ಬದುಕಿಗೆ ಭಗವದ್ಗೀತೆ – ನಿರ್ವೇದವನ್ನು ತಾಳು, ಯೋಗದಲ್ಲಿ ಬಾಳು

ಬದುಕಿಗೆ ಭಗವದ್ಗೀತೆ – ನಿರ್ವೇದವನ್ನು ತಾಳು, ಯೋಗದಲ್ಲಿ ಬಾಳು

ಲೌಕಿಕ ವ್ಯವಹಾರದಲ್ಲಿರುತ್ತಲೇ ಲೋಕೋತ್ತರದ ಯೋಗದಲ್ಲಿ ನೆಲೆಗೊಂಡ ಕರ್ಮಯೋಗಿಗಳ ಉದಾಹರಣೆಗಳನ್ನು ನೋಡಿದ್ದೇವೆ. ಸ್ವತಃ ಶ್ರೀಕೃಷ್ಣನ ಉದಾಹರಣೆಯನ್ನೇ ನೋಡಿದ್ದೇವೆ. ಈ ನಿರ್ಲಿಪ್ತ ಕರ್ಮಯೋಗವು ಅಷ್ಟು ಸುಲಭ ಸಾಧ್ಯವಲ್ಲ, ನಿಜ. ಆದರೇ ಅಸಾಧ್ಯವೂ ಅಲ್ಲ. ಅದನ್ನೇ ಅನುಸರಿಸಿ ಬದುಕಿನಲ್ಲಿ ದಾಟಿಕೊಳ್ಳಬೇಕಲ್ಲದೇ ಬೇರೆ ಮಾರ್ಗವೂ ಇಲ್ಲ! ಇದೇ ಸಕಲ ಶಾಸ್ತ್ರಗಳ ನಿರ್ದೇಶ, ಆಚಾರ್ಯ ಕೃಷ್ಣನ ದಿಗ್ದರ್ಶನ ಕೂಡ! ಕೃಷ್ಣನು ಮುಂದುವರೆಸುತ್ತಾನೆ-
ಯದಾತೇ ಮೋಹಕಲಿಲಂಬುದ್ಧಿರ್ವ್ಯತಿತರಿಷ್ಯತಿI
ತದಾಗಂತಾಸಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯಚ II
ಯಾವಾಗ ನಿನ್ನ ಬುದ್ಧಿಯು ಈ ಮೋಹರೂಪದ ಕೆಸರನ್ನು ದಾಟುವುದೋ, ಆಗ ನೀನು ಕೇಳಿರುವ ಕೇಳುತ್ತಿರುವ ಎಲ್ಲ ಭೋಗಗಳ ವಿಷಯವಾಗಿ ನಿನಗೆ ನಿರ್ವೇದ ಭಾವಮೂಡುತ್ತದೆ.
ಶ್ರುತಿ ವಿಪ್ರತಿಪನ್ನಾತೇಯ ದಾಸ್ಥಾಸ್ಯತಿನಿಶ್ಚಲಾI
ಸಮಾಧಾವಚಲಾ ಬುದ್ಧಿಸ್ತದಾಯೋಗಮವಾಪ್ಸ್ಯಸಿ II
(ಭೋಗಗಳ ಕುರಿತಾಗಿ) ಕೇಳಿ ಕೇಳಿ ವಿಚಲಿತವಾದ ಬುದ್ಧಿಯು (ಅದನ್ನೆಲ್ಲ ಕಳಚಿಕೊಂಡು) ಸಮಾಧಿಯನ್ನು ಪಡೆದಾಗ ನೀನು ಯೋಗವನ್ನು ಹೊಂದುವೆ.
ನಾವು ಇಹಲೋಕದ ಹಾಗೂ ಪರಲೋಕಗಳ ಸುಖ-ಸಂಪದಗಳ ಬಗ್ಗೆ ಕೇಳುತ್ತಲೇ ಬೆಳೆಯುತ್ತೇವೆ. ಸುಂದರ ಕನಸುಗಳನ್ನು ಹೆಣೆದುಕೊಳ್ಳುತ್ತೇವೆ. ಸುಖದಾಸೆಯಿಂದ ಹೆಣ್ಣು-ಹೊನ್ನು-ಮಣ್ಣುಗಳನ್ನು ಬಾಚಿಕೊಳ್ಳುತ್ತೇವೆ. ಸ್ವರ್ಗ-ಕೀರ್ತಿ-ಸಾರ್ವಭೌಮತ್ವಗಳ ಕನಸನ್ನೂ ಕಾಣುತ್ತೇವೆ. ನಮ್ಮ ಪೂರ್ವಕೃತ ಸುಕೃತ-ದುಷ್ಕೃತಗಳಿಗನುಗುಣವಾಗಿ ಅವು ಬಂದುಹೋಗುತ್ತವೆ. ಭೋಗವಸ್ತುಗಳು ಕ್ಷಣಿಕ, ನಶ್ವರ. ಅವುಗಳನ್ನು ಯಥಾವತ್ತಾಗಿ ನೋಡಿದರೆ, ಅವುಗಳ ನಶ್ವರತೆ ಅರ್ಥವಾಗಿ, ವಿರಕ್ತಿಯುಂಟಾಗುತ್ತದೆ. ಆದರೆ ಹಾಗೆ ನೇರವಾಗಿ ನೋಡುವುದಿಲ್ಲ. ’ಮೋಹ’ವೆಂಬ ’ಬಣ್ಣದ ಕನ್ನಡಕ’ದ ಮೂಲಕ ನೋಡುತ್ತೇವೆ. ಈ ’ಕನ್ನಡಕ’ವು ಭೋಗವಸ್ತುಗಳನ್ನು ಇರುವುದಕ್ಕಿಂತ ಹೆಚ್ಚು ವರ್ಣಮಯವಾಗಿಯೂ ಆಕರ್ಷಕವಾಗಿಯೂ ದೊಡ್ಡದಾಗಿಯೂ ನಿಜದಂತೆಯೂ ತೋರಿಸುತ್ತಿದೆ! ಹಾಗಾಗಿ ಅವುಗಳನ್ನು ಪಡೆಯಲು ಹಂಬಲಿಸುತ್ತೇವೆ. ಮೋಹವೆಂಬ ಬಣ್ಣದ ಕನ್ನಡಕವನ್ನು ಕಳಚಿಟ್ಟ ಜ್ಞಾನಿಯು ಭೋಗಗಳ ನಶ್ವರತೆಯನ್ನು ಅರಿಯುತ್ತಾನೆ. ಆದ್ದರಿಂದ ಆತನ ವ್ಯಾಮೋಹವಳಿದು ವಿರಕ್ತಿ ಮೂಡುತ್ತದೆ. ಅದೇ ನಿರ್ವೇದಭಾವ. ನಿರ್ವೇದದಲ್ಲೇ ಸಮಾಧಿಯುಂಟಾಗುವುದು. ಸಮಾಧಿ-ಸ್ಥಿತಿಯಲ್ಲೇ ಜೀವಿಯು ಯೋಗವನ್ನು ಪಡೆಯುವುದು.
ಮಾಯೆಯು ನಮ್ಮ ’ಧೀ’ಯನ್ನು(ಪ್ರಜ್ಞೆಯನ್ನು) ಸಮತ್ವದ ನೆಲೆಯಿಂದ ಹೊರಸೆಳೆದು ಇಂದ್ರಿಯಾನುಭವಕ್ಕೆ ಸಿಲುಕಿಸಿ, ನಿರಂತರ ಆಟವಾಡಿಸುತ್ತದೆ! ನಾವು ಬಾಹ್ಯದಿಂದ ಕಳಚಿಕೊಂಡು ಮತ್ತೊಮ್ಮೆ ನಮ್ಮ ಅಂತರಂಗದಲ್ಲಿ ಸಮತ್ವದ ಸ್ಥಿತಿಯನ್ನು ಮರಳಿ ಸಾಧಿಸಬೇಕು. ಆಗಲೇ ಈ ’ಜೀವನದಾಟದಲ್ಲಿ ಗೆದ್ದಂತೆ’! ’ಗೆದ್ದಾಗಲೇ’ ಮನಸ್ಸು ಮೋಹಮುಕ್ತವಾಗುವದು, ಶಾಂತವಾಗುವದು. ಬುದ್ಧಿಯು ದೃಢವಾಗುವದು, ಧ್ರಮವನ್ನರಿಯುವುದು, ಯೋಗವು ಸಿದ್ಧಿಸುವದು. ಹೀಗೆ ಮೋಹಮುಕ್ತನಾಗಬಲ್ಲ ವ್ಯಕ್ತಿಯು ಮಾತ್ರವೇ ’ಕರ್ಮಯೋಗಿ’ಯಾಗುತ್ತಾನೆ. ಎಲ್ಲವನ್ನೂ ಮಾಡಿಯೂ, ’ನ ಮಮ’ ಎಂದು ನಿರ್ಲಿಪ್ತನಾಗಿರುತ್ತಾನೆ! ಅಂತಹವನಿಂದಲೇ ಮಹತ್ತರವಾದ ಲೋಕಕಲ್ಯಾಣಕಾರೀ ಕರ್ಮಗಳು ನಡೆಯಬಲ್ಲವು. ಹೀಗೆ, ಮೋಹವನ್ನು ಕಳಚಿಟ್ಟು, ಕರ್ಮಯೋಗದ ನೆಲೆಗೇರುವಂತೆ ಅರ್ಜುನನಿಗೆ ಶ್ರೀಕೃಷ್ಣನು ಸೂಚಿಸುತ್ತಿದ್ದಾನೆ.
ಕೃಷ್ಣನು ಹೇಳುವ ಈ ಮಾತುಗಳು ಸಕಲ ಶಾಸ್ತ್ರಗಳ ಸಾರವೇ ಆಗಿದೆ. ಸನಾತನ ಧರ್ಮದ ಸಾರಭೂತ ಸಂದೇಶವೇ ಆಗಿದೆ. “ಇದೆಲ್ಲ ಕೇಳಲು ಚೆನ್ನಾಗಿದೆಯಪ್ಪ, ಮಾಡುವುದು ಕಷ್ಟ!” ಎಂದು ನಾವು ಕೈಚೆಲ್ಲಿ ಕೂತುಬಿಡುತ್ತೇವೆ. ಆದರೇ ಏನು ಮಾಡುವುದು? ಬೇರೆ ಉಪಾಯವಿಲ್ಲವಲ್ಲ! ಈಗಿರುವಂತೆ, ಜೀವನದ ಸುಖದುಃಖಗಳಿಗೆ ಅಂಟಿಕೊಂಡು ಎದ್ದೆದ್ದು ಬೀಳುತ್ತ ಬಳಲುತ್ತಲೇ ಇರೋಣವೆ? ಅಥವಾ ಮೋಹವನ್ನು ತ್ಯಜಿಸಿ, ಯೋಗವನ್ನು ಸಿದ್ಧಿಸಿಕೊಂಡು ಕೃತಾರ್ಥ ಜೀವನವನ್ನು ನಡೆಸೋಣವ? ಅನಿಶ್ಚಿತ ಸುಖಸಂಪದಗಳನ್ನು ಬೆನ್ನಟ್ಟಿ ಅವಿಶ್ರಾಂತರಾಗೋಣವೇ? ಅಥವಾ, ಯೋಗದ ಮೂಲಕ, ಆತ್ಮಶಕ್ತಿಯನ್ನು ಸಾಕ್ಷಾತ್ಕರಿಸಿಕೊಂಡು ಸಾರ್ತಬಾಳನ್ನು ಬಾಳೋಣವೆ? ಆಯ್ಕೇ ನಮ್ಮದೇ!
ಕೆಲವೊಮ್ಮೆ ನಮಗೆ ಹೀಗೂ ಅನಿಸುವುದುಂಟು- “ಅದೆಲ್ಲ ಸರಿಯೇ! ಆದರೆ ಮೊದಲು ನಮ್ಮ ಭೋಗಗಳೆಲ್ಲ ಪೂರೈಸಿಕೊಂಡು ಬಿಡೋಣ! ಆಮೇಲೆ ಯೋಗದ ವಿಷಯ ನೋಡೋಣ” ಎಂದು. ಆದರೆ ಭೋಗಗಳು ಮುಗಿಯಲೆಂದು ಕಾದರೆ, ಕಾಯುತ್ತಲೇ ಇರಬೇಕು!ಪರಮಹಂಸರು ಹೇಳುತ್ತಾರೆ- “ಸಮುದ್ರಸ್ನಾನಕ್ಕೆಂದು ಹೋದವರು, ಅಲೆಗಳೆಲ್ಲ ಶಾಂತವಾಗಲಿ, ಆಮೇಲೆ ಮೀಯುತ್ತೇನೆಂದರೆ, ಅದು ಹೇಗಾದೀತು? ಅಲೆಗಳನ್ನೆದುರಿಸುತ್ತಲೇ ಮಿಂದು ಬರಬೇಕು”. ಜೀವನ ಸಾಗರದಲ್ಲಿ, ಸುಖ-ದುಃಖದಲೆಗಳಿಗೆ ಕೊನೆ ಮೊದಲಿಲ್ಲ. ಅವುಗಳ ನಡುವೆಯೇ ಧರ್ಮಕರ್ಮಗಳ ’ಸ್ನಾನ’ವನ್ನಾಚರಿಸಿ ಗೆದ್ದುಕೊಳ್ಳಬೇಕು. ಈ ಜೀವನದ ಸುಖಭೋಗಗಳಾಗಲಿ ದುಃಖದುಗುಡಗಳಾಗಲಿ ’ಮುಗಿಯುವ’ ಮಾತೇ ಇಲ್ಲ! “ಬೆಂಕಿಗೆ ತೃಪ್ತಿಯಾಗಲೆಂದು ತುಪ್ಪ ಹಾಕಿದಷ್ಟೂ, ಅದು ಮತ್ತಷ್ಟು ಉರಿಯುತ್ತದೆ. ಅಂತೆಯೇ ಭೋಗಾಗ್ನಿಗೆ ತೃಪ್ತಿಪಡಿಸುವ ಯತ್ನವೂ ವಿಫಲ” ಎನ್ನುವುದು ಪುರಾಣ ಪ್ರಸಿದ್ಧ ಯಯಾತಿ ಮಹಾರಾಜನ ಅನುಭವದ ನುಡಿ! ಭೋಗದಾಸೆ ಎನ್ನುವುದು ಮತ್ತೇನೂ ಅಲ್ಲ, ಅದು ತನ್ನನ್ನು ತಾನು ಮರೆತ ಜೀವಿಯ ಅಂತರಂಗದಲ್ಲಿ ಮೂಡುವ ಭಾವವಿಕಾರ, ಅಷ್ಟೆ! ಈ ವಿಕಾರವು ಕಳೆಯುತ್ತಲೇ, ಅರಿವು ಮೂಡುತ್ತದೆ, ನಿರ್ವೇದ ಭಾವವುಂಟಾಗುತ್ತದೆ. ಜೀವಿಯು ಯೋಗಮುಖನಾಗುತ್ತಾನೆ.
“ತಳವಿಲ್ಲದ ಬುಟ್ಟಿಯಂತೆ ಎಂದೂ ’ತುಂಬದ’ ಭೋಗದಾಸೆಯ ಭ್ರಾಂತಿಯನ್ನು ಬಿಟ್ಟು, ನಿರ್ವೇದ ಭಾವವನ್ನು ತಾಳಿ, ಯೋಗವನ್ನು ಸಿದ್ಧಿಸಿಕೋ” ಎಂಬ ಶ್ರೀಕೃಷ್ಣನ ಈ ಮಾತುಗಳು ನಮ್ಮ ಅಂತರಂಗದಲ್ಲಿ ವಿವೇಕವನ್ನು ಮೂಡಿಸಲಿ.
ಡಾ ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply