ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಷು ಕದಾಚನ

ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಷು ಕದಾಚನ..

ನಮ್ಮ ಜೀವನವೇ ಒಂದು ಕುರುಕ್ಷೇತ್ರ. ನಾವೆಲ್ಲರೂ ಅರ್ಜುನನಂತೆ ಬಾಹ್ಯ ಶತ್ರುಗಳೊಂದಿಗೆ ಯುದ್ಧ ಮಾಡದಿದ್ದರೂ ವಿಭಿನ್ನ ಕಾರ್ಯ ಕ್ಷೇತ್ರಗಳಲ್ಲಿ ನಿರತರಾಗಿರುವಾಗ ಅರ್ಜುನನ ಮನಸ್ಸಿನಲ್ಲಿ ಯಾವ ಯಾವ ರೀತಿಯ ಪ್ರಶ್ನೆಗಳೆದ್ದವೋ, ಅವನು ಯಾವ ದುಃಖಕ್ಕೆ ಈಡಾದನೋ, ಯಾವ ರೀತಿಯಲ್ಲಿ ಧರ್ಮ ಸಂಕಟಕ್ಕೊಳಗಾದನೋ ಅದೇ ರೀತಿಯ ಪ್ರಸಂಗಗಳನ್ನು ಅನುಭವಿಸಿದವರೇ. ಆ ಗೋವಿಂದನೇ ನಮ್ಮ ಜೀವನದ ರಥಕ್ಕೂ ಕೂಡ ಸಾರಥಿಯೇ. ಕುರುಕ್ಷೇತ್ರದಲ್ಲಿ ಅಂಥದೊಂದು ಧರ್ಮಕ್ಷೇತ್ರವನ್ನು ನಮಗೆ ತೋರಿಸುವ ಪ್ರಯತ್ನ ನಮ್ಮ ಗೀತಾಚಾರ್ಯನದು. ಐದು ಸಾವಿರ ವರ್ಷಗಳ ನಂತರವೂ ಇಂಥದೊಂದು ಜೀವನಸಿದ್ಧಾಂತದ ಗೀತೆಯು ನಮಗೆ ಒದಗಿದೆಯೆಂದರೆ ನಾವು ಅದೃಷ್ಟವಂತರೇ.
ಈ ಧರ್ಮ, ನ್ಯಾಯ, ಕರ್ಮ, ನೀತಿ, ಮುಂತಾದವುಗಳೆಲ್ಲ ಒಂದಕ್ಕೊಂದು ತಳಕು ಹಾಕಿಕೊಂಡಿರುವ ರೀತಿ ನಿಜಕ್ಕೂ ಆಶ್ಚರ್ಯಕರವಾದದ್ದೇ ಸರಿ.. ಪ್ರತಿಯೊಂದನ್ನೂ ಬೇರೆ ಬೇರೆಯಾಗಿ ಅರಿಯುವುದು ಕಷ್ಟಸಾಧ್ಯವಾದ ಕೆಲಸ. ಆದರೂ ಭಗವದ್ಗೀತೆಯಲ್ಲಿ ಈ ಎಲ್ಲ ಜೀವನನೀತಿಗಳನ್ನು ಬೇರೆ ಬೇರೆ ಅಧ್ಯಾಯಗಳಲ್ಲಿ ವಿವರಿಸಿರುವುದರಿಂದ ನಾವೂ ಭಿನ್ನವಾಗಿಯೇ ಅರಿಯುವ ಪ್ರಯತ್ನ ಮಾಡಬೇಕಾಗಿದೆ.
ಈಗ ಕರ್ಮ ಎಂದರೆ ಏನು? ಇದರ ವ್ಯಾಖ್ಯೆ ಏನು… ? ಈ ಅಂಕಣದಲ್ಲಿ ಈ ಪ್ರಶ್ನೆಗೆ ಉತ್ತರ ಪಡೆಯಬೇಕಾಗಿದೆ. ನಾವು ಯಾವುದೇ ರೀತಿಯ ಶಾಸ್ತ್ರ, ಪುರಾಣ, ವೇದ, ಭಗವದ್ಗೀತೆ ಏನೇ ಓದಲಿ, ಅವುಗಳಲ್ಲಿ ಕರ್ಮ-ಅಕರ್ಮ, ಶುಭಕರ್ಮ-ಅಶುಭ ಕರ್ಮ, ಕರ್ಮಯೋಗ, ಕರ್ಮ ಸನ್ಯಾಸ, ಕರ್ಮ ಬಂಧನ ಇತ್ಯಾದಿಗಳ ಬಗ್ಗೆ ಅನೇಕ ವ್ಯಾಖ್ಯೆಗಳನ್ನು ಮಾಡಿರುವುದನ್ನು ನೋಡುತ್ತೇವೆ. ಆದರೆ ಅದರ ಬಗ್ಗೆ ನಮಗೆ ಏನೂ ಸ್ಪಷ್ಟವಾಗಿ ಅರಿಯದು.
ಮಹಾಭಾರತದ ಅರಣ್ಯ ಪರ್ವದಲ್ಲಿ ‘ಕೃತಂ ಹಿ ಯೋಭಿಜಾನತಿ ಸಹಸ್ರೇ ಸೋಸ್ತಿ ನಾಸ್ತಿ ಚ’ ಎಂದು ಹೇಳಲಾಗುತ್ತದೆ. ಇದಕ್ಕೆ ‘ಕರ್ಮದ ಬಗ್ಗೆ ಚೆನ್ನಾಗಿ ತಿಳಿದವರು ಸಾವಿರಕ್ಕೊಬ್ಬರು’ ಎಂದರ್ಥ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ನಿವೃತ್ತಿರೂಪವಾದ ಜ್ಞಾನನಿಷ್ಠೆಯನ್ನೂ ಪ್ರವೃತ್ತಿರೂಪವಾದ ಕರ್ಮನಿಷ್ಠೆಯನ್ನೂ ತಿಳಿಸಿ, ಜ್ಞಾನದ ಮುಖಾಂತರ ಮೋಕ್ಷವೂ ಲಭಿಸುವುದು ಎಂದು ಉಪದೇಶ ಮಾಡುವನು. ಅನಂತರ ‘ಕರ್ಮದಲ್ಲಿಯೇ ನಿನಗೆ ಅಧಿಕಾರ.. ಅಕರ್ಮದಲ್ಲಿ ಆಸಕ್ತಿಯಾಗದಿರಲಿ’ ಎಂದೂ ಹೇಳಿದನು. ಆದರೆ ಕರ್ಮ-ಜ್ಞಾನಗಳ ಸಂಬಂಧವನ್ನು ಸ್ಪಷ್ಟವಾಗಿ ತಿಳಿಸಲಿಲ್ಲ. ಆದ್ದರಿಂದಲೇ ಅರ್ಜುನನಿಗೆ ಸಂದೇಹವುಂಟಾಗಿ, “ಕರ್ಮಕ್ಕಿಂತ ಜ್ಞಾನವು ಉತ್ತಮವೆಂದು ನಿನ್ನ ಅಭಿಪ್ರಾಯವಾದರೆ ನನ್ನನ್ನು ಘೋರವಾದ ಕೆಲಸದಲ್ಲಿ ಯಾಕೆ ತೊಡಗಿಸುತ್ತೀ? ಮಿಶ್ರವಾದಂತಿರುವ ಮಾತುಗಳಿಂದ ನನ್ನ ಬುದ್ಧಿಯನ್ನು ಯಾಕೆ ಭ್ರಾಂತಿಗೊಳಿಸುವೆ? ಯಾವುದರಿಂದ ಶ್ರೇಯಸ್ಸನ್ನು ಹೊಂದಬಹುದೋ ಅದೊಂದನ್ನು ನಿಶ್ಚಯಿಸಿ ಹೇಳು” ಎಂದು ಪ್ರಶ್ನಿಸುತ್ತಾನೆ. ಇಲ್ಲಿ ಕೇವಲ ಅರ್ಜುನನ ಮನಸ್ಸಿನ ಭ್ರಾಂತಿಯನ್ನಷ್ಟೇ ಅಲ್ಲ, ಜನಸಾಮಾನ್ಯರ ಭ್ರಾಂತಿಯನ್ನೂ ಹೋಗಲಾಡಿಸಬೇಕಾಗಿದೆ.
ಈ ಲೋಕದಲ್ಲಿ ಎರಡು ವಿಧವಾದ ನಿಷ್ಠೆಗಳಿವೆ. ಜ್ಞಾನಯೋಗದ ಮುಖಾಂತರ ಪಡೆಯುವ ಸಾಂಖ್ಯರ ನಿಷ್ಠೆ ಹಾಗೂ ಕರ್ಮಯೋಗದ ಮುಖಾಂತರ ಪಡೆಯುವ ಯೋಗಿಗಳ ನಿಷ್ಠೆ. ಆದರೆ ಕರ್ಮಗಳನ್ನು ಆರಂಭಿಸದೆ ಇರುವುದರಿಂದ ಮನುಷ್ಯನು ನೈಷ್ಕರ್ಮ್ಯವನ್ನು ಹೊಂದುವುದಿಲ್ಲ. ಆದರೆ ಬರಿಯ ಕರ್ಮತ್ಯಾಗದಿಂದಲೇ ಸಿದ್ಧಿಯನ್ನೂ ಹೊಂದನು.
‘ನ ಹಿ ಕಶ್ಚಿತ್ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್’ ಎಂದರೆ ‘ಯಾರೇ ಇರಲಿ, ಹೇಗೇ ಇರಲಿ, ಯಾವುದೇ ಕ್ಷಣದಲ್ಲೂ ಕರ್ಮ ಮಾಡದೆ ಇರಲಂತೂ ಸಾಧ್ಯವೇ ಇಲ್ಲ’. ಎಂದರೆ ಮನುಷ್ಯನಾದವನು ಪ್ರತಿಯೊಂದು ಕ್ಷಣದಲ್ಲೂ ಕರ್ಮ ಮಾಡುತ್ತಲೇ ಇರುತ್ತಾನೆ. ನಾವು ನಾಲ್ಕು ರೀತಿಯಿಂದ ಕರ್ಮ ಮಾಡುತ್ತೇವೆ.
೧. ವಿಚಾರಗಳ ಮಾಧ್ಯಮ
೨. ಶಬ್ದಗಳ ಮಾಧ್ಯಮ
೩. ಕ್ರಿಯೆಯ ಮಾಧ್ಯಮ (ನಮ್ಮ ಸ್ವಯಂ ನಿರ್ಧಾರದಿಂದ)
೪. ಕ್ರಿಯೆಯ ಮಾಧ್ಯಮ (ಕ್ರಿಯೆಯ ಮುಖಾಂತರವೇ ಆದರೂ ಇತರರ ಆಜ್ಞೆಯ ಪ್ರಕಾರ)
ಎಂದರೆ ನಾವು ಮಾಡುವ ಚಿಂತನೆ, ನಾವಾಡುವ ಮಾತುಗಳು, ನಮ್ಮ ಕ್ರಿಯೆಗಳು ಹಾಗೂ ಕ್ರಿಯೆಗೆ ಕಾರಣೀಭೂತರಾಗುವುದು ಎಲ್ಲವೂ ಕರ್ಮವೇ! ನಮ್ಮ ನಿದ್ರೆ, ಆಹಾರ, ಮಾತು ಇತ್ಯಾದಿ ಎಲ್ಲವೂ ಕರ್ಮವೇ!
ಕರ್ಮದ ವ್ಯಾಖ್ಯೆ:
ಕರ್ಮವನ್ನು ವ್ಯಾಖ್ಯಾನಿಸುವುದು ಕಠಿಣ. ಗ್ರಂಥಗಳ ಪ್ರಕಾರ ಆಸಕ್ತಿ, ಕರ್ತವ್ಯ, ಶುಭ ಅಶುಭ, ಯೋಗ, ಭಕ್ತಿ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ವ್ಯಾಖ್ಯಾನಿಸಲಾಗಿದೆ. ಆದರೂ ಗೀತೆಯ ಪ್ರಕಾರ “ಶರೀರವಾಙ್ಮನೋಭಿರ್ಯತ್ಕರ್ಮ” ಎಂದರೆ ಶರೀರ, ವಾಕ್ ಹಾಗೂ ಮನಸ್ಸುಗಳಿಂದ ಮಾಡಿದ ಕ್ರಿಯೆಯೇ ಕರ್ಮ.
ನಾವು ನಮ್ಮ ಕರ್ಮೇಂದ್ರಿಯಗಳನ್ನು ನಿಗ್ರಹಿಸಿದ್ದೇವೆಂದು ಹೇಳುವ ಅನೇಕರನ್ನು ನೋಡಿದ್ದೇವೆ. ಆದರೆ ಮನಸ್ಸಿನಲ್ಲಿ ವಿಷಯವಾಸನೆ ಇರುವಾಗ ಕೇವಲ ಕರ್ಮೇಂದ್ರಿಯಗಳ ನಿಗ್ರಹದಿಂದ ಏನೂ ಪ್ರಯೋಜನವಿಲ್ಲ. ಇವರಿಗಿಂತಲೂ ಇಂಧ್ರಿಯಗಳನ್ನು ಮನಸಾ ನಿಗ್ರಹಿಸಿ ಅನಾಸಕ್ತನಾಗಿ ಕರ್ಮೇಂದ್ರಿಯಗಳ ದ್ವಾರಾ ಕರ್ಮವನ್ನು ಮಾಡುವವನೇ ಯೋಗ್ಯನು. ಅನಾಸಕ್ತನಾಗಿ ಯಾವಾಗಲೂ ಅವಶ್ಯಕವಾದ ಕರ್ಮವನ್ನು ಆಚರಿಸುವವನೇ ಮೋಕ್ಷದ ಮಾರ್ಗವನ್ನು ಹೊಂದುವುದರಿಂದ ಆಸಕ್ತಿಯಿಂದ ಮುಕ್ತನಾಗಿ ಎಂದರೆ ಫಲಾಸಕ್ತಿಯಿಲ್ಲದೆ ಕರ್ಮವನ್ನು ಮಾಡುವುದೇ ಸರಿಯಾದ ಕ್ರಮ ಎಂಬುದು ಗೀತಾಚಾರ್ಯನ ಸೂಕ್ತಿ. ‘ನಾನು ಇದನ್ನು ಮಾಡಬೇಕು… ನಾನು ಕರ್ಮದ ಫಲವನ್ನು ಅನುಭವಿಸಬೇಕು’ ಎಂದು ಬುದ್ಧಿಯನ್ನು ಕದಡುವುದು ಬುದ್ಧಿಯಲ್ಲಿ ಭೇದವನ್ನು ಉಂಟುಮಾಡಿದಂತೆ. ‘ನಾನು ಕರ್ತೃ’ ಎಂಬ ಭಾವವು ಬಂದರೆ ಅದು ಅಹಂಕಾರ. ಇಲ್ಲಿ ತಮೋಗುಣವು ಆಧಿಕ್ಯವನ್ನು ಸಾಧಿಸುತ್ತದೆ. ಆದ್ದರಿಂದಲೇ ಶ್ರೀಕೃಷ್ಣನು ಆಧ್ಯಾತ್ಮ ಚಿತ್ತದ ಮೂಲಕ ಸರ್ವಕರ್ಮಗಳನ್ನು ತನಗೇ ಅರ್ಪಿಸಿ ಆಶೆ, ಮಮತೆ, ದುಃಖಗಳಿಲ್ಲದೆ ಯುದ್ಧವನ್ನು ಮಾಡು ಎಂದು ಉಪದೇಶಿಸುತ್ತಾನೆ. ಅರ್ಜುನನು ‘ಮನುಷ್ಯನು ತಾನು ಇಚ್ಛಿಸದಿದ್ದರೂ ಕೂಡ ಯಾವುದೋ ಒಂದು ರೀತಿಯ ಸೆಳೆತಕ್ಕೆ ಸಿಲುಕಿ ಪಾಪವನ್ನೇಕೆ ಮಾಡುತ್ತಾನೆ’ ಎಂದು ಕೇಳಿದಾಗ ಗೋವಿಂದನು ‘ಕಾಮವು ಸರ್ವವನ್ನೂ ನುಂಗಬಲ್ಲ ಶತ್ರು. ಇಷ್ಟ ಪ್ರಾಪ್ತಿಗೆ ಅಡ್ಡಿಯಾದರೆ ಕಾಮವೇ ಕ್ರೋಧವಾಗಿ ಪರಿವರ್ತಿತವಾಗುತ್ತದೆ. ಹೊಗೆಯಿಂದ ಅಗ್ನಿಯೂ, ಕೊಳೆಯಿಂದ ಕನ್ನಡಿಯೂ, ಜರಾಯುವೆಂಬ ಪೊರೆಯಿಂದ ಗರ್ಭವು ಮುಚ್ಚಲ್ಪಟ್ಟಿರುವಂತೆ ಕಾಮದಿಂದಾಗಿ ಜ್ಞಾನವು ಪರಿವೇಷ್ಠಿತವಾಗಿದೆ. ಈ ಕಾಮವು ಮಾನವನಿಗೆ ಎಂದೂ ತೃಪ್ತಿಪಡಿಸಲು ಸಾಧ್ಯವಾಗದಂಥದು. ‘ಇಂದ್ರಿಯಾಣಿ ಮನೋಬುದ್ಧಿರಸ್ಯಾಧಿಷ್ಠಾನಮುಚ್ಯತೇ’ ಎಂಬಂತೆ ಇಂದ್ರಿಯಗಳು ‘ಮನಸ್ಸು, ಬುದ್ಧಿ ಇವು ಕಾಮಕ್ಕೆ ಆಶ್ರಯಗಳೆಂದು’ ಹೇಳುತ್ತವೆ. ಕಾಮವು ಇವುಗಳ ಮೂಲಕ ಜ್ಞಾನವನ್ನು ಮುಚ್ಚಿ ಜೀವಾತ್ಮವನ್ನು ಮೋಹದಲ್ಲಿ ಮುಳುಗುವಂತೆ ಮಾಡುತ್ತದೆ. ಆದ್ದರಿಂದ ಎಲೈ ಅರ್ಜುನನೇ, ನೀನು ಮೊದಲು ಇಂದ್ರಿಯಗಳನ್ನು ಗೆದ್ದು ಹ್ಞಾನ-ವಿಜ್ಞಾನಗಳನ್ನು ನಾಶಮಾಡುವ ಈ ಪಾಪಿಯನ್ನು ನಾಶ ಮಾಡುವಂಥವನಾಗು. (ಇಲ್ಲಿ ಜ್ಞಾನ-ಶಾಸ್ತçಗಳ ಹಾಗೂ ಗುರುಗಳ ಮುಖಾಂತರ ಪಡೆಯುವ ಆತ್ಮಜ್ಞಾನ ಹಾಗೂ ವಿಜ್ಞಾನ-ಅನುಭವ ಜನ್ಯ) ಇಂದ್ರಿಯಗಳೇ ಹೆಚ್ಚು ಶಕ್ತಿಶಾಲಿ ಎಂದು ಹೇಳುತ್ತಾರೆ. ಆದರೆ ಇಂದ್ರಿಯಗಳಿಗಿಂತಲೂ ಮನಸ್ಸು ಹೆಚ್ಚು ಶಕ್ತಿಶಾಲಿ. ಮನಸ್ಸಿಗಿಂತಲೂ ಬುದ್ಧಿಯೇ ಹೆಚ್ಚು ಶಕ್ತಿಶಾಲಿ.. ಆದರೆ ಅತ್ಮವೇ ಇವೆಲ್ಲವುಗಳಿಗಿಂತಲೂ ವೆಚ್ಚು ಶಕ್ತಿಶಾಲಿ. ಆದ್ದರಿಂದಲೇ ಬುದ್ಧಿಗಿಂತಲೂ ಹೆಚ್ಚು ಶಕ್ತಿಶಾಲಿಯಾದುದನ್ನು ಅರಿತು ಸುಸಂಸ್ಕೃತವಾದ ಮನಸ್ಸಿನಿಂದ ಮನಸ್ಸಿನ ಈ ಅನುಮಾನವನ್ನು ಶಮನಗೊಳಿಸಿ ಕಾಮರೂಪವೂ, ದುರ್ಜಯವೂ ಆದ ಶತ್ರುವನ್ನು ನಾಶ ಮಾಡು’ ಎಂದು ಹೇಳುತ್ತಾನೆ.
(ಭಗವದ್ಗೀತೆಯ ಕರ್ಮಯೋಗದ ಆಧಾರಿತ)
ನಮ್ಮಂಥ ಜನಸಾಮಾನ್ಯರ ಮಾತಿನಲ್ಲಿ ಹೇಳುವುದಾದರೆ ನಾವು ನಮ್ಮ ಜೀವನದಲ್ಲಿ ಮಾಡುತ್ತಲಿರುವುದೆಲ್ಲವೂ ಕರ್ಮವೇ! ಈ ಶಬ್ದದ ಪ್ರಯೋಗವು ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ರೀತಿಯಲ್ಲಿ ಆಗುತ್ತದೆ. ನಮ್ಮ ಜೀವನದಲ್ಲಿ ನಮ್ಮ ಬಯಕೆಗಳು, ಇಚ್ಛೆಗಳು, ನಮ್ಮ ಕ್ರಿಯೆಗಳು, ನಮ್ಮ ಆಚರಣೆಗಳನ್ನು ಕರ್ಮವೇ ಆಳುತ್ತದೆ. ಇದು ಭೂತಕಾಲದ ಒಂದು ಶೋಧನೆ ಹಾಗೂ ಭವಿಷ್ಯದ ಒಂದು ಕಾರಣವೂ ಆಗಿದೆ. ಪ್ರತಿನಿತ್ಯದ ಆಗುಹೋಗುಗಳೂ ಕರ್ಮವೇ.
ಆದರೆ ಇನ್ನೂ ಆಳಕ್ಕೆ ಇಳಿದಾಗಲೇ ಈ ಕರ್ಮದ ಬಿಳಲುಗಳು ಪಸರಿಸುತ್ತ ಹೋಗುವುದು ಗೋಚರವಾಗುತ್ತದೆ. ನಾವು ತಪ್ಪೇ ಮಾಡದೆ ಹೋದರೂ (!) ನಮಗೆ ಕಷ್ಟಗಳು ಎದುರಾದರೆ ನಾವು ಅದು ನಮ್ಮ ಪೂರ್ವ ಜನ್ಮದ ಕರ್ಮ ಎಂದು ಹೇಳುತ್ತೇವೆ. ಹೀಗೆ ಕರ್ಮಕ್ಕೆ ಜನ್ಮ ಜನ್ಮಾಂತರದ ಸಂಬಂಧವನ್ನು ಜೋಡಿಸುತ್ತೇವೆ. ಅಷ್ಟೇ ಅಲ್ಲ, ನಾವು ಮಾಡಿದ ಕುಕರ್ಮದ ಫಲವನ್ನು ನಾವು ಅನುಭವಿಸಲೇಬೇಕೆಂದೂ ನಾವು ಆ ಕುಕರ್ಮವನ್ನು ಎಷ್ಟೇ ಒಳ್ಳೆಯ ಕರ್ಮಗಳಿಂದಲೂ ತೊಳೆಯಲು ಎಂದರೆ ಅಳಿಸಲು ಸಾಧ್ಯವಿಲ್ಲ ಎಂದೂ ಹೇಳಲಾಗುತ್ತದೆ. ಎಲ್ಲಾ ಕರ್ಮಗಳ ಸಮಾಪ್ತಿಯಲ್ಲಿಯೇ ಮೋಕ್ಷ ದೊರೆಯುತ್ತದೆ.
ಕರ್ಮದ ಫಲವೆಂದರೆ ಯಾವುದೇ ರೀತಿಯ ಶಿಕ್ಷೆ ಅಥವಾ ಬಹುಮಾನ ಅಲ್ಲ. ಸಾಮಾನ್ಯವಾಗಿ ಅದು ನಮ್ಮೊಳಗಿನವೇ ಅಭಿಪ್ರಾಯದ ಫಲ.
ನಾವು ಹಿಂದಿನ ಜನ್ಮದಲ್ಲಿ ಬಿತ್ತ ಕರ್ಮಬೀಜದ ಫಲವನ್ನೇ ಈ ಜನ್ಮದಲ್ಲಿ ಭೋಗಿಸಬೇಕಾಗುತ್ತದೆ. ಹಾಗಾದರೆ ಈ ಫಲವನ್ನು ನಮಗೆ ಕೊಡುವವರಾರು? ದೇವರೇ? ಇಲ್ಲ. ಉಪಯುಕ್ತ ಪರಿಸ್ಥಿತಿ ಎದುರಾದಾಗ ನಮಗೆ ನಮ್ಮ ಕರ್ಮ ಫಲದ ಅನುಭವವಾಗುತ್ತದೆ. ಇದೊಂದು ವ್ಯವಸ್ಥಿತ ಸ್ಥಿತಿ. ಹಾಗಾದರೆ ಹೊಸ ಕರ್ಮಗಳ ಹುಟ್ಟಿಗೆ ಕಾರಣವೇನು? ಯಾವುದೇ ರೀತಿಯ ಕರ್ಮಫಲವನ್ನು ಭೋಗಿಸುವಾಗಿನ ನಮ್ಮ ಭಾವನೆಗಳು, ನಮ್ಮ ಬಗೆಗಿನ ನಮ್ಮ ಅಜ್ಞಾನಗಳೇ ಇದಕ್ಕೆ ಕಾರಣ.
ನಾವು ಏನೆಲ್ಲವನ್ನೂ ಅನುಭವಿಸುತ್ತೇವೆಯೋ ಅದೆಲ್ಲ ನಮ್ಮಿಂದಲೇ ರಚಿತಗೊಂಡದ್ದು. ಇದಕ್ಕೆ ಯಾರೂ ಜವಾಬ್ದಾರರಲ್ಲ. ನಮ್ಮ ಜನ್ಮ ಜನ್ಮಾಂತರದ ಕಾರಣವೂ ನಾವೇ!
ನಾವು ಇಂದು ಅನುಭವಿಸುತ್ತಲಿರುವ ಇಡೀ ಜೀವನದ ಫಲಗಳಿಗೂ ನಾವೇ ಕಾರಣರು ಎಂದುಕೊಳ್ಳುತ್ತೇವೆ. ಆ ಪರಿಸ್ಥಿತಿಗಳನ್ನು ಬದಲಾಯಿಸಲೂ ಪ್ರಯತ್ನಿಸುತ್ತೇವೆ. ಆದರೆ ಅದರಲ್ಲಿ ಸಫಲರಾಗುವುದು ಅಸಾಧ್ಯ. ಅದಕ್ಕೆ ಕಾರಣ ಸ್ಪಷ್ಟ. ಅವುಗಳನ್ನು ಬದಲಿಸುವುದು ನಮ್ಮ ಕೈಯಲ್ಲಿಲ್ಲವೇ ಇಲ್ಲ. ಫಲವನ್ನು ಬದಲಿಸಲು ಯೋಚಿಸುವುದು ಸರಿಯೇ.. ಆದರೆ ಆ ಫಲಗಳು ನಮ್ಮ ಹಣೆಯಲ್ಲಿ ಬರೆದವುಗಳೇ! ಅವುಗಳನ್ನು ಬದಲಿಸಬಹುದೇ? ಎಂಬ ಪ್ರಶ್ನೆಗೆ ಉತ್ತರ -ಸ್ವಲ್ಪ ಮಟ್ಟಿಗೆ ಬದಲಿಸಬಹುದು. ಕೇವಲ ಆತ್ಮಜ್ಞಾನ ಪ್ರಾಪ್ತಿಯಿಂದ ಸಾಧ್ಯ ಎಂದು ಹೇಳಬಹುದು.
ಈ ಆತ್ಮಜ್ಞಾನ ಉಪಯೋಗವನ್ನು ನಮ್ಮ ಗುರಿಯ ಪ್ರಾಪ್ತಿಗಾಗಿ ಮಾಡಬಹುದೇ? ನಮ್ಮ ಕರ್ಮಗಳ ನಿಷೇಧಾತ್ಮಕ ಪ್ರಭಾವ ಆಗುವುದಕ್ಕೂ ಮೊದಲೇ ಇವುಗಳಿಂದ ಮುಕ್ತನಾಗಬಹುದೇ? ನಾವು ಸಾಮಾನ್ಯ ರೀತಿಯಲ್ಲಿ ಜೀವನ ನಡೆಸುತ್ತಿರುವಾಗಲೂ ಕರ್ಮಗಳಿಂದ ಬಂಧಿತರಾಗದೆ ಆತ್ಮಾನಂದದ ಅನುಭವ ಪಡೆಯಲಾದೀತೆ? ನಮ್ಮ ಅನೇಕ ಜನ್ಮ ಜನ್ಮಾಂತರಗಳ ಕರ್ಮಬಂಧನಗಳಿಂದ ಮುಕ್ತವಾಗಲು ಸಾಧ್ಯವೇ?
ಹಾಗಾದರೆ ಮೋಕ್ಷದ ವರೆಗೆ ತಲುಪುವ ಯಾತ್ರೆಯನ್ನು ಹೇಗೆ ಪ್ರಾರಂಭಿಸುವುದು?

Leave a Reply