ಯಕ್ಷ ಪ್ರಶ್ನೆಯ ಬಗ್ಗೆ…

ಯಕ್ಷ ಪ್ರಶ್ನೆಯ ಬಗ್ಗೆ…

ನಮ್ಮ ದೇಶದ ಸುಪ್ರಸಿದ್ಧ ಮಹಾಕಾವ್ಯವೇ ಎನ್ನಿರಿ, ಅಥವಾ ಹಿಂದೂಗಳ ಪುರಾಣವೇ ಎನ್ನಿರಿ, ಅದುವೇ ಮಹಾಭಾರತ. ಈ ಮಹಾಭಾರತದಲ್ಲಿ ವನಪರ್ವದಲ್ಲಿ ಬರುವ ಸನ್ನಿವೇಶವೇ ಯಕ್ಷ ಪ್ರಶ್ನೆ. ಇದು ಪ್ರತಿಯೊಬ್ಬ ಮನುಷ್ಯನ ಕುತೂಹಲವನ್ನು ಹೆಚ್ಚಿಸುವ, ಚಿಂತನೆಗೆ ಹಚ್ಚುವ, ವಿವೇಕವನ್ನು ಬಿಂಬಿಸುವ ಒಂದು ಉಪಾಖ್ಯಾನ.
ಇಲ್ಲಿ ಯಮಧರ್ಮನು ತನ್ನ ಪುತ್ರನನ್ನು ಪರೀಕ್ಷಿಸುವ ಉದ್ದೇಶದಿಂದ ಸೃಷ್ಟಿಸುವ ಈ ಸಂದರ್ಭವು ಇಡೀ ಮಾನವಕುಲಕ್ಕೇ ಬೋಧಪ್ರದವಾಗಿದೆ ಎಂದರೂ ತಪ್ಪಲ್ಲ. ನಾಲ್ಕು ಜನ ಪಾಂಡವರಿಗೂ ಇಲ್ಲಿ ಕೆಲವು ವಿಶಿಷ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವರು ಕೊಟ್ಟ ಉತ್ತರಗಳು ಭಿನ್ನವಾಗಿರುತ್ತವಷ್ಟೇ ಅಲ್ಲ. ಸಮರ್ಪಕವಾಗಿ ಕೂಡ ಇರುವುದಿಲ್ಲ. ಕೊನೆಗೆ ಬಂದವ ಧರ್ಮರಾಯ. ಅವನಿಗೆ ಕೇಳಿದ ಪ್ರಶ್ನೆಗಳು, ಅವನು ಕೊಟ್ಟ ಉತ್ತರಗಳೇ ಮುಂದೆ ಮಹಾಭಾರತದ ಕಥೆ ಮುಂದುವರೆಯಲು ಕಾರಣವಾಗುತ್ತದೆ.
ಭೂಮಿಗಿಂತ ಭಾರವಾದದ್ದು- ತಾಯಿ.
ಆಕಾಶಕ್ಕಿಂತ ಎತ್ತರವಾದದ್ದು- ತಂದೆ.
ತಾಯಿ ತಂದೆಯರನ್ನು ಗೌರವಿಸುವುದೇ ನಮ್ಮ ಸಂಸ್ಕೃತಿ.
ಗಾಳಿಗಿಂತ ವೇಗವಾದದ್ದು- ಮನಸ್ಸು.
ಅಂದರೆ ಈ ಮನಸ್ಸೆಂಬ ಕುದುರೆಗೆ ನಾವು ಸಂಯಮದ ಕಡಿವಾಣ ಹಾಕಬೇಕು.
ಯಾವುದನ್ನು ತ್ಯಾಗ ಮಾಡಬೇಕು- ಅಹಂಕಾರ, ಕೋಪ, ದುರಾಸೆ. ಇದು ನಮ್ಮಲ್ಲಿಯೇ ಬೀಡುಬಿಟ್ಟ ವೈರಿಗಳು.
ಯಾವುದು ಅತ್ಯುತ್ತಮ ಐಶ್ವರ್ಯ- ವಿದ್ಯೆ ಕಳ್ಳರ್ ಕದಿಯದ ಐಶ್ವರ್ಯವಿದಲ್ಲವೇ?
ಹೀಗೆ ಈ ಎಲ್ಲ ಪ್ರಶ್ನೆಗಳೂ ಸಾರ್ವಕಾಲಿಕ ಜೀವನ ಮೌಲ್ಯಗಳಾಗಿವೆ.
ಕೊನೆಯ ಪ್ರಶ್ನೆ ಮಾನವನ ಜೀವನದ ಬುಡವನ್ನೆ ಅಲುಗಾಡಿಸುವಂಥದು.
“ಜಗತ್ತಿನಲ್ಲಿ ಅತಿ ವಿಚಿತ್ರ ಸಂಗತಿ ಯಾವುದು?”
ಈ ಪ್ರಶ್ನೆಗೆ ಅತ್ಯಂತ ಸಮರ್ಪಕವಾಗಿ ಉತ್ತರಿಸಿದವ ಧರ್ಮರಾಯ. ಅದಕ್ಕೇ ಅವನು ಧರ್ಮರಾಯನಲ್ಲವೇ! “ಪ್ರತಿಯೊಬ್ಬ ಮಾನವ ಅಥವಾ ಯಾವುದೇ ಪ್ರಾಣಿ, ಪಕ್ಷಿ, ಕ್ರಿಮಿ ಕೀಟಾದಿಯಾಗಿ ಹುಟ್ಟಿದ ಯಾವುದೇ ಜೀವಿಗೂ ಸಾವು ನಿಶ್ಚಿತ. ಆದರೆ ನಾವು ಪ್ರತಿನಿತ್ಯವೂ ಸಾವನ್ನು ನೋಡಿಯೂ ನಾವೆಂದೂ ಸಾಯುವುದೇ ಇಲ್ಲವೆಂದು ತಿಳಿಯುತ್ತೇವೆ. ಇದು ಆಶ್ಚರ್ಯಕರ ಹಾಗೂ ವಿಚಿತ್ರವಲ್ಲದೆ ಮತ್ತೇನು?”
ಈ ಪ್ರಶ್ನೋತ್ತರಕ್ಕೆ ಈಗಾಗಲೇ ಸಾವಿರಾರು ವರ್ಷಗಳು ಕಳೆದುಹೋದರೂ ಇಂದಿಗೂ ಸಮಂಜಸವಾದದ್ದೇ ಎನ್ನಿಸುವುದಿಲ್ಲವೇ?
ನಮಗೆಲ್ಲರಿಗೂ ನಾವು ಎಂದಾದರೊಮ್ಮೆ ಸಾಯುವರವರೇ ಎಂಬ ಅರಿವಿದೆ. ಆದರೂ ನಾವು ಕೊನೆಯ ವರೆಗೂ ಚಿಂರಜೀವಿಗಳೆಂದೇ ತಿಳಿಯುತ್ತೇವೆ. ಇಂದಿನ ಈ ದಿನಗಳಲ್ಲಂತೂ ಇದು ಅತಿರೇಕಕ್ಕೆ ಹೋಗಿದೆ. ನಮಗೆ ಸಾವೇ ಇಲ್ಲ ಎಂಬಂತೆ ಬದುಕುತ್ತಿದ್ದೇವೆ. ಪ್ರತಿ ಕ್ಷಣವೂ ನಮ್ಮ ಜೀವನಕ್ಕೆ ಸಾವಿನ ಭಯವಿದ್ದರೂ ನಮಗೆಂದೂ ಸಾವು ಬರುವುದೇ ಇಲ್ಲವೆಂಬ ಮಿಥ್ಯ ನಂಬಿಕೆಯಲ್ಲಿದ್ದೇವೆ. ಸಾವಿನ ಬಗ್ಗೆ ಯೋಚಿಸುವುದು ನಿರಾಶಾವಾದದ ಸಂಕೇತವಾದರೂ ಈ ಎಚ್ಚರಿಕೆಯ ಗಂಟೆಯು ಜೀವನದ ಬಗೆಗಿನ ಆಸಕ್ತಿಯನ್ನು ಎಂದೂ ಕಡಿಮೆ ಮಾಡಲಾರದು. ಸಾವು ನಮ್ಮ ಜೀವನದ ಅವಿಭಾಜ್ಯ ಅಂಗವೆಂದು ಮಾತ್ರ ಹೇಳುತ್ತದೆ. ಸಾವು ನಮಗೆ ಯಾವುದೇ ರೂಪದಲ್ಲೂ ಬರಬಹುದು. ಯಾವುದೇ ಕ್ಷಣದಲ್ಲೂ ಬರಬಹುದು. ನಾವು ಎಲ್ಲದಕ್ಕೂ ಯೋಜನೆಯನ್ನು ರೂಪಿಸಬಲ್ಲೆವು. ಆದರೆ ನಮ್ಮ ಸಾವಿನ ಯೋಜನೆಯನ್ನು ರೂಪಿಸಲಾರೆವು. ಸಾವಿಗೆ ಆ ಕಾಯ್ದೆ ಅನ್ವಯಿಸಲಾರದು ಎನ್ನುವುದನ್ನು ತಿಳಿದುಕೊಂಡರೆ ನಾವು ನಮ್ಮ ಜೀವನವನ್ನು ಸಾರ್ಥಕಗೊಳಿಸಬಹುದಾದ ರೀತಿಯಲ್ಲಿ ಯೋಜಿಸಬಹುದು. ಈ ಜಗತ್ತು ಕೂಡ ಈಗ ಇದ್ದುದು ಇನ್ನೊಂದು ಕ್ಷಣದಲ್ಲಿ ನಾಶವಾಗಬಹುದು!
ನಾವು ಇದೇ ಮಿಥ್ಯಾವಾದದಲ್ಲಿ ಒಂದುವೇಳೆ ವಿಶ್ವಾಸವಿಟ್ಟು ಬದುಕಬಹುದಾದಲ್ಲಿ ನಾವು ಇಂದು ಈ ಕ್ಷಣವನ್ನು ಸಾರ್ಥಕವಾಗಿ ಜೀವಿಸಬಲ್ಲೆವು. ಎಲ್ಲರೊಂದಿಗೆ ಪ್ರೀತಿ, ದಯೆಯೊಮದಿಗೆ ವರ್ತಿಸಬಲ್ಲೆವು. ಏಕೆಂದರೆ ನಮಗೆ ನಾಳೆ ಎನ್ನುವುದು ಇಲ್ಲವಲ್ಲ ! ಈ ಕ್ಷಣ ಮಾತ್ರ ನಮ್ಮದು. ಮುಂದೆ ಏನಾದರೂ ಮಾಡಬೇಕೆಂಬ ಹಳಬಲವು ನಮಗಿದ್ದದ್ದೇ ಆದರೆ ಅದನ್ನು ಇಂದೇ ಮಾಡಬೇಕು. ಮನದಲ್ಲಿ ಧನಾತ್ಮಕ ಭವನೆಗಳನ್ನು ಹುಟ್ಟು ಹಾಕಬೇಕು. ನಾಳಿನ ಸೂರ್ಯೋದಯವನ್ನು ಕಾಣಲು ನಾವು ಇರುತ್ತವೆಯೋ ಇಲ್ಲವೋ ಬಲ್ಲವರಾರು?  ಇಂದಿನ ಈ ಕ್ಷಣ ಮಾತ್ರ ನಮ್ಮದು. ಆದ್ದರಿಂದ ನಾಳೆಗಾಗಿ ಎಂದು ಹಣದ ಗುಡ್ಡೆ ಹಾಕುವುದನ್ನು ಬಿಟ್ಟು, ಆದಷ್ಟೂ ಪರೋಪಕಾರದ ಕೆಲಸ ಮಾಡಬೇಕು. ಅಧಿಕಾರಮೋಹ, ಹಣದ ದಾಹದಿಂದ ಇತರರ ಮೇಲೆ ವೈರತ್ವ ಸಾಧಿಸುವುದರಿಂದ ಏನೂ ಸಾಧನೆಯಾಗದು.. ನಾವು ಸತ್ತ ನಂತರದ ದಿನಗಳಲ್ಲಿ ನಮ್ಮನ್ನು ಜನ ನೆನಯಬೇಕು. ಅಂದರೆ ಬದುಕು ಸಾರ್ಥಕ.
ಇದೇ ನಮ್ಮ ಕೊನೆಯ ಕ್ಷಣವೆಂಬಂತೆ ನಮ್ಮ ಕರ್ತವ್ಯವನ್ನು ನಾವು ನಿರ್ವಹಣೆ ಮಾಡಬೇಕು. ಪ್ರತಿಯೊಬ್ಬರನ್ನು ಭೆಟ್ಟಿಯಾದಾಗಲೂ ಇದೇ ನಮ್ಮ ಕೊನೆಯ ಭೆಟ್ಟಿ ಎಂಬಂತೆ ಪ್ರೀತಿ ಆದರಗಳಿಂದ ವರ್ತಿಸಬೇಕು. ನಾವೂ ನಕ್ಕು ಇತರರನ್ನೂ ಮುಕ್ತವಾಗಿ ನಗುವುದಕ್ಕೆ ಪ್ರೇರೇಪಿಸಬೇಕು.
ಈ ಜೀವನ ಸುಂದರ ಅನುಭವಗಳ ಹೂಗುಚ್ಛ. ಇಲ್ಲಿ ಸುಖ ದುಃಖಗಳೂ ಕೂಡ ಅನುಭವಗಳೇ. ಜೀವನದ ಪ್ರತಿ ಕ್ಷಣವೂ ಆನಂದದ, ಪ್ರೀತಿಯ ಸೆಲೆಯಾಗಬೇಕು. ಜ್ಞಾನದ ಆಗರವಾಗಬೇಕು. ಜೀವನ ಒಂದು ಕಲೆ. ಅದರಲ್ಲಿ ಜಾಣ್ಮೆಯಿಂದ, ಲಾಲಿತ್ಯದಿಂದ ನಮ್ಮ ಪಾತ್ರವನ್ನು ನಿಭಾಯಿಸಬೇಖು. ನಾಳಿನ ಬಗ್ಗೆ ಚಿಂತಿಸುತ್ತ ಇಮದನ್ನು ಕೂಡ ನರಕವನ್ನಾಗಿಸುವುದು ಬೇಡ. ಪ್ರತಿ ಕ್ಷಣವೂ ಇಲ್ಲಿ ಅಮೂಲ್ಯ. ಆಗಲೇ ಸಾವಿನ ಪರಿಚ್ಛೇದವು ನಮ್ಮ ಜೀವನಕ್ಕೆ ಒಂದು ಮೌಲ್ಯವನ್ನು ಕೊಟ್ಟೀತು.

ಮಾಲತಿ ಮುದಕವಿ,
ಧಾರವಾಡ-7

Leave a Reply