ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು…

ಕಣ್ಣಿಗೆಟುಕದೆ ಸಾಗುತಿಹುದು
ದೈವದ ಸಂಚು…
“ಅವನು ನನಗಿಂತ ಹದಿಮೂರು ವರ್ಷ ಸಣ್ಣವ, ನಾನು ಎತ್ತಿ ಆಡಿಸಿದ ಮಗು. ಅವನೇ ನನ್ನ ಉತ್ತರಕ್ರಿಯೆ ಮಾಡಬೇಕಿತ್ತು.ಆದರೆ ನಾವು ಮಾಡುತ್ತಿದ್ದೇವೆ. ಇದು ಏಕಾಯಿತು? ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ
“ಏನೆಲ್ಲ ಸಾಧನೆ ಮಾಡಿ ಮುಗಿಸಿದ್ದಾನೆ!
ಬಹುಶಃ ಆಯ್ತು, ಮಾಡಬೇಕಾದ್ದೆಲ್ಲ
ಮಾಡಿ ಮುಗಿಸಿದ್ದೀಯಾ, ವಾಪಸ್ ಬಂದು ಬಿಡು” ಅಂದಿರಬೇಕು ದೇವರು…
‘ತಮ್ಮನಾಗಿ’ ಬಂದು ‘ಅಪ್ಪ’ನಾಗಿ ಹೋಗಿಬಿಟ್ಟ. ನಮ್ಮನ್ನು ಎತ್ತಿ ಒಯ್ದು ಅವನನ್ನು ವಾಪಸ್ ಕರೆಸಿಕೊಳ್ಳಲು ಬರುತ್ತಿದ್ದರೆ ಎಂಥ ಚನ್ನಾಗಿತ್ತು! ಒಂದು ಮಾತು, ಅವನು ದೈಹಿಕವಾಗಿ ನಮ್ಮ ಜೊತೆಯಿಲ್ಲ, ಆದರೆ ಮನಸ್ಸಿನಲ್ಲಿ ಇದ್ದಾನೆ. ಹಾಗೇ ಎಂದೆಂದಿಗೂ ಇರಗೊಡುತ್ತೇವೆ. ‘ಅವನಿಲ್ಲ’ ಎಂದು ನಾವು ಅಂದುಕೊಂಡೇಯಿಲ್ಲ, ಅವನ
ಜೊತೆ ನಾವು ಕಳೆದ ದಿನದ ನೆನಪುಗಳಿವೆ, ಮಾತುಗಳಿವೆ, ನಾವಿರುವವರೆಗೂ ಇರುತ್ತವೆ. ಅವುಗಳೊಂದಿಗೇನೇ ಇನ್ನು ನಮ್ಮ ಇರುವಿಕೆ ,ನಾವು ಬೇರೆ, ಅವೆಲ್ಲವೂ ಬೇರೆ ಎಂಬ ಮಾತೇ ಸುಳ್ಳು.ಅವೆಲ್ಲವನ್ನೂ ಹೊತ್ತುಕೊಂಡೇ ಇರಬೇಕು…ನಮ್ಮ ಸರದಿ ಬಂದಾಗ ನಾವು ತೆರಳಬೇಕು.”
ಅಕ್ಟೋಬರ್ ೨೯ ರಿಂದ ರಾಜಕುಮಾರ ಕುಟುಂಬದ ಸಹೋದರರ ಮಾತುಗಳಿವು. ಬೇರೆ ಬೇರೆ ವೇದಿಕೆಗಳಲ್ಲಿ, ಬೇರೆ ಬೇರೆಯವರಿಗೆ ಹೇಳಿದ ಒಟ್ಟು ಮಾತುಗಳ ಸಾರಾಂಶ. ಇಂಥ ಮಾತುಗಳು ಮೊದಲಬಾರಿಯೂ ಅಲ್ಲ,
ಹೊಸತೂ ಅಲ್ಲ. ಹೃದಯಕ್ಕೆ ಹತ್ತಿರವಾದ ಯಾರೊಬ್ಬರು ಅಗಲಿದರೂ ಎಲ್ಲರ
ಅನುಭೂತಿಗೂ ಬರುವ / ಎಲ್ಲರೂ ಹೇಳುವ ಮಾತುಗಳೇ…ಅದರಲ್ಲೂ ‘ಹೋದವರದು’ ಅಕಾಲಿಕ ಮರಣವಾಗಿದ್ದರೆ, ಆಕಸ್ಮಿಕವಾಗಿದ್ದರೆ,
ಅವರು ಹೆಚ್ಚು ‘ ಗುಣಿ’ ಗಳೂ, ಬಹುಜನಪ್ರಿಯರೂ ಆಗಿದ್ದರೆ ಆ ನೋವು ಅವರೊಂದಿಗೆ ‘ಸಾಯು’ವದೇ ಇಲ್ಲ. ಅಂತರ್ಗಾಮಿಯಾಗಿ, ಗುಪ್ತಗಾಮಿನಿಯಾಗಿ ಒಳಗೊಳಗೇ ಹರಿಯುತ್ತಿರುತ್ತದೆ, ಗಾಯದ ಮೇಲೊಂದು ಪೊರೆ ಕಟ್ಟಿಕೊಂಡಿರುತ್ತದೆ.
ಯಾವುದೇ ಅದನ್ನು ಹೋಲುವ ಘಟನೆ ನಡೆದರೆ ಸಾಕು ಪೊರೆ ಹರಿದು ಕಾಣಿಸಿಕೊಳ್ಳುತ್ತದೆ.
ಇಂದಿಗೆ ಹನ್ನೊಂದು ತಿಂಗಳ ಹಿಂದೆ ಡಿಸೆಂಬರ್ ೧೮ ೨೦೨೦ರಂದು ನಮ್ಮನೆಯಲ್ಲೂ ಇಂಥದೇ ಘಟನೆ ನಡೆಯಿತು. ಹದಿನೈದು ನಿಮಿಷದ ಕೆಲಸಕ್ಕೆಂದು ಮನೆಬಾಗಿಲು ಮುಂದೆ ಮಾಡಿಕೊಂಡು ಹೊರಹೋದ ತಮ್ಮ
ಮರಳಿಬಂದು ಅದನ್ನು ತೆರೆಯಲೇ ಇಲ್ಲ.
ಅವನಿಗದು ಎಂದೆಂದಿಗೂ ಮುಚ್ಚಿ ಹೋಗಿತ್ತು. ಆಗ ಎಲ್ಲರಿಗೂ ಅನಸಿದ್ದು, ಈಗಲೂ ಅನಿಸುತ್ತಲೇ ಇರುವದು, ಬಹುಶಃ ಮುಂದೆಯೂ ಬದಲಾಗದ ಅನಿಸಿಕೆಗಳ ಪುನರಾವರ್ತನೆಯಂದರೆ
ಮೇಲೆ ಹೇಳಿದ ಮಾತುಗಳೇ…
ವ್ಯಕ್ತಿ ಬದಲಾಗಬಹುದು…
ಸಾವಿನ ರೀತಿ ಬದಲಾಗಬಹುದು…ವೇಳೆ ಆಚೀಚೆಯಾಗಬಹುದು…ಆದರೆ ಮನದ ಭಾವಗಳು/ ಅನಿಸಿಕೆಗಳು/ ಸಂಬಂಧಗಳೂ ಸತ್ತಮೇಲೂ ಹಾಗೆಯೇ ಉಳಿಯುತ್ತವೆ, ಕೆಲವೊಮ್ಮೆ ಹೆಚ್ಚು ಗಾಢವಾಗುತ್ತಲೇ ಹೋಗುತ್ತವೆ…
ಇತ್ತೀಚೆಗೆ ಟೀವಿ/ UTube/ ವಾರ್ತೆ/ ಮಾತುಕತೆಗಳು ಎಲ್ಲವೂ ಪುನೀತರಾಜಕುಮಾರರ ಸುತ್ತಮುತ್ತಲೇ
ಸುತ್ತುತ್ತಿರುವದನ್ನು ನೋಡಿದಾಗ, ಇಂದಿಗೆ ಹನ್ನೊಂದು ತಿಂಗಳಾದರೂ ನೆನಪಿನಲ್ಲಿ ಸಹ ಕಿಂಚಿತ್ತೂ ಹಿನ್ನೆಲೆಗೆ ಸರಿಯದ
ತಮ್ಮ ಕಾಡಿದ್ದು ಹೀಗೇ…
( ಶೀರ್ಷಿಕೆ ಕೃಪೆ: ಕಗ್ಗ)
Leave a Reply