ಆಂತರ್ಯದ ಸಾಧನೆ ಮಹಿಳೆಗೆ ಪೋಷಣೆ

ಆಂತರ್ಯದ ಸಾಧನೆ ಮಹಿಳೆಗೆ ಪೋಷಣೆ

ಸ್ಫರ್ಧೆ ಅನ್ನೋದು ಎಲ್ಲರಿಗೂ ಬೇಕು. ಆ ಸ್ಫರ್ಧೆ ಆರೋಗ್ಯಯುತವಾಗಿರಬೇಕು ಹಿತಕಾರಿಯಾಗಿರಬೇಕು ಮತ್ತು ಎಲ್ಲರಿಗೂ ಪ್ರೋತ್ಸಾಹಕಾರಿಯಾಗಿರಬೇಕು. ಇದರಿಂದ ಪ್ರತಿಯೊಬ್ಬ ಮಹಿಳೆ ತನ್ನ ಸಾಧನೆಯನ್ನು ಪ್ರದರ್ಶಿಸಬಲ್ಲಳು. ಮಹಿಳೆ ಪ್ರಭುದ್ಧಳು, ಎಲ್ಲ ಸಮಸ್ಯೆಗಳನ್ನು ತನ್ನ ಚಾಕಚಕ್ಯತೆಯಿಂದ ನಿಭಾಯಿಸುವ ಜಾಣ್ಮೆಯನ್ನು ಹೊಂದಿದವಳು. ಮನೆಯವರ ಸಹಕಾರದಿಂದಲೇ ಪ್ರತಿಯೊಂದರಲ್ಲಿ ಯಶಸ್ಸನ್ನು ಸಾಧಿಸಬಲ್ಲಳು. ಅವಳು ಸಶಕ್ತಳು. ಮುಖ್ಯವಾಗಿ ಅವಳಲ್ಲಿಯ ಪ್ರತಿಭೆಯನ್ನು ಗುರುತಿಸಿ ಮಾನ್ಯತೆ ನೀಡಬೇಕಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ ೮ರಂದು ಅಂತರ  ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ ಹೊಸಹೊಸ ಘೋಷಣೆಗಳನ್ನು ಕೊಡುತ್ತ, ಪ್ರತಿಯೊಬ್ಬ ಮಹಿಳೆಯರನ್ನು ಪ್ರೇರೆಪಿಸುತ್ತಲೇ ಬಂದಿದೆ. ಅಂತೆಯೆ ಈ ವರ್ಷದ ಅತ್ಯಂತ ಉತ್ಸಾಹದ ಘೋಷಣೆ ಸ್ಫರ್ಧೆಯನ್ನು ಆಯ್ಕೆ ಮಾಡು.   ಮಹಿಳೆಯರ ದಿನಾಚರಣೆ ಹೇಗೆ ಶುರುವಾಯಿತು ಎಂಬುದರ ಬಗ್ಗೆ ಎಷ್ಟೋ ಮಹಿಳೆಯರಿಗೆ ಗೊತ್ತಿಲ್ಲ, ಆದರೂ ಮಹಿಳೆಯರ ದಿನ ಎಂದು, ಹ್ಯಾಪಿ ವುಮೆನ್ಸ ಡೇ ಎಂದು, ಕೈಗೆ ಕೈ ಮಿಲಾಯಿಸುತ್ತ, ಕೇಕ್ ಕಟ್ಮಾಡಿ, ಪಾರ್ಟಿಮಾಡಿ, ಅಪ್ಪಿಕೊಂಡು ಖುಷಿಪಡುತ್ತೇವೆ. ಆದರೆ ಮಹಿಳೆಯರ ದಿನ ಸ್ವಾರ್ಥಕವಾಗಿರದೇ, ಸಾರ್ಥಕವಾಗಿರಬೇಕು. ಅಂದಾಗ ಮಾತ್ರ ಮಹಿಳಾ ದಿನಾಚರಣೆ ಆಚರಿಸಿದ್ದಕ್ಕೂ ಹೆಮ್ಮೆಯಾಗುತ್ತದೆ. ಆದರೆ ಎಷ್ಟೋ ಮಹಿಳೆಯರಿಗೆ ತಮ್ಮತನದ ಸ್ವಾತಂತ್ರ್ಯ ದೊರೆತಿಲ್ಲ. ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ್ದೇನೆ. ಕೆಲವು ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಬಸ್ಸಿನಲ್ಲಿ, ವ್ಯಾಪಾರ ಮಾಡುವ ಸ್ಥಳಗಳಲ್ಲಿ, ಕಛೇರಿಗಳಲ್ಲಿ, ಕ್ಷುಲ್ಲಕ ಕಾರಣಕ್ಕಾಗಿ ಹೆಣ್ಣಿನ ಕುರಿತು ಅವಹೇಳನಕಾರಿ ಮಾತುಗಳನ್ನು ಹೇಳುತ್ತಾರೆ. ಬೆಳಗಾದರೆ ಸಾಕು ಆ ಮಗ, ಈ ಮಗ, ಏನು ಅರಿಯದ ಆ ತಾಯಿಗೆ ಈ ಬೈಗುಳ. ನಾವೆಲ್ಲರೂ ಆ ತಾಯಿಯ ಗರ್ಭದಿಂದಲೇ ಈ ಭುವಿಗೆ ಬಂದದ್ದಲ್ಲವೇ. ಯಾಕೆ ಈ ಅಸಭ್ಯತೆ.
ಪ್ರತಿವರ್ಷ ಉತ್ತೇಜಿತ ಘೋಷಣೆಗಳ ಜೊತೆಗೆ ಮಹಿಳೆಯರನ್ನು ಬಲಶಾಲಿ, ಸಬಲೀಕರಣ ಮಾಡುತ್ತಿರುವಂತೆ, ಜೀವನದಲ್ಲಿ ಬರುವಂಥ ಎಲ್ಲ ಸಮಸ್ಯೆಗಳನ್ನು ಎದುರಿಸಿ ಮುಂದೆ ಬರುತ್ತಲೇ ಇದ್ದಾಳೆ. ಆದರೆ ಇನ್ನೂ ಅವಳು ಹೊರಜಗತ್ತಿನಲ್ಲಿ ಅಸಹಕಾರತೆಯನ್ನು ಎದುರಿಸುತ್ತಿದ್ದಾಳೆ. ಪ್ರತಿಯೊಬ್ಬ ಮಹಿಳೆಯಲ್ಲಿ ಆಶಾವಾದಿತನ, ಧೀರತೆ ದಿಟ್ಟ, ಪ್ರೋತ್ಸಾಹವನ್ನು ಎಲ್ಲಾ ಕ್ಷೇತ್ರದಲ್ಲಿ ಕಾರ್ಯ ಮಾಡುವಂಥ ಮಹಿಳೆಯನ್ನು ಹುರುದುಂಬಿಸುವ ಮತ್ತು ಸಮಾನತೆಯನ್ನು ಕಾಪಾಡುವ ಧ್ಯೇಯವನ್ನು ಹೊಂದಿದೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳಾ ಕೂಲಿ ಕಾರ್ಮಿಕರು ಮಾಡಿದ ಚಳುವಳಿಯಿಂದ ಪ್ರಾರಂಭವಾಯಿತು. ಸಂಯುಕ್ತ ರಾಷ್ಟ್ರಗಳು ಘೋಷಿಸುತ್ತಿರುವ ಘೋಷಣೆಗಳು ಮಹಿಳೆಯರು ಸಾಧನೆಯನ್ನು ಮಾಡಲು ಹುರುದುಂಬಿಸುತ್ತವೆ. ಸಾಧನೆಗೈದ ಮಹಿಳೆಯರನ್ನೂ ಸ್ಮರಿಸುತ್ತಾ ಈ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಮಹಿಳೆಯರಿಗಾಗಿಯೇ ಮತ ಚಲಾಯಿಸುವ ಹಕ್ಕು, ಸಮಾನತೆಯ ಹಕ್ಕು, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಭಾಗವಹಿಸುವ ಹಕ್ಕುಗಳನ್ನು ಸಮಾನವಾಗಿ ಪಡೆಯಲು ಚಳುವಳಿಯಲ್ಲಿ ಪಾಲ್ಗೊಂಡು ಮಹಿಳೆಯರು ತಮ್ಮದೇ ಆದ ಸ್ಥಾನವನ್ನು ಗಳಿಸಿದರು. ಕ್ರಮೇಣವಾಗಿ ಈ ರೀತಿ ಅನೇಕ ಮಹಿಳಾ ಚಳುವಳಿಗಳು ನಡೆದು, ಇದು ಮಹಿಳಾ ದಿನಾಚರಣೆಯಾಗಿ ಮಾರ್ಪಡಾಯಿತು. ಹೀಗೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆಯು ತನ್ನದೇ ಆದಂತಹ ಸ್ವಾತಂತ್ರ್ಯವನ್ನು ಹೊಂದಲು, ಸ್ಥಾನಗಳಿಸಲು, ಯಶಸ್ವಿ ಮಹಿಳೆಯಾಗಲು ಪ್ರೋತ್ಸಾಹ ನೀಡುತ್ತದೆ.
ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಕಾನೂನುಗಳು ಜಾರಿಯಲ್ಲಿವೆ. ಮಹಿಳೆಯರಿಗೆ ಆಗುತ್ತಿರುವಂಥ ದೌರ್ಜನ್ಯ. ಅಸಮಾನತೆ, ಅತ್ಯಾಚಾರ, ವೃತ್ತಿಯಲ್ಲಿ ತಾರತಮ್ಯತೆ ಇವುಗಳನ್ನು ನಿಯಂತ್ರಿಸಲು ಮಹಿಳೆಯರಿಗಾಗಿಯೇ ಕಾನೂನುಗಳು ಮೀಸಲಾಗಿವೆ. ವರದಕ್ಷಿಣೆ ನಿಷೇಧ ಕಾನೂನು, ಭ್ರೂಣಹತ್ಯೆ ನಿಯಂತ್ರಣ ಕಾಯ್ದೆಗಳು ಬಂದರೂ ಇವುಗಳನ್ನು ನಿಯಂತ್ರಿಸಲಾಗುತ್ತಿಸಲು ಸಾಧ್ಯವಾಗುತ್ತಿಲ್ಲ. ಸಾವು-ನೋವುಗಳು ಸಂಭವಿಸುತ್ತಲೇ ಇವೆ.

ಕುಟುಂಬದ ನಿರ್ವಹಣೆಯಲ್ಲಿ ಮಹಿಳೆ:
ಇಂದು ಹೆಣ್ಣುಮಕ್ಕಳು ಮದುವೆ, ಮಕ್ಕಳು ಮನೆ ನಿರ್ವಹಣೆ ಮಾಡಿಕೊಂಡು, ಯಾವಾಗಲೂ ದುಡಿಯುತ್ತಾ ಇರುತ್ತಾಳೆ. ಪುರುಷನಿಗೆ ಸಮನಾಗಿ ಒಂದು ಹೆಜ್ಜೆ ಹೆಚ್ಚಾಗಿ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದಾಳೆ. ತನ್ನ ನೋವನ್ನೆಲ್ಲಾ ಬದಿಗಿಟ್ಟು, ಕುಟುಂಬದ ಒಳಹೊರ ಕಾರ್ಯಗಳಲ್ಲಿ ಮಾತ್ರವಲ್ಲದೇ ವೃತ್ತಿ ಕಾರ್ಯಕ್ಷೇತ್ರದಲ್ಲಿ ಪ್ರವೇಶಿಸಿ ತನ್ನ ವ್ಯಕ್ತಿತ್ವವನ್ನು ಮೆರೆದಿದ್ದಾಳೆ. ಆರ್ಥಿಕ ಸ್ವಾತಂತ್ರ್ಯ ಹೊಂದಿ, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾಳೆ. ಇದರಿಂದ ಅವಳು ತನ್ನ ಪ್ರತಿಭೆಯನ್ನು ಹೊರಹಾಕಿ ತೃಪ್ತಿಕಂಡುಕೊಂಡಿದ್ದಾಳೆ. ಎಷ್ಟೋ ಕುಟುಂಬಗಳಲ್ಲಿ ಮಹಿಳೆಯರು ಕೂಡ ತಮ್ಮ ತಮ್ಮ ಅರ್ಹತೆಗೆ ತಕ್ಕಂತೆ ಆಯಾ ಕ್ಷೇತ್ರಗಳಲ್ಲಿ ಕೆಲಸವನ್ನು ಮತ್ತು ತಮ್ಮ ಮನೆಯ ಕೆಲಸವನ್ನು ನಿಭಾಯಿಸಿಕೊಂಡು, ಮಕ್ಕಳ ಕಾಳಜಿ ಮನೆಯ ಜವಾಬ್ದಾರಿಯನ್ನು ಕಟುಬದ್ದವಾಗಿ ಮಾಡುತ್ತಾಳೆ.
ಸೌಲಭ್ಯಗಳಲ್ಲಿ ಮಹಿಳೆ :
ಮಹಿಳೆಯ ಸರ್ವಾಂಗೀಣ ಅಭಿವೃದ್ದಿಗಾಗಿ ಹಲವಾರು ಕಾರ್ಯಕ್ರಮದ ಯೋಜನೆಗಳನ್ನು ನಡೆಸುತ್ತಿದ್ದಾರೆ. ಸ್ತ್ರೀ ಶಕ್ತಿ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ, ಸ್ವಾವಲಂಬನೆ, ಸ್ವಆಧಾರ, ಸಾಂತ್ವನ ಯೋಜನೆ, ಇನ್ನು ಅನೇಕ ಯೋಜನೆಗಳನ್ನು ಮಹಿಳೆಯರಿಗಾಗಿಯೇ ಹಮ್ಮಿಕೊಂಡಿದೆ. ಈ ಎಲ್ಲಾ ಕಾರ್ಯಕ್ರಮಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿದೆ. ಇದರ ಮುಖ್ಯ ಉದ್ದೇಶವು ಕೂಡಾ ಮಹಿಳೆಯರ ಪ್ರಗತಿಗಾಗಿ. ಎಷ್ಟೋ ಕಾನೂನುಗಳು ಮಹಿಳೆಯರ ಪರವಾಗಿ ಇದ್ದರೂ, ಗ್ರಾಮೀಣ ಮಟ್ಟದ ಮಹಿಳೆಯರಲ್ಲಿ ಯಾರಿಗೂ ಕಾನೂನಿನ ಸೌಲಬ್ಯದ ಅರಿವಿಲ್ಲ. ಕಾನೂನಿನ ನೆರವನ್ನು, ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಮನೆಯನ್ನು ಚೌಕಟ್ಟನ್ನು ಬಿಟ್ಟು ಹೊರಬಂದಾಗ ತನಗಿರುವಂಥ ಸೌಲಭ್ಯಗಳ ಮಾಹಿತಿ, ಅರಿವು ದೊರಕುತ್ತದೆ. ಹೀಗಾಗಿ ಈಗಲೂ ಮಹಿಳೆಯರು ಸಮಾನತೆಯ ಅಭಿವೃದ್ದಿಯನ್ನು ಸಾಧಿಸಲು ಸಾಂಕೇತವಾಗಿ ಗುರಿ ಸಾಧಿಸಲು ಕಾರ್ಯ ಸೂಚಿಯನ್ನು ಹಾಕಿಕೊಂಡಿದೆ.
ಉದ್ಯೋಗದಲ್ಲಿ ಮಹಿಳೆ:
ಯಾವುದೇ ಉದ್ಯೋಗ ಅನ್ನುವುದು ಅವಳ ವ್ಯಕ್ತಿತ್ವವನ್ನೇ ಬದಲಾಯಿಸಿ ಬಿಡುತ್ತದೆ. ಸ್ವಂತಿಕೆಯ ಬಿಂಬ ಅವಳನ್ನು ಉತ್ತೇಜಿಸುತ್ತದೆ. ಪ್ರತಿಯೊಬ್ಬ ಮಹಿಳೆ ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕಾದಾಗ ಮುಖ್ಯವಾಗಿ ಬೇಕಾದುದು ಉತ್ಸಾಹ, ಸ್ನೇಹಿತೆಯರಿಂದ, ಮನೆಯವರಿಂದ ನೀನು ಸಾಧಿಸಬಲ್ಲೆ ಎಂಬ ಒಂದು ಮಾತು ಅವಳನ್ನು ಯಾವುದೇ ಉದ್ಯೋಗ ಮಾಡುವಲ್ಲಿ ಉತ್ತೇಜಿಸುತ್ತದೆ. ಇಂದು ಎಷ್ಟೋ ಮಹಿಳೆಯರು ಹಲವಾರು ರೀತಿಯ ಉದ್ಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಉದ್ಯೋಗ ಅವಳಿಗೆ ತನ್ನತನದ ಗೌರವಕ್ಕಾಗಿ, ತನ್ನ ಸ್ವತಂತ್ರತೆಗಾಗಿ. ಇದರಿಂದ ತನ್ನನ್ನು ತಾನು ಗುರುತಿಸಿಕೊಳ್ಳಬಲ್ಲಳು. ಮಹಿಳೆ ಅಡುಗೆ ಮನೆಯ ಕೆಲಸವನ್ನ ನಿಭಾಯಿಸುತ್ತ ಹೊರಗಡೆ ಹೋಗಿ ದುಡಿಯುವ ನಿಪುಣತೆಯನ್ನು ಹೊಂದಿದ್ದಾಳೆ. ಉದ್ಯೋಗ ಯಾವುದಾದರೇನು? ದುಡಿಯುವ ಜನರಿಗೆ, ಎಷ್ಟೋ ಮಹಿಳೆಯರು ದೊಡ್ಡ ದೊಡ್ಡ ಹುದ್ದೆಗಳಿಂದ ಹಿಡಿದು, ಚಿಕ್ಕ ಚಿಕ್ಕ ಹುದ್ದೆಯ ಕೆಲಸಗಳಲ್ಲಿ ತನ್ನ ಜಾಣತನವನ್ನು ತೋರಿದ್ದಾಳೆ. ಪುರುಷನ ಅವಲಂಬನೆಯನ್ನು ಬಿಟ್ಟು ತನ್ನ ಸ್ವಾತಂತ್ರ್ಯದ ಹಾದಿಯಲ್ಲಿದ್ದಾಳೆ. ಅವಳಿಗೂ ಒಂದು ವ್ಯಕ್ತಿತ್ವ, ಗೌರವ ಇದೆ. ತನ್ನದೇ ಆದಂಥ ಸ್ವ-ಸ್ವಾತಂತ್ರ್ಯವನ್ನು ರೂಪಿಸಿಕೊಳ್ಳುತ್ತಿದ್ದಾಳೆ. ಉದ್ಯೋಗ ಅವಳ ಆಥಿಕ ಭದ್ರತೆಯನ್ನು ಒದಗಿಸಿದರೆ. ನಾನು ‘ಸ್ವಾವಲಂಭಿ’ ಎನ್ನುವ ಶಬ್ಧ ಅವಳಲ್ಲಿ ಸ್ಫೂರ್ತಿ ತುಂಬಿದೆ. ಮನೆಯನ್ನು ನಿಭಾಯಿಸಿಕೊಂಡು ವೇಳೆಗೆ ಸರಿಯಾಗಿ ಕಚೇರಿಯನ್ನು ತಲುಪುವುದು ತುಂಬಾ ಕಷ್ಠ. ಮನೆ, ಮನೆಯವರನ್ನು ನಿಭಾಯಿಸಿ ಉದ್ಯೋಗದಲ್ಲಿ ನಿರತಳಾಗಿದ್ದಾಳೆ. ಪ್ರತಿನಿತ್ಯ ಸರಿಯಾದ ಸಮಯಕ್ಕೆ ಕಚೇರಿಗೆ ಕೆಲಸಕ್ಕೆ ಹೋಗದಿದ್ದಲ್ಲಿ ಸಹೋದ್ಯೋಗಿಗಳಿಂದ ಅಪಹಾಸ್ಯ, ಬಾಸ್ನ ಬೈಗುಳ ಮೇಲಾಗಿ ಕೆಲಸದ ಒತ್ತಡವನ್ನು ಅನುಭವಿಸುತ್ತಾರೆ. ಒಂದು ದಿನ ಒಂದು ಕಾರಣವಾದರೆ ಮತ್ತೊಂದು ದಿನ ಬೇರೆ ಕಾರಣ ಹೀಗೆ ಆದರೂ ಕೆಲಸವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಆರ್ಥಿಕ ಸ್ವಾತಂತ್ರ್ಯ ಹೊಂದಿ, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾಳೆ. ಇದರಿಂದ ಅವಳು ತನ್ನ ಪ್ರತಿಭೆಯನ್ನು ಹೊರಹಾಕಿ ತೃಪ್ತಿಕಂಡುಕೊಂಡಿದ್ದಾಳೆ. ಕೃಷಿ ಮನೆಗೆಲಸಗಳಿಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಕೈಗಾರಿಕೆ, ಉದ್ಯಮ, ವಿಜ್ಞಾನ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪೋಲೀಸ್ ಇಲಾಖೆ, ರಾಜಿಕೀಯ ಕ್ಷೇತ್ರಗಳಲ್ಲಿ ಸ್ವಾವಲಂಬನೆಯಿಂದ ಪುರುಷನಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಮಹಿಳೆಯರ ಆಭಿವೃದ್ದಿಗಾಗಿ ಅನೇಕ ಔದ್ಯೋಗಿಕ ಸ್ಥಾನಗಳು ಮೀಸಲಾಗಿವೆ. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಮಹಿಳೆರಿಗಾಗಿಯೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಾಧನೆಯಲ್ಲಿ ಮಹಿಳೆ :- ಪ್ರತಿಯೊಬ್ಬ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಲೇ ಇದ್ದಾರೆ. ಕೆಲವು ಸಾಧನೆಗಳು ಮೇಲ್ನೋಟಕ್ಕೆ ಕಂಡುಬಂದು, ಇನ್ನೂ ಮಹಿಳೆಯರ ಸಾಧನೆಗಳು ಎಲೆಮರೆಯ ಕಾಯಿಗಳಂತಿದೆ. ಅವೆಲ್ಲ ಸಾಧನೆಗಳನ್ನು ಹೊರತರಬೇಕಾಗಿದೆ. ವೀರ ವನಿತೆಯರು, ಶ್ರೇಷ್ಟ ಸಾಧಕಿಯರು, ಆಯಾ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತ ಮಹಿಳೆಯರ ಸಾಧನೆಗಳನ್ನು, ವಿಚಾರ, ಮೌಲ್ಯಗಳನ್ನು ತಿಳಿದುಕೊಂಡಾಗ, ಪ್ರತಿಯೊಬ್ಬ ಮಹಿಳೆಯರಲ್ಲೂ, ನಾನೂ ಏನಾದರೊಂದು ಸಾಧಿಸಬೇಕೆನ್ನುವ ಛಲ ವಿತ್ತು ಪ್ರತಿಯೊಂದನ್ನು ಮೆಟ್ಟಿ ನಿಲ್ಲುವ ಧೈರ್ಯ ಹೊರ ಹೊಮ್ಮುತ್ತದೆ. ನಮ್ಮೊಳಗಿರುವ ಚೈತನ್ಯ ಜಾಗೃತವಾಗಿ ಉನ್ನತ ಕಾರ್ಯವನ್ನು ಸಾಧಿಸುವಂತೆ ಪ್ರೇರೆಪಿಸುತ್ತದೆ. ಮಹಿಳೆಯರು ಮಾಡಿದಂಥ ಸಾಧನೆಗಳು ಅವಳನ್ನು ಉತ್ತುಂಗಕ್ಕೇರಿಸುತ್ತಿವೆ.
ಸ್ವಗೌರವ ಮತ್ತು ಆತ್ಮವಿಶ್ವಾಸ:
ಪ್ರತಿಯಬ್ಬ ಮಹಿಳೆಗೆ ತನ್ನ ಮೇಲೆ ತಾನು ಗೌರವವನ್ನು ಹೊಂದಿರಲೇಬೇಕು. ತನ್ನನ್ನು ತಾನು ಹಳಿದುಕೊಳ್ಳಬಾರದು. ಬೇರೆಯವರ ಮೇಲಿನ ಅವಲಂಭನೆಯೇ ಅವಳನ್ನು ಹಾಳುಮಾಡುತ್ತದೆ. ತನ್ನನ್ನು ತಾನು ಪ್ರೀತಿಸಿಕೊಂಡಾಗ, ಗೌರವಿಸಿಕೊಂಡಾಗ ಸ್ವ ಅಭಿಮಾನ ಹೆಚ್ಚಾಗುತ್ತದೆ. ಸಾಧಿಸುವ ಛಲ ಬೇರೂರುತ್ತದೆ. ನಮ್ಮ ಸುತ್ತಮುತ್ತಲಿರುವ ನಕಾರಾತ್ಮಕತೆಯನ್ನು ತೊಲಗಿಸಿ, ಸಕಾರಾತ್ಮಕತೆಯತ್ತ, ಸಾಧಿಸುವತ್ತ ಗಮನಹರಿಸಿದಾಗ ಮಾಡುವಂಥ ಕೆಲಸದಲ್ಲಿ ಖಂಡಿತವಾಗಿ ಯಶಸ್ಸನ್ನು ಗಳಿಸುತ್ತಾಳೆ. ಮತ್ತು ಗಳಿಸುತ್ತಿದ್ದಾಳೆ. ಅವಳು ತನ್ನ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು.
ಮಹಿಳಾ ದಿನಾಚರಣೆ ನಮ್ಮೆಲ್ಲರಲ್ಲಿ ಧೈರ್ಯ, ಉತ್ಸಾಹ, ಪ್ರೇರಣೆ, ಸಾಧನೆಯ ಛಲ ತುಂಬಲಿ. ಆದರ್ಶ ಮಹಿಳೆಯರು ಇತರ ಮಹಿಳೆಯರಿಗೆ ಮಾರ್ಗದರ್ಶಕರಾಗಲಿ. ಪ್ರತಿಯೊಬ್ಬ ಮಹಿಳೆಯರಲ್ಲೂ ಅವರದೇ ಆದಂಥ ಕೌಶಲ್ಯಗಳಿವೆ. ಆ ಕೌಶಲ್ಯಗಳು ಹೊರಹೊಮ್ಮಬೇಕಾದರೆ, ಪ್ರತಿಯೊಬ್ಬರ ಸಹಕಾರ ಅಷ್ಟೇ ಮುಖ್ಯವಾದದ್ದು. ತಮ್ಮೆಲ್ಲರಿಗೂ ಅಂತರ್ರಾಷ್ಟ್ರೀಯ ಮಹಿಳಾ ದಿನದ ಹಾರ್ಧಿಕ ಅಭಿನಂದನೆಗಳು.

ಶ್ರೀಮತಿ. ಶ್ರೀದೇವಿ ಬಿರಾದಾರ
ಮನೋವೈದ್ಯಕೀಯ ಸಮಾಜಕಾರ್ಯವಿಭಾಗ
ಡಿಮ್ಹಾನ್ಸ, ಧಾರವಾಡ.

Leave a Reply