ಜಯ ಹೇ ಕರ್ನಾಟಕ ಮಾತೆ..

ಜಯ ಹೇ ಕರ್ನಾಟಕ ಮಾತೆ..

ನಮ್ಮ ಭಾರತವು ಅನೇಕ ಭಾಷೆಗಳ ತವರು. ಆದರೂ ಸಂವಿಧಾನದ ೩೪೩ ನೇಯ ಕಲಮಿನ ಪ್ರಕಾರ ದೇಶದ ಅಧಿಕೃತ ಭಾಷೆ ಎಂದರೆ ಸರಕಾರದ ಹಾಗೂ ದಿನನಿತ್ಯದ ವ್ಯವಹಾರಗಳಲ್ಲಿ ಉಪಯೋಗಿಸುವ ಹಾಗೂ ಕಾನೂನಾತ್ಮಕ ವಿಷಯಗಳಲ್ಲಿ ಬಳಸುವ ಭಾಷೆಗಳು ಹಿಂದಿಯ ಜೊತೆಗೆ ೨೨ ಭಾಷೆಗಳು ಈ ವಿಭಾಗದಲ್ಲಿ ಬರುತ್ತವೆ. ಅವುಗಳಲ್ಲಿ ನಮ್ಮ ಕನ್ನಡವೂ ಒಂದು.
ನಮ್ಮ ಕನ್ನಡವು ದ್ರಾವಿಡ ಭಾಷಾ ಬಳಗಕ್ಕೆ ಸೇರಿದುದಾಗಿದೆ. ದ್ರಾವಿಡ ಭಾಷೆಗಳಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂಗಳು ಬರುತ್ತವೆ. ಇವುಗಳಲ್ಲಿ ತಮಿಳು ಮೂಲ ಭಾಷೆ ಎಂದು ಹೇಳುತ್ತಾರೆ. ತಮಿಳಿನಿಂದ ರೂಪಾಂತರ ಹೊಂದಿದ ಈ ಸೋದರ ಭಾಷೆಗಳಲ್ಲಿ ಕನ್ನಡಕ್ಕೆ ಎರಡನೆಯ ಸ್ಥಾನವಿದೆ. ಅಲ್ಲದೆ ಭಾರತದ ಸಾಹಿತ್ಯ ಸಂಪ್ರದಾಯದಲ್ಲಿ ಸಂಸ್ಕೃತದ ನಂತರ ತಮಿಳು. ನಮ್ಮ ಕನ್ನಡದ ಸಾಹಿತ್ಯವು ನಂತರದ ಅತಿ ಹಳೆಯ ಭಾಷೆಯಾಗಿದೆ. ಈ ಭಾಷೆಗಳನ್ನು ನಾವು ಮೊಟ್ಟ ಮೊದಲು ನೋಡಲು ಸಾಧ್ಯವಾಗಿರುವುದೇ ಶಾಸನಗಳ ಮುಖಾಂತರ.
ಶಾಸನ ಎಂದರೆ ಆಜ್ಞಾಪಿಸು ಎಂದರ್ಥ. ಹೀಗಾಗಿ ಶಾಸನ ಎಂದರೆ ರಾಜಾಜ್ಞೆ. ಈ ರಾಜಾಜ್ಞೆಯನ್ನು ಗಟ್ಟಿಯಾದಂಥ, ತಾಳಿಕೆ ಬರುವಂಥ ದಾಖಲೆಗಳು. ಅಲ್ಲದೆ ಇವು ಐತಿಹಾಸಿಕ ಪರಂಪರೆಯ ದಾಖಲೆಗಳೂ ಹೌದು. ಕರ್ನಾಟಕವು ಶಾಸನಗಳ ತವರೂರೆಂದೇ ಹೇಳಬಹುದು. ಇಡಿಯ ಭಾರತದಲ್ಲಿಯೇ ದೊರೆತಿರುವ ಶಾಸನಗಳು ಸುಮಾರು ೨೦,೦೦೦ ಕ್ಕೂ ಹೆಚ್ಚಾದರೆ, ಅದರ ಅರ್ಧದಷ್ಟು ಶಾಸನಗಳು ಕೇವಲ ಕರ್ನಾಟಕದಲ್ಲಿಯೇ ದೊರೆತಿವೆ.
ಇನ್ನು ಬರವಣಿಗೆಯ ವಿಷಯಕ್ಕೆ ಬರುವುದಾದರೆ ಕನ್ನಡದ ಬರವಣಿಗೆಯ ಮೊದಲನೆಯ ಉದಾಹರಣೆಯು ಹಲ್ಮಿಡಿ ಶಾಸನದಲ್ಲಿ ದೊರೆಯುತ್ತದೆ. (೨೦೧೭ರ ವರೆಗೂ ಇದೇ ಮೊದಲ ಶಾಸನವೆಂದು ದಾಖಲೆಯಾಗಿದ್ದರೂ ನಂತರ ಭಾರತೀಯ ಸರ್ವೇಕ್ಷಣಾ ಇಲಾಖೆಯು ತಾಳಗುಂದದ ಶಾಸನವು ಕನ್ನಡದ ಮೊಟ್ಟ ಮೊದಲನೆಯ ಶಾಸನವೆಂದು ಘೋಷಿಸಿದೆ.)
ಹಲ್ಮಿಡಿ ಶಾಸನ : ಇದು ಕನ್ನಡ ಲಿಪಿಯಲ್ಲಿ ಬರೆದಂಥ ಮೊದಲ ಶಾಸನವಾಗಿದ್ದು ೪೫೦ನೆಯ ಇಸವಿಯಲ್ಲಿಯ ಶಾಸನವೆಂದು ಶಾಸನಕಾರರು ಹೇಳುತ್ತಾರೆ. ಹಲ್ಮಿಡಿಯು ಹಾಸನ ಜಿಲ್ಹೆಯ ಬಳಿಯ ಹಲ್ಮಿಡಿ ಎಂಬ ಸ್ಥಳದಲ್ಲಿ ೧೯೩೬ ರಲ್ಲಿ ಡಾ. ಎಮ್ ಎಚ್ ಕೃಷ್ನ ಎಂಬುವವರಿಂದ ಶೋಧಿಸಲ್ಪಟ್ಟಿತು. ಇದರಲ್ಲಿ ಹದಿನಾರು ಸಾಲುಗಳಿದ್ದು ಮರಳ ಶಿಲ್ಪದ ಮೇಲೆ ಕೆತ್ತಲ್ಪಟ್ಟಿದೆ. ಇದು ಹಳಗನ್ನಡ ಹಾಗೂ ಬ್ರಾಹ್ಮೀ ಲಿಪಿಗಳನ್ನು ಹೋಲುವಂತಹ ಕನ್ನಡ ಲಿಪಿಯಲ್ಲಿದೆ. ಕದಂಬ ವಂಶದ ಕಾಕುಸ್ಥವರ್ಮ ಬರೆಸಿದ ದತ್ತಿಶಾಸನ ಇದಾಗಿದೆ. ಶತೃರಾಜರ ಮೇಲೆ ಹೋರಾಡಿ ಗೆದ್ದ ವಿಜಯರಸ ಎಂಬ ಯೋಧನಿಗೆ, ಪಲ್ಮಿಡಿ ಮತ್ತು ಮೂಳಿವಳ್ಳಿಯನ್ನು ದತ್ತಿಯಾಗಿ ಬಿಟ್ಟ ರಾಜಾಜ್ಞೆಯನ್ನು ಈ ಶಾಸನ ನಿರೂಪಿಸುತ್ತದೆ. ಹಲ್ಮಿಡಿ ಶಾಸನ ಸಂಸ್ಕೃತ ಪ್ರಭಾವಕ್ಕೆ ಒಳಗಾಗಿದ್ದರೂ, ಆ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರೌಢ ಕನ್ನಡವನ್ನು ನಿರೂಪಿಸುತ್ತದೆ.
ಇನ್ನು ತಾಳಗುಂದದ ಶಾಸನದ ಬಗ್ಗೆ ಹೇಳುವುದಾದರೆ ತಾಳಗುಂದವು ಶಿವಮೊಗ್ಗಾ ಜಿಲ್ಹೆಯ ಶಿಕಾರಿಪುರ ತಾಲೂಕಿನ ಒಂದು ಹಳ್ಳಿ. ತಾಳಗುಂದವು ಹಿಂದಕ್ಕೆ ಒಂದು ಅಗ್ರಹಾರವಾಗಿದ್ದು ಇಂಥ ಒಂದು ಅಗ್ರಹಾರದಲ್ಲಿಯೇ ಕನ್ನಡದ ಮೊದಲ ರಾಜವಂಶ ಎಂದು ಹೇಳಲಾಗುವ ಕದಂಬ ವಂಶದ ಮೊದಲ ಕುಡಿಯಾದ ಮಯೂರವರ್ಮನು ಬೆಳೆದನೆಂದು ಹೇಳುತ್ತಾರೆ.
ಇಲ್ಲಿ ೨೦೧೩-೧೪ ರಲ್ಲಿ ನಡೆದ ಉತ್ಖನನದಲ್ಲಿ ಈ ಶಾಸನವು ಪತ್ತೆಯಾಗಿದ್ದು, ಈ ಶಾಸನದ ರಚನಾ ಕಾಲವು ಕ್ರಿ ಶ ೩೭೦-೪೫೦ ಆಗಿರಬಹುದೆಂದು ಹೇಳಲಾಗುತ್ತದೆ. ಈ ಶಾಸನವು ಕದಂಬ ದೊರೆ ಶಾಂತಿವರ್ಮನ ಕಾಲಕ್ಕಿಂತಲೂ ಹಳೆಯದೆಂದೂ ಸಾಬಿತಾಗಿದೆ. ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆಯು ಭೂಮಿಯನ್ನು ಇನಾಮಾಗಿ ನೀಡಿದ್ದನೆಂಬುದು ಈ ಶಾಸನದ ವಿಷಯ. ಇದರಲ್ಲಿ ತುಂಡರಿಸಿದಂಥ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆಯಿದೆ. ಹೀಗಾಗಿ ಇದು ಹಲ್ಮಿಡಿಗಿಂತ ಮೊದಲನೆಯ ಶಾಸನವೆಂದೇ ಪರಿಗಣಿಸಲ್ಪಡುತ್ತದೆ.

Leave a Reply