ಕಾವ್ಯಗಂಧಿ ವಿಚಾರ–ವಿಹಾರ

ಕಾವ್ಯಗಂಧಿ ವಿಚಾರ–ವಿಹಾರ


‘ಚಿತ್ರದ ಕುದುರೆ’ ಕೆ.ವಿ. ಅಕ್ಷರ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಪ್ರತಿಕ್ರಿಯಾತ್ಮಕ ರೂಪದ ಬರಹಗಳ ಸಂಕಲನ. ‘ಕಥನಗಳು’, ‘ಸಂಗತಿಗಳು’ ಹಾಗೂ ‘ಚಿತ್ರಗಳು’ ಎನ್ನುವ ಭಾಗಗಳಲ್ಲಿ ಒಟ್ಟುಗೊಂಡಿರುವ ಸಂಕಲನದ ಎಲ್ಲ ಬರಹಗಳಲ್ಲೂ ಓದುಗನೊಂದಿಗೆ ಸಂವಾದಿಸುವ, ಸಂವಾದಕ್ಕೆಳೆಯುವ ಗುಣವಿದೆ.
ಸಂಕಲನದ ಪ್ರಾತಿನಿಧಿಕ ಬರಹವಾಗಿ ‘ವಿನಯ–ವಿಸ್ಮಯ–ವೈಖರಿ’ ಬರಹವನ್ನು ನೋಡಬಹುದು. ‘ಕವಿತೆ ಅಂದರೆ ಏನು? ವಿನಯ ವಿಸ್ಮಯ ವೈಖರಿ’ ಎಂದು ಪುತಿನ ಅವರು ಎಲ್ಲೋ ಹೇಳಿದ್ದಾರೆ ಎನ್ನುವ ಮಾತನ್ನು ಹಿಡಿದು, ಆ ಮಾತಿಗೆ ಪುತಿನ ಅವರ ವಿಚಾರಗಳಿಂದಲೇ ಪುಷ್ಟಿ ಒದಗಿಸುವ ಕೆ.ವಿ. ಅಕ್ಷರ ಕಾವ್ಯಸ್ವರೂಪದ ಕುರಿತು ಮೀಮಾಂಸೆಯೊಂದನ್ನು ಕಂಡುಕೊಂಡಿದ್ದಾರೆ. ಕವಿಯ ಜಾಗೃತಪ್ರಜ್ಞೆಯಲ್ಲಿ ಇರುವ ವಿದ್ಯಮಾನಗಳು ಕಾವ್ಯದ ರೂಪ ಪಡೆಯುತ್ತಿರುವ ಸಮಕಾಲೀನ ಸಾಹಿತ್ಯ ಸಂದರ್ಭಕ್ಕೆ ಪ್ರತಿಕ್ರಿಯೆಯಂತಿರುವ ಈ ಬರಹ, ಕವಿಯ ಜಾಗೃತಪ್ರಜ್ಞೆಯಲ್ಲಿ ಇಲ್ಲದ ಯಾವುದೋ ಸಂಗತಿ ಕಾವ್ಯದೊಳಗೆ ಪ್ರವೇಶ ಪಡೆಯಬೇಕಾದ ಅಗತ್ಯವನ್ನು ಸೂಚಿಸುತ್ತ, ಓದುಗರು ಕವಿ ಊಹಿಸಿಯೂ ಇಲ್ಲದ ಅನುಭವಗಳನ್ನು ಕಾವ್ಯದಿಂದ ಪಡೆಯುವ ವಿಸ್ಮಯ ಕವಿತೆಗೆ ಅಗತ್ಯ ಎನ್ನುತ್ತದೆ. ಈ ವಾದವನ್ನು ಹೂಡುವ ನಿಟ್ಟಿನಲ್ಲಿ ಅಕ್ಷರ ಅವರು, ಪುತಿನ ಅವರು ಹೇಳಿದ ‘ವಿನಯ ವಿಸ್ಮಯ ವೈಖರಿ’ಗಳನ್ನು ತಮ್ಮ ಬರಹಕ್ಕೂ ಅನ್ವಯಿಸಿಕೊಂಡಿದ್ದಾರೆ. ಅಷ್ಟುಮಾತ್ರವಲ್ಲ, ‘ಚಿತ್ರದ ಕುದುರೆ’ ಸಂಕಲನದ ಎಲ್ಲ ಬರಹಗಳ ಕೇಂದ್ರದಲ್ಲಿರುವುದು ಈ ತ್ರಿಲಕ್ಷಣಗಳೇ ಆಗಿವೆ.
‘ವಿನಯ–ವಿಸ್ಮಯ–ವೈಖರಿ’ ಬರಹದ ಪೂರಕಚಿಂತನೆಯಾಗಿ ‘ಕಳಚಿದ ಕೊಂಡಿಗಳು’ ಬರಹವನ್ನು ಓದಿಕೊಳ್ಳಬಹುದು. ಗ.ಸು. ಭಟ್ಟರ ಕಾವ್ಯವನ್ನು ವಿಶ್ಲೇಷಿಸುತ್ತ, ‘ಕಾವ್ಯವು ಸಾಮಾಜಿಕ ಕಳಕಳಿಯ ಮುಖವಾಣಿಯಾಗಬೇಕು, ಮತ್ತು ವರ್ತಮಾನ ವಾಸ್ತವಗಳ ಪ್ರತಿಬಿಂಬವಾಗಬೇಕು – ಎಂಬ ಅರೆಬೆಂದ ತಿಳಿವಳಿಕೆಗಳು ಕಲಸುಮೇಲೋಗರಗೊಂಡು ಇವತ್ತು ಕಾವ್ಯವೆಂಬುದು ಲಯಬದ್ಧ ಭಾಷೆಯಲ್ಲಿ ಸಂಭವಿಸುವ ಒಂದು ಪ್ರಕ್ರಿಯೆಯೆಂಬುದೂ, ಅದು ಚಿಂತನೆಯ ಅನುವಾದವಲ್ಲವೆಂಬುದನ್ನೂ ಮರೆತುಹೋದ ಸ್ಥಿತಿಯಲ್ಲಿ ನಾವಿದ್ದೇವೆ’ ಎನ್ನುವ ಲೇಖಕರ ಅಭಿಪ್ರಾಯವನ್ನು ಪ್ರಸ್ತುತ ಕಾವ್ಯೋದ್ಯೋಗದಲ್ಲಿ ತೊಡಗಿರುವವರು ಚರ್ಚಿಸಬಹುದು.
ನೀ.ನಾ. ಮಧ್ಯಸ್ಥ ಹಾಗೂ ಗ.ಸು. ಭಟ್ಟರ ಶ್ರದ್ಧಾಂಜಲಿ ರೂಪದ ‘ಕಳಚಿದ ಕೊಂಡಿಗಳು’ ವ್ಯಕ್ತಿಚಿತ್ರ ಪ್ರಕಾರಕ್ಕೊಂದು ಸೊಗಸಾದ ಮಾದರಿ. ಅಗಲಿದ ಇಬ್ಬರು ಹಿರಿಯರನ್ನು ನೆನಪಿಸಿಕೊಳ್ಳುತ್ತ, ಅವರ ನೆನಪುಗಳ ಮೂಲಕ ಸಾಹಿತ್ಯಪ್ರಜ್ಞೆ ಹಾಗೂ ಜೀವನವಿಧಾನವೊಂದನ್ನು ಅಕ್ಷರ ಪರಿಶೀಲಿಸುವ ವಿಧಾನ ಅಪೂರ್ವವಾದುದು. ಹಿರಿಯರ ಸಾವು ವ್ಯಕ್ತಿಗತವಾಗಿ ಮಾತ್ರವಲ್ಲದೆ, ಅವರು ಪ್ರತಿನಿಧಿಸುತ್ತಿದ್ದ ಎರಡು ಮಾರ್ಗಗಳ ಕಣ್ಮರೆಯೂ ಹೌದೆನ್ನುವ ಲೇಖಕರ ವಿಷಾದ ಓದುಗರದೂ ಆಗುತ್ತದೆ.
‘ನಮಗೆ ದಕ್ಕುವ ಶೇಕ್‌ಸ್ಪಿಯರ್‌: ಮಹಾಕವಿಯ ಕನ್ನಡೀಕರಣದ ಕಥನಗಳು’ ಸಂಕಲನದ ಮತ್ತೊಂದು ಮುಖ್ಯ ಬರಹ. ಕನ್ನಡದ ಮನಸ್ಸುಗಳಿಗೆ ಶೇಕ್‌ಸ್ಪಿಯರ್‌ನ ಆಂಶಿಕ ಗ್ರಹಿಕೆಯಷ್ಟೇ ಸಾಧ್ಯವಾಗಿರುವುದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ, ಈವರೆಗಿನ ಶೇಕ್‌ಸ್ಪಿಯರ್‌ ಕೃತಿಯ ಕನ್ನಡ ರೂಪಾಂತರಗಳನ್ನೂ ಹಾಗೂ ತಮ್ಮ ರಂಗಪ್ರಯೋಗಗಳನ್ನು ವಿಶ್ಲೇಷಣೆಗೆ ಹಚ್ಚಿರುವ ಪ್ರಯತ್ನ ಇಲ್ಲಿದೆ. ಶೇಕ್‌ಸ್ಪಿಯರ್ ಭಾಷೆ ಒಡ್ಡುವ ಸವಾಲುಗಳು, ಆತನ ಕೃತಿಗಳಲ್ಲಿನ ಅನನ್ಯ ಸ್ವಗತಗಳನ್ನು ಪ್ರಸ್ತುತಿಪಡಿಸುವ ಬಗೆ – ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹಂಬಲಿಸುವ ಬರಹ, ಮಹಾಕವಿಯ ಬಗ್ಗೆ ಓದುಗರಲ್ಲಿ ಆಸಕ್ತಿ, ಕುತೂಹಲವನ್ನು ಹೆಚ್ಚಿಸುತ್ತದೆ.
‘ಕಥನಗಳು’ ಭಾಗದಲ್ಲಿ ಸಾಹಿತ್ಯದ ವಿದ್ಯಾರ್ಥಿಗಳ ಆಸಕ್ತಿಯನ್ನು ಕೆರಳಿಸಬಲ್ಲ ಬರಹಗಳಿದ್ದರೆ, ‘ಸಂಗತಿಗಳು’ ಭಾಗ ಸಾಮಾಜಿಕ ಸಂಗತಿಗಳಿಗೆ ಲೇಖಕರ ಪ್ರತಿಕ್ರಿಯೆಗಳಾಗಿವೆ. ಚಲನಶೀಲವಾಗಿದ್ದ ಗ್ರಾಮಗಳ ಸ್ವರೂಪ ಸ್ಥಾವರಗೊಂಡ ನಂತರ ‘ಗ್ರಾಮ’ ಎನ್ನುವ ಪರಿಕಲ್ಪನೆಯಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಚರ್ಚಿಸುವ ‘ಸಂಗ್ರಾಮಭಾರತದ ಮನೋಮುದ್ರೆಗಳು’ ಬರಹ, ಅನೇಕ ರೂಪಕಗಳ ಮೂಲಕ ಗ್ರಾಮವೆನ್ನುವುದು ನಮ್ಮ ರಾಜಕಾರಣ ಹಾಗೂ ಅಧಿಕಾರಶಾಹಿಗೆ ಯಾವ ರೂಪದಲ್ಲಿ ಅನ್ಯವಾಗಿದೆ ಎನ್ನುವುದನ್ನು ಚಿತ್ರಿಸುತ್ತದೆ. ‘ಸಾಲಮನ್ನಾ ಕುರಿತು ರೈತರು ಯಾಕೆ ಮಾತನಾಡುವುದಿಲ್ಲ?’ ಬರಹ, ಸಾಲಮನ್ನಾ ರೀತಿಯ ಜನಪ್ರಿಯ ಕಾರ್ಯಕ್ರಮದ ಹಲವು ಆಯಾಮಗಳನ್ನು ಚರ್ಚಿಸುತ್ತ, ರೈತ ಸಮುದಾಯದ ಅವ್ಯಕ್ತ ಚಿಂತನೆ ಹಾಗೂ ಕ್ರಿಯಾಶೀಲತೆಯಿಂದ ಹುಟ್ಟುವ ಪ್ರಾಯೋಗಿಕ ವಿವೇಕವಷ್ಟೇ ಕೃಷಿಕ್ಷೇತ್ರದ ಬಿಕ್ಕಟ್ಟನ್ನು ಪರಿಹರಿಸಬಲ್ಲದು ಎನ್ನುವ ನಿಲುವಿಗೆ ತಲುಪುತ್ತದೆ. ರೈತರ ತವಕತಲ್ಲಣಗಳ ಬಗ್ಗೆ ಚರ್ಚಿಸುವ ಈ ಬರಹದಲ್ಲಿ ರೈತರ ಆತ್ಮಹತ್ಯೆಯ ಪ್ರಸ್ತಾಪವೇ ಇಲ್ಲದಿರುವುದು ಕುತೂಹಲಕರ. ಹಾಗೆಯೇ ಅಕ್ಷರ ಅವರು ಚರ್ಚಿಸುವ ರೈತ, ವಾಣಿಜ್ಯೋದ್ಯಮ ಉತ್ಪನ್ನಗಳ ಬೆಳೆಗಾರನೋ ಅಥವಾ ಚೂರುಪಾರು ಭೂಮಿಯನ್ನು ಹೊಂದಿ ಮಳೆಯೊಂದಿಗೆ ಜೂಜಾಡುವ ಸಣ್ಣರೈತನೋ – ಇವರಲ್ಲಿ ಯಾರೆನ್ನುವುದೂ ಸ್ಪಷ್ಟವಾಗುವುದಿಲ್ಲ.
ಸಂಕಲನ ಮೂರನೇ ಭಾಗದ ‘ಚಿತ್ರಗಳು’ ಗಾತ್ರದಲ್ಲಿ ಕಿರಿದಾದುದು. ಅಭಿನಂದನಾ ಗ್ರಂಥಗಳಿಗೆ ಬರೆದ ಲೇಖನಗಳು ಹಾಗೂ ವಿವಿಧ ಲೇಖಕರ ಕೃತಿಗಳಿಗೆ ಬರೆದ ಮುನ್ನುಡಿಗಳನ್ನು ಒಳಗೊಂಡಿರುವ ಈ ಭಾಗ ಲೇಖಕರ ಓದು–ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಒಳದಾರಿಗಳಾಗಿವೆ.
ತಮ್ಮ ಕವಿತೆಯೊಂದರ ಶೀರ್ಷಿಕೆಯನ್ನೇ ಪುಸ್ತಕದ ತಲೆಬರಹವಾಗಿರಿಸಿರುವ ಅಕ್ಷರ, ಆ ಕವಿತೆಯನ್ನು ಪ್ರವೇಶಿಕೆಯ ರೂಪದಲ್ಲಿ ನೀಡಿದ್ದಾರೆ. ಈ ಕಾವ್ಯಗಂಧ ಪುಸ್ತಕದುದ್ದಕ್ಕೂ ಓದುಗರ ಅನುಭವಕ್ಕೆ ಬರುವಂತಿದೆ. ಸಾಹಿತ್ಯದ ವಿದ್ಯಾರ್ಥಿಗಳು, ಮುಖ್ಯವಾಗಿ ಹೊಸ ತಲೆಮಾರಿನ ಕವಿಗಳು ಓದಬೇಕಾದ ‘ಚಿತ್ರದ ಕುದುರೆ’ – ತಕರಾರುಗಳನ್ನು ಇಟ್ಟುಕೊಂಡೇ ಪ್ರೀತಿಸಬಹುದಾದ, ಆಸ್ವಾದಿಸಬಹುದಾದ ವಿಶಿಷ್ಟ ಕೃತಿ.

Courtesy :Prajavani.net

https://www.prajavani.net/artculture/book-review/kavyagandhi-vicahara-vihara-635891.html

Leave a Reply