ಮಕ್ಕಳನ್ನು ಹೇಗೆ ಸಂಭಾಳಿಸಲಿ

ಮಕ್ಕಳನ್ನು ಹೇಗೆ ಸಂಭಾಳಿಸಲಿ?
ಮಕ್ಕಳ ಬೇಸಿಗೆಯ ರಜೆ ಬಂತು..
ಹೀಗೆಂದು ವಿಚಾರ ಮಾಡುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳ ಪರೀಕ್ಷೆಯಲ್ಲದ ಪರೀಕ್ಷೆ ಮುಗಿದಿದೆ. ರಿಜಲ್ಟ್ ಕೂಡ ಬಂದಾಯ್ತು. ಆದರೆ ಶಾಲೆ, ಪರೀಕ್ಷೆ ಇವೆಲ್ಲ ವೂ ನಿಗದಿತವಾಗಿ ನಡೆಯುತ್ತಿದ್ದಾಗ ಪಾಲಕರಿಗೆ ಚಿಂತಿಸುವ ಕಾರಣವಿರಲಿಲ್ಲ. ಆದರೆ ಈಗ ಶಾಲೆಗಳೂ ಸರಿಯಾಗಿ ನಡೆಯುತ್ತಲಿಲ್ಲ. ಆಫೀಸುಗಳೂ ಕೆಲವು ಪ್ರತ್ಯಕ್ಷ ಹಾಜರಿಯನ್ನು ಬೇಡಿದರೆ ಇನ್ನು ಕೆಲವು ಮನೆಯಿಂದಲೇ ಮಾಡಬಹುದು ಎಂಬ ರಿಯಾಯಿತಿಯನ್ನು ಕೊಟ್ಟಿವೆ. ಆದರೆ ಇಲ್ಲಿ ಸಮಸ್ಯೆ ಆಗಿರುವುದು ಶಾಲೆಗೆ ಹೋಗುವ ಮಕ್ಕಳ ತಾಯಂದಿರಿಗೆ. ಒಂದು ರೂಮಿನಲ್ಲಿ ಗಂಡಂದಿರು ಬಾಗಿಲು ಹಾಕಿಕೊಂಡು ಕೆಲಸ ಮಾಡುತ್ತಿರುತ್ತಾರೆ‌. ಇನ್ನೊಂದು ರೂಮಿನಲ್ಲಿ ಮಕ್ಕಳ ಆನ್ಲೈನ್ ಕ್ಲಾಸ್. ಎಲ್ಲರಿಗೂ ಸಮಯಕ್ಕೆ ಸರಿಯಾಗಿ ಮೂಕಿಯಂತೆ ಆಹಾರ, ನೀರು ಸರಬರಾಜು ಮಾಡುವುದು… ಇನ್ನು ಚಿಕ್ಕ ಮಕ್ಕಳ ತಾಯಂದಿರಂತೂ ಆ ಮಕ್ಕಳನ್ನು ಗದ್ದಲ ಮಾಡದಂತೆ ತಡೆಯುವುದೂ ಕಷ್ಟ. ಇಂಥದರಲ್ಲಿ ಹಿರಿಯರೂ ಇದ್ದಲ್ಲಿ ಅವರಿಗೆ ಬಾಯಿ ಮಾಡದಂತೆ ಹೇಳುವುದೂ ಕಷ್ಟ… ಮನೆಗೆ ಈಗ ಕೆಲಸದವರೂ ಬರುವುದು ಕಷ್ಟ. ಆ ಕೆಲಸಗಳೂ ಮಹಿಳೆಯರ ಪಾಲಿಗೇ… ತರಕಾರಿ, ಕಿರಾಣಿ ಇವುಗಳನ್ನು ಸ್ಯಾನಿಟೈಜ ಮಾಡುವದೊಂದು ದೊಡ್ಡ ರಗಳೆ. ಆದರೂ ಮಾಡಲೇಬೇಕು. ಮಳೆಗಾಲದಲ್ಲಿ ತರಕಾರಿ ಬೇಗ ಆರುವುದೂಇಲ್ಲ.
ಇನ್ನು ಮನೆಯಿಂದಲೇ ಕೆಲಸ ಮಾಡುವ ಮಹಿಳೆಯರ ಗೋಳಂತೂ ಕೇಳಲೇಬೇಡಿ. ಅವರು ಕೂಡ ಸಮಯಕ್ಕೆ ಸರಿಯಾಗಿ ಮನೆಗೆಲಸ ಮುಗಿಸಿ ಲ್ಯಾಪ್ಟಾಪ್ ಆನ್ ಮಾಡಬೇಕು. ಮಕ್ಕಳಿಗೆ ಅಮ್ಮ ಮನೆಯಲ್ಲಿ ಇದ್ದರೆ ತಮ್ಮ ಬೇಡಿಕೆಗಳಿಗೆ ಸ್ಪಂದಿಸಲೇ ಇದ್ದಾಳೆ ಎಂದು taken for granted! ಇನ್ನು ಹಿರಿಯರಂತೂ ಸೊಸೆ ಹೇಗಿದ್ದರೂ ಮನೆಯಲ್ಲಿ ಇದ್ದಾಳೆ… ಕೆಲಸ ಮಾಡಲಿ, ಮಗುವನ್ನು ಸಂಭಾಳಿಸಲಿ ಎಂಬ ಭಾವನೆ. ಕೆಲವೊಮ್ಮೆ ಮಕ್ಕಳು ಕೂಡ ಅಮ್ಮನೇ ಬೇಕೆಂದು ಹಟ ಹಿಡಿಯುತ್ತವೆ.
ಶಾಲೆಯ ಕಿರಿ ಕಿರಿ ಇಲ್ಲ, ಹೋಮ್ ವರ್ಕ್ ಮಾಡುವ ಚಿಂತೆಯಿಲ್ಲ, ಬ್ಯಾಗು ಹೊರುವ ಚಿಂತೆಯಿಲ್ಲ ಎಂಬ ಖುಶಿಯೂ ಬಹಳ ದಿನದ್ದಲ್ಲ. ಇದೇ ರೀತಿಯಲ್ಲಿ ಶಾಲೆಗಳು ನಡೆದಲ್ಲಿ ಮಕ್ಕಳು ಕಲಿಯಬೇಕೇನನ್ನು? ಮುಂದಿನ ಕ್ಲಾಸಿಗೆ ಹೋಗುವ ಯೋಗ್ಯತೆ ಅವರಿಗೆ ಬರುವುದೆಂತು? ನಾಳೆ ಇವರ ಭವಿಷ್ಯದ ಗತಿಯೇನು?
ಮಕ್ಕಳು ಅಜ್ಜ ಅಜ್ಜಿಯರ ಊರಿಗೋ, ಬಂಧುಗಳ ಊರಿಗೋ ಹೋಗಿ ಸಾಕಷ್ಟು ದಿನಗಳ ವರೆಗೆ ಇದ್ದು ಅಥವಾ ಹತ್ತಿರದ ಆ ನೆಂಟರ ಮನೆಯ ಮಕ್ಕಳನ್ನೇ ತಮ್ಮ ಮನೆಗೆ ಆಹ್ವಾನಿಸಿಯೋ ಮಜಾ ಮಾಡುತ್ತಿದ್ದರು. ಆದರೆ ಈಗಿನ ಕುಟುಂಬಗಳಲ್ಲಿ ಆ ಪರಿಸ್ಥಿತಿ ಇಲ್ಲ. ಬೇರೆಯವರ ಮಕ್ಕಳನ್ನು ನಮ್ಮ ಮನೆಗೆ ಆಹ್ವಾನಿಸುವ ಸ್ಥಿತಿಯಲ್ಲಿಯೂ ನಾವಿಲ್ಲ, ಅವರ ಮನೆಗೆ ಮಕ್ಕಳನ್ನು ಕಳಿಸಿ ಆರಾಮವಾಗಿ ಇರುವ ಸ್ಥಿತಿಯಲ್ಲಿಯೂ ನಾವಿಲ್ಲ. ಈಗಿನ ಕಾಲದಲ್ಲಿ ಮನೆಗಳೂ ಎಷ್ಟೇ ದೊಡ್ಡವಿದ್ದರೂ ನಮ್ಮ ಚೌಕಟ್ಟಿನ ಹೊರಗಿನವರನ್ನು ಸೈರಿಸುವಷ್ಟು ಸೇಫಾಗಿಲ್ಲ.
ಇಂಥ ಪರಿಸ್ಥಿತಿಯಲ್ಲಿ ಪಾಲಕರು ಬಹಳ ಜಾಣ್ಮೆಯಿಂದ ಮಕ್ಕಳ ಸಮಯವನ್ನು ವಿನಿಯೋಗಿಸಬೇಕಾಗಿದೆ. ಮಕ್ಕಳ ಸಮಯವನ್ನು ಅವರ ರಚನಾಕಾಲವನ್ನಾಗಿಸಬೇಕಾಗಿದೆ. ಅವರು ಕೇವಲ ಆನ್ಲೈನ್ ಕ್ಲಾಸ್, ನಂತರ ವಿಡಿಯೋ ಗೇಮ್ ಗಳಲ್ಲಿ ಸಮಯ ಕಳೆಯುವಂತಾಗಬಾರದು. ಅವರಿಗೆ ಮನೋರಂಜನೆಯೂ ದೊರೆಯಬೇಕು. ಅದರೊಂದಿಗೇ ತಮ್ಮ ಕಲ್ಪನೆ ಹಾಗೂ ರಚನಾತ್ಮಕತೆಯಿಂದ ಕ್ರಿಯಾಶೀಲತೆಯನ್ನು ವಿಸ್ತರಿಸಿಕೊಳ್ಳಲೂ ಅನುಕೂಲವಾಗಿರಬೇಕು. ನಾಟಕಕಲೆ, ಕಥೆ ಬರೆಯುವದು, ಮಿಮಿಕ್ರಿ ಮಾಡುವುದು, ನೃತ್ಯ ಮಾಡುವುದು, ಚೆಸ್‌ನಂಥ ಒಳಾಂಗಣ ಆಟಗಳನ್ನೋ ಆಡುವುದರಲ್ಲಿ ಮಕ್ಕಳು ಆಸಕ್ತಿಯನ್ನು ಹೊಂದಿರುತ್ತಾರೆ. ಕೇವಲ ಶಾಲೆ, ಪ್ರಾಜಕ್ಟ್ ವರ್ಕ್, ಟ್ಯೂಶನ್ನುಗಳು ಇವುಗಳಿಗೆ ಸಮಯ ಹೊಂದಿಸುವುದರಲ್ಲಿಯೇ ಅವರ ಸಮಯವಿಡೀ ಕಳೆಯುವುದರಿಂದ ಅವರೊಳಗೆ ಹುದುಗಿದ ಅನೇಕ ಕಲೆಗಳು ಹಾಗೆಯೇ ಮುದುರಿಹೋಗುತ್ತವೆ. ಮನಸ್ಸನ್ನು ಏಕತಾನತೆಯಿಂದ ಹೊರತಂದು ಅವರನ್ನು ಆಕರ್ಷಿಸಲು ಹಾಗೂ ಅವರನ್ನು ಕ್ರಿಯಾತ್ಮಕತೆಯೆಡೆಗೆ ಸೆಳೆಯಲು ಗ್ರೀಟಿಂಗ್ ಕಾರ್ಡುಗಳನ್ನು ತಯಾರಿಸುವುದು, ಡೆಕೋರೇಟಿವ್ ಆಗಿ ಕಾಗದ ಕತ್ತರಿಸುವುದು, ಬಣ್ಣ ಬಣ್ಣದ ಕಾಗದಗಳಿಂದ ನಾನಾ ರೀತಿಯ ಆಕಾರಗಳನ್ನು ತಯಾರಿಸುವುದು, ವಾಲ್ ಹ್ಯಾಂಗಿಂಗ್ ತಯಾರಿಸುವುದು, ಪಾಕೀಟುಗಳನ್ನು ತಯಾರಿಸುವುದು, ಸೂತ್ರದ ಬೊಂಬೆಗಳನ್ನು ತಯಾರಿಸುವುದು ಇತ್ಯಾದಿ. ಈ ರೀತಿಯಲ್ಲಿ ಮಕ್ಕಳ ಕಲ್ಪನೆಗಳು ಇನ್ನೂ ಗರಿಗೆದರುತ್ತವೆ. ಅಲ್ಲದೆ ಅವರಿಗೆ ಮನರಂಜನೆಯೂ ಆಗುತ್ತದೆ.
ಮಕ್ಕಳಿಗೆ ನಾಟಕಕಲೆ ಕಲಿಸುವುದರಿಂದಾಗಿ ಅವರಿಗೆ ನಟನೆ, ಕಥೆ ಬರೆಯುವ, ಸ್ಕ್ರೀಪ್ಟ್ ಮತ್ತು ಡೈಲಾಗ್ ಬರೆಯುವ ಬಗೆಗಿನ ಕಲೆಯೂ ಸಿದ್ಧಿಸುತ್ತದೆ.
ಈ ದಿನಗಳಲ್ಲಿ ದೂರದರ್ಶನಗಳಲ್ಲಿಯೂ ಕೂಡ ಮಕ್ಕಳಿಗಾಗಿ ವಿಶೇಷ ಅಡಿಗೆಯ ಕಾರ್ಯಕ್ರಮಗಳನ್ನೂ ತೋರಿಸುತ್ತಾರೆ. ಗಂಡೇ ಇರಲಿ, ಹೆಣ್ಣೇ ಇರಲಿ, ಈಗ ಆ ಭೇದವಿರದೇ ಎಲ್ಲರೂ ಇಂಥ ಶೋಗಳಲ್ಲಿ ಭಾಗವಹಿಸುತ್ತಾರೆ. ಇಂಥ ಕಾರ್ಯಕ್ರಮಗಳ ಬಗ್ಗೆ ನಮ್ಮ ಮಕ್ಕಳಿಗೆ ವಿಶೇಷವಾದ ಪ್ರೋತ್ಸಾಹವನ್ನೇಕೆ ಕೊಡಬಾರದು? ಮಕ್ಕಳ ಒಲವಿನ, ಆಸಕ್ತಿಯ ವಿಷಯಗಳೆಡೆಗೆ ಅವರನ್ನು ಸೆಳೆಯಲು ಸಹಕಾರಿಯಾಗುತ್ತವೆ. ಅವರ ಕ್ರಿಯಾತ್ಮಕತೆಯು ಇಲ್ಲಿ ಒಂದು ಸುಂದರ ರೂಪು ಪಡೆಯುತ್ತದೆ. ಮಕ್ಕಳು ತಮ್ಮ ಕೈಯಾರೆ ಟೆಡ್ಡಿ ಬೇರ್‌ನಂಥ ಬೊಂಬೆಗಳು, ಬಾರ್ಬಿ ಬೊಂಬೆಗಳು, ಕೇಕ್ ಮಾಡುವುದು, ಅದರ ಮೇಲೆ ಐಸಿಂಗ್ ಮಾಡುವುದು, ಸುಂದರವಾದ ವಿವಿಧ ಆಕಾರಗಳ ಬಿಸ್ಕತ್ತು ತಯಾರಿಕೆ, ಚಾಕಲೇಟು ತಯಾರಿಕೆ, ಮಿನಿ ಪಿಜ್ಜಾ ತಯಾರಿಕೆ, ಕಪ್ ಕೇಕ್ ತಯಾರಿಕೆ, ಕಸೂತಿ, ಹೆಣಿಕೆ ಇತ್ಯಾದಿಗಳನ್ನು ಮಾಡುವುದನ್ನು ಕಲಿಯುತ್ತಾರೆ. ಒಂದು ವೇಳೆ ನಮ್ಮ ಮಕ್ಕಳು ಯಾವುದೋ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆಂದು ಎನ್ನಿಸಿದರೆ ಅವರಿಗೆ ಕೆಲವೊಂದು ವಿಶಿಷ್ಟ ರೀತಿಯ ಕೆಲಸಗಳನ್ನೂ ಆಯ್ಕೆ ಮಾಡಬಹುದು. ಉದಾಹರಣೆಗೆ, ರೋಬೊಟಿಕ್ಸ್, ರೋಬೋ ಡಿಜೈನಿಂಗ್, ಇವೆಲ್ಲವೂ ನಿಜಕ್ಕೂ ಅತ್ಯಂತ ಕುತೂಹಲಭರಿತ ಆಟಗಳು. ಮಕ್ಕಳು ಇಲ್ಲಿ ಮನರಂಜನೆಯ ಜೊತೆಗೇ ಹೊಸದೇನನ್ನೋ ಕಲಿಯುವ ಅನುಭವವನ್ನೂ ಪಡೆಯುತ್ತಾರೆ.
ಇದೆಲ್ಲಾ ಕಲಿಸಲು ಯಾರಿಗೆ ಪುರಸೊತ್ತಿದೆ? ಮಕ್ಕಳ ಅಜ್ಜಿ ತಾತಂದಿರಿಗೆ! ಈಗಿನ ಕಾಲದ ಹಿರಿಯರು ಹೆಚ್ಚಾಗಿ ಸುಶಿಕ್ಷಿತರೇ ಆಗಿರುವುದರಿಂದ ಇದೆಲ್ಲವನ್ನೂ ಮಕ್ಕಳಿಗೆ ಕಲಿಸಬಹುದು. ಶಾಲೆಯ ಆವರಣದಲ್ಲಿ ಟೀಚರಿಂದಲೇ ಕಲಿಯಬೇಕೆಂದೇನಿಲ್ಲ. ಇದರಿಂದಾಗಿ ಹಿರಿಯರೊಂದಿಗೆ ಮಕ್ಕಳ ಬಾಂಧವ್ಯ ಕೂಡ ಬೆಸೆಯುತ್ತದೆ.

Leave a Reply