ಅಂಟಿಕೊಳ್ಳದೆ ಕರ್ಮ ಮಾಡು

ಅಂಟಿಕೊಳ್ಳದೆ ಕರ್ಮ ಮಾಡು
‘ಕರ್ಮದ ಮೇಲೆ ಮಾತ್ರವೇ ನಿನಗೆ ಹಿಡಿತ, ಫಲದ ಮೇಲಲ್ಲ, ಫಲವನ್ನೇ ಬಯಸುತ್ತ ಕರ್ಮ ಮಾಡಬೇಡ, ಹಾಗೆಂದು, ಕರ್ಮವನ್ನೇ ಮಾಡದೇ ಇರಬೇಡ’ ಎಂದು ‘ಕರ್ಮಣ್ಯೇವಾಧಿಕಾರಸ್ತೇ’ – ಶ್ಲೋಕದ ಮೂಲಕ ಗೀತಾಚಾರ್ಯನು ವಿವರಿಸಿದ್ದ. ಹಾಗಾದರೆ ಕರ್ಮವನ್ನು ಇನ್ನಾವ ಭಾವದಿಂದ ಮಾಡಬೇಕು? ಧ್ಯೇಯವಿಲ್ಲದೆ ಕರ್ಮವನ್ನು ಮಾಡುವ ಉತ್ಸಾಹ-ಪ್ರೇರಣೆಗಳಾದರೂ ಹೇಗೆ ಸಿಕ್ಕಾವು? ಎಂದೆನಿಸುವುದು ಸಹಜವೇ. ನಿಜ ಧ್ಯೇಯವೊಂದಿರಲೇಬೇಕು. ಆದರೆ ಆ ಧ್ಯೇಯವು ಯಾವುದಾಗಿದ್ದರೆ ಶ್ರೇಯಸ್ಸು? ಕೃಷ್ಣನು ಹೇಳುತ್ತಾನೆ:
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ|
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ||
(ಯೋಗದಲ್ಲಿ ನೆಲೆನಿಂತು ಕರ್ಮವನ್ನಾಚರಿಸು, ಸಿದ್ಧಿ ಅಸಿದ್ಧಿಗಳ ವಿಷಯದಲ್ಲಿ ಸಮನಾಗಿರು. ಈ ಸಮತ್ವವೇ ಯೋಗವೆನಿಸುತ್ತದೆ.) ಭಗವದ್ಗೀತೆ: 2.48
‘ಯೋಗದಲ್ಲಿ ನೆಲೆನಿಲ್ಲು’ ಎನ್ನುತ್ತಿದ್ದಾನೆ ಕೃಷ್ಣ. ‘ಯೋಗ’ ಎಂದರೆ ‘ನಮ್ಮ ಸ್ವರೂಪದಲ್ಲಿ ನಾವು ಸೇರಿರುವುದು’. ಅದೇ ನಮ್ಮ ಧ್ಯೇಯವಾಗಬೇಕು ಎಂದರ್ಥ. ‘ನಮ್ಮ ಸ್ವರೂಪ’ ಎಂದರೆ ಬದಲಾಗದೆ ಅವಿನಾಶಿಯಾಗಿ ನಮ್ಮ ಅಂತರಂಗದಲ್ಲಿ ಇರುವ ‘ಆತ್ಮಸ್ವರೂಪ’. ಈ ಅವಿನಾಶಿ-ಆತ್ಮದ ಬಗ್ಗೆ ಕೃಷ್ಣನು ಸಾಕಷ್ಟು ಹೇಳಿದ್ದನ್ನು ನೋಡಿದ್ದೇವೆ. ನಮ್ಮ ‘ಗೋಳಿ’ಗೆಲ್ಲ ಕಾರಣ ನಾವು ಆತ್ಮಭಾವವನ್ನು ಕಳೆದುಕೊಂಡದ್ದೇ ಆಗಿದೆ. ದೇಹ-ಮನೋ-ಬುದ್ಧಿಗಳ ವಿಕಾರಗಳನ್ನು ‘ನಮ್ಮ ಅವಸ್ಥೆ’ಗಳೆಂದು ಭ್ರಮಿಸಿ ಅತಿಶಯವಾಗಿ, ಪ್ರತಿಕ್ರಯಿಸುತ್ತ ಸುಖದುಃಖಗಳಲ್ಲಿ ಹೊಯ್ದಾಡುವುದೇ ಆಗಿದೆ. ಈ ವ್ಯಾಮೋಹದ ಭರದಲ್ಲಿ ಬುದ್ಧಿಯಲ್ಲಿ ಸತ್ಯಧರ್ಮಗಳ ಸ್ಪಷ್ಟತೆ ಕದಡಿದಂತಾಗಿ, ಗೊಂದಲವೇಳುತ್ತದೆ. ಕರ್ಮಗಳೆಲ್ಲ ಏರುಪೇರಾಗುತ್ತವೆ. ಇದಕ್ಕೆಲ್ಲ ಪರಿಹಾರ ಎಂದರೆ ಆತ್ಮಭಾವದ ಪುನಃಪ್ರಕಾಶನ-ವ್ಯವಹಾರದಲ್ಲಿ ಧರ್ಮವರಿತು ಕರ್ಮವನ್ನಾಚರಿಸುತ್ತಿರಬೇಕು. ಆದರೆ ಪ್ರಜ್ಞೆಯನ್ನು ಯೋಗದೆತ್ತರಕ್ಕೆ ಏರಿಸುತ್ತಿರಬೇಕು. ಸಂಗಂ ತ್ಯಕ್ತ್ವಾ (ಸಂಗವನ್ನು ಬಿಟ್ಟು) ಎನ್ನುವ ಮಾತನ್ನು ಸೇರಿಸುತ್ತಾನೆ ಕೃಷ್ಣ. ‘ಸಂಗ’ ಎಂದರೇನು? ಜನರ ಸಂಗವೆಂದೇ? ಕೆಲಸಕಾರ್ಯಗಳ ಸಂಗವೆಂದೇ? ಅಲ್ಲ! ‘ಸಂಗ’ ಎಂದರೆ ಮನಸ್ಸು ಫಲಗಳೊಂದಿಗೆ ಬೆಳೆಸಿಕೊಳ್ಳುವ ‘ಭಾವನಾತ್ಮಕ ಸಂಬಂಧ’, ‘ಅವಾಸ್ತವಿಕ ಕನಸುಗಳು’ ಎಂದರ್ಥ. ಮನಸ್ಸು ಸುಮ್ಮನಿರಲಾರದು. ಕನಸುಗಳನ್ನು ಹೆಣೆಯುತ್ತ ಅದನ್ನೆಲ್ಲ ವಾಸ್ತವದಲ್ಲಿ ಕಾಣುವ ಹಂಬಲವನ್ನು ಮೂಡಿಸುತ್ತಲೇ ಇರುತ್ತದೆ. ಈ ಹಂಬಲದ ಬೆನ್ನಟ್ಟಿದಾಗಲೇ ನಾವು ನೆಮ್ಮದಿ ಕಳೆದುಕೊಳ್ಳುವುದು. ಹಾಗಾಗಿ –‘ಸಂಗ’ವನ್ನು ಬಿಟ್ಟು, ಯೋಗದ ನೆಲೆಯಲ್ಲಿ ಪ್ರಜ್ಞೆಯನ್ನಿಟ್ಟು ಕರ್ಮವನ್ನಾಚರಿಸು’ ಎನ್ನುವುದು ಕೃಷ್ಣನ ನಿರ್ದೇಶ.
ಈ ‘ಸಂಗ’ ಎನ್ನುವುದು ಅನೂಹ್ಯವೂ ಅನಿರ್ವಚನೀಯವೂ ಭಯಂಕರವಾದ ಶಕ್ತಿ. ಅದು ನಮ್ಮನ್ನು ಕಟ್ಟಿಹಾಕಿ ನರಳಿಸುತ್ತಿದ್ದರೂ, ನಮಗದು ಗೋಚರಿಸುವುದೇ ಇಲ್ಲ! ‘ನಾನು-ನೀನು’ ಎಂಬ ಪ್ರತ್ಯೇಕತಾಭಾವವನ್ನು ಮೂಡಿಸಿ ಸುಂದರ ಕುಟುಂಬಗಳನ್ನೂ ಚಿರಕಾಲದ ಸ್ನೇಹಸಂಬಂಧಗಳನ್ನೂ ಒಡೆದು ಬೀಳಿಸುವುದು ಈ ‘ಸಂಗ’ವೇ! ಮತ -ಪಂಥ-ಅಭಿಪ್ರಾಯ-ಸಿದ್ಧಾಂತಗಳ ನಿಮಿತ್ತವಾಗಿ ಮನುಷ್ಯರಲ್ಲಿ ಅಂಧಾಭಿಮಾನವನ್ನು ಮೂಡಿಸಿ, ಗುಂಪುಗಾರಿಕೆ ವೈಮನಸ್ಯ ಕಲಹಗಳನ್ನೂ ಹುಟ್ಟಿಸುವುದೂ ಈ ಸಂಗವೆಂಬ ಶಕ್ತಿಯೇ! ಕರ್ತವ್ಯ-ಜೀವನನಿರ್ವಹಣೆಗಳ ಸದುದ್ದೇಶದಿಂದಲೇ ಮೊದಲಾಗುವ ಉದ್ಯೋಗ-ವ್ಯಾಪಾರ-ವೃತ್ತಿಗಳ ಪಾವಿತ್ರ್ಯವನ್ನು ಕೆಡಿಸಿ, ಭ್ರಷ್ಟಾಚಾರ-ಪೈಪೋಟಿಗಳನ್ನೂ ದಂಧೆ-ರಾದ್ಧಾಂತಗಳನ್ನೂ ಹುಟ್ಟಿಸುವುದು ಈ ಸಂಗವೆಂಬ ಶತ್ರುವೇ! ಜ್ಞಾನವಿನಿಮಯ ಮಾಡುವ ಉತ್ತಮೋದ್ದೇಶದಿಂದಲೇ ಹುಟ್ಟಿ ಬೆಳೆಯುವ ಶಿಕ್ಷಣಸಂಸ್ಥೆಗಳೂ, ಕಾಲಕ್ರಮದಲ್ಲಿ ಯೋಗ್ಯತಾಪತ್ರದ ವ್ಯಾಪಾರಕೇಂದ್ರಗಳಾಗುವುದೂ, ಧರ್ಮಸಂಸ್ಕೃತಿಗಳನ್ನು ತಾವೂ ಆಚರಿಸದ, ಮಕ್ಕಳಿಗೂ ಕಲಿಸದ ದುಬಾರಿ ಕಟ್ಟಡ-ಮಾತ್ರಗಳಾಗಿ ಉಳಿಯುವುದೂ ಈ ಸಂಗದ ಪರಿಣಾಮವಾಗಿಯೆ! ಅಷ್ಟೇ ಅಲ್ಲ! ಸದ್ದಿಲ್ಲದೆ ನಿಃಸ್ವಾರ್ಥಸೇವೆ, ಆಧ್ಯಾತ್ಮಿಕ ಸಾಧನೆಗಳನ್ನು ಮಾಡುತ್ತ ನಿಗರ್ವಿಯಾಗಿ ಇರಹೊರಟವರನ್ನೂ ಬಿಡದು ಈ ಸಂಗ! ‘ನಾನೆಂತಹ ದೊಡ್ಡ ಸಾಧಕ! ನಾನೆಷ್ಟು ತ್ಯಾಗ-ಸೇವೆಗೈದಿದ್ದೇನೆ! ನಾನೇನೋ ವಿಶೇಷ! ನನ್ನನ್ನು ಜನರು ಗುರುತಿಸಬೇಕು’ ಎಂಬ ಮನ್ನಣೆಯ ಹುಚ್ಚನೂ ಮೂಡಿಸುವುದುಂಟು! ಸತ್ಯ ಧರ್ಮಗಳನ್ನೇ ಅನುಸಂಧಾನಮಾಡುತ್ತ, ಅದನ್ನೇ ಪ್ರಸಾರಗೈಯುವ ಮಠ-ಮಂದಿರ-ಸತ್ಸಂಗಕೇಂದ್ರಗಳಲ್ಲಿಯೂ ‘ನಮ್ಮ ಮಠ, ನಮ್ಮ ಗುರು, ನಮ್ಮ ಸಿದ್ಧಾಂತ ಶ್ರೇಷ್ಠ. ನಿಮ್ಮದಲ್ಲ!’ ಎನ್ನುವ ತಾರತಮ್ಯವನ್ನು ಮೂಡಿಸಿ, ಪೈಪೋಟಿಗಿಳಿಸಿ, ವಿತ್ತ-ಭೂಮಿ-ಶಿಷ್ಯಕೋಟಿಯ ಸಂಖ್ಯಾವರ್ಧನದತ್ತ ಸೆಳೆದುಹಾಕಿಬಿಡುತ್ತದೆ! ಅದಕ್ಕೇ ಶ್ರೀರಾಮಕೃಷ್ಣನು ಸಾಧಕರಿಗೆ ಎಚ್ಚರಿಸುತ್ತಾರೆ-ಕಾಡಿಗೆ ತುಂಬಿದ ಕೋಣೆಯಲ್ಲಿ ಎಷ್ಟೇ ಎಚ್ಚರದಿಂದ ನಡೆದರೂ ಒಂದಷ್ಟು ಕಪ್ಪು ಮೈಕೈಗೆ ಹತ್ತಿಯೇ ಬಿಡುತ್ತದೆ, ಹುಷಾರ್!’ ಎಂದು! ಹೀಗೆ, ಸತ್ಕರ್ಮಗಳನ್ನು ಪ್ರಾರಂಭಿಸುವ ಸಾತ್ವಿಕರದೇ ಇಂತಹ ಗತಿಯಾಗಬಲ್ಲುದು ಎಂದಮೇಲೆ, ಇನ್ನು ಪರಜನಾಂಗಗಳ ಜನ-ಧನವನ್ನು ಸೆಳೆಯುತ್ತ ತಮ್ಮ ಮೇಲ್ಮೆಯನ್ನು ಸ್ಥಾಪಿಸುವ ಆಕ್ರಮಣಶಾಹಿತನದ (Colonialistic) Semitic ಮತಗಳ ಬಗ್ಗೆ ಹೇಳುವುದಿನ್ನೇನು ಉಳಿದಿದೆ? ಒಟ್ಟಿನಲ್ಲಿ ಪಂಡಿತ-ಪಾಮರರೆನ್ನದೆ, ಎಲ್ಲರನ್ನೂ ಒಂದಲ್ಲ ಒಂದು ಬಗೆಯ ಬಾಹ್ಯ-ವಿಷಯಾಕರ್ಷಣೆಗೋ, ಮೋಹಕ್ಕೋ, ಸೈದ್ಧಾಂತಿಕ ಮಮಕಾರಕ್ಕೋ, ಕಟ್ಟಿಹಾಕಿ ಕುಣಿಸುವ ಪ್ರಚಂಡ ಶಕ್ತಿ ಈ ಸಂಗಕ್ಕಿದೆ! ಈ ಸಂಗದ ಬಗ್ಗೆ ಮೊದಲೇ ಹೇಳುತ್ತಿದ್ದಾನೆ ಕೃಷ್ಣ. ಏಕೆಂದರೆ, ಕರ್ಮದಲ್ಲೂ ತತ್ಸಂಬಂಧಿ ವ್ಯಕ್ತಿ-ವಸ್ತು-ಸಂದರ್ಭ-ಫಲಾಫಲಗಳಲ್ಲೂ, ಯಾಔಉದರಲ್ಲಿ ಬೇಕಾದರೂ ಈ ‘ಸಂಗ’ ಮೊಳೆತು ನಿಲ್ಲಬಲ್ಲುದುದ! ಅದು ಬೀಜಾಂಕುರವಾಗುತ್ತಿರುವಾಗಲೇ ಅದನ್ನು ಕಿತ್ತೊಗೆದು ನಿರ್ಲಿಪ್ತಿಯನ್ನು ಉಳಿಸಿಕೊಳ್ಳಬೇಕು ಎನ್ನುವ ವಿವೇಕವನ್ನು ಬೋಧಿಸುತ್ತಿದ್ದಾನೆ ಗುರುವರೇಣ್ಯನಾದ ಕೃಷ್ಣನು. ಅಸಂಗತ್ವದ ಕಲೆಯನ್ನು ಅರಿತವನಿಗೆ ಯಾವ ಕರ್ಮವೂ ಭಾರವೆನಿಸದು! ಯಾವ ಶಕ್ತಿಯೂ ಕಟ್ಟಿಹಾಕಲಾಗದು!
ಡಾ. ಆರತೀ ವಿ ಬಿ
ಕೃಪೆ : ವಿಜಯವಾಣಿ

Leave a Reply