ಅಮ್ಮ’ ನಂಥ ಒಬ್ಬ ತಮ್ಮನಿದ್ದ

ಅಮ್ಮ’ ನಂಥ ಒಬ್ಬ ತಮ್ಮನಿದ್ದ’
(ಮೂರು ದಿನ… ನೂರು ನೆನಪು…)
ಹೆಸರು ಸುಧೀಂದ್ರ. ನನಗಿಂತ ಏಳು ವರ್ಷಗಳಷ್ಟು ಕಿರಿಯ ವಯಸ್ಸಿನಲ್ಲಿ. ಹದಿನಾಲ್ಕು ವರ್ಷ ‘ಹಿರಿಯ’ ಮನಸ್ಸಿನ ಪಕ್ವತೆಯಲ್ಲಿ. ಹೃದಯದಿಂದ ಮಗು, ಸಹಾಯಕ್ಕೆ ನಿಂತರೆ ‘ಸೇವಕ’.
ಸಲಹೆಗಳನ್ನು ಕೊಡುವಲ್ಲಿ ಮಂತ್ರಿ. ಸೋದರ, ಸಹೋದರಿಯರಿಗೆ ಅಭಯಹಸ್ತ. ಗೆಳೆಯರಿಗೆ ಆಪ್ತಮಿತ್ರ.
ಇದು ಅಕ್ಕನೆಂಬ ಅಕ್ಕರೆಯಿಂದ ಬಂದ ಅತಿಶಯೋಕ್ತಿಯಲ್ಲ. ಅವನಿದ್ದುದೇ ಹಾಗೆ. ಅಣ್ಣ ಕಟ್ಟಿದ ಕಾಲೇಜನ್ನು ತನ್ನ ಸ್ವಂತ ಮಕ್ಕಳಂತೆ ಬೆಳೆಸಿ ಅಣ್ಣನ ಬಲಗೈ ಬಂಟನಾದ. ನನ್ನ ಮೊದಲ ಪುಸ್ತಕ ‘ನೀರ ಮೇಲೆ ಅಲೆಯ ಉಂಗುರ’ ಹೆಸರಿಗಷ್ಟೇ ನನ್ನದು. ಬರೆದಿದ್ದು ನಾನು, ಬರೆಸಿದ್ದು, ಮೆರೆಸಿದ್ದು , ಬೆವರು ಸುರಿಸಿದ್ದು ಎಲ್ಲ ಅವನೇ… Pdf soft copy ತರಿಸಿಕೊಂಡು, proof reading ಮಾಡಿ, ಮುದ್ರಿಸಿ, ಪ್ರತಿಗಳನ್ನೆಲ್ಲ ನನಗೆ, ಕೇಳಿದವರಿಗೆಲ್ಲ Post ಮಾಡಿ, ಧಾರವಾಡದಲ್ಲಿ ಕಾರಿನಲ್ಲಿ ಹಾಕಿಕೊಂಡು ಸಂಬಂಧಿಸಿದವರಿಗೆ ಸ್ವತಃ
ಮುಟ್ಟಿಸಿ ಸಂಭ್ರಮಿಸಿದವ.
ಹಿರಿಯ ತಂಗಿ lockdown ನಿಂದಾಗಿ ಆಸ್ಟ್ರೇಲಿಯಾದಲ್ಲಿ ಬಂದಿಯಾದಾಗ ಅವಳಿಗೆ ಅವಶ್ಯಕ ಔಷಧಿಗಳನ್ನು ಕಾಲಕಾಲಕ್ಕೆ ಕೊರಿಯರ್
ಮೂಲಕ ತಲುಪಿಸುವ ವ್ಯವಸ್ಥೆ ಮಾಡಿದವ. ಕೊರೋನಾ ವೇಳೆಯಲ್ಲಿ ಹೊರಹೋದರೆ ಕೊನೆಯ ತಂಗಿಗೆ ಆಗಾಗ ಫೋನ್ ಮಾಡಿ ಅವಶ್ಯವಿದ್ದುದನ್ನು ಕೇಳಿ ತಿಳಿದುಕೊಂಡು ಬೇಡಬೇಡವೆಂದರೂ ಖರೀದಿಸಿ ಸ್ವತಹ ಮನೆಗೆ ಮುಟ್ಟಿಸುವ ಕೆಲಸ ಮಾಡಿದವ.
ನಾಲ್ಕೇ ಜನರ ಪುಟ್ಟ ಸಂಸಾರ ಹೆಸರಿಗೆ. ಆದರೆ ವಿಶ್ವ ಕುಟುಂಬಿ. ಜವಾನ, ದಿವಾನ ಎಂಬ ವ್ಯತ್ಯಾಸವಿಲ್ಲದೇ ಬಿಡುವಿದ್ದಾಗ ಎಲ್ಲ/ ಎಲ್ಲರ ಕಾರ್ಯಕ್ರಮಗಳಲ್ಲೂ ಅವನ ಹಾಜರಿ ಇರಬೇಕು. ಇದ್ದೇ ಇರುತ್ತಿತ್ತು.
ಹಾಗೆಂದು ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ದುಡುಕಿ ಸೋತವನಲ್ಲ. ಪರಾಮರ್ಶಿಸಿ ಆದಷ್ಟೂ ನಂತರದ ದಿನಗಳಲ್ಲಿ ಪಶ್ಚಾತ್ತಾಪಕ್ಕೆ ಅವಕಾಶವಿಲ್ಲದಂತೆ ಸದಾ ಎಚ್ಚರ ವಹಿಸುತ್ತಿದ್ದ. ಅದನ್ನೂ ಮೀರಿ ಏನಾದರೂ ನಡೆದದ್ದಾದರೆ ಕನಿಷ್ಠ
ಪಾಪಪ್ರಜ್ಞೆ ಇರಲಿ ಎಂಬುದಿರಬೇಕು ಮನಸ್ಸಿನಲ್ಲಿ.
ಸ್ನೇಹ ಸಂಪಾದಿಸುವ, ಅದನ್ನು ನಿಭಾಯಿಸುವ ಪರಿಯನ್ನು ಅವನನ್ನು/ ಅವನ ಸ್ನೇಹಿತರನ್ನು ನೋಡಿಯೇ ಕಲಿಯಬೇಕು. ಬೇರೆ ಊರಿನಲ್ಲಿದ್ದು, ಧಾರವಾಡದಲ್ಲಿ ಮನೆಕಟ್ಟುವ ಪ್ರಸಂಗ ಅನಿವಾರ್ಯವಾದಾಗ ಸಹಾಯಕ್ಕೆ ನಿಂತ ಸ್ನೇಹಿತನಿಗೆ, ಮನೆಗೆ ‘ಸ್ನೇಹಿತ’
ಎಂದು ಹೆಸರಿಟ್ಟು ವಿಭಿನ್ನ ರೀತಿಯ ಧನ್ಯವಾದ ಹೇಳಿದವನಾತ.
‘ಅಸೂಯೆ’ ಎಂಬ ಪದ ಅವನ ಶಬ್ದಕೋಶದಲ್ಲೇ ಇರಲಿಲ್ಲ. ಎಲ್ಲರ ಯಶಸ್ಸೂ ತನ್ನದೆಂಬಂತೆ ಸಂಭ್ರಮಿಸುವ ಅವನ ಪರಿ ನನ್ನಲ್ಲಿ ಅಚ್ಚರಿಯ ಜೊತೆಗೆ ಅಸೂಯೆಯನ್ನೂ
ಕೆಲಸಲ ಹುಟ್ಟುಹಾಕಿದ್ದಿದೆ.
ಸಾಹಿತ್ಯಾಸಕ್ತಿ ನಮಗೆ ನಮ್ಮ ಅಪ್ಪನಿಂದಲೇ ಬಂದ ಬಳುವಳಿ. ವಿಜ್ಞಾನದ ವಿದ್ಯಾರ್ಥಿ/ ಅಧ್ಯಾಪಕ/ ವಿಜ್ಞಾನದ ಕಾಲೇಜು ಸಂಸ್ಥಾಪಕನಾದ ನಮ್ಮ ಅಣ್ಣನೂ ಕೂಡ ಮಾತಿಗೊಂದು ‘ಮಂಕುತಿಮ್ಮನ ಕಗ್ಗದ ‘ ಒಂದು ಪದ್ಯವನ್ನು ಪ್ರಾಸಂಗಿಕವಾಗಿ ಉದಹರಿಸುವದನ್ನು ತೆರೆದ ಬಾಯಿ, ತೆರೆದಕಣ್ಣುಗಳಿಂದ ಆಸ್ವಾದಿಸುವದು ನಮ್ಮ ರೂಢಿ. ಅದನ್ನೇ ಸುಧೀಂದ್ರ ಭಾಷಣಗಳಲ್ಲಿ ಮಾಡುತ್ತಿದ್ದ.
ಅವನು ಬರೆದಿದ್ದು ಕಡಿಮೆ. ಆದರೆ ಓದಿದ್ದನ್ನು, ಅರಗಿಸಿಕೊಂಡಿದ್ದನ್ನು ತನ್ನದೇ ರೀತಿಯಲ್ಲಿ, ಮಾತುಗಳಲ್ಲಿ ಹಿಂದಿರುಗಿಸುವದು ಅವನಿಗೆ ಸಿದ್ಧಿಸಿತ್ತು.
ಕೆಲಸವೆಂದರೆ ಅವನಿಗೆ ಅತಿಯಾದ ಪ್ರೀತಿ. ತನ್ನ ಬಟ್ಟೆಗಳನ್ನು ತಾನೇ ಒಗೆಯುವುದರಿಂದ ಹಿಡಿದು ವಿನುತಾಳ ಕೆಲಸಗಳಲ್ಲೂ ಸದಾ ಸಮಸಮವಾಗಿ ಸಹಾಯ ಮಾಡಿ ಅವಳ ಓದು/ ಬರಹ/ ನಾಟಕ / online ಚಟುವಟಿಕೆಗಳಿಗೆ ಬೇಕಾದ ಸಮಯ
ಒದಗಿಸಿಕೊಡುತ್ತಿದ್ದ. ದೂರದ Canada/ Zurich ಗಳಿಂದ ಬರುವ ಮಕ್ಕಳ/ ಮೊಮ್ಮಕ್ಕಳ ಫೋಟೋಗಳು, ವಿಡಿಯೋ call ಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುವುದು, ಬಂದಮೇಲೆ family group ಗಳಿಗೆ share ಮಾಡಿ ಸಂಭ್ರಮಿಸುವ ಪರಿ ನೋಡಿಯೇ ತಿಳಿಯಬೇಕು. ಅವುಗಳನ್ನು ಅವನ Tonic pills ಎಂದು ನಾನು ತಮಾಷೆ ಮಾಡುವುದೂ ಇತ್ತು.
ಹದಿನೈದು ದಿನಗಳ ಹಿಂದೆ ನನ್ನ ಕಣ್ಣಿನ ಆಪರೇಶನ್ ಆದಾಗ, “Wish you speedy recovery. Waiting to see you bouncing back with same zeal, and spirit Shrimati” ಎಂದು ಹಾರೈಸಿದ್ದ.
ತಿರುಗಿ ಬಂದಿದ್ದೇನೆ ನೋಡು, ಸುಧಿ, ಬರೆದಿದ್ದೇನೆ ಕೂಡ, ನೀನು ಹೇಳಿದಂತೆ, ನಿನಗೆ ವಚನ ಕೊಟ್ಟಂತೆ… ಆದರೆ ನೀನು ಹೇಳಿದ ರೀತಿಯಲ್ಲಿ ಅಲ್ಲ. ಗೊತ್ತು, ನಿನಗೆ ನಿನ್ನ ಬಗ್ಗೆ ಏನೇ ಹೇಳಿಕೊಳ್ಳುವುದು, ಮಾಡಿದ್ದರ ಬಗ್ಗೆ ಆಡುವುದು ಇಷ್ಟವಾಗುವದಿಲ್ಲ. ಒಂದು ಸಾದಾ thanks ಗೂ ನೀನು ರೇಗುತ್ತಿದ್ದುದು ನೆನಪಿದೆ. ಇದೊಂದು ಬಾರಿ ಕ್ಷಮಿಸು. ಯಾವಾಗಲೂ ನನ್ನ ಮೊಟ್ಟಮೊದಲ ಓದುಗ ನೀನು. ಅಲ್ಲಿಂದಲೇ ಓದು. ನೀನು ಬರೆಯಲು ಈ ಬಾರಿ ಕೊಟ್ಟ ವಿಷಯಕ್ಕೆ ಮಾತ್ರ ನಾನು ಬದುಕಿರುವವರೆಗೂ ನಿನಗೆ ಕ್ಷಮೆಯಿಲ್ಲ.
ನಾನು ನಿನ್ನ ಜೊತೆ ಆಗುವವರೆಗೂ ನಿನ್ನದೇ ನೆನಪುಗಳಲ್ಲಿ…
Leave a Reply