ಪ್ರಾಚೀನಕಾಲದ ಭೇದಾತೀತ ವರ್ಣಪದ್ಧತಿ


ಪ್ರಾಚೀನಕಾಲದ ಭೇದಾತೀತ ವರ್ಣಪದ್ಧತಿ

‘ನಿಸರ್ಗವು ತಾನಾಗಿಯೇ ನಿರ್ವಿುಸುವ ಈ ವರ್ಣವಿಂಗಡಣೆಯನ್ನು ತಡೆಯಲು ಸಾಧ್ಯವಿಲ್ಲ; ಬಾಹ್ಯಾಂತರಿಕ ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತ, ನವಾವತಾರಗಳಲ್ಲಿ ಅದು ಮರುಕಳಿಸುತ್ತಲೇ ಸಾಗುತ್ತದೆ’ ಎನ್ನುವುದು ನೋಡುತ್ತಿದ್ದೆವು.

ಭಾರತದಲ್ಲಿನ ವರ್ಣವ್ಯವಸ್ಥೆಯು ಕೇವಲ ‘ಜಾತಿ-ತಾರತಮ್ಯದ ಹೇರಿಕೆ’ಯಾಗಿರದೆ, ವ್ಯಕ್ತಿಗಳಿಗೂ ಸಮೂಹಗಳಿಗೂ ವೈಯಕ್ತಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ವಿಕಾಸಕ್ಕೆ ಅವಕಾಶವೀಯುತ್ತ ಬಂದಿರುವುದರಿಂದಲೇ ಅದು ಸಹಸ್ರಮಾನಗಳ ಕಾಲ ಮುಂದುವರೆಯಲು ಸಾಧ್ಯವಾಯಿತು. ಅದು ಸಮಾಜಘಾತಕವಾದ ವ್ಯವಸ್ಥೆಯಾಗಿದ್ದಲ್ಲಿ ಸ್ವಲ್ಪ ಕಾಲ ಆರ್ಭಟಿಸಿ ಬಳಿಕ ನಶಿಸಿಹೋಗುತ್ತಿತ್ತು. ವರ್ಣವ್ಯವಸ್ಥೆಯು ‘ಕೇವಲ ವ್ಯಕ್ತಿಯ ಹುಟ್ಟನ್ನಷ್ಟೇ ಹಿಡಿದು ಜಗ್ಗಾಡುವ ಜಾತಿಯ ಪಿಡುಗು ಆಗಿರದೆ, ಮನುಷ್ಯರ ಅಭಿರುಚಿ ಹಾಗೂ ಸತ್ವಸಾಮರ್ಥ್ಯಗಳನ್ನು ಅವಲಂಬಿಸಿ ಸತತವೂ ವಿಕಾಸವಾಗುವ ಪ್ರಕ್ರಿಯೆಯಾಗಿತ್ತು, ಗುಣಕರ್ವನುಸಾರವಾದ ಜೀವನವ್ಯವಸ್ಥೆಯಾಗಿ ಮತ್ತೆ ಮತ್ತೆ ಪರಿಷ್ಕಾರಗೊಳ್ಳುತ್ತಿತ್ತು’ ಎನ್ನುವುದಕ್ಕೆ ಪುರಾವೆಯಾಗಿ ಅನೇಕ ಉದಾಹರಣೆಗಳನ್ನು ವೇದಕಾಲೀನ, ಮಧ್ಯಯುಗ ಹಾಗೂ ಅರ್ವಾಚೀನ ಭಾರತೀಯ ಸಮಾಜದಲ್ಲಿ ನೋಡಬಹುದಾಗಿದೆ.

ಜಬಲಾ ಎಂಬ ದಾಸಿಯ ಮಗನಾದ ಜಾಬಾಲನು (ಸತ್ಯಕಾಮ), ತನ್ನ ತಂದೆ ಯಾರೆಂದೂ ಅರಿಯದವನು, ವಿದ್ಯೆಗಾಗಿ ಬಳಿಸಾರಿದಾಗ ಗುರುಗಳು, ಅವನ ಯೋಗ್ಯತೆಯನ್ನು ಮನಗಂಡು ಪ್ರೀತಿಯಿಂದ ವಿದ್ಯಾರ್ಜನೆಗೆ ದಾರಿತೋರಿದ ಕಥೆ ವೇದಕಾಲದ್ದಾಗಿದೆ. ‘ಇತರಾ’ ಎಂಬ ದಾಸಿಯ ಮಗನಾದ ಐತರೇಯಮಹರ್ಷಿಯ ನಾಮವೂ ವೇದಗಳಲ್ಲಿ ಅಮರವಾದದ್ದು! ದಾಸಿಯ ಮಗನಾದ ನಾರದರು ಸಂಸ್ಕಾರದಿಂದಲೂ ತಪಸ್ಸಿನಿಂದಲೂ ದೇವರ್ಷಿಯ ಸ್ತರಕ್ಕೇರಿದ ಕಥೆ ಗೊತ್ತಿಲ್ಲದವರು ಯಾರು? ಬ್ರಾಹ್ಮಣಪಿತನಾದ ಪುಲಸ್ತ್ಯಲ್ಲಿ ಜನಿಸಿದರೂ, ಲಂಕಾಪುರದ ರಾಜನಾಗಿ ಕ್ಷಾತ್ರಪ್ರವೃತ್ತಿಯನ್ನು ಮೆರೆದ ರಾವಣನ ಉದಾಹರಣೆ ರಾಮಾಯಣದಲ್ಲಿದೆ.

ಕ್ಷತ್ರಿಯನಾದ ಕೌಶಿಕರಾಜನು, ಬ್ರಾಹ್ಮವೃತ್ತಿಯನ್ನು ಹಿಡಿದು, ತಪಶ್ಚರ್ಯುಗಿಳಿದು ವಿಶ್ವಾಮಿತ್ರಮಹರ್ಷಿಗಳಾದ ಕಥೆಯೂ ಸುಪ್ರಸಿದ್ಧ. ಬೇಡರ ಕುಲದವರಾದ ಮತಂಗ ಮಹರ್ಷಿಯೂ, ಬೇಡತಿಯಾದ ಅವರ ಶಿಷ್ಯೆ ಶಬರಿಯೂ ಅಸಾಧಾರಣ ತಪಶ್ಚರ್ಯುಯ ಮೂಲಕ ಬ್ರಾಹ್ಮಸಿದ್ಧಿಗಳನ್ನು ಪಡೆದ ವೃತ್ತಾಂತಗಳು ರಾಮಾಯಣದಲ್ಲಿವೆ. ಬ್ರಾಹ್ಮಣನಾದ ಜಮದಗ್ನಿ ಮಹರ್ಷಿಯಲ್ಲಿ ಹುಟ್ಟಿದ ಭಗವಾನ್ ಪರಶುರಾಮರು, ಅದ್ವಿತೀಯ ಕ್ಷಾತ್ರಪ್ರವೃತ್ತಿಯನ್ನು ಮೆರೆದ ಕಥೆ ಪುರಾಣಪ್ರಸಿದ್ಧ. ಹುಟ್ಟಿನಿಂದಲೂ ವೃತ್ತಿಯಿಂದಲೂ ಮಾಂಸವ್ಯಾಪಾರಿಯಾದರೂ, ಮಹಾಜ್ಞಾನಿಯಾದ ಧರ್ಮವ್ಯಾಧನು, ಕರ್ತವ್ಯಭ್ರಷ್ಟನಾದ ಕೌಶಿಕನೆಂಬ ಬ್ರಾಹ್ಮಣನಿಗೆ ಧರ್ಮಕರ್ಮಗಳ ನೀತಿಯನ್ನು ಬೋಧಿಸುವ ಪ್ರಸಂಗವನ್ನು ಮಹಾಭಾರತವು ವಿವರಿಸುತ್ತದೆ.

ಸತ್ಯವತಿಯೆಂಬ ಬೆಸ್ತರ ಕನ್ಯೆಯ ಮಗನಾದ ಕೃಷ್ಣದ್ವೈಪಾಯನನು ತಪಃಸ್ವಾಧ್ಯಾಯಗಳಿಂದ ಪರಮೋನ್ನತಿಗೇರಿ, ಲೋಕಗುರು ‘ವೇದವ್ಯಾಸ’ರೆನಿಸಿದ್ದು ಪ್ರಸಿದ್ಧ ವಿಷಯವೇ. ಮತ್ಸ್ಯನ್ಯೆಯಾದ ಸ್ವತಃ ಸತ್ಯವತಿಯು ಕುರುರಾಜವಂಶದ ಮಹಾರಾಣಿಯ ಪಟ್ಟವನ್ನೇರಿದ್ದೂ ಆ ಕಾಲದ ಸಮಾಜದ ಮುಕ್ತಸ್ವರೂಪವನ್ನು ಸೂಚಿಸುತ್ತದೆ. ದಾಸಿಯ ಮಗನಾದ ಮಹಾತ್ಮ ವಿದುರನು ಹಸ್ತಿನಾಪುರ ಸಾಮ್ರಾಜ್ಯದ ಪ್ರಧಾನಮಂತ್ರಿಯ ಉನ್ನತಾಧಿಕಾರವನ್ನು ವಹಿಸಿದ್ದು ನಮಗೆ ಗೊತ್ತೇ ಇದೆಯಲ್ಲ! ಕಾಡುಜನಾಂಗದಲ್ಲಿ ಹುಟ್ಟಿದ ಅರುಂಧತಿಯನ್ನು, ಅವಳ ಸತ್ವಸಂಪನ್ನತೆಗಾಗಿ ಮೆಚ್ಚಿ ಕೈಹಿಡಿದ ವಸಿಷ್ಠ ಮಹರ್ಷಿಗಳ ಕಥೆಯೂ ಇದೆ. ಪಾತಿವ್ರತ್ಯದಿಂದಲೂ ವಿದ್ಯಾವಿಭವಗಳಿಂದಲೂ ಲೋಕೋತ್ತರ ಮನ್ನಣೆಗೆ ಪಾತ್ರಳಾದಂತಹ ಸಾಧಿ್ವ ಅರುಂಧತಿಯನ್ನು ಸ್ಮರಿಸದೆ ಇಂದಿಗೂ ಶುಭಕಾರ್ಯಗಳು ಜರಗುವಂತಿಲ್ಲ!

ಶ್ರೀರಾಮಚಂದ್ರನ ಮಡದಿಯೂ, ಭಾರತೀಯರ ಹೃದಯ ಸಾಮ್ರಾಜ್ಞಿಯೂ ಆದ ಸೀತಾದೇವಿಯು, ಹೊಲದಲ್ಲಿ ಅನಾಥಶಿಶುವಾಗಿ ಸಿಕ್ಕಾಗ, ಅವಳ ಹುಟ್ಟು-ಹಿನ್ನೆಲೆಗಳನ್ನು ಗಣಿಸದೆ, ಪರಮವಾತ್ಸಲ್ಯದಿಂದ ಸಾಕಿ ಬೆಳೆಸಿದವನು ಜನಕಮಹಾರಾಜ! ಕಿಷ್ಕಿಂಧೆಯ ವಾನರ ಕುಲದವರಾದ ಸುಗ್ರೀವಾಂಜನೇಯರಲ್ಲಿ ಅಮಿತ ಸ್ನೇಹವನ್ನು ತಾಳಿದ ರಾಮನಿಗೆ ಕುಲಭೇದದ ಪ್ರಶ್ನೆಯೇ ಏಳಲಿಲ್ಲ! ಶ್ರೀಕೃಷ್ಣನು ಕೈಹಿಡಿದ ಅಷ್ಟಮಹಿಷಿಯರ ಪೈಕಿ, ಜಾಂಬವತಿಯು ಅರಣ್ಯಕನ್ಯೆ (ಜಾಂಬವಂತನ ಮಗಳು). ಅರಣ್ಯವಾಸಿಯೂ ರಾಕ್ಷಸಕುಲದವನೂ ಆದ ಹಿಡಿಂಬಾಸುರನನ್ನು ಭೀಮನು ಹತ್ಯೆಗೈದಾಗ, ಅನಾಥಳಾದ ಅವನ ತಂಗಿ ಹಿಡಿಂಬೆಯನ್ನು ಕೈಹಿಡಿದು ಆದರಿಸುವಂತೆ ಭೀಮನಿಗೆ ಆಜ್ಞಾಪಿಸಿದವಳು ಸ್ವತಃ ಕುಂತೀದೇವಿ! ಕ್ಷತ್ರಿಯನಾದ ವಸುದೇವನು ನವಜಾತಶಿಶುವಾದ ಕೃಷ್ಣನನ್ನು ಗುಟ್ಟಾಗಿ ನಿಕ್ಷೇಪವಾಗಿರಿಸಿ ಬೆಳೆಸಿದ್ದು ಗೊಲ್ಲನಾದ ನಂದನ ಮನೆಯಲ್ಲಿ! ಬೇಡರ ದೊರೆ ಗುಹನು ಕ್ಷತ್ರಿಯನೂ ಅಯೋಧ್ಯಾ ರಾಜಕುಮಾರನೂ ಆದ ರಾಮನಿಗೆ ಅತ್ಯಾಪ್ತ ಗೆಳೆಯನಾಗಿದ್ದದ್ದು ಯಾರಿಗೆ ಗೊತ್ತಿಲ್ಲ?

‘ಹುಟ್ಟುಮಾತ್ರಕ್ಕೆ ಬ್ರಾಹ್ಮಣನನ್ನು ಪ್ರಶ್ನಾತೀತವಾಗಿ ಆದರಿಸುತ್ತಿದ್ದರು’ ಎಂಬ ಜಾತಿವಾದ ನಿಜವಾಗಿದ್ದಲ್ಲಿ, ವಾಲ್ಮೀಕಿ ಮಹರ್ಷಿಗಳು ತಮ್ಮ ರಾಮಾಯಣಕಾವ್ಯದಲ್ಲಿ ಬ್ರಾಹ್ಮಣನಾದ ರಾವಣನನ್ನು ಖಲನಾಯಕನಾಗಿ ಚಿತ್ರಿಸುವ ಧೈರ್ಯವನ್ನೇ ಮಾಡುತ್ತಿರಲಿಲ್ಲ! ಜಾತಿವಾದವೇ ಪ್ರಧಾನವಾಗಿದ್ದಲ್ಲಿ ಸಮಾಜವೂ ಆ ಕಥಾನಕವನ್ನು ಸ್ವೀಕರಿಸುತ್ತಿರಲಿಲ್ಲ! ಪುರಾಣಕಾವ್ಯೇತಿಹಾಸಗಳು ಧರ್ಮಕರ್ಮಗಳನ್ನು ಬಿಟ್ಟು ಕುಮಾರ್ಗಕ್ಕೆ ಇಳಿದವರ ಬಗ್ಗೆ ಹೇಳುವಾಗ ವರ್ಣ-ಲಿಂಗಗಳಿಗೆ ಪಕ್ಷಪಾತ ತೋರದೆ ಕೇವಲ ಗುಣಕರ್ಮಗಳಿಂದ ‘ಉತ್ತಮರೂ ಅಧಮರೂ’ ಆದವರನ್ನು ಉಲ್ಲೇಖಿಸುತ್ತ ಬಂದಿವೆ ಎನ್ನುವುದನ್ನು ಮರೆಯಬಾರದು.

ಇವೆಲ್ಲ ವೇದಪುರಾಣಗಳ ಕೆಲವೇ ಕೆಲವು ಉಲ್ಲೇಖಗಳು. ಮುಂದೆ ಇತಿಹಾಸದ ಉದಾಹರಣೆಗಳನ್ನೂ ನೋಡೋಣ.

 

ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply