ಸ್ವಾತಂತ್ರ್ಯ ಮತ್ತು ನಾನು…

ಸ್ವಾತಂತ್ರ್ಯ ಮತ್ತು ನಾನು…
ನನಗೆ ಎಂದೂ ಇಂಥ ಯೋಚನೆ ಬರುವುದೇ ಯಿಲ್ಲ. ಅಥವಾ ಹಾಗೆ ಯೋಚಿಸಲು ನಾನೇನು ಕಡಿದು ಕಟ್ಟೆ ಹಾಕುತ್ತೇನೆ?
ಎಲ್ಲರೂ ಮಾಡುವದೇ ತಾನೇ? ಅಲ್ದೇ ನಾನೇನು ನೌಕರಿ ಮಾಡುವವಳೇ busy ಇರಲು? ಮನೆಯಲ್ಲಿ ಖಾಲಿ ಇದ್ದವಳಿಗೆ
ಸದಾ ಆರಾಮೇ…ಸದಾ ಸ್ವಾತಂತ್ರ್ಯವೇ
ತಾನೇ…?
ಬೆಳಿಗ್ಗೆ ಐದಕ್ಕೆ ಎದ್ದು ಮನೆಯವರಿಗೆ ಟಿಫಿನ್/ ಮದ್ಯಾನ್ಹದ ಊಟದ ಡಬ್ಬಿ ಕಟ್ಟಿಕೊಟ್ಟು ಕಳಿಸಿದರೆ ಅವರ ಕೆಲಸ ಮುಗಿದೇ ಹೋಯ್ತು. ನಾನು ಸ್ವತಂತ್ರಳೇ…
ನಂತರ ಮಕ್ಕಳಿಬ್ಬರನ್ನೂ ಎಬ್ಬಿಸಿ ಅವರು ಕೇಳಿದ ತಿನಿಸು ಇಬ್ಬರಿಗೂ ಪ್ರತ್ಯೇಕವಾಗಿ ಮಾಡಿಕೊಟ್ಟು ಅವರನ್ನು online ಕ್ಲಾಸ್ ಗೆ ಅಣಿಮಾಡಿ ಕೂಡಿಸಿ ಬಂದುಬಿಟ್ಟರೆ ಅವರ ಕ್ಲಾಸ್ಗಳು ಮುಗಿಯುವವರೆಗೂ ನನಗೆ ‘ ಅವರ’ ಕೆಲಸಗಳೇನೂ ಇಲ್ಲವೇ ಇಲ್ಲ …
ಅತ್ತೆ/ ಮಾವ ಅವರಿಗೆ ವಯಸ್ಸಾಗಿದೆ, ಆರೋಗ್ಯ ಅಷ್ಟಕ್ಕಷ್ಟೇ. ಏನೂ ಮಾಡಿಕೊಳ್ಳಲು ಆಗುವದಿಲ್ಲವೆಂದರೆ ನಾವೂ ಹಾಗೇ ಬಿಡೋಕಾಗುತ್ತಾ? ಹೆಚ್ಚೇನೂ ಇಲ್ಲ, ಔಷಧಿ ತೆಗೆದುಕೊಳ್ಳಬೇಕು ಅಂದಾಗ ಏನಾದರೂ ಸ್ವಲ್ಪ ಬಿಸಿ ಬಿಸಿ ಮಾಡಿಕೊಟ್ಟು ಔಷಧಿ ಕೈಯಲ್ಲಿಟ್ಟು ಬಾತ್ ರೂಮಲ್ಲಿ ಅವರಿಗೆ ಬಕೆಟ್ ನಲ್ಲಿ ನೀರು ತೋಡಿ, ಬಟ್ಟೆ /ಟವೆಲ್ ಇಟ್ಟುಬಂದು ಕಾಫೀ/ ತಿಂಡಿ ರೆಡಿ ಇಟ್ಟುಬಿಟ್ಟರೆ ,ಊಟದ ವರೆಗೂ ತೊಂದರೆಯೇ ಇಲ್ಲ, ತಮ್ಮ ಪಾಡಿಗೆ ತಾವಿರುತ್ತಾರೆ ಪಾಪ…!!
ಆಮೇಲಿನದು ಏನಿದ್ರೂ ನನ್ನದೇ ಸಮಯ. ಸ್ನಾನಮಾಡಿ ಎಲ್ಲರದೂ breakfast ಇಷ್ಟು ನೋಡಿಕೊಂಡರೆ
ಅಡಿಗೆಯವರೆಗೂ ನಾನು ನಾನೇ! ಸ್ವತಂತ್ರಳೇ…
ನಂತರದ ಒಂದೆರಡು ಗಂಟೆ ಅಡಿಗೆ ತಯಾರಿ/ ಬೇಕಾದದ್ದು shop ಗೆ ಹೋಗಿ ತಂದಿಟ್ಟು ಕೊಳ್ಳುವದು/ ನನ್ನ ದಿನದ ಹೆಚ್ಚಿನ ಕೆಲಸ ಅನ್ನುವಷ್ಟರಲ್ಲಿ ಎರಡು ಗಂಟೆಗೂ ಹೆಚ್ಚುಕಾಲ ಮೀರುವುದಿಲ್ಲ. ಆಗಲೇ ಕೆಲಸದವಳ ಸವಾರಿ ಚಿತ್ತೈಸುತ್ತೆ. ಅವಳೋ ಮಹಾನಟಿ…ಎದುರಿಗಿದ್ದರೆ ಮಾಡಿ,ಇಲ್ಲದಿದ್ದರೆ ಮಾಡಿದಂತೆ ಮಾಡಿ, ಬಣ್ಣದ ಮಾತುಗಾರಿಕೆ, ಬೇಕಾದ್ದು ಗಿಟ್ಟಿಸಿಕೊಳ್ಳುವ ಚತುರತೆ ಅವಳಿಗಿದೆ. ನನಗೆಲ್ಲ ಗೊತ್ತಿದ್ದರೂ ‘ ನಿನ್ನಂಥ ಹೆಣ್ಣು ಇನ್ನಿಲ್ಲ’ ಅಂತಲೋ, ‘ನಿನ್ನಿಂದಲೇ…ನಿನ್ನಿಂದಲೇ ‘- ಅನ್ನುತ್ತಾ ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆ…ಗಂಡ ಮುನಿದರೆ ಸೈರಿಸಬಹುದು, ಈ ‘ಗುಂಡಮ್ಮ’ ಮುನಿದರೆ ಸೈರಿಸಲಾರೆ…ಹೀಗಾಗಿ ಅವಳ ಮುಖದ ಮುಗುಳ್ನಗೆ ಮಾಸದಂತೆ ನಡೆಸಿಕೊಂಡು ಚಂದವಾಗಿ ಬೀಳ್ಕೊಟ್ಟರೆ ಒಂದು ದಿನ ಯುದ್ಧ ಗೆದ್ದಂತೆ, ನಂತರ ಅವಳಿಂದ ನಾನು ಒಂದು ದಿನದ ಮಟ್ಟಿಗೆ ಪೂರಾ ಸ್ವತಂತ್ರಳೇ…
ಇಷ್ಟೆಲ್ಲಾ ಆಗುವ ಹೊತ್ತಿಗೆ ಮಕ್ಕಳ / ಹಿರಿಯರ mid day snacks/ ಕಾಫೀ ವೇಳೆ ಆಗುತ್ತದೆ, ಪಾಪ, ಅವರಿಗೇನು ಮಾಡೋಕ್ಕಾಗುತ್ತೆ? ನನ್ನ ಮೇಲೆ ಅವರಿಗೆ ಹೆಚ್ಚಿನ ವಿಶ್ವಾಸ. ನನಗೇನು ಬೆಟ್ಟ ಕಡಿಯುವ ಕೆಲಸ!!! ಒಂದು ಗಂಟೆ ತಾನೇ, ಏನೋ plan ಮಾಡಿ ಮುಗಿಸುವ ವೇಳೆ ಆಯಿತೋ ಸಾಯಂಕಾಲ ವಾದ್ರೆ ಅದರ ತಪ್ಪೇ? ಓಡುವುದೇ ಸಮಯದ ಕೆಲಸ,ಓಡುತ್ತೆ.ಸಾಯಂಕಾಲವಾಗಿ ಕೆಲಸ ಮುಗಿದರೆ ನನ್ನ ಗಂಡ ಮನೆಗೆ ಬರಬೇಕು ತಾನೇ, ಬರ್ತಾರೆ, ಅವರಿಗಿಷ್ಟು ,ಕೇಳಿದ್ದು ಮಾಡಿಕೊಟ್ಟು rest ಗೆ ಕಳಿಸಿದ್ರೆ ರಾತ್ರಿ ಊಟದ್ದು ನೋಡಿಕೊಳ್ಳಬೇಕು, ಅತ್ತೆ/ ಮಾವ ವಯಸ್ಸಾದವರು. ತಡವಾಗಿ ಉಂಡರೆ ಆರೋಗ್ಯ ಏರುಪೇರಾಗಿ ಅಪಚನ/ ಗ್ಯಾಸ್ ತಕರಾರು. Risk ತೆಗೆದುಕೊಳ್ಳುವದೇ ಬೇಡ ಅಂತ ನನ್ನ ಯಜಮಾನರ ಅಂಬೋಣ, ಪಾಪ, ಅವರನ್ನುವುದೂ ಸರಿಯೇ ಅಲ್ವೇ? So, ಬೇಗ ಅಡುಗೆ ಮಾಡಿ ಅವರ ಊಟ ಮುಗಿಸಿದರೆ ಒಂದು ಮಟ್ಟಿಗೆ ನಿರಾಳ. ಒಂದರ್ಧ ಗಂಟೆ ಏನಾದರೂ ಟೀವೀಲೀ ನೋಡೋಣ ಅಂದ್ರೆ ಅಪ್ಪ ಮಕ್ಕಳು prime time shows ನೋಡ್ತಿರ್ತಾರೆ. ಬೆಳಗಿನಿಂದ ದಣಿದವರಿಗೆ ಅಷ್ಟೂ ಮನೋರಂಜನೆ ಬೇಡ್ವಾ? ಅದನ್ನೂ ತಪ್ಪಿಸಿದ್ದಾದರೆ ನಾನು ‘ ಸ್ವಾರ್ಥಿ ಆಗೋಲ್ವಾ? ‘ಆಯ್ತು’ ಅಂದು ಅಡಿಗೆ ಮನೆ ಸೇರಿ ಏನೋ ಅಷ್ಟಿಷ್ಟು ಮರುದಿನಕ್ಕೆ ಅಣಿ ಮಾಡೋದ್ರಲ್ಲಿ ಎಲ್ಲಾ ಊಟಕ್ಕೆ ಬರ್ತಾರೆ. ಅದಿಷ್ಟು ಮುಗಿದರೆ ಆಯ್ತು ಉಳಿದದ್ದೆಲ್ಲಾ ನನ್ನದೇ ME TIME…
ನಾನು ಇಷ್ಟೆಲ್ಲಾ ಜನರ ಮಾತು ಕೇಳುತ್ತೇನೆ, ನನ್ನ ದೇಹವೇ ನನ್ನ ಮಾತು ಕೇಳುವುದಿಲ್ಲ ನೋಡಿ, ಎಂಥಾ ವಿಡಂಬನೆ!!! ಎಲ್ಲರೂ ಮಲಗಿದ ಮೇಲೆ ನನ್ನದೇ ಏನಾದರೂ ಮಾಡಿಕೊಳ್ಳೋಣ ಅಂದ್ರೆ ಸುಮ್ಮನೇ ಹೂ-ಗುಟ್ಟಬಾರದೇ? ಹಟಮಾಡುತ್ತದೆ… ಸಂಪು ಹೂಡುತ್ತದೆ…
ಮಲಗಿಯೇ ಬಿಡುತ್ತದೆ. ಅದಕ್ಕೂ ಸ್ವಾತಂತ್ರ್ಯ ಬೇಡವೇ???
ಮಲಗಲಿ ಬಿಡಿ!… ಕಾಣಲಿ ನಾಳೆಯ ಕೆಲಸಗಳ ಕನಸು!!…ಮಾಡಲಿ
ಸ್ವಲ್ಪಾದ್ರೂ ಸ್ವತಂತ್ರವಾಗಿರುವ plan ನು…ಅದರಲ್ಲೇನು ತಪ್ಪು?
Leave a Reply