ಅನುವಾದ ಸಾಹಿತ್ಯ  ಭಾಗ-೨ 

ಅನುವಾದ ಸಾಹಿತ್ಯ  ಭಾಗ-೨

ಮೊದ ಮೊದಲು ಸಣ್ಣ ಪುಟ್ಟ ಲೇಖನಗಳು… ನಂತರ ಕವನಗಳು… ಸ್ವರಚಿತ ಕಥೆಗಳು.. ವಿಜಯಪುರದಿಂದ ಧಾರವಾಡಕ್ಕೆ ಬಂದನಂತರ ನನ್ನ ಗೆಳತಿಯರ ಬಳಗ ಬೆಳೆದಿತ್ತು. ಶುಭದಾ ಅಮಿನಭಾವಿ ಎಂಬ ಹೆಸರಾಂತ ಅನುವಾದಕಿ ನನ್ನ ಆತ್ಮೀಯ ಗೆಳತಿಯಾಗಿ ದೊರಕಿದ್ದಳು. ಅವಳು ಹಿಂದಿ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದವಳು. ಭೀಮಸೇನವನ್ನು ಅನುವಾದ ಮಾಡಿದ ಖ್ಯಾತಿ ಅವಳದು. ಆಕೆ ಪ್ರಿಯಾಂಕಾ ಪತ್ರಿಕೆಯಲ್ಲಿ ಬೆನಕ ಅನುವಾದಿತ ಕಥಾಸ್ಪರ್ಧೆಯಲ್ಲಿ ಎರಡು, ಮೂರು ಬಾರಿ ಪ್ರಶಸ್ತಿ ಪಡೆದಿದ್ದಳು. ನಿಜ ಹೇಳಬೇಕೆಂದರೆ ನನಗೆ ಯಾವುದೇ ಮರಾಠಿ ಲೇಖಕರೂ ಪರಿಚಯ ಇರಲಿಲ್ಲ. ಆಕೆಯೇ ನನ್ನ ಸಲುವಾಗಿ ಪತ್ರ ಬರೆದು ಸಿ ಡಿ ದೇಶಪಾಂಡೆ, ಅರವಿಂದ್ ಲಿಮಯೆಯವರಿಂದ ಅನೇಕ ಕಥೆಗಳನ್ನು ಹಾಗೂ ಜೊತೆಗೇ ಅನುಮತಿ ಪತ್ರವನ್ನೂ ತರಿಸಿಕೊಟ್ಟಳು. ನಾನು ಅಲ್ಲಿಂದಲೇ ಅನುವಾದದ ಶ್ರೀ ಗಣೇಶ ಮಾಡಿದೆ. ಮೊದಲ ಅನುವಾದಿತ ಕಥೆಗೇ ಪ್ರಥಮ ಪ್ರಶಸ್ತಿ ದೊರೆತಿತ್ತು.. ಅವಳಿಂದ ಅನೇಕ ವಿಷಯಗಳನ್ನು ಅರಿತೆ.. ಅನುವಾದ ಮಾಡುವಾಗ ಕಥೆಗಳಿದ್ದಲ್ಲಿ ಅವುಗಳ ಶೀರ್ಷಿಕೆಗಳನ್ನು ಬದಲಾಯಿಸಬಾರದು, ಕಥೆಗಳಲ್ಲಿಯ ಪಾತ್ರಗಳ ಹೆಸರನ್ನು ಬದಲಾಯಿಸಕೂಡದು ಎಂದೆಲ್ಲ ಅವಳು ಹೇಳುತ್ತಿದ್ದಳು.
ಅವಳು ಒಬ್ಬ ಶ್ರೇಷ್ಠ ಅನುವಾದಕಿ ಎಂಬ ದೃಷ್ಟಿಯಿಂದ ಹೇಳುವುದಾದರೆ  ಶುಭದಾ ಅನುವಾದ ಜಗತ್ತಿನಲ್ಲಿ  ಅವಳ ಎರಡು ಮೇರು ಕೃತಿಗಳು ಅವಳನ್ನು ಅತ್ಯಂತ ಎತ್ತರಕ್ಕೇರಿಸಿದುವೆಂದು ಹೇಳಬಹುದು. ನಾದನದಿ ಎಂಬ ಡಾ ಮಲ್ಲಿಕಾರ್ಜುನ ಮನಸೂರರವರ ಬಗೆಗಿನ ಅನುವಾದಿತ ಕೃತಿ. ಇದರ ಮೂಲ ಲೇಖಕರು ಶ್ರೀಮತಿ ವಿದ್ಯಾ ಸಪ್ರೆ. ಎರಡನೆಯ ಅನುವಾದಿತ ಕೃತಿ ‘ಭೀಮಸೇನ” ಎಂಬ ಹೆಸರಿನಿಂದ ಬಿಡುಗಡೆಯಾದ ಡಾ. ಭೀಮಸೇನ ಜೋಶಿಯವರ ಜೀವನಚರಿತ್ರೆ. ಇದರ ಮೂಲ ಲೇಖಕರು ಶ್ರೀ ವಸಂತ ಪೋತದಾರರು.
ಕನ್ನಡದಿಂದ ಮರಾಠಿಗೆ ಅನುವಾದಿಸಿರುವ ಶ್ರೇಷ್ಠ ಅನುವಾದಕರಲ್ಲಿ ಶ್ರೀಮತಿ ಅಕ್ಷತಾ ದೇಶಪಾಂಡೆಯವರೂ ಒಬ್ಬರು. ಅವರು ಅನುವಾದದ ಬಗ್ಗೆ ಹೀಗೆ ಹೇಳಿದ್ದಾರೆ.
೧. ನನಗೆ ಆ ಕೃತಿಯು ಇಷ್ಟವಾಗಿದ್ದರೆ  ಸ್ವಯಂ ಸ್ಫೂರ್ತಿಯಿಂದಲೇ ನಾನು ಅನುವಾದ ಮಾಡುತ್ತೇನೆ.
೨. ಪರಿಪೂರ್ಣ ತೃಪ್ತಿಕರ ತರ್ಜುಮೆ ಮಾಡಬೇಕಾದರೆ ಭಾಷೆಯ ಮೇಲೆ ಪ್ರಭುತ್ವವಿರಬೇಕು. ಯಾವ ಭಾಷೆಯಿಂದ ಅನುವಾದ ಮಾಡುತ್ತೇವೆಯೋ ಅದರ ಆಂತರಿಕ ಸ್ವಭಾವದ ಬಗ್ಗೆ ಜ್ಞಾನವಿರಬೇಕು. ಮಾತ್ರವಲ್ಲದೆ ಮೂಲ ಕೃತಿಯ ಲೇಖಕರ ಜತೆ ಸಂಪೂರ್ಣವಾದ ಸಹಮತಿ ಮತ್ತು ಪಾರದರ್ಶಕತೆ ಇರಬೇಕು. ಮುಖ್ಯವಾಗಿ ಎರಡೂ  ಸಂಸ್ಕೃತಿಗಳ ಬಗ್ಗೆ ಮಾಹಿತಿ ಇರಬೇಕು. ಮೂಲ ಲೇಖಕರ ಅನುಮತಿ ಬೇಕೆ ಬೇಕು.
೩. ನಮ್ಮಲ್ಲಿ ಅನುವಾದಕರು ಕಡಿಮೆ. ಆದರೆ ಮರಾಠಿಯಿಂದ ಕನ್ನಡಕ್ಕೆ ಮುಕ್ತತೆ ಇದೆ.  ಯಾವುದೇ ವಿಷಯವಾಗಲೀ ಅದು ನನ್ನ ಮನಸ್ಸನ್ನು ಮುಟ್ಟಿದರೆ ನಾನದನ್ನು ಅನುವಾದಿಸುತ್ತೇನೆ.
೪. ಅನುವಾದದಲ್ಲಿ ತುಂಬ ತೃಪ್ತಿ ಇರುತ್ತದೆ. ಅನುವಾದ ಮಾಡುವುದು ಕೂಡಾ ಸೃಷ್ಟಿಯೇ.
೫. ಪ್ರಕಾಶಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತದೆ. ಮರಾಠಿ ಸಾಹಿತ್ಯ ಪ್ರಕಾಶಕರಲ್ಲಿ ಅನುವಾದದ ಪುಸ್ತಕಗಳನ್ನು ಪ್ರಕಟಿಸುವ ಇಲಾಖೆಯೇ ಇದೆ. ಸಾಹಿತ್ಯ ಪ್ರಕಾಶನದಿಂದ ಒಳ್ಳೆಯ ಪ್ರೋತ್ಸಾಹ ಸಿಗುತ್ತಿದೆ. ಮರಾಠಿಯಲ್ಲಿರುವ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸುತ್ತೇವೆ ಎಂಬ ಖುಷಿ.
ಇನ್ನು ಶ್ರೀ ಚಂದ್ರಕಾಂತ ಪೋಕಳೆಯವರೂ ಕೂಡ ಕನ್ನಡದಿಂದ ಮರಾಠಿಗೆ ಅನುವಾದ ಕಾರ್ಯವನ್ನು ಸತತವಾಗಿ ನಡೆಸಿರುವಂಥ ಒಬ್ಬ ಶ್ರೇಷ್ಠ ಅನುವಾದಕರು. ಚಂದ್ರಕಾಂತ ಅವರು ಕನ್ನಡ, ಮರಾಠಿ ಎರಡು ಭಾಷೆಗಳಲ್ಲೂ ಪ್ರಭುತ್ವ ಪಡೆದಿದ್ದು, ಮರಾಠಿ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಕನ್ನಡಿಗರಿಗೆ ಪರಿಚಯಿಸುತ್ತಿದ್ದಾರೆ. ಅಲ್ಲದೇ ಕನ್ನಡ-ಮರಾಠಿ ಭಾಷಾ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ.  ಮರಾಠಿ ಸಾಹಿತ್ಯದಿಂದ ಬಹು ಮೌಲಿಕ ಕೃತಿಗಳನ್ನು ಕನ್ನಡಕ್ಕೆ ನೀಡುತ್ತಾ ಬಂದಿರುವ ಲೇಖಕರಲ್ಲಿ ಅತ್ಯಂತ ಪ್ರಮುಖರು.
ಬೆಳಗಾವಿಯ ಗಡಿಭಾಗದಲ್ಲಿ ನೆಲೆಸಿರುವ ಚಂದ್ರಕಾಂತ ಪೋಕಳೆ ಆಗಾಗ್ಗೆ ಮರುಕಳಿಸುವ ಭಾಷಾ ವಾದ-ವಿವಾದ, ಏಕೀಕರಣ ಹೋರಾಟ, ಕನ್ನಡದ ಅಸ್ತಿತ್ವದ ಪ್ರಶ್ನೆ, ರಾಜಕಾರಣಿಗಳ ಮಸಲತ್ತುಗಳು ಇವುಗಳ ಮಧ್ಯೆಯೂ ಭಾಷಾ ಸ್ನೇಹಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದಾರೆ. ಭಾಷಾ ಬೆಳವಣಿಗೆಗೆ ತಮ್ಮದೇ ಆದ ಹಾದಿ ಕಂಡುಕೊಂಡಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮೇಲಿನ ಪ್ರಭುತ್ವ, ವಿದ್ವತ್, ಅಧ್ಯಯನಶೀಲತೆಯಿಂದ ಸಾಹಿತ್ಯದ ಯಾವುದೇ ಪ್ರಕಾರವನ್ನು ಆಯ್ಕೆಮಾಡಿ ಅನುವಾದಿಸಿದರೂ ಅದು ಸಹಜವಾಗಿ ಅನುವಾದಿತ ಭಾಷೆಗೆ ಹೊಂದಿಕೊಂಡು ಸ್ವಾಭಾವಿಕವೆನಿಸುವಂತಹ ಶೈಲಿ ಇವರ ಬರವಣಿಗೆಯದ್ದು. ಇವರ ಮನೆಮಾತು ಕೊಂಕಣಿ, ಕಲಿತದ್ದು ಕನ್ನಡ, ತಾಯಿ ಹಾಗೂ ಹೆಂಡತಿ ಮರಾಠಿ ಪರಿಸರದಿಂದ ಬಂದವರು. ಇದರಿಂದ ಕೊಂಕಣಿ-ಕನ್ನಡ-ಮರಾಠಿ ಭಾಷೆಗಳ ಸಹಜ-  ಒಡನಾಟದಿಂದ ಅನುವಾದ ಕ್ರಿಯೆಗೆ ದೊರೆತ ಭಾಷಾ ಬಂಧುರ. ಭಾಷಾಂತರದ ಹಿಂದೆ ಯಾವುದೇ ಸೈದ್ಧಾಂತಿಕ ನೆಲೆಗಟ್ಟಿರದಿದ್ದರೂ ತಮ್ಮದೇ ಹಾದಿಯಲ್ಲಿ, ಮೂಲದಲ್ಲಿ ಓದಿದಷ್ಟೇ ತೃಪ್ತಿಕೊಡುವಂತಹ ಬರವಣಿಗೆ. ಇವರು ಮೊದಲು ಅನುವಾದಿಸಿದ ಕೃತಿ ಜಯವಂತ ದಳವಿಯವರ ‘ಚಕ್ರ’ ಕಾದಂಬರಿ. ಮುಂಬಯಿಯ ಜೋಪಡಪಟ್ಟಿಯ ಜೀವನ ಕ್ರಮವನ್ನೂ ನಿರೂಪಿಸುವ ಚಕ್ರವು (ಮೂಲ ಮರಾಠಿ ಲೇಖಕರು-ಜಯವಂತ ದಳವಿ); ಗೋವೆಯ ದೇವದಾಸಿ ಸಮಸ್ಯೆಯ ಮೇಲೆ ಬೆಳಕುಚೆಲ್ಲುವ ಮಾನು (ಜಯವಂತ ದಳವಿ); ಅನ್ನಕ್ಷುಧೆ- ಕಾಮಕ್ಷುಧೆಯ ತಾಕಲಾಟದ ವರ್ಣನೆಯ ಶ್ವಪಥ (ರಂಗನಾಥ್ ಪಠಾರೆ); ದಲಿತರ ಸಾಂಸ್ಕೃತಿಕ ಹೋರಾಟದ ನೆಲೆಗಟ್ಟಿನ ಮೇಲೆ ರೂಪಗೊಂಡಿರುವ ಉಚಲ್ಯಾ (ಲಕ್ಷ್ಮಣ ಗಾಯಕವಾಡ); ಹೆಣ್ಣಿನ ಒಳತುಡಿತಗಳನ್ನು ಎಳೆಎಳೆಯಾಗಿ ಬಿಡಿಸುವ -ಒಂದೊಂದೇ ಎಲೆಯುದುರಿದಾಗ (ಗೌರಿ ದೇಶಪಾಂಡೆ); ಲೇಖಕನ ಬದುಕು ಬರೆಹದಲ್ಲಿ ಇಬ್ಬಂದಿ ಬದುಕಿನ ನಾಚರೆ ಘುಮಾ (ಮಾಧವಿ ದೇಸಾಯಿ); ಮರಾಠ-ಮೊಗಲರ ನಡುವಣ ಚಾರಿತ್ರಿಕ ಸಂಘರ್ಷವನ್ನು ಗುರುತಿಸುವ -ಪಾಣಿಪತ (ವಿಶ್ವಾಸ ಪಾಟೀಲ)- ಹೀಗೆ ಒಂದೊಂದು ಅನುವಾದಿತ ಕೃತಿಗಳೂ ವಿಶಿಷ್ಟವಾಗಿದ್ದು, ಕನ್ನಡಿಗರಿಗೆ ಹೊಸ ಅನುಭವ ಸಂವೇದನೆಗಳನ್ನೂ ನೀಡುವಂತಹ ಕೃತಿಗಳಾಗಿವೆ. ೨೦೦೪ ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಪಡೆದಿರುವ ಮಹಾನಾಯಕ ಕಾದಂಬರಿಯು (ವಿಶ್ವಾಸ ಪಾಟೀಲ) ಮರಾಠಿ ಸಾಹಿತ್ಯ ವಲಯದಲ್ಲಿ ಬಹು ಚರ್ಚಿತ ಕೃತಿಯಾಗಿದ್ದು, ಜನಮನ್ನಣೆ ಗಳಿಸಿದೆ. ಸುಭಾಶ್ ಚಂದ್ರ ಬೋಸರ ಬದುಕಿನ ಸಂಘರ್ಷದ ಕಥೆಯ ನಿರೂಪಣೆಯೇ ಈ ಕಾದಂಬರಿಯ ಮುಖ್ಯ ಉದ್ದೇಶವಾಗಿದ್ದು, ಇಂಗ್ಲಿಷ್ ಹಾಗೂ ಜಪಾನಿ ಭಾಷೆಯೂ ಸೇರಿ ಭಾರತದ ಹಲವಾರು ಭಾಷೆಗಳಿಗೆ ಅನುವಾದಗೊಂಡಿರುವ ವಿಶಿಷ್ಟ ಕೃತಿ. ಕನ್ನಡದಲ್ಲಿ ಎರಡನೆಯ ಮುದ್ರಣ ಕಂಡಿರುವುದಷ್ಟೇ ಅಲ್ಲದೆ ಮರಾಠಿಯಲ್ಲಿ ಹಲವಾರು ಮುದ್ರಣಗಳನ್ನು ಕಂಡಿದ್ದು ೮೦,೦೦೦ ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿದೆ. ಮರಾಠಿ ಸಾಹಿತ್ಯದಿಂದ ಹೀಗೆ ಸುಮಾರು ೩೦ ಕಾದಂಬರಿಗಳು, ೮ ಆತ್ಮಕಥೆಗಳು, ೭ ಕಥಾ ಸಂಕಲನಗಳು, ೮ ಸಂಶೋಧನ ಕೃತಿಗಳು, ವೈಚಾರಿಕ, ವೈಜ್ಞಾನಿಕ, ಜೀವನ ಚರಿತ್ರೆಗಳು, ನಾಟಕಗಳು, ಕವಿತೆಗಳು, ಪ್ರಬಂಧಗಳು ಸೇರಿ ಒಟ್ಟು ೬೦ಕ್ಕೂ ಹೆಚ್ಚು ಕೃತಿಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ಕೆಲವೊಂದು ಕಾದಂಬರಿಗಳಲ್ಲಿ ಬರುವ ಪ್ರಾದೇಶಿಕ ಭಾಷೆಯ ವರ್ಣನೆಯನ್ನು ಕನ್ನಡದಲ್ಲಿ ಹಿಡಿದಿಡುವುದು ಬಹುಪ್ರಯಾಸದ ಕೆಲಸವೆಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡರೂ ಸವಾಲೆನಿಸುವ ಕೃತಿಗಳನ್ನೂ ಅನುವಾದಿಸಿದ್ದಾರೆ.
ಬಹುಭಾಷೆಯಲ್ಲಿ ಎಷ್ಟೇ ಪಾಂಡಿತ್ಯ ಪಡೆದಿದ್ದರೂ ಅನುವಾದವೆನ್ನುವುದು ಬಹು ಕ್ಲಿಷ್ಟಕರವಾದ ಕೆಲಸ. ಒಂದು ಭಾಷೆಯ ಆಡುನುಡಿ, ಗ್ರಾಮ್ಯಭಾಷೆ, ಜನಾಂಗೀಯ ಭಿನ್ನವಿಭಿನ್ನ ಸಂಸ್ಕೃತಿಗಳು ಮತ್ತೊಂದು ಭಾಷೆಯಲ್ಲಿ ದೊರೆಯುವುದು ವಿರಳವೇ. ಇದಕ್ಕೆ ಮೂಲವಾಗಿ ಬೇಕಾಗಿರುವುದು ಸಾಂಸ್ಕೃತಿಕ, ಜನಾಂಗೀಯ ಅಧ್ಯಯನ ಹಾಗೂ ಭಾಷಾ ಸಂಪತ್ತು. ಇಷ್ಟೆಲ್ಲಾ ಪೂರ್ವ ಸಿದ್ಧತೆಗಳೊಡನೆ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಂದ್ರಕಾಂತ ಪೋಕಳೆಯವರಿಗೆ ಅನೇಕ ಪ್ರಶಸ್ತಿಗಳು ದೊರೆತಿವೆ.
“ಉಚಲ್ಯಾ” ಆತ್ಮಕಥನ, ಇದು ವ್ಯಕ್ತಿ ಮತ್ತು ಸಮುದಾಯದ ಆತ್ಮಕಥನ, ವ್ಯಷ್ಠಿ, ಸಮಷ್ಠಿಯ ದಾರುಣ ನೈಜ ಕತೆ. ಮಹಾರಾಷ್ಟ್ರದಲ್ಲಿ ಬದುಕುತ್ತಿರುವ ಒಂದು ಜನಾಂಗದ ಹೆಸರು.   ಉಚಲ್ಯಾ ಎಂದರೆ ಮರಾಠಿಯಲ್ಲಿ ಗಂಟುಚೋರ ಎಂಬರ್ಥ. ಇವರ ಕಸುಬೇ ಕಳ್ಳತನ. ಒಂದು ರೀತಿಯಲ್ಲಿ ಇವರದು ಅಲೆಮಾರಿ ಜನಾಂಗ. ಇಡೀ ಭಾರತದಲ್ಲಿ ಇವರನ್ನು ಜಾಧವ ಹಾಗೂ ಗಾಯಕವಾಡ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಇಂಥ ಒಂದು ಜನಾಂಗದಲ್ಲಿ ಹುಟ್ಟಿದ ಲಕ್ಷ್ಮಣ ಗಾಯಕವಾಡರು ಬರೆದ ಆತ್ಮಕಥನ ಉಚಲ್ಯಾ. ೧೯೮೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿಯನ್ನು ಚಂದ್ರಕಾಂತ ಪೋಕಳೆಯವರು ಕನ್ನಡಕ್ಕೆ ಅದ್ಭುತವಾಗಿ ಅನುವಾದಿಸಿದ್ದಾರೆ. ಈ ಕೃತಿಯನ್ನು ಸಾಹಿತ್ಯಿಕವಾಗಿ ಮೌಲ್ಯಮಾಪನ ಮಾಡುವುದಕ್ಕಿಂತ, ಸಮಾಜಶಾಸ್ತ್ರೀಯ ಮೌಲ್ಯಮಾಪನ ಮಾಡಿದಾಗ  ಉಚಲ್ಯಾ ಜನರ ಜೀವನದ ವಾಸ್ತವ ನನ್ನಲ್ಲಿ ಅನೇಕ ಭಾವನೆಗಳನ್ನು ಕೆರಳಿಸಿತು ಎಂದು ಪೋಕಳೆಯವರು ಹೇಳುತ್ತಾರೆ.
ಗಂಧರ್ವಯುಗ ಇದು ಬಾಲಗಂಧರ್ವರ ಜೀವನಚರಿತ್ರೆ. ಇದನ್ನು ಕನ್ನಡಕ್ಕೆ ಅನುವಾದಿಸಿರುವ ಚಂದ್ರಕಾಂತ ಪೋಕಳೆ ಅವರು ಅನುವಾದಕರ ಮಾತಿನಲ್ಲಿ, ‘ಈ ಕಾದಂಬರಿಯು ಮರಾಠಿಯಷ್ಟೇ ಕನ್ನಡದ ರಂಗಭೂಮಿಯ ದೃಷ್ಟಿಯಿಂದಲೂ ಮಹತ್ವದ್ದು’ ಅಂದಿದ್ದಾರೆ. ಇದು ಸಹಜವೂ ಹೌದು. ಯಾಕೆಂದರೆ ದೃಶ್ಯ ಮಾಧ್ಯಮ ಮತ್ತು ಸಾಹಿತ್ಯ ದೃಷ್ಟಿಯಿಂದ ಶ್ರೇಷ್ಠ ಕೃತಿಗಳಿಗೆ ಭಾಷೆಯ ಹಂಗಿಲ್ಲ. ಇವತ್ತಿಗೂ ಅನುವಾದಿತ ಕೃತಿಗಳನ್ನು ಸಾರಸ್ವತ ಲೋಕವು ಸ್ವೀಕರಿಸುತ್ತಾ ನಮ್ಮ ಭಾಷೆಯ ಸಂಸ್ಕೃತಿ ಮತ್ತು ಸದಾಚಾರಗಳನ್ನು ಕೊಡುಕೊಳ್ಳುವಿಕೆಗೆ ಒಳಪಡಿಸಿದೆ. ಇದು ಓದುಗನೊಬ್ಬನಿಗೆ ಅಪಾರ ಜ್ಞಾನ ಭಂಡಾರವನ್ನು ಒದಗಿಸಬಲ್ಲ ಕಾರ್ಯವೂ ಆಗಿರುವುದರಿಂದ ಇವಕ್ಕೆ ತಡೆ ಇಲ್ಲವೆನ್ನುವುದು ನನ್ನ ನಂಬಿಕೆ. ಈ ಕಾದಂಬರಿಯು ಮರಾಠಿ ರಂಗಭೂಮಿಯ ಲೋಕೋತ್ತರದ ರಂಗಚೇತನ ಬಾಲಗಂಧರ್ವ ಅವರ ಬದುಕಿನ ಕೃತಿಯಾಗಿರುವುದರಿಂದ, ಇದನ್ನು ಚಾರಿತ್ರಿಕ ಕಾದಂಬರಿಯೆಂದು ಗುರುತಿಸಿರುವುದು ಗಮನಾರ್ಹ. ಕೇವಲ ಬಾಲಗಂಧರ್ವರ ವ್ಯಕ್ತಿ ಚಿತ್ರಣ ಮಾತ್ರವಲ್ಲ ಅದರ ಜೊತೆಗೆ ರಂಗಭೂಮಿಯ ಏಳುಬೀಳುಗಳನ್ನು ಅಧ್ಯಯನ ಮಾಡಿ ಬರೆದಿರುವುದರಿಂದ ಇದೊಂದು ಅಪರೂಪದ ಕೃತಿಯೆಂದರೆ ತಪ್ಪಾಗಲಾರದು. ಕೃತಿಯನ್ನು ಓದುತ್ತಿರುವಂತೆ ಜೀವನ ಚರಿತ್ರೆಯಾಗಿಯೂ ಮತ್ತು ನಾನ್ ಫಿಕ್ಷನ್ ಕೃತಿಯಂತೆಯೂ ಗುರುತಿಸಿಕೊಳ್ಳುವ ಗಂಧರ್ವಯುಗ- ಕನ್ನಡ ಮಟ್ಟಿಗಂತೂ ಹೊಸತೆನ್ನಬಹುದು.
ಇದೊಂದು ಅನುವಾದಿತ ಕೃತಿಯಾದರೂ ಸಾಹಿತ್ಯದಲ್ಲಿ ಅನುವಾದವೆನ್ನುವುದು ಒಂದು ಪ್ರತ್ಯಭಿಜ್ಞಾನವಿದ್ದಂತೆ. ಇದರಿಂದ ಸಾಂಸ್ಕೃತಿಕ ವಿನಿಮಯದ ಸಾಧ್ಯತೆಗಳಿಗೆ ಅನುವು ಮಾಡಿಕೊಟ್ಟಂತೆ. ಹಾಗಾಗಿ ಈ ಕೃತಿಯಲ್ಲಿಯೂ ಅದು ಒಂದು ಪ್ರದೇಶದ ಸಂಸ್ಕೃತಿ, ಪರಿಸರಗಳನ್ನು ಒಳಗೊಂಡಿದ್ದರೂ ಅದರ ಒಳನೋಟವಿರುವುದು ಎಲ್ಲಾ ಕಲಾವಿದರ ಬದುಕನ್ನ ಬಿಂಬಿಸುವಂತೆಯೆ. ಪೋಕಳೆಯವರ ಪರಿಣಾಮಕಾರಿಯಾದ ಅನುವಾದವೂ ಇದಕ್ಕೆ ಪೂರಕವಾಗಿದೆ.
ಇನ್ನೊಬ್ಬ ಶ್ರೇಷ್ಠ ಅನುವಾದಕರು ಡಾ. ಅಮೃತ ಯಾರದಿಯವರು. ಕತೆಗಾರ ಡಿ ಎಸ್ ಚೌಗುಲೆಯವರ ಆಯ್ದ ಕಥೆಗಳನ್ನು ಡಾ. ಅಮೃತ ಯಾರ್ದಿಯವರು ಮರಾಠಿಗೆ ಕಾಳಾಚ್ಯಾ ಪಾವುಲ ಖಣಾ’ ಎಂಬ ಹೆಸರಿನಿಂದ ಅನುವಾದಿಸಿದ್ದಾರೆ. ಅವರು ‘ಭಾರತೀಯ ಭಾಷೆಗಳ (ಸಮಯದ ಹೆಜ್ಜೆಗಳನ್ನು ಅಗೆಯಿರಿ..). ಅನುವಾದಕ್ಕಿಂತ ವಿದೇಶಿ ಕೃತಿಗಳ ಅನುವಾದ ಹೆಚ್ಚಾಗುತ್ತಿದೆ. ಓದುಗರು ಕೂಡ ಭಾರತೀಯ ಭಾಷೆಗಳ ಸಾಹಿತ್ಯವನ್ನು ಓದುವಂತಾಗಬೇಕಾದರೆ ಕಥಾವಸ್ತುವಿನಲ್ಲಿ ವಿಶಿಷ್ಟತೆ, ವಿಭಿನ್ನತೆ ಇರಬೇಕು” ಎಂದು  ಹೇಳುತ್ತಾರೆ. ಇವರದೇ ಆದ ಇನ್ನೊಂದು ಅನುವಾದಿತ ಕೃತಿ ‘ಏಕ್ ಓಂಜಳ್ ಧ್ಯಾನಾಚಿ’. ಇದು ಡಾ. ಸಂಜೀವ ಕುಲಕರ್ಣಿಯವರ ‘ಒಂದು ಬೊಗಸೆ ಧ್ಯಾನ”. ಧ್ಯಾನದ ಮಹತ್ವ, ಅದನ್ನು ಸಾಮಾನ್ಯರೂ ಮಾಡಿ ಸಾಧನೆ ಮಾಡಬಹುದೆಂಬ ಆತ್ಮವಿಶ್ವಾಸ, ಝೆನ್ ಬಗ್ಗೆ ಪರಿಚಯ ಎಲ್ಲವೂ ಅತ್ಯಂತ ಸರಳವಾಗಿ ವರ್ಣಿತವಾಗಿರುವಂಥ ಉಪಯೋಗಿ ಕೃತಿ ಇದು.  ಇದರಲ್ಲಿರುವ  ಹನಿಗವನಗಳನ್ನು ಕೂಡ ಅತ್ಯಂತ ಅರ್ಥವತ್ತಾಗಿ ಅನುವಾದಿಸಿದ್ದಾರೆ.
ಇನ್ನು ನನ್ನ ಅನುಭವಗಳ ಬಗ್ಗೆ ಹೇಳುವುದಾದರೆ ನಾನು ಶ್ಯಾಮಚೀ ಆಯಿ ಎಂಬ ಸಾನೆ ಗುರೂಜಿಯವರ ಅನುಭವ ಕಥನ ಅಥವಾ ಆತ್ಮಕಥನವನ್ನು ಕನ್ನಡದಲ್ಲಿ “ಶ್ಯಾಮನ ಅವ್ವ” ಎಂಬ ಹೆಸರಿನಲ್ಲಿ ಅನುವಾದಿಸಿದೆ. ಅದು ಅತ್ಯಂತ ಗಡಿಬಿಡಿಯಲ್ಲಿ ಮಾಡಿದ ಕೆಲಸವಾದರೂ ಆದಷ್ಟು ಮಟ್ಟಿಗೆ ಮೂಲಕೃತಿಗೆ ನ್ಯಾಯ ಒದಗಿಸಲು ಪ್ರಯತ್ನವನ್ನು ಮಾಡಿದೆ. ಈ ಕೃತಿಯು ಸುಮಾರು ನೂರು ವರ್ಷಗಳಷ್ಟು ಹಿಂದೆ ಬರೆದದ್ದು. ಆಗಿನ ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಅನುವಾದ ಮಾಡಬೇಕಿತ್ತು. ಅಲ್ಲದೆ ಪರಿಸರಕ್ಕೆ ತಕ್ಕಂತೆ ಆಡುವ ಭಾಷೆಯಲ್ಲೂ ವೈವಿಧ್ಯತೆ ಇರುತ್ತದೆ. ಇದು ಕೊಂಕಣದ ಪರಿಸರದ ಕಥೆ. ಒಮ್ಮೊಮ್ಮೆ ನನಗೆ ಕೊಂಕಣದ ಕಡೆಯ ಕೆಲವು ಶಬ್ದಗಳು, ರೀತಿ ಹಾಗೂ ಸಂಪ್ರದಾಯಗಳು ಅರ್ಥವಾಗದಾದಾಗ ನಾನು ಅಲ್ಲಿಯವರೇ ಆದಂಥ ನನ್ನ ಸ್ನೇಹಿತರ ನೆರವನ್ನು ಪಡೆಯುತ್ತಿದ್ದೆ.

ಮುಂದುವರೆಯುತ್ತದೆ……

Leave a Reply