ಸಂಶಯವನ್ನು ಗೆಲ್ಲು, ಕರ್ತವ್ಯಕ್ಕೆ ನಿಲ್ಲು

ಸಂಶಯವನ್ನು ಗೆಲ್ಲು, ಕರ್ತವ್ಯಕ್ಕೆ ನಿಲ್ಲು

‘ಸಂಶಯಾತ್ಮನು, ಇಹದ ಬಗ್ಗೆಯೂ ಸಮರಸದಿಂದಿರಲಾ, ಪರದ ಧ್ಯಾನವನ್ನೂ ಮಾಡಲಾರ’ ಎಂದು ಕೃಷ್ಣನು ಹೇಳುತ್ತಿದ್ದನು. ನಿಶ್ಚಲಬುದ್ಧಿಯನ್ನು ಪಡೆಯಲು ಶ್ರದ್ಧೆ ತುಂಬ ಅಗತ್ಯವೆನ್ನುವುದನ್ನೂ ನೋಡಿದ್ದೇವೆ. ಕೃಷ್ಣನು ಮುಂದುವರಿಸುತ್ತಾನೆ;

‘ಹೇ ಧನಂಜಯನೇ! ಯಾರು ಕರ್ಮಗಳನ್ನು ಯೋಗಸಂಸಕ್ತನಾಗಿ ಮಾಡುತ್ತಾನೋ, ಜ್ಞಾನವನ್ನು ಹೊಂದಿ ಸಂಶಯಗಳನ್ನು ಕಳೆದುಕೊಂಡಿರುತ್ತಾನೋ, ಆತ್ಮದಲ್ಲಿ ನೆಲೆನಿಂತಿರುತ್ತಾನೋ ಅಂಥವನನ್ನು ಮಾತ್ರವೇ ಕರ್ಮವು ಬಂಧಿಸಲಾಗದು.’ (ಭ.ಗೀ.: 4.41)

ಫಲಾಸಕ್ತಿ ಇರುವಲ್ಲಿ ಕರ್ಮದ ಗುಣಮಟ್ಟವು ಕುಸಿಯುತ್ತದೆ. ಫುಟ್ಬಾಲ್ ಆಡುವಾಗ ಚೆಂಡಿನ ಕಡೆಗೆ ಗಮನವಿಡಬೇಕು, ದೂರದ ಅಂಕಪಟ್ಟಿಯ ಅಂಕಿಅಂಶಗಳತ್ತ ನೋಡುತ್ತ ಆಟವಾಡಿದರೆ ಆಟ ಕೆಡುತ್ತದೆ! ಜೀವನದಲ್ಲೂ ಹಾಗೆಯೇ! ಸದ್ಯದ ಧರ್ಮಕರ್ಮಗಳನ್ನು ಗಮನವಿಟ್ಟು ಮಾಡಬೇಕು. ಫಲಾಫಲಗಳು ತಾವಾಗಿಯೇ ಕೈಗೂಡುತ್ತವೆ, ಕೆಲವೊಮ್ಮೆ ಕೈಗೂಡವು ಕೂಡ. ಆದರೆ, ಫಲಾಫಲಗಳ ಗತಿಯನ್ನೇ ಗಮನಿಸುತ್ತ ಕೂಡುವವನು ಧರ್ಮಕರ್ಮಗಳನ್ನು ಸರಿಯಾಗಿ ಮಾಡಲಾರ. ಫಲಾಫಲಗಳ ಅನಿಶ್ಚಿತ ಬದಲಾವಣೆಗೆ ಅತಿಯಾಗಿ ಸ್ಪಂದಿಸುತ್ತ ಕಾತರನಾಗಿ ನೆಮ್ಮದಿ ಕಳೆದುಕೊಳ್ಳುತ್ತಾನೆ.

ಅಶ್ರದ್ಧೆಯಿದ್ದರೇ ಕರ್ಮವೇ ಸರಿಯಾಗಿ ನಡೆಯದು. ಸಂಶಯಾತ್ಮನಂತೂ ಲೋಕದಲ್ಲೂ ಪರದಲ್ಲೂ ಸಲ್ಲಲಾಗದೆ ‘ಇತೋಭ್ರಷ್ಟ ತತೋ ಭ್ರಷ್ಟ’ನೆನಿಸುತ್ತಾನೆ. ಯಾರನ್ನೂ ಯಾವುದನ್ನೂ ವಿಶ್ವಸಿಸಲಾಗದ ಸಹಿಸಲಾಗದ ವಿದ್ವೇಷದ ಮನಃಸ್ಥಿತಿಗೆ ಜಾರಿ, ನೆಮ್ಮದಿಯನ್ನೂ ವ್ಯವಹಾರವನ್ನೂ ಹಾಳುಮಾಡಿಕೊಳ್ಳುತ್ತಾನೆ. ಅಂಥವನಿಗೆ ಕರ್ಮವು ದಾರುಣವಾದ ಪಾಶವಾಗಿ ಪರಿಣಮಿಸುತ್ತದೆ.

ಆದರೆ ಶ್ರದ್ಧೆಯೆಲ್ಲಿರುತ್ತದೋ ಅಲ್ಲಿ ಮಾತ್ರವೇ ಮತಿಯು ನಿಶ್ಚಲವಾಗುತ್ತದೆ, ಜ್ಞಾನವು ಅಂಕುರಿಸುತ್ತದೆ, ಕರ್ಮವು ಸಾರ್ಥಕವಾಗಿ ನೆರವೇರುತ್ತದೆ. ಹಾಗೆ ಜ್ಞಾನವು ಉದಯಿಸಿದಾಗಲೇ ಯೋಗದಲ್ಲಿ ಮನುಷ್ಯನು ಪ್ರಜ್ಞೆಯು ನಿಲ್ಲಲು ಸಾಧ್ಯ. ಆ ಸ್ಥಿತಿಯಲ್ಲಿ ಮಾತ್ರವೇ ಸಂಶಯವು ಸಂಪೂರ್ಣನಾಶವಾಗುವುದು. ಅಂತಹ ಸ್ಥಿತಿಗೇರಿದ ಮೇಲೆ, ಮಾಡುವ ಯಾವ ಕರ್ಮವೂ ಮನುಷ್ಯನನ್ನು ಬಂಧಿಸಲಾರವು. ಕೃಷ್ಣನು ಮುಂದುವರಿಸುತ್ತಾನೆ;

‘ಆದ್ದರಿಂದ, ಹೇ ಭಾರತನೆ! ಹೃದಯದಲ್ಲಿ (ಮನಸ್ಸಿನಲ್ಲಿ) ಮನೆಮಾಡಿರುವ ಅಜ್ಞಾನಜನ್ಯವಾದ ಸಂಶಯವನ್ನು ಜ್ಞಾನವೆಂಬ ಖಡ್ಗದಿಂದ ಕತ್ತರಿಸು. ಯೋಗವನ್ನೇರು, ಏಳು (ಯುದ್ಧಕ್ಕೆ ನಿಲ್ಲು).’ (4.41)

ನಮ್ಮ ಮನದಲ್ಲಿ ಮನೆ ಮಾಡಿರುವ ಸಂಶಯ/ಅಶ್ರದ್ಧೆ ಮುಂತಾದ ದೌರ್ಬಲ್ಯಗಳನ್ನು ನಾಶಗೈಯಬೇಕು. ಅಂತರತಮನಾದ ಅರಿವೆಂಬ ‘ಗುರು’ವನ್ನೇ ಖಡ್ಗವಾಗಿ ಹಿಡಿದು ಆ ಸಂಶಯಾದಿಗಳನ್ನು ತುಂಡರಿಸಿಹಾಕಬೇಕು ಎನ್ನುತ್ತಿದ್ದಾನೆ ಕೃಷ್ಣ. ನಮ್ಮೊಳಗಿನ ಶತ್ರುಗಳು ನಾಶವಾಗದೆ, ಅಂತರತಮನಾದ ಅರಿವೆಂಬ ಗುರುವು ನಮಗೆ ಒಲಿಯದೆ, ಹೊರಗಡೆ ಏನು ಮಾಡಿದರೂ ಉದ್ಧಾರವಿಲ್ಲ. ಹೊರಗಡೆಯ ಗುರುವೂ, ಆಚಾರಸಂಹಿತೆಯೂ, ಮತಪಂಥಸಿದ್ಧಾಂತಗಳು, ಜೀವನಾನುಭವವೂ ನಮಗೆ ಉಪಯೋಗವಾಗುವುದು ನಮ್ಮ ಆಂತರಿಕ ಗುರುವು ಎಚ್ಚೆತ್ತು ಕಲಿಸಲಾರಂಭಿಸಿದಾಗ ಮಾತ್ರ. ನಲ್ಲಿಯಲ್ಲಿ ನೀರು ಹಿಡಿಯಬೇಕಾದರೆ, ಪಾತ್ರೆಯು ಕೆಳಮುಖವಾಗಿ ಮಗುಚಿಕೊಂಡಿದ್ದರೆ ಏನು ಪ್ರಯೋಜನ? ಅದನ್ನು ಮೇಲ್ಮುಖವಾಗಿ ತಿರುಗಿಸಬೇಕಲ್ಲವೆ? ಹಾಗೆಯೇ, ನಮ್ಮ ಅಂತರಂಗವು ಅಶ್ರದ್ಧೆ, ಸಂಶಯ, ಭೋಗಾಸಕ್ತಿಗಳ ವಶವಾಗಿ ಕೆಳಮುಖವಾಗಿ ಕವುಚಿಕೊಂಡಿದ್ದರೆ, ಹೊರಗಡೆಯ ಯಾವ ಉಪದೇಶವೂ ಮಾರ್ಗದರ್ಶನವೂ ಅನುಭವವೂ ನಮಗೆ ಪ್ರಯೋಜನಕ್ಕೆ ಬಾರವು. ಜೀವನವೇನೋ ನಮಗೆ ನಿರಂತರವೂ ಕಲಿಸುತ್ತಲೇ ಇದೆ. ಆದರೆ ‘ನಾವು ಗಮನವಿಟ್ಟು ಕಲಿಯುತ್ತಿದ್ದೇವೆಯೆ?’ ಎನ್ನುವುದೇ ಪ್ರಶ್ನೆ! ನಾವು ಕಲಿಯಲಾರಂಭಿಸಬೇಕಾದರೆ ಆಂತರಿಕ ಜ್ಞಾನವೆಂಬ ಗುರುವು ಎಚ್ಚೆತ್ತುಕೊಳ್ಳಬೇಕು. ಜ್ಞಾನವು ಮೂಡುತ್ತಲೆ ಅಜ್ಞಾನಜನ್ಯ ಸಂಶಯಾದಿಗಳು ನಾಶವಾಗುತ್ತವೆ. ನಮ್ಮ ಪ್ರಜ್ಞೆಯು ಯೋಗಮುಖವಾಗುತ್ತ ಹೋಗುತ್ತದೆ. ಆಗ ನಿಜವಾದ ಅರ್ಥದಲ್ಲಿ ನಮ್ಮಿಂದ ‘ಕರ್ಮಯೋಗ’ ಸಾಧ್ಯವಾಗುತ್ತದೆ.

‘ಫಲಾಸಕ್ತಿಯು ಕರ್ಮಯೋಗವನ್ನು ಒಂದು ರೀತಿಯಲ್ಲಿ ಕೆಡಿಸಿದರೆ, ಅಶ್ರದ್ಧೆ-ಸಂಶಯಗಳು ಮತ್ತೊಂದು ರೀತಿಯಲ್ಲಿ ಕೆಡಿಸುತ್ತವೆ. ಈ ಆಂತರಿಕ ವೈರಿಗಳನ್ನು ನಾಶಮಾಡಿಕೊಂಡಲ್ಲದೆ, ಉದ್ಧಾರವಿಲ್ಲ’ ಎನ್ನುವುದು ಕೃಷ್ಣನ ಸ್ಪಷ್ಟ ನಿರ್ದೇಶ.

ಕರ್ತವ್ಯವನ್ನೆಸಗುವಾಗ ನಮ್ಮ ಮೋಹ-ಮಮಕಾರಗಳು ಸಂಶಯಾಶ್ರದ್ಧೆಗಳು ಹೆಡೆಯಾಡಿ, ‘ಇದರಿಂದ ನನಗೇನು ಸಿಕ್ಕೀತು? ಇದು ಬೇಕು? ಅದು ಬೇಡ, ಈ ಕೆಲಸ ಇಷ್ಟವಿಲ್ಲ, ಆ ಕೆಲಸ ಇಷ್ಟ¬’ ಎಂಬ ಇಂತಹ ಲೆಕ್ಕಾಚಾರಗಳನ್ನು ಮೂಡಿಸುತ್ತದೆ. ವಾಸ್ತವಿಕವಾಗಿ ಜೀವನದ ಅನಿಶ್ಚಿತ ಗತಿಯೆದುರು ನಮ್ಮ ಈ ಲೆಕ್ಕಾಚಾರಗಳಿಗೆ ಅರ್ಥವೇ ಇಲ್ಲ! ಆದರೂ ಮಮಕಾರವೆನ್ನುವುದು, ‘ಎಲ್ಲವೂ ನಾನಂದುಕೊಂಡಂತೆ ಆಗಬೇಕು’ ಎಂಬ ಭ್ರಾಂತಿಯ ಹಟವನ್ನು ಮೂಡಿಸಿ ಇಂತಹ ಲೆಕ್ಕಾಚಾರಗಳನ್ನು ಹಾಕಿಸುತ್ತದೆ! ಇಂತಹ ಲೆಕ್ಕಾಚಾರಗಳಿಗಿಳಿದ ಮನುಷ್ಯನಿಗೆ ನೆಮ್ಮದಿಯಿರದು. ಮಾಡಬೇಕಾದ್ದನ್ನು ಮಾಡುವಾಗಲೂ ಅಸಹನೆ ಬೇಸರ ಸಂಶಯ! ಮಾಡಬಾರದ್ದರ ಬಗ್ಗೆ ಕುತೂಹಲ, ಸೆಳೆತ, ದೌರ್ಬಲ್ಯ¬- ಹೀಗೆ ಆತನ ಮನಸ್ಸು ಗಾಳಿಗೆ ಸಿಕ್ಕ ತರಗೆಲೆಯಂತೆ ಎತ್ತೆಂದರತ್ತ ಹೊಯ್ದಾಡುತ್ತದೆ. ಇಂಥ ಮನಃಸ್ಥಿತಿಯಲ್ಲಿ ಮಾಡುವ ಕರ್ಮಗಳೆಲ್ಲ ಬಂಧನಕಾರಿ, ದುಃಖಕಾರಿಗಳಾಗುತ್ತವೆ.

‘ಮೋಹವನ್ನೂ ಸಂಶಯವನ್ನೂ ಫಲಾಸಕ್ತಿಯನ್ನೂ ಹೇಗಾದರೂ ಬಿಟ್ಟುಹಾಕಿ, ಕರ್ತವ್ಯೈಕ ದೃಷ್ಟಿಯಿಂದ ಕರ್ಮವನ್ನೆಸಗುವ ನಿಶ್ಚಲನಿರ್ಧಾರ ಮಾಡು! ಎದ್ದೇಳು! ಯುದ್ಧಕ್ಕೆ ನಿಲ್ಲು!’ ಎಂದು ಅರ್ಜುನನನ್ನು ಪ್ರೇರೇಪಿಸುತ್ತಿದ್ದಾನೆ ಗೀತಾಚಾರ್ಯ.

ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply