ಕರ್ಣಚೈತ್ರನ ಪರ್ಣಶಾಲೆ

ಕುವೆಂಪು ಅವರು ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಅಯೋಧ್ಯಾ ಸಂಪುಟದ ‘ಚಿತ್ರಕೂಟಕೆ’ ಸಂಚಿಕೆಯಲ್ಲಿ ಭರದ್ವಾಜ ಋಷಿಗಳ ಆಶ್ರಮದ ಚಿತ್ರಣ ನೀಡಿದ್ದಾರೆ. ಮುನಿಗಳು ಶಿಷ್ಯ ಹಾರೀತನಿಗೆ ಹಿರಿಯ ಅತಿಥಿಗಳಾದ ಶ್ರೀರಾಮ, ಸೀತೆ, ಲಕ್ಷ್ಮಣರನ್ನು ಕಾಯ್ದು ಕರೆದುಕೊಂಡು ಬರಲು ತಿಳಿಸುತ್ತಾರೆ. ಆ ಆಶ್ರಮ ಧ್ಯಾನ, ಜಪತಪ ಶಾಂತಿಯ ನೆಲೆಯಾಗಿರುತ್ತದೆ. ಆಗ ಚೈತ್ರಮಾಸ. ವಸಂತ ಋತುವಿನ ಮೊದಲ ತಿಂಗಳು. ಭಾರತೀಯರಿಗೆ ಹೊಸ ವರ್ಷದ ಪ್ರಾರಂಭದ ಪವಿತ್ರ ಮಾಸ. ಇಂದು ನಾಡಿಗೆ ಅದರ ಮೊದಲ ದಿನ ಯುಗಾದಿ ಹಬ್ಬದ ಸಂಭ್ರಮ. ಇದು ಶ್ರೀ ಶಾರ್ವರಿ ಸಂವತ್ಸರ. ಕುವೆಂಪು ಅವರು ಹುಟ್ಟಿ ಬೆಳೆದಿದ್ದು ದಟ್ಟ ಅರಣ್ಯದ ನಡುವಿನ ಕುಪ್ಪಳಿಯಲ್ಲಿ. ಅವರು ‘ಕಾಡಿನ ಕವಿ’. ಅವರು ‘ಪ್ರಕೃತಿಯಾರಾಧನೆಯೆ ಪಮನಾರಾಧನೆ; ಪ್ರಕೃತಿಯೊಲ್ಮೆಯೆ ಮುಕ್ತಿಯಾನಂದ ಸಾಧನೆ’ ಎಂದು ನಿಸರ್ಗ ಧ್ಯಾನದಲ್ಲಿ ಲೀನವಾದವರು. ವೇದಾಂತದ ಪ್ರಕಾರ ಜೀವನಿಗಿರುವ ಪಂಚಕೋಶಗಳು; ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ. ಕುವೆಂಪು ಅವರು ಇವುಗಳ ಜೊತೆಗೆ ಅರಣ್ಯಮಯಕೋಶ ತನಗಿದೆ ಎಂದು ಹೇಳಿಕೊಂಡಿದ್ದಾರೆ. ‘ಅನ್ನಮಯದಾಚೆಯಲಿ ಪ್ರಾಣಮಯದೀಚೆಯಲಿ ನನಗಿರುವುದೊಂದಲೆ, ಅರಣ್ಯಮಯ ಕೋಶ’.(ಅನಿಕೇತನ) ಹೀಗೆ ಮಲೆನಾಡಿನ ವನದ ಹಸುರು ಕಡಲಿನಲ್ಲಿ ಉಸಿರಾಡಿದ ಕವಿಯು ಅದರಲ್ಲಿ ಒಂದಾಗಿ ತನ್ನ ಆತ್ಮ ಹಸುರುಗಟ್ಟಿತು ಎಂದು ತಿಳಿಸಿದ್ದಾರೆ. ಹಸುರತ್ತಲ್‌! ಹಸುರಿತ್ತಲ್! ಹಸುರೆತ್ತಲ್‌ ಕಡಲಿನಲಿ ಹಸುರ‍್ಗಟ್ಟಿತೊ ಕವಿಯಾತ್ಮಂ ಹಸುರ್‌ನೆತ್ತರ್‌ ಒಡಲಿನಲಿ! (ಪಕ್ಷಿಕಾಶಿ) ಅದೊಂದು ಹಸುರಿನಲ್ಲಿ ಒಂದಾದ ರಸಾನುಭೂತಿ. ಅಂತಹ ಹಸುರಿಗೆ ಬಣ್ಣ ಬೆಡಗು ಹೊಸ ಚೈತನ್ಯ, ಹೊಸರೂಹು, ಹೊಸ ನಲಿವು ಬರುವುದು ವಸಂತ ಋತುವಿನಲ್ಲಿ. ಬಿರುಬಿಸಿಲಿದ್ದರೂ ನೆಲದ ಪಸೆ ಹೀರಿದ ಸಸ್ಯಸಂಕುಲವು ಹಸಿರಿನಿಂದ ನಳನಳಿಸುತ್ತಿರುತ್ತದೆ. ಅವುಗಳ ಆನಂದ ಬಗೆ ಬಗೆಯ ಹೂಗಳಲ್ಲಿ ಹಲವು ವರ್ಣಗಳಲ್ಲಿ ಪ್ರಕಟಗೊಳ್ಳುತ್ತಿರುತ್ತದೆ. ಅದು ಹಲಸು, ಮಾವು, ನೇರಳೆ, ಕಿತ್ತಳೆ, ಸೀಬೆ ಮೊದಲಾದ ಹಣ್ಣುಗಳನ್ನು ನೀಡಿ ಪ್ರಾಣಿ–ಪಕ್ಷಿಗಳನ್ನು ಪೋಷಿಸುತ್ತಿರುತ್ತದೆ. ವಸಂತ ಮಾಸದ ಕೋಗಿಲೆ, ಗಿಣಿ, ಕಾಜಾಣ ಮುಂತಾದ ವಿವಿಧ ಪ್ರಭೇದದ ಪಕ್ಷಿಗಳ ಕೂಜನ, ಕುಕಿಲು, ಕಲರವ ನಾದವನ್ನು ಕುವೆಂಪು ಅವರು‘ಮೌನವೆ ಮಹಾಸ್ತೋತ್ರಂ ಈ ಭೂಮ ಭಾವ್ಯಸೌಂದರ್ಯ ದಾರಾಧನೆಗೆ!(ಪಕ್ಷಿಕಾಶಿ) ಎಂದು ಧ್ಯಾನಿಸಿದ್ದಾರೆ. ಅವರಿಗೆ ಹಾಡುವ ಹಕ್ಕಿಗಳು, ನಭದಲ್ಲಿ ಪ್ರಕಾಶಿಸುವ ಹೂವುಗಳಾಗಿವೆ. ‘ಹಾಡುವ ಹಕ್ಕಿಹಳೆಸೆಯುವ ಹೂಗಳು, ನೆರೆ ಮನಮೋಹಿಪ ನೋಟಗಳು’ (ಕದರಡಕೆ). ಹಕ್ಕಿಗಳ ಉಲಿತ ಅವರಿಗೆ ವಾಙ್ಮಯ ವೇದ ಓಂಕಾರನಾದವಾಗಿ, ಅದು ತನಗೆ ಶ್ರೀಗುರುವಿನ ಕೃಪೆಯಿಂದ ದೊರೆತುದು ಎಂದು ಹಿಗ್ಗಿದ್ದಾರೆ.ಶ್ರೀಗುರುವಿನ ಅಹಮಸ್ಮಿಯ ಆಶೀರ್ವಾದ, ಭಾಷೆಯೆ ಅಲ್ಲದ ಅರ್ಥವೆ ಇಲ್ಲದ ಅತಿವಾಙ್ಮಯ ವೇದ, ಉಲಿವ ವಿಹಂಗಮವಾಗಿದೆ ಆ ಓಂಕಾರದ ನಾದ! (ಅನಿಕೇತನ) ಅವರ ಕವಿ ಪ್ರತಿಭೆ ವಸಂತ ಋತುವನ್ನು ಕರ್ಣಚೈತ್ರವಾಗಿ ಆಲಿಸಿದೆ. ವಸಂತ ಋತುವಿನ ಗತಿಶೀಲತೆಗೆ ಹಕ್ಕಿಗಳು ಪ್ರತೀಕವಾಗಿವೆ. ವಸಂತ ಋತುವನ್ನು ಇದುವರೆಗೆ ಅನುಭವಿಸಿ ವರ್ಣಿಸಿದ ಕವಿಗಳಿಗಿಂತ ಭಿನ್ನವಾಗಿ –ಪಕ್ಷಿಗಳ ನಾದಾನುಭವದಲ್ಲಿ ಲೀನವಾಗಿ ಆ ಋತುವನ್ನು ‘ಕರ್ಣಚೈತ್ರ’ ಎಂದು ಕರೆದಿದ್ದಾರೆ. ಅದು ವಸಂತ ಋತುವಿನ ಕರ್ಣಾನಂದ ರಸತತ್ವವನ್ನು ಆಸ್ವಾದಿಸಿ ಕಾವ್ಯದಲ್ಲಿ ಪ್ರಕಟಿಸಿದ ಆಹ್ಲಾದ. ಪಕ್ಷಿಗಳು ಆ ಋತುವಿನ ಧ್ವನಿಯಾಗಿ, ಪ್ರಕೃತಿಯ ಸಂವಹನ ಧಾತುವಾಗಿರುವ ಕಲ್ಪನಾ ಸೌಂದರ್ಯ ಕಾವ್ಯಲೋಕದಲ್ಲಿ ಹೊಸತು. ಅದನ್ನು ಸಿ. ನಾಗಣ್ಣ ಅವರು, ‘audilory spring’ ಎಂದು ಕರೆದಿದ್ದಾರೆ. ‘ಕರ್ಣಚೈತ್ರ’ ವಸಂತ ಋತುವಿನ ಬಗ್ಗೆ ಧ್ಯಾನಿಸಿದ ಮಹಾಕವಿಯ ನವನವೀನ ಬೌದ್ಧಿಕ ಲಹರಿಯ ಹೊಸ ಪದ ಸೃಷ್ಟಿ. ಅದನ್ನು ಆಶ್ರಮದ ಚಿತ್ರಣದಲ್ಲಿ ಹೀಗೆ ಬಣ್ಣಿಸಿದ್ದಾರೆ. ‘ಹಸುರು ಹೂ ಹಣ್ಣು ಕಾಯ್‌ವೊತ್ತ ತರುಗಳಲಿ ಶತಶತ ವಿವಿಧ ಪಕ್ಷಿಚಿತ್ರಸ್ವನಂ ವರ್ಣ ವರ್ಣ ಸ್ವರ್ಣಮಯ ರಂಗವಲ್ಲಿಯನಿಕ್ಕುತಿದೆ ಕರ್ಣಚೈತ್ರನಾ ಪರ್ಣಶಾಲೆಯಲಿ’ (1.7, ಸಾಲು 173,–177) ವಸಂತ ಋತುಮಾನದ ‘ಕರ್ಣಚೈತ್ರ’ನ ಪರ್ಣಶಾಲೆಯ ಆಗಸದಲ್ಲಿ ಹಕ್ಕಿಗಳು ‘ವರ್ಣವರ್ಣ ಸ್ವರ್ಣಮಯ ರಂಗವಲ್ಲಿ’ಯನ್ನು ಇಕ್ಕುತ್ತಿವೆ!

author – ಡಾ.ಜಿ. ಕೃಷ್ಣಪ್ಪ

courtsey:prajavani.net

https://www.prajavani.net/artculture/article-features/ramayana-darshanam-kuvempu-713840.html

Leave a Reply