ಅಜಿತನಾಗಿ, ಪುರಾಣಪುರುಷನಪ್ಪ ಪುರುಷೋತ್ತಮನಾಗಿ ನಿಂತಿದ್ದಾನೆ ಎನ್ನುವುದು ಗಮನಾರ್ಹವಾಗಿದೆ. ಪಂಪನಲ್ಲಿ ಶ್ರೀಕೃಷ್ಣನನ್ನು ಕುರಿತು ಭಕ್ತಿಯ ಉದ್ರೇಕವಿಲ್ಲವೆಂಬುದು ದಿಟ; ಆದರೆ ಅವನ ಕಾವ್ಯದಲ್ಲಿ ಅದನ್ನು ನಿರೀಕ್ಷಿಸುವುದೇ ಅನುಚಿತ. ಇದೊಂದು ಅಂಶವನ್ನು ಬಿಟ್ಟರೆ ಸಾಕು, ಕೃಷ್ಣನು ಪುರುಷೋತ್ತಮ ಮಾತ್ರವಲ್ಲ, ಅವನು ಅವತಾರ ಪುರುಷನೆಂಬುದನ್ನೂ ಪಂಪನು ಅರಿತು ಅದೇ ರೀತಿಯಾಗಿ ನಿರೂಪಿಸಿರುವುದು ಅವನ ಕೃತಿಯಲ್ಲಿ ಎಷ್ಟೋ ಕಡೆ ಗೋಚರವಾಗುತ್ತದೆ.
ಆದರೆ ಎಲ್ಲಕ್ಕೂ ಬಹುಮುಖ್ಯವಾದ ಅಂಶದಲ್ಲಿ ಮಹಾಭಾರತವೆಂಬ ವೇದಕ್ಕೆ ಬೃಹದ್ದೇವತೆಯಾದ ಶ್ರೀಕೃಷ್ಣನ ವಿಷಯದಲ್ಲಿ, ಆತನ ದಿವ್ಯಾವತಾರ, ದಿವ್ಯೋಪದೇಶ, ದಿವ್ಯಲೀಲೆಗಳ ವಿಷಯದಲ್ಲಿ, ಆದಿತೀರ್ಥೇಶ್ವರನಲ್ಲಿ ಪಂಪನಿಗಿದ್ದ ಅನನ್ಯ ಶರಣ ಭಾವವಿಲ್ಲದೆ ಇದ್ದುದರಿಂದ, ತನ್ನ ಜೈನಶ್ರದ್ಧೆಗೂ, ತನ್ನ ಪೂರ್ವಿಕರ ವೈದಿಕ ಸಂಸ್ಕಾರಕ್ಕೂ ಹೋರಾಟ ಹುಟ್ಟಿ, ಒಳಗೇ ಪಂಪನ ಮನಸ್ಸು ಎರಡು ಕವಲಾಗಿ ಒಡೆದು, ಆತನ ಕವಿ ದೃಷ್ಟಿಯನ್ನೂ, ಆತನ ಉತ್ಸಾಹ ಧ್ವನಿಯನ್ನೂ ಸ್ವಲ್ಪ ಮಟ್ಟಿಗೆ ಕುಗ್ಗಿಸಿತೆಂದು ಹೇಳಬೇಕಾದ ನಿರ್ಬಂಧ ಒದಗಿದೆ ಎಂದು ಈ ವಿಷಯದಲ್ಲಿ -ಬಿ.ಎಂ. ಶ್ರೀಕಂಠಯ್ಯನವರು ಅಭಿಪ್ರಾಯಪಡುತ್ತಾರೆ. ಅಲ್ಲದೆ ಅವರು ಪಂಪನಲ್ಲಿ ವೈದಿಕ-ಜೈನ ಸಂಸ್ಕಾರಗಳೆರಡೂ ಮಿಶ್ರವಾದದ್ದರಿಂದಲೋ, ಅಥವಾ ಅವನ ವ್ಯಕ್ತಿತ್ವದ ಸಮತೂಕದಿಂದಲೋ, ಅವನು ನಾಗಚಂದ್ರಾದಿ ಜೈನ ಕವಿಗಳ ಹಾಗೆ ಪರಂಪರಾಗತವಾದ ಹಿಂದೂ ಭಾವನೆಗಳನ್ನು ಮನಸ್ವಿಯಾಗಿ ಬದಲಾಯಿಸಿ, ಜೈನ ಮುದ್ರೆಯನ್ನು ಬಲವಂತವಾಗಿ ಒತ್ತಲು ಹೋಗಿಲ್ಲ. ಆದರೂ ಜೈನಪ್ರಭಾವ ಆತನ ಲೌಕಿಕ ಕೃತಿ ವಿಕ್ರಮಾರ್ಜುನ ವಿಜಯದಲ್ಲಿ ಕಾಣದೆ ಇಲ್ಲ ಎಂದೂ ಹೇಳುತ್ತಾರೆ.
ನಾನು, ನನ್ನದು, ನನ್ನವರು, ಎನ್ನುವ ಸ್ವಜನಾಶಕ್ತಿ ಇರುವ ತನಕ ವ್ಯಕ್ತಿ ನಿಜವಾದ ಕರ್ತವ್ಯ ಕರ್ಮದಲ್ಲಿ ತೊಡಗಲಾರ. ಆದುದರಿಂದ ಆತ ಮೊದಲನೆಯದಾಗಿ ನಾನು, ನನ್ನದು ಎನ್ನುವ ಮಮಕಾರವನ್ನು ಬಿಟ್ಟು ಅನಾಸಕ್ತಿಯಿಂದ ಕರ್ತವ್ಯದಲ್ಲಿ ತೊಡಗಬೇಕು. ಈ ಅನಾಸಕ್ತಿ ಸಿದ್ಧಿಸಬೇಕಾದರೆ ವ್ಯಕ್ತಿ, ತಾನು ಏನಿದ್ದರೂ ಬೇರೊಂದು ದಿವ್ಯೋದ್ದೇಶದ ಉಪಕರಣ ಅಥವಾ ನಿಮಿತ್ತ ಮಾತ್ರ ಎನ್ನುವ ಅರಿವನ್ನು ಪಡೆಯಬೇಕು. ಹಾಗಾದಾಗ ಕರ್ಮಫಲಗಳು ಆತನಿಗೆ ಅಂಟುವುದಿಲ್ಲ. ಗೀತೆಯಲ್ಲಿ ಇದಕ್ಕಿಂತ ಹೆಚ್ಚಿಗೆ ಇನ್ನೇನಿದೆ?
(ಆಕರ: ಕಣಜ ಹಾಗೂ ಇನ್ನಿತರ ಮೂಲಗಳು)

 

 

Leave a Reply