ಪಂಪನ ಕಾವ್ಯದಲ್ಲಿ ಭಗವದ್ಗೀತೆ  ಭಾಗ -೨

ಪಂಪನ ಕಾವ್ಯದಲ್ಲಿ ಭಗವದ್ಗೀತೆ  ಭಾಗ -೨

ಇದು ಪಂಪನ ಚಿತ್ರಣ. ಈ ಎರಡು ವಚನಗಳ ನಡುವಣ ಒಂದು ಪದ್ಯದಿಂದ ಚಿತ್ರಿತವಾಗಿರುವ ಗೀತಾ ಪ್ರಸಂಗವನ್ನು ನೋಡಿದರೆ ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯನ್ನು ಇಷ್ಟರಲ್ಲೇ ಮುಗಿಸಿಬಿಟ್ಟಿದ್ದಾನಲ್ಲ ಎಂದು ಅನ್ನಿಸುವುದು ತೀರ ಸಹಜ. ಮೂಲಭಾರತದ ಆ ಉಜ್ವಲವಾದ ನಾಟಕೀಯತೆಯೆಲ್ಲಿ, ಪಂಪನ ಈ ಅವಸರದ ಚಿತ್ರಣವೆಲ್ಲಿ ಎಂದು ಅನ್ನಿಸಬಹುದು. ಮೂಲದ ಪ್ರಕಾರ, ಯುದ್ಧಸನ್ನದ್ಧವಾದ ಉಭಯ ಸೇನೆಗಳ ಮಧ್ಯೆ ಪಾರ್ಥನ ರಥವನ್ನು ಕೃಷ್ಣ ತಂದು ನಿಲ್ಲಿಸಿದಾಗ ತನ್ನೊಡನೆ ಕಾದಲೆಂದು ಬಂದು ನಿಂತ ಸಮಸ್ತ ಬಂಧು ಬಾಂಧವರನ್ನು ಕಂಡು ‘ಕೃಪಯಾಪರಯಾವಿಷ್ಟ’ ನಾಗಿ ಅರ್ಜುನನು ವಿಷಾದದಲ್ಲಿ ನಿಲ್ಲುತ್ತಾನೆ : ಕೈಯಿಂದ ಗಾಂಡೀವ ಜಾರಿ ಬೀಳುತ್ತಿದೆ. ಶರೀರ ನಡುಗುತ್ತಿದೆ, ಮೈ ಬಿಸಿಯಾಗಿದೆ, ಮನಸ್ಸು ಸ್ವಜನಾಸಕ್ತಿಯ ಗೊಂದಲದಲ್ಲಿ ತುಮುಲಗೊಂಡಿದೆ; ಅರ್ಜುನನನ್ನು ಅನಿರೀಕ್ಷಿತವಾದ, ಸ್ವಭಾವ ವಿರುದ್ಧವಾದ ವಿರಾಗ ಆವರಿಸಿದೆ. ಕೃಷ್ಣನ ಮಾತಿನಲ್ಲೇ ಹೇಳುವುದಾದರೆ ವ್ಯಾಮೋಹ ಮೂಲವಾದ ಕ್ಲೈಬ್ಯ ಅರ್ಜುನನನ್ನು ಆವರಿಸಿದೆ. ಆದರೆ ಪಂಪ ತನ್ನ ವಿಕ್ರಮಾರ್ಜುನನನ್ನು ಆ ಸ್ಥಿತಿಗೆ ಇಳಿಸಲಿಲ್ಲ. ಏಕೆಂದರೆ ಪಂಪನು ಮಾಡಿಕೊಂಡಿರುವ ಬದಲಾವಣೆಯ ಪ್ರಕಾರ ಕೃಷ್ಣನು ವಿಕ್ರಮಾರ್ಜುನನ ಮನದೊಳಾದ ವ್ಯಾಮೋಹಮಂ ಕಳೆದದ್ದು ಮೂಲಭಾರತದ ಹಾಗೆ ಉಭಯ ಸೇನೆಗಳ ಮಧ್ಯದಲ್ಲಿ ರಥವನ್ನು ಸ್ಥಾಪಿಸಿದ ನಂತರ ಅಲ್ಲ; ಯುದ್ಧಕ್ಕೆ ಕೃಷ್ಣಾರ್ಜುನರಿಬ್ಬರೂ ರಥವನ್ನು ಆರೋಹಿಸುವ ಮುನ್ನ! ಹೀಗಾಗಿ ಮೂಲಭಾರತದ ಅರ್ಜುನನಿಗೆ ಉಭಯ ಸೇನೆಗಳ ಮಧ್ಯೆ ಒದಗಿದಂಥ ಸ್ಥಿತಿ, ಈ ವಿಕ್ರಮಾರ್ಜುನನಿಗೆ ಒದಗಲಿಲ್ಲ; ಅದರ ಬದಲು ಕವಿ ವಿಕ್ರಮಾರ್ಜುನನ ಮನಸ್ಸಿನಲ್ಲಿ ವ್ಯಾಮೋಹ ಕವಿಯಿತು ಎನ್ನುತ್ತಾನೆ- ಹಾಗೆ ಕವಿದದ್ದು ತೀರಾ ಸಹಜ ಎನ್ನುವಂತೆ. ಮೂಲದ ಪ್ರಕಾರ ಶ್ರೀಕೃಷ್ಣನು ತನ್ನ ದಿವ್ಯರೂಪವನ್ನು ತೋರಿದ್ದು ಅರ್ಜುನನ ಕೋರಿಕೆಯಂತೆ ಗೀತೋಪದೇಶದ ಮಧ್ಯದಲ್ಲಿ; ಆದರೆ ಪಂಪನ ಕೃಷ್ಣ ತಾನಾಗಿಯೇ ಮೊದಲೆ ದಿವ್ಯಸ್ವರೂಪಮಂ ತೋಱ ಹೇಳಬೇಕಾದ ನಾಲ್ಕು ಮಾತನ್ನು ಹೇಳುತ್ತಾನೆ. ಅನಂತರ ಪರಸೈನ್ಯ ಭೈರವನಾದ ಅರ್ಜುನನು ಪುರಾಣ ಪುರುಷೋತ್ತಮಮಂಗೆಱಗಿ ರಥವನ್ನೇರಲು ಹೇಳಿ, ತಾನು ಮೂರು ಸಲ ಬಲವಂದು, ವಜ್ರ ಕವಚವನ್ನು ತೊಟ್ಟು ಅಕ್ಷಯ ತೂಣೀರವನ್ನು ಬಿಗಿದು, ದ್ರೋಣರಿಗೆ ಮನದಲ್ಲಿ ನಮಸ್ಕರಿಸಿ, ಮಹಾ ಪ್ರಚಂಡ ಗಾಂಡೀವವನ್ನು ನೀವಿ ಜೇವೊಡೆದು, ದೇವದತ್ತ ಶಂಖವನ್ನು ಊದಿ, ಸಂಸಪ್ತಕರ ಒಡ್ಡಿನ ಕಡೆ ತನ್ನ ರಥವನ್ನು ಚೋದಿಸಲು ಕೃಷ್ಣನಿಗೆ ಹೇಳುತ್ತಾನೆ. ಇದನ್ನು ನೋಡಿದರೆ ಶ್ರೀಕೃಷ್ಣನು ತನ್ನ ದಿವ್ಯರೂಪವನ್ನು ತೋರಿಸಿ, ಗೀತೆಯ ಸಾರದಂಥ ನಾಲ್ಕು ಮಾತನ್ನು ಅರ್ಜುನನಿಗೆ ಹೇಳಿ ಯುದ್ಧಕ್ಕೆ ಅವನನ್ನು ನಿಯೋಜಿಸಿದ ನಂತರ ಅರ್ಜುನ ಯುದ್ಧ ಸನ್ನದ್ಧನಾದನೆಂದು ಸ್ಪಷ್ಟವಾಗುತ್ತದೆ. ಆದರೆ ಈ ಮಾತಿಗೆ ಹಿಂದಿನ ವೃತ್ತ (೧೦-೪೪)ದಲ್ಲಿ ‘ಅದಿರದಿರ್ಚಿ ತಳ್ತಿಱಯಲೀ ಮಲೆದೊಡ್ಡಿದ ಚಾತುರಂಗಮೆಂಬುದು ನಿನಗೊಡ್ಡಿ ನಿಂದುದು’ ಎನ್ನುವ ಕೃಷ್ಣನ ಮಾತು ಎದುರಿಗೆ ನಿಂತ ಸಮೀಪಸ್ಥವಾದ ಸೈನ್ಯವನ್ನು ಸೂಚಿಸುತ್ತದೆಯಲ್ಲ! ಈ ಎರಡು ವಚನ ಒಂದು ವೃತ್ತದಿಂದ ಈ ಸಂದರ್ಭ ಪ್ರಾಪ್ತವಾದದ್ದು ಅರ್ಜುನ ಯುದ್ಧ ಸನ್ನದ್ಧನಾಗಿ ಹೊರಡುವ ಮುನ್ನ, ಬಹುಶಃ ಕುರುಕ್ಷೇತ್ರದ ಒಡ್ಡಣಕ್ಕೆ ಸಮೀಪದ ಶಿಬಿರದಲ್ಲಿ ಎಂದು ಊಹಿಸಬೇಕಾಗುತ್ತದೆ. ಒಟ್ಟಿನಲ್ಲಿ ಪಂಪ ಮೂಲದ ಗೀತಾ ಪ್ರಸಂಗವನ್ನು ತನಗೆ ತೋರಿದ ಹಾಗೆ ಬದಲಾಯಿಸಿಕೊಂಡಿದ್ದಾನೆ. ಮೂಲದ ಪ್ರಕಾರ ಗೀತಾಪ್ರವಚನ ಪೂರ್ವದಲ್ಲಿ ಬರಬೇಕಾದ ಸನ್ನಿವೇಶವನ್ನು ತನ್ನ ಕೃತಿಯಲ್ಲಿ ಇತ್ತ ಕಡೆಗೂ, ಗೀತೋಪದೇಶದ ಕಡೆಕಡೆಗೆ ಬರುವ ವಿಶ್ವರೂಪದರ್ಶನದ ಪ್ರಸಂಗವನ್ನು ಅತ್ತ ಕಡೆಗೂ ಸ್ಥಳಾಂತರಿಸಿದ್ದಾನೆ. ಪಂಪನು ಮೂಲದ ಗೀತಾ ಪ್ರಸಂಗವನ್ನು ಹೀಗೆ ಯಾಕೆ ಬದಲಾಯಿಸಿಕೊಂಡಿದ್ದಾನೆ? ಈ ಬದಲಾವಣೆಯಿಂದ ಅವನು ಸಾಧಿಸಿರುವುದೇನನ್ನು? ಮೂಲದ ಗೀತಾ ಪ್ರಸಂಗದ ಆ ಉಜ್ವಲವಾದ ನಾಟಕೀಯ ಸನ್ನಿವೇಶವನ್ನು ಯಥಾವತ್ತಾಗಿ ತರಬಹುದಾಗಿತ್ತಲ್ಲ ಎಂಬ ಪ್ರಶ್ನೆಗಳು ನಮಗೆ ಏಳುವುದು ಸಹಜ. ಆ ಪ್ರಶ್ನೆಗಳಿಗೆ ಉತ್ತರವಾಗಿ ಕವಿಯ ಆಶಯ ಬಹುಶಃ ಹೀಗಿರಬಹುದು ಎಂದು ನಾವು ಊಹಿಸಲು ಸಾಧ್ಯವಿದೆ: ಅದೇನೆಂದರೆ, ಮೊದಲನೆಯದಾಗಿ ಇದು ವಿಕ್ರಮಾರ್ಜುನ ವಿಜಯ. ಕಥಾನಾಯಕನಾದ ಅರ್ಜುನನನ್ನು ತನ್ನ ಸ್ವಾಮಿಯಾದ ಅರಿಕೇಸರಿಯಲ್ಲಿ ಅಭಿನ್ನಗೊಳಿಸಿರುವುದರಿಂದಲೋ ಏನೊ, ಕವಿ ಮೂಲ ಭಾರತದ ಅರ್ಜುನನಿಗೆ ರಣರಂಗದ ಮಧ್ಯೆ ಒದಗಿದಂತಹ ಕ್ಲೈಬ್ಯವೆಂಬಂತೆ ತೋರುವ ನಡವಳಿಕೆ ತನ್ನ ಅರ್ಜುನನಿಗೆ ಒದಗಿತೆಂದು ಚಿತ್ರಿಸಲು ಒಪ್ಪದೆ ಆ ಸನ್ನಿವೇಶವನ್ನು ಹೀಗೆ ಬದಲಾಯಿಸಿಕೊಂಡಿರಬಹುದು. ಮತ್ತೊಂದು, ಆ ಉಭಯ ಸೇನೆಗಳ ಮಧ್ಯೆ, ಇಂಥಾ ವಿಸ್ತಾರವಾದ ಗೀತೋಪದೇಶವಾಯಿತೆಂದು ವಿಸ್ತರಿಸಿ ಚಿತ್ರಿಸುವುದು, ಆ ವ್ಯಾಸಭಾರತದ ಹರಹಿಗೆ ಹೇಗೋ ಹೊಂದಿಕೊಳ್ಳಬಹುದಾದರೂ, ವಾಸ್ತವ ದೃಷ್ಟಿಯಿಂದ ನೋಡುವುದಾದರೆ ಮೂಲತಃ ಗೀತೆ ಕೆಲವೇ ಸಾರವತ್ತಾದ ಸಂಕ್ಷೇಪವಾದ ಮಾತಿನಲ್ಲಿ ಮುಗಿದಿರಲು ಸಾಧ್ಯವೆಂಬ ಗ್ರಹಿಕೆಯಿಂದಲೋ ಅಥವಾ ವ್ಯಾಸಭಾರತವನ್ನು ತಾನು ಸಂಗ್ರಹಿಸಿ ಬರೆಯುವಲ್ಲಿ ತನಗೆ ಉಚಿತವಾದದ್ದು ಹಿತಮಿತ ಮಾರ್ಗವೆ ಎಂದೋ ಕವಿ ಈ ಸಂದರ್ಭವನ್ನು ಇಷ್ಟು ಸಂಕ್ಷೇಪವಾಗಿ ಚಿತ್ರಿಸಿರಬಹುದು. ಈ ಬಹಿರಂಗದ ಮಾರ್ಪಾಡುಗಳು ಏನೇ ಇರಲಿ ಪಂಪಕವಿ ಮೂಲದಲ್ಲಿ ಹದಿನೆಂಟು ಅಧ್ಯಾಯಗಳಷ್ಟು ಹರಡಿರುವ ಗೀತಾ ತತ್ವವನ್ನು ಕೇವಲ ನಾಲ್ಕೇ ಪಂಕ್ತಿಗಳ ಒಂದು ವೃತ್ತದಲ್ಲಿ ಅತ್ಯಂತ ಸೊಗಸಾಗಿ ಕಡೆದಿರಿಸಿದ್ದಾನೆ ಎಂಬುದು ವಿಶೇಷದ ಸಂಗತಿಯಾಗಿದೆ.

ಮುಂದುವರೆಯುತ್ತದೆ.

Leave a Reply