ಧರ್ಮ

ಧರ್ಮ
-ಧರ್ಮವು ಎಲ್ಲಾ ರೀತಿಗಳಿಂದಲೂ ವೈಶಾಲ್ಯತೆಯನ್ನು ಹೊಂದಿದ್ದು ಅದು ಸರ್ವಥಾ ಯಾವುದೇ ಒಂದು ನಿರ್ದಿಷ್ಟ ಜಾತಿಯನ್ನು ಉದ್ದೇಶಿಸಿಲ್ಲ.
ಧರ್ಮವೂ ಕೂಡ ಸತ್ಯದಂತೆಯೇ ಇದಮಿತ್ಥಂ ಎಂದು ಸ್ಪಷ್ಟವಾಗಿ ಹೇಳಲು ಅಸಾಧ್ಯವಾದಂಥದೇ ವಿಷಯ. ಆದರೂ ಕುರುಡನ ಆನೆಯಂತೆ ನನಗೆ ತಿಳಿದಷ್ಟನ್ನು ಹೇಳುವ ಪ್ರಯತ್ನ ಮಾಡುವೆ. ಇಲ್ಲಿ ಚರ್ಚೆಗೆ ಮುಕ್ತ ಅವಕಾಶವಿದ್ದು ಉದ್ದೇಶವು ಅರಿವನ್ನು ಹೆಚ್ಚಿಸುವುದು ಮಾತ್ರ.
ಧರ್ಮದ ಮೂಲವು ಧರ್ ಎಂಬ ಪದ. ಧರ್ ಎಂದರೆ ಧರಿಸು, ಕಾಪಾಡಿಕೋ ಎಂದು ಅರ್ಥಗಳಿವೆ. ಪೂರ್ವಾಗ್ರಹವಿಲ್ಲದೇ ಯಾವುದನ್ನು ಯಾವುದು ಇರುವ ಸ್ಥಿತಿಯಲ್ಲಿ ಹಾಗೇ ಇರಲಿಕ್ಕೆ ಬಿಡುವುದೋ ಮತ್ತು ಹಾಗೇ ಸುರಕ್ಷಿತವಾಗಿರುವುದನ್ನು ಅನುಮೋದಿಸುವುದೋ ಆ ನೀತಿಸೂತ್ರಗಳನ್ನೇ ಧರ್ಮ ಎಂದು ನಾವು ಗುರುತಿಸಬಹುದಾಗಿದೆ. ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬನೂ ತನ್ನಂತೆಯೇ ಇತರರನ್ನೂ ಬದುಕಗೊಡುವುದು. ಇತರರ ಹಕ್ಕುಗಳನ್ನು ಮೊಟಕುಗೊಳಿಸದಿರುವುದು, ಎಲ್ಲರೂ ಪರಸ್ಪರ ಧರ್ಮಾಚರಣೆಯಲ್ಲಿ ತೊಡಗಿ ಜೀವನ ಸಂವಿಧಾನಕ್ಕೆ ಬದ್ಧರಾಗಿರುತ್ತ ಅಭಿವೃದ್ಧಿ ಹೊಂದುವುದೇ ಪ್ರತಿಯೊಂದು ಧರ್ಮದ ಉದ್ದೇಶ.
ಮನುಷ್ಯನಲ್ಲಿ ಒಳ್ಳೆಯ ಹಾಗೂ ಕೆಟ್ಟವೆನ್ನಬಹುದಾದಂಥ ಎರಡೂ ರೀತಿಯ ಪ್ರವೃತ್ತಿಗಳಿರುತ್ತವೆ. ಒಳ್ಳೆಯ ಪ್ರವೃತ್ತಿಗಳು ಅವನನ್ನು ಉದಾರತೆ, ಇತರರ ನೋವುಗಳಿಗೆ ಸ್ಪಂದಿಸುವತ್ತ ಕರೆದೊಯ್ದರೆ, ಕೆಟ್ಟ ಪ್ರವೃತ್ತಿಗಳು ಸ್ವಾರ್ಥ, ಸುಖಲೋಲುಪ್ತಿ, ವಾಸನಾಮಯ ಜಗತ್ತಿಗೆ ಒಯ್ಯುತ್ತವೆ. ಧರ್ಮದ ಪ್ರಕಾರ ನಡೆದರೆ ಯಾರೂ ಆತಂಕ, ಕಳವಳಗಳನ್ನು ಎದುರಿಸುವ ಅಗತ್ಯವಿಲ್ಲ. ಎಲ್ಲರೂ ಧರ್ಮದ ಪಾಲನೆ ಮಾಡಿದಾಗ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿ ಆಚರಿಸಲ್ಪಟ್ಟು ಜಾಗೃತವಾಗಿರುತ್ತದೆ. ಅಲ್ಲಿ ತಪ್ಪುಗಳಿಗೆ, ಅಸಮಾಧಾನಕ್ಕೆ ಅವಕಾಶವೇ ಇರುವುದಿಲ್ಲ. ಜಗತ್ತಿನ ಯಾವುದೇ ಧರ್ಮವೂ ಮಾನವನಿಗೆ ತಮ್ಮ ತಮ್ಮೊಳಗೆ ಜಗಳಾಡಲು ಕಲಿಸುವುದಿಲ್ಲ. ಬದಲಾಗಿ ಅದು ಎಲ್ಲರನ್ನೂ ಒಂದೇ ದಾರದಲ್ಲಿ ಬಂಧಿಸಬಯಸುತ್ತದೆ.
ನಮ್ಮ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಆಕರಗಳೆಲ್ಲವೂ ವಿಶೇಷವಾಗಿ ಮಹಾಭಾರತ ಹಾಗೂ ರಾಮಾಯಣಗಳಿಂದಲೇ ಆಯ್ದುಕೊಂಡವುಗಳು. ಇವು ನಮ್ಮ ಪರಂಪರೆಯ ಮಹಾಕಾವ್ಯಗಳು. ನಮ್ಮ ನಿತ್ಯ ಜೀವನದ ಪ್ರತಿಬಿಂಬಗಳು. ಇಲ್ಲಿ ನಮ್ಮ ನಿತ್ಯ ಜೀವನದ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ. ಕೆಲವು ನೈತಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಮೌಲ್ಯಗಳು ಕಾಲ ಕಾಲಕ್ಕೆ ಬದಲಾದರೂ ಇನ್ನು ಕೆಲವು ಎಂದೂ ಬದಲಾಗದಂಥವು.
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ನಮ್ಮ ಸನಾತನ ಧರ್ಮದ ಬಗೆಗೆ ಅತ್ಯಂತ ವಿಸ್ತಾರವಾಗಿ ಹೇಳಿದ್ದಾನೆ. ಭೀಷ್ಮ ಪಿತಾಮಹರು ಕೂಡ ಧರ್ಮದ ಬಗ್ಗೆ ಹೀಗೆ ಹೇಳುತ್ತಾರೆ..
ಧಾರಣಾತ್ ಧರ್ಮ ಇತ್ಯಾಹುಃ ಧರ್ಮೋ ಧಾರಯತಿ ಪ್ರಜಾಃ
ಯಃ ಸ್ಯಾತ್ ಧಾರಣಾಸಂಯುಕ್ತಃ ಸ ಧರ್ಮ ಇತಿ ನಿಶ್ಚಯಃ
(ಎಂದರೆ ಧಾರಣ ಮಾಡುವಂಥದು, ಒಂದುಗೂಡಿಸುವಂಥದು, ಅಂತರವನ್ನು ಹೋಗಲಾಡಿಸುವಂಥದು ಧರ್ಮ. ಇಂಥ ಧರ್ಮವು ಪ್ರಜೆಗಳನ್ನು ಒಂದು ಸೂತ್ರದಲ್ಲಿ ಬಂಧಿಸಿರಿಸುವಂಥ ಶಕ್ತಿಯನ್ನು ಹೊಂದಿರುತ್ತದೆ.) ಧರ್ಮೋ ರಕ್ಷತಿ ರಕ್ಷಿತಃ ಎಂದರೆ ನಾವು ರಕ್ಷಿಸುತ್ತಿರುವ ಧರ್ಮವೇ ನಮ್ಮನ್ನು ರಕ್ಷಿಸುತ್ತದೆ. ಹಾಗಾದರೆ ನಾವು ರಕ್ಷಿಸುತ್ತಿರುವ ಧರ್ಮದ ಸ್ವರೂಪವೇನು?
ನಮ್ಮ ಋಷಿಮುನಿಗಳಿಗೆ ತಾವು “ಧರ್ಮ” ಎಂದು ಬಣ್ಣಿಸಿದ ಜೀವನ ಸಂವಿಧಾನ, ಮಾನವ ಕುಲದ ಮೂಲಭೂತ ಜೀವನತತ್ತ್ವಗಳನ್ನು ಒಳಗೊಂಡಿರುವ ಬಗ್ಗೆ ಸಂದೇಹವಿರಲಿಲ್ಲ. ಮಹಾಭಾರತವನ್ನು ಬರೆಯುವಾಗ ವೇದವ್ಯಾಸರೂ ಸಹ ಮೂಲವಾಗಿ ಇಟ್ಟುಕೊಂಡ ಅಂಶವೇ ಮಾನವ ಜೀವನ ಧರ್ಮ.
ಧರ್ಮದ ತಳಹದಿಯಲ್ಲಿ, ಧರ್ಮಮಾರ್ಗ ಹೇಳುವ ನೀತಿಸೂತ್ರಗಳನ್ನವಲಂಬಿಸಿ ಬದುಕುವ ಬದುಕನ್ನು ನಾವು ಆಯ್ದುಕೊಂಡರೆ ನಮಗೆ ರಕ್ಷಣೆ ಸಿಗುವುದು ಪ್ರಕೃತಿ ಸಹಜ. ಆದರೆ ಧರ್ಮಕ್ಕೆ ನಮ್ಮನ್ನು ರಕ್ಷಣೆ ಮಾಡುವಂತಹ ಶಕ್ತಿ ನಿಜವಾಗಿಯೂ ಇದೆಯೇ? ಎಂದರೆ ಇಲ್ಲ ಎಂದೇ ಹೇಳಬಹುದು. ಅದಕ್ಕೂ ರಕ್ಷಣೆಯ ಅಗತ್ಯವಿದೆ. ಧರ್ಮದಿಂದ ರಕ್ಷಣೆಯನ್ನು ಬಯಸುವವರು ಧರ್ಮಕ್ಕೆ ಕುತ್ತು-ಗಂಡಾಂತರ ಬಾರದಂತೆ ನೋಡಿಕೊಳ್ಳಬೇಕಾದುದು ಮೊದಲ ಕರ್ತವ್ಯ.
ಜಗತ್ತಿನ ಯಾವುದೇ ಇತಿಹಾಸ, ಪುರಾಣ, ಕಥೆಗಳು, ನಮ್ಮಲ್ಲಿನ ಪುರಾಣಗಳು, ಸಂಸ್ಕೃತದ ಕಥಾನಕಗಳು ಮುಖ್ಯವಾಗಿ ಬೊಟ್ಟುಮಾಡುವುದು ಧರ್ಮದ ಮೇಲೆ ನಡೆದ ಆಕ್ರಮಣಗಳ ಬಗ್ಗೆಯೇ. ಅಂದರೆ ಧರ್ಮದ ಪ್ರಾಬಲ್ಯವನ್ನು ನಾವು ಪ್ರತಿಪಾದಿಸಬೇಕಾದರೆ ಧರ್ಮ ಹಾಗೂ ಅಧರ್ಮಗಳ ನಡುವಿನ ತುಮುಲವನ್ನು ವಿವರಿಸಲೇಬೇಕು. ಇದರ ಅರ್ಥ ಧರ್ಮದ ವಾರಸುದಾರರೆನ್ನಿಸಿಕೊಂಡವರು ಧರ್ಮವನ್ನು ಅಲಕ್ಷಿಸಿ ಅಧರ್ಮಮಾರ್ಗವನ್ನು ಹಿಡಿಯುವವರನ್ನು ತಮ್ಮ ಉಪದೇಶದಿಂದ ಧರ್ಮದ ದಾರಿಗೆ ಕರೆತರಬೇಕೆಂಬುದಲ್ಲ. ಇತರರನ್ನು ಧರ್ಮದ ಮಾರ್ಗಕ್ಕೆ ತರುವ ಆಲೋಚನೆಯನ್ನು ಬಿಟ್ಟು, ನಮ್ಮ ಬಗ್ಗೆ ಚಿಂತಿಸಬೇಕು. ನಾವು ಧರ್ಮವನ್ನು ಪಾಲಿಸುತ್ತಿರುವೆವೇ? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಪ್ರತಿನಿತ್ಯದ ನಮ್ಮ ಕೆಲಸಕಾರ್ಯಗಳಲ್ಲಿ, ಕರ್ತವ್ಯಗಳಲ್ಲಿ, ಕೌಟುಂಬಿಕ ಸೇವೆಗಳಲ್ಲಿ, ನೆರೆಹೊರೆಯವರೊಡನೆ ವ್ಯವಹರಿಸುವಲ್ಲಿ, ಹೊರಗೆ ನಡೆಸುವ ವ್ಯವಹಾರದಲ್ಲಿ, ನಾವು ಧರ್ಮದಿಂದ ನಡೆದುಕೊಳ್ಳುತ್ತಿದ್ದೇವೆಯೇ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ಇಲ್ಲಿ ಆತ್ಮಾವಲೋಕನ ಅತ್ಯಂತ ಅವಶ್ಯಕ.
ಸಮಾಜದಲ್ಲಿ ಬಹಳಷ್ಟು ಜನರು ಅಧರ್ಮದ ಹಾದಿ ಹಿಡಿದರೆ, ಸಮಾಜವು ಗಂಡಾಂತರವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ನಾವು ಮಹಾಭಾರತ ಕಾಲದಿಂದಲೂ ನೋಡುತ್ತೇವೆ. ಅಲ್ಲಿ ಕೌರವರ ಸಂಖ್ಯೆಯೂ ಹೆಚ್ಚು. ಹೀಗಾಗಿ ಅಧರ್ಮದ ತಾಕತ್ತು ಕೂಡ ಹೆಚ್ಚೇ. ಅಂಥ ಸಮಯದಲ್ಲಿ ವಿದುರ, ಭೀಷ್ಮ, ದ್ರೋಣಾದಿಗಳೂ ಧರ್ಮಮಾರ್ಗದಲ್ಲಿದ್ದೂ ಸಹ ಕೈಚೆಲ್ಲಿ ಕುಳಿತುಕೊಳ್ಳುವಹಾಗಾಯಿತು. ಕುರುಕ್ಷೇತ್ರದ ರಣಾಂಗಣದಲ್ಲಿ ಅರ್ಜುನ ತನ್ನ ಗುರುಹಿರಿಯರೆಲ್ಲರೂ ಇರುವುದನ್ನು ಕಂಡು ಹತಾಶೆಯಿಂದ ಯುದ್ಧಮಾಡುವುದಿಲ್ಲವೆಂದು ರಥದಿಂದ ಇಳಿದು ಶಸ್ತ್ರ ಸನ್ಯಾಸ ಸ್ವೀಕರಿಸಿ ಬಿಟ್ಟ. ಆ ಸಮಯದಲ್ಲಿ ರಣರಂಗದಲ್ಲಿ ಕ್ಷಾತ್ರ ಧರ್ಮವೇನೆಂಬುದನ್ನು ಶ್ರೀಕೃಷ್ಣ ಅರ್ಜುನನಿಗೆ ನೆನಪು ಮಾಡಿ ಕೊಡಬೇಕಾಯ್ತು. ಹೀಗೆ ನಾವು ಮಾಡುತ್ತಿರುವ ಕಾರ್ಯವು ಧರ್ಮ ಸಮ್ಮತವಾಗಿದೆಯೇ ಎಂದು ಯೋಚಿಸಿದರೆ ನಾವು ಅಧರ್ಮದಿಂದ ವಿಮುಖವಾಗುವ ಮಾರ್ಗದಲ್ಲಿ ಮೊದಲ ಹೆಜ್ಜೆ ಇರಿಸಿದಂತೆ! ಪತ್ನಿಗೆ, ಪತಿಗೆ, ತಾಯಿ-ತಂದೆಯರಿಗೆ, ಮಕ್ಕಳಿಗೆ, ಅಷ್ಟೇ ಏಕೆ, ಯೋಧನಿಗೆ, ವ್ಯಾಪಾರಸ್ಥನಿಗೆ ಎಲ್ಲರಿಗೂ ಅವರವರ ಧರ್ಮಗಳ ಲಕ್ಷ್ಮಣ ರೇಖೆಗಳಿರುತ್ತವೆ.
ಸೃಷ್ಟಿಯಲ್ಲಿ ಸೂರ್ಯ ಚಂದ್ರ ನಕ್ಷತ್ರಾದಿಗಳು ನಿತ್ಯ ತಮ್ಮ ಕಾರ್ಯ ಮಾಡುತ್ತವೆ. ಭೂಮಿ ನಮ್ಮನ್ನು ಸಲಹುತ್ತದೆ, ತಂದೆ ತಾಯಿ ತಮ್ಮ ಮಕ್ಕಳನ್ನು ಸಲಹುತ್ತಾರೆ, ನದಿ ಹರಿಯುತ್ತದೆ, ಹೀಗೆ ಅನೇಕ ಪ್ರಕೃತಿದತ್ತ ಕ್ರಿಯೆಗಳು ಸಹಜವಾಗಿ ನಮಗರಿವಿಲ್ಲದಂತೆ ನಿತ್ಯ ನಡೆದೇ ಇರುತ್ತವೆ. ಇದು ಪ್ರಕೃತಿ ಸಹಜಧರ್ಮ. ಹಾಗೆಯೇ ಮಾನವ ಸಹಜಧರ್ಮವೆಂದರೆ, ಪರೋಪಕಾರ, ಸುಳ್ಳನ್ನಾಡದಿರುವುದು, ದ್ರೋಹ ಬಗೆಯದಿರುವುದು, ಕಳ್ಳತನ ಮಾಡದಿರುವುದು, ಕಪಟತನ ಇಲ್ಲದಿರುವುದು, ಅನ್ಯರ ಅಪಹಾಸ್ಯ, ಹಿಂಸೆ ಮಾಡದಿರುವುದು ಇತ್ಯಾದಿ ಸದ್ಗುಣಗಳೇ ಮಾನವ ಸಹಜ ಧರ್ಮ. ಇದನ್ನೇ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರAಗಶುದ್ಧಿ, ಇದೇ ಬಹಿರಂಗಶುದ್ಧಿ ..” ಎಂದು ದೇವರನ್ನು ಒಲಿಸುವ ಪರಿಯನ್ನು ಬಸವಣ್ಣನವರು ತೋರಿಸಿಕೊಟ್ಟಿದ್ದಾರೆ.
ಧರ್ಮವಿಹೀನಃ ಪಶುಃ
ಧರ್ಮವನ್ನು ತೊರೆದವನು ಪಶುವಿಗೆ ಸಮಾನ. ಪಶುವಿಗೆ ಧರ್ಮ-ಅಧರ್ಮಗಳ ಭೇದಭಾವ ಗೊತ್ತಿರುವುದಿಲ್ಲ ಎಂದು ಹೇಳುತ್ತಾರಾದರೂ ಮಾನವನು ಧರ್ಮ ವಿಚಾರದಲ್ಲಿ ಪ್ರಾಣಿ ಪಕ್ಷಿ ನಿಸರ್ಗಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ವಾಸ್ತವವಾಗಿ ಪ್ರಾಣಿಗಳು ಯಾವುದೋ ಧರ್ಮಪಾಲನೆಗಾಗಿ ಸ್ವಜಾತೀಯ ಪ್ರಾಣಿಗಳನ್ನು ಕೊಲ್ಲುವುದಿಲ್ಲ, ಹೊಟ್ಟೆ ತುಂಬುವಷ್ಟು ತಿನ್ನುತ್ತವೆ, ಮನುಷ್ಯನಂತೆ ನಾಳೆಗಾಗಿ ಸಂಗ್ರಹಿಸುವುದಿಲ್ಲ. ಮೋಸ, ವಂಚನೆ, ಸುಳ್ಳು ತಟವಟ ಇತ್ಯಾದಿ ನಕಾರಾತ್ಮಕ ಗುಣಗಳು ಅವುಗಳಲ್ಲಿಲ್ಲ. ಸಹಬಾಳ್ವೆಯಂಥಾ ಸದ್ಗುಣಗಳು ಅವುಗಳಲ್ಲಿ ಮೇಳೈಸಿವೆ. ಈ ಸದ್ಗುಣಗಳನ್ನು ಮಾನವನು ಅಳವಡಿಸಿಕೊಳ್ಳುವುದೇ ನಿಜವಾದ ಧರ್ಮದ ಅಳವಡಿಕೆ. ಈ ಗುಣಗಳಿಲ್ಲದೆ ಕೇವಲ ದೇವರು, ಧರ್ಮವೆಂದು ಬಾಳುವ ಜೀವನವದು ವ್ಯರ್ಥ. ಸದ್ಗುಣಗಳನ್ನು ಪಾಲಿಸುವಾತನಿಗೆ ಸಹಜವಾಗಿ ಆ ಸದ್ಗುಣಗಳೇ ರಕ್ಷಣೆ ನೀಡುವವು. ಇದನ್ನೇ “ಧರ್ಮೋ ರಕ್ಷತಿ ರಕ್ಷಿತಃ” ಎಂದಿರುವರು ಹಿರಿಯರು.
ಅಹಿಂಸಾ ಪರಮೋ ಧರ್ಮಃ
ಅಹಿಂಸೆಯೆಂಬುದೇ ನಿಜವಾದ ಧರ್ಮ. ಅಹಿಂಸೆ ಎಂಬುದು ಕೇವಲ ಶಾರೀರಿಕ ಹಿಂಸೆ ಮಾತ್ರವಲ್ಲ. ಮಾನಸಿಕ ಕಿರುಕುಳ, ನಿಂದನೆ, ದಬ್ಬಾಳಿಕೆ, ಜೀತ, ಸುಲಿಗೆ, ಶೋಷಣೆ ಮೊದಲಾದ ನೀತಿಗಳನ್ನು “ಅಹಿಂಸೆ” ಎಂಬ ಒಂದೇ ಪದದಲ್ಲಿ ಇಲ್ಲಿ ಹಿಡಿದಿಡಲಾಗಿದೆ. ಕೇವಲ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳನ್ನು ಹಿಂಸಿಸುವುದೂ ಸಹ ಸೇರಿಕೊಳ್ಳುತ್ತದೆ. ಎಲ್ಲಾ ಧರ್ಮಗಳೂ ಶಾಂತಿ ಸಮನ್ವಯ ಮತ್ತು ಸಂಯಮವನ್ನೇ ಬೋಧಿಸಿವೆ. ಯಾವುದೇ ಧರ್ಮದ ಕರ್ತೃವೂ ತನ್ನ ಧರ್ಮವು ಜಗತ್ತಿನ ತುಂಬಾ ವ್ಯಾಪಿಸಬೇಕು, ಇತರ ಧರ್ಮಗಳ ಮೇಲೆ ಸವಾರಿ ಮಾಡಬೇಕು, ಅವುಗಳನ್ನು ನಾಮಾವಶೇಷ ಮಾಡಬೇಕು ಎಂಬ ಯಾವ ದುರ್ಗುಣಗಳನ್ನೂ ಹೊಂದಿರುವುದಿಲ್ಲ. ಹೊಂದಿರಲೂಬಾರದು. ಜಗತ್ತಿನಲ್ಲಿ ಹಲವಾರು ಧರ್ಮಗಳಿವೆ. ಹಿಂದೂ, ಪಾರ್ಸಿ, ಸಿಖ್, ಜೈನ, ಲಿಂಗಾಯತ, ಬೌದ್ಧ, ಇಸ್ಲಾಂ, ಕ್ರೈಸ್ತ, ಮುಂತಾದ ಧರ್ಮಗಳು ಪ್ರಮುಖವಾದವುಗಳು. ಸಮಾಜದ ಜನರ ಜೀವನವನ್ನು ಉನ್ನತ ಮಟ್ಟಕ್ಕೆ ಏರಿಸುವುದು, ಅವರಲ್ಲಿ ಮಾನಸಿಕ ಸದೃಢತೆ, ಆತ್ಮವಿಶ್ವಾಸ ತುಂಬುವುದು, ಅವರ ಜೀವನದಲ್ಲಿ ಸತ್ಚಿಂತನೆ ಸದಾಚಾರಗಳನ್ನು ಬಿತ್ತಿ ಬೆಳೆಯುವುದು, ದೇವರು-ಧರ್ಮ ಕುರಿತು ಅಂಧಶ್ರದ್ಧೆ ಕಳೆದು ವೈಜ್ಞಾನಿಕ ಮತ್ತು ಸಾತ್ವಿಕ ಮನೋಭಾವ ಬೆಳೆಸುವುದು, ಸಮಾಜದಲ್ಲಿ ಪರಸ್ಪರ ನಂಬಿಕೆ ಸಹಬಾಳ್ವೆ ಸಹಜೀವನ ಭ್ರಾತೃತ್ವ ಮುಂತಾದ ಸದ್ಗುಣಗಳನ್ನು ಬಿತ್ತಿ ಬೆಳೆಯುವುದೇ ಈ ನಿಜವಾದ ಧರ್ಮಗಳ ಉದ್ದೇಶ.
ಧರ್ಮದ ಮುಖಗಳು ಒಂದೊಂದು ಕಡೆಯಿಂದ ನೋಡಿದರೆ ಒಂದೊಂದು ರೀತಿ ಕಾಣುತ್ತವೆ. ಸಮಗ್ರವಾಗಿ ಧರ್ಮವನ್ನು ವರ್ಣಿಸಲು ಯಾವುದೇ ಒಂದು ಮುಖದ ತೀರ್ಮಾನ ಮಾಪನವಾಗಲಾರದು. ಎಲ್ಲಾ ಧರ್ಮಗಳೂ ಶಾಂತಿ ಸಮನ್ವಯ ಮತ್ತು ಸಂಯಮವನ್ನೇ ಬೋಧಿಸಿವೆ. ಯಾವುದೇ ಧರ್ಮದ ಕತೃ೯ವೂ ತನ್ನ ಧರ್ಮವು ಜಗತ್ತಿನ ತುಂಬಾ ವ್ಯಾಪಿಸಬೇಕು ಇತರ ಧರ್ಮಗಳ ಮೇಲೆ ಸವಾರಿ ಮಾಡಬೇಕು ಅವುಗಳನ್ನು ನಾಮಾವಶೇಷ ಮಾಡಬೇಕು ಎಂಬ ಯಾವ ದುರ್ಗುಣಗಳನ್ನೂ ಹೊಂದಿರುವುದಿಲ್ಲ. ಹೊಂದಿರಲೂಬಾರದು. ಯಾವುದೇ ಧರ್ಮ ಮೂಲದಲ್ಲಿ ರಕ್ತ ಪಿಪಾಸುವಲ್ಲ ಎಂಬುದನ್ನು ನಾವು ಮನಗಾಣಬೇಕು. ದಯೆ ಅನುಕಂಪ ಸಹಿಷ್ಣುತೆಗಳೇ ಧರ್ಮದ ಜೀವಾಳ.
ಧರ್ಮವೇ ಜಯವೆಂಬ ದಿವ್ಯ ಮಂತ್ರ ಎಂಬ ಮಾತನ್ನು ನಾವೆಲ್ಲ ಕೇಳಿದ್ದೇವೆ. ಮಹಾಭಾರತ ಯುದ್ಧಕ್ಕೂ ಮೊದಲು ಯುದ್ಧ ಘಟಿಸದಂತೆ ತಡೆಯಲು ಕೃಷ್ಣ ಮೂರು ಸಲ ಸಂಧಾನಕ್ಕೆ ಯತ್ನಿಸಿದ್ದ. ಆದರೆ ಸುಯೋಧನನ ಅಹಂಕಾರ ಸಂಧಾನಕ್ಕೆ ಅವಕಾಶ ಕೊಡಲಿಲ್ಲ. ರಾಮಾಯಣದಲ್ಲಿ, ಶ್ರೀರಾಮ ಜನನಕ್ಕೂ ಸಾವಿರಾರು ವರ್ಷಗಳ ಮೊದಲೇ ರಾವಣ ಜನಿಸಿದ್ದ. ಸ್ವತಃ ಅಣ್ಣನಾದ ಕುಬೇರನ ಶ್ರೀಲಂಕೆಯ ಸಂಪತ್ತನ್ನು ಬಲವಂತದಿಂದ ಪಡೆದುಕೊಂಡ. ಕುಬೇರ ಉತ್ತರದ ಅಲಕಾಪುರಿಗೆ ತೆರಳಿ ಹೊಸದಾಗಿ ಸಾಮ್ರಾಜ್ಯ ಸ್ಥಾಪಿಸಿಕೊಂಡರೆ ಅಲ್ಲಿಗೂ ಹೋದ ರಾವಣ ಕುಬೇರನಲ್ಲಿದ್ದ ಪುಷ್ಪಕ ವಿಮಾನವನ್ನು ಅಪಹರಿಸಿದ. ಹೀಗೆ ರಾವಣ ಪದೇ ಪದೇ ಅನ್ಯರಿಂದ ಶಾಪಗ್ರಸ್ತನಾಗಿದ್ದ. ವನವಾಸಿಗಳಾಗಿದ್ದ ರಾಮ-ಲಕ್ಷ್ಮಣರಿಗೆ ತೊಂದರೆಕೊಟ್ಟ. ತಂಗಿ ಶೂರ್ಪನಖಿಯ ಮಾತು ಕೇಳಿ ಸೀತೆಯನ್ನು ಅಪಹರಿಸಿ ಲಂಕೆಗೆ ಎಳೆದೊಯ್ದ. ಇವೆಲ್ಲ ಅಧರ್ಮಗಳೇ ಆತನ ಅಳಿವಿಗೆ ಕಾರಣವಾದವು.
ಮಹಾಭಾರತದಲ್ಲಿ ದ್ರೌಪದಿ ವಸ್ತ್ರಾಪಹರಣದ ಪ್ರಸಂಗ. ಧರ್ಮಾತ್ಮನೆನಿಸಿದ ಧರ್ಮರಾಯ ಜೂಜಿನಲ್ಲಿ ತನ್ನನ್ನೇ ಕಳೆದುಕೊಂಡಿದ್ದೂ ಅಲ್ಲದೇ ತನ್ನನ್ನು ಪಣವಾಗಿಟ್ಟದ್ದು ಸರಿಯೇ ಎಂದು ದ್ರೌಪದಿ ತುಂಬಿದ ಸಭೆಯಲ್ಲಿ ಭೀಷ್ಮರನ್ನು ಕೇಳಿದಾಗ ಭೀಷ್ಮರು ನಿನ್ನ ಪ್ರಶ್ನೆಗೆ ಉತ್ತರಿಸಲು ನನ್ನಿಂದ ಸಾಧ್ಯವಾಗದು. ಇದು ಧರ್ಮಸೂಕ್ಷ್ಮ” ಎಂದು ಹೇಳಿದ್ದರು. ಜೂಜಿನಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಾ ಹೋದ ಯಮಸುತನು ಜೂಜಾಟವನ್ನೇ ಆಡದಿದ್ದರೆ ಕಥೆ ಬೇರೆಯಿರುತ್ತಿತ್ತು. ಧರ್ಮಾತ್ಮನೆನಿಸಿಕೊಂಡ ಯುಧಿಷ್ಠಿರನು ಮಾಡಿದ ಕೆಲವು ತಪ್ಪುಗಳು ಧರ್ಮದ ದಾರಿಯನ್ನು ತೊರೆದುದರಿಂದಾಗಿ ಪಾಂಡವರು ವನವಾಸ, ಅಜ್ಞಾತವಾಸ ಎಂದು ಕಷ್ಟ ಪಡಬೇಕಾಗಿ ಬಂದಿತು. ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಅವಳ ಪ್ರಶ್ನೆಗೆ ಸೂಕ್ತ ಉತ್ತರ ಕೊಡದ ಕಾರಣದಿಂದಾಗಿ ಭೀಷ್ಮರೂ ಕೂಡ ಶರಶಯ್ಯೆಯಲ್ಲಿ ಮಲಗಬೇಕಾಗಿ ಬಂದಿತು.. ಹೀಗೆ ಧರ್ಮ ಎನ್ನುವುದು ಎರಡು ಅಲಗುಗಳನ್ನು ಹೊಂದಿರುವ ಕತ್ತಿಯಂತೆ… ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ.
ಸನಾತನ ಜೀವನಧರ್ಮದಲ್ಲಿ ನಾಲ್ಕು ಪುರುಷಾರ್ಥಗಳನ್ನು ಹೇಳಿದ್ದಾರೆ: ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಧರ್ಮವೆಂದರೆ ಮಾನವ ಜೀವನ ಸಂವಿಧಾನ, ಅರ್ಥವೆಂದರೆ ಧರ್ಮಮಾರ್ಗದಲ್ಲಿ ಗಳಿಸುವ ಸಿರಿಸಂಪತ್ತು, ಕಾಮವೆಂದರೆ ಧರ್ಮಮಾರ್ಗದಲ್ಲಿ ಅನುಭವಿಸುವ ಸುಖೋಪಭೋಗಗಳು, ಮೋಕ್ಷವೆಂದರೆ ಸಕಲವನ್ನೂ ಅನುಭವಿಸಿದ ತೃಪ್ತಿಯಿಂದ ದೇಹದಿಂದ ಮತ್ತು ಜರಾಮರಣ ಚಕ್ರದಿಂದ ಬಿಡುಗಡೆಗೊಳ್ಳುವುದು. ಸಂತೋಷ, ಸಮೃದ್ಧಿ ಮತ್ತು ಉತ್ತಮ ಜೀವನ ಎಲ್ಲರೂ ಬಯಸುವ ಮಾನವ ಜನ್ಮಸಿದ್ಧ ಹಕ್ಕು; ಎಲ್ಲಿಯವರೆಗೆ ಧರ್ಮದ ತಳಹದಿಯ ಮೇಲೆ ಅವುಗಳನ್ನು ಅನುಭವಿಸಲಾಗುತ್ತದೋ ಅಲ್ಲಿಯವರೆಗೂ ಅದು ಸರಿಯೇ. ಸಂಸಾರಿಗಳಾಗಿ ಸಮಾಜದಲ್ಲಿ ತೊಡಗಿಕೊಳ್ಳಬೇಕು, ತನ್ನಿಂದಾದ ಮಟ್ಟಿಗೆ ಸಮಾಜಕ್ಕೆ ಸೇವೆಯನ್ನು ಸಲ್ಲಿಸಬೇಕು; ಆದರೆ ಎಲ್ಲವೂ ಧರ್ಮದ ನೆಲೆಗಟ್ಟಿನಲ್ಲೇ ನಡೆಯಬೇಕು.
ಒಬ್ಬ ವ್ಯಕ್ತಿ ಹುಟ್ಟಿನಿಂದ ಸಾಯುವವರೆಗೂ ಯಾವಾಗಲೂ ಒಳ್ಳೆಯ ಮಾರ್ಗವನ್ನು ಅನುಸರಿಸುತ್ತ ಜೀವನವನ್ನು ಸಾಗಿಸಿ, ಯಾರಿಗೂ ಹೊರೆಯಾಗದೆ, ಇತರರಿಗೆ ಸಹಾಯವನ್ನೂ ಮಾಡುತ್ತ, ಸಮಾಜದಲ್ಲಿ ಉತ್ತಮನೆಂಬ ಹೆಸರು ಪಡೆದು ಬದುಕಬೇಕು. ಧರ್ಮಕ್ಕೆ ಮುಖಗಳಿದ್ದರೂ ಮುಖವಾಡಗಳಿಲ್ಲ. ಧರ್ಮ ಎಂದೂ ತಪ್ಪು ದಾರಿಯಲ್ಲಿ ನಡೆಯುವುದಕ್ಕೆ ಪ್ರೋತ್ಸಾಹ ಕೊಡದು. ಒಟ್ಟಿನಲ್ಲಿ ಸರಿಯಾದ ಮಾರ್ಗದಲ್ಲಿ ಕೈ ಹಿಡಿದು ನಡೆಸುವುದೇ ಧರ್ಮ.
(ಭಗವದ್ಗೀತೆಯ ಆಧಾರಿತ)

Leave a Reply