‘ಪಾರಿಜಾತ’ದ ಪಗಡೆ ಜಾತ್ರೆ”

ಶಾಮಿಯಾನದ ಕೆಳಗೆ, ಹಸಿರು ಚಾದರ ಮೇಲೆ ಚಚ್ಚೌಕದ ಪಗಡೆಯ ಹಾಸು. ಚೌಕಗಳಲ್ಲಿ ಜೋಡಿಸಿರುವ ಕಾಯಿಗಳು. ಹಾಸಿನ ಎದುರು ಕುಳಿತಿದ್ದವರ ಅಂಗೈಯಲ್ಲಿ ಕವಡೆಗಳು ಕುಲು ಕಾಡುತ್ತಿದ್ದವು. ಸುತ್ತಲೂ ಕಾತುರ ತುಂಬಿದ ಕಣ್ಣುಗಳು ಕವಡೆಯತ್ತ ದೃಷ್ಟಿ ನೆಟ್ಟಿದ್ದವು. ಪಗಡೆ ಹಾಸಿನ ಪಕ್ಕದಲ್ಲಿ ಕವಡೆ ಉರುಳುತ್ತಿದ್ದಂತೆ, ‌ಅಕ್ಕಪಕ್ಕದಲ್ಲಿದ್ದವರು ಪಂಚ್ವಿಸ್, ದಶಾ, ಭಾರಾ, ಚಕ್ಕಾ, ಚಾರೀ, ತೀನೀ, ದೋನಿ.. ಎಂದು ಕೂಗುತ್ತಾ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಿದ್ದರು.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕುಲಗೋಡದಲ್ಲಿ ನಡೆಯುವ ವಾರ್ಷಿಕ ‘ಪಾರಿಜಾತ ಪಗಡೆ ಆಟದ ಸ್ಪರ್ಧೆ’ಯ ಒಂದು ಝಲಕ್ ಇದು. ಈ ಗ್ರಾಮದಲ್ಲಿ ಪ್ರತಿ ವರ್ಷ ‘ಶ್ರೀಕೃಷ್ಣ ಪಾರಿಜಾತ’ ಬಯಲಾಟದ ಪಿತಾಮಹ ಕುಲಗೋಡು ತಮ್ಮಣ್ಣ ಪ್ರತಿಷ್ಠಾನದವರು ರಾಷ್ಟ್ರಮಟ್ಟದ ಪಗಡೆ ಸ್ಪರ್ಧೆ ಆಯೋಜಿಸುತ್ತಾರೆ. ಈ ಸ್ಪರ್ಧೆಯಲ್ಲಿ ಬೆಳಗಾವಿ ಮಾತ್ರವಲ್ಲದೇ, ಪಕ್ಕದ ಮಹಾರಾಷ್ಟ್ರ, ಗೋವಾ ಸೇರಿದಂತೆ ಹೊರ ರಾಜ್ಯಗಳಿಂದಲೂ ಸ್ಪರ್ಧಿಗಳು ‌ಭಾಗವಹಿಸುತ್ತಾರೆ. ಬೆಳಿಗ್ಗೆ ಸೂರ್ಯನ ಬೆಳಕು. ರಾತ್ರಿ ಹೊನಲು ಬೆಳಕಿನಲ್ಲಿ ನಡೆಯುವ ಈ ಪಂದ್ಯಾವಳಿ ನೋಡಲು ಜನ ಜಾತ್ರೆ ಸೇರಿರುತ್ತದೆ. ಆದ್ದರಿಂದಲೇ ಇದನ್ನು ‘ಪಗಡೆ ಜಾತ್ರೆ’ ಎನ್ನುತ್ತಾರೆಆರಂಭದ ದಿನ ರಾತ್ರಿ ಹನ್ನೊಂದಕ್ಕೆ ಪಂದ್ಯ ಆರಂಭ. ಮುಂದೆ ಎರಡು ಅಥವಾ ಮೂರು ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಪಂದ್ಯಗಳು ನಿರಂತರವಾಗಿ ನಡೆಯುತ್ತವೆ. ಇದಕ್ಕಾಗಿಯೇ ಬೃಹತ್ ಬಯಲನ್ನು ಆಯ್ಕೆ ಮಾಡಿಕೊಂಡು, ಶಾಮಿಯಾನ ಹಾಕಿಸುತ್ತಾರೆ. ಒಂದೇ ಸೂರಿನಡಿ 30 ರಿಂದ 32 ಅಂಕಣಗಳನ್ನು ಸಿದ್ಧ ಮಾಡಿರುತ್ತಾರೆ. ಒಮ್ಮೊಮ್ಮೆ ಪಂದ್ಯ ಅರ್ಧ ಗಂಟೆಗೂ ಮುಗಿಯಬಹುದು. ಕೆಲವೊಮ್ಮೆ 5 ರಿಂದ 6 ಗಂಟೆಗಳವರೆಗೂ ಹಣಾಹಣಿ ನಡೆಯುತ್ತವೆ. ಆಗ ಇಡೀ ಪ್ರಾಂಗಣದಲ್ಲಿ ಸ್ಪರ್ಧೆಯ ಕಾವು ಮುಗಿಲುಮುಟ್ಟಿರುತ್ತದೆ. ಈ ಆಟ ನೋಡುವುದಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ನೂರಾರು ಮಂದಿ ಬರುತ್ತಾರೆ. ಬಂದವರೆಲ್ಲರಿಗೂ ಪ್ರಸಾದ ವಿನಿಯೋಗವಿರುತ್ತದೆ‘ಪಾರಿಜಾತ’ದಿಂದ ಪ್ರೇರಣೆಅಪರಾಳ ತಮ್ಮಣ್ಣ ಅವರ ‘ಶ್ರೀಕೃಷ್ಣ ಪಾರಿಜಾತ’ ಬಯಲಾಟವನ್ನು ಪರಿಷ್ಕರಿಸಿ, ಮೌಲ್ಯವರ್ಧಿಸಿ ಜನಮಾನಸದಲ್ಲಿ ಉಳಿಯುವಂತೆ ಸಿದ್ಧಪಡಿಸಿ ಅದನ್ನು ರಂಗದ ಮೇಲೆ ಪ್ರದರ್ಶಿಸಿದ ಕೀರ್ತಿ ಕಲಾವಿದ ಕುಲಗೋಡ ತಮ್ಮಣ್ಣನವರಿಗೆ ಸಲ್ಲುತ್ತದೆ. ಶ್ರೀಕೃಷ್ಣ ಪಾರಿಜಾತ ಬಯಲಾಟದಲ್ಲಿ ‘ಪಗಡೆ ಆಟ’ದ ಬಗ್ಗೆ ಸುಂದರವಾದ ವರ್ಣನೆ ಇದೆ. ಅದು ಈ ಭಾಗದ ಜನರಿಗೆ ಅತ್ಯಂತ ಪ್ರಿಯವಾದ ಸನ್ನಿವೇಶ. ಆ ಸನ್ನಿವೇಶವೇ ಪಗಡೆ ಆಟ ಜನಪ್ರಿಯಗೊಳ್ಳಲು ಕಾರಣ. ಇದೇ ಕಾರಣಕ್ಕಾಗಿಯೇ ಪಗಡೆ ಆಟವನ್ನು ಈ ಭಾಗದಲ್ಲಿ ‘ಪಾರಿಜಾತ ಕಲೆ’ ಎನ್ನುವುದೂ ಉಂಟು. ಒಂದು ಕಾಲದಲ್ಲಿ ‘ಪಾರಿಜಾತ’ದ ಹೆಸರಲ್ಲಿ ನೂರಾರು ಪಗಡೆಯಾಡುವ ತಂಡಗಳಿದ್ದವು. ಈಗ ಅವು ಬೆರಳಣಿಕೆಯಷ್ಟಾಗಿವೆ.ಈ ಪಗಡೆಯಾಟಬೆಳಗಾವಿ ಜತೆಗೆ, ಬಾಗಲಕೋಟೆಯ ಬೆನಕಟ್ಟಿ, ಅಥಣಿಯ ಸತ್ತಿ, ರಬಕವಿಯ ಹಳಂಗಳಿ, ನಾವಲಗಿ, ಮುಧೋಳದ ದಾದನಟ್ಟಿ, ಚನ್ನಾಳ, ಸವದತ್ತಿಯ ಅಸುಂಡಿ, ಹೂಲಿ, ಗುಳೇದಗುಡ್ಡದ ಬನ್ನಿಕಟ್ಟಿ, ಧಾರವಾಡದ ನರೇಂದ್ರ, ಪುಡಕಲ ಕಟ್ಟಿ, ಗೋಕಾಕದ ಅವರಾದಿ, ಕುಲಗೋಡ, ಕಮಲದಿನ್ನಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಗ್ರಾಮಗಳಲ್ಲಿ ಪಂದ್ಯಾವಳಿಗಳನ್ನು ಸಂಘಟಿಸಲಾಗುತ್ತಿದೆ. ದೀಪಾವಳಿ ಹಬ್ಬದ ವೇಳೆಯಲ್ಲಿ ಈ ಭಾಗದಲ್ಲಿ ಪಗಡೆ ಆಟ ರಂಗೇರುತ್ತದೆ.ಕಲೆ, ದೇಸಿ ಕ್ರೀಡೆ ಉಳಿಸುವ ಯತ್ನ‘ಶ್ರೀಕೃಷ್ಣ ಪಾರಿಜಾತ’ ಬಯಲಾಟದಂತಹ ಕಲೆ ಉಳಿಯಬೇಕು. ಜತೆಗೆ, ಗ್ರಾಮೀಣ ಕ್ರೀಡೆ ಪಗಡೆ ಆಟವನ್ನು ಉಳಿಸಬೇಕು ಎನ್ನುವುದು ಪ್ರತಿಷ್ಠಾನದ ಅಧ್ಯಕ್ಷ ರಮೇಶ ಕೌಜಲಗಿಯವರ ಉದ್ದೇಶ. ಅದಕ್ಕಾಗಿ ಅವರು ಒಂದೂವರೆ ದಶಕದಿಂದ ಈ ‘ಪಾರಿಜಾತ ಉತ್ಸವ’ ಮತ್ತು ‘ಪಗಡೆ ಉತ್ಸವ’ ಆಯೋಜಿಸಿಕೊಂಡು ಬಂದಿ ದ್ದಾರೆ. ‘ಪಾರಿಜಾತ ತಮ್ಮಣ್ಣ’ನ ಹೆಸರಿನಲ್ಲಿ ‘ಪಗಡೆ ಪ್ರಶಸ್ತಿ’ಯನ್ನೂ ನೀಡುತ್ತಿದ್ದಾರೆ. ಮೊದಲು ‘ಶ್ರೀಕೃಷ್ಣ ಪಾರಿಜಾತ’ ಬಯಲಾಟ ಪ್ರದರ್ಶನದ ಜತೆಗೆ, ಪಗಡೆ ಸ್ಪರ್ಧೆಯೂ ನಡೆಯುತ್ತಿತ್ತು.ಈವರೆಗೆ ಕುಲಗೋಡ ತಮ್ಮಣ್ಣ ಪ್ರತಿಷ್ಠಾನದಿಂದ ನಾಲ್ಕು ಬಾರಿ ಪಗಡೆ ಪಂದ್ಯಾವಳಿ ಸಂಘಟಿಸಲಾಗಿದೆ. ಈ ‍ಪಂದ್ಯಗಳಲ್ಲಿ ಜಾತಿ, ಧರ್ಮ ವರ್ಗ ಭೇದವಿಲ್ಲದೇ ಸಾವಿರಾರು ಮಂದಿ ಭಾಗವಹಿಸುತ್ತಾರೆ. ಹಾಗಾಗಿ ಇದು ಭಾವೈಕ್ಯ ಸಾರುವ ಕಾರ್ಯಕ್ರಮಪುರಾಣ, ಕಾವ್ಯಗಳಲ್ಲಿ ಪಗಡೆ ಎಂದರೆ ಜೂಜು ಎಂದೇ ಬಿಂಬಿಸಲಾಗಿದೆ. ಆದರೆ ಈ ಆಟಕ್ಕೆ ಇಲ್ಲಿ ಜೂಜಾಟದ ಸೋಂಕು ಸೋಕಿಲ್ಲ. ಕುತಂತ್ರ ಹೆಣೆಯುವ ಶಕುನಿಗಳಿಗೂ ಇಲ್ಲಿ ಅವಕಾಶ ಇಲ್ಲ. ಸತ್ಯ, ಧರ್ಮದಿಂದ ಆಟ ಆಡುವವರಿಗೆ ಇಲ್ಲಿ ಗೆಲುವು ಎನ್ನುವ ಪ್ರತೀತಿ ಇದೆ. ಅದಕ್ಕಾಗಿಯೇ ‘ಆಟ ಆಡಲಿಕ್ಕೆ ಬರೋರೆಲ್ಲ ಧರ್ಮರಾಜರಾಗಿ ಬರ‍್ರೀ…’ ಎಂದು ಸಂಘಟಕರು ಕೋರುತ್ತಾರೆಪಗಡೆ ಆಟ ಹಿರಿಯರಿಗೆ ಸೀಮಿತವಾಗಿಲ್ಲ. ಮುಂದಿನ ಪೀಳಿಗೆಯೂ ಈ ದೇಸಿ ಆಟವನ್ನು ಮುಂದುವರಿಸುತ್ತಿದ್ದಾರೆ. ‘ಇದು ಜನಪದ ಕ್ರೀಡೆಯಷ್ಟೇ ಅಲ್ಲ. ಮಕ್ಕಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಸುವ ಟಾನೀಕು. ಇದರಲ್ಲಿ ಗಣಿತದ ಜ್ಞಾನವಿದೆ. ಹಾಗಾಗಿ ಮಕ್ಕಳ ಓದಿಗೆ ಪೂರಕವೂ ಆಗಿರುತ್ತದೆ’ ಎನ್ನುವುದು ಸಾಮಾನ್ಯ ಅಭಿಪ್ರಾಯ.rಪಾರಿಜಾತ ಪಿತಾಮಹ ಕುಲಗೋಡು ತಮ್ಮಣ್ಣ ಪ್ರತಿಷ್ಠಾನ, ಕೌಜಲಗಿ ನಿಂಗಮ್ಮ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಪಗಡೆ ಅಮೆಚೂರ್ ಅಸೋಸಿಯೇಷನ್‍ ಸಹಯೋಗದೊಂದಿಗೆ ಕುಲಗೋಡಿನಲ್ಲಿ ಇದೇ ಮೇ 11ರಂದು ರಾಷ್ಟ್ರಮಟ್ಟದ ಪಗಡೆ ಪಂದ್ಯಾವಳಿ ಆಯೋಜಿಸಲಾಗಿದೆ. 3ದಿನಗಳ ಕಾಲ ಸ್ಪರ್ಧೆ ನಡೆಯಲಿದೆ.ಅಂದಾಜು 100ರಿಂದ 120 ತಂಡಗಳು ಪಂದ್ಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರಮೇಶ ಕೌಜಲಗಿ ಹಾಗೂ ಗೌರವಾಧ್ಯಕ್ಷ ಯಾ. ರು. ಪಾಟೀಲ ತಿಳಿಸಿದ್ದಾರೆ. ಪಂದ್ಯಕ್ಕಾಗಿ 32 ಪಗಡೆ ಪಟ್ಟಾಗಳನ್ನು ಸಿದ್ಧಗೊಳಿಸಲಾಗಿದೆ. ಬೆಳಿಗ್ಗೆ ಸೂರ್ಯನ ಬೆಳಕಲ್ಲಿ ಮತ್ತು ರಾತ್ರಿ ಹೊನಲು ಬೆಳಕಿನಲ್ಲಿ ಪಂದ್ಯಗಳು ನಡೆಯುತ್ತಿವೆಒಟ್ಟು 32 ಬಹುಮಾನಗಳನ್ನು ಇಟ್ಟಿದ್ದಾರೆ. ಚಾಂಪಿಯನ್ ತಂಡಕ್ಕೆ ₹ 1,11,111 ನಗದು ಬಹುಮಾನ. ಜತೆಗೆ 8 ಅಡಿ ಎತ್ತರದ ಆಕರ್ಷಕ ‘ಡಾಲ್’ ನೀಡುತ್ತಾರೆ. ವಿವಿಧ ಹಂತಗಳಲ್ಲಿ ಗೆಲ್ಲುವ ಹಾಗೂ ಸೋಲುವವರಿಗೆ ಒಂದೊಂದು ಮೊತ್ತದ ನಗದು ಬಹುಮಾನಗಳಿವೆ. ಪಗಡೆ ಉತ್ಸವದಲ್ಲಿ ಸಾಹಿತಿಗಳು, ಜಾನಪದ ತಜ್ಞರು, ಊರಿನ ಗಣ್ಯರು ಅತಿಥಿಗಳಾಗಿ ಭಾಗವಹಿಸುತ್ತಾರೆ. ಪಗಡೆ ಸ್ಪರ್ಧೆ ಕುರಿತು ಹೆಚ್ಚಿನ ಮಾಹಿತಿಗೆ ‌ಮೊಬೈಲ್: 9686278121, 8496019738‘ಪಾರಿಜಾತ’ದಲ್ಲಿ ಪಗಡೆಕುಲಗೋಡ ತಮ್ಮಣ್ಣಾ ರಚಿಸಿರುವ ’ಶ್ರೀಕೃಷ್ಣ ಪಾರಿಜಾತ’ ಬಯಲಾಟದಲ್ಲಿ ಪಗಡೆ ಬಗ್ಗೆ ಮನಮೋಹಕ ಸನ್ನಿವೇಶವಿದೆ. ‘+’ ಆಕಾರದ ನಾಲ್ಕು ಭಾಗದ ಪಗಡೆ ಪಟ್ಟಾಕ್ಕೆ ಮನುಷ್ಯನ ಜನ್ಮ ವೃತ್ತಾಂತ ಜೋಡಿಸುತ್ತಾರೆ. ನಾಲ್ಕು ಭಾಗಕ್ಕೆ ಅಂಡಜ, ಪಿಂಡಜ, ಉದ್ಬೀಜ್, ಶ್ವೇತಜ್ ಎಂಬ ಹೆಸರು.ಪಗಡೆ ಪಟ್ಟದ ನಾಲ್ಕು ಭಾಗಗಳು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸವನ್ನು ಸಂಕೇತಿಸುತ್ತದೆ. ಮೂರು, ಮೂರು ಸಾಲು ಮನೆಗಳು ಕರ್ಮ, ಉಪಾಸನ, ಜ್ಞಾನ ಮಾರ್ಗವನ್ನು ಹೇಳುತ್ತವೆ. ಆಟಕ್ಕೆ ಬಳಸುವ 6 ಕವಡೆಗಳು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸಂಕೇತವಾದರೆ, ಪಗಡೆ ಪಟ್ಟಾದಲ್ಲಿರುವ 84 ಮನೆಗಳು 84 ಲಕ್ಷ ಜೀವರಾಶಿಗಳನ್ನು ಸಂಕೇತಿಸುತ್ತವೆ.ಇದರಲ್ಲಿ 12 ಕಟ್ಟೆಮನೆಗಳಿದ್ದು, ಅವು ಗುರುಸ್ಥಾನವನ್ನು ಸೂಚಿಸುತ್ತವೆ. ‘ಹೊಟ್ಟೆಮನೆ’ ಎಂದು ಗುರುತಿಸುವ ಜಾಗ, ತಾಯಿಯ ಉದರದಲ್ಲಿದ್ದಾಗ ಬೆಳೆಯುವ ಮಗುವಿಗೆ ಶ್ರೀರಕ್ಷೆ ಇರುವಂತೆ ಎದುರಾಳಿ ಕಾಯಿಗಳಿಂದ ಇಲ್ಲಿರುವ ಕಾಯಿ ಭಯಮುಕ್ತವಾಗಿರುತ್ತದೆ.rಹೀಗೆ ಅಧ್ಯಾತ್ಮದ ಸಂಕೇತವಾಗಿರುವ ಪಗಡೆ ಆಟವನ್ನು ‘ಪಗಡೆ ಎಂದರೆ ಬರೀ ಆಟವಲ್ಲೋ…ಅಣ್ಣಾ.. ಅದು ಜೀವನ ಪಾಠ, ಜ್ಞಾನದ ಪಾಠ, ಅದೃಷ್ಟದ ಆಟ, ದೇವರ ಧ್ಯಾನ ಕಾಣೋ’ ಎನ್ನುತ್ತಾ ಈ ಭಾಗದ ಗ್ರಾಮೀಣರು ಭಕ್ತಿಯಿಂದ ಆಟವಾಡುತ್ತಾರೆ
coutrsey:prajavani .net
author”: “ಬಾಲಶೇಖರ ಬಂದಿ”,
https://www.prajavani.net/pagade-jaatre-634479.html

Leave a Reply