ಮೊದಲು ಕೆಲಸ ಮಾಡುವೆ

ಮೊದಲು ಕೆಲಸ ಮಾಡುವೆ

ಒಂದು ಸಲ ನಮ್ಮ ಗುಂಡಣ್ಣನಿಗೆ ಒಬ್ಬನೇ ಆಟ ಆಡಲು ಬೇಸರವಾಯಿತು. ಅವನು ನಿಧಾನವಾಗಿ ನಡೆಯುತ್ತ ಬಂದು, ಒಂದು ಮರದ ಕೆಳಗೆ ಕುಳಿತನು. ಅಲ್ಲಿ ಕರಿಯ ಇರುವೆಗಳ ಸಾಲನ್ನು ನೋಡಿದನು. ಆಹಾ.. ನನಗೆ ಆಟವಾಡಲು ಜೊತೆಗಾರರು ಸಿಕ್ಕರು ಎಂದು ಹರುಷದಿಂದ ಇರುವೆಗಳ ಬಳಿಗೆ ಹೋದನು. ಆದರೆ, ಇರುವೆಗಳು ಇವನನ್ನು ಕಣ್ಣೆತ್ತಿಯೂ ನೋಡಲಿಲ್ಲ. ಆಗ ಗುಂಡಣ್ಣ ಒಂದು ಉಪಾಯ ಮಾಡಿದನು.
“ಇರುವೆ ಇರುವೆ, ನನ್ನ ಜೊತೆ ಆಟ ಆಡುವುದಕ್ಕೆ ಯಾರೂ ಇಲ್ಲ, ನೀನು ನನ್ನ ಜೊತೆ ಆಡುವುದಕ್ಕೆ ಬರ್ತೀಯಾ?” ಎಂದು ಕೇಳಿದನು. “ನೀನು ಬಂದ್ರೆ, ಆಟಕ್ಕೆ ಅಂತ ಅಮ್ಮನಿಂದ ಬೆಲ್ಲ ತಗೊಂಡು ಬರ್ತೇನೆ” ಎಂದು ಆಸೆ ತೋರಿಸಿದನು.
ಆಗ ಇರುವೆಗಳು “ಇಲ್ಲ ಇಲ್ಲ, ಇನ್ನೇನು ಮಳೆಗಾಲ ಶುರುವಾಗೋ ಸಮಯ. ನಮ್ಮೆಲ್ಲರಿಗೂ ಸಾಕಾಗುವಷ್ಟು ಆಹಾರವನ್ನು ಕೂಡಿ ಹಾಕಬೇಕು. ಆ ಕೆಲಸ ಮುಗಿದ ಮೇಲೆ ನಮ್ಮನ್ನು ಕೂಗಿ ಕರಿ. ಆಗ ನಿನ್ನ ಜೊತೆ ಆಡುವುದಕ್ಕೆ ಬರುತ್ತೇವೆ” ಎಂದು ಹೇಳಿ ಮುಂದಕ್ಕೆ ನಡೆದವು.
ಸರಿ ಅಂತ ಮುಂದೆ ಹೊರಟ ಗುಂಡಣ್ಣನಿಗೆ ನಾಯಿಮರಿ ಕಾಣಿಸಿತು.
“ನಾಯಿಮರಿ ನಾಯಿಮರಿ, ನಿನ್ನ ಜೊತೆ ಆಡುವುದಕ್ಕೆ ಬರುತ್ತೇನೆ. ನೀನು ಕುಯ್ ಕುಯ್ ಅಂತ ಎಷ್ಟು ಚೆನ್ನಾಗಿ ಹಾಡ್ತೀಯ. ಆ ರಾಗ ನನಗೂ ಕಲಿಸಿ ಕೊಡು. ನಾನೂ ನಿನ್ನ ಹಾಗೇನೆ ಹಾಡ್ತೀನಿ” ಅಂದ.
ಆಗ ನಾಯಿಮರಿ, “ಆಡುವುದಕ್ಕೆ ಹಾಡುವುದಕ್ಕೆ ನನಗೆ ಸಮಯ ಇಲ್ಲ. ಅನ್ನ ಹಾಕಿದ ಒಡೆಯನ ಮನೆಯನ್ನ ಕಾಯ್ತಾ ಇದ್ದೀನಿ. ಈಗ ನನಗೆ ಬರೋಕಾಗಲ್ಲ” ಅಂದಿತು. ಗುಂಡಣ್ಣ ಸಪ್ಪೆ ಮೋರೆ ಹಾಕಿಕೊಂಡು ಸ್ವಲ್ಪ ದೂರ ಹೋದ. ಅಷ್ಟರಲ್ಲಿ ಜೇನುಹುಳ ಸಿಕ್ಕಿತು. “ಜೇನುಹುಳ ಜೇನುಹುಳ, ಎಲ್ಲಿಗೆ ಹೋಗ್ತಾ ಇದ್ದೀಯ? ನನ್ನನ್ನು ನಿನ್ನ ಜೊತೆ ಕರೆದುಕೊಂಡು ಹೋಗು. ನಾನೂ ಬರ್ತೀನಿ ನಿನ್ನ ಜೊತೆ” ಅಂದನು.
ಆಗ ಜೇನುಹುಳ, “ಅಯ್ಯೋ… ಬೇಡಪ್ಪ ಬೇಡ. ನಾನು ಕಾಡು-ಮೇಡು, ವನ-ಬನ ಎಲ್ಲಾ ಕಡೆ ಸುತ್ತುತ್ತಾ ಮಕರಂದ ತರ್ತಿದ್ದಿನಿ. ಈಗ ಬೇಡ, ಚೈತ್ರಮಾಸ ಬಂದ ಮೇಲೆ ಬೇಕಾದ್ರೆ ನಾನೇ ನಿನ್ನನ್ನ ಕರೀತೀನಿ” ಎಂದು ಹೇಳಿ ಹಾರಿ ಹೋಯಿತು.
ಅಷ್ಟರಲ್ಲಿ ಗುಂಡಣ್ಣನಿಗೆ ಮರದ ಮೇಲೆ ಕುಳಿತಿದ್ದ ಕೋಗಿಲೆ ಕಾಣಿಸಿತು. “ಓ ಮಧುರ ಕಂಠದ ಕೋಗಿಲೆ, ನೀನು ಒಬ್ಬಳೇ ಕೂತಿದ್ದೀಯಲ್ಲ. ನಿನ್ನ ಹತ್ತಿರ ನಾನೂ ಬರಲೆ?” ಎಂದನು.
ಆಗ ಕೋಗಿಲೆ “ಅಯ್ಯೋ ಹಾಗೇನಾದ್ರೂ ಮಾಡಿಬಿಟ್ಟೀಯ ಜೋಕೆ. ನಾನು ಕಾಗೆ ಕಣ್ಣಿಗೆ ಕಾಣಬಾರದಂತ ಬಚ್ಚಿಟ್ಟುಕೊಳ್ಳುತ್ತ ಇದ್ದೇನೆ. ಕಾಗೆ ಕಣ್ಣು ತಪ್ಪಿಸಿ ಇಲ್ಲಿ ಕುಳಿತಿದ್ದೀನಿ. ಚೈತ್ರ ಮಾಸ ಕಳೆದ ನಂತರ ನಾನು ಒಬ್ಬಳೇ ಇರ್ತೀನಿ. ಆಗ ಬೇಕಾದ್ರೆ ಕೂಗು ನಾನು ಬರ್ತೀನಿ” ಅಂದಿತು.
“ಇವರಾರೂ ನನ್ನ ಜೊತೆ ಆಡೋದಕ್ಕೆ ತಯಾರಿಲ್ಲ. ಎಲ್ರೂ ಅವರವರ ಕೆಲಸದಲ್ಲೇ ಮುಳುಗಿದ್ದಾರೆ. ಹಾಗಾದ್ರೆ ನಾನು ಮಾತ್ರ ಯಾಕೆ ಸಮಯ ಹಾಳು ಮಾಡಬೇಕು? ಮೊದಲು ನನ್ನ ಓದುಬರಹ ಮುಗಿಸ್ತೇನೆ, ಆನಂತರ ಆಟ ಆಡ್ತೇನೆ” ಎನ್ನುತ್ತ ಓಡೋಡಿ ಮನೆಗೆ ಬಂದನು ನಮ್ಮ ಗುಂಡಣ್ಣ.

Leave a Reply