ಅವಲಕ್ಕಿ ಮೊಸರು ಮತ್ತ ಸುಬ್ಬಣ್ಣ

ಅವಲಕ್ಕಿ ಮೊಸರು ಮತ್ತ ಸುಬ್ಬಣ್ಣ
ಸುಬ್ಬಣ್ಣ ನಮ್ಮ ಕಥಾನಾಯಕ. ಆತ ಮನೆಗೆ ಬಂದರೆ, ಎದುರಲ್ಲಿ ಕಂಡರೆ “ಸು” ತೆಗೆದರೆ “ಬಣ್ಣ” “ಬ” ತೆಗೆದರೆ “ಸುಣ್ಣ” ಇವ ನಮ್ಮ ಸುಬ್ಬಣ್ಣ ಅಂತ ರಾಗವಾಗಿಯೇ ಹಾಡಿ ಸ್ವಾಗತಿಸುತ್ತಿದ್ದೆವು. ಇಂತಿಪ್ಪ ಸುಬ್ಭಣ್ಣನಿಗೋ, ಅವಲಕ್ಕಿ –ಮೊಸರು ತಿನ್ನುವುದೆಂದರೆ ಪಂಚಪ್ರಾಣ, ಅಮ್ಮನಲ್ಲಿ ಹುಸಿಕೋಪ ತೋರಿಯೋ, ಕುಂಟು ನೆಪ ಹೇಳಿಯೋ ದಿನಕ್ಕೊಮ್ಮೆಯಾದರೂ ಅವಲಕ್ಕಿ –ಮೊಸರು ತಿನ್ನದಿದ್ದರೆ ಏನೋ ಕಳಕೊಂಡ ಚಡಪಡಿಕೆ.
ಕಾಲನುಕಾಲಕ್ಕೆ ತಾಂ ಅಂತ ಹೇಳುತ್ತಾರಲ್ಲ ಹಾಗೆ ಯಾರ್ಯಾರಿಗೋ ಎಲ್ಲೆಲ್ಲೋ ಲಕ್ಕು ಹೊಡೆದು ಮಂತ್ರಿ ಮಹಾಮಂತ್ರಿ ಕೊನೆಗೆ ಕುತಂತ್ರಿಯಾಗಿಯಾದರೂ ಕುರ್ಚಿ ಹಿಡಿಯಬಹುದಾದರೆ…! ನಮ್ಮ ಸುಬ್ಬಣ್ಣನಿಗೆ ಲಕ್ಕು ಹೊಡೆಯದಿರಲು ಲಕ್ಕೇನು ಅವಲಕ್ಕಿಯೇ….? ಅಂತೂ –ಇಂತೂ ಆತನಿಗೆ ಒಮ್ಮೆ ಲಕ್ಕು ಅಂತ ಹೋಡೀತು ಮಾರಾಯ್ರೇ…! ಕಾಕತಾಳೀಯ ಅಂತ ಬೇಕಾದರೂ ಅಂದುಕೊಳ್ಳಿ ಆತನ ಹತ್ತಿರದ ಬಂಧುಗಳ ಮನೆಯಲ್ಲೊಂದು ಮದುವೆ ಕಾರ್ಯ ನಿಕ್ಕಿಯಾಗುವುದೊಂದಿಗೆ ‘ಲಕ್ಕು’ ಲಾಯಕ್ಕಾಗಿಯೇ ತನ್ನ ಕೆಲಸ ಮಾಡಿತು.
ಅಪ್ಪ-ಅಮ್ಮ ಸಂಬಂಧಿಕರ ಮನೆಯಲ್ಲಿ ನಡೆಯುವ ಮದುವೆಗೆ ಹೊರಡಲೇಬೇಕಾದ ಅನಿವಾರ್ಯ. ಹಸು- ಕರುಗಳನ್ನು ಸಾಕಿಕೊಂಡಿದ್ದರಿಂದ ಅವುಗಳ ದೇಖರೇಖೆ, ತೋಟದ ಕೆಲಸ, ಜೊತೆಗೆ ಮನೆ ಕಾವಲು ಅಂತ ಇರುವೊಬ್ಬ ಮಗ ಸುಬ್ಬಣ್ಣ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಮಗನಿಗೆ ಅಡಿಗೆ ಮಾಡಿಕೊಳ್ಳುವ ತೊಂದರೆ ಬೇಡವೆಂದು ಸುಬ್ಬಣ್ಣನ ಅಮ್ಮ ಆ ದಿನಕ್ಕಾಗುವಷ್ಟು ದೋಸೆ ಹಿಟ್ಟು ರುಬ್ಬಿಟ್ಟು, ದೋಸೆ ಮಾಡಿಕೊಂಡು ತಿನ್ನುವಂತೆ ಸೂಚಿಸಿ ಮದುವೆ ಮನೆಯತ್ತ ಹೆಜ್ಜೆ ಹಾಕಿದಳು. ಅಪ್ಪ –ಅಮ್ಮ ಅತ್ತ ಸಾಗುತ್ತಿದ್ದಂತೆ, ಇತ್ತ ಅಡಿಕೆ ಸೋಗೆ ಕಡಿಯುವ ಅಂತ ಹುರುಪಿನಿಂದಲೇ ತೋಟಕ್ಕೆ ಹೊರಟ ಸುಬ್ಬಣ್ಣ.
ತೋಟದ ಕೆಲಸ ಮುಗಿಸುವಷ್ಟರಲ್ಲಿ ಹೊಟ್ಟೆ ತಾಳ ಹಾಕತೊಡಗಿತು. ಅಡಿಗೆ ಮನೆ ಹೊಕ್ಕ ಸುಬ್ಬಣ್ಣನಿಗೆ ಅಮ್ಮ ಹೇಳಿದಂತೆ ದೋಸೆ ಮಾಡಿಕೊಂಡು ತಿನ್ನಲು ವ್ಯವಧಾನವಿರಲಿಲ್ಲ. ‘ಎಲ್ಲೆಲ್ಲಿ ನೋಡಲಿ… ನಿನ್ನನ್ನೇ ಕಾಣುವೆ…,’ ಅನ್ನುವಂತೆ ಅವಲಕ್ಕಿ ಡಬ್ಬ, ಬೆಲ್ಲ-ಮೊಸರೇ ಅಡಿಗೆಮನೆ ತುಂಬಾ ರಿಂಗಣಿಸತೊಡಗಿತು. ಈಗ ಸುಬ್ಬಣ್ಣನನ್ನು ತದೆಯುವ ಶಕ್ತಿ ಯಾವ ಮಹಾದೇವನಿಗೆ ಬಂದೀತು…? ಡಬ್ಬಿಯಿಂದ ನೇರ ಮೊಸರು ಪಾತ್ರೆಗೇ ಅವಲಕ್ಕಿ ಸುರಿದುಕೊಂಡ, ಮೇಲಷ್ಟು ಜೋನಿ ಬೆಲ್ಲ. ಜನ್ಮದಲ್ಲಿ ಇದೇ ಮೊದಲೇನೋ ಎಂಬಂತೆ ಚಪ್ಪರಿಸಿ, ಚಪ್ಪರಿಸಿ ಬಾರಿಸಿದ.
ಸಂಜೆ ಮದುವೆ ಮುಗಿಸಿಕೊಂಡು ಬಂದ ಅಮ್ಮ; ಮಹ ಮಧ್ಯಾನ್ಹ ಏನು ತಿಂದನೋ…! ಅಂತ ಕಳವಳ ಪಟ್ಟುಕೊಳ್ಳುತ್ತಾ ಕಕ್ಕುಲಾತಿಯಿಂದ ವಿಚಾರಿಸಿದರೆ, ಸುಬ್ಬಣ್ಣನ ಉದಾಸೀನದ ಉತ್ತರ ಹೀಗಿತ್ತು. ‘ಹೋಗಮ್ಮೋ…. ತೋಟದ ಕೆಲಸ ಮುಗಿಸಿ ಬರುವಷ್ಟರಲ್ಲಿ ಸುಸ್ತಾಗಿಬಿಟ್ಟೆ ಹಾಗಾಗಿ ದೋಸೆ ಮಾಡಿಕೊಳ್ಳುವ ಬದಲು ಅವಲಕ್ಕಿ ಮೊಸರು ತಿಂದು ಬಿಟ್ಟೆ..!’ ಅಂತ ವರದಿ ಒಪ್ಪಿಸಿದ ಮಗನ ಮಾತು ಕೇಳಿ ಅಮ್ಮನಿಗೋ ಗಾಬರಿ; ಜೊತೆಗೊಂದಿಷ್ಟು ಆತಂಕದೊಂದೊಗೆ ಅಚ್ಚರಿಯೂ ಜೊತೆಗೊಂದಿಷ್ಟು ಆತಂಕದೊಂದಿಗೆ ಅಚ್ಚರಿಯೂ ಜೊತರಯಾಗಿತ್ತು. ಕಾರಣ ಮನೆಯಲ್ಲಿ ಆದಿನ ಮೊಸರು ನಾಸ್ತಿ. ಈತ ಇನ್ನು ಹೇಗೆ ‘ಮೊಸರವಲಕ್ಕಿ’ ತಿಂದಾನು ಅಂತ ಅಡಿಗೆ ಮನೆಗೆ ಗಡಿಬಿಡಿಯಿಂದಲೇ ಧಾವಿಸಿ ನೋಡಿದರೆ ಅಲ್ಲೇನಿದೆ..? ಮಣ್ಣಂಗಟ್ಟಿ…!ದೋಸೆ ಹಿಟ್ಟನ್ನೇ ಮೊಸರೆಂದು ಭಾವಿಸಿ ಜೋನಿಬೆಲ್ಲದೊಂದಿಗೆ ಅವಲಕ್ಕಿ ಕಲಿಸಿ ನುಂಗಿಬಿಟ್ಟಿದ್ದ ಈ ಭೂಪ…! ಈಗ ಹೇಳಿ ನಮ್ಮ ಕಥಾನಾಯಕ ಸುಬ್ಬಣ್ಣ ಸಾಮಾನ್ಯನೇ….!?
ಹೊಸ್ಮನೆ ಮುತ್ತು

Leave a Reply