Your Cart

Need help? Call +91 9535015489

📖 Print books shipping available only in India. ✈ Flat rate shipping

ಆನ್ಲೈನ್ ಶಾಪಿಂಗ್ ಎಂಬ ಬಯಲ ಭೂತ

ಆನ್ಲೈನ್ ಶಾಪಿಂಗ್ ಎಂಬ ಬಯಲ ಭೂತ

“ನನಗ ಮನೀಕೆಲಸಾ, ಆಫೀಸ್ ಕೆಲಸಾನ ರಗಡ ಆಗಿಬಿಡತದ.. ಯಾತಕ್ಕೂ ಪುರಸತ್ತ ಸಿಗಂಗಿಲ್ಲಾ… ಹಿಂಗಾಗಿ ಮಾರ್ಕೆಟ್ ಕ ಹೋಗಲಿಕ್ಕೂಆಗಿಲ್ಲಾ.. ಅವ್ವನ ಗುಳಿಗಿ ಕಡೀ ಸ್ಟ್ರಿಪ್ ಸುರೂ ಆಗೇದ….. ಛೋಟೀ ಡೈಪರ್ ಖಾಲಿ ಆಗ್ಲಿಕ್ಕೆ ಬಂದಾವ.. ನಾಳಿಗೆ ಬಿಟ್ಟದ್ದ ಬಿಟ್ಟು ಮಾರ್ಕೆಟ್ ಕ ಹೋಗಬೇಕು…”
ನಂದಿನಿಯ ಗೊಣಗಾಟ ಕೇಳಿದ್ದ ತೃಪ್ತಿ “ವೈನೀ, ನೀವಿನ್ನೂ ಯಾ ಕಾಲದಾಗಿದ್ದೀರಿ? ಈಗಿನ ಪುರಸೊತ್ತಿಲ್ಲದ ಜಗತ್ತಿಗೆ ಅನುಕೂಲ ಆಗೋಹಂಗ ಆನ್ಲೈನ್ ಶಾಪಿಂಗ್ ಬಂದದ… ಇತ್ತೀಚೆಗೆ ಯಾರೂ ಮಾರ್ಕೆಟ್ ಕ ಹೋಗೂದೇ ಇಲ್ಲಾ. ಟೈಮೂ ವೇಸ್ಟು.. ಆ ಬಿಸಲು, ಮಳೀ.. ಆಟೋ ಖರ್ಚು… ಯಾರಿಗೆ ಬೇಕಾಗೇದ? ಈಗ ನೋಡ್ರಿ… ನಾ ಮನೀಗೆ ಬೇಕಾಗೋ ಎಲ್ಲಾ ಸಾಮಾನೂ ಆನ್ಲೈನ್ ದಾಗನ ತರಸತೇನಿ… ಗುಳಿಗಿ, ಔಷಧಾ, ಬಟ್ಟೀ ಬರೀ… ಈವನ್ ಕಿರಾಣಿ ಸೈತ…”
“ಅಲ್ಲಾ… ಅವು ನಂಬಿಕೀಗೆ ಯೋಗ್ಯ ಅಲ್ಲಾಂತ ಅಂತಾರಲಾ… ಮತ್ತ ಗುಳಿಗಿ ಔಷಧಾ ತಪ್ಪಿ ಯಾವರೆ ಬಂದ್ರ ಲಗೂ ರಿಪ್ಲೇಸ್ ಸೈತ ಆಗಂಗಿಲ್ಲಂತ?”
“ಹಂಗೇನ ಆಗಂಗಿಲ್ಲಾ… ಯಾವಾಗರೆ ಒಮ್ಮೊಮ್ಮೆ ಆದರೂ ಅವ್ರು ಪರತ ತೊಗೋತಾರ…”
ಹೀಗೆಯೇ ನಡೆದಿತ್ತು ಅತ್ತಿಗೆ ನಾದಿನಿಯರ ಚರ್ಚೆ.
ನಿಜ. ಇಂದಿನ ಈ ಗಡಿಬಿಡಿಯ ಜಗತ್ತಿನಲ್ಲಿ ಆನ್ಲೈನ್ ಶಾಪಿಂಗಿಗೆ ಜೋತುಕೊಂಡವರು ಬಹಳ ಜನ. ಅದರಿಂದಾಗಿ ಅನೇಕ ಅನುಕೂಲಗಳಿವೆ.
ಆನ್‌ಲೈನ್‌ನಲ್ಲಿ ಖರೀದಿ ಮಾಡುವುದು ಹಲವು ಕಾರಣಗಳಿಗೆ ಸುಲಭ ಅನಿಸಬಹುದು. ಸಮಯದ ಉಳಿತಾಯ, ಮಳಿಗೆಯಿಂದ ಮಳಿಗೆಗೆ ಓಡಾಡುವ ಮತ್ತು ವಾಹನ ಪಾರ್ಕಿಂಗ್‌ ಕಷ್ಟ ಇರುವುದಿಲ್ಲ. ಹೊರಗೆ ಅಂದರೆ ಅಂಗಡಿಗಳಿಗೆ, ಮಾಲ್ ಗಳಿಗೆ ಶಾಪಿಂಗ್ ಹೋದರೆ, ಅವರ ಅಂಗಡಿಗಳ ಬಾಡಿಗೆ, ನೌಕರರ ಸಂಬಳ ಇವುಗಳ ಶೇಕಡಾ ವಾರು ಕೂಡ ನಮ್ಮ ಹೆಗಲಿಗೇ. ಇಲ್ಲಿ ಅದೂ ಕೂಡ ಉಳಿತಾಯವೇ. ಅಲ್ಲದೆ, ನಮಗೆ ಇಲ್ಲಿ ಅವಶ್ಯಕ ವಸ್ತುಗಳೂ ಕೂಡ ಸಿಗುತ್ತವೆ. ಅಷ್ಟೇ ಏಕೆ, ಇಲೆಕ್ಟ್ರಿಸಿಟಿ, ನಗರಸಭೆ, ಟೆಲಿಫೋನ್ ಬಿಲ್ಲು ತುಂಬುವುದು, ಸಿನಿಮಾ ಟಿಕೆಟ್, ಬಸ್ ರಿಜರ್ವೇಶನ್, ರೈಲ್ವೆ ರಿಜರ್ವೇಶನ್, ಓಲಾ ಮುಂತಾದ ಟ್ಯಾಕ್ಸಿ ಕರೆ, ಬ್ಯಾಂಕ್ ನಿಂದ ದುಡ್ಡು ಸಂದಾಯ ಎಲ್ಲವನ್ನೂ ಆನ್ಲೈನ್ ಮಾಡಬಹುದು. ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿಯಂತೂ ಬಯಸದೆಯೇ ಹತ್ತಾರು ಜಾಹೀರಾತುಗಳು, ಉತ್ಪನ್ನಗಳು ಕಣ್ಣಿಗೆ ರಾಚುತ್ತವೆ. ನಮಗೆ ಯಾವುದು ಅವಶ್ಯಕವಿದೆಯೋ ಅದನ್ನು ನಾವು ಆಯ್ಕೆ ಮಾಡಿಕೊಂಡರಾಯಿತು. ಇದೇ ಇಲ್ಲಿಯ ಒಂದು ಸಮಸ್ಯೆ. ಅವಶ್ಯಕತೆ ಇರಲಿ, ಇಲ್ಲದಿರಲಿ ತಂದು ಒಟ್ಟಿಕೊಳ್ಳುವ ಚಟ ನಮ್ಮಲ್ಲಿ ಇನ್ನೂ ಹೆಚ್ಚಾಗಲು ಇದೂ ಒಂದು ಕಾರಣವೇ ಆಗುತ್ತದೆಯೋ ಏನೋ. ಆದರೂ ಇಲ್ಲಿ ನಾವು ಕೆಲವೊಂದು ಎಚ್ಚರಿಕೆಗಳನ್ನೂ ಅನುಸರಿಸಬೇಕಾಗುತ್ತದೆ. ನಾವು ಮಾಡುವ ಆನ್‌ಲೈನ್‌ ಶಾಪಿಂಗ್‌ ಎಷ್ಟು ಸುರಕ್ಷಿತ? ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಕ್ಷೇತ್ರದ ಸಾಧಕ ಬಾಧಕಗಳ ಬಗ್ಗೆ ಕೂಡ ಅರಿಯಲೇಬೇಕು.
ಮೂರು ಶಾಪಿಂಗ್‌ ಬಗೆಗಳನ್ನು ಕೆಲ ಪ್ರಮುಖ ಮಳಿಗೆಗಳಲ್ಲಿ ಆನ್‌ಲೈನ್‌ನಲ್ಲಿ ಮೊಬೈಲ್‌ ಮೂಲಕ ಶಾಪಿಂಗ್‌ ಮಾಡುತ್ತೀರಿ ಎಂದುಕೊಳ್ಳಿ. ‘ಮೊಬೈಲ್‌ನಲ್ಲಿ ಕ್ರೆಡೆನ್ಷಿಯಲ್‌ಗಳನ್ನು ಟೈಪ್‌ ಮಾಡುವಾಗಲೂ ಎಚ್ಚರದಿಂದಿರಿ. ಅಷ್ಟೇ ಅಲ್ಲ ನೀವೆಷ್ಟು ಖರೀದಿ ಮಾಡುತ್ತೀರಿ ಎಂಬುದ ಬಗ್ಗೆಯೂ ಎಚ್ಚರವಿರಲಿ. ಭಾರತದಲ್ಲಿ ಕಂಪ್ಯೂಟರ್ ಬಳಕೆದಾರರ ಸಂಖ್ಯೆ ಬಹಳ ದೊಡ್ಡದು. ಆದರೆ ತಮ್ಮ ಕಂಪ್ಯೂಟರ್‌ಗಳನ್ನು ತಾಂತ್ರಿಕವಾಗಿ ಅಪ್‌ಡೇಟ್‌ ಮಾಡುವಲ್ಲಿ ನಾವು ಅಷ್ಟಕ್ಕಷ್ಟೇ. ಹಳೆಯ ವರ್ಷನ್‌ಗಳ ಮೂಲಕ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಸೈಬರ್‌ ದಾಳಿಯಾಗುವ ಅಪಾಯ ಹೆಚ್ಚು. ಆ್ಯಂಟಿ ವೈರಸ್‌ ಅಪ್ಲಿಕೇಷನ್‌ ಬಳಸುತ್ತಿದ್ದರೆ ಈ ಅಪಾಯದಿಂದ ದೂರವಿರಬಹುದು.
ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿಗಳನ್ನು ಶಾಪಿಂಗ್‌ ವೆಬ್‌ಸೈಟ್‌ಗಳೊಂದಿಗೆ ಹಂಚಿಕೊಳ್ಳಲೇಬಾರದು. 16 ಅಂಕಿಗಳನ್ನು ಟೈಪ್‌ ಮಾಡಲು ಅಬ್ಬಬ್ಬಾ ಅಂದರೆ 30 ಸೆಕೆಂಡ್‌ ಬೇಕಾಗಬಹುದು. ಎಷ್ಟೇ ವಿಶ್ವಾಸಾರ್ಹ ವೆಬ್‌ಸೈಟ್‌, ಪೋರ್ಟಲ್‌ಗಳೇ ಆಗಿದ್ದರೂ ಇಂತಹ ವೈಯಕ್ತಿಕ ಮಾಹಿತಿಗಳನ್ನು ಅಲ್ಲಿ ಕೊಡಲೇಬಾರದು.
‘ಶಾಪಿಂಗ್‌ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್‌ ಮಾಡುವ ಮುನ್ನ ಅಲ್ಲಿ ಪ್ರಕಟಿಸಲಾಗಿರುವ ಗ್ರಾಹಕರ ಅಭಿಪ್ರಾಯಗಳ ಮೇಲೆ ಕಣ್ಣಾಡಿಸಿ ಆ ಆ್ಯಪ್‌ ಬಗ್ಗೆ ಇನ್ನಷ್ಟು ಮಾಹಿತಿಗಳನ್ನೂ ನೋಡಬೇಕು. ಆನ್‌ಲೈನ್‌ ಹಣ ವರ್ಗಾವಣೆ ಮಾಡುವಾಗಲಂತೂ OTPಗೆ ಅವಕಾಶವಿದೆಯೇ ಎಂದು ನೋಡಬೇಕು. ಯಾಕೆಂದರೆ ಪಾಸ್‌ವರ್ಡ್‌ಗಳನ್ನು ಭೇದಿಸುವುದು ತುಂಬಾ ಸುಲಭ.
ನೀವು ಬಲ್ಲ ಜಾಲತಾಣಗಳೇ ಸೂಕ್ತ
ಎಲ್ಲೆಡೆಯೂ ಪ್ರಸಿದ್ಧವಾಗಿರುವ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಜಬಾಂಗ್‌ನಂತಹ ವೆಬ್‌ಸೈಟ್‌ಗಳಲ್ಲಿ ಶಾಪಿಂಗ್ ಮಾಡುವುದೇ ಸುರಕ್ಷಿತ. ಹಣ ಪಾವತಿಯನ್ನು ಕಾರ್ಡ್ ಮೂಲಕ ಮಾಡುವುದೇ ಸೂಕ್ತ. ಹಬ್ಬಗಳ ಕೊಡುಗೆಗಾಗಿ ಅಥವಾ ಪ್ರಯಾಣಕ್ಕಾಗಿ ಹೊಸ ವೆಬ್‌ಸೈಟ್‌ ಮೂಲಕ ಹಣ ಪಾವತಿ ಮಾಡುವ ಸಂದರ್ಭದಲ್ಲಿ ನಾವು ನಮ್ಮ ಪಾವತಿ ಸಂಬಂಧಿತ ವಿವರಗಳನ್ನು ನೇರವಾಗಿ ವೆಬ್‌ಸೈಟ್‌ನಲ್ಲಿ ನಮೂದಿಸಬಾರದು. ಅದಕ್ಕಾಗಿ ಪ್ರತ್ಯೇಕ ಕೊಂಡಿ ತೆರೆದುಕೊಳ್ಳುತ್ತದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ಅದು ವಿಶ್ವಾಸಾರ್ಹವೇ ಎಂಬುದನ್ನೂ ನೋಡಿಕೊಳ್ಳೀವದೂ ಅಗತ್ಯ. ಅಲ್ಲದೆ, OTP ತುಂಬುವಂತೆ ನಿರ್ದೇಶನ ಬಾರದಿದ್ದರೆ ಹಣ ವರ್ಗಾವಣೆ ಪ್ರಕ್ರಿಯೆಯನ್ನೇ ನಿಲ್ಲಿಸಿಬಿಡಬೇಕು.
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿದರೂ ನಾವು ಕೇಳಿದ ಉತ್ಪನ್ನ ನಮ್ಮ ಕೈಸೇರುವ ವೇಳೆ ಹಣ ಪಾವತಿ ಮಾಡುವ (COD) ಅಥವಾ ಕಾರ್ಡ್‌ ಮೂಲಕ ಪಾವತಿಸುವ ಅವಕಾಶವಿದ್ದರೆ ಹೆಚ್ಚು ಸುರಕ್ಷಿತ.
‌ ಇತ್ತೀಚೆಗೆ ನನ್ನ ಪರಿಚಯದ ವಿಜಯಾ ಆನ್‌ಲೈನ್‌ನಲ್ಲಿ ಒಂದು ಸೀರೆ ಆರ್ಡರ್‌ ಮಾಡಿದ್ದಳು. ಆದರೆ ಅವಳಿಗೆ ಬಂದದ್ದು 4.50 ಮೀಟರಿನ ಜಾಳು ಸೀರೆ! ಈ ಬಗ್ಗೆ ವೆಬ್‌ಸೈಟ್‌ಗೆ ದೂರಿತ್ತಾಗ ‘ಮುಂದಿನ 10 ದಿನಗಳಲ್ಲಿ ನೀವು ಕೇಳಿದ ಉತ್ಪನ್ನ ಕಳುಹಿಸಲಾಗುವುದು’ ಎಂದು ಸಮಜಾಯಿಷಿ ನೀಡಿದರೂ ಇದುವರೆಗೂ ಬಂದಿಲ್ಲ. ಆದ್ದರಿಂದ ಅಧಿಕೃತ ವಿಳಾಸವಿಲ್ಲದ ವೆಬ್‌ಸೈಟ್‌ಗಳ ಮೂಲಕ ವ್ಯವಹಾರ ಮಾಡುವುದೂ ಅಪಾಯಕಾರಿ.
ಇತ್ತೀಚೆಗೆ ಸೈಬರ್‌ ದಾಳಿ ಹೆಚ್ಚಾಗಿದೆ. ಅದನ್ನು ತಪ್ಪಿಸಲು ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು ಯಾವುದೇ ವೆಬ್‌ಸೈಟ್‌ನಲ್ಲಿ ಸೇವ್‌ ಮಾಡಬಾರದು. ಪ್ರತಿ ಬಾರಿಯೂ ಹೊಸದಾಗಿಯೇ ವಿವರ ತುಂಬಿಸಬೇಕು. ಚೆನ್ನಾಗಿ ಬಲ್ಲ ವೆಬ್‌ಸೈಟ್‌ಗಳಲ್ಲೇ ಖರೀದಿ ಮಾಡಬೇಕು. ಗೊತ್ತಿಲ್ಲದ ಅಥವಾ ಹೊಸ ವೆಬ್‌ಸೈಟ್‌ಗಳನ್ನು ದೂರವಿಡಬೇಕು. ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳ ಪಾಸ್‌ವರ್ಡ್‌ ಪ್ರತಿ ತಿಂಗಳೂ ಬದಲಾಯಿಸಬೇಕು.
ಹೀಗೆ ಎಚ್ಚರಿಕೆ ವಹಿಸಿದಲ್ಲಿ ಆನ್ಲೈನ್ ಶಾಪಿಂಗ್ ಉಪಕಾರಿ.

Leave a Reply