ಡಾ. ವೀಣಾ ಶಾಂತೇಶ್ವರ ಎಂಬ ಸ್ತ್ರೀಪರ ಚಿಂತಕಿ 

ಡಾ. ವೀಣಾ ಶಾಂತೇಶ್ವರ ಎಂಬ ಸ್ತ್ರೀಪರ ಚಿಂತಕಿ

“ಬೆಳೆದದ್ದು ಕನಸು ಕಾಣುತ್ತಲೇ… ಕಂಡ ಕನಸು ಸಾಕಾರಗೊಳಿಸಿಕೊಳ್ಳಲು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ… ಈಗ ಕನಸು ಸಾಕಾರಗೊಂಡಿವೆ… ಆದರೂ ಮತ್ತೇನಾದರೂ ಮಾಡಬೇಕೆಂಬ ಹಂಬಲ, ತುಡಿತ…”
ಇದು ಡಾ ವೀಣಾರವರ ಬಗ್ಗೆ ಹೇಳಬಹುದಾದ ಮಾತು. ಸಂತೂಬಾಯಿಯವರ ಶತಮಾನದ ಹಿಂದಿನ ಕನಸಿಗೆ ತಮ್ಮ ಕಥೆ, ಕಾದಂಬರಿಗಳ, ವೈಚಾರಿಕ ಬರಹಗಳ ಮೂಲಕ ಜೀವ ತುಂಬುತ್ತ ಅವರು ನಡೆದ ಕಾಲುದಾರಿಯನ್ನೇ ಹೆದ್ದಾರಿಯಗಿ ವಿಸ್ತರಿಸಲು ಪ್ರಯತ್ನಿಸಿದ ಲೇಖಕಿಯರ ಸಾಧನೆಯಲ್ಲಿ ಡಾ. ವೀಣಾ ಅವರ ಪಾಲು ಗಮನಾರ್ಹವಾದುದು. ಅನನ್ಯ ಕತೆಗಾರ್ತಿಯಾಗಿ ಸುಪ್ರಸಿದ್ಧರಾಗಿರುವ ಡಾ. ವೀಣಾರವರು ಸಂವೇದನೆಯ ಪ್ರಖರ ವೈಚಾರಿಕತೆ, ಈ ಪುರುಷಪರ ಜಗತ್ತಿನಲ್ಲಿ ಪ್ರಚಲಿತವಿರುವಂಥ ಸ್ತ್ರೀಯರ ಬಗೆಗಿನ ನಿಷ್ಠುರ ವಿಮರ್ಶೆಯ ಮೂಲಸಂಪ್ರದಾಯಗಳಿಗೆ ಇರಿಸು ಮುರಿಸು ಉಂಟು ಮಾಡುವ ಕಥೆ ಕಾದಂಬರಿಗಳಿಂದ ವಿಭಿನ್ನರಾಗಿದ್ದಾರೆ. ಈ ಸಂಪ್ರದಾಯವಾದಿ ಜಗತ್ತಿನಲ್ಲಿ ಮಹಿಳೆಯರಿಗೆ ಹೇರಿರುವಂಥ ವಿಧಿ ನಿಷೇಧಗಳ ಒಂದು ಸುಳಿಯಲ್ಲಿ ಸಿಕ್ಕ ಮಹಿಳೆಯು ತನ್ನ ಮನಸ್ಸಿನ ಭಾವನೆಗಳಿಗೆ ತಾನೇ ಅಪರಿಚಿತಳಂತಾಗಬೇಕಾಗಿದೆ. ತನ್ನದಲ್ಲದ ಬದುಕಿನ ಜವಾಬ್ದಾರಿಗಳಿಗೆ ತನ್ನ ಹೆಗಲನ್ನು ಕೊಡುತ್ತ ಬಂದ ಈ ಸ್ತ್ರೀಸಮಾಜದ ಒಳಸುಳಿಗಳಿಗೆ ತಮ್ಮ ಕತೆಗಳ ಮೂಲಕ ಬಿಡುಗಡೆಯ ದಾರಿ ತೋರಿಸಿದವರು ಡಾ. ವೀಣಾ.
ಬೆಳೆಯ ಸಿರಿ ಮೊಳಕೆಯಲ್ಲಿ ಎಂದು ಹೇಳುವ ಮಾತು ವೀಣಾರವರ ವಿಷಯದಲ್ಲಿ ಅತ್ಯಂತ ನಿಜವಾದದ್ದು. ಅವರು ತಮ್ಮ ಸ್ತ್ರೀ ಶಿಕ್ಷಣದ ಬಗ್ಗೆ ಅತ್ಯಂತ ಆದರ್ಶಗಳನ್ನಿರಿಸಿಕೊಂಡಿದ್ದ ತಾಯಿಯಿಂದ ಮೂರನೆಯ ವರ್ಷದಲ್ಲಿಯೇ ಅಕ್ಷರಾಭ್ಯಾಸವನ್ನು ಪ್ರಾರಂಭಿಸಿ ನಾಲ್ಕನೆಯ ವಯಸ್ಸಿನಿಂದಲೇ ಓದುವುದಕ್ಕೆ, ಕಥೆ ಬರೆಯುವುದಕ್ಕೆ ಪ್ರಾರಂಭಿಸಿದ್ದರಂತೆ. ಸಂಪೂರ್ಣ ವಸ್ತುವನ್ನೊಳಗೊಂಡ ಒಂದು ಕಥೆಯನ್ನು ಅವರು ತಮ್ಮ ಆರನೆಯ ವಯಸ್ಸಿನಲ್ಲಿಯೇ ಬರೆದರಂತೆ. ಅದರ ಕಥೆ ಸಾಹಸಿಯಾದ ರಾಜಕುಮಾರಿಯೊಬ್ಬಳು ರಾಕ್ಷಸನೊಬ್ಬನು ಬಂದಿಯಾಗಿರಿಸಿದ್ದ ರಾಜಕುಮಾರನನ್ನು ಬಿಡಿಸಿಕೊಂಡು ಬಂದ ಒಂದು ರೊಮ್ಯಾಂಟಿಕ್ ಕಥೆ. ಸಾಮಾನ್ಯವಾಗಿ ಕತೆಗಳಲ್ಲಿ ಬರುವ ವಸ್ತುವಿಗೆ ಇದು ತೀರಾ ವಿರುದ್ಧವಾಗಿತ್ತು. ಡಾ. ವೀಣಾರವರ ತಮ್ಮನು ತಮ್ಮ ಅಕ್ಕನ ಬಗ್ಗೆ ಹೇಳುತ್ತ, “ಅವರು ತಮ್ಮ ಬಾಲ್ಯದಲ್ಲಿಯೇ ಕಥೆಗಳನ್ನು ಬರೆಯುತ್ತಿದ್ದರು. ಅಷ್ಟೇ ಅಲ್ಲ, ಅವರು ತಾವು ಬರೆದಂಥ ಕಥೆಗಳಿಗೆ ತಾವೇ ಸಾಂದರ್ಭಿಕ ಚಿತ್ರಗಳನ್ನೂ ರಚಿಸುತ್ತಿದ್ದರು. ರಂಗೋಲಿಯಲ್ಲಿಯೂ ಕೂಡ ಅವರು ನಿಪುಣರು” ಎಂದು ಅಭಿಮಾನದಿಂದ ಹೇಳುತ್ತಾರೆ. ಹೀಗೆ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಬರೆಯುವ ಗೀಳು ಹಚ್ಚಿಕೊಂಡ ವೀಣಾ ಆಗಿನ ವಯಸ್ಸಿಗೆ ತಕ್ಕಂತೆ ಸುಂದರಿಯರ, ರಾಜಕುಮಾರರ, ರಾಕ್ಷಸರ ಕಥೆಗಳನ್ನು ಬರೆಯುತ್ತಿದ್ದರು. ಆದರೆ, ಇವರ ಕಲ್ಪನೆಯಲ್ಲಿ ರಾಜಕುಮಾರಿಗೇ ಪ್ರಾಮುಖ್ಯತೆ. ಅವಳದೇ ಮಹತ್ವದ ಪಾತ್ರವಾಗಿರುತ್ತಿತ್ತು. ಇದು ಸಾಮಾನ್ಯ ಭಾವನೆಗಳಿಗಿಂತ ಸ್ವಲ್ಪ ಭಿನ್ನವಾಗಿಯೇ ಎನಿಸುತ್ತಿತ್ತು. ಹೆಣ್ಣಿನ ಧೈರ್ಯ, ಸಾಹಸಗಳನ್ನು ಈ ರೀತಿಯಾಗಿ ರೊಮ್ಯಾಂಟಿಕ್ ಆಗಿ ವರ್ಣಿಸುವ ಕಥೆಗಳನ್ನು ಅವರು ಹೈಸ್ಕೂಲಿನ ಮಧ್ಯಭಾಗದ ವರೆಗೂ ಬರೆದರಂತೆ. ಮುಂದೆ ಅವರು ಪ್ರಬುದ್ಧರಾದಂತೆ ಅವರ ಕಥೆ, ಕಾದಂಬರಿಗಳಲ್ಲಿ ಕೂಡ ಸ್ತ್ರೀಯರ ಮನದಾಳದ ಭಾವನೆಗಳಿಗೇ ಅವರು ಪ್ರಾಶಸ್ತ್ಯವನ್ನು ಕೊಡುವುದನ್ನು ನೋಡುತ್ತೇವೆ. ಪದವಿ ಓದುವಾಗ ಗಂಭೀರ, ವೈಚಾರಿಕ ಸಾಹಿತ್ಯ ಅಭ್ಯಸಿಸಲು ಆರಂಭಿಸಿದ ಬಳಿಕ ತಾವು ಚಿಕ್ಕಂದಿನಲ್ಲಿ ಬರೆಯುತ್ತಿದ್ದ ಬರವಣಿಗೆಗಳು ಅವರಿಗೆ ಬಾಲಿಶವೆನಿಸಿದ್ದೂ ಉಂಟು. ಆದರೆ, ಒಂದಂತೂ ಸತ್ಯ. ಈಗ್ಗೆ ಐದು ದಶಕದ ಹಿಂದೆ ಮಹಿಳೆಯೊಬ್ಬಳು ಸ್ವತಂತ್ರ ವಿಚಾರಲಹರಿಯನ್ನು ಬರವಣಿಗೆಯ ಮೂಲಕ ಹರಿಯಬಿಡುವುದು ಕಷ್ಟವೇ ಆಗಿತ್ತು. ಬಂದ ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ ವೀಣಾ ಶಾಂತೇಶ್ವರ ತಮ್ಮ ಅಧ್ಯಾಪಕ ವೃತ್ತಿ ಮತ್ತು ಬರವಣಿಗೆಯ ಕಾಯಕವನ್ನು ಅನೂಚಾನವಾಗಿ ಮುಂದುವರೆಸಿದರು. ಅವರ ಈ ಸ್ವಭಾವವೇ ಅವರನ್ನು ಇಂದು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರನ್ನಾಗಿಸಿದೆ.
ಡಾ. ವೀಣಾರವರು ಧಾರವಾಡದವರು, ಇವರ ತಾಯಿ ಕೊಲ್ಲಾಪುರ ಜಿಲ್ಲೆಯ ಮಾಂಗೂರ ಗ್ರಾಮದ ಕುಲಕರ್ಣಿ  ಮನೆತನದವರು. ಅವರು ಹೆಚ್ಚು ಶಾಲೆ ಕಲಿತವರಲ್ಲ. ವ್ಯವಹಾರಕ್ಕೆ ಬೇಕಾದಷ್ಟು ಗಣಿತ, ಓದಲು ಬರೆಯುವಷ್ಟು ಮರಾಠಿಯನ್ನೂ, ನಂತರ ಇಂಗ್ಲಿಷ್ ಹಾಗೂ ಕನ್ನಡವನ್ನೂ ಕಲಿತಿದ್ದರು. ಇವರ ತಾಯಿ ಚಿಕ್ಕವರಿದ್ದಾಗಲೇ ತನ್ನ ತಾಯಿಯವರನ್ನು ಕಳೆದುಕೊಂಡಿದ್ದರಿಂದ ತಮ್ಮ ಕಾಕುನ ಹತ್ತಿರವೇ ಬೆಳೆದಿದ್ದರು. ೧೯೪೦ ರಲ್ಲಿ ಇವರ ವಿವಾಹವು ಶ್ರೀ ಬಲರಾಮಾಚಾರ್ ಯಲಬುರ್ಗಿಯವರೊಂದಿಗೆ ಆಗಿತ್ತು. ವೀಣಾರವರ ತಂದೆಯವರು ಆಯರ‍್ವೇದ ವೈದ್ಯರ ಮಗನಾಗಿ ಹುಟ್ಟಿದ್ದರೂ ಸ್ವಂತ ಪರಿಶ್ರಮದಿಂದ ಕಷ್ಟಪಟ್ಟು ಕಲಿತು, ಮುಂಬಯಿಯ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ನಿಂದ ಕೆಮಿಸ್ಟ್ರಿ ಎಮ್. ಎಸ್.ಸಿ ಯಲ್ಲಿ ಪ್ರಶಸ್ತಿ ಪಡೆದವರು. ಅವರು ಮೊದಲು ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ನಂತರ ಡಾ. ಎಸ್ ಸಿ ನಂದೀಮಠರವರು ಸ್ಥಾಪಿಸಿದ ಬಾಗಲಕೋಟೆಯ ಸಕ್ಕರಿ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರೂ ಹಾಗೂ ಉಪಪ್ರಾಚಾರ‍್ಯರೂ ಆಗಿದ್ದರು. ಹೀಗೆ ತಾಯಿ ತಂದೆ ಇಬ್ಬರೂ ತಮ್ಮ ಜೀವನದಲ್ಲಿ ಉನ್ನತ ಮೌಲ್ಯಗಳ ಗಟ್ಟಿಯಾದ ಅಡಿಪಾಯವನ್ನು ಹಾಕಿದರು ಎಂದು ಹೇಳುತ್ತಾರೆ. ವೀಣಾರವರು ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತ, “ನನ್ನ ಕೌಟುಂಬಿಕ ಹಿನ್ನೆಲೆ, ಬಾಲ್ಯ, ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರ ಇವುಗಳ ಬಗ್ಗೆ ಹಿಂದಿರುಗಿ ನೋಡಿದಾಗೆಲ್ಲ ನನಗೆ ನನ್ನ ಎಲ್ಲ ಸಮಕಾಲೀನ ಹೆಣ್ಣುಮಕ್ಕಳಿಗಿಂತ ನಾನು ಬಹಳಷ್ಟು ಹೆಚ್ಚಿನ ಅನುಕೂಲತೆಗಳನ್ನು ಹೊಂದಿದ್ದೆ ಎಂದು ಎನ್ನಿಸುತ್ತದೆ” ಎಂದು ತೃಪ್ತಿಯಿಂದ ಹೇಳುತ್ತಾರೆ.
ತಮ್ಮ ಬರವಣಿಗೆಗೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಕಾರಣ ತಮ್ಮ ತಾಯಿಯೇ ಎಂದೂ, ಅವರು ತರಿಸುತ್ತಿದ್ದಂಥ ಪ್ರಗತಿಪರ ವಿಚಾರಗಳ ಮರಾಠಿ ಪತ್ರಿಕೆಗಳನ್ನು ಹಾಗೂ ಕತೆ ಕಾದಂಬರಿಗಳನ್ನು ಹೆಚ್ಚಾಗಿ ಓದುತ್ತಿದ್ದರಿಂದಾಗಿ ತಮ್ಮಲ್ಲಿ ಪ್ರಗತಿಪರ ವಿಚಾರಗಳ ಬೀಜಾರೋಪಣೆಯಾಗಿತ್ತು ಎಂದು ಹೇಳುತ್ತಾರೆ. ಮಹರ್ಷಿ ಕರ್ವೆ, ಬಾಲಗಂಗಾಧರ ತಿಲಕ, ಪಂಡಿತಾ ರಮಾಬಾಯಿ ಇತ್ಯಾದಿ ಸಮಾಜಸುಧಾರಕರಿಂದ ಪ್ರಭಾವಿತರಾಗಿದ್ದ ತಮ್ಮ ತಾಯಿ ಮಹಿಳೆಯು ಸ್ವಯಂ ಪರಿಪೂರ್ಣಳಾಗಿರಬೇಕು, ಧೈರ್ಯವಂತೆಯಾಗಿರಬೇಕು ಎಂಬ ಮಾತನ್ನು ಯಾವಾಗಲೂ ಒತ್ತಿ ಹೇಳುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ಪುರುಷ ಪ್ರಧಾನವಾದ ನಮ್ಮ ಸಮಾಜವು ಮಹಿಳೆಯನ್ನು ನೋಡುವ ಸಂಕುಚಿತ ಸಂಪ್ರದಾಯನಿಷ್ಠ ದೃಷ್ಟಿಕೋನವು ಬದಲಾಗಲು ಇನ್ನೂ ಹಲವು ಶತಮಾನಗಳೇ ಬೇಕಾದೀತು. ಅಲ್ಲಿಯವರೆಗೆ ತನ್ನ ಅಸ್ತಿತ್ವದ ಉಳಿವಿಗಾಗಿ ಹಾಗೂ ವಿಕಾಸಕ್ಕಾಗಿ ಸ್ವತಃ ಹೋರಾಡಲು ನಮ್ಮ ದೇಶದ ಮಹಿಳೆಗೆ ಒಳ್ಳೆಯ ಶಿಕ್ಷಣ, ಧೈರ್ಯ, ಹಾಗೂ ಅಪಖ್ಯಾತಿಗೆ ಕಿವಿಗೊಡದಿರುವ ಎದೆಗಾರಿಕೆ ಇವು ಮೂರೂ ಬೇಕು ಎನ್ನುವುದು ಅವರ ತಾಯಿಯವರ ಅಭಿಪ್ರಾಯವಾಗಿತ್ತು ಎಂದು ಹೇಳುತ್ತಾರೆ. ಅವರ ತಂದೆಯವರ ಬಗ್ಗೆ ಹೇಳುತ್ತ, ತಮ್ಮ ತಂದೆಯವರ ದೃಷ್ಟಿಯಲ್ಲಂತೂ ಬುದ್ಧಿ, ಚಾರಿತ್ರ್ಯ, ವಿದ್ಯೆ, ಮಾನವೀಯ ಮೌಲ್ಯಗಳು, ಇತ್ಯಾದಿಗಳಲ್ಲಿ ಹೆಣ್ಣು ಮಕ್ಕಳೇ ಗಂಡಸರಿಗಿಂತ ಉತ್ತಮರು ಎಂಬಂಥ ಹೇಳಿಕೆಗಳ ಪರಿಸರದಲ್ಲಿಯೇ ಬೆಳೆಯುತ್ತ ಹೋದಂತೆ ತಾನು ಮಹಿಳಾ ಸ್ವಾತಂತ್ರ್ಯ ಹಾಗೂ ಸಮಾನತೆಯಲ್ಲಿ ಗಾಢ ನಂಬಿಕೆ ಬೆಳೆಸಿಕೊಳ್ಳುತ್ತ ಹೋದೆನೆಂದು ಹೇಳುವ ಅವರಿಗೆ ತಮ್ಮ ನಿಲುವಿನ ಬಗ್ಗೆ ಹೆಮ್ಮೆಯಿದೆ. ತನ್ನ ವಿಚಾರಗಳನ್ನು ಪ್ರಕಟಪಡಿಸಲು, ತನ್ನ ಭಾವನೆಗಳಿಗೆ ಸ್ಪಂದಿಸಲು, ತನಗೆ ಇಷ್ಟ ಬಂದಂತೆ ತನ್ನ ಜೀವನವನ್ನು ರೂಪಿಸಿಕೊಳ್ಳಲು ಮಹಿಳೆಗೆ ಪೂರ್ಣ ಅಧಿಕಾರವಿದೆ. ತನ್ನನ್ನು ಹತ್ತಿಕ್ಕಬಯಸುವ ಯಾವುದೇ ಅನಿಷ್ಟ ಸಾಮಾಜಿಕ ಸಂಪ್ರದಾಯವನ್ನು ಧಿಕ್ಕರಿಸಲು ಆಕೆ ಹಿಂಜರಿಯಬಾರದು. ತಲತಲಾಂತರಗಳಿಂದ ತನ್ನ ಮೇಲೆ ದಬ್ಬಾಳಿಕೆ ನಡೆಸುತ್ತ ಬಂದಿರುವ ಗಂಡಸರನ್ನು ಆಕೆ ಎಗ್ಗಿಲ್ಲದೆ ಬಗ್ಗುಬಡಿಯಬೇಕು-ಎಂಬುದು ತಮ್ಮ ಆಗಿನ ವಿಚಾರ ಸರಣಿಯಾಗಿತ್ತೆಂದು ಅವರು ಹೇಳುತ್ತಾರೆ.
ಅವರು ಹದಿಹರೆಯದ ಮೊದಲ ಭಾಗದಲ್ಲಿ ತಾವು ಬರೆದ ಕಥೆಗಳು ವಸ್ತುವಿನಲ್ಲಿ ಸ್ವಂತಿಕೆಯನ್ನು ಹೊಂದಿದ್ದರೂ ಪಾತ್ರ ನಿರೂಪಣೆಯಲ್ಲಿ ಮತ್ತು ತಂತ್ರದಲ್ಲಿ ಅನುಕರಣೆ ಇತ್ತೆನ್ನುವುದನ್ನು ಒಪ್ಪಿಕೊಳ್ಳುತ್ತಾರೆ, ವಸ್ತು ಯಾವಾಗಲೂ ಒಂದು ಕ್ರಾಂತಿಕಾರಕ ವಿಚಾರಸರಣಿಯನ್ನು ಪ್ರತಿಪಾದಿಸುತ್ತಿತ್ತು. ಆ ವಯೋಮಾನಕ್ಕೆ ಅನುಗುಣವಾಗಿ ಭಾವನಾತ್ಮಕತೆ, ಕಾಲ್ಪನಿಕತೆ, ರಮ್ಯತೆ, ಆದರ್ಶಪ್ರಿಯತೆ ಇವೆಲ್ಲ ಅಂಶಗಳಿದ್ದ ಆ ಕತೆಗಳಲ್ಲಿ ನಾಯಕಿಯು ಅನ್ಯಾಯವನ್ನು ವಿರೋಧಿಸುವ ಮನೋಭಾವದವಳಾಗಿದ್ದಳು ಹಾಗೂ ಆಕೆ ಆ ಹೋರಾಟದಲ್ಲಿ ಯಶಸ್ವಿಯೂ ಆಗುತ್ತಿದ್ದಳು. ಇಂಥ ಕತೆಗಳ ಬಗ್ಗೆ ಅವರಿಗೂ ಬಹಳ ಹೆಮ್ಮೆಯೂ ಇರುತ್ತಿತ್ತಂತೆ. ಇವು ಸಂಯುಕ್ತ ಕರ್ನಾಟಕ, ಕರ್ಮವೀರ, ಸ್ಕೂಲಿನ ಮ್ಯಾಗಝಿನ್ನುಗಳಲ್ಲಿಯೂ ಪ್ರಕಟವಾಗುತ್ತಿದ್ದವಂತೆ.
ಈಗಿನ ಡಾ. ವೀಣಾ ಶಾಂತೇಶ್ವರ ಆಗಿನ್ನೂ ವೀಣಾ ಯಲಬುರ್ಗಿ. ಬಾಗಲಕೋಟೆಯಲ್ಲಿ ಪಿಯುಸಿ ಉತ್ತೀರ್ಣರಾದ ಬಳಿಕ ಧಾರವಾಡ ಕರ್ನಾಟಕ ಕಾಲೇಜಿನಲ್ಲೇ ಇಂಗ್ಲೀಷ್ ಸಾಹಿತ್ಯ ಓದಬೇಕೆಂಬ ಹಟ ಅವರದು. ಇದಕ್ಕೆ ಕಾರಣವೂ ಇತ್ತು. ಪಿಯುಸಿ ಪರೀಕ್ಷೆಯಲ್ಲಿ ಕೇವಲ ಒಂದು ಅಂಕದಿಂದ ಪ್ರಥಮ ರ‍್ಯಾಂಕ್ ತಪ್ಪಿಸಿಕೊಂಡಿದ್ದರು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಕರ್ನಾಟಕ ಕಾಲೇಜಿನಲ್ಲಿ ಓದಿರುವುದರಿಂದಲೇ ತಾರತಮ್ಯ ಮಾಡಿ ತಮಗೆ ದ್ವಿತೀಯ ರ‍್ಯಾಂಕ್ ನೀಡಲಾಗಿದೆ ಎಂಬುದು ವೀಣಾರವರ ವಾದವಾಗಿತ್ತು. ಆದರೆ, ಮುಂದೆ ತಮ್ಮ ಪಿಯುಸಿ ಫಲಿತಾಂಶಕ್ಕೆ ಕರ್ನಾಟಕ ಕಾಲೇಜು ಕಾರಣ ಎಂಬ ತಮ್ಮ ವಾದ ತಪ್ಪು, ಈ ಕಾಲೇಜು ಎಲ್ಲ ಕಾಲೇಜಿನಂತಲ್ಲ ಎಂಬುದು ಅವರಿಗೆ ಬಹುಬೇಗ ಮನವರಿಕೆಯಾಯಿತು. ಅಲ್ಲದೆ ತಂದೆಯನ್ನು ಒಪ್ಪಿಸಿ ಕರ್ನಾಟಕ ಕಾಲೇಜಿನಲ್ಲಿ ಬಿಎ ಕೋರ್ಸಿಗೆ ಪ್ರವೇಶ ಪಡೆಯಲು ಇನ್ನೊಂದು ಕಾರಣವೂ ಇತ್ತು. ಆಗ ಖ್ಯಾತ ಪ್ರಾಧ್ಯಾಪಕರಾಗಿದ್ದ ಪ್ರೊ. ಅರ್ಮಾಂಡೋ ಮೆನೆಜಿಸ್‌ರವರ ಬಳಿ ಪಾಠ ಕೇಳುವ ಹಂಬಲ.
ಮುಂದೆ ಕಾಲೇಜಿಗೆ ಹೋದಾಗ ಅವರ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಸಾಹಿತ್ಯಗಳ ಓದಿನ ಹರಹೂ ಒಮ್ಮೆಲೇ ವಿಸ್ತಾರವಾದಂತೆ ಅನೇಕ ವಿರುದ್ಧ ವಿಚಾರಸರಣಿಯುಳ್ಳ ಲೇಖಕರಿಂದ ಪ್ರಭಾವಿತರಾಗಿದ್ದರು. ಹೈಸ್ಕೂಲಿನಲ್ಲಿದ್ದಾಗ ಬಂಗಾಲಿ, ಪ್ರಗತಿಪರ ಮರಾಠಿ ಹಾಗೂ ಕನ್ನಡ ಸಾಹಿತ್ಯ, ಮಾಸ್ತಿ, ನಿರಂಜನ ಮುಂತಾದ ಲೇಖಕರನ್ನು ಮೆಚ್ಚುತ್ತಿದ್ದ ಅವರು ಕಾಲೇಜಿನಲ್ಲಿ ಅಡಿಗರು, ಶಾಂತಿನಾಥ ದೇಸಾಯಿ, ಇಬ್ಸೆನ್, ಇಲಿಯಟ್, ಸಾರ್ತ್ರ, ಕಾಮು ಇತ್ಯಾದಿ ಲೇಖಕರನ್ನು ಮೆಚ್ಚತೊಡಗಿದ್ದರು. ಶಾಂತಿನಾಥ ದೇಸಾಯಿಯವರ ಮುಕ್ತಿ ಕಾದಂಬರಿಯು ಅವರ ಮೇಲೆ ವಿಶೇಷ ಪ್ರಭಾವವನ್ನು ಬೀರಿತ್ತೆಂದೂ ಹೇಳುತ್ತಾರೆ. ವಸ್ತುವಿನ ನಿರೂಪಣಾ ವಿಧಾನ, ತಂತ್ರ ರಚನೆ, ಪಾತ್ರ ಸೃಷ್ಟಿ. ವಿಚಾರ ಪ್ರತಿಪಾದನೆ ಇವನ್ನೆಲ್ಲ ಹೇಗೆ ಕಲಾತ್ಮಕವಾಗಿ ದುಡಿಸಿಕೊಳ್ಳಬಹುದು ಎಂಬುದನ್ನು ತಾವು ಶಾಂತಿನಾಥ ದೇಸಾಯಿಯವರಿಂದಲೇ ಕಲಿತೆ ಎಂದೂ ಹೇಳುತ್ತಾರೆ. ಈ ಅಂಶವನ್ನು ಡಾ. ಆಮೂರರವರು ತಮ್ಮ ವೀಣಾರವರ  ಕಥೆಗಳ ವಿಮರ್ಶೆಯಲ್ಲೂ ಎತ್ತಿ ಹೇಳುತ್ತಾರೆ. ಸಾಮಾಜಿಕ ಅನಿಷ್ಟಗಳ ಬಗ್ಗೆ ಪ್ರತಿಭಟನೆ, ಹೆಣ್ಣಿನ ಮೇಲಾಗುವ ದೌರ್ಜನ್ಯದ ವಿವಿಧ ರೂಪಗಳು ಇವೇ ಅವರ ಆಗಿನ ಕಥಾವಸ್ತುಗಳಾಗಿದ್ದವು. ಅನ್ಯಾಯವನ್ನು ವಿರೋಧಿಸುವ ಕಥಾನಾಯಕಿಗೆ ಸೋಲು, ಅವಮಾನ, ಅಪನಿಂದೆಗಳೇ ಎದುರಾಗುತ್ತಿದ್ದರೂ ಆಕೆ ಧೈರ್ಯಗೆಡುತ್ತಲಿರಲಿಲ್ಲ ಎನ್ನುವ ಅವರು ತಮ್ಮ ಮೊದಲಿನ ಎರಡು ಕಥಾ ಸಂಕಲನಗಳಲ್ಲಿಯ ಹೆಚ್ಚಿನ ಕಥೆಗಳು ಈ ಅವಧಿಯಲ್ಲಿಯೇ ಬರೆದವುಗಳು ಎಂದು ಹೇಳುತ್ತಾರೆ. ನಂತರದ ದಿನಗಳಲ್ಲಿಯೇ ತಾವು ಕಥೆ ಬರೆಯುವಾಗಿನ ಅನುಭವಗಳ ತೀವ್ರತೆಯನ್ನು, ಉತ್ಕಟತೆಯನ್ನು ಪ್ರಜ್ಞಾಪೂರ್ವಕವಾಗಿ ಅನುಭವಿಸಿದುದು ಎಂದು ಹೇಳುತ್ತಾರೆ. ಆ ದಿನಗಳಲ್ಲಿ ತಾವು ಕನ್ನಡ, ಇಂಗ್ಲಿಷ್ ಹಾಗೂ ಜಗತ್ತಿನ ಎಲ್ಲ ಭಾಷೆಗಳ ಶ್ರೇಷ್ಠ ಲೇಖಕರ ಕೃತಿಗಳನ್ನು ಓದುತ್ತಿದ್ದರೂ ತಮ್ಮ ಬರವಣಿಗೆಯ ಮೇಲೆ ಯಾರದೇ ನೇರ ಪ್ರಭಾವ ಆಗಲಿಲ್ಲವೆಂದು ಹೆಮ್ಮೆಯಿಂದ ಹೇಳುತ್ತಾರೆ. ವಸ್ತುವಿಗೆ ಹಾಗೂ ತಂತ್ರಕ್ಕೆ ಅನುಗುಣವಾಗಿ ಭಾಷೆಯನ್ನು ಬಳಸಿಕೊಳ್ಳುವುದು, ಪಾತ್ರಗಳಲ್ಲಿ ಜೀವಂತಿಕೆ ಹಾಗೂ ಕಲಾತ್ಮಕತೆಯನ್ನು ತುಂಬುವುದು, ಇವುಗಳಲ್ಲಿ ತಾವು ಆನಂತರದ ದಿನಗಳಲ್ಲಿ ತಕ್ಕಮಟ್ಟಿಗೆ ಸ್ವಂತಿಕೆಯನ್ನು ಸಾಧಿಸಿದ್ದೆನೆಂದು ಹೇಳುತ್ತಾರೆ. ಈ ಅವಧಿಯ ಕಥೆಗಳ ನಾಯಕಿಯರು ಸ್ವಾವಲಂಬಿಗಳು, ಸಂಪ್ರದಾಯ ವಿರೋಧಿಗಳು. ಇಂಥ ಹೆಂಗಸರು ಎದುರಿಸಬೇಕಾದ ಸಾಮಾಜಿಕ, ವೈಯಕ್ತಿಕ, ವೈಚಾರಿಕ ಹಾಗೂ ಮಾನಸಿಕ ಸಮಸ್ಯೆಗಳು ಈ ಕತೆಗಳ ವಸ್ತುಗಳಾಗಿದ್ದವು. ಅವರನ್ನು ಈ ಕಥಾವಸ್ತುಗಳು ಕಾಡಿಸುತ್ತಿದ್ದುವಂತೆ. ಚಿಂತೆಗೀಡು ಮಾಡುತ್ತಿದ್ದುವಂತೆ. ಅವನ್ನು ಬರೆದ ನಂತರ ಒಂದು ದೊಡ್ಡ ಭಾರವನ್ನು ಇಳುಹಿದಂಥ ಅನುಭವವಾಗುತ್ತಿತ್ತಂತೆ. ಅವರ ಮೂರನೆಯ ಹಾಗೂ ನಾಲ್ಕನೆಯ ಕಥಾ ಸಂಕಲನಗಳು ಹಾಗೂ ಎರಡು ಕಾದಂಬರಿಗಳು ಇದೇ ಅವಧಿಯಲ್ಲಿ ಬರೆದವುಗಳೆಂದು ಹೇಳುತ್ತಾರೆ. ಅದಕ್ಕೆ ಕಾರಣ ಈ ಅವಧಿಯಲ್ಲಿ ಅವರು ಸ್ವತಃ ಅನುಭವಿಸಿದ್ದು ಅಥವಾ ತೀರ ಹತ್ತಿರದಿಂದ ನೋಡಿದವುಗಳೇ ಆಗಿರುವುದೇ ಭಾವನೆಗಳ ಹಾಗೂ ವಿಚಾರಗಳ ಈ ತೀವ್ರತೆಗೆ ಕಾರಣವಾಗಿದ್ದಿರಬಹುದೆಂಬುದು ಅವರ ಎನಿಸಿಕೆ. ತಮ್ಮ ಮನಸ್ಸಿಗೆ ಸಮಾಧಾನ ಕೊಟ್ಟಂಥ ಬೆರಳೆಣಿಕೆಯಷ್ಟು ಕೃತಿಗಳನ್ನು ರಚಿಸಿದ್ದುದೂ ಆಗಲೇ ಎಂದೂ ಹೇಳುತ್ತಾರೆ.
ಮುಂದಿನ ಘಟ್ಟದಲ್ಲಿ ಅವರು ಬರೆದಂಥ ಕೆಲವು ಕತೆಗಳಲ್ಲಿ “ಮಹಿಳೆಯು ಧೈರ್ಯವಂತಳಾಗಿರಲಿ, ಗಂಡನನ್ನು ಧಿಕ್ಕರಿಸುವಂಥವಳಾಗಿರಲಿ, ಸಂಪ್ರದಾಯ ವಿರೋಧಿಯೇ ಆಗಿರಲಿ, ನಮ್ಮ ಇಂದಿನ ಸಮಾಜವು ಅವಳನ್ನು ಸುಖನಿದ್ರೆ ಮಾಡಲು ಬಿಡದು ಎಂಬ ನೋವಿನ ಅರಿವು ತಮಗಿದೆ” ಎಂದು ಹೇಳುವ ಇವರು, “ಏಕಾಂಗಿಯಾಗಿ ಗಂಡಿನ ಹಾಗೂ ಸಮಾಜದ ಅನ್ಯಾಯಗಳ ವಿರುದ್ಧವಾಗಿ ಹೋರಾಡುವ ಮಹಿಳೆಯ ದಾರಿಯು ಇನ್ನೂ ಸುಗಮವಾಗಿಲ್ಲ, ಪರಿಪೂರ್ಣ ಮಹಿಳಾ ಸ್ವಾತಂತ್ರ್ಯಕ್ಕೆ ಕಾಲವಿನ್ನೂ ಪಕ್ವವಾಗಿಲ್ಲ, ಆಕೆ ಹೊಂದಾಣಿಕೆ ಮಾಡಿಕೊಳ್ಳಬೇಕು ಅಥವಾ ತನ್ನ ತತ್ವಗಳಿಗಾಗಿ ನೋವು ಅನುಭವಿಸುತ್ತ ಬದುಕಿರಬೇಕು. ಹೋರಾಡಿ ಜಯ ಗಳಿಸಿಯೂ ಸುಖವಾಗಿರುವ ಭಾಗ್ಯವು ತೀರ ಕಡಿಮೆ ಸಂಖ್ಯೆಯ ಮಹಿಳೆಯರಿಗಿದೆ. ಉಳಿದವರನ್ನು ಈ ಸಮಾಜವು ಒತ್ತಾಯದಿಂದ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಹಚ್ಚುತ್ತದೆ. ಈ ಮಹಿಳೆಯರು ಅಂಜುಬುರುಕರಲ್ಲ, ಹೇಡಿಗಳಲ್ಲ, ಕಟುವಾಸ್ತವದ ಅರಿವುಳ್ಳವರು. ಇವರು ಸೋತವರಲ್ಲ. ಪಕ್ವತೆ ಹೊಂದಿದವರು” ಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾರೆ.
ಅವರು ತಾವು ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಬರೆದ ಈ ಕತೆಗಳಲ್ಲದೆ ಇನ್ನೂ ಅನೇಕ ಬಗೆಯ ಕತೆಗಳನ್ನು ಬರೆದಿರುವುದಾಗಿ ಹೇಳುತ್ತಾರೆ. ವಿಶೇಷ ಸಂಚಿಕೆಗಳಿಗಾಗಿ ಬರೆಯುವ ಕತೆಗಳೆಂದರೆ ಅವು ಕಲ್ಲಿನ ಮೂರ್ತಿಯನ್ನು ಕಟೆದ ಅನುಭವ ಎಂದು ಹೇಳುತ್ತಾರೆ. ಅದು ನಿಜವೇ. ಸ್ವಯಂಸ್ಫೂರ್ತಿಯಿಂದ ಬರುವ ಕಥೆಗಳಿಗೂ ಪ್ರಾಸಂಗಿಕವಾಗಿ ಬರೆಯುವ ಕಥೆಗಳಿಗೂ ಸಾಕಷ್ಟು ಅಂತರವಿದೆ.
ಡಾ. ವೀಣಾರವರು ಧಾರವಾಡದಲ್ಲಿಯೇ ಹುಟ್ಟಿದವರು. ಬಾಗಲಕೋಟೆಯಲ್ಲಿ ತಮ್ಮ ಪಿಯುಸಿ ವರೆಗಿನ ಓದು ಮುಗಿಸಿದ ಇವರು ಮತ್ತೆ ಧಾರವಾಡಕ್ಕೆ ಮರಳಿದುದು ಧಾರವಾಡದ ಒಂದು ಸುದೈವವೇ ಸರಿ. ಇಲ್ಲಿಯೇ ಕರ್ನಾಟಕ ಕಾಲೇಜಿನಲ್ಲಿ ತಮ್ಮ ಕಾಲೇಜು ಶಿಕ್ಷಣವನ್ನು ಮುಗಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಮ್.ಏ. ಪದವಿಯನ್ನೂ ಪಡೆದರು. ಬಳಿಕ ಹೈದರಾಬಾದನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷನಿಂದ ‘ಡಿಪ್ಲೋಮಾ ಇನ್ ಇಂಗ್ಲಿಷ ಲ್ಯಾಂಗ್ವೇಜ’ ಪಡೆದರು.
ಡಾ| ವೀಣಾ ಶಾಂತೇಶ್ವರ ಅವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕಿಯಾಗಿ ೩೯ ವರ್ಷ (ಹಾಗು ಪ್ರಾಚಾರ್ಯೆಯಾಗಿ ೯ ವರ್ಷ) ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಲ್ಲದೆ ಅನೇಕ ಸಾಹಿತ್ಯಿಕ, ಶೈಕ್ಷಣಿಕ ಹಾಗು ಸಾಂಸ್ಕೃತಿಕ ಸಂಘಟನೆಗಳಲ್ಲಿ ಭಾಗಿಗಳಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿ, ಮಹಿಳಾ ಸಲಹಾ ಸಮಿತಿ, ಅಕ್ಯಾಡೆಮಿಕ್ ಕೌನ್ಸಿಲ್, ಉದ್ಯೋಗ ಮಾಹಿತಿ ಕೇಂದ್ರ, ಪರೀಕ್ಷಾ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇದೀಗ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದ ಮಾರ್ಗದರ್ಶಿಯಾಗಿ, ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟಿನ ಸದಸ್ಯರಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಮಹಿಳಾ ಅಧ್ಯಯನ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ೫ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನಾಧ್ಯಕ್ಷೆಯಾಗಿ ೨೦೦೩ರಲ್ಲಿ ಆಯ್ಕೆ ಆಗಿ ಸೇವೆ ಸಲ್ಲಿಸಿದ್ದಾರೆ. ವೀಣಾ ಅವರು ನಾಡಿನ ಹಲವಾರು ಸಾಹಿತ್ಯ ಸಂಘಟನೆಗಳಲ್ಲಿ ಸದಸ್ಯರಾಗಿದ್ದಾರಲ್ಲದೆ, ಸಾಹಿತ್ಯಿಕ, ವೈಚಾರಿಕ ಸಂಕಿರಣ, ಸಾಂಸ್ಕೃತಿಕ ಉತ್ಸವಗಳ ನಿರ್ದೇಶಕರಾಗಿ, ಆಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ. ೧೯೯೪-೯೬ರಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೫ರಲ್ಲಿ ಅವರು ಅಖಿಲ ಭಾರತ ಲೇಖಕಿಯರ ಸಮ್ಮೇಳನದ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದ ಸಮಯದಲ್ಲಿ ಹಲವಾರು ಶೈಕ್ಷಣಿಕ ಸುಧಾರಣೆಗಳನ್ನು ಜಾರಿಗೆ ತಂದಿದ್ದಾರೆ. ಇವರ ಆಡಳಿತಾವಧಿಯಲ್ಲಿಯೇ, ೨೦೦೨ರಲ್ಲಿ ನಂದನ್ ನಿಲೇಕಣಿಯವರ ಆರ್ಥಿಕ ಸಹಕಾರದಿಂದ ಅತ್ಯಂತ ವಿನೂತನವಾದ ‘ಸೃಜನ – ಡಾ. ಅಣ್ಣಾಜಿರಾವ್ ಸಿರೂರ’ ರಂಗಮಂದಿರ ನಿರ್ಮಾಣಗೊಂಡಿತು.
ಅವರು ರಚಿಸಿದ ಸಾಹಿತ್ಯದ ಬಗ್ಗೆ ಹೇಳುವುದಾದರೆ ವೀಣಾ ಶಾಂತೇಶ್ವರ ಅವರು ೫ ಕಥಾಸಂಕಲನಗಳನ್ನು ಬರೆದಿದ್ದಾರೆ. ಅವುಗಳೆಂದರೆ ಮುಳ್ಳುಗಳು, ಕೊನೆಯ ದಾರಿ, ಕವಲು, ಹಸಿವು, ಬಿಡುಗಡೆ, ನಡೆದದ್ದೇ ದಾರಿ.
ಇವರ ಮೊದಲ ಕಥಾಸಂಕಲನ ‘ಮುಳ್ಳುಗಳು’. ಇವರ ‘ಕವಲು’ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿದ್ದು, ‘ಹಸಿವು’ ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ’ ಪ್ರಶಸ್ತಿ ಲಭಿಸಿದೆ. ಇವರ ಮತ್ತೊಂದು ಕಥಾಸಂಕಲನವು ‘ಕೊನೆಯ ದಾರಿ’. ಸಣ್ಣ ಕಥೆಗಳನ್ನಲ್ಲದೆ ‘ಗಂಡಸರು’ ಮೊದಲಾದ ೩ ಕಾದಂಬರಿಗಳನ್ನೂ ಸಹ ವೀಣಾ ಶಾಂತೇಶ್ವರ ಬರೆದಿದ್ದಾರೆ. “ಗಂಡಸರು” ಕಾದಂಬರಿಗೆ ಪ್ರಜಾವಾಣಿ ಬಹುಮಾನ, ಅನುಪಮಾ ಪ್ರಶಸ್ತಿ ಲಭಿಸಿವೆ. “ಅವಳ ಸ್ವಾತಂತ್ರ‍್ಯ” ಎನ್ನುವ ಇವರ ಕತೆಯು ನ್ಯೂಯಾರ್ಕ್ ಪ್ರೆಸ್ ಸಂಪಾದಿಸಿದ ‘ವಿಶ್ವದ ಅತ್ಯುತ್ತಮ ಮಹಿಳಾ ಬರಹಗಾರರು’ ಶ್ರೇಣಿಯಲ್ಲಿ ಪ್ರಕಟವಾಗಿದೆ. ವೀಣಾ ಅವರ ‘ಅತಿಥಿ’ ಎಂಬ ಕಥೆಯು ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಕಥಾಸಂಗಮ’ ಚಿತ್ರದಲ್ಲಿ ಬಳಕೆಯಾಗಿದೆ. ವೀಣಾ ಅವರಿಗೆ ಅವರ ಅಭಿಮಾನಿಗಳು, ಹಿತೈಷಿಗಳು ‘ನಿರ್ದಿಗಂತ’ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿದ್ದಾರೆ. ಶಿಕ್ಷಣ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಶಾಶ್ವತೀ ಪ್ರತಿಷ್ಠಾನದ ‘ಸದೋದಿತಾ ಪ್ರಶಸ್ತಿ’ ಲಭಿಸಿದೆ. ಅಲ್ಲದೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಹಾಗು ರಾಜ್ಯ ಸರಕಾರದ ‘ದಾನ ಚಿಂತಾಮಣಿ ಪ್ರಶಸ್ತಿ’ ಸಹ ಇವರಿಗೆ ಲಭಿಸಿವೆ. ೧೯೮೮ರಲ್ಲಿ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ದೊರೆಯಿತು. ವೀಣಾ ಅವರು ಅನೇಕ ವೈಚಾರಿಕ ಕೃತಿಗಳನ್ನು ಹಾಗು ವಿಮರ್ಶೆಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ಸಾಹಿತ್ಯದಲ್ಲಿ ವೈಚಾರಿಕತೆ, ಲೇಖಕಿಯ ಸಮಸ್ಯೆಗಳು, ಕನ್ನಡ ಲೇಖಕಿಯರ ಸಾಧನೆ, ಸಣ್ಣ ಕತೆಗೆ ಮಹಿಳೆಯರ ಕೊಡುಗೆ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಣ್ಣ ಕತೆ, ಮಹಿಳೆಯರು ಮತ್ತು ಪೋಲೀಸರು ಮೊದಲಾದವು ಇವರ ಪ್ರಕಟಿತ ಕೃತಿಗಳು.
ಇವರು ಇಂಗ್ಲಿಷ್, ಮರಾಠಿ ಹಾಗು ಹಿಂದಿಯಿಂದ ಕನ್ನಡಕ್ಕೆ ಅನುವಾದಗಳನ್ನು ಸಹ ಮಾಡಿದ್ದಾರೆ. ಆಜ್ಞೇಯರ ಹಿಂದಿ ಕಾದಂಬರಿ “ನದಿದ್ವೀಪಗಳು”, “ಕುರಿಗಾಹಿ”, “ಬಿಲ್ಲೇಸುರ” ಮೊದಲಾದವುಗಳನ್ನು ಇಲ್ಲಿ ಹೆಸರಿಸಬಹುದು. “ನದಿದ್ವೀಪಗಳು” ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ವೀಣಾ ಶಾಂತೇಶ್ವರ ಅವರ ಹಲವಾರು ಕಥೆಗಳನ್ನು ಅಜಯ್ ವರ್ಮಾ ಅಲ್ಲೂರಿ ತೆಲುಗಿಗೆ ಅನುವಾದಿಸಿದ್ದಾರೆ. ‘ಯಕೃತ್ತು'(ಶಾಮ ಮನೋಹರ್ ಅವರ ನಾಟಕ ಅನುವಾದ), ‘ಪತಝಡಕೆ ಫೂಲ್’, ‘ಸ್ತನದಾಯಿನಿ’ ಕೃತಿಗಳನ್ನೂ, ಸುಮಾರು ಹದಿನೈದು ಮರಾಠಿ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅಮೆರಿಕನ್/ಮೆಕ್ಸಿಕನ್ ಇಂಗ್ಲಿಷ್ ಕಥೆಗಳ ಅನುವಾದಗಳು ‘ಅದೃಷ್ಟ’ ಸಂಕಲನದಲ್ಲಿದೆ. ಇವರ ಕಥೆಗಳು ಇಂಗ್ಲಿಷ್, ಫ್ರೆಂಚ್, ಹಿಂದಿ, ಕೊಂಕಣಿ, ಮರಾಠಿ, ಉರ್ದು, ತಮಿಳು, ತೆಲುಗು, ಮಲೆಯಾಳಂ, ಗುಜರಾತಿ ಮತ್ತು ಸಿಂಧಿ ಭಾಷೆಗಳಲ್ಲಿ ಅನುವಾದಗೊಂಡಿರುವವು. ಡಾ ವೀಣಾ ಅವರ ಕಥೆಗಳು ಭಾರತೀಯ ಭಾಷೆಗಳು ಸೇರಿದಂತೆ ಇಂಗ್ಲಿಷ್ ಮತ್ತು ಫ್ರೆಂಚ್‌ಗೆ ಅನುವಾದಿತವಾಗಿವೆ,
ವೀಣಾ ಅವರು ಕನ್ನಡದಲ್ಲಲ್ಲದೆ, ಇಂಗ್ಲಿಷಿನಲ್ಲಿಯೂ ಸಾಹಿತ್ಯ ರಚಿಸಿದ್ದು, ರೆಪ್ಯೂಟೇಶನ್, ಕ್ರಾಸ್ ರೋಡ್ಸ್, ಹರ್ ಫ್ರೀಡಮ್, ದಿ ಶಾಡೊ ಎಂಬ ಸಣ್ಣ ಕಥೆಗಳನ್ನು ಮತ್ತು ‘ಮೆನ್’ ಎಂಬ ಕಾದಂಬರಿಯನ್ನೂ ಬರೆದಿದ್ದಾರೆ. ‘ಮಹಿಳೆಯರ ಸಣ್ಣಕಥೆಗಳು’, ‘ಹೊಸ ಹೆಜ್ಜೆ’ ಎಂಬ ಮಹಿಳೆಯರ ಪ್ರಾತಿನಿಧಿಕ ಕವನ ಸಂಕಲನಗಳನ್ನೊಳಗೊಂಡಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ‘ನಡೆದದ್ದೇ ದಾರಿ’ ಎಂಬ ಹೆಸರಿನಲ್ಲಿ ವೀಣಾ ಅವರ ಸಮಗ್ರ ಕಥನ ಸಾಹಿತ್ಯ ಪ್ರಕಟಗೊಂಡಿದೆ. ಇವರ ಅನೇಕ ರೇಡಿಯೊ ನಾಟಕಗಳು ಧಾರವಾಡ ಹಾಗೂ ಬೆಂಗಳೂರು ಆಕಾಶವಾಣಿಯಿಂದ ಬಿತ್ತರಗೊಂಡಿವೆ.
ಕೌಟುಂಬಿಕವಾಗಿ ವೀಣಾರವರು ಇಬ್ಬರು ಸಹೋದರರು, ನಾಲ್ವರು ಸಹೋದರಿಯರ ತುಂಬು ಕುಟುಂಬದಲ್ಲಿ ಬೆಳೆದು ಬಂದರು. ಸಹೋದರರಲ್ಲಿ ಡಾ. ವಾಗೀಂದ್ರ ಬೆಳಗಾವಿಯಲ್ಲಿ ವೈದ್ಯರಾಗಿದ್ದಾರೆ. ರಾಘವೇಂದ್ರ ಬೆಳಗಾವಿಯಲ್ಲೇ ಉದ್ಯಮಿಯಾಗಿ ನೆಲೆ ಕಂಡುಕೊಂಡಿದ್ದಾರೆ. ಪದ್ಮಾ ಹಿರಿಯಕ್ಕನಾದರೆ ವಿಜಯಾ, ರತ್ನಪ್ರಭಾ ಮತ್ತು ಮೋಹಿನಿ ಕಿರಿಯ ತಂಗಿಯರು.
ಸಾಹಿತ್ಯ ಅಧ್ಯಯನದೊಂದಿಗೆ ಸುಂದರ ಬದುಕಿನ ಕನಸು ಕಟ್ಟಿಕೊಂಡಿದ್ದ ವೀಣಾ ಮದುವೆಯಾಗಿದ್ದು ಶ್ರೀಯುತ ಬಿ. ಶಾಂತೇಶ್ವರ ಅವರನ್ನು. ಅವರ ಮಗಳು ಮೀರಾ ಈಗ ವೈದ್ಯೆಯಾಗಿ ಬೆಂಗಳೂರಿನಲ್ಲಿದ್ದರೆ, ಮಗ ಜ್ಯೋತಿರ್ಲಿಂಗ ಸಾಫ್ಟವೇರ್ ಎಂಜಿನಿಯರ್ ಆಗಿದ್ದಾರೆ.
ಛಲದಿಂದ ಕನಸು ಸಾಕಾರ ಎನ್ನುವ ಡಾ. ವೀಣಾ ಶಾಂತೇಶ್ವರರವರು ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಂಡಿರುವ ಕನ್ನಡ ಸಣ್ಣ ಕತೆಯ ಪರಂಪರೆಯಲ್ಲಿ ವ್ಯಕ್ತಿವಿಶಿಷ್ಟತೆಯಿಂದ ಚಾರಿತ್ರಿಕ ಮಹತ್ವ ಪಡೆದ ಪ್ರತಿಭಾವಂತರಲ್ಲಿ ಒಬ್ಬರು. ಬಾಲ್ಯದಿಂದಲೂ ಪ್ರಗತಿಪರ ವೈಚಾರಿಕತೆಯ ಸ್ತ್ರೀವಾದಿಯಾಗಿ ಬೆಳೆದ ಅವರು ಸಹಜವಾಗಿ ಆಯ್ದುಕೊಂಡದ್ದು ನವ್ಯದ ಆತ್ಮಶೋಧದ ನೈಜವಾಸ್ತವವಾದವನ್ನು. ಶೈಲಿ ಮತ್ತು ಭಾಷೆಯ ಬಳಕೆಯಲ್ಲಿ ಅವರದು ವಿಭಿನ್ನ ದಾರಿ.
ಕತೆಗಾರ್ತಿ ವೀಣಾ ಶಾಂತೇಶ್ವರ ಅವರ ಕಿರುಕಾದಂಬರಿಯತ್ತ ಒಂದು ನೋಟ ಹರಿಸುವುದಾದರೆ, `ಗಂಡಸರು’ ೧೯೯೪ರಲ್ಲಿ ಬಂದ ಕಿರು ಕಾದಂಬರಿ. ಇದನ್ನು ಸ್ತ್ರೀವಾದಿ ದೃಷ್ಟಿಯ ಕಾದಂಬರಿ ಎನ್ನಬಹುದು ಎಂದು ವಿಮರ್ಶಕರು ಹೇಳುತ್ತಾರೆ. ೯೦ರ ದಶಕದಲ್ಲಿಯ ಭಾರತೀಯ ಸಮಾಜದ ಚಿತ್ರಣ ನಮಗಿಲ್ಲಿ ಸಿಗುತ್ತದೆ. ಮನುಷ್ಯ ಸ್ವಭಾವಗಳ ದೃಷ್ಟಿಯಿಂದ ನೋಡುವುದಾದರೆ ಭಾರತೀಯ ಸಮಾಜ ಹೇಗೆ ಪುರುಷ ಪ್ರಧಾನವಾಗಿದೆ ಎನ್ನುವುದನ್ನು ಸುಶಿಕ್ಷಿತ ವರ್ಗದಲ್ಲಿ ಸಹ ಸಮಾಜ ಹಾಗೂ ಅದರಲ್ಲಿ ಗಂಡಸರ ಮನೋಭಾವವನ್ನು ನಿರ್ಭಿಡೆಯಿಂದ   ಅವರು ಯಾವುದೇ ಪಕ್ಷಪಾತವಿಲ್ಲದೇ, ಒಬ್ಬ ಮನೋವಿಜ್ಞಾನಿಯಾಗಿ ಸೆರೆಹಿಡಿದಿದ್ದಾರೆ. ನಿಜಕ್ಕೂ ಕತೆಗಾರ್ತಿ ಇಲ್ಲಿ ಅನೇಕ ಆಯಾಮಗಳಿಂದ ಸಮಾಜವನ್ನು ಶೋಧಿಸುವುದು ಕಾಣುತ್ತದೆ. ‘ಗಂಡಸರು’ ಕಿರು ಕಾದಂಬರಿಯಲ್ಲಿ ಗಂಡಸರು ನಾಯಕರಲ್ಲ. ಈ ಕಥಾ ಹಂದರದಲ್ಲಿ ಪ್ರಧಾನವಾಗಿ ಬರುವ ಶಾಂತಿ ಕಾಮತ್ ‘ಗಂಡಸರು’ ಕಾದಂಬರಿಯ ನಾಯಕಿ. ಶಾಂತಿ ಕಾಲೇಜು ಕಲಿಯುವ ಹಂತದಲ್ಲಿ ತನ್ನ ಅಪ್ಪನ ಗೆಳೆಯನ ಮಗ ಶಂಕರನ ಪರಿಚಯವಾಗುತ್ತದೆ. ಶಂಕರ ಮೊದಲ ಪ್ರೀತಿಯ ಪ್ರಸ್ತಾಪವನ್ನು ಶಾಂತಿಗೆ ನಿವೇದಿಸುವ ಹಂತದಿಂದ ಕಾದಂಬರಿ ಚಲನೆ ಪಡೆದುಕೊಳ್ಳುತ್ತದೆ. ಪ್ರೀತಿಸಿದ್ದ ಶಂಕರ ಮದುವೆಯಾಗುವ ಮಾತುಕೊಟ್ಟು, ಪತ್ರ ಬರೆದವನು ಶಾಂತಿಯಿಂದ ದೂರ ಸರಿಯುತ್ತಾನೆ. ಶಂಕರನ ತಂದೆಯೇ ಹುಡುಗಿ ಬೋಲ್ಡ್ ಇದ್ದಾಳಂತ, ನಮಗೆ ಹೆಚ್ಚು ಕಲಿತ ಹುಡುಗಿ ಬೇಡ ಎಂದು ಸಂಬಂಧ ನಿರಾಕರಿಸುತ್ತಾರೆ. ಈ ಸುದ್ದಿ ತಿಳಿದ ಶಾಂತಿ ಶಂಕರ ಬರೆದ ಪತ್ರಗಳನ್ನು ಸುಟ್ಟು ದಿಟ್ಟ ನಿಲುವು ತೆಗೆದುಕೊಳ್ಳುತ್ತಾಳೆ. ಡಿಗ್ರಿ ಕಲಿಯುವಾಗ ಪ್ರೊ. ಮಠದ ಆಕೆಯ ಬಾಳಿನಲ್ಲಿ ಪ್ರವೇಶಿಸಲು ಯತ್ನಿಸುತ್ತಾನೆ. ಶಾಂತಿ ಪ್ರೊ. ಮಠದನಿಗೆ ಅರ್ಪಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಅವನಿಗೆ ಶಾಂತಿಯ ಗೆಳತಿ ಜಯಶ್ರೀಯ ಜೊತೆ ಅಫೇರ್ ಇರುವುದು ಗೊತ್ತಾಗುತ್ತದೆ. ಸ್ತ್ರೀ ಸಮಾನತೆ ಹಾಗೂ ಸ್ವಾತಂತ್ರ‍್ಯದ ಬಗ್ಗೆ ಕಾದಂಬರಿ, ಕತೆ ಬರೆಯುತ್ತಿದ್ದ ಪ್ರೊ. ಮಠದ ವಿವಾಹಿತ. ಆದರೂ ಮತ್ತಿಬ್ಬರು ಶಿಷ್ಯೆಯರ ಜೊತೆ ಅಫೇರ್ ಇರುವುದು ತಿಳಿಯುತ್ತಿದ್ದಂತೆ, ಮಠದಗೆ ಬರೆದ ಒಂದು ಸಾಲಿನ ಪತ್ರ ಹರಿದು ಹಾಕಿ, ಸಾತಾರವನ್ನೇ ಬಿಟ್ಟು ಮುಂಬಯಿಗೆ  ಶಿಫ್ಟ ಆಗುತ್ತಾಳೆ. ಇದು ಶಾಂತಿಯ ಬದುಕಿನ ಮಹತ್ವದ ತಿರುವು. ಲೇಖಕಿ ಪುರುಷ ಲೇಖಕರ ಮುಖವಾಡವನ್ನು ಸಹ ಈ ‘ಗಂಡಸರು’ ಕಾದಂಬರಿಯಲ್ಲಿ ಬಯಲು ಮಾಡಿದ್ದಾರೆ. ನಂತರ ಶಾಂತಿ `ಶಾ ಮಾಣಿಕ್ ಚಂದ್ ಅಂಡ್ ಸನ್ಸ’ ಕಂಪನಿಯಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುವಾಗ ಅಲ್ಲಿನ ರಮಾಕಾಂತ ಶಿಂಧೆಯ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಬೇಕು ಅನ್ನುವ ಹಂತದಲ್ಲಿ ಅವನು ರಾತ್ರೋರಾತ್ರಿ ಶಾಂತಿಯನ್ನು ಬಿಟ್ಟು, ಪತ್ರ ಬರೆದಿಟ್ಟು ತೆರಳುವುದು ಸಹ ಮಹತ್ತರ ತಿರುವು. ಶಾಂತಿಯ ಬದುಕಿನಲ್ಲಿ ಬಂದ ಮೂರನೇ ಗಂಡಸು ದಕ್ಕುವುದಿಲ್ಲ. ನಾಲ್ಕನೆಯವನು ಸ್ವತಂತ್ರ ಪಕ್ಷದ ಲೀಡರ್, ಕ್ರಾಂತಿ ಪತ್ರಿಕೆಯ ಸಂಪಾದಕ ಜಾನ್ ಅಶೋಕ್‌ಕುಮಾರ್. ಅಶೋಕ್ ಕುಮಾರ್ ಮತ್ತು ಶಾಂತಿ ಪ್ರೀತಿಸಿ, ದೈಹಿಕ ಸುಖಪಡೆದು, ಮದುವೆಯಾಗಬೇಕು ಅನ್ನುವಷ್ಟರಲ್ಲಿ ಮತಾಂತರ ಆಗಬೇಕೆಂದು ಹಠ ಹಿಡಿವ ಜಾನ್ ಅಶೋಕ್ ಕುಮಾರ್ ಹೇರಿಕೆ ಸ್ವತಃ ಶಾಂತಿಗೆ ಹಿಡಿಸದೇ ಆಕೆಯೆ ಆತನನ್ನು ಬಿಟ್ಟು ಕಲ್ಕತ್ತಾ ನಗರದಲ್ಲಿ ವುಮೆನ್ ಪತ್ರಿಕೆಯಲ್ಲಿ ವರದಿಗಾರ್ತಿಯಾಗಲು ಆಹ್ವಾನ ಸ್ವೀಕರಿಸಿ ಹೊರಡುವುದು. ಇದು ಸಹ ಶಾಂತಿಯ ಬದುಕಿನ ಮಹತ್ವದ ನಿರ್ಧಾರ. ಇಲ್ಲಿ ಗಂಡಸರೇ ತಮ್ಮ ಸಂಪ್ರದಾಯಸ್ಥ ಮನಸ್ಸಿನ ನಿಲುವನ್ನು ಬಿಡದೇ ಹೆಣ್ಣಿಗೆ ನಾನಾ ಬಗೆಯಲ್ಲಿ ವಂಚಿಸುವ ಸೂಕ್ಷ್ಮ ಎಳೆ ‘ಗಂಡಸರು’ ಕಾದಂಬರಿಯಲ್ಲಿ ಸಿಕ್ಕುತ್ತದೆ. ವಿಮಾನದಲ್ಲಿ ಪರಿಚಯವಾಗುವ ಐರಿಶ್ ಪ್ರಜೆ, ಯುವಕ ವಿಮಾನದ ಸೀಟ್‌ನಲ್ಲಿ ಕುಳಿತು ಕಿಸ್ ಮಾಡುತ್ತಾನೆ ಹಾಗೂ ಆತ ತನ್ನ ಜೊತೆ ಕಳೆಯಲು ನೀಡುವ ಆಹ್ವಾನವನ್ನು ಶಾಂತಿ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾಳೆ. ‘ನಾನು ನಿನ್ನ ಪ್ರೀತಿಸುತ್ತೇನೆ’ ಎಂಬ ವಿದೇಶಿಗ ಐರಿಶ್ ಯುವಕನ ಮಾತಿಗೆ ಮಾತ್ರ ಶಾಂತಿಯು ‘ಹಾಗೆಂದರೇನು’ ಎಂದು ಕೇಳುವುದರೊಂದಿಗೆ ಕಥೆಯು ಮುಕ್ತಾಯವಾಗುತ್ತದೆ.
ಗಂಡಸರ ಗುಣ ಸ್ವಭಾವವನ್ನು ೫೪ ಪುಟಗಳ ಈ ಕಿರುಕಾದಂಬರಿ ಧ್ವನಿಸುತ್ತದೆ. ಸ್ತ್ರೀಪರ ಧೋರಣೆಯುಳ್ಳ ಪ್ರೊ, ಮಠದ ಮುಖವಾಡದ ವ್ಯಕ್ತಿಯಾಗಿದ್ದರೆ, ರಮಾಕಾಂತ ಶಿಂಧೆ ಇಷ್ಟವಿಲ್ಲದ ಹುಡುಗಿಯನ್ನು ತಾಯಿ ಮದುವೆ ಮಾಡಿದರೆಂದು ಮದುವೆಯಾದ ಮರುದಿನವೇ ಮುಂಬಯಿಗೆ ಓಡಿ ಬಂದು ಮರಳಿ ಮನೆಗೆ ಹೋಗದವ. ಜೊತೆಗೆ ಕಾಲೇಜಿನಲ್ಲಿ ಪ್ರೀತಿಸಿದವಳು ಕೈಕೊಟ್ಟು ಬೇರೆಯವನ ಜೊತೆ ಮದುವೆಯಾಗಿ ವಿದೇಶಕ್ಕೆ ಹಾರಿದಳೆಂದು ಕೊರಗುತ್ತಲೇ ಇರುವವ. ಬದುಕಿನ ಮಧ್ಯ ಭಾಗದಲ್ಲಿ ಬಂದ ಶಾಂತಿ ಕಾಮತಳ ಬಗ್ಗೆ ಪ್ರೊಟೆಕ್ಟಿವ್ ಧೋರಣೆ ಹೊಂದಿ ಅವಳಿಂದ ಬಂದ ಪ್ರೀತಿಯ ಆಹ್ವಾನವನ್ನು ಸ್ವೀಕರಿಸಿ ಅವಳ ಜೊತೆ ಬೆರೆತವ. ಪ್ರೊ. ಮಠದ ಜೊತೆ ಇದ್ದ ಸಂಬಂಧವನ್ನು ಸ್ವತಃ ಶಾಂತಿಯೇ ಹೇಳಿದಾಗ, ಅದನ್ನು ಸಹಿಸದೇ ರಾತ್ರಿ ಪತ್ರ ಬರೆದಿಟ್ಟು, ಕಂಪನಿಗೆ ೩ ತಿಂಗಳ ಸಿಕ್ ಲೀವ್ ಹಾಕಿ, ಶಾಂತಿಯಿಂದ ದೂರ ನಡೆಯುತ್ತಾನೆ. ಜವಾಬ್ದಾರಿ, ಬಂಧನ ಅವನಿಗೂ ಬೇಡವಾಗಿತ್ತು. ಮುಂದೆ ಲೂಸಿ ಫರ್ನಾಂಡೀಸ್ ಮೂಲಕ ಪರಿಚಯವಾದ ಜಾನ್ ಅಶೋಕ್ ಕುಮಾರ್, ಶಾಂತಿ ಕಾಮತ್ ಜೊತೆ ಖಂಡಾಲದಲ್ಲಿ ಕೆಲ ದಿನ ಕಳೆದು, ಅವಳ ಜೊತೆ ಮದುವೆಯ ನಿರ್ಧಾರಕ್ಕೆ ಬಂದರೂ, ಸ್ವಾತಂತ್ರ‍್ಯ ಕಸಿಯುವ ಸುಳಿವು ನೀಡುತ್ತಾನೆ. ವಿಚಿತ್ರ ಹೇರಿಕೆಗಳ ಮೂಲಕ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರದ ಬೇಡಿಕೆಯಿಟ್ಟು, ಶಾಂತಿಯೇ ತನ್ನಿಂದ ದೂರವಾಗುವಂತೆ ಮಾಡುವ ಆತನ ಸೂಕ್ಷ್ಮ ಮುಖವಾಡ ಈ ಕಥನದಲ್ಲಿದೆ. ಎಂದೂ ಗುಡಿಗೆ ಹೋಗದ, ದೇವರನ್ನು ಅಷ್ಟಾಗಿ ನಂಬದ ಶಾಂತಿ ಕಾಮತ್ ತನಗೆ ಅರಿವಿಲ್ಲದೇ ಹಿಂದೂ ಎಂದು ಯೋಚಿಸುವ ಸನ್ನಿವೇಶ ಸಹ ಧರ್ಮದ ಸುಳಿ ಹೇಗೆ ಹೆಣ್ಣನ್ನು ಆಲೋಚನಾಕ್ರಮದಲ್ಲಿ ಬಂಧಿಸಿದೆ ಎಂಬ ಅರಿವನ್ನು ಕಾದಂಬರಿಕಾರ್ತಿ ವೀಣಾ ಶಾಂತೇಶ್ವರ ನೀಡುತ್ತಾರೆ ಓದುಗರಿಗೆ. ಇನ್ನು ಗಂಡಸರು ಎಷ್ಟೇ ಪ್ರಗತಿಪರ ಮುಖವಾಡ ಹಾಕಿದ್ದರೂ, ಹೆಣ್ಣಿನ ಸ್ವಾತಂತ್ರ‍್ಯ ಹಾಗೂ ಸಮಾನತೆಗಳನ್ನು ಒಪ್ಪಲಾರರು ಎಂಬ ಧ್ವನಿಯೂ `ಗಂಡಸರು’ ಕಿರು ಕಾದಂಬರಿಯಲ್ಲಿದೆ.
ವೀಣಾರ ಮೊದಲ ಕಥಾ ಸಂಕಲನವಾದ “ಮುಳ್ಳುಗಳು”. ಇದರಲ್ಲಿ ಐದು ಕತೆಗಳು ನಾಯಕಿಕೇಂದ್ರಿತವಾಗಿದ್ದು, “ಮುಳ್ಳುಗಳು” ಕಥೆಯಲ್ಲಿ ಶಾಂತಿ ಎಂಬ ಕಾಲೇಜು ಶಿಕ್ಷಕಿ ತರುಣಿ. ಅವಿವಾಹಿತೆ. ಹಿಂದೆಂದೋ ಅವನಿಂದಾದ ವಂಚನೆಯನ್ನು ಮರೆಯಲಾಗದೆ ಈಗಲೂ ಒದ್ದಾಡುತ್ತಿರುವ ಹೆಣ್ಣು. ಇಲ್ಲಿ ಕಥೆಯ ಹೆಚ್ಚಿನ ಭಾಗವನ್ನು ಶಾಂತಿಯ ಆಂತರಿಕ ಸ್ವಗತದ ಮೂಲಕವೇ ಹೇಳಲಾಗಿದೆ. ಪ್ರಾರಂಭದಲ್ಲಿ ಶಾಂತಿಯು ಒಬ್ಬ ಅಸಹಾಯಕ ಹೆಣ್ಣಾಗಿ ಕಾಣುತ್ತಾಳೆ. ಅವಳು ಯಾವುದರಲ್ಲೂ ಆಸಕ್ತಿಯಿರದವಳಾಗಿರುವಂಥವಳು. ಎಲ್ಲರೂ ಅವಳ ಕಣ್ಣಲ್ಲಿ ದರಿದ್ರರೆಂಬ ಬಿರುದು ಹೊತ್ತವರು. ಪ್ಯೂನ, ವಿದ್ಯಾರ್ಥಿಗಳು, ಪಕ್ಕದ ರೂಮಿನ ಪಿಯುಸಿ ಹುಡುಗಿ.. ಹೀಗಿರುವ ಶಾಂತಿಯ ಈ ಮನಸ್ಥಿತಿಗೆ ಕಾರಣ ಅವಳಿಗಿರುವ ಪುರುಷದ್ವೇಷ. ಅವಳಿಗೆ ಎಲ್ಲ ಪುರುಷರೂ ತನ್ನ ಸುಂದರ ದೇಹವನ್ನೇ ಬಯಸುತ್ತಾರೆ ಎಂಬ ಭಾವನೆ. ಅದೇ ಅವಳಿಗೆ ಮುಳ್ಳಿನ ಮೊನೆಯಾಗಿ ಕಾಡುತ್ತದೆ. ಎಲ್ಲರಲ್ಲೂ.. ವಿದ್ಯಾರ್ಥಿಗಳ ಕಣ್ಣಲ್ಲಿ, ಮಾದನ ಕಣ್ಣಲ್ಲಿ, ಅಷ್ಟೇ ಏಕೆ, ಹಾಸ್ಟೆಲ್ಲಿನ ಮುಂದೆ ಸದಾ ಬಾಲ ಅಲ್ಲಾಡಿಸುತ್ತ ಬಿದ್ದಿರುವ ಆ ಗಂಡು ನಾಯಿಯ ಕಣ್ಣಲ್ಲೂ ಅದೇ.. ನಾಯಿಯಾದರೇನು, ಗಂಡಲ್ಲವೇ! ಇಲ್ಲಿ ಆಕೆಯಲ್ಲಿರುವ ಗಂಡಸರ ಬಗೆಗಿನ ತಿರಸ್ಕಾರ ಹಾಗೂ ಗಂಡಸರೊಂದಿಗೆ ಇದ್ದಾಗಲೆಲ್ಲ ಅವಳಿಗಾಗುವ “ಮುಳ್ಳು ಚುಚ್ಚಿದಂತಹ” ಅನುಭವ ಸಂಪೂರ್ಣ ಸತ್ಯವಲ್ಲವೆಂಬ ಅರಿವು ಕಥೆ ಮುಂದುವರಿದಂತೆ ಓದುಗರಿಗೆ ಗೊತ್ತಾಗುತ್ತದೆ. ಕಥೆಯ ಮೇಲ್ನೋಟಕ್ಕೆ ಕಾಣುವ ಅವಳ “ಪುರುಷದ್ವೇಷ”ದ ನಿಲುವು ಅನಂತರ ಪ್ರಾಸಂಗಿಕವಾಗಿ ಅಲ್ಲಲ್ಲಿ ಬರುವ ವಿವರಗಳಿಂದ ಅಲ್ಲಗಳೆಯಲ್ಪಡುತ್ತದೆ. ಅವಳ ಮುಳ್ಳುಗಳು ಅವಳೇ ಸೃಷ್ಟಿಸಿಕೊಂಡಿರುವ ಆತ್ಮರಕ್ಷಕ ತಂತ್ರಗಳು ಎಂಬುದೂ ಓದುಗರಿಗೆ ಅರಿವಾಗುತ್ತದೆ. ಹಾಗಾದರೆ ಈ ಬಗೆಯ ರಕ್ಷಣಾತಂತ್ರಗಳ ಅವಶ್ಯಕತೆಯೇನು ಎಂಬ ಪ್ರಶ್ನೆಗೆ ಉತ್ತರವೆಂದರೆ ಪದೇ ಪದೇ ಅವಳಿಗೆ ನೆನಪಿಗೆ ಬರುವ ಅವನಿಂದಾದಂಥ ವಂಚನೆ! ಹಾಗೂ ಅದನ್ನು ಮರೆಯಬೇಕಾದ ಅನಿವಾರ್ಯತೆ. ಇಲ್ಲಿ ಹೇಳಬೇಕಾದದ್ದು ಯುವಾವಸ್ಥೆಯಲ್ಲಿರುವಂಥ ಮಹಿಳೆಯು ನಮ್ಮ ಈ ಪರಂಪರಾಗತ ಸಮಾಜದಲ್ಲಿ ಅನುಭವಿಸುವ ಅಭದ್ರ ಸ್ಥಿತಿ. ಯೌವನಸಹಜವಾದ ಕಾಮನೆಗಳು ಮತ್ತು ಅವುಗಳ ಸಂತೃಪ್ತಿಯ ಬಗ್ಗೆ ಇರುವ ಭೀತಿ, ಈ ವಿರುದ್ಧ ಸೆಳೆತಗಳ ಒತ್ತಡದಿಂದ ಎಲ್ಲರ ಮೇಲೂ ಹರಿಹಾಯುವ ಅಸಹಾಯಕತೆ- ಇವೆಲ್ಲವನ್ನೂ ಕತೆಗಾತಿ ಅತ್ಯಂತ ಯಶಸ್ವಿಯಾಗಿ ಇಲ್ಲಿ ದಾಖಲಿಸಿದ್ದಾರೆ. ಇನ್ನೊಂದು ಕಥೆ “ಪ್ರಶ್ನೆ”. ಈ ಕಥೆಯ ನಾಯಕಿ ಶಶಿ ತನ್ನ ಜೀವನದಲ್ಲಿ ಬಂದು ಹೋಗುವ ಗಂಡುಗಳಿಗೆ ೧, ೨, ೩, ೪ ಹೀಗೆ ನಾಮಕರಣ ಮಾಡುವುದಲ್ಲದೆ ತನ್ನ ಬಾಳಿನಲ್ಲಿ ಬಂದುಹೋದಂಥ ಗಂಡಸರ ಬಗ್ಗೆ,”ನನ್ನ ಬಗೆಗಿನ ನಿನ್ನ ಹುಚ್ಚು ಸೆಳೆತ ಹೀಗೇ ಇರಲಿ.. ಇಷ್ಟೇ ತೀವ್ರವಾಗಿರಲಿ, ಉರಿಯುತ್ತಿರಲಿ, ಕುದಿಯುತ್ತಿರಲಿ, ಆಗ ಸದ್ದಿಲ್ಲದೆ ನಿನ್ನ ಹುಚ್ಚಿಗೆ, ತೀವ್ರತೆಗೆ, ಬೆಂಕಿಗೆ ನೀರು ಹಾಕಿ ಕಲ್ಲು ಹಾಕಿ, ಮಣ್ಣು ಹಾಕಿ, ಗೋರಿ ಕಟ್ಟಿ ನಾನು ಎಲ್ಲಾದರೂ ದೂರ ಹೋಗಬೇಕು.. ಎನ್ನುವ ಮಾತುಗಳು ವ್ಯವಸ್ಥೆಗೆ ಆಘಾತಕಾರಿಯೇ ಸೈ.
ಹೀಗೆ ಇಲ್ಲಿಯ ವರೆಗೂ ಮಹಿಳೆಯನ್ನು ಆದರ್ಶ ನಾರಿಯಾಗಿಯೂ, ಮುಗ್ಧಳಾಗಿಯೂ, ತ್ಯಾಗಜೀವಿಯಾಗಿಯೂ, ಮರ್ಯಾದೆಯ ಚೌಕಟ್ಟಿನಲ್ಲಿಯೂ ಚಿತ್ರಿಸುತ್ತಿದ್ದಂಥ ಸಂದರ್ಭದಲ್ಲಿ ವೀಣಾರವರ ಆದರ್ಶ ಮಹಿಳಾ ಮಾದರಿಯ ಸ್ಟೀರಿಯೋಟೈಪ್ಡ್ ವ್ಯಕ್ತಿತ್ವವು ಭಗ್ನವಾಗಿತ್ತು. ಹೆಣ್ಣು ಕೂಡ ಗಂಡಿನಂತೆಯೇ ಸಂಬಂಧಗಳ ಬಗೆಗಿನ ಪವಿತ್ರ ಭಾವನೆ, ನಿಷ್ಠೆಗಳನ್ನು ಮೀರಿ ಆಲೋಚಿಸಬಲ್ಲಳು ಎನ್ನುವ ಸ್ತ್ರೀ ಪಾತ್ರವು ಸೃಷ್ಟಿಯಾಗಿತ್ತು. ಹೀಗೆ ‘ಪ್ರಶ್ನೆ’ ಕಥೆಯ ನಾಯಕಿ ಶಶಿಯ ಪಾತ್ರವು ಹೆಣ್ಣಿನ ಇಲ್ಲಿಯತನಕದ ಮುಗ್ಧೆ, ಲೈಂಗಿಕತೆಯ ವಿಷಯದಲ್ಲಿ ಮರ‍್ಯಾದಸ್ಥಳು ಎಂಬ ಒಂದು ಪುರುಷಪ್ರಣೀತ ಇಮೇಜನ್ನು ಚೂರಾಗಿಸುತ್ತದೆ. ಅವಳಲ್ಲೂ ಕೂಡ ವಿಶ್ವಾಸಘಾತುಕತನ, ನಯವಂಚನೆ, ಹಿಪ್ಪೋಕ್ರಸಿಗಳು ಇರಬಹುದು ಎಂದು ಸೂಚಿಸುತ್ತದೆ.
ಇದೇ ಕೃತಿಯಲ್ಲಿಯ ‘ಅತಿಥಿ’ ಕಥೆಯ ಲೀಲಾವತಿ ಅವಿವಾಹಿತಳಾಗಿರುವ ಪ್ರಯೋಗ ಮಾಡುತ್ತಲೇ, ಅವಿವಾಹಿತ ಸ್ತ್ರೀಯು ಸಾಮಾಜಿಕ ಸ್ತ್ರೀಯಾಗಿ ಸೋಲುತ್ತಾಳೆ ಎಂಬ ನಿಲುವಿಗೆ ಬರುತ್ತಾಳೆ. ‘ನೆನಪು’ ಕಥೆಯ ಪಾವನಿಯು ವಿವಾಹ ವ್ಯವಸ್ಥೆಯನ್ನು ಪ್ರವೇಶಿಸುವಾಗ ಗಂಡು ಹೆಣ್ಣಿನ ಹಳೆಯ ನೆನಪಗಳು ಏನಾಗಬೇಕು ಎಂಬ ಪ್ರಶ್ನೆಗೆ ಮಧುರ ನೆನಪಾಗಿ, ಕಾವ್ಯವಾಗಿ ಮನದಾಳದಲ್ಲುಳಿಯಬೇಕು ಎಂಬ ಉತ್ತರವನ್ನು ಕಂಡುಕೊಳ್ಳುತ್ತಾಳೆ. ‘ನೀನೇ ತಂತಿ’ಯ ಸರೂ ಎಲ್ಲ ಬಂಧನಗಳನ್ನೂ ಕಡಿದೊಗೆಯಬೇಕು ಎಂದುಕೊಂಡವಳು ತಾಯ್ತನದ ಕಾರಣದಿಂದಾಗಿ ಹಳೇ ವಾದ್ಯಕ್ಕೆ ಹೊಸ ತಂತಿ ಹಾಕಿ ಹೊಸ ರಾಗ ಶುರು ಮಾಡಬೇಕು ಎನ್ನುವ ನಿರ್ಧಾರ ಕೈಗೊಳ್ಳುತ್ತಾಳೆ. ಹೀಗೆ ಇಲ್ಲಿಯ ಎಲ್ಲ ನಾಯಕಿಯರೂ ಒಂದಲ್ಲ ಒಂದು ರೀತಿಯಲ್ಲಿ ಗಂಡು -ಹೆಣ್ಣಿನ ಸಂಬಂಧದೊಡನೆ ತಮ್ಮ ಅಸ್ತಿತ್ವದ ಪ್ರಶ್ನೆಯನ್ನಿಟ್ಟು ಪರಿಶೀಲಿಸುವವರಾಗಿದ್ದಾರೆ. ಇನ್ನುಳಿದ ಮೂರೂ ಕತೆಗಳ ಆರಂಭದಲ್ಲಿ ವ್ಯಕ್ತಿತ್ವದ ಗುರುತಿಗಾಗಿ ಹಂಬಲಿಸಿದರೂ ನಂತರದಲ್ಲಿ ಅವೂ ವಿವಾಹ, ತಾಯ್ತನದ ಗುರುತುಗಳೊಂದಿಗೇ ರಾಜಿಯಾಗುತ್ತವೆ.
ಈ (೧೯೬೮) ಕೃತಿಯನ್ನು ದೇಸಾಯಿಯವರೇ ಓದುಗರಿಗೆ ಪರಿಚಯಿಸಿದವರು ಎನ್ನುವುದನ್ನು ಇಲ್ಲಿ ನೆನೆಯಬಹುದಾದರೂ, ಸ್ಪಷ್ಟವಾದ ಸ್ತ್ರೀವಾದಿ ವೈಚಾರಿಕತೆ, ಪುರುಷಕೇಂದ್ರಿತ ಸಮಾಜದಲ್ಲಿ ಸ್ತ್ರೀ ಅನುಭವಿಸುವ ನೋವು-ಯಾತನೆಗಳ ಆಳವಾದ ಅರಿವು, ಅಭಿವ್ಯಕ್ತಿಯ ತೀವ್ರತೆ ಹಾಗೂ ದಿಟ್ಟತನ-ಇಂಥ ಗುಣಗಳಿಂದಾಗ ವೀಣಾ ಪುರುಷ ಸಾಹಿತಿಗಳಿಂದ ಭಿನ್ನರಾಗುತ್ತಾರೆ. `ಮುಳ್ಳುಗಳು’ ಅಂತಹ ಕತೆಯನ್ನಾಗಲಿ, `ಗಂಡಸರು’ ಎಂಬಂಥ ಕಾದಂಬರಿಯ ಒಳತೋಟಿಯನ್ನಾಗಲಿ ಒಬ್ಬ ಮಹಿಳೆ ಮಾತ್ರ ಬರೆಯಬಲ್ಲಳು. “ಅನುಭವನಿಷ್ಠ ಸಾಹಿತ್ಯದಲ್ಲಿ ಕತೆಗಾರ ಬೆಳೆದಂತೆ ಅವನ ಅನುಭವದ ಪ್ರಪಂಚವೂ ಬದಲಾಗುತ್ತದೆಯಷ್ಟೇ ಅಲ್ಲದೆ, ಅದನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತದೆ” ಎಂದು ದೇಸಾಯಿಯವರು ತಮ್ಮ ಕತೆಗಳ ಸಂದರ್ಭದಲ್ಲಿ ಹೇಳಿದ ಮಾತು ವೀಣಾರ ಕತೆಗಳ ವಿಷಯದಲ್ಲಿಯೂ ನಿಜವಾಗಿದೆ. ಈ ಕತೆಯಲ್ಲಿ ಕಂಡುಬರುವ ಲೇಖಕಿಯ ನಿಲುವು ಪುರುಷದ್ವೇಷಿಯೂ ಅಲ್ಲ, ಉಗ್ರ ಸ್ತ್ರೀವಾದಿಯೂ ಅಲ್ಲ. ತಾರುಣಾವಸ್ಥೆಯ ಪರಸ್ಪರ ವಿರುದ್ಧ ಸೆಳೆತಗಳನ್ನು, ತುಡಿತಗಳನ್ನು, ಭ್ರಮೆ-ಭೀತಿಗಳನ್ನು ನಿರ್ಲಿಪ್ತವಾಗಿ ದಾಖಲಿಸುವ ಯಶಸ್ವಿ ಕಥೆಯಿದು.
“ವೈಯಕ್ತಿಕ ಸಂಬಂಧಗಳ ಮುಖಾಂತರ ಜೀವನವನ್ನು ಶೋಧಿಸುವುದು, ಅದಕ್ಕೆ ಅರ್ಥ ಕೊಡುವುದು, ಅದಕ್ಕೆ ಅರ್ಥ ತುಂಬುವುದು ನನ್ನ ಧರ್ಮ.” ಈ ಸಂಬಂಧಗಳಲ್ಲಿ ದೇಸಾಯಿಯವರಲ್ಲಿದ್ದಂತೆ ವೀಣಾರಲ್ಲಿಯೂ ಗಂಡು-ಹೆಣ್ಣು ಸಂಬಂಧಗಳಿಗೆ ಆದ್ಯತೆಯಿದೆ. ಆದರೆ ಅವರ ದೃಷ್ಟಿಕೋನವು ಒಂದೆರಡು ಚಿಕ್ಕ ಅಪವಾದಗಳನ್ನು ಬಿಟ್ಟರೆ ಸಂಪೂರ್ಣವಾಗಿ ಹೆಣ್ಣಿನ ದೃಷ್ಟಿಕೋನ. ಗಂಡಿನ ಸ್ವಾರ್ಥ, ಅಧಿಕಾರ ಲಾಲಸೆ, ಕ್ರೌರ್ಯ, ಮೋಸಗಳ ತೀವ್ರ ಅರಿವಿದ್ದೂ ಅವರು ಪುರುಷ ದ್ವೇಷಿಗಳಲ್ಲ. `ಮುಳ್ಳುಗಳು’ ಇಂಥ ಕತೆಗಳಲ್ಲಿ ವ್ಯಕ್ತವಾಗುವ ದ್ವೇಷ, ಪ್ರೀತಿ, ಗೌರವ, ಅರ್ಪಣೆ ಇಂಥ ಮೌಲ್ಯಗಳ ಸಂಪರ್ಕವೇ ಇಲ್ಲದ ಕಾಮುಕತೆಯ ವಿರುದ್ಧದ ದ್ವೇಷವೇ ಹೊರತು ಪುರುಷ ಜಾತಿಯ ದ್ವೇಷವಲ್ಲ.
ವೀಣಾರವರು ಸಾಹಿತ್ಯಕ್ಷೇತ್ರಕ್ಕೆ ಕಾಲಿಟ್ಟ ದಿನಗಳಲ್ಲಿ ಪಶ್ಚಿಮದಲ್ಲಿ ರ‍್ಯಾಡಿಕಲ್ ಫೆಮಿನಿಸಂ ಬಗ್ಗೆ ಚರ್ಚೆಗಳಾಗುತ್ತಿದ್ದವು. ಪುರುಷಪ್ರಧಾನ ಲೈಂಗಿಕತಾವಾದಕ್ಕೆ ಮೂಲಬಿಂದುವಾಗಿರುವ ಜೈವಿಕ ಕುಟುಂಬ ವ್ಯವಸ್ಥೆಯು ಹಾಗೂ ವಿವಾಹ ಸಂಸ್ಥೆಗಳನ್ನು ನಿರಾಕರಿಸಬೇಕೆಂದು ರ‍್ಯಾಡಿಕಲ ಫೆಮಿನಿಸಂ ಮಂಡಿಸಿತು. ಹೀಗೆ ವಿವಾಹ, ತಾಯ್ತನದ ನಿರಾಕರಣೆ, ಗರ್ಭಪಾತದ ಹಕ್ಕಿನ ಪ್ರತಿಪಾದನೆ ಹಾಗೂ ಲೆಸ್ಬಿಯನ್ನಿಂತಹ ವಿಚಾರಗಳು ನಿಸರ್ಗ ವಿರೋಧಿ, ಮತ್ತು ಪುರುಷವಿರೋಧಿ ಚಿಂತನೆ ಎಂಬ ಕಟುಟೀಕೆಗೂ ಗುರಿಯಾಗಿತ್ತು. ಇಂಥ ಕಾಲದಲ್ಲಿ ಸಾಹಿತ್ಯ ನಿರ್ಮಾಣದಲ್ಲಿ ತೊಡಗಿದ್ದ ವೀಣಾರವರ ಮುಳ್ಳುಗಳು, ಅತಿಥಿ, ನೀನೇ ತಂತಿ ಮುಂತಾದ ಕಥೆಗಳು ಸ್ತ್ರೀವಾದಿ ಪಾತ್ರಗಳ ವೈಫಲ್ಯವೆನ್ನುವುದಕ್ಕಿಂತ ರ‍್ಯಾಡಿಕಲ್ ಫೆಮಿನಿಸಂನ ಬಗೆಗಿನ ಭಿನ್ನಮತವೆಂದು ಗುರುತಿಸಬಹುದು.
ಕನ್ನಡದ ನವ್ಯ ಕತೆಗಾರರಿನ್ನೂ ಮಾಡರ್ನಿಸಂನ ಕಕ್ಷೆಯೊಳಗೇ ಕೇಂದ್ರದ ಹುಡುಕುವಿಕೆ ಹಾಗೂ ಪ್ರಯೋಗದಲ್ಲಿರುವಾಗಲೇ ವೀಣಾರವರು ಆಧುನಿಕೋತ್ತರದತ್ತ ತಮ್ಮ ಕಥನಕಲೆಯನ್ನು ಒಯ್ದಿದ್ದರು. “ಕೊನೆಯ ದಾರಿ” ಸಂಕಲನದ “ಮಳೆ ಬಂದಾಗ” ಇದಕ್ಕೊಂದು ಉದಾಹರಣೆ.
ತಮ್ಮ ಇದುವರೆಗಿನ ಕತೆ-ಕಾದಂಬರಿಗಳ ಸಂಗ್ರಹಕ್ಕೆ ವೀಣಾ ಶಾಂತೇಶ್ವರರು `ನಡೆದದ್ದೇ ದಾರಿ” ಎಂದು ಹೆಸರು ಕೊಟ್ಟಿದ್ದಾರೆ. ಸಂವೇದನೆ, ವಸ್ತು, ಶೈಲಿ ಇವೆಲ್ಲವುಗಳಲ್ಲಿಯೂ ಅವರು ಹಿಡಿದ ಹಾದಿ ಅವರ ಹಿಂದಿನ ಮಹಿಳಾ ಸಾಹಿತಿಗಳಿಗಿಂತ ಭಿನ್ನವಾಗಿತ್ತು. ಆದರೆ ಕನ್ನಡ ಸಾಹಿತ್ಯದ ಪರಿಪೂರ್ಣವಾದ ಮಾರ್ಗವನ್ನು ಗಮನಿಸಿದರೆ, ಇದು ಅವರಿಗಿಂತ ಮೊದಲೇ ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ ಹಾಗೂ ಲಂಕೇಶರಂಥವರೂ ತಮಗಾಗಿ ಸೃಷ್ಟಿಸಿಕೊಂಡ ನವ್ಯ ಮಾರ್ಗವೇ ಆಗಿತ್ತು ಎನ್ನುವುದು ಲಕ್ಷಕ್ಕೆ ಬರದಿರಲಾರದು. ಕತೆಗಾರ್ತಿಯಾಗಿ ವೀಣಾ ಬೆಳೆದದ್ದು ಕೂಡ ಶಾಂತಿನಾಥ ದೇಸಾಯಿಯವರ ನೇರ ಪ್ರಭಾವದಲ್ಲಿಯೇ. ದೇಸಾಯಿಯವರ ಕಥನ ಸಾಹಿತ್ಯದ ಲಕ್ಷಣಗಳಾದ ನವ್ಯತೆ, ಲೈಂಗಿಕ ಆಸ್ಥೆಗಳು, ಅನುಭವದ ಆದ್ಯತೆ ಇಂಥ ಗುಣಗಳನ್ನು ವೀಣಾರವರ ಕಥನ ಸಾಹಿತ್ಯದಲ್ಲಿಯೂ ಗುರುತಿಸಬಹುದು. `ಗಂಡ ಸತ್ತ ಮೇಲೆ’, `ದಿಗ್ಭ್ರಮೆ’, `ಕ್ಷಿತಿಜ’ಗಳಂಥ ಕತೆಗಳಲ್ಲಿ ದೇಸಾಯಿಯವರು ಹೆಣ್ಣಿನ ಅಂತರಂಗವನ್ನು ಅನಾವರಣಗೊಳಿಸುವಲ್ಲಿ ಅನುಸರಿಸಿದ ಮನೋವೈಜ್ಞಾನಿಕ ವಿಧಾನಗಳು ಹಾಗೂ ಅವರಿಗೆ ದೊರೆಯುವ ಒಳನೋಟಗಳು ವೀಣಾ ಅವರಿಗೆ ಖಂಡಿತವಾಗಿಯೂ ಪ್ರಸ್ತುತವೆನಿಸಿರಬೇಕು.
`ನೆನಪು… ಬರೀ ನೆನಪು’ ಕತೆಯ ಪಾವನಾ, `ಪ್ರಶ್ನೆ’ಯ ಶಶಿ, `ಮಳೆ ಬಂದಾಗ’ ಕತೆಯ ಸಹನಾ, `ದೆವ್ವ’ದ ನಾಯಕ- ಇವರೆಲ್ಲರೂ ಭೂತದ ಮಾಯೆಯಲ್ಲಿ ತಮ್ಮನ್ನು ಕಳೆದುಕೊಂಡವರೇ. ಆದರೆ ವೀಣಾ ತೀರಾ ನಿರಾಶಾವಾದಿಯಲ್ಲ. `ಕೊನೆಯ ದಾರಿ’ಯ ಲೀಲಾ, `ಹೊರಟು ಹೋದವನು’ ಕತೆಯ ನಾಯಕಿ, `ಕವಲು’ವಿನ ಮಿನಿ, `ಬಿಡುಗಡೆ’ಯ ಸರೂ, ಒಂದಿಲ್ಲೊಂದು ರೀತಿಯ ಮುಕ್ತಿ ಕಂಡುಕೊಳ್ಳುತ್ತಾರೆ. `ಮರೀಚಿಕೆ’ಯ ಮಿನಿಯಂಥವರಿಗೆ ಮಾತ್ರ ಬಿಡುಗಡೆಯ ಕನಸು ಮರೀಚಿಕೆಯಾಗಿ ಉಳಿಯುತ್ತದೆ. ಈ ಬಿಡುಗಡೆಗಳೆಲ್ಲ ವಾಸ್ತವದ ಅರಿವಿನಿಂದ ಬಂದವುಗಳೇ ವಿನಹ ಆದರ್ಶದ ಸಾಧನೆಗಳಲ್ಲ. ಇಂಥ ಕತೆಗಳಲ್ಲಿ ಎದ್ದು ಕಾಣುವುದು ಎಷ್ಟೋ ಜನ ಸ್ತ್ರೀವಾದಿ ವಿಮರ್ಶಕರಿಗೆ ಭರ್ಷಣವೆನಿಸಿದ ವೀಣಾ ಅವರ ಪ್ರಖರ ವಾಸ್ತವವಾದ. ಯಾವ ರೀತಿಯ ಭ್ರಮೆಯೊಂದಿಗೂ ಅವರು ಒಪ್ಪಂದ ಮಾಡಿಕೊಳ್ಳಲಾರರು. ವೀಣಾರ ವಾಸ್ತವ ಪ್ರಜ್ಞೆ ಎಷ್ಟು ಪ್ರಖರವಾಗಿದೆಯೆನ್ನುವುದಕ್ಕೆ `ಅವಳ ಸ್ವಾತಂತ್ರ್ಯ’, `ತಿರುಗಿ ಹೋದಳು’, `ಅನಾಥೆ’, `ಇಲ್ಲಿಂದ ಮುಂದೆಲ್ಲಿ’, `ಸಮಾಧಾನ’, `ಸೋನಿಯಾ’ ಇಂಥ ಕತೆಗಳು ಹಾಗೂ `ಶೋಷಣೆ, ಬಂಡಾಯ ಇತ್ಯಾದಿ….’ ಕಾದಂಬರಿಯು ನಿದರ್ಶನಗಳಾಗಿವೆ. `ದಾಸ್ಯದ ಸಂಕೋಲೆಯನ್ನು ಹರಿದೊಗೆಯಬೇಕು’ ಎಂದು ಸಭೆಯಲ್ಲಿ ಘೋಷಿಸುವ ವಿಮಲಾ ಶಂಕರ ತನ್ನ ಮನೆಯಲ್ಲಿಯೇ ಗುಲಾಮಳು; ಅವನಿಂದ ಶೋಷಣೆಯನ್ನು ಅನುಭವಿಸುತ್ತಲೇ ಅಂತಾರಾಷ್ಟ್ರೀಯ ಮಹಿಳಾ ವರ್ಷದ ದಿನಾಚರಣೆಯಲ್ಲಿ ಸ್ತ್ರೀ ಶೋಷಣೆಯ ವಿರುದ್ಧ ಮಾತನಾಡುತ್ತಾಳೆ. ‘ಕವಲು’ ವಿನ ಮಿನಿ ವಿಮಲಾಳಂತಲ್ಲ. ಆತನ ಮಾತನ್ನು ಆಕೆ ಜ್ಞಾನದ ಆಕರವನ್ನಾಗಿ ಸ್ವೀಕರಿಸಲು ಇನ್ನು ಸಿದ್ಧಳಿಲ್ಲವೆಂಬುದನ್ನು ಫ್ಲ್ಲಾಶ್ ಬ್ಯಾಕ್ ತಂತ್ರವು ನಿರೂಪಿಸುತ್ತದೆ. ತನ್ನ ಗಂಡನ ದ್ರೋಹ, ಶೋಷಣೆಗಳಿಂದ ನೊಂದರೂ ಅನಿವಾರ್ಯವಾಗಿ ಲಕ್ಷ್ಮಿ ತನ್ನ ಮನೆಗೆ ತಿರುಗಿ ಹೋಗುತ್ತಾಳೆ; ಪ್ರತಿಭಟನೆಯ ಮಾರ್ಗವನ್ನೇ ಕಾಣದ ಅನಾಥೆ ಕೋಮಲಾ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಿವರಾಮ ರೆಡ್ಡಿಯ ಲೈಂಗಿಕ ಆಕ್ರಮಣವನ್ನು ನಿರ್ಲಿಪ್ತಳಾಗಿ ಸಹಿಸಿಕೊಳ್ಳುತ್ತಾಳೆ; ನ್ಯಾಯಾಧೀಶಳಾಗಿ ಒಳ್ಳೆಯ ಹೆಸರು ಗಳಿಸಿದ ಯಶಸ್ವಿನಿ ದೇಸಾಯಿ ತನ್ನ ಕುಟುಂಬಕ್ಕೆಯೇ ಹೊರಗಿನವಳಾಗಿ ಸೋಲು ಅನುಭವಿಸುತ್ತಾಳೆ; ವರ್ಮಾಬಾಯಿ ಒಳ್ಳೆಯ ಶಿಕ್ಷಕಿಯಾದರೂ ರಜನಿಗೆ ಅವಳ ಭ್ರಷ್ಟತೆಯೆದುರು ಸೋಲಬೇಕಾಗುತ್ತದೆ. ಶಾಲೆಯಲ್ಲಿ ಲೀಡರ್ ಎಂದು ಮೆರೆದ ರಜಪೂತರ ಹುಡುಗಿ ಸೋನಿಯಾ ತನ್ನ ತಾಯ್ತನದಲ್ಲಿಯೇ ಸಮಾಧಾಪಡಬೇಕಾಗುತ್ತದೆ.
ವೀಣಾ ಅವರ ಸಂದರ್ಭದಲ್ಲಿ ಅಂದು ಪ್ರಮುಖವಾಗಿದ್ದ ನವ್ಯ ಸಾಹಿತ್ಯದ ಈ ಪ್ರೇರಣೆಯಿಂದಾಗಿ ಅವರ ಸಾಹಿತ್ಯ ಸ್ತ್ರೀ ಸಂವೇದನೆಯ ನೆಲೆಯಿಂದ ನವ್ಯ ಸಾಹಿತ್ಯದ ಕೊರತೆಯನ್ನು ತುಂಬುವ ಮಹತ್ವಾಕಾಂಕ್ಷೆಯನ್ನು ಪ್ರಕಟಿಸುತ್ತಲೇ ತನ್ನೊಳಗೆ ಆ ಸಾಹಿತ್ಯದ ಕೊರತೆಯನ್ನು ತುಂಬಿಕೊಳ್ಳುವಂತಾಯಿತು. ನವ್ಯ ಲೇಖಕರು ಹೇಗೆ ಹೆಣ್ಣಿನ ಸಂವೇದನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕೃತಿ ರಚಿಸಿದರು ಎಂದು ಇವರು ಆರೋಪಿಸಿದರೋ ಹಾಗೆ ಇವರೂ ಪುರುಷ ಸಂವೇದನೆಯನ್ನು ಸಂಪೂರ್ಣ ನೆಗೆಟಿವ್ ಆಗಿ ಗ್ರಹಿಸಿದರು. ಪರೋಕ್ಷವಾಗಿ ಹೇಳುವುದಾದರೆ ಈ ನಾಯಕಿಯರ ಪ್ರಕಾರ ಕ್ರೌರ್ಯ, ನಯವಂಚನೆ, ಅಟ್ಟಹಾಸ, ಸ್ವಾರ್ಥವೇ ಗಂಡಸು.
ಹನುಮಾಪುರದಲ್ಲಿ ಹನುಮ ಜಯಂತಿ ಇವತ್ತಿಗೂ ಪ್ರಸ್ತುತ ಎನಿಸುವ ಕತೆ. ಇನ್ನು “ಹೋಟೆಲ್ ಬ್ಲೂ” ೧೯೭೬ ರಲ್ಲಿ ಬಂದ ಸಂಕಲನ. ಎಮರ್ಜನ್ಸಿ ಪ್ರಾರಂಭದ ಕಾಲ(೧೯೭೬-೭೭). ಬದುಕಿನ ಹತ್ತು ಹಲವು ಆಯಾಮಗಳನ್ನು ಏಕಕಾಲಕ್ಕೆ ಈ ಕತೆ ಹೇಳುತ್ತದೆ. ರಾಜಕೀಯ, ಭ್ರಷ್ಟಾಚಾರ, ಜಾತೀಯತೆ, ಸಾಹಿತ್ಯ, ಪ್ರಶಸ್ತಿಯ ರಾಜಕೀಯ, ಜಾತಿ, ಸ್ವಜನ ಪಕ್ಷಪಾತ, ಮದ್ಯ, ಕಳ್ಳಸಾಗಾಟ, ಸೂಳೆಗಾರಿಕೆ ದಂಧೆ, ಗುಂಡು ಪಾರ್ಟಿಗಳು, ಪ್ರತಿಭಟನೆ, ಸ್ತ್ರೀಶೋಷಣೆ- ಇಷ್ಟೆಲ್ಲಾ ಆಯಾಮಗಳನ್ನು ಒಂದೇ ಕತೆಯಲ್ಲಿ ಹೇಳುವ ಕಲಾತ್ಮಕತೆ ವೀಣಾ ಶಾಂತೇಶ್ವರ ಅವರಿಗೆ ಸಾಧ್ಯವಾಗಿದೆ. ಬದುಕಿನ ಬಹುತ್ವವನ್ನು, ಅನೇಕ ಮನಸ್ಥಿತಿಗಳನ್ನು ಕತೆಗಾರ್ತಿ ಪಾತ್ರಗಳ ಡೈಲಾಗ್ಸ ಮೂಲಕ ಹೇಳಿಬಿಡುತ್ತಾರೆ. ಕತೆ ಓದುತ್ತಲೇ ಒಂದು ನಾಟಕೀಯ ದೃಶ್ಯ ನಮ್ಮ ಕಣ್ಮುಂದೆ ಚಲಿಸುತ್ತದೆ.
‘ಅವಳ ಸ್ವಾತಂತ್ರ‍್ಯ’ ಧ್ವನಿಪೂರ್ಣ ಕತೆ. ೧೯೯೪ ರಲ್ಲಿ ಬಂದ ‘ಬಿಡುಗಡೆ’ ಕತೆ ಕನ್ನಡ ಕಥಾ ಸಾಹಿತ್ಯದಲ್ಲಿ ಮೈಲಿಗಲ್ಲು. ಮಹಿಳಾವಾದಿಗಳು, ಸಂಪ್ರದಾಯಸ್ಥ ಪುರುಷರು ಓದಬೇಕು. ಹೆಣ್ಣಿನ ಕನಸು ಮತ್ತು ಪುರುಷ ದೌರ್ಜನ್ಯದ ಈ ಕತೆ ಹೇಳುವ ಶೈಲಿ, ಕಥನದ ಹೊಸ ಮಾದರಿಯಲ್ಲಿದೆ. ಕತೆ ಸಾಗುವ ದಾರಿ ಅಚ್ಚರಿ ಗೊಳಿಸುತ್ತದೆ. ಅಂತ್ಯ ಬಂಡಾಯವೇ ಆಗಿದೆ. ಓದುಗನನ್ನು ಚಕಿತಗೊಳಿಸುತ್ತದೆ. ಒಟ್ಟಿನಲ್ಲಿ ಅವರ ಕತೆಗಳಿಗೆ ಮಾಂತ್ರಿಕ ಶಕ್ತಿ ಇದೆ..
ಬದುಕಿ ಉಳಿಯುವುದಕ್ಕೆ ಸ್ತ್ರೀ ಹೇಗೆ ತನ್ನ ಸ್ವಾತಂತ್ಯ, ಸ್ವಾಭಿಮಾನ, ಆಸೆ-ಆಕಾಂಕ್ಷೆಗಳು, ಮರ್ಯಾದೆ, ಯೋಗ್ಯತೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದರ ದಾರುಣ ಚಿತ್ರಗಳು ಈ ಕತೆಗಳಲ್ಲಿವೆ. ಪ್ರತಿಭಟನೆಯ ಅನಿವಾರ್ಯತೆಯನ್ನು ಒಪ್ಪಿಕೊಳ್ಳುತ್ತಲೇ ಪ್ರಸ್ತುತ ಸಾಮಾಜಿಕ ಸಂದರ್ಭದಲ್ಲಿ ಅದು ಸಫಲವಾಗಲಾರದು ಎನ್ನುವುದು ವೀಣಾರವರ ಗ್ರಹಿಕೆ. ಈ ಗ್ರಹಿಕೆಯ ಶ್ರೇಷ್ಠ ಅಭಿವ್ಯಕ್ತಿಯೆಂದರೆ ಅವರ `ಶೋಷಣೆ, ಬಂಡಾಯ… ಇತ್ಯಾದಿ’ ಕಾದಂಬರಿ. ಅವರ `ತಿರುಗಿ ಹೋದಳು’ ಕತೆಗೂ ಈ ಕಾದಂಬರಿಗೂ ಬಹಳ ಸಮೀಪದ ಹೋಲಿಕೆಗಳಿವೆ. ವೀಣಾರವರ ಕತೆಗಳನ್ನೋದುವಾಗ ಅವುಗಳ ಚಾರಿತ್ರಿಕ ಸಂದರ್ಭವನ್ನು ನೆನಪಿನಲ್ಲಿಡುವುದು ಒಳ್ಳೆಯದು. ಯಾಕೆಂದರೆ, ಬದಲಾದ ಸಾಮಾಜಿಕ ಸಂದರ್ಭದಲ್ಲಿ ಸ್ತ್ರೀಯ ಸ್ಥಾನಮಾನಗಳಲ್ಲಿ, ಕ್ರಿಯಾಶೀಲತೆಯಲ್ಲಿ, ದೃಷ್ಟಿಕೋನಗಳಲ್ಲಿ ಹೇಗೆ ಬದಲಾವಣೆಯಾಗಬಲ್ಲದು ಎನ್ನುವುದನ್ನು, ವೀಣಾರವರ ನಂತರದ ಕತೆಗಾರರಾದ ನೇಮಿಚಂದ್ರ ಮೊದಲಾದವರ ಕತೆಗಳು ನಮಗೆ ತೋರಿಸಿಕೊಟ್ಟಿವೆ. ಹೊಸ ಸಂದರ್ಭಗಳಲ್ಲಿ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆಯಾದರೂ ಸ್ತ್ರೀಯ ವಾಸ್ತವ ಅನುಭವ ಹಾಗೂ ಅವಳ ಆಸೆ. ಆಕಾಂಕ್ಷೆಗಳ ನಡುವಿನ ಅಂತರ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತಿರುವುದು ಸಮಾಜದ ಆರೋಗ್ಯದ ಲಕ್ಷಣವಾಗಿದೆ.
ವೈಯಕ್ತಿಕ ಸಂಬಂಧಗಳಾಚೆಗಿನ ಸಮಸ್ಯೆಗಳ ಬಗ್ಗೆ ವೀಣಾರವರು ಬರೆದ ಕತೆಗಳು ಕಡಿಮೆ. ಆದರೂ ‘ಭ್ರಷ್ಟಾಚಾರ’ವನ್ನು ಹೇಳುವ `ಹರಿದು ಬಾ ತಾಯಿ’, `ಮುಂದಾಳುವಿನ ಜನತಾ ಸೇವೆ’, `ಹೊಟೇಲ್ ಬ್ಲೂ’ದ ‘ಜಾತಿಯ ಪ್ರಶ್ನೆ’, `ಹನುಮಾಪುರದಲ್ಲಿ ಹನುಮ ಜಯಂತಿ’ಯ `ದ. ಬಾ. ಕ್ರಿಷ್ಟಪ್ಪ’ ಹಾಗೂ ‘ಪರಿಸರನಾಶ’ದ ಬಗೆಗಿನ `ಒಂದು ಗಿಡ ಒಂದು ಬಾವಿ’ ಗಳಂಥ ಸಮಸ್ಯೆಗಳನ್ನಾಧರಿಸಿದ ಕತೆಗಳನ್ನು ಅವರು ಬರೆದದ್ದುಂಟು. ಇವುಗಳಲ್ಲಿ `ಒಂದು ಗಿಡ ಒಂದು ಬಾವಿ’ ಕಥನ ಶೈಲಿಯಲ್ಲಿಯ ಆಕರ್ಷಕ ಪಯೋಗದಿಂದಾಗಿ ನಮ್ಮ ಗಮನ ಸೆಳೆಯುತ್ತದೆ. ಮಹಿಳಾ ಸಾಹಿತ್ಯ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದರ ನಿದರ್ಶನಗಳೆಂದು ಈ ಕತೆಗಳಿಗೆ ಮಹತ್ತ್ವವಿದೆ.” ಎಂದು ಧಾರವಾಡದ ಸುಪ್ರಸಿದ್ಧ ವಿಮರ್ಶಕರಾದ ಜಿ.ಎಸ್. ಆಮೂರರವರು ಇಲ್ಲಿ ಹೇಳುತ್ತಾರೆ.
ವೀಣಾರವರು ಬರೆದಿದ್ದು ಕೇವಲ ತಮ್ಮ ಪೀಳಿಗೆಯವರ ತಲ್ಲಣಗಳ ಬಗ್ಗೆ ಮಾತ್ರವಲ್ಲ, ಅವರು ಬರೆದ ಎಲ್ಲ ಕಥೆಗಳ ಕೇಂದ್ರದಲ್ಲಿಯೂ ಹೆಣ್ಣು ಇರುವುದು ನಿಜವಾದರೂ ಅವರು ಕೇವಲ ಹೆಂಗಸರ ಬಗ್ಗೆ ಬರೆಯುತ್ತಿಲ್ಲ. ಅವರು ಬರೆದದ್ದು ಎಲ್ಲ ಮನುಷ್ಯರ ಬಗ್ಗೆ. ಇವರು ಮಾಡಿದ ಮೊದಲ ಸಾಧನೆಯೆಂದರೆ ಹೆಂಗಸರನ್ನು ಗಂಡಸರ ಕಣ್ಣುಗಳ ಮೂಲಕ ಚಿತ್ರಿಸದೆ ಇರುವುದು. ಇಲ್ಲಿಯ ವರೆಗಿನ ಎಲ್ಲ ಲೇಖಕರೂ ಕಂಡದ್ದು ದೇಹರಹಿತ ಹೆಣ್ಣುಗಳ ಹೃದಯಗಳನ್ನು. ದೇಹವೇನಿದ್ದರೂ ಗಂಡಸರು ಕಂಡಿದ್ದು ಮಾತ್ರ. ಆದರೆ ಅವರು ಇರುವಂತೆಯೇ, ಯಾವ ನಿರೀಕ್ಷೆಗಳಿಗೂ ತಲೆಬಗ್ಗದೆ, ಯಾವ ರಿಯಾಯಿತಿಯನ್ನೂ ತೋರಿಸದೆ ಚಿತ್ರಿಸಿದ್ದು ವೀಣಾ ಅವರ ಬಹು ದೊಡ್ಡ ಸಾಧನೆ. ಅವರು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೊದಲ ಬಾರಿಗೆ ದೇಹ, ಭಾವನೆ, ವಿಚಾರಗಳು ಮತ್ತು ತಾತ್ವಿಕತೆ ಎಲ್ಲವೂ ಒಟ್ಟಾಗಿ ಇರುವ, ಏಕಕಾಲದಲ್ಲಿ ಇರುವ ಹೆಣ್ಣನ್ನು ಕಟ್ಟಿಕೊಟ್ಟರು. ವೀಣಾರವರ ಎಲ್ಲ ಕತೆಗಳನ್ನು ಒಟ್ಟಿಗೆ ನೋಡಿದಾಗ ಅರಿವಿಗೆ ಬರುವ ಒಂದು ಅಂಶವೆಂದರೆ ಅವರ ಪ್ರೀತಿಯ ಹಂಬಲ. ಪ್ರೀತಿಯ ಕ್ಷಣಗಳು ಎಷ್ಟೇ ಕ್ಷಣಿಕವೆನಿಸಿದರೂ, ಹಿನ್ನೋಟದಲ್ಲಿ ಭ್ರಾಮಕವೆನಿಸಿದರೂ ಅವರ ಕತೆಗಳ ನಾಯಕಿಯರು ಜೀವಂತಿಕೆಯನ್ನು ಅನುಭವಿಸುವುದು ಈ ಕ್ಷಣಗಳಲ್ಲಿಯೇ. ಇದೇ ಅವರ ಸೃಜನಶೀಲತೆಯ ಉಗಮವೂ ಆಗಿದೆ. ವೀಣಾ ಬದುಕನ್ನು ಪ್ರೀತಿಸುತ್ತಾರೆ. ಆದರೆ ಅವರು ಪ್ರಮುಖ ನವ್ಯರಂತೆ ಅಸ್ತಿತ್ವವಾದಿಗಳಲ್ಲ. ಅವರ ಕತೆಗಳಲ್ಲಿ ನೆನಪುಗಳಿಗೆ ಎಲ್ಲಿಲ್ಲದ ಮಹತ್ವವಿದೆ. ಅವರ ನಾಯಕಿಯರಲ್ಲಿ ಬಹಳಷ್ಟು ಜನ ಭೂತಪೀಡೆಯಿಂದ ನರಳುವವರೇ. ಭೂತ ಎಂದರೆ ಇಲ್ಲಿ ಹಿಂದೆ ನಡೆದಂಥ ಘಟನೆಗಳು! ಸುಖ, ಸಮೃದ್ಧಿಗಳತ್ತ ವರ್ತಮಾನ ಕರೆದರೂ ಅವರ ನೆನಪುಗಳು ಅವರನ್ನು ಭೂತಕ್ಕೆಯೇ ಕಟ್ಟಿ ಹಾಕುತ್ತವೆ. ಕೆಲ ಸುದೈವಿಗಳಿಗೆ ಮಾತ್ರ ಬಿಡುಗಡೆ ದೊರೆಯುತ್ತದೆ. ‘ನಡೆದದ್ದೇ ದಾರಿ’ ಯ ೩೪ ನೇ ಪುಟದಲ್ಲಿ, “ಅಲ್ಲ, ತಾನು ಮನುಷ್ಯಳು, ರಕ್ತ ಮಾಂಸಗಳಿಂದ ತುಂಬಿದ ದೇಹವುಳ್ಳ, ದ್ವೇಷ, ಕ್ರೋಧ, ಅಸೂಯೆ ಎಲ್ಲವನ್ನೊಳಗೊಂಡ ಮನುಷ್ಯಳು”ಎಂದರೆ ಮತ್ತೆ ಅದೇ ಧಾಟಿಯಲ್ಲಿ “ತನ್ನ ಸಾಹಿತ್ಯದಂತೆ ತಾನೂ ಪ್ರಾಮಾಣಿಕನೆಂದು, ಬಿಚ್ಚು ಮನಸ್ಸಿನವನೆಂದು.. ಒಣ ಜಂಭ. ಈ ಜಂಭದಲ್ಲಿ, ಮೌಢ್ಯದಲ್ಲಿ ಆತನಿಗೆ ತನ್ನ ಭಾವನೆಗಳ ಪೊಳ್ಳು, ತನ್ನ ವ್ಯಕ್ತಿತ್ವದ ಶೂನ್ಯ ಗಮನಕ್ಕೇ ಬರುವುದಿಲ್ಲ. ಈತನ ನವ್ಯತೆಗೆ, ಸಾಹಿತ್ಯಕ್ಕೆ ಬೆಂಕಿ ಹಚ್ಚಬೇಕು… ಸುಟ್ಟಿತು ನಿನ್ನ ವಸ್ತುನಿಷ್ಠತೆ. ನನಗನ್ನಿಸುವುದು ಈ ವಸ್ತುನಿಷ್ಠತೆ ನಿನ್ನ ಸಾಹಿತ್ಯದಲ್ಲಿ ಮಾತ್ರ ಕಾಣಸಿಗುವ ಒಂದು ಬರಿಯ ಭ್ರಮೆ. ನಮ್ಮ ಹೃದಯದ ಭಾವನೆಗಳ ತೀವ್ರತೆಯ ಬಿಸಿಗೆ ಈ ಭ್ರಮೆ ಕರಗಿಹೋಗುವುದು…” ಎಂಬ ಅವರ ಮಾತುಗಳಲ್ಲಿ ನಮಗೆ ಪುರುಷನ ಢೋಂಗಿತನದ ಪೊರೆಯಲ್ಲಿ ಅಡಗಿರುವ ರಾಕ್ಷಸೀ ಪ್ರವೃತ್ತಿ ಕಾಣಸಿಗುತ್ತದೆ.
ಒಟ್ಟಿನಲ್ಲಿ ವೀಣಾರವರ ಬಹು ಪಾಲು ಕಥೆಗಳ ಕೇಂದ್ರದಲ್ಲಿ ಇರುವುದು ಆಧುನಿಕತೆ ಮತ್ತು ವಿದ್ಯಾಭ್ಯಾಸಗಳಿಗೆ ಒಡ್ಡಿಕೊಂಡ ಮಹಿಳೆಯರು. ಅವರು ತಮ್ಮ ‘ಕೆಂಡ ಸಂಪಿಗೆ’ಯಲ್ಲಿ ಇತ್ತೀಚೆಗೆ ಬರೆದ ಬ್ಲಾಗಿನಲ್ಲಿ ತಾವು ತನ್ನನ್ನು ಕುರಿತು ಬರೆಯುವಾಗಲೂ ಅನ್ಯರನ್ನು ಕುರಿತಂತೆ ಬರೆಯಬೇಕಾದ ಇಕ್ಕಟ್ಟಿನಲ್ಲಿ ವೀಣಾ ಬರೆಯಬೇಕಿತ್ತೆಂದು ಹೇಳಿಕೊಳ್ಳುತ್ತಾರೆ. ಆಧುನಿಕತೆ ಹಾಗೂ ವಿದ್ಯಾಭ್ಯಾಸಗಳು ಹೆಣ್ಣಿಗೆ ಕೊಟ್ಟಂತೆ ತೋರಿದ ಬಿಡುಗಡೆಯ ಭ್ರಮೆಗಳನ್ನು ಅನಾವರಣ ಮಾಡಿದ್ದು ಅವರ ಬಹು ದೊಡ್ಡ ಸಾಧನೆ ಎಂದೇ ಹೇಳಬಹುದು. ವೀಣಾ ಅವರ ಕಥೆ ಕಾದಂಬರಿಗಳು ದಾಂಪತ್ಯ, ಅದರಾಚೆಗಿನ ಸ್ತ್ರೀಪುರುಷ ಸಂಬಂಧಗಳಿಗೆ ಹಿಡಿದ ನಿಲುವುಗನ್ನಡಿಗಳು. ಅವು ವೀಣಾ ಎಲಬುರ್ಗಿ ಹಾಗೂ ವೀಣಾ ಶಾಂತೇಶ್ವರ ಇಬ್ಬರೂ ಕೂಡಿ ಬರೆದ ಕಥೆಗಳೆಂದು ಕೂಡ ಅವರು ಹೇಳುತ್ತಾರೆ. ವೀಣಾರವರು ಹೇಳುವ ಕಥೆಗಳಲ್ಲಿ ಯಶಸ್ವಿ ದಾಂಪತ್ಯದ ಕಥೆಗಳು ವಿರಳ. ಅವರ ಕಾದಂಬರಿಯ ಒಂದು ಪಾತ್ರವು ತಲುಪುವ ತೀರ್ಮಾನದಂತೆ ಒಂದು ಮದುವೆಯು ಯಶಸ್ವಿಯಾಗಬೇಕಾದರೆ ಗಂಡನು ಷಂಡನಾಗಿರಬೇಕು, ರೋಗಿಯಾಗಿರಬೇಕು, ಅಥವಾ ನೂರಕ್ಕೆ ನೂರರಷ್ಟು ಜಂಟಲ್‌ಮನ್ ಆಗಿರಬೇಕು. ಮೂರನೆಯ ಗುಂಪಿಗೆ ಸೇರಿದವರು ಪರಮ ಅಪರೂಪ. ಹೀಗೆ ದುರಂತ ಆಗದೆ ಇರಬೇಕಾದರೆ ಹೆಣ್ಣು ಗಂಡಿನಿಂದ ನಿರೀಕ್ಷಿಸುವುದೇನು ಎನ್ನುವುದು ಬಹಳ ಮುಖ್ಯವಾದ ಪ್ರಶ್ನೆ. ಇದಕ್ಕೆ ಉತ್ತರವನ್ನು ಹುಡುಕಬೇಕಾದರೆ ಆಧುನಿಕ ಸ್ತ್ರೀವಾದದ ಕೆಲವು ನೆಲೆಗಳನ್ನು ಪ್ರವೇಶಸದೆ ನಿರ್ವಾಹವಿಲ್ಲ ಎನ್ನುವುದು ರಾಘವೇಂದ್ರ ರಾವರವರ ಎನಿಸಿಕೆ. ಅವರ ಕಥೆಗಳ ಮತ್ತೊಂದು ಮುಖ್ಯ ಲಕ್ಷಣವೆಂದರೆ ತೋರಿಕೆ ಮತ್ತು ಇರುವಿಕೆಗಳ ನಡುವಿನ ದ್ವಂದ್ವ. ಗಂಡಿನಲ್ಲಿ ಇದು ಸ್ವಾರ್ಥಮೂಲವಾದರೆ ಹೆಣ್ಣಿನಲ್ಲಿ ಇದು ಅನಿವಾರ್ಯ. ತನಗೆ ಇಷ್ಟಬಂದುದನ್ನು ಹೇಳಬಹುದಾದ, ಹಾಗೆ ಇಷ್ಟ ಬಂದಂತೆ ಇರಬಹುದಾದ ಹೆಣ್ಣು ಜಗತ್ತಿನಲ್ಲಿ ಎಲ್ಲಿಯೂ ಇಲ್ಲವೇನೋ! ಅಂಥ ಗಂಡೂ ಕೂಡ ಬಹುಶಃ ಇರಲಾರನೇನೊ! ಭಾರತೀಯ ಸಮಾಜದ ಚೌಕಟ್ಟಿನಲ್ಲಿ ಹೆಣ್ಣಿನ ಸ್ಥಿತಿ ಆತ್ಯಂತಿಕವಾದದ್ದು, ದಾರುಣವಾದದ್ದು. ಎಲ್ಲ ಆಯ್ಕೆಯ ಸಾಧ್ಯತೆಗಳನ್ನು ಕಳೆದುಕೊಂಡಾಗ ಹುಟ್ಟುವ ತೋರಿಕೆ ಬೇರೆ ಬಗೆಯದು. ಇದನ್ನು ಅವರ ಕೆಲ ಕಥೆಗಳಲ್ಲಿ ನಾವು ಕಾಣುತ್ತೇವೆ.
ಇನ್ನು ಡಾ. ವೀಣಾರವರನ್ನು ಓದುಗರು ಕೆಲವೊಮ್ಮೆ ಇಂಥ ಪ್ರಶ್ನೆಗಳನ್ನೂ ಕೇಳಿರುವುದುಂಟು. “ನಿಮಗೆ ಎಲ್ಲಾ ಗಂಡಸರ ಮೇಲೆ ಇಷ್ಟೇಕೆ ಸಿಟ್ಟು ದ್ವೇಷ?” ಎಂದು ಅದಕ್ಕೆ ವೀಣಾರವರ ಉತ್ತರ.. “ಇಲ್ಲ, ಎಲ್ಲಾ ಗಂಡಸರ ಮೇಲೆ ದ್ವೇಷವಿಲ್ಲ, ಹೆಣ್ಣು ಮಕ್ಕಳ ಶೋಷಣೆ ಮಾಡುವಂಥ ಗಂಡಸರನ್ನು ಮಾತ್ರ ಟೀಕಿಸುತ್ತೇನೆ. ನನ್ನ ತಂದೆ- ತಮ್ಮಂದಿರು- ಗಂಡ- ಸ್ನೇಹಿತರು ಇವರನ್ನೆಲ್ಲಾ ಪ್ರೀತಿಸುತ್ತೇನೆ. ನಾನು ಪುರುಷದ್ವೇಷಿಯಲ್ಲ.” ಎನ್ನುವುದು. ಆದರೂ ಎಷ್ಟು ತಪ್ಪು ತಿಳುವಳಿಕೆಗಳು, ಎಷ್ಟು ಅಪವಾದಗಳು, ಎಷ್ಟು ಟೀಕೆಗಳು..” “ಇನ್ನೂ ಕೆಲವರು ಅವರನ್ನು ಕೇಳಿಯೂ ಕೇಳಿದರು-ಇದೆಲ್ಲಾ ನಿಮ್ಮದೇ ಜೀವನದ ಕತೆಯಂತೆ, ಹೌದೆ?” ಎಂದು. ಆಗ ಅವರು ಹೇಳಿದ ಉತ್ತರವಿದು.. -ಶೇಕ್ಸ್ ಪಿಯರ್ ಬರೆದ ಮೂವತ್ತಾರು ನಾಟಕಗಳಲ್ಲಿ ಎಂತೆಂತಹವೋ ಘಟನೆಗಳು ಎಷ್ಟು ನೈಜವಾಗಿ ಚಿತ್ರಿತವಾಗಿವೆ, ಅಂದಮಾತ್ರಕ್ಕೆ ಅವೆಲ್ಲಾ ಆತನ ಜೀವನದಲ್ಲಿ ನಡೆದಿವೆ ಅನ್ನಲಿಕ್ಕಾಗುತ್ತದೆಯೇ?” ಇವು ಲೇಖಕಿ ವೀಣಾ ಶಾಂತೇಶ್ವರ ಬರೆದ ಆತ್ಮಕಥನದ ಕೆಲವು ತುಣುಕುಗಳು..
‘ಗಂಡಸರು’ ಪುಸ್ತಕರೂಪದಲ್ಲಿ ಪ್ರಕಟವಾದಾಗ ಗುರುತಿನವರು, ಹಿರಿಯರು, ಬಂಧುಬಳಗದವರು ಮಾತಾಡಿಕೊಂಡರು – ಛೆ, ಇದೆಂತಹ ಕಲೆ! ನಾಚಿಕೆಗೇಡು. ಒಬ್ಬ ಹೆಂಗಸು ಡಜನ್‌ಗಟ್ಟಲೆ ಗಂಡಸರೊಂದಿಗೆ ಸಂಬಂಧ ಹೊಂದುವುದೆ? ನೈತಿಕತೆ ಅನ್ನುವುದು ಸತ್ತೇ ಹೋಯಿತೇ ಈ ಕಲಿಯುಗದಲ್ಲಿ? ಇಂಥದನ್ನು ಬರೆದಾಕೆಗಾದರೂ ಒಂದಿಷ್ಟು ನಾಚಿಕೆ ಬೇಡವೆ? ಎಂತಹ ದೊಡ್ಡ ಮನೆತನದ ಮಗಳು. ಇವಳೆಂತಹ ಸಾಹಿತಿಯಪ್ಪಾ. ಬೇರೆ ವಿಷಯವೇ ಸಿಗಲಿಲ್ಲವೇ ಈಕೆಗೆ? ಅಥವಾ ಇದೆಲ್ಲಾ ಆದದ್ದು ಈಕೆಯ ನಿಜಜೀವನದಲ್ಲೇ ಇದ್ದರೂ ಇದ್ದೀತು. ಯಾರಿಗೆ ಗೊತ್ತು? ಇಂಥ ಪುಸ್ತಕ ಓದಿದರೆ ನಮ್ಮ ಹೆಣ್ಣುಮಕ್ಕಳು ಹಾಳಾಗುತ್ತಾರಷ್ಟೇ.” ಎಂದು!
ಆದರೆ ಅವರು ಕೇರ್ ಮಾಡಲಿಲ್ಲ. ಯಾಕೆಂದರೆ ಸಮಕಾಲೀನ ವಿಮರ್ಶಕರಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಕನ್ನಡ ಮಹಿಳಾ ಸಾಹಿತ್ಯದಲ್ಲಿ ಹೊಸ ಮಾರ್ಗ ನಿರ್ಮಿಸಿದ ಕಾದಂಬರಿ-ಎಂಬ ಮೆಚ್ಚುಗೆ ದೊರೆತಿತ್ತು.
ಅವರು ತಮ್ಮ ಬಗ್ಗೆ ಹೇಳುತ್ತಾ, “ಹಾಗೆ ನೋಡಿದರೆ ನಾನು ಯಾವಾಗಲೂ ವಲ್ಯೂಮಿನಸ್ ಲೇಖಕಿಯಲ್ಲ. ಬಹಳ ಸಮಯ ಯೋಚಿಸುವುದರಲ್ಲೇ ಕಳೆಯುತ್ತೇನೆ. “ಇಮೋಶನ್ಸ್ ರಿಕಲೆಕ್ಟೆಡ್ ಇನ್ ಟ್ರಾಂಕ್ವಿಲಿಟಿ” ಅಂತ ವರ್ಡ್ಸ್ವರ್ಥ್ ಹೇಳುವ ಹಾಗೆ ನನ್ನದೂ ಅನುಭವ. ಈಗಲೂ ನನಗೆ ಬಹಳ ಬರೆಯಲಾಗುವುದಿಲ್ಲ. ಮುಂದಿನ ವರ್ಷಗಳಲ್ಲಿ ಕನ್ನಡದಲ್ಲಿ ಧೈರ್ಯಶಾಲಿ ಲೇಖಕಿಯರ ಪಡೆಯೇ ಹೊರಹೊಮ್ಮೀತು. ಹಾಗಂತ ನಾನು ಸಂತೃಪ್ತ ಲೇಖಕಿಯಲ್ಲ. ನಾನಿನ್ನೂ ನಿಜವಾದ ಅರ್ಥದಲ್ಲಿ ಶ್ರೇಷ್ಠವಾದ ಕೃತಿಯನ್ನು ರಚಿಸಬೇಕಾಗಿದೆ – ಅಂತ ನನಗೆ ಯಾವಾಗಲೂ ಅನ್ನಿಸುತ್ತ ಬಂದಿದೆ” ಎಂದು ಎನ್ನುತ್ತಾರೆ.
ವೀಣಾ ಅವರು ನವ್ಯ ಬರಹಗಾರರ ಬಗ್ಗೆ ಹೇಳಿರುವ ಈ ಕೆಳಗಿನ ಮಾತುಗಳನ್ನು ಗಮನಿಸಿದರೆ: “ನವ್ಯರು ಯಾರೂ ಮಹಿಳೆಯ ಅಸ್ತಿತ್ವದ ಬಗ್ಗೆ, ತಮ್ಮಂತೆಯೇ ಆಕೆಗೂ ಇರಬಹುದಾದ ಸಮಸ್ಯೆಗಳು-ತೊಳಲಾಟಗಳು-ದ್ವಂದ್ವಗಳ ಬಗ್ಗೆ, ಆಕೆಗೆ ಸಹಜವಾಗಿ ಇರುವ ಸ್ವಾತಂತ್ರ‍್ಯದ ಹಂಬಲದ ಬಗ್ಗೆ, ಏನೂ ಯೋಚಿಸಿಲ್ಲ. ಹಾಗೂ ಬರೆದಿಲ್ಲ. ಪ್ರಭುತ್ವದ ಹಿಡಿತದಿಂದ ಬಿಡುಗಡೆ ಪಡೆಯಬೇಕೆನ್ನುವ ಆಶಯ ಗಂಡಸಿನಷ್ಟೇ ತೀವ್ರವಾಗಿ ಮಹಿಳೆಗೂ ಇರುತ್ತದೆ. ಹತ್ತಿಕ್ಕುವ ಶಕ್ತಿಗಳ ವಿರುದ್ಧ ಹೋರಾಡಲು ಆಕೆಯ ಜೀವವೂ ತಹತಹಿಸುತ್ತದೆ. ಹೋರಾಟವು ಸಾಧ್ಯವಾಗದಾದಾಗ ಹಾಗೂ ವಿಫಲವಾದಾಗ ಬದುಕಿನ ಅರ್ಥಹೀನತೆಯ ತೀಕ್ಷ್ಣಪ್ರಜ್ಞೆಯಿಂದಾಗಿ ಆಕೆಯೂ ಆಂತರಿಕ ನೋವು ಅನುಭವಿಸುತ್ತಾಳೆ ಎಂಬ ಈ ಯಾವ ವಾಸ್ತವಿಕ ಅಂಶಗಳೂ ಬಹುಪಾಲು ನವ್ಯ ಲೇಖಕರ ಗಮನ ಸೆಳೆದಿಲ್ಲ.”
ಒಟ್ಟಿನಲ್ಲಿ ವೀಣಾರವರು ಹೆಣ್ಣಿನ ಮನದ ತಲ್ಲಣಗಳನ್ನು ಪ್ರಾಮಾಣಿಕವಾಗಿ ಚಿತ್ರಿಸಿರುವ, ಅವಳನ್ನು ಒಂದು ಆದರ್ಶದ ಚೌಕಟ್ಟಿನಿಂದ ಹೊರತಂದು ಒಬ್ಬ ಸಾಮಾನ್ಯ ಮಹಿಳೆಯಾಗಿ ಚಿತ್ರಿಸಿರುವ ಲೇಖಕರಲ್ಲಿ ಮೊದಲಿಗರು ಎಂದೇ ಹೇಳಬಹುದು.
***

Leave a Reply