Your Cart

Need help? Call +91 9535015489

📖 Print books shipping available only in India. ✈ Flat rate shipping

ಆನ್ ಲೈನ್ ಕ್ಲಾಸ್… ಎಷ್ಟು ಸಮಂಜಸ?

ಆನ್  ಲೈ ನ್ ಕ್ಲಾಸ್… ಎಷ್ಟು ಸಮಂಜಸ?

“ಯಾವಾಗ ನೋಡಿದ್ರೂ ಮೊಬೈಲ್ ದಾಗನ ಇರತಾರ ಇಬ್ಬರೂ! ಏನ ಮಾತಾಡಿದ್ರನ್ನೋದರ ಮ್ಯಾಲ ಒಂಚೂರರೆ ಲಕ್ಷ್ಯ? ಮೂಕಬಸಪ್ಪನ ಹಂಗ ಕೂಡೋದೂ.. . ಒಮ್ಮೆ ನಗತಾವ.. ಒಮ್ಮೆ ಅಳತಾವ… ಅಲ್ಲಾ, ನೀವ ಅಭ್ಯಾಸರೆ ಯಾವಾಗ ಮಾಡವ್ರೂ? ಕಸದ ಇಡತೇನಿ ನೋಡರಿ ಇನ್ನ ಫೋನು… ‘
ಇದು ದಿನದ ಗೋಳು ಎಲ್ಲಾರ ಮನ್ಯಾಗೂ… ಇಷ್ಟ ದಿನಾ ಪುಸ, ಪೆನ್ನು, ಟೀಚರು.. ಕ್ಲಾಸ್ ರೂಮು.. ಹಿಂಗ ಇದರಾಬದರ ಕೂತಗೊಂಡ ಕಲಿಯೂದಾಗತಿತ್ತು. ಹುಡುಗೂರಿಗೆ ಲಕ್ಷ್ಯ ಇರಲಿಕರ ಟೀಚರು ಬೈತಿದ್ರು. ಹೀಂಗ ಅವರ ದೇಖರೇಖಿಯೋಳಗ ಕಲೀತಿದ್ವು…
ಬಂತ ನೋಡರಿ ಈ ಕೊರೋನಾ! ಹೊರಗ ಹೋಗಂಗಿಲ್ಲಾ, ಕೆಮ್ಮಂಗಿಲ್ಲಾ, ಸೀನಂಗಿಲ್ಲಾ, ಕೈ ಹಿಡಕೋಳಂಗಿಲ್ಲಾ, ದೂರ ದೂರ… ಎರಡ ತಿಂಗಳ ಹೆಂಗೋ ಕಳದ್ವಿ. ಆಫೀಸ್ ಇಲ್ಲಾ, ಸಾಲಿಲ್ಲಾ, ಪರೀಕ್ಷಾ ಇಲ್ಲಾಂತ. ಒಂದ ಕ್ಲಾಸು ಪ್ರೊಮೋಟೂ ಆದುವು ಮಕ್ಳು. ಈಗ ಜೂನ್ ಬಂತು… ಇನ್ನು ಮುಂದಿನ ಶೈಕ್ಷಣಿಕ ವರ್ಷದ ಬಗ್ಗೆ ವಿಚಾರ ಮಾಡಬೇಕಲಾ…
ಆನ್  ಲೈ ನ್ ಮೂಲಕ ಶಿಕ್ಷಣ ಕೋಡುವ ವಿಚಾರ ಶೈಕ್ಷಣಿಕ ತಜ್ಞರ ತಲಿಯೊಳಗ ಬಂತು. ಈಗ ಮುಂದುವರೆದ ದೇಶಗಳೊಳಗ ಇದು ಅಂಥಾ ಸಮಸ್ಯಾ ಅಲ್ಲಾ. ಸ್ವಲ್ಪ ಸಮಸ್ಯೆ ಆದರೂ ಅದನ ಅವರು ಬಗಿಹರಿಸ್ಕೊಂಡರು. ಯಾಕಂದ್ರ ಅವರಲ್ಲಿ ಸಮಸ್ಯಾ ಇದ್ದದ್ದು ಕಂಪ್ಯೂಟರ್ ಮತ್ತು ಐ ಫೋನಿಂದಲ್ಲಾ. ಆದರ ನಮ್ಮ ದೇಶದಲ್ಲಿ ಇದು ಕಠಿಣ ಸಮಸ್ಯಾನ ಸೈ. ನಿನ್ನೇನ ಪೇಪರಿನ್ಯಾಗ ಓದಿದೆವಲ್ಲಾ… ಒಂಬತ್ತನೇ ಕ್ಲಾಸ್ ಹುಡುಗಿ ಮನ್ಯಾಗ ಕಂಪ್ಯೂಟರ್ ಮತ್ತು ಫೋನ್… ಯಾವದೂ ಇರಲಾರದಕ್ಕ ಆತ್ಮಹತ್ಯೆ ಮಾಡಿಕೊಂಡಾಳಂತ… ಇಃಥಾ ಸಮಸ್ಯಾ ನಮ್ಮಲ್ಲಿ ಹುಟ್ಟತಾವ.
ಈ ಆನ್ ಲೈನ್ ಶಿಕ್ಷಣ ಅನ್ನೂದು ಕ್ಲಾಸು ರೂಮಿನ ಶಿಕ್ಷಣಕ್ಕ ಪರ್ಯಾಯ ಪದ್ಧತಿ ಆಗಬಹುದೇನು? ನನ್ನ ಅಭಿಪ್ರಾಯದಾಗ ಈ ಆನ್  ಲೈನ್ ಶಿಕ್ಷಣ ಅನ್ನೂದು ಔಪಚಾರಿಕವಾಗಿ ಒಂದು ತರಗತಿಯಲ್ಲಿ ಕುಳಿತು ಸಹಪಾಠಿಗಳ ಜೊತೆಗೆ ಹುಡುಗಾಟಿಕೆ, ಕೀಟಲೆ, ತಲೆಹರಟೆ, ಒಂದಿಷ್ಟು ಪ್ರಬುದ್ಧ ಚರ್ಚೆ ಮಾಡುತ್ತ ಕಲಿಯುವ ಪ್ರಕ್ರಿಯೆಗೆ ಯಾವತ್ತೂ ಪರ್ಯಾಯವಲ್ಲ. ಈಗ ನಾವು ಜಾಹೀರಾತು ಕೂಡ ನೋಡತೇವಿ… ಇದರ ಬಗ್ಗೆ. ಯಾವುದೋ ಊರಿನಾಗಿನ ಟೀಚರು ಪಾಠ ಹೇಳತಾನ. ಇನ್ನಾವುದೋ ಹಳ್ಳಿಯ ಮೂಲೆಯಲ್ಲಿ ಇರುವ ವಿದ್ಯಾರ್ಥಿಗೆ ಕ್ಷಣಾರ್ಧದಲ್ಲಿ ಆ ಪಾಠ ಸಿಗುವಂಗ ಮಾಡೂದು ಇಂದಿನ ನಮ್ಮ ಈ ತಂತ್ರಜ್ಞಾನದ ಶಕ್ತಿ. ಆದರ ಮನುಷ್ಯ ಮನುಷ್ಯನ ಜೊತೆಗಿನ ಒಡನಾಟದ ಮೂಲಕ ಪಠ್ಯದಲ್ಲಿಯ ವಸ್ತುವನ್ನು, ಅದಕ್ಕೆ ಮೀರಿದ, ಜೀವನಕ್ಕೆ ಅಗತ್ಯವಿರುವ ಕೌಶಲಗಳನ್ನು ಆನ್  ಲೈ ನ್ ಮೂಲಕ ಕಲಿಸಲಿಕ್ಕಾಗಂಗಿಲ್ಲಾ. ಇದು ತಂತ್ರಜ್ಞಾನದ ಮಿತಿ.
ಈಗ ಈ ಕೊರೋನಾ ಲಾಕ್‍ಡೌನ್‍ದಿಂದ ದೇಶದ ಹಲವಾರು ವಿವಿಗಳು, ಕಾಲೇಜುಗಳು ಆನ್  ಲೈನ್ ಶಿಕ್ಷಣದ ಮೊರೆ ಹೋಗಲಿಕ್ಕತ್ಯಾವ. ಯಾಕೆಂದರೆ ಈಗ ಮನುಷ್ಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಲಾಗದ ಸ್ಥಿತಿ. ನಮ್ಮ ನಮ್ಮ ನಡುವಿನ ಅಂತರವನ್ನು ಕಾಯ್ದುಕೊಂಡು ಹೋಗಬೇಕಾಗಿದೆ. ಈ ದೃಷ್ಟಿಯಿಂದ ಯೋಚಿಸಿದರ ಇದು ಈ ಪರಿಸ್ಥಿತಿ ಯೊಳಗ ಅಗದೀ ಸರಿಯಾದ ಕ್ರಮಾನss. ಆದರ ಇಂಥಾ ಪರಿಸ್ಥಿತಿನ ತಮ್ಮ ಸ್ವಾರ್ಥಕ್ಕ ಬಳಸಿಕೊಂಡು ಔಪಚಾರಿಕ ಬೋಧನಾ ಕ್ರಮಕ್ಕೆ ಈ ಆನ್  ಲೈ ನ್ ಶಿಕ್ಷಣ ಅತ್ಯಂತ ಸರಿಯಾದ ಪರ್ಯಾಯ. ಇದನ್ನೇ ಮುಂದುವರೆಸಿಕೊಂಡು ಹೋದರೂ ಛೊಲೋನss ಅಂತ ಒಂದಿಷ್ಟು ಬುಜೀಗಳು ವಾದಿಸುವುದು ಮಾತ್ರ ಯಾಕೋ ಅಷ್ಟು ಸಮಂಜಸ ಅಂತ ಅನಸಾಂಗಿಲ್ಲಾ.
ಕೆಲವು ಕಾಲೇಜುಗಳೊಳಗ ಆನ್‌ಲೈನ್‌ ಮೂಲಕ ಪಾಠ ಹೇಳುವ ಕೆಲಸಾನೂ ಸುರುವಾಗಿದ್ದು, ಇಷ್ಟು ದಿನದತನಕಾ, ಮೊಬೈಲ್‌ ಕ್ಲಾಸ್ ರೂಮಿನ್ಯಾಗ ನಿಷಿದ್ಧ ಆಗಿದ್ದುದು ಈಗ ಅದೇ ಮೊಬೈಲ್‌ ಮೂಲಕನ ಶೈಕ್ಷಣಿಕ ಕ್ಷೇತ್ರವನ್ನು ನಡೆಸುವ ಪರಿಸ್ಥಿತಿ ಎದುರಾಗೇದ.

ಮೊದಲೆಲ್ಲಾ ಮೊಬೈಲ್‌ ಹಿಡದರನ ಕೆಂಡಾ ಕಾರತಿದ್ದಂಥಾ ಪೋಷಕರು ಈಗ, “ಹೋಗು, ಕ್ಲಾಸ್‌ ಶುರು ಆಗತದ. ಫೋನ್‌ ಚಾರ್ಜ್‌ ಮಾಡಿಕೊಂಡು ಕೂಡು” ಅಂತ ಅಂತಾರ. ಈ ಕೊರೋನಾದ ಹಾವಳಿಯಿಂದ ದೊಡ್ಡವರ ಸ್ಮಾರ್ಟ್‌ಫೋನ್‌ ಈಗ ಹುಡುಗೂರ ಕೈಯಾಗ ಬರೋ ಕಾಲ ಬಂದದ.
ಶಾಲಾ ಕಾಲೇಜು, ಟ್ಯೂಶನ್‌  ಕೋಚಿಂಗ್‌ ಕ್ಲಾಸ್‌ ಅಂತ ಸುಮಾರು ಒಂದು ದಿನದಲ್ಲಿ 1ರಿಂದ 12 ಗಂಟೆಗಳ ಕಾಲ ಮೊಬೈಲ್‌ಗ‌ಳಿಂದ ದೂರವಿರುತಿದ್ದ ಮಕ್ಕಳು ಈಗ ಇಡೀ ದಿನ ಆಸೈನ್‌ಮೆಂಟ್‌, ವೀಡಿಯೋ ಕ್ಲಾಸ್‌ ಅಂತ ಮೊಬೈಲ್‌ನಲ್ಲಿಯೇ ಕಲಿಯೂ ಕಾಲ ಬಂದದ.
ನಾವು ಒಂದು ಮಾತು ನೆನಪಿನ್ಯಾಗ ಇಟ್ಕೋಬೇಕಾಗೇದ.. ಎಲ್ಲಾ ಹುಡುಗೂರೂ ಒಂದೇ ಬೌದ್ಧಿಕ ಮಟ್ಟದವರಾಗಿರಂಗಿಲ್ಲಾ. ಕೆಲವು ಹುಡುಗೂರಿಗೆ ಟೀಚರು ಒಮ್ಮೆ ಹೇಳಿದರ ಅರ್ಥ ಆಗಿಬಿಡತದ. ಆದರ ಐಕ್ಯೂ ಕಡಿಮೆ ಇರೋವಂಥಾ ಸಾಮಾನ್ಯ ಹಾಗೂ ಅದಕಿಂತ ಕಡಿಮೀ ಬೌದ್ಧಿಕ ಮಟ್ಟದ ಹುಡುಗೂರಿಗೆ ಭಾಳ ಸರತೆ ಹೇಳಬೇಕಾಗತದ. ಇಂಥಾ ಪರಿಸ್ಥಿತಿಯೊಳಗ ಟೀಚರ್‌ ಎಲ್ಲೋ ಕುತಗೊಂಡು ವೀಡಿಯೋ ಮ್ಯಾಲೆ ಹುಡುಗೂರಿಗೆ ಪಾಠಾ ಕಲಸತೇವಿ ಅಂತ ಅನ್ನೂದು ತುರ್ತಿಗೆ ಪರಿಹಾರ ಅನಿಸಿದರೂ, ಮುಂದಿನ ದಿನದಾಗ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗೋ ಲಕ್ಷಣ ಭಾಳವ. ಹಾಲ ಕುಡದ ಮಕ್ಕಳನ ಬದುಕದೆ ಇರೋ ಹೊತ್ತಿನ್ಯಾಗ ನೀರ ಕುಡದ ಮಕ್ಕಳು ಹೆಂಗ ಬದಕತಾವ? ಕ್ಲಾಸಿನ್ಯಾಗ ಕೂಡೀಸಿ ಕಲಿಸಿದರನ ಪಾಠಾ ತಿಳೀಲಾರದ ಹೊತ್ತಿನ್ಯಾಗ ಈ ಆನ್  ಲೈ ನ್ ಪಾಠಾ ಹೆಂಗ ತಿಳೀಬೇಕೂ? ಇನ್ನು ಪ್ರಾಕ್ಟಿಕಲ್ ಅಂತೂ ಸಾಧ್ಯನ ಇಲ್ಲಾ!
ಇನ್ನು ಖಾಸಗಿ ಶಾಲೆಗಳ ವ್ಯಾಮೋಹ ನಮ್ಮ ದೇಶದಾಗ ಒಂದು ಶಾಪ ಇದ್ದಂಗ. ಹುಡುಗೂರನ ಅಗದೀ ಹೆಸರ ಗಳಿಸಿದ ಖಾಸಗಿ ಸಾಲಿಗೇ ಕಳಸಬೇಕು. ಅವರು ಅಗದೀ ಛಂದಾಗೀ ಇಂಗ್ಲಿಷ್ ಮಾತಾಡಬೇಕು. ಮುಂದ ಇಂಜಿನಿಯರಿಂಗ್, ಮೆಡಿಕಲ್‍ಕನ ಮಕ್ಕಳು ಹೋಗಬೇಕು ಅನ್ನೂದು ಎಲ್ಲಾ ಪಾಲಕರ ಕನಸು. ಆದರ ಈಗ ಪರಿಸ್ಥಿತಿ ಭಾಳ ಬಿಗಡಾಯಿಸೇದ. ಈ ಸಾಲಿ ದುಪ್ಪಟ್ಟು ಫೀ ಮಾಡ್ಯಾವ. ಕಾರಣ ಆನ್ಲೈನ್ ಖರ್ಚು ಅಂತ ಹೇಳತಾವ. ಈಗ ಆನ್‌ಲೈನ್‌ ತರಗತಿನೂ ಸುರುಮಾಡಿರೋದರಿಂದ ಇಂಟರ್‌ನೆಟ್‌ ಖರ್ಚಾಗತದಂತನೂ ಹೇಳತಾವ. ಇದರ ಜೋಡೀಗೇನ ಸಾಲೀ ಫೀಜೂ ಕೊಡಬೇಕಾಗತದ. ಯಾಕಂದ್ರ ಬಿಲ್ಡಿಂಗ್ ಫಂಡ್, ಟೀಚರ್ ಪಗಾರಾ, ಮೇನ್ಟೇನನ್ಸು ಎಲ್ಲಾ ಇದ್ದ ಇರತದ.
ಇನ್ನು ವಿದೇಶಗಳಂತೆ ಪ್ರಾಥಮಿಕ ಶಾಲೆಗಳ ಮಕ್ಕಳಿಗೂ ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸಿದರ ಹೆಂಗ? ಎಲ್ಲಾರಿಗೂ ಮಕ್ಕಳಿಗೆ ಮೊಬೈಲ್, ಟ್ಯಾಬ್ಲೆಟ್ ಕೊಡಿಸಲಿಕ್ಕೆ ಸಾಧ್ಯ ಆಗತದೇನು?
ನಮ್ಮ ದೇಶ ಹಳ್ಳಿಗಳ ದೇಶ. ಇಲ್ಲಿ ಭಾಳಷ್ಟ ಹಳ್ಳಿಗಳೊಳಗ ಸರಿಯಾದ ರಸ್ತೆ ಸೈತ ಇಲ್ಲಾ. ವಿದ್ಯುತ್ ಪೂರೈಕೆ ಇಲ್ಲಾ. ಅಂಥಾ ಕಡೆ ನೆಟ್‌ವರ್ಕ್‌ ಹೆಂಗ ಸಿಗಲಿಕ್ಕೆ ಸಾಧ್ಯ? ಇದೆಲ್ಲಾ ವಿಚಾರ ಮಾಡಿ ಮುಂದುವರೀಬೇಕಾಗತದ. ಮತ್ತು ಇನ್ನೂ ಮಹತ್ವದ ಸಮಸ್ಯೆ ಅಂದರೆ ಮಕ್ಕಳ ಆರೋಗ್ಯದ್ದು! ಹುಡುಗರಿಗೆ ವ್ಯಾಯಾಮ ಇಲ್ಲಾ… ಕಣ್ಣು ಭಾಳ ದಣೀತಾವ… ಇದಕ್ಕೂ ಪರಿಹಾರ ಯೋಚಿಸಬೇಕಲ್ಲ!

Leave a Reply