ಸಂಕಟ ಮರೆಯಬೇಕೆಂದರೆ ಕೆಲಸದಲ್ಲಿ ಮೈಮರೆಯಬೇಕು!

ಸಂಕಟ ಮರೆಯಬೇಕೆಂದರೆ ಕೆಲಸದಲ್ಲಿ ಮೈಮರೆಯಬೇಕು!
ಕುರುಕ್ಷೇತ್ರದ ಮಹಾ ಯುದ್ಧದಲ್ಲಿ ಅಪಾರ ಸೈನಿಕರು ಸೇನಾಧಿಪತಿಗಳು ಹಾಗೂ ಅನೇಕ ಸಾಮಂತ ರಾಜರು ಸತ್ತು ಧರೆಗುರುಳಿದ್ದರು. ಕುರುಕುಲದವರ ಶವಗಳನ್ನು ಅಂತಿಮ ಸಂಸ್ಕಾರಕ್ಕೋಸ್ಕರ ಹುಡುಕುತ್ತಿದ್ದ ಯುಧಿಷ್ಟಿರನಿಗೆ ಯುಧ್ಧದ ಭೀಭತ್ಸ ದೃಶ್ಯ ಕಂಡು ಕರುಳು ಕಿವಿಚಿದಂತಾಯಿತು. ಯುದ್ಧದಲ್ಲಿ ಭಳಕೆಯಾದ ಆನೆ, ಕುದುರೆ ಮುಂತಾದ ಪ್ರಾಣಿಗಳ ದೇಹಗಳು ಛಿದ್ರ ಛಿದ್ರವಾಗಿ ಎಲ್ಲೆಡೆ ಬಿದ್ದಿದ್ದವು. ಯಾರ ದೇಹ ಯಾರದ್ದೆಂದು ಗುರುತಿಸಲಾಗದಷ್ಟು ವಿಕಾರಗೊಂಡು ನೆತ್ತರ ಕೆಸರಲ್ಲಿ ಹೂತ್ತಿದ್ದವು. ರಥದ ಪತಾಕೆಗಳು ಹರಿದು ಹೋಗಿ ಭೋರೆಂದು ಬೀಸುವ ಗಾಳಿಗೆ ಅತ್ತಿಂದಿತ್ತ ಹಾರಾಡುತ್ತಿದ್ದವು ಅತಿರಥ ಮಹಾರಥರೆಲ್ಲಾ ನಿಂತು ಸೆಣೆಸಾಡಿದ ರಥಗಳು ತುಂಡು ತುಂಡಾಗಿ ನೆಲಕ್ಕೊರಗಿದವು.
ಈ ಮಣ್ಣಿಗಾಗಿ ತತ್ಸಂಬಂಧದ ಸುಖಕ್ಕಾಗಿ ಈಷ್ರ್ಯೆಗಾಗಿ ತಣಿಯದ ಮತ್ಸರಕ್ಕಾಗಿ ಎಷ್ಟೊಂದು ಜನ ತಮ್ಮ ಪ್ರಾಣಗಳನ್ನೂ ಮನೆ- ಮಠಗಳನ್ನೂ ಸಂಬಂಧಿಕರನ್ನೂ ಬಂಧು – ಬಾಂಧವರನ್ನೂ ಕಳೆದುಕೊಂಡರೆಂದು ತಿಳಿದ ಯುಧಿಷ್ಟಿರ ದುಃಖಿತನಾದ ನಶ್ಚರವಾದ ಈ ಹಿಡಿ ಮಣ್ಣಿಗಾಗಿ ಅಯ್ಯೋ…! ನಾವೆಂಥ ತಪ್ಪೆಸಗಿದೆವೆಂದು ಇನ್ನಿಲ್ಲದಂತೆ ಮರುಗಿದ ದೇಶದ ಮುಂದಿನ ಆಸ್ತಿಯಾಗಿದ್ದ ಸಾವಿರಾರು ಯುವಕರನ್ನು ಗುರುಗಳನ್ನು ಒಡಹುಟ್ಟಿದ ಅಣ್ಣ-ತಮ್ಮಂದಿರನ್ನೇ ಕಳೆದುಕೊಂಡು ಬಿಟ್ಟೆವಲ್ಲ ಎಂದು ಗೋಳಾಡಿದ ದುಃಖದ ಭಾರದಿಂದಲೇ ಯುದ್ಧದಲ್ಲಿ ಮಡಿದ ಎಲ್ಲ ಯೋಧರ ಅಂತ್ಯ ಕರ್ಮಗಳನ್ನು ಮಾಡಲು ಅವರ ಸಂಬಂಧಿಕರಿಗೆ ಅನುವು ಮಾಡಿಕೊಟ್ಟ ಅಲ್ಲದೇ ತನ್ನೆಲ್ಲಾ ಬಂಧು ಬಾಂಧವರ ಶವಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸಿದ.
ದಿನಗಳು ಮಾಗಿದಂತೆ ಊರ ಸಮಸ್ತರೆಲ್ಲಾ ಯುಧಿಷ್ಟಿರನಲ್ಲಿ ರಾಜಾಡಳಿತವನ್ನು ಕೈಗೆತ್ತಿಕೊಳ್ಳಬೇಕೆಂದು ವಿನಂತಿಸಿಕೊಂಡರು. ವಿಷಾದ ಮತ್ತು ದುಃಖದ ಛಾಯೆಯಲ್ಲಿದ್ದ ಧರ್ಮರಾಯ ನಾನು ಅಪಾರ ಜನರ ಸಾವು ನೋವು , ಶೋಕ ಸಂಕಟಗಳಿಗೆ ಕಾರಣನಾದೆ ಅಲ್ಲದೆ ಅನೇಕ ಕುಟುಂಬಗಳು ಇಂದು ನಿರ್ಗತಿಕವಾದುದ್ದು ನನ್ನಿಂದಲೇ ಎಂಬುದು ನನ್ನ ಮನದಿಂಗಿತ ಹೀಗಾಗಿ ನಾನು ರಾಜನಾಗಿ ಆಡಳಿತ ನಡೆಸುವುದು ಯಾವ ಕಾರಣಕ್ಕೂ ಸಮ್ಮತವಲ್ಲ ಆದ್ದರಿಂದ ತಾನು ರಾಜನಾಗಲಾರೆ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ. ಯುಧಿಷ್ಟಿರನ ಮಾತು ಆಲಿಸಿದ ಶ್ರೀ ಕೃಷ್ಣ ‘ಧರ್ಮಜ’ ಕುರುರಾಜ್ಯವೀಗ ರಾಜನಿಲ್ಲದೇ ಅನಾಥವಾಗಿದೆ ನೀನು ಬದಲು ಕ್ಷತ್ರಿಯನೆಂಬುದನ್ನು ಮನಗಾಣಬೇಕು. ಕ್ಷತ್ರಿಯನ್ನಾದವನು ಎಂದೂ ತನ್ನ ಕರ್ತವ್ಯದಿಂದ ವಿಮುಖನಾಗಬಾರದು ನಿನ್ನ ವಿಷಾದದ ಮನಸ್ಥಿತಿಯನ್ನು ಮೀರಿ ನಿಲ್ಲು ಇಲ್ಲದಿದ್ದಲ್ಲಿ ರಾಜ್ಯದಲ್ಲಿ ಅರಾಜಕತೆ ಮೊದಲಾಗುತ್ತದೆ. ಸಜ್ಜನರು ತಮ್ಮ ಹೊಣೆಗಾರಿಕೆಯಿಂದ ಜಾರಿಕೊಂಡರೆ ದುರ್ಜನರು ಪ್ರಬಲರಾಗಿ ಪ್ರಜಾಪೀಡಕರಾಗಲು ದಾರಿ ಮಾಡಿಕೊಟ್ಟಂತಾಗುತ್ತದೆ. ಇದು ಸರಿಯಲ್ಲ; ಎಂದ.
ನಂತರ ಕೃಷ್ಣನ ಮಾತು ಹೀಗೆ ಮುಂದುವರಿಯಿತು. ‘ಈ ಮಹಾಯುದ್ಧದ ನಂತರದ ಪರಿಸ್ಥಿತಿಯಾದರೂ ಎಂಥದೆಂಬುದನ್ನು ನೀನು ಮನಗಂಡಿರುವೆಯಾ ಯುಧಿಷ್ಟಿರಾ? ಜನಸಾಮಾನ್ಯರು ಅಪಾರವಾಗಿ ನೊಂದಿದ್ದಾರೆ. ರಾಜ್ಯದ ಬೊಕ್ಕಸ ಬರಿದಾಗಿದೆ. ಸಂಪತ್ತು ಕ್ಷೀಣಗೊಂಡಿದೆ. ರಾಜ್ಯದ ರಕ್ಷಣೆಗಿದ್ದ ಸೈನ್ಯದ ಬಲವಿಂದು ಕುಂಠಿತಗೊಂಡಿದೆ. ಪರಿಸ್ಥಿತಿ ಹೀಗಿರಲಾಗಿ ದಕ್ಷತೆ ಹೊಂದಿದ ರಾಜನ ಅವಶ್ಯಕತೆ ಎಂದಿಗಿಂತಲೂ ಈಗ ಅಗತ್ಯವಿದೆ. ಈ ಹೊತ್ತಿನಲ್ಲಿ ನೀನು ನಿನ್ನನ್ನು ಕಾಡುವ ಶೋಕದಿಂದ ಮುಕ್ತನಾಗಿ ರಾಜ್ಯದ ಏಳಿಗೆಯತ್ತ ಗಮನಹರಿಸು ಕರ್ತವ್ಯದ ಕರೆಗೆ ಓಗೊಡು..
ಇಂದು ನಾವು ಸಹ ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಸಂಕಟ ನೋವುಗಳಿಗೆ ಹೆದರಿ ಕೈ ಚೆಲ್ಲಿ ಕುಳಿತು ಬಿಡುತ್ತೇವೆ ಅಂಥ ಸಂದರ್ಭಗಳಲ್ಲಿ ಕೃಷ್ಣನ ಮಾತುಗಳನ್ನು ಗಮನಿಸಬೇಕು ಇವು ನಮಗೆ ನೂರಕ್ಕೆ ನೂರರಷ್ಟು ತಾಳೆಯಾಗುವಂಥ ಮಾತುಗಳು.
ನಮ್ಮನ್ನು ಹೆದರಿಸುವ ಕಾಡುವ ಎಲ್ಲಾ ರೋಗಗಳಿಗೂ ಪರಿಣಾಮಕಾರಿ ಮದ್ದು ಎಂದರೆ ಕೆಲಸದಲ್ಲಿ ತೊಡಗಿಕೊಳ್ಳುವುದು. ಅದು ಸ್ವಂತದ ಕೆಲಸವಿರಬಹುದು ಕುಟುಂಬದ ಕೆಲಸವೇ ಇರಬಹುದು. ಇಲ್ಲವೇ ಸಂಬಳ ತರುವ ಕೆಲಸವೇ ಇರಬಹುದು, ಸಾರ್ವಜನಿಕ ಕೆಲಸವೇ ಇರಬಹುದು, ಯಾರು ಏನು ಮಾಡುತ್ತಾರೋ ಅದನ್ನು ನಿಷ್ಟೆಯಿಂದ ಮಾಡುತ್ತಾ ಹೋಗುವುದು ಅದೇ ಬದುಕಾಗಬೇಕು ಅದೇ ಉಸಿರಾಗಬೇಕು ಆಗ ಮಾತ್ರ ಯಾವ ನೋವೂ ಯಾವ ಸಂಕಟವೂ ನಮ್ಮನ್ನು ಅಲುಗಾಡಿಸುವುದಿಲ್ಲ ಹೆದರಿಸುವುದೂ ಇಲ್ಲ.
ಹೊಸ್ಮನೆ ಮುತ್ತು

Leave a Reply