ಕಾಮ

ಕಾಮ
ಕಾಮವು ಎರಡು ಅಲಗಿನ ಚೂಪಾದ ಖಡ್ಗವಿದ್ದಂತೆ. ಅರಿಷಡ್ವರ್ಗದಲ್ಲಿ ಪ್ರಥಮ ಸ್ಥಾನದಲ್ಲಿರುವ ಇದು ನಾಲ್ಕು ಪುರುಷಾರ್ಥಗಳಲ್ಲೂ ಪ್ರಧಾನವಾದುದು. ಒಂದು ರೀತಿಯಲ್ಲಿ ಮನುಷ್ಯನನ್ನು ಅಧಃಪತನಗೊಳಿಸುವುದು ಮತ್ತು ಉದ್ಧಾರಗೊಳಿಸುವುದು ಎರಡೂ ಸಾಧ್ಯವಿರುವುದು ಈ ಕಾಮಕ್ಕೇ! ಕಾಮವು ನಮ್ಮ ಹಿಡಿತದಲ್ಲಿದ್ದರೆ ನಾವು ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ನಾವು ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಈ ಕಾಮಕ್ಕಿದೆ. ಇಹ-ಪರಗಳೆರಡರಲ್ಲೂ ನೆಮ್ಮದಿ, ಶಾಂತಿ ಸಿಗಬೇಕಾದರೆ ಕಾಮವನ್ನು ನಮ್ಮ ಉದ್ದೇಶಕ್ಕೆ ತಕ್ಕಂತೆ ಚಾಕಚಕ್ಯತೆಯಿಂದ ಬಳಸಿದರೆ ಮಾತ್ರ ಸಾಧ್ಯ. ಇನ್ನುಳಿದ ಪುರುಷಾರ್ಥಗಳಾದ ಧರ್ಮ. ಅರ್ಥ ಮತ್ತು ಮೋಕ್ಷಗಳ ಸಾಧನೆಗೆ ಈ ಕಾಮವೇ ಪ್ರೇರಕ ಮತ್ತು ಪೂರಕ. ಕಾಮ ಪುರುಷಾರ್ಥ ಸಾಧನೆಯೆಂದರೆ ಆಸೆ, ಬಯಕೆ, ಇಚ್ಛೆಗಳನ್ನು ಯಾರಿಗೂ ನೋವಾಗದಂತೆ, ಹಿಂಸೆಯಾಗದಂತೆ, ಭಾವನೆಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಿಕೊಳ್ಳುವುದು. ಆದರೆ ಕಾಮನೆಗಳನ್ನು ಹತ್ತಿಕ್ಕುವುದು ಒಳ್ಳೆಯದಲ್ಲ. ಬಲವಂತವಾಗಿ ಹತ್ತಿಕ್ಕಲ್ಪಟ್ಟ ಆ ಶಕ್ತಿ ಅರಿವಿಲ್ಲದಂತೆ ಇದ್ದಕ್ಕಿದ್ದಂತೆ ಪುಟಿದೆದ್ದರೆ ಅನಪೇಕ್ಷಿತ ಪರಿಣಾಗಳುಂಟಾಗುತ್ತವೆ. ಸಮಾಜದಲ್ಲಿ ಗಣ್ಯರೆನಿಸಿಕೊಂಡವರೇ, ಆಧ್ಯಾತ್ಮಿಕ ಸಾಧಕರೆನಿಸಿಕೊಂಡವರೇ ಈ ಸುಳಿಗೆ ಸಿಕ್ಕಿ ಹಾಳಾದವರಿದ್ದಾರೆ. ಕಾಮವನ್ನು ಹತ್ತಿಕ್ಕುವುದಕ್ಕಿಂತ ಗೆಲ್ಲುವುದೇ ಹಿತಕರ.
ಲೌಕಿಕದ ಅರ್ಥದಲ್ಲಿ ವಿಚಾರ ಮಾಡಿದರೆ ಜಗತ್ತಿನಲ್ಲಿ ಜೀವಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾಮವೇ ಮೂಲ. ಗಂಡು ಅಥವಾ ಹೆಣ್ಣು ಸಂತಾನದ ಮೂಲಕ ತನ್ನ ನಿರಂತರತೆಯನ್ನು ಬಯಸುತ್ತಾರೆ. ಈ ಪ್ರಕ್ರಿಯೆಗೆ ಪೂರಕವಾದುದು ಕಾಮ. ಒಬ್ಬ ವ್ಯಕ್ತಿ ಎರಡಾಗುವ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುವುದು ಕಾಮ. ಕಾಮವು ಸೃಷ್ಟಿಯ ಕೇಂದ್ರಬಿಂದು. ಕ್ಷಣಕ್ಷಣವೂ ಕ್ಷಯವಾಗುತ್ತಲೇ ಇರುವ ಸೃಷ್ಟಿಯನ್ನು ಸಮತೋಲನದಲ್ಲಿ ಇಡಲು ಕಾಮದ ಇರುವು ಅತ್ಯಗತ್ಯ. ಇದು ಕೇವಲ ಜೀವಿಗಳ ಸಂಖ್ಯೆಯ ಹೆಚ್ಚಳಕ್ಕೆ ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಮೊದಲಾದ ಸಂಗತಿಗಳಿಗೂ ಅನ್ವಯ. “ಹೀಗಾಗಬೇಕು, ಇಷ್ಟಾಗಬೇಕು” ಅನ್ನುವ ಕಾಮನೆಯೇ ಇಲ್ಲದೆ ಆ ನಿಟ್ಟಿನಲ್ಲಿ ಪ್ರಯತ್ನವಾಗಲೀ ಕಾರ್ಯವಾಗಲೀ ಸಾಧ್ಯವಿಲ್ಲ. ಹೀಗಾಗಿ ಕಾಮ ಒಟ್ಟಾರೆಯಾಗಿ ಸೃಷ್ಟಿಯನ್ನು ಕಾಯುವ ಊರುಗೋಲು. ಜಗತ್ತು ನಡೆದಿರುವುದೇ ಕಾಮದಿಂದ. ಅದಿಲ್ಲದಿದ್ದರೆ ಜಗತ್ತು ನಿಶ್ಚಲವಾಗಿರುತ್ತಿತ್ತು.
ಯಾವುದೇ ಬಯಕೆಗಳು, ಆಕಾಂಕ್ಷೆಗಳಿಲ್ಲದ ಬದುಕು ಬದುಕಾಗಲಾರದು. ಆದರೆ, ಈ ಅಕಾಂಕ್ಷೆಗಳು ಧರ್ಮ ಮಾರ್ಗದಲ್ಲಿರಬೇಕು, ಸಂಪಾದಿಸುವ ಅರ್ಥವನ್ನು ಆತ್ಮಕ್ಕೆ ಸಮ್ಮತವಾದ ರೀತಿಯಲ್ಲಿ, ಇತರರಿಗೆ ನೋವು, ಕಷ್ಟ ನೀಡದಂತೆ ಸರ್ವರ ಹಿತ ಗಮನದಲ್ಲಿರಿಸಿಕೊಂಡು ಕಾಮನೆಗಳ ಈಡೇರಿಕೆಗೆ ಬಳಸಬೇಕು. ಈ ರೀತಿ ಮಾಡಿದಲ್ಲಿ ಚತುರ್ಥ ಪುರುಷಾರ್ಥ ಮೋಕ್ಷಕ್ಕೆ ಹಾದಿ ಸುಗಮವಾಗುತ್ತದೆ. ಗೃಹಸ್ಥಾಶ್ರಮದಲ್ಲಿ ತಿಳಿಸಿದ ಸ್ತ್ರೀ-ಪುರುಷರ ಲೈಂಗಿಕ ಸಂಬಂಧಗಳೂ ಶಾಸ್ತ್ರೀಯವಾದ, ಮರ್ಯಾದೆಗೆ ಅನುಸಾರವಾಗಿದ್ದಲ್ಲಿ ಅದು ಇಹ-ಪರಗಳ ಸಾಧನೆಗೆ ಅಡ್ಡಿಯಾಗುವುದಿಲ್ಲ. ಈ ವೇದಮಂತ್ರದ ಭಾವ ಸುಸ್ಪಷ್ಟವಾಗಿದ್ದು, ಜೀವನವು ಸರಸ ಸುಂದರವಾಗಲು, ಸುಖ, ಶಾಂತಿ, ನೆಮ್ಮದಿಗಳಿಂದ ಕೂಡಿರಬೇಕೆಂದರೆ ಇಹದಲ್ಲಷ್ಟೇ ಅಲ್ಲ, ಪರದಲ್ಲೂ ಕೂಡ ಕಾಮನೆಗಳು ನಿಯಂತ್ರಣದಲ್ಲಿರಬೇಕು. ಧರ್ಮಮಾರ್ಗದಲ್ಲಿ ಇರಬೇಕು, ಅಷ್ಟೇ ಅಲ್ಲ, ಸರ್ವರ ಹಿತದ ಬಗ್ಗೆಯೂ ಗಮನವಿರಬೇಕು. ಕೀಳು ಕಾಮನೆಗಳಿಗೆ ಈ ತೃತೀಯ ಪುರುಷಾರ್ಥದಲ್ಲಿ ಸ್ಥಾನವಿಲ್ಲ.
ಐಹಿಕ ಸುಖ, ಭೋಗಗಳನ್ನು ಇಚ್ಛಿಸುವುದು ಕಾಮ. ಮನುಷ್ಯನಿಗೆ ಇವು ಸಹಜ ಮತ್ತು ಅವಶ್ಯಕ. ಆದ್ದರಿ೦ದ ಇದು ತಮೋಗುಣ ದ್ಯೋತಕ. ಯಾಕೆ೦ದರೆ ಭೋಗದ ವಿಚಾರ ಬಂದಾಗ ಕ್ರಿಯಾಶಕ್ತಿ ಕು೦ಠಿತಗೊಳ್ಳುತ್ತದೆ, ವಿವೇಚನೆ ಮಾಯವಾಗುತ್ತದೆ. ಅರಿಷಡ್ವರ್ಗಗಳು ಮೇಲ್ಮೆಯನ್ನು ಪಡೆಯುತ್ತವೆ. ಆದರೆ ಇದನ್ನು ಧರ್ಮ ಮತ್ತು ವ್ಯಾವಹಾರಿಕ ಸತ್ಯದಂತೆ, ಸಂಯಮದಿ೦ದ ಇಚ್ಛಿಸಿದಾಗ ಅದು ಪುರುಷಾರ್ಥವೆನಿಸಿಕೊಳ್ಳುತ್ತದೆ. ಕುಲವೃದ್ಧಿಗೆ, ಜೀವಿಸಲು, ಸಕಲ ಸೌಕರ್ಯಗಳು ಬೇಕು, ಆದರೆ ಅದನ್ನು ಧರ್ಮದ ನಿಯಮದಂತೆ ವ್ಯಾವಹಾರಿಕ ಸತ್ಯಕ್ಕೊಳಪಟ್ಟು ಆಸೆ ಪಟ್ಟರೆ (ಕಾಮಿಸಿದರೆ) ಅದು ತಪ್ಪಲ್ಲ ಎನ್ನುತ್ತಾರೆ.
ಬದುಕಿನಲ್ಲಿ ಬೇಕಾದ್ದನ್ನೆಲ್ಲ ಅನುಭವಿಸಲು ಎಲ್ಲರಿಗೂ ಅವಕಾಶವಿಲ್ಲ, ಪ್ರಾಜ್ಞರು ಹೇಳುತ್ತಾರೆ-‘ದುಡಿದುದ್ದನ್ನು ಉಣ್ಣುವೆಯೋ ಪಡೆದಿದ್ದನ್ನು ಉಣ್ಣುವೆಯೋ’ ಅಂತ, ಪಡೆದುದ್ದನ್ನು ಅನುಭವಿಸಬೇಕಾದದ್ದು, ಉಪಭೋಗಿಸಬೇಕಾದದ್ದು ನಮ್ಮ ಅನಿವಾರ್ಯತೆ, ಎಲ್ಲ ಕೊಡುವ ದೈವ ಎಲ್ಲೋ ಒಂದನ್ನು ಕೊಟ್ಟಿರುವುದಿಲ್ಲ, ಆ ‘ಕೊಟ್ಟಿರದ ಒಂದೇ’ ನಮಗೆ ಬೇಕಾಗಿದ್ದಿರುತ್ತದೆ, ಏನು ಮಾಡೋಣ? ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ’ ಎಂದು ಕವಿ ಗೋಪಾಲಕೃಷ್ಣ ಅಡಿಗರು ಹೇಳಿಲ್ಲವೆ?
ಜೀವನದಲ್ಲಿ ಆಯ್ದುಕೊಳ್ಳಲು ಅವಕಾಶವಿಲ್ಲ. ಪಾಲಿಗೆ ಬಂದದ್ದನ್ನು ಪಂಚಾಮೃತವಾಗಿ ಸ್ವೀಕರಿಸುವ ಮನೋಭೂಮಿಕೆ ನಮ್ಮದಾಗಿರಬೇಕು, ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವ, ಸವಾಲುಗಳನ್ನು ಎದುರಿಸಿ ಗೆಲ್ಲುವ ಮನೋಧರ್ಮ ಬೆಳೆಯಬೇಕು. ‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯನೇರಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ’ ಎಂದು ಅಲ್ಲಮ ಕೂಡ ಹೇಳಿದ್ದಾರೆ.
“ಮೋಕ್ಷವು ಬೇಕಾದರೆ ಕಾಮಕ್ಕೆ, ಅರ್ಥಕ್ಕೆ, ಧರ್ಮಕ್ಕೆ ದೂರವಾಗಿ ಸಂಸಾರವನ್ನು ತ್ಯಜಿಸಿ ಹಿಮಾಲಯಕ್ಕೆ ಹೋಗಬೇಕು” ಎನ್ನುವರೆಲ್ಲರೂ ಕಾಮದ ಬಗ್ಗೆ ಏನೂ ತಿಳಿಯದವರು ಎಂದೇ ಹೇಳಬಹುದು. ಯಾವ ಸ್ಥಿತಿಯಲ್ಲಿ ಜನ್ಮತಾಳಿದೆವೋ ಆ ಸಹಜಸ್ಥಿತಿಯನ್ನು “ಪ್ರಕೃತಿ” ಎಂದು ಮತ್ತು ಆ ಸ್ಥಿತಿಯನ್ನು ಕಡೆಗಣಿಸುವ ಅಸಹಜಸ್ಥಿತಿಯನ್ನು “ವಿಕೃತಿ” ಎಂದು ಅನ್ನುತ್ತೇವೆ. ಹೀಗೆ ಪ್ರಕೃತಿಯನ್ನು ಯಾರು ಎದುರಿಸುತ್ತಾ ಮತ್ತು ವಿಪರೀತ ವ್ಯಾಖ್ಯಾನಗಳನ್ನು ಮಾಡುತ್ತಾ ವಿಕೃತದಲ್ಲಿ ಇರುತ್ತಾರೋ ಅವರಲ್ಲಿ ಪ್ರಗತಿಯ ಲವಲೇಶವೂ ಇರುವುದೇ ಇಲ್ಲ  ಕಾಮ ಎಂದರೆ ಕೇವಲ ಸ್ತ್ರೀ-ಪುರುಷರ ಲೈಂಗಿಕ ಆಶೆಯಷ್ಟೇ ಅಲ್ಲ, ಇದೂ ಸೇರಿದಂತೆ ಇಚ್ಛೆ, ಬಯಕೆ, ಆಸೆ, ಇತ್ಯಾದಿ ಅರ್ಥಗಳೂ ಇವೆ. ಈ ಇಚ್ಛೆ, ಬಯಕೆ, ಆಸೆಗಳು ಎರಡು ರೀತಿಯಲ್ಲೂ ಇರಬಹುದು. ಉನ್ನತಿ ಬಯಸುವ ಆಸೆಗಳು ಸಮಾಜಕ್ಕೂ, ಸ್ವಂತಕ್ಕೂ ಹಿತಕಾರಿಯಾಗಿರುತ್ತವೆ. ತಾನೂ ಹಾಳಾಗಿ ಪರರರನ್ನೂ ತೊಂದರೆಗೀಡುಮಾಡುವ ಕಾಮನೆಗಳೂ ಇರುತ್ತವೆ. ಆದರೆ ಕಾಮರಾಹಿತ್ಯ ಅಥವ ನಿಷ್ಕಾಮ ಸ್ಥಿತಿ ಎಂಬುದು ಇರಲಾರದು. ಏಕೆಂದರೆ ಉನ್ನತ ಸ್ಥಿತಿಗೆ ಏರಬೇಕು, ನೆಮ್ಮದಿ, ಶಾಂತಿ ಬೇಕು, ಆತ್ಮ/ಪರಮಾತ್ಮನನ್ನು ಅರಿಯಬೇಕು, ಇತ್ಯಾದಿ ಕಾಮನೆಗಳಾದರೂ ಇದ್ದೇ ಇರುತ್ತವೆ. ಮನುಷ್ಯನನ್ನು ನೀಚನನ್ನಾಗಿಸುವ, ಪಾತಾಳಕ್ಕೆ ತಳ್ಳುವ ಕಾಮನೆಗಳು ಮಾನವನ ಶತ್ರುವಾಗುತ್ತದೆ. ಮಾನವಜೀವನದ ಉದ್ದೇಶಸಾಧನೆಗೆ ಪೂರಕವಾಗುವ ಪುರುಷಾರ್ಥವಾದ ಕಾಮವು ಅವನನ್ನು ಶ್ರೇಷ್ಠ ಮಾನವನನ್ನಾಗಿಸುತ್ತದೆ.
ಅಥರ್ವವೇದದಲ್ಲಿ,
ಯಾಸ್ತೇ ಶಿವಾಸ್ತನ್ವಃ ಕಾಮ ಭದ್ರಾ ಯಾಭಿಃ ಸತ್ಯಂ ಭವತಿ ಯದ್ವೃಣೇಷೇ |
ತಾಭಿಷ್ಟ್ಯಮಸ್ಮಾನ್ ಅಭಿಸಂವಿಶಸಾ sನ್ಯತ್ರ ಪಾಪೀರಪ ವೇಶಯಾ ಧಿಯಃ || (ಅಥರ್ವ.೯.೨.೨೫.)
“ಓ ಕಾಮವೇ, ಯಾವ ನಿನ್ನ ವಿಸ್ತಾರಗಳು ಅಥವಾ ರೂಪಗಳು ಮಂಗಳಕರವೂ, ಕಲ್ಯಾಣಕಾರಿಯೂ ಆಗಿವೆಯೋ, ಯಾವುದನ್ನು ನೀನು ಬಯಸುತ್ತೀಯೋ, ಯಾವ ಸತ್ಯದ ದರ್ಶನ ನಿನ್ನ ಕಾರಣದಿಂದ ಲಭಿಸುತ್ತದೆಯೋ, ಆ ರೂಪಗಳೊಂದಿಗೆ ನಮ್ಮಲ್ಲಿ ಪ್ರವೇಶ ಮಾಡು. ಬುದ್ಧಿಯಲ್ಲಿ ಹುಟ್ಟುವ ಪಾಪದ ರೂಪವುಳ್ಳ ನಿನ್ನ ವಿಸ್ತಾರಗಳನ್ನು ಬೇರೆ ಕಡೆಗೆ ಅಟ್ಟಿಬಿಡು” ಎಂದು ಹೇಳುವ ಈ ಮಂತ್ರ ಸಾಧಕರಿಗೆ ಮಾರ್ಗದರ್ಶಿಯಾಗಿದೆ.
ಸುಡು ಕಾಮ ಮೂಲವನು ಸುಡಲಾಗದೊಡೆ ಬೇಗ
ಕೊಡು ಕಾಮಿತವನೆಂದು ಬೇಡು ದೈವವನು
ಕೆಡುವುದೀ ಜೀವ ಕೊರಕೊರಗಿ ಕಾಯುವ ಕರಟಿ
ನಡೆವುದಿಹ ತೋರ್ಕೆಯಿಂ ಮರುಳ ಮುನಿಯ||೩೦೪||
ಬದುಕನ್ನು ಬದುಕುವುದು ಬೇರೆ. ಬಾಳುವುದೇ ಬೇರೆ. ಬದುಕಿನಲ್ಲಿ ಹೇಗೋ ಇರುವುದು ಬದುಕೆನಿಸಿದರೆ. ಮೌಲ್ಯಗಳಿಗಾಗಿ ಬದುಕುವುದು ಬಾಳೆನಿಸುತ್ತದೆ. ಕೆಲವರಿಗೆ ಬಾಳು ಹಣ್ಣಾದರೆ ಮತ್ತೆ ಕೆಲವರ ಬಾಳೇ ಹಣ್ಣಾಗಿ ಹೋಗುತ್ತದೆ ಎಂದು ಡಿವಿಜಿಯವರು ಹೇಳುತ್ತಾರೆ. ವಿಷಯಾಸಕ್ತಿಗಳು ಅನಿವಾರ್ಯ. ಕಾಮವು ಸಕಾರಣವೂ, ಸತ್ಕಾರಣವೂ, ಸನ್ಮಾರ್ಗದಲ್ಲಿಯೂ ಇದ್ದರೆ ಅದು ಬಾಳಿಗೆ ಪ್ರಕೃತಿಯಂತೆ ಪೂರಕ. ಇಲ್ಲವಾದಲ್ಲಿ ಅದು ವಿಕೃತಿಯಂತೆ ಮಾರಕ ಎಂಬುದೇ ಅವರ ಅಭಿಪ್ರಾಯ. ನಾವು ಮುಖ್ಯ ವಾಗಿ ಮೂರು ರೀತಿಯ ಜನರನ್ನು ಕಾಣುತ್ತೇವೆ. ತಾನು ದುಡಿದು ತಾನು ಉಣ್ಣುವುದು ಪ್ರಕೃತಿ. ತಾನು ದುಡಿದು ಅನ್ಯರೊಡನೆ ಹಂಚಿಕೊಂಡು ತಿನ್ನುವುದು ಸಂಸ್ಕೃತಿ. ತಾನು ದುಡಿಯದೆ ಅನ್ಯರನ್ನು ದುಡಿಸಿ ಅವರ ಪ್ರತಿಫಲವನ್ನು ಕಿತ್ತುಕೊಂಡು ತಿನ್ನುವುದು ವಿಕೃತಿ. ಸಾಮಾಜಿಕ ಬದುಕಿನಂತೆ ಧಾರ್ಮಿಕ ಬದುಕಿನಲ್ಲಿ ಕೂಡ ಸಾಧನಾ ಮಾರ್ಗ ಬಹು ಮುಖ್ಯವಾಗಿರುತ್ತದೆ. ಆದರೆ ಇಂದಿನ ವ್ಯಾವಹಾರಿಕ ಬದುಕಿನಲ್ಲಿ ದೇವರ ಮೇಲಿನ ಭಕ್ತಿಯೂ ಕೂಡ ಅಷ್ಟೇ ವ್ಯಾಪಾರೀಕರಣವಾಗುತ್ತಿದೆ. ಪ್ರತಿಯೊಬ್ಬರೂ ತಾವು ಮಾಡುವ ಸೇವೆಗೆ ಪ್ರತಿಫಲವನ್ನು ಬಯಸುತ್ತಾರೆ. ಅದು ಲಾಭದ ಮೂಲಕವಾಗಿಯಾದರೂ ಇರಬಹುದು ಅಥವಾ ಪ್ರಚಾರದ ದೃಷ್ಟಿಯಿಂದಲೂ ಇರಬಹುದು. ಮಾಡುವ ಸೇವೆ ದೇವರಿಗೆ ತಲುಪದಿದ್ದರೂ ಹತ್ತಾರು ಜನರಿಂದ ಪ್ರಶಂಸೆ ದೊರೆತರೆ ಸೇವೆ ಸಾರ್ಥಕವಾಯಿತೆಂದು ಬಯಸುವವರ ಸಂಖ್ಯೆಯೇ ಹೆಚ್ಚಾಗಿದೆ. ಇದೂ ಕೂಡ ಕಾಮವೇ ಅಲ್ಲವೇ?

Leave a Reply